Showing posts with label ಮಿರಗುವ ಉರಗಗಿರಿಯ vijaya vittala ankita suladi ವೆಂಕಟಗಿರಿ ಮಹಿಮಾ ಸುಳಾದಿ MIRAGUVA URAGAGIRIYA VENKATAGIRI MAHIMA SULADI. Show all posts
Showing posts with label ಮಿರಗುವ ಉರಗಗಿರಿಯ vijaya vittala ankita suladi ವೆಂಕಟಗಿರಿ ಮಹಿಮಾ ಸುಳಾದಿ MIRAGUVA URAGAGIRIYA VENKATAGIRI MAHIMA SULADI. Show all posts

Monday 9 December 2019

ಮಿರಗುವ ಉರಗಗಿರಿಯ vijaya vittala ankita suladi ವೆಂಕಟಗಿರಿ ಮಹಿಮಾ ಸುಳಾದಿ MIRAGUVA URAGAGIRIYA VENKATAGIRI MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀ ವೆಂಕಟಗಿರಿ ಮಹಿಮಾ ಸುಳಾದಿ 

 ರಾಗ ತೋಡಿ 

 ಧ್ರುವತಾಳ 

ಮಿರಗುವ ಉರಗಗಿರಿಯ ಶಿಖರವನು ಕಂಡೆ ನಾ 
ಪರಮ ಧನ್ಯನಾದೆ ಗುರುಗಳ ಕರುಣದಿಂದ 
ಧರಣಿಯೊಳಗಿದಕೆಲ್ಲಿ ಸರಿಗಾಣೆ ನಾನಾ ಬಗೆ 
ಅರಿಸಿದರು ಸರ್ವಶ್ರುತಿಗಳಲ್ಲಿ ತಿಳಿದೂ 
ಅರರೆ ಮತ್ತಾವನೋ ಈ ಯಾತ್ರಿಯ ಪುಣ್ಯ 
ಬರೆದು ಕಡೆಗಂಡು ಗುಣಿಸೆಣಿಪನಾರು 
ತಿರುವೆಂಗಳಪ್ಪ ನಿಪ್ಪ ಕ್ಷೇತ್ರದ ಮಹಿಮೆಯನು 
ಇರಳು ಹಗಲು ವರ್ಣಿಸಲಿ ಸವೆಯದು 
ಸುರರು ಮೊದಲಾದವರು ರೂಪಾಂತರವ ತಾಳಿ 
ಹರುಷ ಬಡುವರು ನೋಡಿ ಜ್ಞಾನಿಗಳು 
ತರುಲತೆ ಖಗಮೃಗ ಜಲಚರಾದಿಗಳಾಗಿ 
ಚರಿಸುತಿಪ್ಪರು ಸಾಧನವ ಮಾಡುತಾ 
ದುರುಳ ಜನಕೆ ಇಲ್ಲನಂತ ಜನುಮಕ್ಕೆ 
ಕರಣ ಶುದ್ಧ ಭಕ್ತಿ ಪುಟ್ಟದಯ್ಯಾ 
ಮರಳಿ ದೊರೆತರೆ ಲೋಹದ ಮೇಲೆ ಹೇಮದ 
ಯರಕ ಹೊಯಿದಂತೆ ನಿಂದಿರಲರಿಯದು 
ವರ ತತ್ವ ತಾರತಮ್ಯವ ತಿಳಿದು ವಂದೆ ವಾ -
ಸರದೊಳಗೆ ಒಮ್ಮೆ ಈ ಗಿರಿಯ ನೆನಸೆ 
ದುರಿತರಾಶಿಗಳೆಲ್ಲ ಪರಿಹಾರವಾಗುವದು 
ಪರಗತಿಗೆ ಬಲು ಸುಲಭ ಸಂತತದಲ್ಲಿ 
ಶರಣರಿಗೊಜ್ರಾ ಪಂಜರ ವಿಜಯವಿಟ್ಠಲ 
ಮೆರೆವವ ಬಹುಬಗೆಯಿಂದ ವರಗಳನೆ ಕೊಡುತ ॥ 1 ॥

 ಮಟ್ಟತಾಳ 

ಕೋಡಗಲ್ಲಿನ ನೋಡೆ ಬಲದೇವನಂದು 
ಮಾಡಿದ ಬ್ರಹ್ಮಹತ್ಯಾ ಓಡಿಪೋಯಿತು ನಿಲ್ಲದೆ 
ಆಡಲೇನು ಇದಕೆ ಅನುಮಾನವೆ ಸಲ್ಲಾ 
ನಾಡೊಳಗೆ ಮಹ ಭಕುತಿ ದೊರೆಯದಲೆ 
ಕೂಡದು ಈ ಯಾತ್ರಿ ಆವನಾದರೇನು 
ಬಾಡಿ ವಣಗಿ ಪೋದ ಮರಕೆ ನದಿಯ ಉದಕ 
ಗೂಡೆಯಿಂದಲಿ ಯೆತ್ತಿ ಕಾಲವ ಕಳೆದಂತೆ 
ಮೂಢ ಜ್ಞಾನಿಗಳಾಗಿ ಪರಿಪರಿಯಿಂದ 
ಕೊಂಡಾಡಿ ಕುಣಿಯಲೇನು ಗತಿಗೆ ಸಾಧನವಲ್ಲ 
ಕೇಡಿಲ್ಲದ ದೈವ ವಿಜಯವಿಟ್ಠಲರೇಯ 
ಪಾಡಿದ ಮನುಜಂಗೆ ಪಾವನ ಮತಿಯೀವ ॥ 2 ॥

 ರೂಪಕತಾಳ 

ಹರಿ ದ್ರವರೂಪದಲಿ ಕಪಿಲತೀರ್ಥದಲ್ಲಿ 
ನಿರುತದಲ್ಲಿ ಇಪ್ಪ ತನ್ನಾಮಕನಾಗಿ 
ಸ್ಮರಿಸಿ ನೈಮಿತ್ಯಕ ತನ್ನ ವಂಶಗಳ ಉದ್ಧರಿಸಿ 
ಭೂಸುರರ ಸುಖ ಬಡಿಸಿ ದಾನಗಳಿಂದ 
ಗುರು ಹಿರಿಯರ ಸಹಿತ ಗಿರಿಯ ಪ್ರಾದೇಶಕ್ಕೆ 
ತೆರಳಿ ಬಂದೂ ನಿಂದು ಸೌಪಾನದೆಡೆಯಲ್ಲಿ 
ವರ ಸಾಲಿಗ್ರಾಮವನು ಮುಂಭಾಗದಲಿ ಇಟ್ಟು 
ಕರವ ಜೋಡಿಸಿ ಸಾಷ್ಟಾಂಗ ನಮಸ್ಕಾರವನು 
ಭರದಿಂದ ಮಾಡಿ ಕುಳಿತು ಉತ್ತಮವಾದ 
ಹರಿಕಥೆಯನು ಕೇಳಿ ತತ್ವಗಳನುಸರಿಸಿ 
ಪರಮ ಭಾಗವತರಿಂದ ಗಾಯನವ ಲಾಲಿಸಿ 
ಕರೆದು ಸಜ್ಜನರ ಸಂಗಡಲೆ ಕುಣಿದು 
ಬರುತಾ ನೂರು ನೂರು ಪಾವಟಿಗಿಯಲ್ಲಿದೇ 
ತೆರದಿಂದ ಮಾಡುತ ತಡವಾಗದಂತೆವೇ
ನರಸಿಂಹ ಮೂರುತಿಯ ದರುಶನವು ಮಾಡಿ ಸು -
ದರುಶನ ತೀರ್ಥದಲ್ಲಿ ಮಿಂದು ತುತಿಸಿ ನಿಂದು 
ಕರತಳ ಶಬ್ದದಲಿ ಹೋಯೆಂದು ನಲಿದಾಡೆ 
ಶಿರಿವಂತಾರರಸಾ ತಿರ್ಮಲ ವಿಜಯವಿಟ್ಠಲ 
ಪರದೈವವೆಂದು ಪೊಗಳಿ ಹಿಗ್ಗಲಿಬೇಕು ॥ 3 ॥

 ಝಂಪೆತಾಳ 

ಏರುತೇರುತ ಬಂದು ಮಾರುತನ್ನ ನೋಡಿ ಮಹ 
ದ್ವಾರದ ಬಳಿಯ ಸಾರ್ದು ಅತಿ ಮೋದದಿ 
ಸಾರಿ ಶ್ರೀ ಹರಿಯ ಗುಣಾವಳಿಯ ಉಚ್ಚರಿಸಿ 
ಈರಾರು ಪ್ರದಕ್ಷಿಣೆಯನು ಮಾಡಿ 
ಭೋರನೆ ಮತಿಕೊಡುವ ಸ್ವಾಮಿ ಪುಷ್ಕರಣಿಯಾ 
ತೀರದಲಿ ನಿಂದು ಸ್ನಾನವನು ಮಾಡಿ 
ಚಾರು ಮನಸಿನಿಂದ ಸವ್ಯದಲಿ ಬಂದು ವಿ -
ಸ್ತಾರ ಭಕುತಿಯಲ್ಲಿ ದ್ವಾರವನೆ ಪೊಕ್ಕು 
ಭೂರಮಣನ ಪಾದ ನಿರೀಕ್ಷಿಸಿ ಆಮೇಲೆ 
ಆರಾಧಿಸು ಗುಪ್ತದಲ್ಲಿ ಬಿಡದೆ 
ಮೀರಿದ ಮಹಾ ಮೂರ್ತಿ  ವಿಜಯವಿಟ್ಠಲ ವೆಂಕಟ 
ಸೂರೆಗಾಣೊ ಕಂಡ ಜನರಿಗೆ ಪ್ರತಿದಿನ ॥ 4 ॥

 ತ್ರಿವಿಡಿತಾಳ 

ಮೂರೊಂದು ಬೀದಿಯಾ ತಿರುಗಿ ವೆಂಕಟನ ಮಹಾ 
ದ್ವಾರವ ಪೊಕ್ಕು ಗರುಡಗಂಬದ ಬಳಿಯಾ 
ಪಾರಮಾರ್ಥಿಕನಾಗಿ ಕುಳಿತು ಹರಿಯಾ ವ್ಯಾ -
ಪಾರವ ಚಿಂತಿಸು ಅಡಿಗಡಿಗೆ 
ತಾರತಮ್ಯದಿಂದ ಸುರರಾದಿ ಗುಣ ತಿಳಿದು 
ಚಾರು ಪೀಠಾವರ್ಣ ಪೂಜೆ ವಿಧವ 
ಪೂರೈಸಿ ಮಾಡಿ ಸಮ್ಮೊಗದಿ ನಿಂದು ಬಂ -
ಗಾರ ಬಾಗಿಲನೆ ಪ್ರವೇಶ ಮಾಡಿ 
ಹಾರೈಸು ಅಲ್ಲಿಂದ ಹೊನ್ನ ಹೊಸ್ತಲ ಬಳಿಯ 
ಸೇರಿ ಸಾಕಲ್ಯದಲಿ ಹರಿಮೂರ್ತಿಯಾ 
ಕಾರಣಿಕವ ಗ್ರಹಿಸಿ ಗೋಳಕವ ಚಿಂತಿಸಿ 
ಗಾರು ಮಾಡದೆ ನಿನ್ನ ಒಳಗೆ ಇಪ್ಪ 
ಮೂರುತಿಯಾ ಇಟ್ಟು ಏಕಿಭೂತವೆಂದು 
ನಾರಾಯಣನ ವ್ಯಾಪ್ತತ್ವ ತಿಳಿದು 
ಶಾರದಪತಿ ಪ್ರೀಯ ವಿಜಯವಿಟ್ಠಲ ತಿಮ್ಮನ -
ಪಾರ ಗುಣಗಳ ತುತಿಸಿ ಕೊಂಡಾಡಿ ॥ 5 ॥

 ಅಟ್ಟತಾಳ 

ರಾಜರಾಜೇಶ್ವರನೆ ರಣರಂಗ ಧೈರ್ಯನೆ 
ತೇಜೋಮಯ ಕಾಯ ಬೊಮ್ಮಾದಿಗಳಿಂದ 
ಪೂಜಿತ ಪುಣ್ಯಶ್ಲೋಕ ಮುಕ್ತಿ 
ಬೀಜನೇ ಭವದೂರ ಬಲು ಲೀಲಾವಿನೋದ 
ಮೂಜಗತ್ಪತಿ ಮೂಲಪುರುಷ ಪರಮೇಶ 
ಸೋಜಿಗ ತೋರುವ ಸಿದ್ಧಾಂತ ಮಹಿಮಾ ಸ -
ರೋಜ ನಯನ ಬಲಜ್ಞಾನಾನಂದ ಪೂರ್ಣ 
ಹೇ ಜಲಧರವರ್ನ ಹೇಮಾಂಬರಧರ 
ರಾಜರಾಜರನುತ ರಾಗವಿದೂರಾಯೋ -
ನಿಜ ನಿಶ್ಚಿಂತ ನಿರ್ಮಳಾ ನಿತ್ಯತೃಪ್ತ ಪ್ರ -
ಯೋಜನವಿಲ್ಲದೆ ಜಗವ ಪುಟ್ಟಿಸುವ ವಿ -
ರಾಜಿತ ಸತ್ಕೀರ್ತಿ ದೈತ್ಯವಿದಾರಣ 
ಭೋಜಾ ಕುಲೋತ್ತುಮ ವಿಜಯವಿಟ್ಠಲ ವೆಂಕಟ 
ಮಾಜದೆ ಪೊರೆಯೆಂದು ಧ್ಯಾನ ಮಾಡುತಲಿರು ॥ 6 ॥

 ಆದಿತಾಳ 

ಸರ್ಪಗಿರಿಯ ಯಾತ್ರಿ ಮುಪ್ಪರಾರಿ ಗರಿದು 
ತಪ್ಪದೆ ಮಾಡಲಾಗಿ ವಪ್ಪುಪ್ಪಗೊಂಬುವ ಹರಿ 
ಅಪ್ರತಿಯಿಲ್ಲದ ತಪ್ಪುಗಳಿರೆ ವೊಲಿದು 
ಕಪ್ಪು ಉಳಿಯದಂತೆ ಅಪಹರಿಸಿ ಇವನಾ 
ಅಪ್ಪಡಿಯಾಗಿ ಸಾಕಿ ಅಪವರ್ಗವ ಕೊಡುವ 
ಒಪ್ಪಿಡಿ ಅವಲಿಗೆ ಭಾಗ್ಯವಿತ್ತನ್ನ ಪಾದಾ 
ರೆಪ್ಪಿ ಹಾಕದೆ ನೋಡಿ ಮನದಲ್ಲಿ ನಿಲಿಸೋದು 
ಸುಪ್ರಕಾಶ ನಮ್ಮ ವಿಜಯವಿಟ್ಠಲ ವೆಂಕಟ 
ನಿಪ್ಪ ಕ್ಷೇತ್ರದ ಮಹಿಮೆ ನಾನಾಬಗೆ ವರ್ಣನೆ ॥ 7 ॥

 ಜತೆ 

ಕಾಮಿತಾರ್ಥ ಪ್ರದಾಯಕ ತಿರುವೆಂಗಳ 
ಸ್ವಾಮಿ ವೆಂಕಟರನ್ನ ವಿಜಯವಿಟ್ಠಲ ನೊಲಿವ ॥
**********