ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿತೀರ್ಥರು [ ಅಂಕಿತ : ರಘುಪತಿ ] ಶ್ರೀಮದಾಚಾರ್ಯರ ಆದೇಶದಂತೆ - ಅವರೇ ನಿರ್ದೇಶಿಸಿದಂತೆ ಭಕ್ತಿ ಪ್ರಧಾನವಾದ ಗೇಯ - ಗೀತೆ ಪದ್ಧತಿಯನ್ನು ದೇಶ ಭಾಷೆಯಾದ ಕನ್ನಡಕ್ಕೂ ಅನ್ವಯಿಸುವಂತೆ ಮಾಡಿ " ದಾಸ ಪಂಥ " ದ " ದಿವ್ಯ ಭವ್ಯ ಮಂದಿರ " ಕ್ಕೆ ಶಂಕುಸ್ಥಾಪನೆ ಮಾಡಿದರು.
ಶ್ರೀ ಜಯತೀರ್ಥರು [ ಶ್ರೀ ರಾಮ / ಜಯರಾಮ ] - ಶ್ರೀ ವಿಬುಧೇಂದ್ರತೀರ್ಥರು [ ವಿಬುಧರಾಮ ] - ಶ್ರೀ ಶ್ರೀಪಾದರಾಜರು [ ಅಂಕಿತ : ರಂಗವಿಠ್ಠಲ ] ಹಾಗೂ ಶ್ರೀ ವ್ಯಾಸರಾಜರು [ ಅಂಕಿತ : ಶ್ರೀ ಕೃಷ್ಣ / ಸಿರಿಕೃಷ್ಣ ] ಆ " ದಿವ್ಯ ಭವ್ಯ ಮಂದಿರ " ಕ್ಕೆ ಭದ್ರ ಬುನಾದಿ ಹಾಕಿದರು.
ಶ್ರೀ ಗೋವಿಂದ ಒಡೆಯರು [ ಅಂಕಿತ : ಗುರುಮುದ್ದುಕೃಷ್ಣ ] - ಶ್ರೀ ವಿಜಯೀ೦ದ್ರತೀರ್ಥರು [ ಅಂಕಿತ : ವಿಜಯೀ೦ದ್ರರಾಮ ] - ಶ್ರೀ ಶ್ರೀ ವಾದಿರಾಜರು [ ಅಂಕಿತ : ಹಯವದನ ] - ಶ್ರೀ ಪುರಂದರದಾಸರು [ ಅಂಕಿತ : ಪುರಂದರವಿಠ್ಠಲ ] - ಶ್ರೀ ಕನಕದಾಸರು - [ ಅಂಕಿತ : ನೆಲೆಯಾದಿಕೇಶವ / ಬಾಡದಾದಿಕೇಶವ ] - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ [ ಅಂಕಿತ : ವೇಣುಗೋಪಾಲ ] ರೇ ಮೊದಲಾದ ಮಹನೀಯರು ದಿವ್ಯ ಭವ್ಯವಾಗಿ ಈ " ದಾಸ ಪಂಥದ ಗುಡಿ " ಕಟ್ಟಿದರೆ -
ಮುಂದೆ ಶ್ರೀ ವಿಜಯದಾಸರು [ ಅಂಕಿತ : ವಿಜಯವಿಠ್ಠಲ ] - ಶ್ರೀ ಐಜಿ ವೇಂಕಟರಾಮಾಚಾರ್ಯರು [ ಅಂಕಿತ : ವಾಸುದೇವವಿಠ್ಠಲ ] - ಶ್ರೀ ಗೋಪಾಲದಾಸರು [ ಅಂಕಿತ : ಗೋಪಾಲವಿಠ್ಠಲ ] " ಕಳಸ " ಏರಿಸಿದರು.
ನಂತರ ಬಂದ ಶ್ರೀ ಜಗನ್ನಾಥದಾಸರು [ ಅಂಕಿತ : ಜಗನ್ನಾಥವಿಠ್ಠಲ ] ಮತ್ತು ಅವರ ಪ್ರಿಯ ಶಿಷ್ಯರಾದ ಶ್ರೀ ಪ್ರಾಣೇಶದಾಸರು [ ಅಂಕಿತ : ಪ್ರಾಣೇಶವಿಠ್ಠಲ ] ಈ " ದಿವ್ಯ ಭವ್ಯ ಹರಿದಾಸ ಮಂದಿರ " ಕ್ಕೆ " ಗೋಪುರ " ವನ್ನು ನಿರ್ಮಿಸಿ - ದಾಸಕೂಟದ ಗೌರವ ಘನತೆಗಳನ್ನು ಆಕಾಶದೆತ್ತರಕ್ಕೆ ಬೆಳೆಸಿ - ಈ ದಿವ್ಯ ಭವ್ಯ ಹರಿ ದಾಸ ಪರಂಪರೆಯನ್ನು ಶ್ರೀಮಂತಗೊಳಿಸಿದರು.
ತದನಂತರದಲ್ಲಿ ಬಂದ ಹರಿದಾಸರುಗಳು ತಮ್ಮ ಪದ - ಪದ್ಯ - ಸುಳಾದಿ - ಉಗಾಭೋಗ - ವೃತ್ತನಾಮ - ಜಾವಳಿ - ಲಾವಣಿ ಮೊದಲಾದವುಗಳಿಂದ " ಹರಿದಾಸ ಮಂದಿರವನ್ನು ಶೃಂಗರಿಸಿ ಅಲಂಕರಿಸುತ್ತಲೇ " ಬಂದಿದ್ದಾರೆ.
***
From ನರಹರಿ ಸುಮಧ್ವ on 1 Nov 2021
ಕನ್ನಡ ಸಾಹಿತ್ಯಕ್ಕೆ ಮಾಧ್ವ ಪರಂಪರೆಯ ಕಾಣಿಕೆ
ಆಚಾರ್ಯ ಮಧ್ವರು ಹನ್ನೆರಡನೇ ಶತಮಾನದಲ್ಲಿ ನೆಲೆಸಿದ್ದು ಉಡುಪಿಯಲ್ಲಿ. ಸುಂದರ ಸೊಬಗಿನ ಆ ಉಡುಪಿಯಲ್ಲಿ ಕಡುಗೋಲು ಕೃಷ್ಣನ ಪ್ರತಿಮೆಯ ಪ್ರತಿಷ್ಠಾಪಿಸಿ, ಅಷ್ಟಮಠಗಳ ಯತಿಗಳು ಮತ್ತು ಪದ್ಮನಾಭಾದಿ ಯತಿಗಳ ಸಮೂಹವನ್ನೇ ನೀಡಿ ಧರ್ಮ ಪ್ರಚಾರ ಮಾಡಲು ಆರಂಭಿಸಿದರು.
ಹರಿದಾಸ ಸಾಹಿತ್ಯದ ಮೂಲ ಪುರುಷರು ಶ್ರೀ ಮಧ್ವಾಚಾರ್ಯರು ಎಂದೇ ಹೇಳಬಹುದು. ಕನ್ನಡದಲ್ಲಿ ಆಚಾರ್ಯರು ಯಾವ ಕೃತಿಗಳನ್ನೂ ರಚಿಸದಿದ್ದರೂ ಅವರ ಪ್ರಭಾವಕ್ಕೆ ಸಿಕ್ಕ ಅವರ ನೇರ ಶಿಷ್ಯರಾದ ನರಹರಿ ತೀರ್ಥರು ಕನ್ನಡದಲ್ಲಿ ಮೊದಲ ದೇವರನಾಮವನ್ನು ರಚಿಸಿದರು
ಆಚಾರ್ಯ ಮಧ್ವರ ನೇರ ಶಿಷ್ಯರಲ್ಲಿ ಒಬ್ಬರಾದ ಹಂಪಿಯಲ್ಲಿ ವಿರಾಜಮಾನರಾಗಿರುವ ಶ್ರೀ ನರಹರಿ ತೀರ್ಥರು "ಹರಿಯೇ ಇದು ಸರಿಯೇ",. "ಎಂತು ಮರುಳಾದೆ ಹರಿಯೇ" " ತಿಳಿಕೋ ನಿನ್ನೊಳಗೆ ನೀನೇ" ಮುಂತಾದ ಕೃತಿಗಳ ಮೂಲಕ ದಾಸಸಾಹಿತ್ಯಕ್ಕೆ ಬುನಾದಿ ಹಾಕಿದರು.
ಕಾಗಿಣೀತೀರ ಮಳಖೇಡ ನಿವಾಸಿ ಅಕ್ಷೋಭ್ಯರ ತನಯ ಶ್ರೀ ಜಯತೀರ್ಥರೂ ಸಮಗ್ರ ಆಚಾರ್ಯರ ಸರ್ವಮೂಲ ಟೀಕೆಯನ್ನು ದೇವಭಾಷೆಯಲ್ಲಿ ಬರೆದರೂ , "ರಾಮವಿಠಲ" ಅಂಕಿತದಲ್ಲಿ "ನೀಲ ಮೇಘ ಶ್ಯಾಮನ ಕೋಮಲಾಂಗನ ಕಂಡೆ" ಎಂಬ ಕೃತಿಯ ರಚಿಸಿದ್ದಾರೆ.
ಅಕಸ್ಮಾತ್ ಕನ್ನಡದಲ್ಲಿ ಮಾತನಾಡಿದರೆ ಮೈಲಿಗೆಯಾಯಿತು ಎಂದು ಕೊಂಡು, ಮತ್ತೆ ಸ್ನಾನ ಮಾಡಿ ತಮ್ಮ ಕಾರ್ಯಗಳನ್ನು ಮುಂದುವರೆಸುತ್ತಿದ್ದ ಕಾಲದಲ್ಲಿ ಆಚಾರ್ಯ ಕರಾರ್ಚಿತ ವಿಗ್ರಹಗಳನ್ನು ಮುಟ್ಟಿ ಪೂಜೆ ಮಾಡಿ , ಕನ್ನಡದಲ್ಲಿ ದೇವರನಾಮ ಗಳನ್ನು ರಚಿಸುವ ಸಂಕಲ್ಪ ಮಾಡಿದ್ದು ಆಗಿನ ಕಾಲಕ್ಕೆ ಒಂದು ಸಾಹಸವೇ ಸರಿ. ಶ್ರೀ ಶ್ರೀಪಾದರಾಜರು "ರಂಗವಿಠಲ" ಅಂಕಿತದಿಂದ ನೂರಾರು ದೇವರ ನಾಮಗಳು, ಉಗಾಭೋಗಗಳನ್ನು ರಚಿಸಿದ್ದಾರೆ. ಅಲ್ಲಿಯವರೆಗೂ ಸಂಸ್ಕೃತ ಕೃತಿಗಳನ್ನು ಮಾತ್ರ ಅಧ್ಯಯನ ಪಾರಾಯಣ ಮಾಡುವ ಪರಿಪಾಠವನ್ನು ದೂರವಿಕ್ಕಿ ಭಕುತಿಯಲಿ ಗಾಯನ ಮಾಡುವವರೂ ಧರ್ಮಗಳನ್ನು ಅರಿಯಬಹುದು ಎಂದು ತಿಳಿಸಿದರು. ಮಕ್ಕಳ ಆಡುಭಾಷೆಯಲ್ಲಿ "ಪೋಪು ಹೋಗೋಣ ಬಾರೋ" ಕೃತಿ ಅಮೋಘವಾಗಿದೆ, ಹಲವಾರು ಸುಳಾದಿಗಳನ್ನೂ ರಚಿಸಿದ್ದಾರೆ. ಶ್ರೀಪಾದರಾಜ ಮಠದಿಂದ "ರಂಗವಿಠಲ" ಮಾಸಿಕ ಪ್ರಕಟಣೆಯಾಗುತ್ತಿದೆ.
ಶ್ರೀ ವ್ಯಾಸರಾಜರು ಇದೇ ಮಾರ್ಗದಲ್ಲಿ ಮುಂದುವರಿದು ತಾವೂ ನೂರಾರು ಕೀರ್ತನೆಗಳನ್ನು ರಚಿಸಿ ಪುರಂದರದಾಸರು ಮತ್ತು ಕನಕದಾಸರಿಗೆ ದಾಸ ದೀಕ್ಷೆ ಇತ್ತು ಸಾವಿರಾರು ದೇವರನಾಮಗಳನ್ನು ಪ್ರಚರಪಡಿಸಿದರು. ವ್ಯಾಸರಾಯರು ಕನ್ನಡ ದೇವರನಾಮಗಳನ್ನು ರಚಿಸಿದ್ದಲ್ಲದೆ, ಚಂದ್ರಿಕಾ, ತರ್ಕತಾಂಡವಾದಿ ಹಲವಾರು ಕೃತಿಗಳನ್ನು ರಚಿಸಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ. ಇದೇ ರೀತಿ ವ್ಯಾಸರಾಜ ಮಠದ ಮೂಲಕ "ತತ್ವಚಂದ್ರಿಕಾ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.
ಇದೇ ರೀತಿ ಸೋಂದಾ ಶ್ರೀ ವಾದಿರಾಜ ಶ್ರೀಪಾದರು ಹಲವು ಕನ್ನಡ ಗ್ರಂಥಗಳನ್ನು, ದೇವರನಾಮಗಳನ್ನು ರಚಿಸಿ ಉಪಕರಿಸಿದ್ದಾರೆ,. ಅವರ ಲಕ್ಷ್ಮೀ ಶೋಭಾನೆ ಅತ್ಯಂತ ಮಂಗಳಕರವೆಂದು ಪ್ರಸಿದ್ಧಿ ಪಡೆದಿದೆ ಮತ್ತು ಯಾವುದೇ ಶುಭಕಾರ್ಯಗಳಲ್ಲಿ ಪಾರಾಯಣ ಮಾಡುವ ಪರಿಯಿದೆ. ವಾದಿರಾಜರು ಪ್ರತಿಯೊಬ್ಬ ದೇವತೆಗಳ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ವಿಜಯೇಂದ್ರ ತೀರ್ಥರು ,- "ವಿಜಯೇಂದ್ರ ರಾಮ" ಅಂಕಿತದಲ್ಲಿ ರಚಿಸಿದ್ದಾರೆ.
ವ್ಯಾಸತತ್ವಜ್ಞ ತೀರ್ಥರು - "ವಾಸುದೇವ ವಿಠಲ" ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿಗಳು ಧೀರ ವೇಣುಗೋಪಾಲ ಅಂಕಿತದಲ್ಲಿ "ಇಂದು ಎನಗೆ ಗೋವಿಂದ", ಮತ್ತು ಸುಳಾದಿಗಳ ರಚಿಸಿದ್ದಾರೆ.
ಶ್ರೀ ವಿದ್ಯಾರತ್ನಾಕರ ತೀರ್ಥರು ಹಲವು ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ಪ್ರಸನ್ನ ತೀರ್ಥರು ನೂರಾರು ದೇವರನಾಮಗಳು ರಚಿಸಿದ್ದಾರೆ.
ಪ್ರಸ್ತುತ ಶ್ರೀ ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥರೂ ನೂರಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.
ಪ್ರಾತಃ:ಸ್ಮರಣೀಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯ ಮೂಲಕ ಹಲವಾರು ಸಂಸ್ಕೃತ ಗ್ರಂಥಗಳನ್ನು ಕನ್ನಡಕ್ಕೆ ತಮ್ಮ ಶಿಷ್ಯರ ಮೂಲಕ ಅನುವಾದಿಸಿ ಪ್ರಕಟಿಸಿ ಅನುಕೂಲ ಮಾಡಿದ್ದಾರೆ. ಜೊತೆಗೆ ಹಲವಾರು ವರ್ಷಗಳಿಂದ "ತತ್ವವಾದ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.
ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥರು ವಿಶ್ವಮಧ್ವ ಮಹಾಪರಿಷತ್ ಮೂಲಕ ನೂರಾರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ತಮ್ಮ ಶಿಷ್ಯರ ಮೂಲಕ ಹಲವಾರು ಕನ್ನಡ ಕೃತಿಗಳನ್ನು ಹೊರತಂದಿದ್ದಾರೆ ಜೊತೆಗೆ "ಶ್ರೀ ಸುಧಾ" ಎಂಬ ಹೆಸರಿನಿಂದ ಮಾಸಿಕವನ್ನು ಪ್ರಕಟಿಸುತ್ತಿದ್ದಾರೆ .
ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ಮಂತ್ರಾಲಯ ಮಠದ ಆಶ್ರಯದಲ್ಲಿ ಸಮಗ್ರ ರಾಯರ ಗ್ರಂಥಗಳನ್ನೂ ಕನ್ನಡಕ್ಕೆ ತಂದಿದ್ದಾರೆ, ಅವರ ಕನ್ನಡ ಸೇವೆ ಅನರ್ಘ್ಯ. ಅಲ್ಲದೆ ದಾಸಸಾಹಿತ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮಂತ್ರಾಲಯದಲ್ಲಿ ವಿಶೇಷ ದಾಸಕೂಟಗಳನ್ನೂ, ಭಜನಾ ಮಂಡಳಿಗಳನ್ನೂ ಪ್ರೋತ್ಸಾಹಿಸಿದ್ದಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರ ಭಜನಾ ಮಂಡಳಿಗಳನ್ನೂ ಉತ್ತೇಜಿಸಿ ದಾಸಸಾಹಿತ್ಯ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಜೊತೆಗೆ ಮಂತ್ರಾಲಯ ಮಠದಿಂದ "ಗುರು ಸಾರ್ವಭೌಮ" ಮಾಸಿಕವೂ ನಿರಂತರ ಪ್ರಕಟಣೆಯಾಗುತ್ತಿದೆ.
ಇದೇ ರೀತಿ ಪರಮಪೂಜ್ಯ ಶ್ರೀ ಫಲಿಮಾರು ವಿದ್ಯಾಧೀಶ ತೀರ್ಥರೂ ಕೂಡ ಕನ್ನಡದಲ್ಲಿ ತಮ್ಮ ಸಂಸ್ಥೆಯ ಮೂಲಕ ಹಲವಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ "ಸರ್ವಮೂಲ" ಎಂಬ ಮಾಸಿಕವನ್ನು ತಂದಿದ್ದಾರೆ.
ಇನ್ನು ದಾಸರುಗಳ ಪೈಕಿ ಅಗ್ರಗಣ್ಯರು ಶ್ರೀ ಪುರಂದರದಾಸರು - ನಾಲ್ಕು ಲಕ್ಷಕ್ಕೂ ಹೆಚ್ಚಿನ ದೇವರನಾಮಗಳನ್ನು, ಉಗಾಭೋಗಗಳನ್ನು, ಮುಂಡಿಗೆಗಳು, ಸುಳಾದಿಗಳನ್ನೂ ರಚಿಸಿದ್ದಾರೆ, ಕರ್ನಾಟಕ ಸಂಗೀತ ಪಿತಾಮಹನೆನೆಸಿ, ಶ್ರೀ ವ್ಯಾಸರಾಯರಿಂದ ಅವರ ಕೀರ್ತನೆಗಳು "ಪುರಂದರೋಪನಿಷತ್" ಎಂದು ಆಚಾರ್ಯ ಮಧ್ವರ "ಸರ್ವಮೂಲ"ದೊಂದಿಗೆ ಗೌರವಿಸಲ್ಪಟ್ಟಿದೆ.
ಶ್ರೀ ಕನಕದಾಸರು - ಜಾತಿಯಲ್ಲಿ ಕುರುಬನಾಗಿ ಹುಟ್ಟಿದರೂ ಶ್ರೀ ವ್ಯಾಸರಾಜರಿಂದ ಅತ್ಯುನ್ನತ ಗೌರವ ಮತ್ತು ದಾಸಧೀಕ್ಷೆ ಪಡೆದು, ಪುರಂದರದಾಸರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವರನಾಮಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಕಬ್ಬಿಣದ ಕಡಲೆಯಿದ್ದಂತೆ. ಅವರ ಪದ ಜೋಡಣೆ, ಸಾಹಿತ್ಯ ಚಿಂತನೆ ಶೈಲಿ, ಮುಂಡಿಗೆಗಳನ್ನು ಅರ್ಥಮಾಡಿಕೊಳ್ಳಲು ವ್ಯಾಸಸಾಹಿತ್ಯದ ಆಸರೆ ಕೂಡ ಬೇಕು. ಅವರು ಪ್ರತಿಯೊಂದು ಪದದಲ್ಲೂ ವಿಶೇಷ ಅರ್ಥಗಳನ್ನು ಹುಡುಕುವಂತೆ ಮಾಡುತ್ತಾರೆ. "ಅಂಧಕನನುಜನ ಕಂದನ ತಂದೆಯ", "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ", "ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ", "ಕುಲ ಕುಲ ಕುಲವೆಂದು ಹೊಡೆದಾಡದಿರಿ",. "ಏನೆ ಮನವಿತ್ತೆ ಲಲಿತಾಂಗಿ" ಇತ್ಯಾದಿ ಹಲವಾರು ಗಂಭೀರ ಅರ್ಥಗರ್ಭಿತ ಸಾಹಿತ್ಯ ರಚಿಸಿದ್ದಾರೆ. ಅವರ ಅಂಕಿತ "ಕಾಗಿನೆಲೆ ಆದಿ ಕೇಶವ". ಇವರ ಇತರ ಪ್ರಸಿದ್ಧ ಕೃತಿಗಳು - ಮೋಹನತರಂಗಿಣಿ, ನಳಚರಿತ್ರೆ, ಮುಂಡಿಗೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ದಂಡಕಗಳು, ಉಗಾಭೋಗ, ಸುಳಾದಿಗಳು, ಇತ್ಯಾದಿ.
ಕುಮಾರವ್ಯಾಸರು ಇಡೀ ಮಹಾಭಾರತವನ್ನು ಕನ್ನಡದಲ್ಲಿ ಕಾವ್ಯಮಯವಾಗಿ ನೀಡಿದ್ದಾರೆ.
ಶ್ರೀ ಪ್ರಸನ್ನ ವೆಂಕಟ ದಾಸರು - ಪ್ರಸನ್ನ ವೆಂಕಟ ಅಂಕಿತದಿಂದ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ವಿಶೇಷತೆಯೆಂದರೆ ಕ್ಲಿಷ್ಟ ಪದಲಾಲಿತ್ಯದ ಕೀರ್ತನೆಗಳು ಅಷ್ಟು ಸುಲಭವಾಗಿ ಅರ್ಥವಾಗುವುದು ಕಠಿಣ.
ವಿಜಯದಾಸರು - ೨೫೦೦೦ಕ್ಕೂ ಹೆಚ್ಚು ಕೀರ್ತನೆಗಳು, ಸುಳಾದಿಗಳು, ಮುಂಡಿಗೆ, ಉಗಾಭೋಗ, ಇತ್ಯಾದಿ ಪ್ರತಿಯೊಂದು ವಿಷಯದಲ್ಲೂ ಸುಳಾದಿಗಳನ್ಧು ರಚಿಸಿದ್ದಾರೆ - ಹಬ್ಬ ಸುಳಾದಿ, ನೈವೇದ್ಯ ಸುಳಾದಿ, ಧನ್ವಂತರಿ ಸುಳಾದಿ, ಇತ್ಯಾದಿ ಹಲವಾರು.
ಗೋಪಾಲದಾಸರು - ಜಗನ್ನಾಥದಾಸರಿಗೆ ವಿಜಯದಾಸರ ಆಜ್ಞೆಯಂತೆ ಆಯುರ್ದಾನ ಮಾಡಿದ್ದಲ್ಲದೆ, ಹಲವಾರು ಕೀರ್ತನೆಗಳು ರಚಿಸಿದ್ದಾರೆ.
ಜಗನ್ನಾಥದಾಸರು - ಹರಿಕಥಾಮೃತಸಾರ, ತತ್ವಸುವ್ವಾಲಿ, ದೇವರನಾಮಗಳು, ಉಗಾಭೋಗ, ಇತ್ಯಾದಿ
ಮೋಹನದಾಸರು - ಕೋಲುಪದ ಎಂಬ ದೀರ್ಘ ಕೃತಿ ಮತ್ತು ಹಲವಾರು ದೇವರನಾಮಗಳನ್ನು ನೀಡಿದ್ದಾರೆ.
ಇದಲ್ಲದೆ ಇನ್ನೂ ಹಲವಾರು ದಾಸಶ್ರೇಷ್ಟರು ಇದ್ದಾರೆ
ಪ್ರಾಣೇಶದಾಸರು, ಗುರು ಪ್ರಾಣೇಶದಾಸರು, ಗುರುಗೋಪಾಲದಾಸರು, ಗುರು ಜಗನ್ನಾಥದಾಸರು, ಮಹಿಪತಿದಾಸರು, ಮೊದಲಕಲ್ಲು ಶೇಷದಾಸರು, ಗುರುಪುರಂದರ ದಾಸರು, ತಂದೆ ಪುರಂದರದಾಸರು, ಶ್ಯಾಮಸುಂದರ ದಾಸರು, ವರದೇಶವಿಠಲರು, ಭೂಪತಿವಿಠಲದಾಸರು, ಕಾಖಂಡಕಿ ಕೃಷ್ಣ ದಾಸರು, ಶ್ರೀದವಿಠಲದಾಸರು, ಅಚಲಾನಂದ ದಾಸರು, ಶ್ರೀ ಪ್ರಸನ್ನ ಶ್ರೀನಿವಾಸ ದಾಸರು, ವೇಣುಗೋಪಾಲ ದಾಸರು, ಶ್ರೀ ಗೋವಿಂದ ವಿಠಲ ದಾಸರು, ಮೈಸೂರಿನ ಸುಬ್ಬರಾಯರು, ಗುರುಗೋವಿಂದ ವಿಠಲ ದಾಸರು, ವರದವಿಠಲದಾಸರು, ಉರಗಾದ್ರಿವಿಠಲದಾಸರು, ಅಸ್ಕಿಹಾಳ ಗೋವಿಂದದಾಸರು, ಸದಾನಂದ ದಾಸರು, ಅಹೋಬಲ ದಾಸರು, ಹನುಮೇಶವಿಠಲದಾಸರು, ಅಭಿನವ ಜನಾರ್ಧನ ವಿಠಲದಾಸರು, ಗೋಕಾವಿ ಅನಂತಾಧೀಶರು, ಜಯೇಶವಿಠಲದಾಸರು, ಜನಾರ್ಧನವಿಠಲದಾಸರು, ಕಾರ್ಪರ ನರಸಿಂಹ ದಾಸರು ಶ್ರೀಪತಿವಿಠಲದಾಸರು, ಶ್ರೀವಿಠಲ ದಾಸರು, ಭೂಪತಿವಿಠಲದಾಸರು, ರಂಗೇಶವಿಠಲದಾಸರು, ತುಳಸಿರಾಮದಾಸರು, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ನಂಜನಗೂಡು ತಿರುಮಲಾಂಬ, ಗಲಗಲಿ ಅವ್ವ, ಯದುಗಿರಿಯಮ್ಮ.
ಶ್ರೀ ತಿರುಪತಿ ದಾಸಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿಗಳಾಗಿದ್ದಾಗ ತಮ್ಮ ಸಂಘಟನಾ ಚಾತುರ್ಯದಿಂದ ಅಪ್ಪಣ್ಣಾಚಾರ್ಯರು ಮಹಿಳಾ ಭಜನಾ ಮಂಡಳಿಗಳನ್ನೂ ಬೆಳೆಸಿದ ಪ್ರಮುಖರು.
ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರು ನೂರಾರು ವಿಶಿಷ್ಟ ದಾಸಸಾಹಿತ್ಯದ ವಿಶೇಷ ಅರ್ಥಗಳನ್ನು ಬಿಡಿಸಿ ಸುಲಭವಾಗಿ ಅರ್ಥವಾಗುವಂತೆ ಮಾಡಿದ್ದಾರೆ.
ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ತಮ್ಮ ವಾಗ್ವೈಖರಿಯಿಂದ ಮತ್ತು ಶ್ರೀ ಹ.ರಾ. ನಾಗರಾಜಾಚಾರ್ಯರು ವಿಶಿಷ್ಟ ಸಂಗ್ರಹಗಳಿಂದ, ಮತ್ತು ಶ್ರೀಮತಿ ಸುಧಾ ಆದಿಶೇಷ್ ಅವರು ಹರಿಕಥಾಮೃತಸಾರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ರಾವ್ಸ ಕಲೆಕ್ಷನ್.ಬ್ಲಾಗಸ್ಪಾಟ್, ಸುಮಧ್ವಸೇವಾ.ಕಾಂ, ದಾಸಸಾಹಿತ್ಯ.ನೆಟ್, ಮುಂತಾದ ಹಲವಾರು ವೆಬ್ಸೈಟ್ಗಳು ಕೀರ್ತನೆ ಸಂಗ್ರಹದಲ್ಲಿ ತೊಡಗಿವೆ.
ಇಂದು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮಾಧ್ವ ವಾಜ್ಮಯ ಪ್ರಪಂಚವನ್ನು ಯಥಾಶಕ್ತಿ ನೆನೆದಿದ್ದೇನೆ.
ಇಷ್ಟೆ ಅಲ್ಲ, ಇನ್ನೂ ಹಲವಾರು .ಸಂಗ್ರಹಕಾರರೂ, ಚಿಂತನಕಾರರೂ, ಉಪನ್ಯಾಸಕರು, ಇದ್ದಾರೆ. ಇತ್ತೀಚೆಗೆ ಫೇಸ್ಬುಕ್ ಲೈವ್ ಮೂಲಕ ದೇವರನಾಮ ಗಾಯನಗಳೂ ನಡೆಯುತ್ತಿದೆ.
ಎಲ್ಲರ ಹೆಸರು ಇಲ್ಲಿ ನನ್ನ ನೆನಪಿನಲ್ಲಿ ಬರದೇ ಇರಬಹುದು. ಅವರೆಲ್ಲರನ್ನೂ ಸ್ಮರಿಸೋಣ
ಹರೇ ಶ್ರೀನಿವಾಸ
ನರಹರಿ ಸುಮಧ್ವ, ಸುಮಧ್ವಸೇವಾ
end
***
ಅಂಕಿತ ಗುರುಪುರಂದರ
ಅಂಕಿತ ಅಭಿನವಪುರಂದರ
ಅಂಕಿತ ಗುರುಮಧ್ವಪತಿವಿಠಲ
ಅಂಕಿತ guru gopala vittala
ಅಂಕಿತ tande gopala vittala
******
from prasadacharya
ಎಲ್ಲಾ ದಾಸರ ಅಂಕಿತ ವಿಠಲ ಅಂತಾ ಬರಲು ಮೂಲ ಪ್ರೆರೆಣೆ ಏನು ?
ಶಾಸ್ತ್ರದಲ್ಲಿ ಆದಿ ಅನಾದಿಕಾಲದಿಂದಲೂ ವಿಠಲ ನಾಮ ಭಗವಂತನಿಗೆ ಇದ್ದೆ ಇದೆ ವಿದಜ್ಞಾನೇ... ಅಂತ ಸಂಸ್ಕೃತದಲ್ಲಿ ಧಾತು ಇದೆ , ವಿಠ್ ಅಂದ್ರೆ ಜ್ಞಾನ ಲ ಅಂದ್ರೆ ನಿಧಿ ಅಂತ ಅರ್ಥ , ವಿಠ್ಠಲ ಅಂದ್ರೆ ಜ್ಞಾನಾನಂದಾದಿಗುಣಗಳ ನಿಧಿ ಅಂತ ಅರ್ಥ , ವಂದೇ ಗೋವಿಂದಮಾನಂದ ಜ್ಞಾನದೇಹಂ ಪತಿಂ ಶ್ರಿಯಃ... ಯಾವನು ಜ್ಞಾನಾನಂದಾದಿಗುಣಗಳನ್ನೇ ದೇಹವಾಗಿ ಉಳ್ಳವನೋ ಅವನೇ ವಿಠ್ಠಲ .
ಅವರವರ ಯೊಗ್ಯತೆಗೆ ಅನುಸಾರವಾಗಿ ಜ್ಞಾನಾನಂದಾದಿಗಳನ್ನು ಕರುಣಿಸುವವನಾದ್ದರಿಂದ ಆತನಿಗೆ ವಿಠ್ಠಲ ಅಂತಲೇ ಹೆಸರಿದೆ, ಬ್ರಹ್ಮ ವಿದಾಪ್ನೋತಿ.... ಎಂಬ ವೇದೋಕ್ತಿಯಲ್ಲಿ ವಿಠ್ಠಲ ಶಬ್ದಸೂಚಕವಾದ ವಿದ್ ಎಂಬ ಶಬ್ದ ಬಂದಿದೆ. ಹೀಗೆ ಈ ವಿಠ್ಠಲ ಎಂಬ ಹೆಸರು ಪರಮಾತ್ಮನಿಗೆ ವೇದಗಳಿಂದಲೇ ಸ್ತೋತ್ರ ಮಾಡಲ್ಪಟ್ಟ ನಾಮವಾಗಿದೆ. ಕಲಿಯುಗದಲ್ಲಿ ನಮಗೆ ಮೂರು ಕ್ಷೇತ್ರಗಳು ಪ್ರಸಿದ್ಧವಾಗಿವೆ ತಿರುಪತಿ ತಿಮ್ಮಪ್ಪ ಕಾಂಚನ ಬ್ರಹ್ಮ, ಉಡುಪಿಯ ಕೃಷ್ಣ ಅನ್ನಬ್ರಹ್ಮ, ಸಂಗೀತ ಗಾಯನಕ್ಕೆ ಒಲಿಯುವವನು ನಾದಬ್ರಹ್ಮ ಶ್ರೀ ಪಂಡರಾಪುರದ ಪಾಂಡುರಂಗವಿಠಲ ಹೀಗಾಗಿ ನಮ್ಮ ಹರಿದಾಸರ ಗಾಯನಕ್ಕೆ ಒಲಿದು ಅವರ ಗಾನಾಮೃತಕ್ಕೆ ಸಂತಸಪಟ್ಟು ನರ್ತನೆ ಮಾಡುವವನಾದ್ದರಿಂದ, ಅಲ್ಲದೇ ಗಾಯನದಿಂದಲೆ ಭಗವಂತನ ಕುರಿತಾದ ಸರಿಯಾದ ಜ್ಞಾನವನ್ನು ನೀಡುವಂತಹವನೂ ಆದ್ದರಿಂದ ವಿಠಲ ಎನ್ನುವ ಪದ ಸುಮಾರು ದಾಸರೆಲ್ಲರಿಗೆ ಅಂಕಿತನಾಮದ ಜೊತೆಗೆ ಸೇರ್ಪಡಿಯಾಗಿದೆ ..
ಅವರವರ ಬಿಂಬನ ಚಿಂತನೆಯನ್ನ ಮಾಡಿ ಅವರವರ ಗುರೂಗಳು ವಿಠಲ ಎನ್ನುವ ನಾದಬ್ರಹ್ಮನ ಹೆಸರಿನಿಂದಲೆ ಅಂಕಿತವನ್ನು ನೀಡುವುದುಂಡು. ಅದು ನೇರವಾಗಿಯೂ, ಸ್ವಪ್ನದಲ್ಲಾದರೂ ಸರಿ..
ಶ್ರೀಮದಾಚಾರ್ಯರು ಸಹ ವಿಠಲ ಮೂರ್ತಿಯನ್ನು ಅರ್ಚನೆ ಮಾಡಿ, ತಮ್ಮ ಶ್ರೀ ಪೇಜಾವರ, ಪುತ್ತಿಗೆ, ಶಿರೂರು ಮಠದ ಶಿಷ್ಯರಿಗೆ ನೀಡಿದವರಾಗಿದ್ದಾರೆ. ಶ್ರೀ ಉತ್ತರಾದಿಮಠದಲ್ಲಿಯೂ ಶ್ರೀಮದಕ್ಷ್ಯೋಭ್ಯತೀರ್ಥ ಕರಾರ್ಚಿತ ವಿಠಲನ ಪ್ರತಿಮೆ ಇದೆ. ಶ್ರೀ ಶ್ರೀಪಾದರಾಜರಿಗೂ ಒಲಿದವನು ರಂಗವಿಠಲನಾದ ವಿಠಲನೇ ಅಲ್ಲವೇ..
ಹೀಗೆ ಸಂಗೀತ ಗಾಯನಕ್ಕೆ ಒಲಿದು ಹಾಡಿನ ಮೂಲಕವೂ ಪರಮಾತ್ಮನನ್ನು ತಿಳಿದು ಜ್ಞಾನ ಪಡೆಯುವುದನ್ನು ಸೂಚಿಸುವಂತಲೇ ಅವರವರ ಬಿಂಬಮೂರ್ತಿಯ ಜೊತೆ ನಾದಬ್ರಹ್ಮನಾದ ವಿಠಲನನ್ನು ಸೇರಿಸಿಯೇ ಹರಿದಾಸರ ಅಂಕಿತನಾಮವಾಗಿದೆ.
end
****
ನಮ್ಮ ದಾಸ ಸಾಹಿತ್ಯದ ಹಿರಿಮೆ
ದಾಸರೆಂದರೆ ಶ್ರೀ ಹರಿಯ ಹರಿಕಾರರಾದ ಹರಿದಾಸರೆಂದೇ ಅರ್ಥ.. ದಾಸೋಹಂ ಕೋಸಲೇಂದ್ರಸ್ಯ ಎಂದು ನಮ್ಮ ಮುಖ್ಯ ಪ್ರಾಣದೇವರೇ ನಮಗೆ ದಾಸತ್ವ ಹೇಗಿರಬೇಕು ಎಂದು ತಿಳಿಸಿಕೊಟ್ಟವರು..ಆ ಮುಖ್ಯಪ್ರಾಣದೇವರ ಮೂರನೆ ಅವತಾರಿಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ನಮಗಾಗಿಯೇ ಈ ಕಲಿಯುಗದಲ್ಲಿ ಹುಟ್ಟಿಬಂದು ಪರಮಾತ್ಮನ ಕುರಿತಾದ ಉತ್ಕೃಷ್ಟ ಜ್ಞಾನವನ್ನು ಗ್ರಂಥಗಳ ಮುಖಾಂತರ ನೀಡಿ ಇಂದಿಗೂ ಬದರಿಕಾಶ್ರಮದಲ್ಲಿದ್ದು ನಮ್ಮನ್ನು ಕಾಯ್ತಿದ್ದಾರೆ..
ವೈಷ್ಣವ ಜನ್ಮ ಪರಮ ದುರ್ಲಭ. ಅದೂ ಕರ್ಮಭೂಮಿಯಾದ ಭಾರತದಲ್ಲಿ ಹುಟ್ಟಿ ಮಾಡುವ ಸಾಧನೆಗೆ ಪರಮಾತ್ಮನ ಮೆಚ್ಚುಗೆ ಹೆಚ್ಚು.. ಶ್ರೀಮದಾಚಾರ್ಯರ ಸಂಸ್ಕೃತ ಗ್ರಂಥಗಳ ತತ್ವದ ಸಾರವನ್ನು ಸಜ್ಜನರಿಗೆ ನೀಡಲೆಂದೇ ಹಿರಿಯ ದಾಸರೆಲ್ಲರೂ, ಯತಿಗಳೂ ಪ್ರಾಕೃತ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿರುವರು..
ಸ್ವಯಂ ನಾರದರೆ ಬಂದು ಈ ಹರಿನಾಮದ ಬೀಜವನ್ನು ಬಿತ್ತಿ ಹೋದರೆ ನಾವು ಆ ಮರದ ಫಲದ ರುಚಿಯನ್ನು ಸವಿಯುತ್ತಿದ್ದೇವೆ..
ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವು ಎಂಬ ನಮ್ಮ ಶ್ರೀಮತ್ಪುರಂದರದಾಸಾರ್ಯರ ಮಾತಿನಂತೆ, ತ್ರೇತಾಯುಗ, ದ್ವಾಪರಯುಗಗಳಲ್ಲಿ ವರ್ಷಗಳ ಪರ್ಯಂತ ಮಾಡಿದ ತಪಸ್ಸಿನ ಫಲ ಒಂದು ಹರಿನಾಮವನ್ನು ಭಕ್ತಿಯಿಂದ ಹಾಡುವುದರಿಂದ ನಮಗೆ ಲಭ್ಯವಾಗುವುದು ಸರಿ..
ಈ ನಮ್ಮ ಹರಿದಾಸ ಸಾಹಿತ್ಯಕ್ಕೆ ಆಧಾರವೇ ದ್ವೈತದರ್ಶನ. ಶ್ರೀಮದಾಚಾರ್ಯರ ಗ್ರಂಥಗಳೆಲ್ಲಾ ಸಂಸ್ಕೃತದಲ್ಲಿವೆ.. ಅವರು ರಚಿಸಿದ ಹನ್ನೆರಡು ಅಧ್ಯಾಯಗಳುಳ್ಳ ದ್ವಾದಶ ಸ್ತೋತ್ರ ವೆಂಬ ಉತ್ತಮವಾದ ಪ್ರಗಾಥ ಕಾವ್ಯ. ಪ್ರತೀ ಸ್ತೋತ್ರಗಳ ಕೊನೆಯಲ್ಲಿ ಆನಂದತೀರ್ಥರೆಂಬ ಅಂಕಿತವಿದೆ..
ಶ್ರೀಮದಾಚಾರ್ಯರ ಈ ಎಲ್ಲ ತತ್ವಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಲೆಂದೇ ಕನ್ನಡದಲ್ಲಿ ಕೃತಿ ರಚನೆ ಮಾಡಿದವರು ಮೊದಲಿಗೆ
ಶ್ರೀನರಹರಿ ತೀರ್ಥರು. ನಂತರದಲಿ 60 ಜನ ಆದ್ಯರು. ನಂತರದಲಿ ಮುಂದೆವರಿಸಿ , ಈ ಕೃತಿಗಳು ಭಜನಾ ರೂಪದಲ್ಲಿ ಹಾಡುವುದನ್ನು ಪ್ರಾರಂಭ ಮಾಡಿದವರು
ಶ್ರೀಶ್ರೀಪಾದರಾಜರು..
ಇವರ ಹಾದಿಯಲ್ಲೇ ನಡೆದ ಶ್ರೀಪಾದರಾಜರ ಶಿಷ್ಯರಾದ ಶ್ರೀಚಂದ್ರಿಕಾಚಾರ್ಯರು ವ್ಯಾಸಕೂಟ - ದಾಸಕೂಟವನ್ನು ಸ್ಥಾಪಿಸಿ ದಾಸ ಸಾಹಿತ್ಯದ ಪ್ರಾಮುಖ್ಯತೆಯನ್ನು ಹೆಚ್ಚಿಸಿದವರಾಗಿದ್ದಾರೆ.. ಶ್ರೀಕೃಷ್ಣ ಅಂಕಿತದಿಂದ ಪರಮೋತ್ತಮ ಕೃತಿಗಳು ರಚನೆ ಮಾಡಿ ಕೃಷ್ಣನ ದರ್ಶನವನ್ನೂ ಪಡೆದಿದ್ದಾರೆ.. ತಮ್ಮ ವಿದ್ಯಾ ಗುರುಗಳು ಪೂಜೆಗೆ ಸಿದ್ಧತೆ ಮಾಡು ಎಂದು ಸ್ನಾನಕ್ಕೆ ಹೊರಟಾಗ ಆಗಿನವರೆಗೂ ತೆರೆಯಲು ಅಸಾಧ್ಯವಾದ ಸಂಪುಷ್ಟವನ್ನು ತೆರೆದು ಅದರಲ್ಲಿನ ಕೃಷ್ಣನನ್ನು ನೋಡಿ ಪರವಶರಾಗಿ ಸಾಲಿಗ್ರಾಮಗಳಲ್ಲೇ ತಾಳಗಳಾಗಿ ಮಾಡಿ ತಟ್ಟುತ್ತ ಭಜನೆ ಮಾಡ್ತಿದ್ದಾಗ ಕೃಷ್ಣನೂ ಕುಣಿಯಲಾರಂಭಿಸಿದಾ.. ಹಾಗೆ ಪರವಶರಾಗಿ ಹಾಡುವುದನ್ನು ಕೃಷ್ಣ ಕುಣಿಯುತ್ತಿರುವುದನ್ನು ನೋಡಿದ ಶ್ರೀಶ್ರೀಪಾದರಾಜರು ಆಶ್ಚರ್ಯಗೊಂಡಿದ್ದಾರೆ.. ಆಗ ಕೃಷ್ಣ ಎಡಗಾಲಿನಮೇಲೆ ನಿಂತುಬಿಟ್ಟ.. (ಈ ವಿಗ್ರಹವನ್ನು ಇಂದಿಗೂ ವ್ಯಾಸರಾಜ ಮಠದಲ್ಲಿ ಕಾಣಬಹುದು, ಇದು ನಡೆದ ಜಾಗ, ಮುಳಬಾಗಿಲು) ಹೀಗೆ ಗಾಯನಕ್ಕೆ ಒಲಿಯುವ ಹರಿ ಎನ್ನುವುದು ಪ್ರಹ್ಲಾದರಾಜರೇ ಹುಟ್ಟಿಬಂದು ತೋರಿಸಿದ್ದಾರೆ....
ಶ್ರೀ ಸ್ವಾದಿ ಪುರಾಧೀಶರೂ, ಹಯವದನೋಪಾಸಕರಾದ ರಾಜರು ಸಂಸ್ಕೃತ ಗ್ರಂಥಗಳ ಜೊತೆಗೆ , ಪ್ರಾಕೃತ ಕನ್ನಡದಲ್ಲಿಯೂ ಕೃತಿ ರಚನೆ ಮಾಡಿದವರಾಗಿದ್ದಾರೆ. ಅಲ್ಲದೆ ತುಳು ಭಾಷೆಯಲ್ಲಿ ದಶಾವತಾರದ ಪದರಚನೆ ಮಾಡಿದ್ದೂ, ಐದು ಭಾಷೆಯ ಪದವೊಂದನ್ನು ರಚನೆ ಮಾಡಿದ್ದು ರಾಜರೇ ಆಗಿದ್ದಾರೆ.. ಹೀಗಾಗಿ ವೈಷ್ಣವ ಸಂಪ್ರದಾಯಕ್ಕೆ ಭಾಷಾ ಭೇಧವಿಲ್ಲ ಎನ್ನುವದೂ ತೋರಿದ ರಾಜರಿಗೆ ನಮಸ್ಕಾರಗಳು...
ನಂತರದಲಿ ಚಂದ್ರಿಕಾಚಾರ್ಯರ ಶಿಷ್ಯರಾಗಿ ಬಂದ ನಮ್ಮ ನವಕೋಟಿ ನಾರಾಯಣರಾದ , ನಾರದಾವತಾರಿಗಳಾದ ಶ್ರೀಪುರಂದರದಾಸಾರ್ಯರು ಈ ದಾಸ ಸಾಹಿತ್ಯದ ವೈಶಿಷ್ಟ್ಯಗಳನ್ನು ಅತ್ಯುತ್ತಮ ಸ್ಥಾನಕ್ಕೆ ತಂದು ನಿಲ್ಲಿಸಿದ್ದವರಾದರು...
4,25 ,000 ಸಾವಿರ ಪದ, ಪದ್ಯ, ಸುಳಾದಿಗಳನ್ನು ರಚನೆ ಮಾಡಿ ನಮಗೆ ನೀಡಿದ್ದಾರೆ.. ಇವರ ಪ್ರತೀ ಕೃತಿಯೂ ಪ್ರಮೇಯ ಗರ್ಭಿತವೂ ಹೌದು. ಅಲ್ಲದೇ ಇವರು ಕರ್ನಾಟಕ ಸಂಗೀತದ ಪ್ರವರ್ತಕರಾಗಿದ್ದು. ಕರ್ನಾಟಕ ಸಂಗೀತದ
ಪಿತಾಮಹರಾಗಿದ್ದಾರೆ..
ಇಂದಿಗೂ ನಾವು ಇವರು ತೋರಿದ ಹಾದಿಯಲ್ಲಿ ನಡೆಯುತ್ತಿದ್ದೇವೆ ಅನ್ನೋದು ನಮ್ಮ ಜನ್ಮಜನ್ಮಾಂತರದ ಪುಣ್ಯ..
ನಂತರದಲಿ ಚಂದ್ರಿಕಾಚಾರ್ಯರ ಶಿಷ್ಯರಾದ ನಾಯಕರೂ, ಯಮಾಂಶ ಸಂಭೂತರೂ ಆದ ಶ್ರೀಕನಕದಾಸಾರ್ಯರು ಮುಂಡಿಗೆ, ತತ್ವಪದಗಳು ರಚನೆ ಮಾಡಿ ದಾಸ ಸಾಹಿತ್ಯವನ್ನು ಯಾವ ಕುಲದವರಾದರೂ ಆರಾಧಿಸಿ ಗಾಯನ ಮಾಡಬಹುದೆಂದು ತೋರಿದ ಮಹಾನುಭಾವರಾಗಿದ್ದಾರೆ.. ಇವರ ಕೇಶವನಾಮದ ಕೃತಿ ನಮ್ಮ ದಿನನಿತ್ಯ ಪಾರಾಯಣದ ಕೃತಿಯಾಗಿದೆ...
ನಂತರದಲಿ ಬಂದ ಮಹಿಪತಿರಾಯರು ಮರಾಠಿಯಲ್ಲಿಯೂ ದಾಸರ ಪದ ರಚನೆ ಮಾಡಿದ್ದಾರೆ..
ಬಾಟಾ ಪಕಡೋ ಸೀಧಾ ಇತ್ಯಾದಿ ಮರಾಠಿ ಪದಗಳು ಪರಮಾತ್ಮನ ತತ್ವಗಳನ್ನು ತಿಳಿಸಿ ಹೇಳುವವೇ ಆಗಿವೆ..
ಶ್ರೀರಾಘವೇಂದ್ರ ಗುರುಸಾರ್ವಭೌಮರು ಇಂದು ಎನಗೆ ಗೋವಿಂದ ಎಂದು ಕೃಷ್ಣನನ್ನು ಸ್ತುತಿ ಮಾಡಿದ್ದೂ ಗೊತ್ತಿರುವ ವಿಷಯವೇ..
ವೆಂಕಪ್ಪನನ್ನು ಒಲಿಸಿಕೊಂಡ ಪ್ರಸನ್ನವೇಂಕಟ ದಾಸರು ದಶಮಸ್ಕಂದ ಭಾಗವತವನ್ನು ಕನ್ನಡದಲ್ಲಿ ರಚನೆ ಮಾಡಿದವರಾಗಿದ್ದಾರೆ..
ಇದಾದನಂತರ ಹರಿದಾಸ ಸಾಹಿತ್ಯದ ವಿಪ್ಲವ ಎರಡನೇ ಘಟ್ಟ ಪ್ರಾರಂಭವಾಗುವುದು
ಶ್ರೀವಿಜಯದಾಸಾರ್ಯರಿಂದ ಎಂದೇ ಹೇಳಬಹುದು..
ಶ್ರೀ ಪುರಂದರದಾಸಾರ್ಯರ ಮಗ ಮಧ್ವಪತಿವಿಠಲರೇ , ವಿಜಯದಾಸಾರ್ಯರಾಗಿ ಜನಿಸಿಬಂದು, ನಾರದರಿಂದ ಅಂಕಿತೋಪದೇಶವನ್ನು ಪಡೆದವರಾಗಿ ಉತ್ತಮೋತ್ತಮ ಪದ ಪದ್ಯ ಸುಳಾದಿಗಳು ರಚನೆ ಮಾಡಿ ನೀಡಿದ್ದಾರೆ.. ಸುಳಾದಿ ದಾಸರೆಂದೇ ಸ್ತುತ್ಯರಾದ ಶ್ರೀವಿಜಯದಾಸಾರ್ಯರ ಪ್ರತೀ ಸುಳಾದಿ ನಮ್ಮ ಜೀವನವನ್ನು ಪರಮಾತ್ಮನ ಪದಗಳಲ್ಲಿ ನಿಲ್ಲಿಸುವುದು ಎನ್ನುವ ಮಾತು ಪರಮಸತ್ಯ...
ಹೀಗೆ ಮುಂದುವರಿಸಿ
ಶ್ರೀವಿಜಯದಾಸಾರ್ಯರ ಶಿಷ್ಯರು ಗಣೇಶಾಂಜರಾದ ಶ್ರೀಗೋಪಾಲದಾಸಾರ್ಯರು,
ಶ್ರೀಮೋಹನದಾಸಾರ್ಯರು
ಶ್ರೀಜಗನ್ನಾಥ ದಾಸಾರ್ಯರು, ಶ್ರೀವ್ಯಾಸತತ್ವಜ್ಞರು,
ಶ್ರೀಪ್ರಾಣೇಶದಾಸಾರ್ಯರು , ಶ್ರೀವೇಣುಗೋಪಾಲವಿಠಲರು ಹೀಗೆ ಶ್ರೀಮದಾಚಾರ್ಯರ ತತ್ವಗಳನ್ನು ಸಜ್ಜನರಿಗೆ ಪಾರಾಯಣಕ್ಕೆ ಅನುಕೂಲವಾಗುವಂತೆ ರಚನೆ ಮಾಡಿ ನೀಡಿದ್ದಾರೆ..
ಶ್ರೀ ಜಗನ್ನಾಥ ದಾಸಾರ್ಯರ ಮೇರುಕೃತಿ ಹರಿಕಥಾಮೃತಸಾರ ಶಾಸ್ತ್ರದ ಸಾರಭೂತವಾಗಿದ್ದು ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಗ್ರಂಥವಾಗಿದೆ. ಇವರ ಫಲವಿದು ಬಾಳ್ದುದಕೆ, ತತ್ವಸುವ್ವಾಲಿ ಸಹಾ ಸಾಧನೆ ಮೆಟ್ಟಿಲುಗಳನ್ನು ಹತ್ತುವ ಹಾದಿಯಾಗಿದೆ..
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪರಮ ಪವಿತ್ರವಾದ ಶ್ರೀಹರಿವಾಯುಸ್ತುತಿ ಯನ್ನು ಶ್ರೀ ಪ್ರಾಣೇಶವಿಠಲರು ಕನ್ನಡದಲ್ಲಿ ರಚನೆಮಾಡಿ ಪಾರಾಯಣಕ್ಕೆ ಅನುಕೂಲ ಮಾಡಿದ್ದಾರೆ..
ಶ್ರೀ ವಿದ್ಯಾಪ್ರಸನ್ನತೀರ್ಥರು ಶ್ರೀ ಮಧ್ವವಿಜಯದ ಸಾರವನ್ನು ಕನ್ನಡ ಕೃತಿಯ ರೂಪದಲ್ಲಿ ರಚಿಸಿದವರಾಗಿದ್ದಾರೆ...
ಇವರ ಹಾದಿಯಲ್ಲಿ ಇವತ್ತಿಗೂ ದಾಸ ಸಾಹಿತ್ಯದ ಝರಿ ಹರಿಯುತ್ತಲೇಯಿದೆ..
ಇಂದಿಗೂ ನಾವು ಇವರೆಲ್ಲರ ಭಿಕ್ಷೆಯಿಂದಲೇ ಬದುಕಿದ್ದೆವೆ...
ಈ ದಾಸ ಸಾಹಿತ್ಯದ ಕೃತಿಗಳು ನೋಡಿದಾಗ ,
ವಿವಿಧ ಪ್ರಕಾರಗಳಲ್ಲಿ ರಚಿತವಾಗಿವೆ...
ಉದಾಹರಣೆಗೆ
ಕೀರ್ತನೆ
ಉಗಾಭೋಗ
ಸಾಂಗತ್ಯ
ಸುಳಾದಿ
ತ್ರಿಪದಿ, ಷಟ್ಪದಿ ,( ಭಾಮಿನಿ ಷಟ್ಪದಿ )
ವೃತ್ತನಾಮ
ಮುಂಡಿಗೆ
ಇತ್ಯಾದಿಗಳಲ್ಲಿ ರಚಿತವಾಗಿವೆ..
ಇವುಗಳಲ್ಲಿ ಸಂದೇಶ, ತತ್ವಪದಗಳು, ವೈರಾಗ್ಯ ಪದಗಳು, ಪರಮಾತ್ಮನ ಸ್ತುತಿಯ ಪದಗಳು, ದಶಾವತಾರದ ವರ್ಣನೆ
ಹೀಗೆ ವಿಧವಿಧವಾಗಿ ರಚಿತವಾಗಿದ್ದರೂ ಎಲ್ಲದರ ಸೂಕ್ಷ್ಮ ಅಂಶವೆಂದರೆ
ಹರಿ ಸ್ಮರಣೆ ಮಾಡೋ ನಿರಂತರ
ಪರಗತಿಗೆ ಇದು ನಿರ್ಧಾರ ನೋಡೋ
ಎನ್ನುವುದರ ಸಾರಾಂಶವೇ ಆಗಿದೆ..
ಹೀಗಾಗಿ ದೇವತೆಗಳೆಲ್ಲರೂ ಹುಟ್ಟಿ ಬಂದು ನಮ್ಮಸಾಧನೆಯ ಅನುಕೂಲಕ್ಕಾಗಿಯೇ ಮಾಡಿಕೊಟ್ಟ ದಾಸ ಸಾಹಿತ್ಯದ ಹಿರಿಮೆ ಬರೆಯಲು ಪದಗಳು ಸಾಲುವುದಿಲ್ಲ ...
ಅವರ ಪಥದಲ್ಲಿ ನಡೆದು, ಅವರ ಪದಗಳು ಹಾಡುವುದು ಮಾತ್ರ ಜೀವನದ ಸಾರ್ಥಕ್ಯ ಎನ್ನುವುದೇ ನಮ್ಮ ಗುರಿ..
ಹಾಡಿದರೆ ದಾಸರಪದ ಹಾಡಿ
ಇಲ್ಲವಾದರೆ ಉಸಿರುಬಿಡಿ
ಈ ನಾಣ್ಣುಡಿ ನಮ್ಮ ನರನಾಡಿಗಳಲ್ಲಿ ಜೀರ್ಣವಾಗಬೇಕೆಂದು ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀ ವೆಂಕಟೇಶನ ಪದಗಳಲ್ಲಿ ಸಮರ್ಪಣೆ ಮಾಡುತ್ತಾ...
ಜೈ ವಿಜಯರಾಯ
Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
end
ದಾಸ ಸಾಹಿತ್ಯದ ವ್ಯಾಪ್ತಿ ಅತ್ಯಂತ ವಿಸ್ತಾರವಾದುದು. ಶ್ರೀ ಪುರಂದರದಾಸರೊಬ್ಬರೇ 475000 ಪದ - ಪದ್ಯ - ಸುಳಾದಿ - ಉಗಾಭೋಗಗಳನ್ನು ರಚಿಸಿದ್ದಾರೆ.
ಈ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪೀಠಸ್ಥ ಯತಿಗಳೂ ಇದ್ದಾರೆ. ಹರಿದಾಸರೆಲ್ಲರೂ ಮಾಧ್ವ ಸಂಪ್ರದಾಯಕ್ಕೆ ಸೇರಿದವರು.
ಈ ಹರಿದಾಸ ಸಾಹಿತ್ಯದಲ್ಲಿ ವೇದ - ಉಪನಿಷತ್ತುಗಳಲ್ಲಿ ಉಕ್ತವಾದ ಪರಬ್ರಹ್ಮ ಮತ್ತು ಜಗತ್ತನ್ನು ಕುರಿತಾದ ವಿಷಯ; ಹರಿಭಕ್ತಿಯನ್ನು ತಿಳಿಸುವ ಪುರಾಣ ಕಥೆಗಳೂ; ಲೋಕ ವ್ಯವಹಾರದ ನೀತಿ ನಿಯಮಗಳೂ ಅಡಕವಾಗಿವೆ.
ವಿಸ್ತಾರ ಕಾಲದ ಹರಿದಾಸರು ಶಾಸ್ತ್ರ ಸಂಪನ್ನತೆಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿದರು. ಸಂಪ್ರದಾಯ ಆಚರಣೆಗೆ ಒಟ್ಟು ಕೊಟ್ಟರು. ಈ ಸಾಹಿತ್ಯ ಉಗಮ ಬೆಳವಣಿಗೆಯನ್ನು ಈ ರೀತಿ ಹೇಳುತ್ತಾರೆ.
" ಕನ್ನಡ ನಾಡಿನಲ್ಲಿ 600 ವರ್ಷಗಳ ಹಿಂದೆ ಸಣ್ಣದೊಂದು ತೊರೆಯಾಗಿ ಹರಿಯ ತೊಡಗಿದ ಹರಿದಾಸ ಪಂಥ ಮುಂದೆ ಮಹಾ ನದಿಯಾಯಿತು. ಅದರಿಂದ ಇಲ್ಲಿನ ನೆಲವೆಲ್ಲಾ ಫಲವತ್ತಾಯಿತು. ಕಾಲ ಕ್ರಮದಲ್ಲಿ ನದಿಯು ಸೀಳಿ ಸೀಳಾಗಿ ಒಡೆದು ನಾಡಿನ ಸಂಸ್ಕೃತಿ ಸಾಗರದಲ್ಲಿ ಸೇರಿತು. 475 ವರ್ಷಗಳ ಹಿಂದೆ ಶ್ರೀ ಪುರಂದರದಾಸರ ಕಾಲದಲ್ಲಿ ಇದು ಪ್ರವಾಹವಾಗಿಯೇ ಹರಿದಿತ್ತು. 15 - 16 ನೇ ಶತಮಾನದಲ್ಲಿ ಅದರ ಓಟವೂ, ವಿಸ್ತಾರವೂ ಹಿಗ್ಗಿತು. ಅನಂತರ ನದಿಯ ರಭಸವು ಕಡಿಮೆಯಾದರೂ, ಬರಗಾಲದಲ್ಲಿ ಬತ್ತದೆ ನೆಲವನ್ನು ಬಗೆದರೆ ಹೊರ ಬರುವ ಝರಿಯಂತೆ ಅಲ್ಲಲ್ಲಿ ಆಗಾಗ ಅಷ್ಟಷ್ಟು ಉಳಿದೇ ಬಂದಿತು ".
ಜನ ಬಳಕೆಯ ಭಾಷೆಯನ್ನು ಕಾವ್ಯದ ಮತ್ತು ತತ್ತ್ವ ದರ್ಶನದ ಉನ್ನತ ವಿಚಾರಗಳನ್ನು ಹೇಳಲಿಕ್ಕೆ ಬಳಸಿರುವುದನ್ನು ಕಾಣುತ್ತೇವೆ. ಕನ್ನಡ ಭಾಷೆಯನ್ನು ಅನಾವರಣ ಮಾಡಿದೆ. ಕನ್ನಡವನ್ನು ಮೈಲಿಗೆ ಮಾತೆಂದು ತೆಗಳದೇ ಈ ಭಾಷೆಯಲ್ಲಿಯೇ ಪರಮಾತ್ಮನನ್ನು ಕೀರ್ತಿಸಿದರು. ಲೋಕಕ್ಕೆ ಉಪದೇಶ ಮಾತಿನಲ್ಲಿ ಹರಿದಾಸರ ಕನ್ನಡ ಭಾಷಾ ಪ್ರೇಮದೊಂದಿಗೆ ಅದನ್ನೇ ಬಳಸುವ ಅನಿವಾರ್ಯತೆಯನ್ನು ಕಾಣಬಹುದು.
ಹರಿದಾಸರ ಪರಿಶ್ರಮದಿಂದ " ಕನ್ನಡವು ಸಂಗೀತ ಭಾಷೆಯಾಯಿತು - ತಂಬೂರಿ ಪ್ರತಿಭೆಯ ವಿಕಾಸಕ್ಕೆ ಎಡೆಯಾಯಿತು ".
ವಿಸ್ತಾರ ಕಾಲದ ಹರಿದಾಸ ಸಾಹಿತ್ಯವು " ಮಧ್ವ ಸಿದ್ಧಾಂತದ ಗಹನ ತತ್ತ್ವಗಳನ್ನೂ, ಸೂಕ್ಷ್ಮಾತಿಸೂಕ್ಷ್ಮ ಪ್ರಮೇಯಗಳನ್ನೂ ತಿಳಿಗನ್ನಡದಲ್ಲಿ ಮೂಡಿಸುವ ಪ್ರಯತ್ನ " ಮಾಡಿತು.
****
Listen and/or learn 500+ Suladi through this link.
listen learn suladi ಸುಳಾದಿ ಕಲಿಯಲು ಕೇಳಲು ಲಿಂಕ್ಸ್