..
ಎಂತು ವರ್ಣಿಸಲಮ್ಮ ನಾನು
ಕಂತುಜನಕನಾನಂತನಗಮ್ಯನನÀಂತವತಾರನ ಪ.
ಸಂತತ ಸಜ್ಜನರಂತರಂಗದಲಿ
ನಿಂತಿಹ ಲಕ್ಷ್ಮೀಕಾಂತನ ಮಹಿಮೆಯ ಅ.ಪ.
ನೀರೊಳಾಡುತ ಭಾರವ ಹೊರೆವ
ಧಾರುಣಿಯ ಪೊರೆವ
ಘೋರ ರೂಪದಲಿ ಭೂಮಿಯನಳೆವ
ಕ್ರೂರನೃಪರಳಿವ
ಆ ರಾವಣನ ಬಲವ ಮುರಿವ
ಚೋರ ದಿಗಂಬರವ
ಚಾರು ಕುದುರೇಯನೇರಿ ಬರುವ ಸುಕು-
ಮಾರ ಜಗದೊಳು ಶೂರ
ಜಾರುವ ಕಠಿಣಶರೀರದಿ ಭೂಮಿಯ
ಸೇರುವ ಕಂಬವಿದಾರಣ ಮಾಡುವ
ಮೀರುವಭುವನಕೆ ತೋರುವ ಪರಶುವ
ವಾರಿಧಿಶೋಷಕ ಜಾರ ವಸನಹೀನ
ಧೀರ ಸುಅಶ್ವವನೇರಿ ಮೆರೆವನ 1
ನಿಗಮೋದ್ಧರಿಸುವ ನಗವನು ತರುವ
ಜಗತಿಯುದ್ಧರಿಸುವ
ಮಗುವ ಪಾಲಿಸುವ ಮಾಯದಿ ಬೆಳೆವ
ದುಗುಡ ನೃಪಕುಲವ
ಬಗಿದು ಭಾಸ್ಕರ ತನಯನಿಗೊಲಿವ
ನೆಗಹಿ ಗೋವರ್ಧನವ
ಬಗೆಬಗೆ ಮಾತಾಡಿ ಸುಗುಣ ವಾಜಿಯನೇರಿ
ಬಂದ ಸಚ್ಚಿದಾನಂದ
ಹುಗಿದು ಸೋಮಕನ ಅದ್ರಿಗೆ ಬೆನ್ನಿತ್ತು
ಅಗಿದು ಭೂಮಿಯ ನರಮೃಗನಾಗುತ
ಗಗನಕೆ ಬೆಳೆದು ಘಾತಿಸಿ ಕ್ಷತ್ರಿಯರ
ರಘುವರ ಯದುಪತಿ ವಿಗತವಸನನಾಗಿ
ಜಗಕೆ ಬಲ್ಲಿದ ಹಯವೇರಿ ಬರುವನ 2
ನಳಿನೋದ್ಭವನಿಗಾಗಮವನಿತ್ತ
ಗಿರಿಯ ನಿಲಿಸಿತ್ತ
ಇಳೆಯ ಕದ್ದೊಯ್ದ ದಾನವನಳಿದ
ನರಹರಿ ತಾನಾದ
ಬಲಿಮುಖವ ಮುರಿದ ಖಳಭೂಪರಳಿದ
ದÀಶಶಿರನÀಳಿದ
ಕೊಳಲನೂದಿದ ದುಷ್ಟ ಲಲನೇರ ವ್ರತವಳಿದ
ಕಲಿಯ ಮರ್ದಿಸಿದ
ಹೊಳೆವ ಬೆನ್ನಲಿ ಗಿರಿತಳವೆತ್ತಿದನ
ನೆಲನ ಬಗಿದು ಕಂಬದಲಿ ಬಂದವನ
ಬೆಳೆದ ಬೊಮ್ಮಾಂಡಕೆ ಭಾರ್ಗವಾಧಿಪನ
ಜಲವ ಬತ್ತಿಸುವ ಗೋವಳ ಬುದ್ಧ ಕಲ್ಕಿ
ಚೆಲುವ ಹಯವದನನ ಬಲ್ಲಿದನ 3
***