Showing posts with label ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ srirama. Show all posts
Showing posts with label ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ srirama. Show all posts

Wednesday, 1 September 2021

ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ ankita srirama

ಲಿಂಗದಹಳ್ಳಿ ಶ್ರೀ ರಾಮದಾಸರ ಅದ್ಭುತವಾದ ಕೃತಿ

Ankita - srirama


ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ


ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು 

ಸುಮ್ಮನೆ ಕೂತಳು ಗುಮ್ಮವ್ವ...


ಆರುಮೂರು ಮರ ರೊಟ್ಟೆಗಳು ಒಂದೆ

ಸಾರಿಗೆ ಮುದ್ದೆ ಮಾಡಿ ನುಂಗಿದಳು

ದಾರಿಗೆ ತೋರದಂತೆ ಎಂಟುಭಾಂಡೆ ಅನ್ನ

ವಾರೆಲಿ ಕೂತು ಸೂರೆ ಮಾಡಿದಳು....


ಎತ್ತಿ ತುಪ್ಪದ ಮೂರು ಡಬ್ಬಿಗಳು

ಕುತ್ತಿಗೆ ಬೀಳಹಾಗೆ ಕುಡಿದಳು

ಹತ್ತ್ಹೆಡದ್ಹೋಳಿಗೆ ಪತ್ತೆ ಇಲ್ಲದೆ ತಿಂದು

ಮೆತ್ತಗೆ ಸುತ್ತಿಕೊಂಡು ಮಲಗಿದಳು....


ಒಡಲನಿಲ್ಲದೆ ಕಾಯುವಳು ಇವಳು

ಇಡೀ ಬ್ರಹ್ಮಾಂಡವ ನುಂಗಿದಳು

ಪಿಡಿದೊಕ್ಕುಡಿತೆಲಿ ಕಡಲೇಳನು

ಕುಡಿದೊಡೆಯ ಶ್ರೀರಾಮನ ಕೂಡಿದಳು....

***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಅರ್ಥಾನುಸಂಧಾನ ಶ್ರೀಹರಿವಾಯುಗುರುಗಳ ಅನುಗ್ರಹದಿಂದ ಮಾತ್ರ

👇🏽👇🏽👇🏽👇🏽👇🏽👇🏽👇🏽👇🏽

ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ - ಅವ್ವ ಅಂದರೆ ತಾಯಿ ಅಂತ ಅರ್ಥ.  ನಮಗೆ ಅನೇಕ ದೇಹಗಳು ಬರೋಕೆ ಕಾರಣ ಜೀವಕ್ಕೆ ಅಂಟಿಕೊಂಡಿರುವಂತಹಾ ಲಿಂಗದೇಹ . ಜಡವಾದ ಲಿಂಗದೇಹ ಹಾಗೂ ಒಳಗೆ ಚೇತನವಾದ ಜೀವ ಇವರಿಬ್ಬರೂ ಕೂಡಿದ ಜಡಚೇತನ ಸಮ್ಮಿಶ್ರವಾದ ಪಿಂಡಕ್ಕೆ ಜೀವರು ಎಂದು ಕರೆಯುವರು. ನಮಗೆ ಅನೇಕ ದೇಹಗಳು ಬರೋಕೆ ಈ ಲಿಂಗದೇಹವೇ ಕಾರಣ.  ಲಿಂಗದೇಹದ ವೈಶಿಷ್ಟ್ಯತೆ ಏನಂದರೆ ಆವರಣ ಶಕ್ತಿ.  ಪರಮಾತ್ಮನ ಜ್ಞಾನಕ್ಕೆ ಆವರಣವಾಗಿದ್ದರಿಂದ ಈ ಜೀವ ತನ್ನ ಅನೇಕ ಕರ್ಮಗಳ ಅಸಾರವಾಗಿ ಅನೇಕ ದೇಹಗಳಲ್ಲಿ ಬರಲು ಕಾರಣವಾಗಿದೆ. ಹೀಗಾಗಿ ಇಲ್ಲಿ ಶ್ರೀ  ದಾಸಾರ್ಯರು ಈ ಲಿಂಗದೇಹದಿಂದ ಕೂಡಿದ ಜೀವಕ್ಕೇ ನಮ್ಮ ಅವ್ವ ಈಕಿ ಅಂದಿದ್ದಾರೆ , 


ಕೂಲ್ಯಕಿ ಅಂದ್ರೆ ಕೆಲಸ ಮಾಡುವವಳು ಅರ್ಥಾತ್ ಕೂಲಿ ಮಾಡುವವಳು ಅಂತ ಅರ್ಥ . ಈ ಜೀವವೂ ಸಹಾ ಭಗವದಾಜ್ಞಾನುಸಾರವಾಗಿಯೇ,  ಆತನ ಪ್ರೇರಣೆಯಿಂದಲೇ ಅನೇಕ ಕರ್ಮಗಳನ್ನು ಆಚರಿಸುವದರಿಂದ ಶ್ರೀ  ದಾಸಾರ್ಯರು ಈ ಲಿಂಗದೇಹದಿಂದ ಆವರ್ತವಾದ ಜೀವಕ್ಕೆ ಕೂಲ್ಯಕಿ ನಮ್ಮವ್ವ ಅಂದಿದ್ದಾರೆ...


ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳು ಗುಮ್ಮವ್ವ -


ಇಮ್ಮನ ಸಜ್ಜಿಗೆ ಅಂದರೆ ರವೆ ಸಕ್ಕರೆ ಹಾಕಿ ಮಾಡಿದಂತಹಾ ಪಾಯಸ.  ರವೆಯ ರೂಪದಲ್ಲಿ ಇರುವ ಅಸಂಖ್ಯಾತ ಕರ್ಮಗಳು ಹಾಗೂ ಸಕ್ಕರೆಯ ರೂಪದಲ್ಲಿರುವ ಇಚ್ಛೆ ಅಂತ ಅರ್ಥ .  ಈ ಜೀವನು ತಾನು ಅನೇಕ ಆಸೆ ಆಕಾಂಕ್ಷೆಗಳಿಗೆ ಒಳಗಾಗಿ ಮಾಡಿದ ಕರ್ಮಗಳೆನ್ನುವಂತಹಾ ಸಜ್ಜಿಗೆ ಯನ್ನು ತಿಂದು ತಿಂದು ಎಷ್ಟು ಸುಖಿಸಿದೆಯಲ್ವಾ ಇದರಲ್ಲಿ.  ಅಂತಹಾ ಮತ್ತೆ ಮತ್ತೆ ಮಾಡಬಾರದ ಕರ್ಮಗಳನ್ನು ಮಾಡಿ ಮಾಡಿ ಸುಮ್ಮನೆ ಅಂತ ಪ್ರಳಯಕಾಲದಲ್ಲಿ ಪರಮಾತ್ಮನ ಉದರದಲ್ಲಿ ಕೂತಿರುವದನ್ನೇ ಸುಮ್ಮನೆ ಕೂತಳು ಗುಮ್ಮವ್ವ ಅಂದಿದ್ದಾರೆ ಶ್ರೀ ದಾಸಾರ್ಯರು...


 ಇದನ್ನೇ ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಶ್ರೀಮದಾಚಾರ್ಯರು  :-


 ದೃಷ್ಟ್ವಾ ಸ ಚೇತನ ಗಣಾನ್ ಜಠರೇ ಶಯಾನನ್ ಆನಂದಮಾತ್ರವಪುಷಃ ಸೃತಿವಿಪ್ರಮುಕ್ತಾನ್ /

ಧ್ಯಾನಂ ಗತಾನ್ ಸೃತಿ ಗತಾಂಶ್ಚ ಸುಷುಪ್ತಿಸಂಸ್ಥಾನ್ ಬ್ರಹ್ಮಾದಿಕಾನ್ ಕಲಿಪರಾನ್ ಮನುಜಾಂಸ್ತಥೈಕ್ಷತ್ //- ಎಂದು ತಿಳಿಸಿದ್ದಾರೆ.. ಅಂದರೆ - 


ಶ್ರೀಹರಿಯು ತನ್ನ ಉದರದಲ್ಲಿ ಜೀವ ಸಮೂಹಗಳನ್ನು ಈಕ್ಷಿಸಿದಾ.  ಸಂಸಾರದಿಂದ ವಿಶೇಷವಾಗಿ ಮುಕ್ತರಾದ, ಆನಂದಮಾತ್ರವನ್ನೇ ಸ್ವರೂಪರಾದ, ಉತ್ತಮ ಜೀವರು, ಧ್ಯಾನಾವಸ್ಥೆಯಲ್ಲಿ ಇರುವದನ್ನೂ, ಸಂಸಾರದಲ್ಲಿರುವ ರುದ್ರಾದಿ ಉತ್ತಮ ಜೀವರು. ಮತ್ತೆ ಕಲಿಯವರೆಗಿನ ಅಧಮಜೀವರು,  ಮತ್ತು ಮಧ್ಯಮ ಜೀವರು ಎಲ್ಲರೂ ಸಹಾ ಸುಷುಪ್ತಾವಸ್ಥೆಯಲ್ಲಿ ಇರುವದನ್ನೂ ಈಕ್ಷಿಸಿದಾ..  ಜೊತೆಗೆ ಮಧ್ಯಮ, ಅಧಮ, ಮುಕ್ತರನ್ನೂ ಕೂಡ ಅವರು ಹೇಗೆ ಹೇಗೆ ಇರುವರೋ ಹಾಗೇ ಈಕ್ಷಿಸಿದಾ  ಎನ್ನುವಂತಹಾ ಶ್ರೀಮದಾಚಾರ್ಯರ ನಿರ್ಣಯದ ಉಕ್ತಿಯನ್ನೇ ಶ್ರೀ  ದಾಸಾರ್ಯರು ಇಲ್ಲಿ

 ಇಮ್ಮನ ಸಜ್ಜಿಗೆ ಒಮ್ಮೆಗೇ  ತಿಂದು ಸುಮ್ಮನೆ ಕೂತಳು ಗುಮ್ಮವ್ವ. ಎಂದು ನಿರೂಪಿಸಿದ್ದಾರೆ ...


ಗುಮ್ಮ ಅನ್ನೋ ಪದಕ್ಕೆ ದೆವ್ವ, ಬೂಚಿ ಅಂತ ಅರ್ಥದಲ್ಲಿ ತಗೊಂಡಾಗ, 


ದೆವ್ವಕ್ಕೆ ಸ್ವತಂತ್ರ ದೇಹ ಅನ್ನೋದು ಇರೋದಿಲ್ಲ, ಅದು ಮತ್ತೊಬ್ಬರ ದೇಹದಲ್ಲೇ‌ ಹೇಗೆ ಹೋಗ್ತದನೋ ಹಾಗೆಯೇ ಎಳ್ಳಷ್ಟೂ ಸ್ವತಂತ್ರ್ಯತೆ ಇಲ್ಲದಂತಹಾ ಈ ಜೀವ ಪರಮಾತ್ಮನ ದೇಹದಲ್ಲಿ ಅಂದರೆ ಪ್ರಳಯಕಾಲದಲ್ಲಿ ಆತನ ಉದರದಲ್ಲಿ ಹೋಗ್ತಾನೆ ಅಂತ ಅರ್ಥ ..


ಆರು ಮೂರು ರೊಟ್ಟೆಗಳು ಒಂದೇ ಸಾರಿಗೆ ಮುದ್ದೆ ಮಾಡಿ ನುಂಗಿದಳು , ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು.... 


 ಆರು + ಮೂರು  = ಒಂಭತ್ತು , ಈ ಮನುಷ್ಯನಿಗೆ ಒಂಭತ್ತು ದ್ವಾರಗಳಿವೆ.  ಅವನ್ನೇ ಇಲ್ಲಿ  ರೊಟ್ಟಿಗಳು ಅಂದಿದ್ದಾರೆ , ಯಾಕೆಂದರೆ ರೊಟ್ಟಿಗೆ ಪಲ್ಯ ,ರಸ, ಚಟ್ನಿ , ಮಜ್ಜಿಗೆ ಹುಳಿ, ಕೂಟು, ಭರ್ತ,  ಈ ರೀತಿ ನಾನಾವಿಧವಾದ ಸಾದನೆಗಳು ಬಾಡಿಸಿಕೊಂಡು ತಿನ್ನಲು ಬೇಕಾಗುತ್ತವೆ.


ಅದೇ ರೀತಿ ಈ ನವದ್ವಾರಗಳು ನಾನಾವಿಧವಾದ ರಂಜನೀಯ, ವಿಲಾಸವಂತವಾದ, ಸುಖಪೂರ್ಣವಾದ, ಸುಖವನ್ನು ನೀಡುವಂತಹಾ, ಭೋಗಗಳನ್ನು  ಸದಾ ಬೇಕು ಬೇಕು ಅಂತಾನೇ ಇರ್ತವೆ.. 


ಸಹದೇಹೇನ ಮಾನೇನ ವರ್ಧಮಾನೇನ ಮನ್ಯುನಾ/ ಅಹಂ ಮಮೇತ್ಯಸದ್ ಗ್ರಾಹಃ ಕರೋತಿರ್ಮತಿಮ್ //ತದರ್ಥಂ ಕುರುತೇಕರ್ಮ ಯದ್ಬದ್ಧೋಯಾತಿ ಸಂಸೃತಿಮ್ / ಯದ್ಯಸದ್ಭಿಃ ಪಥಿಪುನಃ ಶಿಶ್ನೋದರ ಕೃತೋದ್ಯಮೈಃ / ಅಸ್ಥಿತೋ ರಮತೇ ಜಂತುಃ ತಮೋವಿಶಪೂರ್ವವತ್ /ಸತ್ಯಂ ಶೌಚಂ ದಯಾ ಮೌನಂ ಬುದ್ಧಿಃ ಶ್ರೀರ್ಹೀಯಣಃ ಕ್ಷಮಾಃ/ ಶಮೋದಮೋ ಭಗಶ್ಚೇತಿ ಯತ್ಸಂಗಾದ್ಯಾತಿ ಸಂಕ್ಷಯಮ್ / ನ ತಧಾಸ್ಯಭವೇನ್ಮೋಹಃ ಬಂಧಶ್ಚಾನ್ಯಪ್ರಸಂಗತಃ / ಯೋಷಿತ್ ಸಂಗಾತ್ ಯಥಾಪುಂಸೋಃ//


ಎಂದು ಶ್ರೀಮದ್ಭಾಗವತದಲ್ಲಿ ತಿಳಿಸಿದಂತೆ ನಮ್ಮ ನವದ್ವಾರಗಳು ಏನೇನೋ ಬೇಕು ಅಂತಲೇ ಪ್ರತಿನಿತ್ಯ ಬಯಸುತ್ತಲೇ ಇರುತ್ತವೆ..

ಹೊಟ್ಟೆಯ ಹಸಿವು, ಇಂದ್ರಿಗಳ ಬಯಕೆ ನಿರಂತರ ಹೆಚ್ಚುತ್ತಲೇ ಹೋಗುತ್ತಿರ್ತವೆ ಹೊರತು ಇಂದ್ರಿಯಗಳ ಬಯಕೆಗಳಂತೂ ಯಾವತ್ತೂ ಕಮ್ಮಿ ಆಗಲ್ಲ.  , ಅಷ್ಟ ಮದಗಳು (ಎಂಟು ಭಾಂಡೆ ಅನ್ನ) ತರಾ ಹೆಚ್ಚಾಗುತ್ತಾ  ನಮ್ಮ ಬದುಕಿನಿಂದ ಸತ್ಯ ಶುಚಿತನ, ಪಾವಿತ್ರ್ಯ , ದಯಾಗುಣ , ಮೌನವ್ರತ , ವಿವೇಕದಬುದ್ಧಿ , ಸಂಪತ್ತು, ಸಂಕೋಚ, ತಾಳ್ಮೆ, ಸಹನಶೀಲತೆ, ಸಂಯಮ, ಭಗವಂತನಲ್ಲಿ ವಿಶ್ವಾಸ, ದೇವರ ಭಯ, ಪಾಪದ ಅಂಜಿಕೆ, ಎಲ್ಲವೂ ಮಾಯವಾಗಿ, ಹೆಣ್ಣು ಹೊನ್ನು ಮಣ್ಣುಗಳ ಸಂಗದಿಂದ ಮುಂದೆ ದಾರಿಯೂ ಕಾಣದಂತೆ ಸೂರೆ ಮಾಡ್ಕೊಂಡು ಅರ್ಥಾತ್ ಪೂರ್ತಿ ಆಕರ್ಷಿಸಿದಂತೆ ಕೂತುಬಿಡ್ತೀವಿ ನಾವೆಲ್ಲ ಅಂತರ್ಥ.. ಶ್ರೀಮದ್ಭಾಗವತದ ಈ ಅದ್ಭುತವಾದ ಸಂದೇಶವನ್ನೇ ಶ್ರೀ ದಾಸಾರ್ಯರು ಈ ನುಡಿಯ ಮುಖಾಂತರ  ತಿಳಿಸಿದ್ದಾರೆ ..


ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳಹಾಗೆ ಕುಡಿದಳು. ಹೆತ್ತ್ಹೆಡದ್ಹೋಳಿಗೆ ಪತ್ತೆ ಇಲ್ಲದೆ ತಿಂದು ಮೆತ್ತಗೆ ಸುತ್ತಿಕೊಂಡು ಮಲಗಿದಳು ...


ಪರಮಾತ್ಮನು ಈ ಜೀವನಿಗೆ ಸಾಧನೆಗಾಗಿಯೇ ಅಂತ  ಮನುಷ್ಯ ಜನ್ಮ ಕರುಣಿಸಿ  ಸತಿ -ಸಂತಾನ - ಸಂಪತ್ತು ಗಳನ್ನು ಧರ್ಮ-ಅರ್ಥ-ಕಾಮಗಳು ಎಂಬ ಮೂರು ತುಪ್ಪದ ಡಬ್ಬಿಗಳನ್ನು ಕೊಟ್ಟು ಸಾಧನದ ಧರ್ಮಕರ್ಮದ ಸುಖವನ್ನು ತುಪ್ಪದಂತೆ ಸುಖಿಸಲಿ ಅದರಿಂದ ಜ್ಞಾನ ಭಕ್ತಿ ವೈರಾಗ್ಯಗಳನ್ನು ಸಂಪಾದಿಸಿ ತನ್ನ ಪ್ರಸನ್ನತೆಯನ್ನು ಪಡೆಯಲಿ  ಅಂತ ಹೇಳಿ ಕೊಟ್ಟಿದ್ದಾನೆ.



 ಅಪತ್ಯಂ ಧರ್ಮಕರ್ಯಾಣಿ ಶುಶ್ರೂಷಾ ರತಿರುತ್ತಮಾ/ ದಾರಾಧೀನಸ್ತಥಾಸ್ವರ್ಗಃ ಪಿತೃಣಾಮಾತ್ಮನಶ್ಚಹ/ ಭಾರ್ಯಾಮೂಲಂ ಸುಖಸ್ಯಚ / ಭಾರ್ಯಾಮೂಲಂ ಗೃಹಸ್ಥಸ್ಯ ಭಾರ್ಯಾಮೂಲಂ ಸುಖಸ್ಯಚ / ಭಾರ್ಯಾಧರ್ಮ ಫಲಾಯೈವ ಭಾರ್ಯಾಸಂತಾನ ವೃದ್ಧಯೇ // 


ಎಂಬ ಶ್ರೀಮದ್ಭಭಾಗವತದ ಉಕ್ತಿಯಂತೆ ಕಾಮಕ್ಕಾಗಿ ಪಡೆದ ಮಡದಿಯಿಂದಲೇ ಬೇಕಾದಷ್ಟು ಧರ್ಮವನ್ನು ಸಂಪಾದಿಸಬಹುದಾಗಿತ್ತು . ಸತ್ಕರ್ಮಗಳನ್ನು ಅನುಷ್ಠಾನ ಮಾಡಬಹುದಾಗಿತ್ತು . ಧಾರ್ಮಿಕರಾದ ಶ್ರೇಷ್ಠ ಮಕ್ಕಳನ್ನ ಪಡೆಯೋದು,, ಅತಿಥಿ ಸತ್ಕಾರ, ದೇವಪೂಜಾದಿ ಸಕಲ ಧರ್ಮಕಾರ್ಯಗಳೂ, ಗುರು ಹಿರಿಯರ ಸೇವೆ ಸುಖ ಇವೆಲ್ಲವೂ ಮಡದಿಯ ಆಧೀನ.. ಗ್ರಹಸ್ಥಾಶ್ರಮದ ಎಲ್ಲ ಧರ್ಮಕಾರ್ಯಗಳಿಗೆ ಹೆಂಡತಿಯೇ ಆಧಾರ.  ಸುಖಕ್ಕೆ ಆಕೆಯೇ ಕಾರಣಳು . ಧರ್ಮದ ಎಲ್ಲ ಫಲ ಪಡೆಯಲು ಹೆಂಡತಿ ಬೇಕೇ ಬೇಕು.  ಸಂತಾನದ ಅಭಿವೃದ್ಧಿಗೂ ಆಕೆಯೇ ಬೇಕು.. ಆದರೇ ಈ ಮನುಷ್ಯ ಮಡದಿ ಎಂಬ ತುಪ್ಪವನ್ನು ಕೇವಲ ಲೌಕಿಕ ಸುಖಕ್ಕಾಗಿಯೇ ಕಂಠಪೂರ್ತಿ ಕುಡಿದುಬಿಡುತ್ತಿದ್ದಾನೆ . 

   

ಮಕ್ಕಳಿಂದ ಧರ್ಮಸಾಧನೆ ಮಾಡಿಸಿ, ಸಾಕಷ್ಟು ಪುಣ್ಯ ಸಂಪಾದಿಸಿಕೊಳ್ಳಬಹುದಿತ್ತು . ಆದರೇ, ಮಕ್ಕಳ‌ಮೇಲಿನ ಹುಚ್ಚು ವ್ಯಾಮೋಹದಿಂದ ನಾವೇ ಅವರನ್ನು ಅಧರ್ಮದ ಮಾರ್ಗದಲ್ಲಿ ತಳ್ಳುತ್ತಿದ್ದೇವೆ . ಮಕ್ಕಳ‌ಮೇಲಿನ‌ ಹುಚ್ಚು ವ್ಯಾಮೋಹವೇ ಧೃತರಾಷ್ಟ್ಟನನ್ನು ಅಧೋಗತಿಗೆ ತಳ್ಳಿಬಿಟ್ಟಿತು..  ಮಕ್ಕಳ‌ಮೇಲಿನ ಹುಚ್ಚು ವ್ಯಾಮೋಹದಿಂದ ನಮಗೆ ಪಾಪ, ಅಧರ್ಮ, ದೇವರ ನಿಗ್ರಹ ಸಿಗುತ್ತಿದೆ ಹೊರತಾಗಿ ಪರಮಾತ್ಮನ ಪ್ರಸನ್ನತೆ ಸಿಗ್ತಾನೇಯಿಲ್ಲ . ಅದಕ್ಕಾಗಿಯೇ ಕುಂತೀದೇವಿಯರೂ ಶ್ರೀಕೃಷ್ಣ ಪರಮಾತ್ಭನನ್ನು ಸ್ನೇಹಪಾಶಮಿಮಂ ಛಿಂದಿ ಪಾಂಡುಷು ವೃಷ್ಣಿಷು ತಥಾ//(ಶ್ರೀಮದ್ಭಾಗವತಮ್) ಎಂದು ಬೇಡಿಕೊಂಡಿದ್ದಾಳೆ . ಅಂದರೆ ನಾವು ಮಕ್ಕಳ ನಿಮಿತ್ತವಾಗಿ ಮಾಡುವ ಕರ್ತವ್ಯ ಮುಗಿದ ನಂತರ, ಆ ಮಕ್ಕಳ‌ಮೇಲಿನ ಸ್ನೇಹವು ಮೋಹವಾಗಿ ಪರಿವರ್ತಿತವಾಗುತ್ತದೆ.  ಆ ಮೋಹವೇ ವ್ಯಾಮೋಹವಾಗಿ ಪರಿಣಮಿಸುತ್ತದೆ. ಈ ವ್ಯಾಮೋಹ ಎನ್ನುವಂತದ್ದು ಸಾಧನೆಗೆ ಬಾಧಕವಾದದ್ದು ಈ ಮಕ್ಕಳ ಸ್ನೇಹವೆಂಬ ಪಾಶವನ್ನು ಕತ್ತರಿಸು ಕೃಷ್ಣಾ !! ಆಗ ಮಾತ್ರ  ನನ್ನ ಸ್ವತಂತ್ರ್ಯವಾದ ಸಾಧನವೂ ನಡೆಯುವದು  ಅಂತ  ಕುಂತೀದೇವಿರು ಶ್ರೀಕಷ್ಣ ಪರಮಾತ್ಮನನ್ನು ಪರಿಪರಿಯಿಂದ ಬೇಡಿಕೊಂಡಿದ್ದಾರೆ...

ಹೀಗಾಗಿ ಪರಮಾತ್ಮನು ನಮಗೆ ಧರ್ಮಸಾಧನೆಗೆ ಅಂತ ಕೊಟ್ಟಂತಹಾ ಸಂತಾನವೆಂಬ ತುಪ್ಪದ ಡಬ್ಬಿಯನ್ನು ವ್ಯಾಮೋಹಕ್ಕೆ ಒಳಗಾಗಿ ಕಂಠಪೂರ್ತಿ ಕುಡಿದು ಸಾಧನೆ ಎನ್ನುವದು ಲವಲೇಶವೂ ಮಾಡದೇ ಲೌಕಿಕ ಸುಖದಲ್ಲೇ ಒದ್ದಾಡ್ತಾ ಕೂತುಬಿಟ್ಟಿದ್ದೇವೆ..


 ಇನ್ನೂ...  ಪರಮಾತ್ಮ ಕರುಣಿಸಿದಂತಹಾ ಸಂಪತ್ತು ಎನ್ನುವ ತುಪ್ಪದಿಂದ ಸಾಕಷ್ಟು ಧರ್ಮಸಾಧನೆ ಮಾಡಿಕೊಳ್ಳಬಹುದಾಗಿತ್ತು .. 


ಧನಂ ಹಿ ಧರ್ಮೈಕ ಫಲಂ ಎನ್ನುವ ಉಕ್ತಿಯಂತೆ ಧನದ ಗುರಿ ಧರ್ಮವೇ ಆಗಬೇಕು, ಧನಕ್ಕೆ ಧರ್ಮವೇ ಫಲ  ಆದರೇ ಯಾರೂ ಸಹಾ ದೇವರು ಕೊಟ್ಟ ಈ ಧನವೆಂಬ ತುಪ್ಪದ ಡಬ್ಬಿಯಿಂದ ಸಾಧನ ಮಾಡಿಕೊಳ್ಳುವದೇ ಇಲ್ಲ . ಧನಸ್ಯ ಲಾಭಾತ್ ಅಧಿಕೋಹಿಲೋಭಃ ಎಂದು ಶ್ರೀಮದ್ವಾದಿರಾಜತೀರ್ಥ ಮಹಾಸ್ವಾಮಿಗಳು ಹೇಳಿದಂತೆ ದುಡ್ಡು ಬಂದಷ್ಟೂ ಲೋಭ ಅದರ ಕುರಿತು ಮೋಹ ಬೆಳೀತಾನೇ ಇರ್ತದೆ, ಅದರಿಂದ ಅಧರ್ಮ ಹೆಚ್ತಾನೇ ಹೋಗ್ತದೆ.  ಸಂಪತ್ತು ಬಂತು ಅಂದ್ರೇ ಅಹಂಕಾರ  ಆಲಸ್ಯ , ವ್ಯಸನಗಳು ಬೆಳೀತಾ ಹೋಗ್ತವೆ . ಇದರಿಂದ ಜೀವನ ಇನ್ನಷ್ಟು ಅಧರ್ಮದ ಕಡೆಗೆ ತಿರುಗ್ತಾ ಹೋಗ್ತದೆ . ಹಣ ಇದ್ದವರ ಪರಿಸ್ಥಿತಿ ಬಹಳ ದಯನೀಯ ಆಗಿರ್ತದೆ, ಹಗಲಿರುಳೂ ಸಹಾ ಅವರು ಕ್ಲೇಶದಲ್ಲಿಯೇ ಮುಳುಗಿರ್ತಾರೆ.  ಹಣ ಇದ್ದಷ್ಟು ಎಲ್ಲರ ಮೇಲೆ ಸಂಶಯ, ಎಲ್ಲರ ಮೇಲೆ ಅವಿಶ್ವಾಸ,  ಅಪನಂಬಿಕೆಗಳೇ ಜಾಸ್ತಿ ಆಗ್ತಾ ಹೋಗ್ತಾವೆ ಹೊರತು ನಮ್ಮ ಎನ್ನುವವರನ್ನೂ ಸಹ ನಂಬದೇ ಆಗಿಬಿಡ್ತಾನೆ ಮನುಷ್ಯ....

ಹಣವೇ ನಿನ್ನಯ ಗುಣವೇನು ಬಣ್ಣಿಸಲಿ ಎನ್ನುವ ಪದದಲ್ಲಿ ಎಷ್ಟು ಚಂದ ವಿವರಿಸಿದ್ದಾರೆ ನೋಡಲೂಬಹುದು...

ಇದನ್ನೇ.. 

 ಮರ್ತ್ಸಸ್ಯ ಕೃಚ್ಛೋಪನತೈರರ್ಥೈಃ ಕಾಮೈಃ ಕ್ರಿಯೇತಕಿಮ್ / ಪಶ್ಯಾಮಿ ಧನಿನಾಂ ಕ್ಲೇಶಂ ಲುಬ್ಧಾನಾಮಜಿತಾತ್ಮನಾಮ್ / ಭಯಾದಲಬ್ಧ ನಿದ್ರಾಣಾಂ ಸರ್ವತೋ ಅಭಿವಿಶಂಕಿನಾಮ್ / ರಾಜತಃ ಚೋರತಃ ಶತ್ರೋಃ ಸ್ವಜನಾತ್ ಪಶುಪಕ್ಷಿತಃ/|ಅರ್ಥಿಭ್ಯಃ ಕಾಲತಃ ಸ್ವಸ್ಮಾನ್ನಿತ್ಯಂ ಪ್ರಾಣಾರ್ಥವದ್ಭಯಮ್ /ಶೋಕ ಮೋಹ ಭಯ ಕ್ರೋಧ ರಾಗ ಕ್ಲೈಬ್ಯಶ್ರಮಾದಯಃ/ ಯನ್ಮೂಲಾಃ ಸುನೃಣಾಂ ಜಹ್ಯಾತ್ ಸ್ಪೃಹಾಂ ಪ್ರಾಣಾರ್ಥಯೋರ್ಬುಧಃ//

ಎನ್ನುವಂತಹಾ ಶ್ರೀಮದ್ಭಾಗವತದ ಮಾತಿನಂತೆ.. ಎಲ್ಲಿ ತನ್ನ ಹಣ ದೋಚುವರೋ ಎಂಬುವ ಭಯ, ಪಶುಪಕ್ಷಿಗಳಿಂದ ಭಯ, ದಾನ ಬೇಡಲು ಬರುವ ಅರ್ಥಿಗಳ ಹೆಚ್ಚಳ, ತನಗೆ ವಯಸ್ಸಾಗುತ್ತಾ ಬಂದಾಗ, ಆ ಮುಪ್ಪಿನಿಂದ, ಮರಣದಿಂದ ಇವನ್ನೆಲ್ಲಾ ಬಿಟ್ಟುಹೋಗ್ಬೇಕಲ್ಲವೇ? ಎನ್ನುವಂತಹಾ ಭಯ, ತನ್ನ ಬುದ್ಧಿಯೇ ಬದಲಾಗಿ ಏನೋ ಆವೇಶದಲ್ಲಿ ಇದ್ದದ್ದನ್ನೆಲ್ಲಾ ಕೊಟ್ಟುಬಿಟ್ರೆ ಹೇಗೆ ಎಂದು ತನ್ನಿಂದಲೇ ಭಯ. ಈ ಹಣಕ್ಕಾಗಿ ಜನ ತನ್ನ ಪ್ರಾಣವನ್ನೇ ತೆಗದುಬಿಡ್ತಾರೇನೋ ಎನ್ನುವಂತಹಾ ಭಯ, ಇರುವ ಹಣವನ್ನು ಧರ್ಮಸಾಧನೆಗೆ ಬಳಸಲಾರದೇ ಅನೇಕ ಭಯಗಳಲ್ಲೇ ಸಿಲುಕಿ ಕ್ಷಣಕ್ಷಣಕ್ಕೂ  ಒದ್ದಾಡ್ತಾ,, ದುಃಖ, ಭಯ, ಅಂಜಿಕೆ, ಮೋಹ, ಲೋಭ, ಆಪತ್ತು , ಸಿಟ್ಟು, ಹೇಡಿತನ, ಶ್ರಮ ಇವೆಲ್ಲಾ ಕ್ಲೇಶಗಳಿಗೆ ಒಳಗಾಗಿ ಧರ್ಮಸಂಪಾದನೆ ಅನ್ನೋದೇ ಶೂನ್ಯವಾಗಿ ಕೊನೆಗೊಮ್ಮೆ ಕೊನೇಯುಸಿರು ಎಳದುಬಿಡ್ತಾನೆ. ಎನ್ನುವಂತಹಾ ಶ್ರೀಮದ್ಭಾಗಾವತದ ದಿವ್ಯಸಂದೇಶವನ್ನು ಶ್ರೀ  ದಾಸಾರ್ಯರು ಈ ನುಡಿಯಮುಖಾಂತರ ಅದ್ಭುತವಾದ ರೀತಿಯಲ್ಲಿ ನಿರೂಪಿಸಿದ್ದಾರೆ ..

ಹೀಗಾಗಿ ಹಣವನ್ನು, ಪರಮಾತ್ಮನು ನೀಡಿದ ಮಡದಿ ಮಕ್ಕಳು ಎನ್ನುವ ಸಂಪತ್ತನ್ನೂ ಧರ್ಮ ಸಾಧನೆಗೆ,  ಹಣವನ್ನು ದಾನ ಧರ್ಮಕ್ಕೆ ಉಪಯೋಗಿಸಬೇಕೆನ್ನುವುದು ಸೂಕ್ಷ್ಮ..

ಒಡಲನಿಲ್ಲದೆ ಕಾಯುವಳು ಇವಳು , ಇಡೀ ಬ್ರಹ್ಮಾಂಡವ ನುಂಗಿದಳು , ಪಿಡಿದೊಕ್ಕುಡಿತೆಲಿ ಕಡಲೇಳನು ಕುಡಿದೊಡೆಯ ಶ್ರೀರಾಮನ ಕೂಡಿದಳು// 

ಯಾವ ಈ ದೇಹ ನಮ್ಮದಲ್ಲವೋ , ಅಂತಹಾ ದೇಹ ನಮ್ಮದು ಎಂದೇ ತಿಳಿದು, ಈ ದೇಹದ ಆಸೆ- ಆಕಾಂಕ್ಷೆಗಳನ್ನು ತೀರಿಸಿಕೊಳ್ಳುವುದಕ್ಕಾಗಿ ದಿನಗಳನ್ನು ಕಳಿತಾ, ಕಳಿತಾ ಎಷ್ಟು ಜನ್ಮಗಳು ಬಂದರೂ ಸಹಾ -  ಆ ಎಲ್ಲಾ ಜನ್ಮಗಳಲ್ಲೂ ಕೇವಲ ಐಹಿಕ ಸುಖಕ್ಕಾಗಿ ಇಡೀ ಬ್ರಹ್ಮಾಂಡದಲ್ಲಿರೋ ಸಕಲ ಸುಖಗಳನ್ನು ಅನುಭವಿಸದರೂ ಸಹಾ ನಿಜವಾದ ಸುಖವೆನ್ನುವಂತಹಾ ಪರಮಾತ್ಮನನ್ನು ಕಾಣಲಾರದೇ ಕೊನೆಗೆ ಮಹಾಪ್ರಳಯದಲ್ಲಿ ಏಳೂಸಾಗರಗಳ ಸಹಿತ ಸಕಲ ಜಗತ್ತನ್ನೂ ನುಂಗಿ ನೀರು ಕುಡಿಯುವ ಜಗದೊಡೆಯನಾದ ಆ ಶ್ರೀರಾಮನಾದ ಪರಮಾತ್ಮನ ಉದರದಲ್ಲಿ ಹೋಗಿ ಸೇರಿಕೊಂಡುಬಿಡುವ ಈ ಜೀವಕ್ಕೆ ದಾಸಾರ್ಯರು ಪ್ರೀತಿ ಅಂತಃಕರಣಗಳಿಂದ ಕಳಕಳಿಯಿಂದ ನಮ್ಮವ್ವ ಅಂತ ಸಂಭೋದನೆ ಮಾಡ್ತಾ, ಪರಮಾತ್ಮನು ನಮ್ಮನ್ನು ಈ ಭೂಮಿಗೆ ಕಳಿಸಿದ ಉದ್ದೇಶವನ್ನು ಚೆನ್ನಾಗಿ ಅರಿತುಕೊಂಡು, ಜ್ಞಾನವನ್ನು ಸಂಪಾದಿಸಿ ಮಾಹಾತ್ಮ್ಯಾಜ್ಞಾನಪೂರ್ವಕ ಸುದೃಢವಾದ ನಿರಂತರ ಪ್ರೇಮಪ್ರವಾಹರೂಪವಾದಂತಹಾ, ಸ್ನೇಹಯುಕ್ತವಾದ ಜೀವದಭಕ್ತಿಯನ್ನು ಆ ಪರಮಾತ್ಮನ ಪಾದಾರವಿಂದಗಳಲ್ಲಿ ಮಾಡುತ್ತಾ, ಆತನು ಅನುಗ್ರಹ  ಮಾಡಿದ ಈ ವೈಷ್ಣವ  ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲು  ಈ ಕೃತಿಯ ಮುಖಾಂತರ ಹೆಜ್ಜೆ ಹೆಜ್ಜೆಗೂ ಎಚ್ಚರಿಸುತ್ತಿದ್ದಾರೆ ಶ್ರೀರಾಮ ದಾಸಾರ್ಯರು

ಈ ಕೃತಿಗೆ ಪ್ರಮಾಣಪೂರ್ವಕವಾದ ಶ್ಲೋಕಗಳನ್ನ,  ಪದ್ಯಗಳನ್ನ ನೀಡಿದಂತಹಾ ಸಮೂಹದ ಶ್ರೀ ಜಯತೀರ್ಥ ಹಂಪಿಹೊಳಿ ಆಚಾರ್ಯರಿಗೆ ನನ್ನ ಅನಂತಾನಂತ ನಮಸ್ಕಾರಗಳು ತಿಳಿಸುತ್ತಾ...

ಈ ಕೃತಿಯ ಅರ್ಥಾನುಸಂಧಾನವನ್ನು 

ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಸೀತಾರಾಮರಲ್ಲಿ ಸಮರ್ಪಣೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ

***