ರಾಗ : ಸೌರಾಷ್ಟ್ರ ತಾಳ : ತ್ರಿವಿಡಿ
ಮಾನಿನಿಯೆ ಈ ಮಹಾತ್ಮ ದಿವಿಜರರು
ಆವರೊ ತಿಳಿಯಬೇಕೆಲವೆ ।। ಪಲ್ಲವಿ ।।
ಜ್ಞಾನಿ ವೆಂಕಟ ನರಸಿಂಹಾರ್ಯರ
ಸೂನುವೊ ಉದಿತ ।
ಸುಭಾನುವೊ ಜನಿತ ಕೃಶಾನುವೊ
ನತಸುರ ಧೇನುವೊ ।
ಜಾನಕೀ ಜಾನೀಯನ
ಪದಕಮಲ ।
ಧೇನಿಪ ದಿನದಿನ
ದೀನ ದಯಾಳೊ ।। ಅ ಪ ।।
ಹಿಂದೆ ಮಾಡಿದ ಸುಕೃತ ಫಲವೇ ।
ಬಂದೊದಗಿ ಮುನಿವರನ ಪಾದಾ ।
ದ್ವಂದ್ವಗಳ ಸೇವೆಯು
ದೊರೆವದಿದು ಛಂದವೋ ಪರಮಾ ।।
ನಂದವೋ ಸುಖಕಾಸ್ಪಂದವೋ
ಜ್ಞಾನದ ಕಂದವೋ ।
ವಂದಿಪೆ ಜನರಿಗೆ
ನಂದವ ನೀಡುತಾ ।
ಅಂದದಿಂದೆನ್ನನು
ಪೊಂದಿಹರೆನಗೇ ।। ಚರಣ ।।
ನಿತ್ಯ ನೈಮಿಥ್ಯಗಳು ದಿನದಿನ ।
ಸತ್ಯವಾಕ್ ಸತ್ಕ್ರಿಯೆಗಳೆಲ್ಲವು ।
ಹೊತ್ತು ಹೊತ್ತಿಗೆ ಹರಿಯ
ಪೂಜಿಪ ಭಕ್ತರೋ ಇವರತಿ ।।
ಶಕ್ತರೋ ಶಾಸ್ತ್ರಾಸಕ್ತರೋ
ಜೀವನ್ಮುಕ್ತರೋ ।
ಅತ್ತಿತ್ತೋಡದೆ ತತ್ತಳವಿಲ್ಲದೆ
ಸತ್ವ ಶ್ರೀಹರಿಗಳು
ಬಿತ್ತರಿಸುವರೋ ।। ಚರಣ ।।
ಹರಿ ಪರಾತ್ಪರು ಸಿರಿ ವಿರಿಂಚರು ।
ಪರಮ ಪ್ರಿಯರೆಂದು ।
ತರತಮ ಪರಿಪರಿ ಬಗೆಯಿಂದ
ಪೇಳುವ ಧೀರರೋ ।।
ಜ್ಞಾನ ಗಂಭೀರರೋ
ದಾನದಿ ಶೂರರೋ ।
ವಾದಿ ಶೈಲಕ ಹೀರರೋ ।
ವೀರ ಶ್ರೀ ವರದ -
ಗೋಪಾಲವಿಠಲನ ।
ಮೂರುತಿ ಮನದಲ್ಲಿ
ತೋರುವರಿವರು ।। ಚರಣ ।।
****