Showing posts with label ಜಯ ಜಯ ಜಯ ಜಯತು vijaya vittala ankita suladi ಹನುಮಂತ ಸುಳಾದಿ JAYA JAYA JAYA JAYATU HANUMANTA SULADI. Show all posts
Showing posts with label ಜಯ ಜಯ ಜಯ ಜಯತು vijaya vittala ankita suladi ಹನುಮಂತ ಸುಳಾದಿ JAYA JAYA JAYA JAYATU HANUMANTA SULADI. Show all posts

Saturday 2 January 2021

ಜಯ ಜಯ ಜಯ ಜಯತು vijaya vittala ankita suladi ಹನುಮಂತ ಸುಳಾದಿ JAYA JAYA JAYA JAYATU HANUMANTA SULADI


Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ  ಘಟಿಕಾಚಲ ಹನುಮಂತದೇವರ ಸುಳಾದಿ 

 ರಾಗ ರಂಜನಿ 

 ಧ್ರುವತಾಳ 

ಜಯ ಜಯ ಜಯ ಜಯತು ಜಯದೇವಿ ಸಂಭವನೆ 
ಜಯ ಜಯ ಜಯ ಧನಂಜಯನ ನಿಜಬಾಂಧವನೆ 
ಜಯ ಧನಂಜಯನ ರಥಾಗ್ರದಲಿ ನಿಂದವನೆ 
ಜಯ ಜಯ ಜಯ ರೋಮ ಕೋಟಿ ಭವನೆ
ಜಯ ಜಯ ಜಯ ಜಯ ಗುಣಶೀಲ ಪ್ರಭಾವನೆ 
ಜಯ ಜಯ ಜಯ ಜಯನೆ ವಿರೋಧಿ ಜವನೆ 
ಜಯ ಪವಮಾನ ಜಯ ಪತಿತ ಪಾವನ ಜಯ
ಜಯ ವತ್ಸ ಭೂತ ರಹಿತ ಜಯ ವೇದ ವಿಖ್ಯಾತ ವಿ - 
 ಜಯವಿಠಲನ ಭಯ ಭಕುತಿಯಿಂದ ಪೂಜಿಪ 
ಭಯದೂರ ಭವಹರ ಭಕ್ತರಾಧಾರ ಜಯತು ॥ 1 ॥

 ಮಟ್ಟತಾಳ 

ಮುನಿಸಪ್ತರು ಎಲ್ಲ ಶ್ರೀ ನರಸಿಂಹನ 
ಧ್ಯಾನವ ಮಾಡುತ್ತ ಆನಂದದಲಿ ಸ -
ಮಾನವಿಲ್ಲದ ಸ್ಥಳವನು ಮನಕೆ ತಂದು 
ಮನದಲಿ , ಗಿರಿಸಾನು ಬಳಿಯಲ್ಲಿರೆ 
ಜ್ಞಾನಾಂಬುಧಿ ನಮ್ಮ ವಿಜಯವಿಠಲರೇಯನ 
ಕಾಣುವ ತವಕದಲಿ ಧ್ಯಾನದಲ್ಲಿ ಒಲಿಸೆ ॥ 2 ॥

 ತ್ರಿವಿಡಿತಾಳ 

ಮುದದಿಂದ ಮುನಿಗಳು ಒದಗಿ ತಪಸು ಮಾಡೆ 
ವಿಧಿಯಿಂದ ವರವ ಪಡದು ಪರಮ ಗರ್ವದಲಿ 
ಮಧುವನ - ಭುವನರೆಂಬೊ ತ್ರಿದಶ ವೈರಿಗಳೀರ್ವರು 
ಎದುರಾದವರ ಲೆಕ್ಕಿಸದೆ ನಾನಾ ಪರಿಯಲ್ಲಿ 
ಮದಮತ್ಸರದಿ ಸಾರ ಹೃದಯದ ಸಾಧನ 
ಉದಯಾಸ್ತಮಾನ ನಿಲ್ಲದೆ ಕೆಡಿಸುತಿರಲು
ಉದಧಿ ಶಯನನಾದ ವಿಜಯವಿಠಲರೇಯನ 
ಪದವನ್ನು ನೆನೆಸಿ ಸಾರಿದರು ಮೊರೆಯಿಡುತಲಿ ॥ 3 ॥

 ಅಟ್ಟತಾಳ 

ಮುನಿಗಳು ಒಂದು ಘಟಿಕ ಕುಳಿತು ತಮ್ಮ 
ಮನದೊಳು ಏಕಾಂತದಲಿ ಧೃಢವಾಗಿ 
ಮನುಜ ಕೇಸರಿಯ ನೆನಿಸಲು ತಡಿಯದೆ 
ಚಿನುಮಯ ರೂಪ ಕ್ಷಣದಲ್ಲಿ ಯೋಗಾ -
ಸನನಾಗಿ ಪ್ರತ್ಯಕ್ಷನಾಗಿ ಬಂದನು 
ದನುಜರ ಉಪಹತಿಯನು ಕಳಿವೆನೆನುತಲಿ 
ಅನಿಮಿಷರೊಡಗೂಡಿ ವಿಜಯವಿಠಲ ಪಂಚಾ -
ನನದೇವ ಸುರರ ಬೆಸನ ಕೇಳಿ ಪರೀಕ್ಷಿಸೆ ॥ 4 ॥

 ಆದಿತಾಳ 

ಮುಕ್ಕಣ್ಣ ಮಿಕ್ಕಾದವರು ರಕ್ಕಸನೆದುರಿಗೆ 
ತಕ್ಕವರಾಗದಿರೆ , ಮುಖ್ಯಪ್ರಾಣನ ಕರೆದು 
ಚಕ್ರವ ಕೊಡಲಾಗ ಸೊಕ್ಕಿದ ದೈತ್ಯರನ 
ಪಕ್ಕಿಯ ತಿವಿದು ಮೇಲಕ್ಕೆ ಹಾರಿಸಿ ಅವರ 
ಕುಕ್ಕರ ಹಾಕಿ ನರಕಕ್ಕೆ ಸಾಗಿಸಿ ಪವನ 
ನಕ್ಕು ಹರಿ ಸಮ್ಮುಖಕ್ಕೆ ಚಕ್ರವ ತಂದಿಡಲು 
ಭಕ್ತನ ಭಕ್ತಿಗೊಲಿದು ಅಕ್ಕರದಿಂದಲಿ ಮೆಚ್ಚಿ 
ಚಕ್ರವ ಧರಿಸೆಂದು ಚಕ್ಕದಿ ದಯದಿ ಪೇಳೆ 
ಮುಕ್ತರ ಪ್ರಿಯನಾದ ವಿಜಯವಿಠಲನ ಪಾ -
ದಕ್ಕೆರಗಿ ನಿಂತ ದಿಕ್ಕಿನೊಳು ಮೆರವುತ್ತ ॥ 5 ॥

 ಜತೆ 

ಕರಚತುಷ್ಟಯಲಿಂದ ಮೆರೆವ ಹನುಮ, ಘಟಿಕಾ -
ಗಿರಿವಾಸ ವಿಜಯವಿಠಲನ ಪರಮದಾಸ ॥ 

 ಲಘುಟಿಪ್ಪಣಿ : 

 ಧ್ರುವತಾಳದ ನುಡಿ : 

 ಜಯ = ಉತ್ಕೃಷ್ಟನೇ - ಜೀವೋತ್ತಮನೇ ;
 ಧನಂಜಯನ = ಅರ್ಜುನನ ;
 ರೋಮಕೋಟಿಭವನೆ = ರೋಮ ಒಂದರಲ್ಲಿ ಕೋಟಿ ಲಿಂಗ (ರುದ್ರರನ್ನು)ಗಳನ್ನು ಧರಿಸಿರುವವನೆ ;
 ಗುಣಶೀಲ ಪ್ರಭಾವನೆ = ಸ್ವಾಭಾವಿಕ ಜ್ಞಾನಬಲಾದಿ ಗುಣಗಳಿಂದಾಗಿ ಮಹಾಮಹಿಮೋಪೇತನೆ ;
 ವಿರೋಧಿಜವನೆ = ಭಕ್ತರ ಅಪಮೃತ್ಯು ಪರಿಹರಿಸುವುದರಿಂದ ಯಮಧರ್ಮನಿಗೆ - ಅವನ ಕಾರ್ಯ ತನ್ನ ಭಕ್ತರಲ್ಲಿ ನಡೆಯದಂತೆ ತಡೆಯುಂಟು ಮಾಡುವನೆ ;
 ವತ್ಸ = ಬಲಗಣ್ಣಿನಲ್ಲಿ ಪ್ರದ್ಯುಮ್ನನು ಸ್ತಂಭ ರೂಪನಾಗಿದ್ದಾನೆ. ಶ್ರೀರಮಾದೇವಿಯು ಆ ಗೂಟಕ್ಕೆ ಕಟ್ಟಿರುವ ಹಗ್ಗದ ರೂಪದಲ್ಲಿ ಇದ್ದಾಳೆ - ವಾಯುದೇವರು ಆ ಗೂಟದ ಹಗ್ಗದಿಂದ ಕಟ್ಟಿಸಿಕೊಳ್ಳಲ್ಪಟ್ಟ ಆಕಳ ಕರು (ವತ್ಸ) ರೂಪದಿಂದ ಇರುವರು. ಈ ವತ್ಸರೂಪಿ ವಾಯುದೇವರನ್ನು ದೇವತೆಗಳು ಉಪಾಸನಾ ಮಾಡುತ್ತಾರೆ  (ಬೃಹದಾರಣ್ಯಕೋಪನಿಷತ್) ;
 ಭೂತ ರಹಿತ = ತ್ರಿಗುಣಾತ್ಮಕವಾದ ಲಿಂಗ ದೇಹದ ಕಾರ್ಯವಿಲ್ಲದಿರುವ ;

 ಸ್ತಂಭರೂಪದಲಿಪ್ಪ ದಕ್ಷಿಣ । 
 ಅಂಬಕದಿ ಪ್ರದ್ಯುಮ್ನ , ಗುಣ ರೂ - । 
 ಪಂಭ್ರಣಿಯು ತಾನಾಗಿ ಇಪ್ಪಳು ವತ್ಸ ರೂಪದಲಿ ॥ 
 ಪೊಂಬಸಿರ ಪದಯೋಗ್ಯ ಪವನ ತ್ರಿ - । 
 ಯಂಬಕಾದಿ ಸಮಸ್ತ ದಿವಿಜ ಕ - । 
 ದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ ॥ 
(ಹರಿಕಥಾಮೃತಸಾರ ಮಾತೃಕಾ ಸಂಧಿ - 9ನೇ ಪದ್ಯ )

 ಮಟ್ಟತಾಳ , ತ್ರಿವಿಡಿತಾಳದ ನುಡಿಗಳು : 

 ಮುನಿಸಪ್ತರು = ಸಪ್ತಋಷಿಗಳು - (ಬ್ರಹ್ಮಪುತ್ರರಾದ ಮರೀಚಿ , ಅತ್ರಿ , ಪುಲಹಾ , ಕ್ರತು , ವಸಿಷ್ಠ , ಪುಲಸ್ತ್ಯ , ಅಂಗೀರ ) ;
 ಗಿರಿಸಾನು = ಬೆಟ್ಟದ ತಪ್ಪಲು ಪ್ರದೇಶದಲ್ಲಿ ;

 ಅಟ್ಟತಾಳದ ನುಡಿ : 

 ಬೆಸನ = ಹಂಬಲ

 ಆದಿತಾಳದ ನುಡಿ : 

 ಮುಕ್ಕಣ್ಣ ಮಿಕ್ಕಾದವರು = ಶ್ರೀರುದ್ರದೇವರೇ ಮೊದಲಾದ ದೇವತೆಗಳು ಬ್ರಹ್ಮವರದಿಂದ ದೃಪ್ತ(ಸೊಕ್ಕು , ಹಮ್ಮು) ರಾದ ದೈತ್ಯರನ್ನು ಸದೆ ಬಡಿಯಲು ಸಮರ್ಥರಾಗದಿರಲು ;

 ಜತೆ : 

 ಘಟಿಕಾಗಿರಿ = ತಪಸ್ವಿಗಳಾದ ಸಪ್ತ ಋಷಿಗಳು , ಮಧುವನ - ಭುವನರೆಂಬ ದೈತ್ಯರಿಂದ ವಿಚಿತ್ರ ಹಿಂಸೆಗೊಳ್ಳುತ್ತಿದ್ದರೂ , ಆ ಹಿಂಸೆಯನ್ನು ಲೆಕ್ಕಿಸದೆ , ಸ್ಥೈರ್ಯದಿಂದ ಭಕ್ತಿ ಭಾವದಿಂದೊಡಗೂಡಿ ಒಂದು ' ಘಟಿಕ ' ಕಾಲ ಶ್ರೀನರಸಿಂಹದೇವನನ್ನು ತಮ್ಮ ತಪಸ್ಸಿನಿಂದ ಮೆಚ್ಚಿಸಿದ " ಗಿರಿ " ( ' ಅಚಲ ' ) ಎಂದರೆ ಪರ್ವತವಿದು. ಆದುದರಿಂದ ಈ ಪರ್ವತಕ್ಕೆ ' ಘಟಿಕಾಚಲ ' ಎಂಬ ಹೆಸರಾಗಿದೆ.

 ವಿವರಣೆಕಾರರು : 
 ಹರಿದಾಸರತ್ನಂ ಶ್ರೀಗೋಪಾಲದಾಸರು


https://drive.google.com/file/d/1G07z8khSiPOyLOu32o6hzgwFXVEDG-Kx/view?usp=drivesdk