Showing posts with label ನವಪಂಚ ಪಂಚ vijaya vittala ankita suladi ಪಂಚಕೋಶ ಸುಳಾದಿ1 NAVAPANCHA PANCHA PANCHAKOSHA SULADI1. Show all posts
Showing posts with label ನವಪಂಚ ಪಂಚ vijaya vittala ankita suladi ಪಂಚಕೋಶ ಸುಳಾದಿ1 NAVAPANCHA PANCHA PANCHAKOSHA SULADI1. Show all posts

Wednesday, 10 February 2021

ನವಪಂಚ ಪಂಚ vijaya vittala ankita suladi ಪಂಚಕೋಶ ಸುಳಾದಿ1 NAVAPANCHA PANCHA PANCHAKOSHA SULADI1

Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ  ಪಂಚಕೋಶಗಳ ವಿವರ ಸುಳಾದಿ - 1 


 ರಾಗ ಹಿಂದೋಳ 


 ಧ್ರುವತಾಳ 


ನವಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣ 

ಅವಯವಂಗಳ ಸಹಿತ ಇಪ್ಪ ಗಾತ್ರ 

ನವಕೋಟಿ ರೋಮದಿಂದ ಯುಕ್ತವಾಗಿಪ್ಪದು 

ನವಕೋಟಿ ದೇವತೆಗಳು ಅಭಿಮಾನ್ಯರು 

ಇವರು ಶತಸ್ಥರೊಳು ಪಂಚಪ್ರಾಣರ ತರುವಾಯ 

ಭವದೂರರಾಗಿ ಸರ್ವದಲ್ಲಿಪ್ಪರು

ನವದ್ವಿ ದ್ವಾರಗಳಿಂದ ಶೋಭಿಸುತಿದೆ ನೋಡೆ 

ತ್ರಿವಿಧ ಗುಣಗಳುಂಟು ಒಂದು ಕ್ಷಣಕೆ 

ನವದ್ವಿ ಯಿಂದ್ರಿಂಗಳು ಅಲ್ಲಿಗಲ್ಲಿಗೆ ಇಪ್ಪ 

ವಿವರವನ್ನೆ ತಿಳಿವದು ಇವು ತೈಜಸದಿ 

ದಿವಿಜೋತ್ತಮರು ತತ್ತದ್ವ್ಯಾಪಾರವನ್ನೆ ಬಿಡದೆ 

ತವಕದಿಂದಲಿ ಮಾಳ್ಪರು ಹರಿ ಪ್ರೇರಣೆ 

ಸುವಿರುದ್ದವಾದರು ಇವರಿಗೆ ದೋಷವಿಲ್ಲ 

ಕವಿಗಳು ಕಾಣೋ ಸದಾ ಸಾಂಶರು 

ಭುವನದ ಹೊರಗೆ ಇವರು ತಮ ತಮ್ಮ ತತ್ವದಲ್ಲಿ 

ಅವಿಕಾರವಾಗಿಪ್ಪರು ಅಣುಮಹಾದಲ್ಲಿ 

ಅವಕಾಶಪ್ರದರಾಗಿ ಒಬ್ಬೊಬ್ಬರೊಳಗೆ 

ಕವಲಾ ಬುದ್ಧಿಯಿಲ್ಲದೆ ಪೊಂದಿಪ್ಪರು 

ಇವು ಪೇಳಿದವು ಉಳಿದ ವಾಗ್ವಾದಿ ತತ್ವಸಂಖ್ಯ 

ಪವನನಾಧಾರದಿಂದ ಬೆಳಗುತಿವಕೊ 

ತ್ರಿವಿಷ್ಟಪ ರಂಗ ವೈಕಾರಿಕದಿಂದ ನಿರ್ಮಾಣ 

ಹವಣಿಸಿ ಇಪ್ಪನು ಹರಿ ಸ್ವತಂತ್ರ 

ಇವೆ ದೇಹದೊಳು ತಿಳಿ ಮಿಶ್ರಭಾವದಿ ಉಂಟು 

ಶ್ರವಣಾದಿಗಳ ವ್ಯಾಪಾರ ಉತ್ತಮವಾಗೆ 

ಸವೆಯಾದ ಪದವಿಗೆ ಸಾಧನವೈಯ್ಯಾ 

ಜವನಗೇರಿಗೆ ಸಲ್ಲ ಪುಣ್ಯವೆ ಮಾಡುತ್ತ 

ದಿವಸ ದಿವಸ ಕೀರ್ತಿವಂತನಾಹ 

ದಿವಿಜ ವೈರಿಗಳು ವಿಪರೀತ ಕರ್ಮ ಮಾಡಿಸೆ 

ಅವಿರಕ್ತನಾಗುವ ಮತಿದೂರನು 

ಅವಕ್ರೀಯನಾಗಿ ಕೆಟ್ಟು ಪೋಗುವ ಶ್ರೀ -

ಧವನ ನಾಮಾಮೃತ ಮರೆದು ಬಿಡುವಾ 

ಇವಕ್ಕೆಲ್ಲಾ ಶ್ರೀಹರಿ ಮುಖ್ಯಕರ್ತನು ತಾನೆ 

ಅವರವರ ಸಂಸಾರದಂತೆ ನಡಿಸಿ 

ಪವಮಾನ ಶಿವ ಪಾರ್ವತಿ ಇಂದ್ರಾರ್ಕ ಮಿಕ್ಕಾ -

ದವರ ಭವದೆಡಿಗೆ ಜೀವನವ ಒಯ್ಯದಂತೆ 

ನವ ಭಕುತಿಯಿಂದ ಸಾಧನವ ಮಾಡುವಂತೆ ಕೇ -

ಶವನು ಸುರರಿಗೆ ನೇಮಿಸಿ ದೈತ್ಯರಿಗೆ 

ಅವಕೃಪೆಯಿಂದ ಶಿಕ್ಷಿಸಿ ಸಜ್ಜನರ ಮಾ -

ರ್ಗವನ್ನು ಪೋಗದಂತೆ ಮಾಡುವನೂ

ಪವನಂತರ್ಯಾಮಿ ನಮ್ಮ ವಿಜಯವಿಟ್ಠಲರೇಯ 

ರವಿಯಂತೆ ಪೊಳೆವನು ಮಧ್ಯನಾಡಿಯಲ್ಲಿ ॥ 1 ॥ 


 ಮಟ್ಟತಾಳ 


ಅನ್ನಮಯ ಪ್ರಾಣಮಯ ಮನೋಮಯ ವಿ -

ಜ್ಞಾನಮಯ ಆನಂದಮಯವೊ 

ಇನಿತು ಪಂಚಕೋಶ ತನುವಿನೊಳಗೆ ಉಂಟು 

ಘನವಾಗಿ ತಿಳಿದು ಗುಣಿಸು ನಿರಂತರದಿ 

ಚಿನುಮಯ ಮೂರುತಿ ವಿಜಯವಿಟ್ಠಲರೇಯ 

ಇನಿತು ಪೆಸರಿನಿಂದ ಕರೆಸಿಕೊಂಬುವನು ಬಿಡದೆ ॥ 2 ॥ 


 ತ್ರಿವಿಡಿತಾಳ 


ಭೂಮಿ ಉದಕದಿಂದ ಅನ್ನಮಯವಾಗಿಪ್ಪುದು 

ಆ ಮಾರುತ ಭೂತ ಅನಲಾಕಾಶದಲ್ಲಿ ಪ್ರಾ -

ಣಾಮಯ ಮತ್ತೆ ಅಹಂಕಾರದಿಂದ ಮ -

ನೋಮಯ ಮಹದಿಂದ ವಿಜ್ಞಾನಮಯವಯ್ಯ 

ಕಾಮಜನನಿ ತತ್ವದಿಂದ ಆನಂದಮಯವೊ 

ನಾಮವೆ ಯಿದು ಸಿದ್ಧ ವಂದೊಂದು ಬೆಚ್ಚಿಕೆ 

ಶ್ರೀಮಾಯಾರಮಣನು ಯಿದೆ ಯಿದೆ ಪೆಸರಿನಲಿ 

ಪ್ರೇಮದಿಂದಲಿ ಕರಿಸಿಕೊಳುತಲಿಪ್ಪ 

ನಾಮಂಗಳುಂಟು ಮತ್ತೆ ಅನಿರುದ್ಧಾದಿ ಐದು 

ಈ ಮಹಾ ಪಂಚಕೋಶದಲ್ಲಿ ವಾಸ 

ಭೂಮಿ ಶನೇಶ್ಚರ ವರುಣ ಅನ್ನಮಯದಲ್ಲಿ 

ಆ ಮರೀಚಿ ವಾಯು ಅಗ್ನಿ ಗಣಪ ಪ್ರಾ -

ಣಾಮಯದಲ್ಲಿ ಇಂದ್ರ ರುದ್ರ ಮನೊಮಯದಲ್ಲಿ 

ತಾಮರಸ ಪೀಠ ವಿಜ್ಞಾನಮಯದಲ್ಲಿ 

ಸೋಮ ಸೋದರಿ ಲಕುಮಿ ಆನಂದಮಯದಲ್ಲಿ 

ಕೋಮಲ ನಡತಿಯಲ್ಲಿ ವಾಸವಕ್ಕು 

ಈ ಮೂರೆರಡು ಜಡದ್ರವ್ಯದಲ್ಲಿ ಇವರು 

ಸ್ವಾಮಿಯ ಪೂಜಿಪರು ಅನಿರುದ್ಧಾದಿಗಳ 

ಈ ಮಾತು ಲಾಲಿಸಿ ತಿಳಕೊಂಡ ಜನರಿಗೆ 

ಯಾಮ ಯಾಮಕೆ ಬುದ್ಧಿ ನಿರ್ಮಲಿನಾ

ತಾಮಸಜನವೈರಿ  ವಿಜಯವಿಟ್ಠಲರೇಯಾ 

ನೇಮಿಸಿ ಈ ಪರಿ ವಾಲಗ ಕೊಳುತಿಪ್ಪ ॥ 3 ॥ 


 ಅಟ್ಟತಾಳ 


ಧರೆಯೊಳು ಮಾನವ ಉದಕಾನ್ನ ಉದರದ -

ಲ್ಲೆರದರೆ ಅದರಲ್ಲಿ ಚತುರವಿಂಶತಿ ತತ್ವ 

ಇರುತಿಪ್ಪವು ಕೇಳಿ ಮಿಶ್ರ ಭಾವದಿಂದ 

ಪರಮಾಣು ಅತ್ಯಣು ಒಂದನಂತವಾಗಿ 

ಪರಿ ಪರಿ ಅಂಶಿ ಅಂಶಗಳಿಂದ ತತ್ವೇ -

ಶರ ಸಹಿತವಾಗಿ ಉಪಚಯ ಕೊಡುತಲಿ 

ಸ್ಮರಿಸಿ ಮಹತತ್ವ ವಿಜ್ಞಾನಮಯ ಈಶಮಾಯದಿಂದ 

ಧರಣಿಯೊಳಗೆ ವ್ಯಾಪಿಸಿ ಕೊಂಡಿಪ್ಪವು ನೋಡಿ 

ಅರಿದವ ಬಲು ಧನ್ಯ ತತ್ವ ಭಾಗಂಗಳು 

ಅರಹುವೆ ಪೃಥ್ವಿ ಗಂಧ ಘ್ರಾಣ ಉಪಸ್ಥ 

ತರುವಾಯ ಜಲ ರಸ ಜಿಂಹ್ವೆ ವಾಯು ನಾ -

ಲ್ಕೆರಡು (8) ತತ್ವಂಗಳು ಅನ್ನಮಯಕೋಶಕ್ಕೆ 

ನಿರುತ ಉಪಚಯ ಏಕೀ ಭೂತವಿದೆ 

ಸರಿಯೆನ್ನು ತೇಜಸ್ಸು ರೂಪ ಚಕ್ಷುಷ ಪಾದ 

ಚರಿಸುವ ಮಾರುತ ಸ್ಪರಿಶ ತ್ವಕು ಪಾಣಿ 

ಮಿರಗುವ ಗಗನ ಶಬ್ದ ಶ್ರೋತ್ರ ವಾಕು ಹ -

ನ್ನೆರಡು (12) ತತ್ವಂಗಳು ಪ್ರಾಣಮಯದಲ್ಲಿ 

ಇರುತಿಪ್ಪವು ಕೇಳಿ ಉಪಚಯವಾಗುತ್ತ 

ಮರಳೆ ಮನಸು ಅಹಂಕಾರ (2) ಮನೋಮಯ 

ಬೆರಸಿಕೊಂಡಿಪ್ಪುದು ಉಪಚಯ ಕೊಡುತಲಿ 

ಸ್ಮರಿಸಿ ಮಹತ್ತತ್ವ (1) ವಿಜ್ಞಾನಮಯದಲ್ಲಿ 

ಭರಿತವಾಗಿಪ್ಪದು ದಿನಪ್ರತಿ ಉಪಚಯ 

ಪರಮ ಶೋಭಿತವಾದ ಅವ್ಯಕ್ತತತ್ವ (1) ನಿಂ -

ದಿರದೆ ಆನಂದಮಯದಲ್ಲಿ ಸೇರೋದು 

ಸ್ಥಿರವಕ್ಕು ಈ ಪರಿ ತತ್ವಭಾಗದಲ್ಲಿ ವಿ -

ವರಗಳ ತಿಳಿವದು ಸ್ಥೂಲ ಸೂಕ್ಷ್ಮವೆಂದು 

ಪುರುಷೋತ್ತಮ ನಮ್ಮ ವಿಜಯವಿಟ್ಠಲರೇಯ 

ಕರುಣಾಕರನಾಗಿ ಸರ್ವರೊಳಗೆ ಇಪ್ಪಾ ॥ 4 ॥ 


 ಆದಿತಾಳ 


ತತು ತತು ತತ್ವ ಭಾಗ ತತು ತತು ಮಯದಲ್ಲಿ 

ಸತತವಾಗಿ ಪೋಗಿ ವಿಲೀನವಾಗುವವು 

ಗತಿ ತಪ್ಪದಂತೆ ನಿತ್ಯ ಗಾತ್ರದೊಳಗೀ ಪರಿ 

ಮಿತವುಂಟು ಕಾರಣ ಕಾರ್ಯ ತತ್ವಗಳೆಂದು 

ಅತಿಶಯವಾದ ಸ್ಥೂಲ ವಿಟ ಮೂತ್ರ ಮಜ್ಜಾಸ್ಥಿಯು 

ಭೌತಿಕದಲ್ಲಿ ಇದ್ದು ಕೋಶದಲ್ಲಿ 

ಅತಿ ಸೂಕ್ಷ್ಮ ಕಾರ್ಯ ತತ್ವ ನಿಕರ ಅನಿರುದ್ಧದಲ್ಲಿ 

ಹಿತವಾಗಿಪ್ಪದು ಅಲ್ಲಿಂದಾಚೇಲಿ ಲಿಂಗದಲ್ಲಿ 

ಚತುರವಿಂಶತಿ ತತ್ವ ಕಾರಣ ರೂಪವಾಗಿ 

ಪ್ರತಿಪ್ರತಿ ದಿವಸಕ್ಕೆ ಕೊಡುತಿಪ್ಪವು ಭ -

ರಿತವಾದ ಕಾಲಕ್ಕು ಹೆಚ್ಚು ಕುಂದುಗಳಿಲ್ಲ 

ತತುವೇಶರು ಇಲ್ಲ ಮುಖ್ಯಾಭಿಮಾನಿ ಲಕುಮಿ 

ಶತಾನಂದ ವಾಯು ಸರಸ್ವತಿ ಭಾರತಿಗಳುಂಟು 

ತೃತೀಯ ಪರಿಚ್ಛೇದವಾಗಿದ್ದ ಲಿಂಗ ದೇಹ 

ಸಿತದಲ್ಲಿ ಅವ್ಯಕ್ತ ಮಹ ಅಹಂಕಾರ ಮನಸು ರ -

ಕುತ ವರ್ಣದಲ್ಲಿ ಹತ್ತು ಇಂದ್ರಿಯಂಗಳು ಉ -

ನ್ನತ ಕಪ್ಪಿನಲಿ ಪಂಚತನ್ಮಾತ್ರಿಗಳು ಭೂತ -

ತತಿಗಳುಂಟು ಇವು ಪ್ರಾಚುರ್ಯದಲಿ ನೋಡಿ 

ಮತಿವಂತರು ಕೇಳಿ ಇವು ಅನಾದಿಯಿಂದ 

ಜಿತವಾಗಿ ಹತ್ತಿಕೊಂಡಿಪ್ಪವು ಲಿಂಗದೊಡನೆ 

ಇತರ ಕಾರ್ಯಭಾವಕ್ಕೆ ಇವೆ ಮುಖ್ಯ ಇವೆ ಮುಖ್ಯ 

ಖತಿಗೊಳದಿರಿ ಜನರು ಸಿದ್ಧಾಂತವೆನ್ನಿ ಮುಂದೆ 

ತತುವ ವಿಭಾಗವ ಮಾಡಿ ವ್ಯಾನನೆಂಬೊ ಮಾ -

ರುತ ಸೇರಿಸುತಿಪ್ಪನಲ್ಲಿಗಲ್ಲಿಗೆ ವೈದು 

ಪತಿತಪಾವನ ನಮ್ಮ ವಿಜಯವಿಟ್ಠಲರೇಯ ಸ -

ದ್ಗತಿಯನೆ ಕೊಡುವನು ಇದನು ತಿಳಿದವಂಗೆ ॥ 5 ॥ 


 ಜತೆ 


ಪಂಚಕೋಶಗಳಲ್ಲಿ ಇಂಥಾ ಮಹಿಮೆಯುಂಟು ವಿ -

ರಂಚಿ ಜನಕ ವಿಜಯವಿಟ್ಠಲನೆ ನಿಯಾಮಕಾ ॥

*******