Audio by Mrs. Nandini Sripad
ಶ್ರೀಗೋಪಾಲದಾಸಾರ್ಯ ವಿರಚಿತ ಶ್ರೀಹರಿ ಸ್ವತಂತ್ರ ಸುಳಾದಿ
(ಶ್ರೀಹರಿ ಸ್ವತಂತ್ರ ಕರ್ತ. ಆತನ ಪ್ರೇರಣೆ ಇಲ್ಲದೆ ಒಂದು ಹುಲ್ಲು ಕಡ್ಡಿಯಾದರೂ ಚಲಿಸುವುದಿಲ್ಲವೆಂಬ ಅನೇಕ ಶ್ರುತ್ಯರ್ಥ. ಜೀವರಿಗೆ ಯಾವ ಸ್ವತಂತ್ರವಿಲ್ಲ.)
ರಾಗ ವರಾಳಿ
ಧ್ರುವತಾಳ
ಸರ್ವಕರ್ತೃ ಶ್ರೀಹರಿ ಅಲ್ಲದಿನ್ನಿಲ್ಲವಿನ್ನು
ಸರ್ವ ಜಗತ್ತಿನಲ್ಲಿ ವ್ಯಾಪಿಸಿಹಾ
ಸರ್ವ ಜೀವರಿಗಿನ್ನು ಸಮನಾಗಿ ಇರುತಿಪ್ಪ
ಸರ್ವ ಪುಣ್ಯಪಾಪವು ಮಾಡಿಸುತ್ತ
ನಿರ್ವ್ಯಾಜದಿಂದಲೆ ನಿತ್ಯ ಕರ್ಮವ ಮಾಡಿ
ಸರ್ವ ಜೀವರಿಗಿನ್ನು ಉಣಿಸುವನು
ಸರ್ವ ದೋಷದೂರ ಸರಿಯು ಇಲ್ಲದ ವಸ್ತು
ಸರ್ವಜ್ಞ ಸಗುಣರಹಿತ ಸರ್ವ ಶಕ್ತಾ
ಸರ್ವ ಗುಣಪೂರ್ಣ ಸಚ್ಚಿದಾನಂದಾತ್ಮಕ
ಸರ್ವಾನಂದ ಪೂರ್ಣ ಸರ್ವೋತ್ತಮ
ಪೂರ್ವಿಕದೇವ ನಮ್ಮ ಗೋಪಾಲವಿಟ್ಠಲ
ಸರ್ವ ಜೀವರಲ್ಲಿ ಪೋಷಿಸುವಾ ॥ 1 ॥
ಮಟ್ಟತಾಳ
ವಿಷಯಂಗಳ ಸೃಜಿಸಿ ವಿಷಯದೊಳಗೆ ನಿಂತು
ವಿಷಯ ನಾಮಕನಾಗಿ ವಿಷಯ ಬಯಕೆ ವುಳ್ಳ
ವಿಷಯ ಜೀವರಿಗೆ ವಿಷಕೆ ಪ್ರೇರಣೆ ಮಾಡಿ
ವಿಷ ಅನುಭೋಗದ ವಿಷಯ ಮನಕೆ ತಂದು
ವಿಷಯ ಉಣಿಸಿ ದುರುವಿಷಯನು ತಾನಾಗಿ
ವಿಷರ ಸಂಬಂಧದ ವಿಷವು ವುಣಿಸಿ ದುಃಖ
ವಿಷಯ ಅಂಬುಧಿಯಲ್ಲೆ ವಿಷ ಎರಡೂ ಮಾಡುವ
ವಿಷಯ ಬಯಕೆ ಬಿಟ್ಟ ವಿಶೇಷ ಜೀವರಿಗೆ
ವಿಷಯ ಉಣಿಪ ಮುಖ್ಯ ವಿಷಯನು ತಾನಾಗಿ
ವಿಷಯ ಸಂಬಂಧದ ವಿಷವು ವುಣಿಸನು
ವಿಷಯ ರಹಿತ ಸರ್ವ ಗೋಪಾಲವಿಟ್ಠಲ
ವಿಷಯನಾಗುವ ತನ್ನ ವಿಷಯ ಕರಿಸುವಗೆ ॥ 2 ॥
ರೂಪಕತಾಳ
ಇಂದ್ರಿಯಗಳಲಿ ನಿಂತು ಇಂದ್ರಿಯ ಮಾನಿಗಳಿಗೆ
ಛಂದದಿ ಪ್ರೇರಿಸುವ ಒಂದೊಂದು ಕರ್ಮದಿ
ತಂದೀವ ತಜ್ಜ್ಯನ್ಯ ಫಲವನು ಅವರಿನ್ನು
ನಿಂದಿಹ ದೇಹದಿ ಉಳ್ಳ ಜೀವನಿಗೆ
ದ್ವಂದ್ವ ಕರ್ಮ ಅವರಿಂದಲೆ ಮಾಡಿಸಿ
ದ್ವಂದ್ವ ಫಲವನು ತಂದು ಈವಾ
ದ್ವಂದ್ವ ಜೀವರಗಳ ಗತಿಯು ಅರಿತು ಇನ್ನು
ಸಂದೇಹವಿಲ್ಲದೆ ಈ ಪರಿ ಕರ್ಮವು
ನಿಂದಿರದೆ ಮಾಡಿಸುವ ಮಾನಿಗಳಿಂದ
ಗಂಧ ಇವರಿಗೆ ಇಲ್ಲ ದೋಷ ಸಂಬಂಧದ
ಮಂದರಧರಗಂತು ಮೊದಲೆ ಇಲ್ಲ
ಸುಂದರವಿಗ್ರಹ ಗೋಪಾಲವಿಟ್ಠಲ
ಬಂಧಕ ಮೋಚಕ ಶಕ್ತನಯ್ಯಾ ॥ 3 ॥
ಝಂಪೆತಾಳ
ಹರಿಯ ಆಜ್ಞೆಯಿಂದ ಅಗ್ನಿ ತಾ ಜ್ವಲಿಸುತಿಹನು
ಹರಿಯ ಆಜ್ಞೆಯಿಂದ ತರಣಿ ತಾ ತಿರುಗುವನು
ಹರಿಯ ಆಜ್ಞೆಯದಿಂದ ಮರುತ ತಾ ಬೀಸುವನು
ಹರಿಯ ಆಜ್ಞೆಯದಿಂದ ಹರಿವವು ಸಲಿಲಗಳು
ಹರಿಯ ಆಜ್ಞೆಯಿಂದ ಇರುತಿಹದು ಆಕಾಶ
ಹರಿಯ ಆಜ್ಞೆಯಿಂದ ಧರಿಸಿಹಳೀ ಧರಣಿ
ಹರಿಯ ಆಜ್ಞೆಯಿಂದ ಪರಿಠವಿಸುವ ಚಂದ್ರ
ಹರಿಯ ಆಜ್ಞೆಯಿಂದ ಮರಬಳ್ಳಿ ಫಲಿಸುವವು
ಹರಿಯ ಆಜ್ಞೆಯಿಂದ ಕರೆವವು ಗೋವುಗಳು
ಹರಿಯ ಅಧೀನ ಇವರವರೆಂದು ಮಿತಿಯಿಲ್ಲ
ಹರಿಯೆ ಸರ್ವವ್ಯಾಪ್ತಚ್ಚೇಷ್ಟಿಗೆ ನಿಯಾಮಕ
ಸರಿ ಇಲ್ಲದ ವಸ್ತು ಗೋಪಾಲವಿಟ್ಠಲ
ಇರುತಿಪ್ಪ ಇಷ್ಟರೊಳು ಅರಿತು ಯೋಗ್ಯತೆಯ ॥ 4 ॥
ತ್ರಿವಿಡಿತಾಳ
ಭೇದವಿಲ್ಲದೆ ಇಪ್ಪ ಇಷ್ಟರೊಳಗೆ ತಾನು
ಭೇದವಾಗಿ ಕಾರ್ಯ ಮಾಡಿಸುತ
ಆದಿಯಲ್ಲಿ ಪೂರ್ಣ ಅಂತಿಯಲ್ಲಿ ಪೂರ್ಣ
ಭೇದ ಜೀವರಲ್ಲಿ ಭೇದ ಕರ್ಮ ಮಾಡಿಪ್ಪ
ಸಾಧು ಅಲ್ಲಿದ್ದ ಕಾರ್ಯ ಕ್ರೋಧರಲ್ಲಿ ಮಾಡಿಸಾ
ಕ್ರೋಧರಲ್ಲಿದ್ದ ಕಾರ್ಯ ಸಾಧು ಅಲ್ಲಿ ಮಾಡಿಸಾ
ಸಾಧುರೊಳಗೆ ಬೊಮ್ಮನ ಮೊದಲು ಮಾಡಿ
ಕ್ರೋಧರೊಳಗೆ ಇನ್ನು ಆದಿ ಕಲಿಯ ಮಾಡಿ
ಈ ದಾವ ತಾರತಮ್ಯವಾದ ಜೀವರುಗಳಿಗೆ
ಮಾಧವ ನಿತ್ಯದಿ ಸುಖದುಃಖ ಉಣಿಸುವ
ಶೋಧಿಸಿ ತಿಳಿದರೆ ಜಡ ಚೇತನದಿ ಭಿನ್ನ
ಆದಿ ಮೂರುತಿ ರಾಮ ಗೋಪಾಲವಿಟ್ಠಲ
ಆದರಿಸುವನಯ್ಯ ಆವರಲ್ಲಿದ್ದರನ್ನ ॥ 5 ॥
ಅಟ್ಟತಾಳ
ಕರ್ತು ಹರಿಯೆ ಮುಖ್ಯ ಹೊರ್ತಿನ್ನೊಬ್ಬರಿಲ್ಲ
ಅರ್ತಾರೆ ಅರಿವೆವು ಮರ್ತರೆ ಮರಿವೆವು
ಕೀರ್ತಿಗೆ ಇವನಪಕೀರ್ತಿಗೆ ಇವನೆ
ಅರ್ತು ಜೀವರ ಗತಿ ಸ್ಫೂರ್ತಿಯ ಕೊಡುವನು
ವ್ಯರ್ಥ ಮಾಡನು ಹೀಗೆ ಅರ್ತೀವ ಮನುಜಗೆ
ಭರ್ತಿ ಮಾಡಿ ಜ್ಞಾನ ಆರ್ಥಿಯ ತೋರುವ
ಸರ್ತಿ ಇಲ್ಲದ ದೈವ ಗೋಪಾಲವಿಟ್ಠಲ
ಮೂರ್ತಿಮಂತನಾಗಿ ಇರುತಿಹ ನಮ್ಮೊಳು ॥ 6 ॥
ಆದಿತಾಳ
ಮೂರು ಗುಣದೊಳಗೆ ಮೂರುತಿ ಆಗಿದ್ದು
ಮೂರು ಬಗೆಯ ವ್ಯಾಪಾರವ ಮಾಡುವ
ಮೂರುವೆಂಬೊದೆ ಮೂಲಕಾರಣ ಸಂಸಾರ
ಮೂರು ಎಂಬೋದು ನಿತ್ಯ ಆರಿಸಿ ನೋಡಲು
ಕಾರಣನಾಗಿ ಹರಿ ಕಾರ್ಯವ ಮಾಡಿಪಾ
ಮೂರರಿಂದಲಿ ಭಿನ್ನ ಮೂರುತಿಯನು ನಿತ್ಯ
ಆರಾಧಿಸುವಗೆ ತೋರುವ ತನ್ನನು
ಮಾರುತ ವಂದ್ಯ ಪಾದ ಗೋಪಾಲವಿಟ್ಠಲ
ಭಾರಕರ್ತನು ಭವ ಭಾರವ ನಿಳುಹುವ ॥ 7 ॥
ಜತೆ
ಸ್ವಾಮಿ ರಹಿತನಾದ ಸ್ವಾಮಿ ಎನಗೆ ಸ್ವಾಮಿ
ಸಾಮಜವರದ ಗೋಪಾಲವಿಟ್ಠಲ ಬಂಧು ॥
***