ಶ್ರೀ ವಿಜಯದಾಸಾರ್ಯ ವಿರಚಿತ ಕಾಶಿ ಕ್ಷೇತ್ರ ಮಹಾತ್ಮೆ ಸುಳಾದಿ
ರಾಗ : ಹಿಂದೋಳ
ಧೃವತಾಳ
ಕಾಶಿ ಕೇಶವ ನಿರ್ಮಿತಾ ಕೈವಲ್ಯಾ ಸಿದ್ಧಾ ಸ್ವಪ್ರ -
ಕಾಶವಾಗಿದೆ ಸತ್ವಾಭಾಗದಲ್ಲಿ
ದೇಶಾಮಧ್ಯದಲಿದಕ್ಕೆ ಎಣೆ ಮಿಗಿಲುಗಾಣೆ
ಈಶನು ಇಲ್ಲಿ ವಾಸಾ ಹರಿಕೃಪೆಯಿಂದ
ವಾಸಾವಾದ್ಯಾ ಮಿಕ್ಕಾ ನಿರ್ಜರಾದಿಯಿಂದ
ಲೇಸು ಪೂಜೆಗೊಂಬ ಪಾರ್ವತೀಶ
ವಾಸವಾಗಿದ್ದ ಜನಕೆ ರಾಮನ್ನಾಮ ಉಪ -
ದೇಶವನ್ನೆ ಮಾಡುವ ಮನದಿ ನೋಡಿ
ಕ್ಲೇಶವಿದೂರ ಶಂಭು ಇಲ್ಲಿ ಆಸಕ್ತನಾಗಿ
ಲೇಸು ಲೇಸು ಎಂದೆನುತ ತಲೆದೂಗುವ
ರಾಸಿ ಗುಣಗಳಿಂದಾ ಹರಿಯನ್ನೆ ಹಾಡಿಪಾಡಿ
ದೋಷರಹಿತನಾದ ಜಗವರಿಯೇ
ಕಾಶಿ ಕೇವಲಾ ವಿಷ್ಣುಕ್ಷೇತ್ರವಾ ಕಾಣೋಗಿ -
ರೀಶಗೆ ದತ್ತಾ ಈ ಪುರದ ಪದವೀ
ಆ ಸುರವೃತ್ತಿಯಿಂದಾ ಪೇಳುವ ಮಾತು ನಿ -
ಶ್ಚೈಸದಿರಿ ಮನದೊಳು ಮಹಾಧೀರಾರು
ಕಾಶಿಕೇಶವ ಆದಿಕೇಶವನೆಂದಾ ಮಾ -
ನಿಸನ್ನ ಪುಣ್ಯಕ್ಕೆ ಗಣನೆ ಇಲ್ಲಾ
ಶೇಷಪೂರಿತ ಕರ್ಮಾ ಇಲ್ಲಿದ್ದ ಜೀವಿಗಳಿಗೆ
ತ್ರಿಸಂಬಂಧಾದಿಂದ ಕಡೆ ಬೀಳೂವ
ಭೂಷಣವಾಗಿಪ್ಪದು ಈ ಕ್ಷೇತ್ರಕ್ಕೆ ವಾರಾ-
ಣಾಸಿ ಆನಂದಾರಣ್ಯಾ ಆ ವಿಮುಕ್ತಿಯು
ಕಾಶಿ ಮಹಾಸ್ಮಶಾನಾ ರುದ್ರಪುರಿ ಪುಣ್ಯಪಂಚ
ಕ್ರೋಶ ವಿಸ್ತಾರ ಚತುರ್ದಿಕ್ಕುವಲಯಾ
ಈ ಸಮಸ್ತಕ್ಷೇತ್ರಕ್ಕೆ ಪೆಸರಾಗಿ ಇಪ್ಪಾದಿದುವೊ
ದಾಸ ಭೂಪಾಲಾನಿಲ್ಲಿ ಶೋಭಿಸಿ ಮೆರೆದಾ
ಕಾಶಿರಾಜಾ ಮಿಕ್ಕಾ ಸರ್ವರಾಯರು ಉ -
ಲ್ಲಾಸಾದಿಂದಾಳಿದಾರು ಹರಿಭಜನೆಯಲ್ಲಿ
ಅಸುರಕರ್ಮ ಸ್ವಾಭಾವಿಕ ಪೌಂಡ್ರಿಕಾ
ವಾಸುದೇವಾನೆಂದೆಂಬವಾ ಇಲ್ಲಿ ಇದ್ದಾ
ಮೋಸಾವಿಲ್ಲದೆ ಇವನ ಮತದಂತೆ ನಡಿಯಾದಿರಿ
ಕ್ಲೇಶವಾಹದು ಕಾಣೊ ಎಂದೆಂದಿಗೇ
ದೋಷವರ್ಜಿತರಾಗಿ ಸುಜ್ಞಾನದಿಂದ ಮಂದ-
ಹಾಸದಿಂದಾಲಿ ಮುಕ್ತಿಯ ಸೇರಿದಾರೂ
ಕಾಶಿಯಾತ್ರಿಗೆ ಬಂದಾ ಜನರ ಸಂಗಡ ತನ್ನಾ
ದೇಶದಲ್ಯಾದರೂ ಒಂದು ಹೆಜ್ಜಿ
ಗ್ರಾಸಾಗೋಸುಗವಾಗಿ ಪೋದವನ ಕಾಲದ ಸಂ -
ತೋಷಾ ಪೇಳುವನಾರು ಅಜ ಸಭೆಯಲ್ಲಿ
ಕಾಶಿ ನಿವಾಸ ಬಿಂದು ಮಾಧವಾತ್ಮಕ
ವಿಶೇಷ ಮೂರುತಿ ವಿಜಯವಿಠಲಾ ಪೊಳೆವನಿಲ್ಲಿ ॥೨॥
ಮಟ್ಟತಾಳ
ಭಗಿರಥ ತನ್ನವರಾ ಉದ್ಧರಿಸುವದಕ್ಕೆ
ಹಗಲಿರಳು ಬಿಡದೆ ತಪವನ್ನೆ ಮಾಡಿ
ಜಗದ ವಲ್ಲಭನಾದಾ ಶ್ರೀಶನ ಮೆಚ್ಚಿಸಿ
ಗಗನ ನದಿಯ ತಂದಾ ಶಿವನ ಪ್ರಾರ್ಥನೆಯಿಂದ
ನಿಗಮ ಪ್ರತಿಪಾದ್ಯಾ ಸ್ತೋತ್ರಗಳಿಂದಲಿ
ಜಗದೊಳು ಪರಿದು ಈ ಕಾಶಿಯ ಮುಂದೆ
ಝಗಝಗಿಸುತ ಬಂದು ಯಮುನೆ ಸಂಗಡವಾಗಿ
ಮಿಗೆ ಶೋಭಿಸುತ್ತಿದ್ದು ಮೆರೆದಾಳೈ ಗಂಗೆ
ಮಗುಳೆ ಈ ಕ್ಷೇತ್ರ ಮಹಾ ಖ್ಯಾತಿಯಗಿಪ್ಪುದೂ
ಬಗೆಬಗೆಯಿಂದ ಸಾಧನವಾಗುವುದಿಲ್ಲಿ
ನಗಧರ ನಾರಾಯಣ ವಿಜಯವಿಠಲರೇಯಾ
ಅಗಣಿತ ಗುಣಧಾಮಾ ಅಧಿಪತಿಯಾಗಿಪ್ಪಾ ॥೨॥
ತ್ರಿವಿಡಿತಾಳ
ಇದು ಪುಣ್ಯಕ್ಷೇತ್ರವೊ ತ್ರಿಲೋಕಮಧ್ಯದಲ್ಲಿ
ತ್ರಿದಶಗಣ ಮುನಿಗಳು ಇಲ್ಲಿ ವಾಸ
ಪದುಮನಾಭನ ಮೂರುತಿ ಒಂದೊಂದು ಪೆಸರಿಸಿ
ಪದೊಪದಿಗೆ ಇಪ್ಪುದು ಲಾಲಿಸುವದು
ಮಧುಸೂದನ, ಮತ್ಸ್ಯ, ಕೂರ್ಮ, ಪರಶುರಾಮ
ಮದನಗೋಪಾಲ, ನರಸಿಂಹ, ವರಹ
ಮುದದಿಂದ ಮಾಧವ, ಕೇಶವ, ವ್ಯಾಸ, ವಾಮನ, ರಾಮ
ಮೊದಲಾದ ಮೂರ್ತಿಗಳು ಸಾಕ್ಷಾದ್ರೂಪ
ಸದಮಲತನದಿಂದಾ ಭರಿತವಾಗಿಹವು
ಬುಧರು ಕೊಂಡಾಡುವುದು ಭಕುತಿಯಿಂದ
ವಿಧಿರುದ್ರಾದಿ ರೂಪಾ ಬಹುವುಂಟು ಸರ್ವದ
ಹದುಳಕೊಡುತಿಪ್ಪರು ನಂಬಿದವರಿಗೆ
ಇದೆ ವಾಸಕ್ಕೆ ಯೋಗ್ಯ ಎಂದೆಂದಿಗೆ ಎಂದು
ತ್ರಿದಶ್ಯಾದರು ನೋಡೆ ಇಚ್ಚೈಪರು
ಹೃದಯಾದಲ್ಲಿ ಸ್ಮರಿಸಿ ಕಾಶಿಪಟ್ಟಣ ಮಹಾ
ನಿಧಿಯಾ ತಂದೀವುದು ದಾರಿದ್ರಗೆ
ಬುಧರಿಗೆ ಜ್ಞಾನವ ಪಾಲಿಸುವುದು ಮುಕ್ತಿ
ಬದಿಯಲಿ ಉಂಟು ಶ್ರೀ ನಾರಾಯಣ
ಬದಿಯಲಿಪ್ಪ ಕಾಲಕಾಲಕ್ಕೆ ಸಂ -
ಪದವಿಗೆ ಮಾರ್ಗವ ತೋರಿ ಕೊಡುವ
ಒದಗಿ ವಂದಡಿಯಿಟ್ಟು ತಿರುಗಿ ಪೋದರಾಗೆ
ವಿಧಿಕಲ್ಪ ಪರಿಯಂತ ಸುಖಿಸುವನೊ
ಸುದರುಶನ ಪಾಣಿ ವಿಜಯವಿಠಲರೇಯಾ
ಎದುರಿಲಿ ಪೊಳೆವ ಗತಿತಪ್ಪದಲೆ ಪಾಡಿ ॥೩॥
ಅಟ್ಟತಾಳ
ಹರಿ ಬ್ರಹ್ಮ ವಿಶ್ವೇಶ ಇಂದ್ರ ಕಾಮಾದ್ಯರು
ಹರಿಪ್ರೀಯ ಸರಸ್ವತಿ ಪಾರ್ವತಿ ಮಿಗಿಲಾದಾ
ವರ ನಾರಿಯರು ಉಂಟು ಭೈರವ ಗಣನಾಥ ಸಮಸ್ತಜನ ವಾ-
ಸರ ಒಂದು ಬಿಡದಲೆ ಬಹು ರೂಪಗಳಿಂದಾ
ಸ್ಥಿರವಾಗಿ ಇಪ್ಪಾರು ಮಿರಗುತ ಮೆರವುತ್ತಾ
ವರಗಳ ಕೊಡುತಾ ಭಕ್ತರನಾ ಪಾಲಿಸೂತಲಿ
ತರಣಿ ಮಧ್ಯಾನ್ಹಕೆ ಬರಲು ಮಜ್ಜನಕೆ ತೀ -
ವರದಿಂದಾ ಮಣಿಕರ್ನಿಕೆ ಸಾರುವರೈ
ಧರೆಯೊಳು ವರ್ನಿಸಾಲರಿದು ನಾಲ್ಕನೆ ಕ್ಷೇತ್ರ
ಹರಿದುಪೋಗುವದಲ್ಲಾ ಪ್ರಳಯಕಾಲಕೆ ನಿತ್ಯಾ
ಹರಿ ಸಂಕರುಷಣಾತ್ಮಕಾ ನರಹರಿರೂಪ
ಧರಿಸಿ ಬ್ರಹ್ಮಾದ್ಯರಾ ಒಡಗೂಡಿ ಕುಣಿವಾನು
ಪರಮ ಮುಖ್ಯಕಾಣೆ ತಿಳಿದು ಕೊಂಡಾಡುವ
ನರನೆ ಮುಕ್ತಪ್ರಾಯ ದೇಹಾಂತ ಶುಭಪೂರ್ಣ
ಸುರಗಂಗಾಪಿತ ನಮ್ಮ ವಿಜಯವಿಠಲ ತನ್ನ
ಶರಣಂಗೆ ಪ್ರಾಪ್ತಿಮಾಡಿಕೊಡುವ ಒಲಿದು ॥೪॥
ಆದಿತಾಳ
ವರುಣ ಸಂಗಮ ಪಂಚಗಂಗೆ ಮಣಿಕರ್ನಿಕೆ
ತುರಗ ಈರೈದು ಮೇಧಾ ಆಸಿ ಸಂಗಮ ನಾನಾ
ವರ ತೀರ್ಥ ಜ್ಞಾನವಾಪಿ ವೃದ್ಧಾ ಕಾಳಿ ಮಿಗಿಲಾದ
ಸುರಮುನಿ ಕುಂಡದಲ್ಲಿ ಮಿಂದು ಧನ್ಯರಾಗಿರಿ
ಪುರದೊಳು ನಿತ್ಯಾಯಾತ್ರಿ ಅಂತರಗ್ರಹಾ, ಉ-
ತ್ತರ ದಕ್ಷಿಣ ಮಾನಸನಗರಾ ಪ್ರದಕ್ಷಣಾ
ತರುವಾಯ ಪಂಚಕ್ರೋಶ ಯಾತ್ರಿ ಮಾಡಿ ಸರ್ವ
ಕರಣ ಶುದ್ಧಿಯಿಂದ ದೇವಋಷಿ ಪಿತೃಗಳು
ಹರುಷಾವಾಗುವಂತೆ ಸತ್ಕರ್ಮಾಚರಿಸಿ ಆ -
ರ್ಯರ ಸಹವಾಸದಿಂದಾ ಕಾಲಕ್ರಮಣೆ ಮಾಡು
ದುರುಳ ಜನಾಹಾರಿ ನಮ್ಮ ವಿಜಯವಿಠಲರೇಯಾ
ಪರಿಪರಿ ಸುಖಕೊಡುವಾ ಇಹಪರಲೋಕದಲ್ಲಿ ॥೫॥
ಜತೆ
ಕಾಶಿಯೊಳೊಂದಡಿ ಇಟ್ಟು ಪೋದಡೆ ವೇದ -
ವ್ಯಾಸರೂಪಾತ್ಮಕಾ ವಿಜಯವಿಠಲ ಬರುವಾ ॥೬॥
*******