ಶ್ರೀಗೋಪಾಲದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
(ಬಿಂಬನು ಕರಚರಣಾದ್ಯವಯವಗಳಿಂದ ಪ್ರತಿಬಿಂಬನಲ್ಲಿ ಇರುವಿಕೆ.
ಬಿಂಬನಾದ ಹರಿಯು ಸುಖಪೂರ್ಣನಾದವನು. ಪ್ರತಿಬಿಂಬಗಳಿಗೆ ತಾಪತ್ರಯ
ಉಂಟೇನೋ? ಬಿಂಬೇಚ್ಛಾದಂತೆ ಜೀವರ ಸ್ವರೂಪ ಗುಣ ಕರ್ಮಾನುಸಾರ ಫಲ ತಂದೀವ ಕಾರಣ ,
ಸಕಲ ಭಕ್ತರು ಸುಖದಲ್ಲಿರಲೆಂಬ ಪ್ರಾರ್ಥನೆ.)
ರಾಗ ಶಂಕರಾಭರಣ
ಧ್ರುವತಾಳ
ಆಪತ್ತು ಕಾಲ ಬಂದಿದೆ ಅಯ್ಯಾ ಅಯ್ಯಾ
ಶ್ರೀಪತಿ ಕಾಯೋ ಆಶ್ರಿತ ಜನಬಂಧು
ನೀ ಪರಮ ಪುರುಷ ನಿತ್ಯ ತೃಪುತ ದೇವಾ
ನಾ ಪರದೇಶಿಯೊ ಹೇ ನಳಿನನಾಭಾ
ಅಪಾರ ದೋಷಿ ಇನ್ನು ಆನಹುದಯ್ಯಾ ಆಯ್ಯಾ
ನೀ ಪೂರ್ಣ ಗುಣನಿಧಿ ನಿರ್ದೋಷನಲ್ಲೆ
ಲೇಪರಹಿತ ನೀನು ಬಿಂಬನಾದ ಬಳಿಕ
ತಾಪ ಉಂಟೇನು ಪ್ರತಿಬಿಂಬಗಳಿಗೆ
ಭೂಪಾಲಕನು ಸುಖದಲ್ಲಿ ಇರಲಾಗಿ
ಆಪತ್ತು ಉಂಟೆ ಅವನ ಆಳು ಜನಕೆ
ನೀ ಪರ ಉಪಕಾರಿ ನಿನಗೊಂದಪೇಕ್ಷೆ ಇಲ್ಲ
ಸಾಪಾಟಿ ಅಧಿಕ ಶೂನ್ಯ ಸರ್ವೋತ್ತಮಾ
ತಾಪತ್ರಯಂಗಳು ತ್ರಿವಿಧ ಗುಣದ ಕಾರ್ಯ
ನೀ ಪ್ರೇರಿಸಿದಂತೆ ನಿತ್ಯ ದಣಿಸೋವು
ನಾ ಪ್ರತಿಗಾಣೆ ನಿನಗೆ ವಂದನ್ನ ಮಾಡಿ ತೋರ
ಆಪೂ ಸಾಪಿಗೆ ಮಾತ್ರ ಕರ್ತನಯ್ಯಾ
ಹೋಪ ಬಪ್ಪದು ಏನು ಒಂದಾದರು ಎನ್ನಿಂದ
ಕಾಪಾಲಿವರದ ಕಾರುಣ್ಯಾಂಕಾರಾ
ರಾಪು ಮಾಡುವೆ ನೀ ರಹಸ್ಯ ಮಾಡಿದ ಕಾರ್ಯ
ಕೋಪ ಸಲ್ಲದಯ್ಯಾ ಕೋದಂಡಪಾಣಿ
ಮಾಪು ಪಿಡಿದು ಇನ್ನು ಅಳಿಯ ಕುಳಿತ ಬಳಿಕ
ಲೋಪ ಮಾಡುವದ್ಯಾಕೆ ಲೋಕದೊಳು
ಈ ಪರಿ ಎನ್ನ ಮನದ ಅಭಿಪ್ರಾಯ
ಗೋಪಾಲ ಸರ್ವಪಾಲಾ ಸರ್ವ ಇಷ್ಟಾ
ದ್ರೌಪದಿ ಮಾನದೊಡೆಯ ಗೋಪಾಲವಿಟ್ಠಲ
ತಾಪಸರ ಮನದಿ ಸಿಲ್ಕಿ ಅಗಲದ ದೇವಾ ॥ 1 ॥
ಮಟ್ಟತಾಳ
ನಿನ್ನದು ನೀ ನಿತ್ಯಾ ಎನ್ನದು ಅನಿತ್ಯ
ನಿನ್ನದು ಸ್ವಾಧೀನ ಎನ್ನದು ಪರಾಧೀನ
ನಿನ್ನಾನಂದ ನಿನಗೆ ನಿನ್ನಿಂದಾನಂದೆನಗೆ
ನಿನ್ನವನಾ ಆಧೀನಾಗೆ ಎನ್ನವ ನೀ ಎನಗೆ
ಎನ್ನದು ಸಕಾಮಾ ನಿನ್ನದು ನಿಷ್ಕಾಮಾ
ಎನ್ನ ವೊಳಗೆ ನೀನೆ ನಿನ್ನ ವೊಳಗೆ ನೀನೆ
ಅನ್ಯ ಅಪೇಕ್ಷೆ ಮಾತ್ರ ವೆಂಬೋದು ಎನಗೆ ದೋಷ
ನಿನ್ನ ಅಪೇಕ್ಷವೆ ಎನ್ನ ಪೋಷಣೆ ಅಲ್ಲೆ
ಎನ್ನ ನೀ ಮರೆದರೆ ನಿನ್ನ ನಾ ಮರೆವೂವೆ
ಎನ್ನ ನೀ ತಿಳಿದರೆ ನಿನ್ನ ನಾ ತಿಳಿವೂವೆ
ಎನ್ನನು ನೀ ಮರದದಕನುಭೋಗಾ
ಭಿನ್ನ ವಿಷಯದಲ್ಲಿ ಇನ್ನು ಪೋಗೋದೆ ಸಾಕ್ಷಿ
ಎನ್ನ ವ್ಯಾಪಾರವು ನಿನ್ನಾಧೀನವಿರಲು
ಅನ್ಯಕೆ ಎಳೆದು ಬನ್ನ ಬಡಿಸಾ ಆವದು
ಅನ್ಯಾಯ ನ್ಯಾಯ ಇನ್ನೇನಿನ್ನೇನೊ
ಮನ್ನ ವಾಚ ಕಾಯ ಇನ್ನು ಎನಗೆ ದೇವ
ನಿನ್ನನ್ನೆ ಬೇಕೆಂಬೊ ಘನ್ನ ಆಶೆಯು ಬಹಳ
ಮನ್ನಿಸಿ ಬಿನ್ನಪ ಮನಕೆ ತಾ ನೀ ವೇಗಾ
ಸನ್ಮುನಿಗಳ ಪ್ರೀಯಾ ಗೋಪಾಲವಿಟ್ಠಲ
ನಿನ್ನನಲ್ಲದೆ ಬೇರೆ ಇನ್ಯಾರನ ಕೇಳ್ವೆ ॥ 2 ॥
ರೂಪಕತಾಳ
ಎನ್ನ ಯೋಗ್ಯತೆ ಅರಿತು ಉಣಿಸೆನೆಂದರೆ ನೀನು
ನಿನ್ನ ಸಂಕಲ್ಪಕ್ಕೆ ಪ್ರತಿಕೂಲ ನಾನಲ್ಲ
ನಿನ್ನ ಭೃತ್ಯನು ನಾನು ನಿಜವೆಂಬೋದು ಇತ್ತೆ
ಎನ್ನ ಸ್ವರೂಪವು ದುಃಖಿ ಬೇರೆಲಿಲ್ಲಲ್ಲ
ಚನ್ನಾಗಿ ಚಿದ್ರೂಪಿ ನಿರ್ಗುಣ ಜೀವಕ್ಕೆ
ಇನ್ನು ಶೋಕಂಗಳು ಆವ ಪರಿ ಉಂಟು
ಭಿನ್ನ ತ್ರಿಗುಣದಿಂದಾ ಘನ್ನ ಶೋಕಗಳೆಂಬ
ಇನ್ನು ಜಡಂಗಳು ಬನ್ನ ಬಡಿಸುವವೋ
ಎನ್ನ ಮನಸಿಗಿದು ನಿಜವು ತೋರುವದಿಲ್ಲ
ಇನ್ನು ಬಿದ್ದಲ್ಲಿಂದ ಚಲಿಸದೆ ಜಡಗಳು
ಮುನ್ನ ಚೇತನಗಳು ದಣಿಸಬಲ್ಲವೆ ದೇವಾ
ಇನ್ನು ಅವಕ್ಕೆ ಬೇರೆ ಅಭಿಮಾನ್ಯ ರುಂಟೆಂಬ
ಎನ್ನಂತಸ್ವಾತಂತ್ರರವರಲ್ಲವೇ
ಇನ್ನೊಬ್ಬರಿನ್ನೊಂದು ಜಡ ಚೇತನಗಳಿಂದ
ಎನ್ನ ದಣಿಸುವರ ಕಾಣೆನಯ್ಯಾ ಸ್ವಾಮಿ
ಘನ್ನ ವೈಕುಂಠದಿನ್ನಲ್ಲಿ ಆಗೋ ಸುಖಾ
ಇನ್ನಿಲ್ಲೆ ಕೊಡುವ ಸ್ವಾತಂತ್ರ ನಿನಗುಂಟಯ್ಯಾ
ನೀನಲ್ಲದಿಲ್ಲಿನ್ನು ಸುಖ ದುಃಖಗಳು ಒಂದು
ಎನ್ನಯ್ಯಾ ಎನ್ನಯ್ಯಾ ಏ ದೇವನೆ
ಕಣ್ಣಿನೊಳಗೆ ಕಣ್ಣು ಕರ್ನದೊಳಗೆ ಕರ್ನ
ಬೆನ್ನಿನೊಳಗೆ ಬೆನ್ನು ಇನ್ನು ಕಾಲೊಳು ಕಾಲು
ಎನ್ನ ಆಕಾರದೊಳೆಲ್ಲ ವ್ಯಾಪಿಸಿ ಇಪ್ಪ
ಚಿನ್ನುಮಯ ಜ್ಞಾನಾನಂದ ನಿರ್ದೋಷ ಪೂರ್ಣ
ಭಿನ್ನ ಕಾಮ ರಹಿತ ಗೋಪಾಲವಿಟ್ಠಲ
ನಿನ್ನವರವನಯ್ಯಾ ಬಿನ್ನಪ ಚಿತ್ತೈಸು ॥ 3 ॥
ಝಂಪಿತಾಳ
ಇದೆ ವ್ಯಾಳ್ಯ ಇದೆ ಸಮಯ ಈಗಲೆ ನಿನ್ನಾಟ
ವದಗಿ ದೊರಕಿದೆ ನಿನಗೆ ಒಳಿತಾಗಿ ನೋಡು
ಗದಗದನೆ ನಡುಗಿಸು ಉದರ ಹಸಿವೆಯ ಕೊಡಿಸು
ಒದರಿಸು ಎನಗಿನ್ನ ಆರನಾ ಕಾಣೆಂದು
ಕುದರಿಯಂತೆ ಕುಟಿಲ ರೋಗಗಳ್ಹಚ್ಚು
ಒದಗಿ ನಡೆಯದಂತೆ ಇದ್ದಲ್ಲೆ ಕುಳ್ಳಿಸೊ
ಮದುವಿಗಳ ಮಾಡಿಸು ನದಿಗಳೊಳು ಮಣುಗಿಸು
ಮಧುರ ಅನ್ನವ ಉಣಿಸು ಸದಾಚಾರಿ ಎಂದೆನಿಸು
ಇದಕ್ಕೊಂದೆ ಅದಕ್ಕೊಂದೆ ಇನ್ನೊಂದಕೆ ಒಂದೆ
ಇದರ ಭೋಗಗಳೆಲ್ಲ ಭಿನ್ನ ಎನ್ನಿಂದಯ್ಯಾ
ತುದಿಗೆ ನಿರ್ಗುಣನಾಗೆ ವೊದಗೋದಾನಂದವ್ಯಕ್ತಿ
ಅದರ ಮೇಲೆ ಇನ್ನು ಅಲ್ಲಿ ಮಾಡಿಸಲಾಪ್ಯಾ
ಬದುಕು ಎನ್ನದು ಏನು ಕೆಟ್ಟು ಪೋಗುವದು
ಪದೋಪದಿಗೆ ವಿಸ್ಮೃತಿಯಿಂದ ದಣಿವೆ
ಅದೇ ಸಮಯದಲ್ಲಿ ಉದ್ಧರಿಸಬೇಕು
ಹೃದಯದೊಳಕೆ ನಿನ್ನ ನಿದರ್ಶನವನ್ನು
ಸದಾಕಾಲದಲ್ಲಿ ತಾ ಸಾಕುವ ಧೊರಿಯೆ
ಮದನಜನಕ ನಮ್ಮ ಗೋಪಾಲವಿಟ್ಠಲ
ಒದಗಿ ಬಪ್ಪವು ಹರುಷ ಕ್ಲೇಶದಿ ನಿನ್ನನು ತಿಳಿಸೊ ॥ 4 ॥
ತ್ರಿವಿಡಿತಾಳ
ಇಂದ್ರಿಯಗಳಿಂದಲಿ ಆಗುವ ಕರ್ಮವು
ದ್ವಂದ್ವ ವಾಗ್ಯುಂಟು ಕೃಷ್ಣದ್ವೈಪಾಯನ
ಒಂದರೊಳಗೆ ಒಂದು ಅಂದಿಸುತಲೆಲ್ಲಿ
ಸಂದಿ ಸಂದಿಗೆ ಬಿಡದೆ ಎನ್ನ ಎಳೆದು
ಒಂದು ಎನ್ನ ವಿಷಯ ನಿಜವಸ್ತುವಿರಲಾಗಿ
ಹಿಂದೆ ಮಾಡಿ ಅದರ ಹಿತ ಅರಿಸದೆ
ಬಂಧಕರನು ಮಾಡಿ ಬಯಕಿ ಪುಟ್ಟಿಸಿ ಬಾಹಿರ
ಕುಂದು ವಿಷಯಕಿನ್ನು ಮೋಸಗೊಳಿಸಿ
ಅಂಧಕನ ಪಿಡಿದು ಆಟ ಆಡಿಸಿದಂತೆ
ಸಂದಳಿ ಅಂಗಡಿಗೆನ್ನ ನೂಕಿ
ಬಂಧು ಅಲ್ಲದವರ ಬಂಧು ಯೆಂದು ತಿಳಿಸಿ
ನಿಂದ್ರಲರಿರದಾವಸ್ಥೆ ನಾ ನಿತ್ಯವೆಂದರಿವಿಸಿ
ಗಂಧವಲ್ಲದ್ದು ಎಲ್ಲ ಗಂಧವೆಂದರಿವಿಸೆ
ಛಂದವಲ್ಲದ ರಸವು ಛಂದವೆಂದು ತಿಳಿಸಿ
ಹಿಂದೆ ಮುಂದೆ ಕಾಣದಂತೆನ್ನ ಕುಳ್ಳಿಸಿ
ಎಂದಿಗೆ ನಾಶವಿಲ್ಲದ ಜೀವನಿಗೆ
ಬಂದು ಹೋಗುತಿನೆಂಬೊ ಮೃತ್ಯು ಭಯ ಪುಟ್ಟಿಸಿ
ಅಂದಾಗಿ ನೀ ಬಿಡದೆ ಈ ಪರಿ ಮಾಡಿಸಿ
ಎಂದಿಗಾ ಜೀವರು ಹೊಂದುವರು ನಿನ್ನ
ಗಂಧ ಸುಳಿದಂತೆ ಇದರ ಒಳಗೆ ಒಮ್ಮೆ
ತಂದು ಸ್ಮೃತಿಗೆ ನಿಜ ಇಂದ್ರಿಯಿಂದ ನಿನ್ನ
ಛಂದುಳ್ಳ ಗುಣಗಳು ಅನುಭವಕೆ ಬಂತೆ
ಅಂದಿಗೆ ಸಂದೇಹ ನಿವೃತ್ತಿ ಆಹೋದು
ಇಂದನ್ನಕ ನೋಡೆ ಈ ಬಟ್ಟೆ ಹಾಕೆಟ್ಟೆ
ಸಂದಿಲೀ ಇದ್ದನ್ನ ಈ ಪರಿ ಮಾಡಲು
ಅಂದವೆ ಅಂದವೆ ಅಪ್ಪಾ ಅಪ್ಪಾ
ವಂದಿಸಿ ಮೊರೆ ಇಟ್ಟೆ ಒಂದು ಆದರು ನಿ -
ನ್ನಿಂದಿಲ್ಲಾ ವಿಲ್ಲಾದಿಲ್ಲಾ ವೆಂದು ಸಂದೇಹವನು ಬಿಟ್ಟು
ಸುಂದರಮೂರುತಿ ಗೋಪಾಲವಿಟ್ಠಲ
ತಂದೆ ನಿನ್ನ ಚಿತ್ತ ಬಂದದೆ ಮಾಡಯ್ಯಾ ॥ 5 ॥
ಅಟ್ಟತಾಳ
ಹೇ ಅಚ್ಚುತನೆ ಹೇ ಅನಂತನೆ
ಹೇ ಅದ್ಭುತನೆ ಹೇ ಅಗೋಚರನೆ
ಹೇ ಅಗಮ್ಯನೆ ಹೇ ಅಹೋರಾಜ
ಹೇ ಅದಿತಿಸುತ ಹೇ ಅಕ್ರೂರಪಾಲ
ಹೇ ಅಹಲ್ಯಾ ರಕ್ಷಕ ಹೇ ಅಂಬರೀಷಪಾಲಾ
ಹೇ ಅಜಮಿಳವರದ ಹೇ ಆರಕಾಣೆಂದ ಗಜರಾಜ ವರದನೆ
ಹೇ ಅನಿಮಿತ್ಯ ಬಂಧು ನಿತ್ಯ ನಿರಂಜನ
ಹೇ ಅಪ್ಪಾ ಅಯ್ಯಾ ಪೂತುರೆ ಪೂತುರೆ
ಹೇ ಅನಾದಿದೇವ ಆನಂದಪೂರ್ಣನೆ
ಹೇ ಅಘಟಿತ ಘಟಿತಾನಂತ ಐಶ್ವರ್ಯ
ಹೇ ಆಶ್ಚರ್ಯನೆ ಹೇ ಅಖಂಡಿತಾ
ಹೇ ಅರ್ಧಗರ್ಭ ಹೇ ಅಧೋಕ್ಷಜ
ಹೇ ಅಜ ಹೆದ್ದಯ್ಯಾ ನಾ ಅಜ್ಞಾ ನೀ ಪೂರ್ಣ
ಬಾ ಅಯ್ಯಾ ಕಾಯಯ್ಯಾ ತ್ರಾಹಿ ತ್ರಾಹಿ ಕೃಷ್ಣ
ನಾ ಅಲ್ಪ ನೀ ಪೂರ್ಣ ಭಳಿರೆ ಭಳಿರೆ ರಾಯಾ
ನೀ ಅಲ್ಲದಿಲ್ಲಿನ್ನು ಗೋಪಾಲವಿಟ್ಠಲ
ಬಾ ಆಶ್ರಿತಜನಬಂಧು ಭಕುತಪಾಲಾ ॥ 6 ॥
ಆದಿತಾಳ
ಪರರಿಗೆ ಹಿತವಾಗಿ ಎನ್ನಿಂದಲಿ ಇತ್ತೆ
ಇರಿಸು ಎನ್ನನು ಇತ್ತೆ ಧರಿಯ ಮೇಲೆ ದೇವಾ
ಶರಣ ಜನರ ಹಿತವೆ ಎನ್ನ ಹಿತವು
ಶರಣರ ಆಪತ್ತೆ ಎನ್ನ ಆಪತ್ತಯ್ಯ
ಹರಿಯೆ ನಾ ನಿನಗಿನ್ನು ವಂದಿಸಿ ಮೊರೆ ಇಟ್ಟೆ
ತರುಳನ ಬಿನ್ನಪ ಮನಕೆ ತಾರೈ ದೇವಾ
ಧರಿಯ ಮೇಲಿನ್ನೆಷ್ಟು ಶರಣ ಜನರು ಉಂಟು
ನಿರುತ ಅವರಿಗಿನ್ನು ಎರಡೊಂದು ಗುಣದ
ಕರಕರೆ ಕ್ಲೇಶವೂ ಇರದಂತಲಿ ಮಾಡು
ಧರಣಿಯ ರಮಣ ತರುಳ ಸಲಿಗಿಯಲಿ ಇನ್ನೊಂದು ಬೇಡುವೆ
ಕರುಣಿಸೊದುಚಿತವೆ ಆಗಿತ್ತೆ ಕರುಣಿಸು
ಸ್ಥಿರ ಎನ್ನ ಗುರುವಿನ ಇನ್ನು ಮೊದಲು ಮಾಡಿ
ಪರಿಪರಿ ಪರಿ ಇನ್ನೆಂತು ಉಂಟೋ
ಪರಿಹರಿಸವರಿಗೆ ಹರುಷದಲ್ಲಿ ಇಟ್ಟು
ಬರಿದೆ ಎನ್ನನು ನೀನು ಅವರ ಕ್ಲೇಶಗಳೆಲ್ಲ
ಹರಹುವೊ ಎನ್ನಲ್ಲಿ ಸ್ಮರಣೆ ಪೂರ್ವಕವಾಗಿ
ದುರಿತಗಿರಿ ಕುಲಿಶ ದುಷ್ಟರ ಮರ್ದನ
ಶರಣರ ರಕ್ಷಕ ಕರುಣಾಕರ ಸ್ವಾಮಿ
ಮರುದಂತರ್ಗತ ಗೋಪಾಲವಿಟ್ಠಲ
ಸರಿ ಬಂದದು ಮಾಡೊ ಶರೀರ ಒಪ್ಪಿಸಿದೆ ॥ 7 ॥
ಜತೆ
ಸಕಲ ಭಕುತರೆಲ್ಲ ಸುಖದಲ್ಲಿ ಇರಲೆಂಬೊ
ಕಕುಲಾತಿ ಎನಗೆ ಕರುಣಿಸೊ ಗೋಪಾಲವಿಟ್ಠಲ ॥
****
ಈ ಸುಳಾದಿಯ ರಚನೆಯ ಸಂದರ್ಭ :
ಶ್ರೀಭಾಗಣ್ಣದಾಸರು ಒಮ್ಮೆ ಹರಿಧ್ಯಾನಕ್ಕೆ ಕುಳಿತಿದ್ದಾರೆ . ಶ್ರೀಸ್ವಾಮಿ ಧ್ಯಾನಕ್ಕೆ ಒದಗಿದ್ದಾನೆ. ಶ್ರೀಹರಿಯ ದರ್ಶನದಿಂದ ಪುಳಕಾಂಕಿತರಾದ ಶ್ರೀದಾಸರು , ಅವನ ರೂಪಲಾವಣ್ಯಾದಿಗಳನ್ನು ಕಂಡು ಹಿಗ್ಗಿ ಆಪಾದಮೌಲಿಪರ್ಯಂತ ಅವನನ್ನು ತುತಿಸಲು ಮನಮಾಡಿ ಇನ್ನೇನು ಸ್ತೋತ್ರಕ್ಕೆ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ , ನಿರಪರಾಧಿಗಳಾದ ಶ್ರೀದಾಸರೆದುರಿಗೆ ಶ್ರೀಸ್ವಾಮಿಯು , ತನ್ನಲ್ಲಿ ಶ್ರೀದಾಸರು ಏನೋ ಒಂದು ಅಪರಾಧ ಮಾಡಿದ್ದಂತೆಯೂ , ಶ್ರೀಹರಿಯು ಕ್ಷಮಾಸಮುದ್ರನಾದರೂ ಸಹಿಸಲು ಅವನಿಗೆ ಮನ ಒಪ್ಪುತ್ತಿಲ್ಲ ಎನ್ನುವ ಹಾಗೆ ಕಾಣುತ್ತಿದ್ದ ರೂಪವು , ಇದ್ದಕ್ಕಿದ್ದಂತೆ ಕೋಪೋದ್ರಿಕ್ತವಾಗಿ ಕಾಣತೊಡಗಿತು. ಆ ರೂಪವನ್ನು ದರ್ಶನ ಮಾಡಿ ಬೆಚ್ಚಿ ಬೆದರಿ ಕಂಗಾಲಾದರು ಶ್ರೀದಾಸರು. ತಟ್ಟನೆ ಧ್ಯಾನವು ವಿಚ್ಛಿತ್ತಿಗೊಂಡಿತು. ಆ ನಿಮಿಷದಿಂದ ಶ್ರೀದಾಸರು , ತಮ್ಮ ನಿತ್ಯ ಕರ್ಮಾನುಷ್ಠಾನವನ್ನು ಕಾಲಕಾಲಕ್ಕೆ ಮಾಡುತ್ತಿದ್ದರೂ , ಆ ಕೋಪದ ರೂಪ ದಾಸರ ಮನೋನಯನದಿಂದ ಮರೆಯಾಗಲಿಲ್ಲ. ನಿಂತಲ್ಲಿ ಕೂತಲ್ಲಿ ಮಲಗಿದಾಗ ಸಹ , ಶ್ರೀಹರಿಯಲ್ಲಿ ನಾನು ಮಾಡಿದ ಅಪರಾಧವಾದರೂ ಏನು ಎಂದು ಚಿಂತಿಸುವುದೊಂದೇ ಶ್ರೀದಾಸರಿಗೆ ಬೆನ್ಹತ್ತಿದ ಕ್ಲೇಶ. ಆ ಸಂದರ್ಭದಲ್ಲಿ , ನನ್ನ ಅಪರಾಧವೇನಿದ್ದರೂ ಕ್ಷಮಿಸಿ ಅಂದು ತೋರಿದ ಆ ಸುಂದರ ರೂಪವನ್ನು ತೋರು ಹರಿಯೇ - ಎಂದು ಮೊರೆಯಿಟ್ಟರು. ಈ ಪ್ರಕಾರದಿಂದ ಸ್ತೋತ್ರ ಮಾಡುತ್ತಾ ಕೆಲವು ದಿನಗಳನ್ನು ಕಳೆದರು. ಧ್ಯಾನಕ್ಕೆ ಕೂತರೆಂದರೆ ಶ್ರೀಹರಿ ತೋರಿದ ಕೋಪದ ರೂಪದ ಚಿಂತೆ. ಧ್ಯಾನಕ್ಕೂ ಮನನಿಲ್ಲದಾಗುತ್ತ ಬಂತು.'ಅಪರಾಧಗಳ ಮಡುವಿನಲ್ಲಿ ಸದಾ ಮುಳುಗಿ ತೇಲುವ ದುಃಸ್ಥಿತಿ ನಮ್ಮಂತಹವರಿಗೆ ಸಹಜವೆಂಬುದು ನೀನು ಅರಿಯದುದಲ್ಲ ಹರಿಯೇ - ಸಮಸ್ತ ಅಪರಾಧಗಳನ್ನು ಕ್ಷಮೆ ಮಾಡಿ, ಎಂದಿನಂತೆ ಸುಂದರ ರೂಪದ ದರ್ಶನ ನೀಡಿ ಆನಂದ ನೀಡು ಪ್ರಭೋ' ಎಂದು ಮೊರೆಯಿಡುತ್ತಾ,'ಕೋಪ ಸಲ್ಲದಯ್ಯಾ ಕೋದಂಡಪಾಣಿ'-ಮೊದಲಾದ ಪ್ರಾರ್ಥನೆಯ ಪದಪುಂಜರಂಜಿತವಾದ ಈ ಸುಳಾದಿಯನ್ನು ರಚನೆ ಮಾಡಿದರು.
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
***