Showing posts with label ಹರಿಯಾರ್ಚನೆಯ ಮಾಡು vijaya vittala ankita suladi ಉಪಾಸನಾ ಸುಳಾದಿ HARIYAARCHANEYA MAADU UPASANA SULADI. Show all posts
Showing posts with label ಹರಿಯಾರ್ಚನೆಯ ಮಾಡು vijaya vittala ankita suladi ಉಪಾಸನಾ ಸುಳಾದಿ HARIYAARCHANEYA MAADU UPASANA SULADI. Show all posts

Friday, 1 October 2021

ಹರಿಯಾರ್ಚನೆಯ ಮಾಡು vijaya vittala ankita suladi ಉಪಾಸನಾ ಸುಳಾದಿ HARIYAARCHANEYA MAADU UPASANA SULADI

Audio by Mrs. Nandini Sripad

 

ಶ್ರೀವಿಜಯದಾಸಾರ್ಯ ವಿರಚಿತ 


 ಉಪಾಸನಾ ಸುಳಾದಿ 


(ಬಹಿರ ಪ್ರತಿಪದಾರ್ಥಗಳಲ್ಲಿ ಚತುರ್ವಿಂಶತಿ ತತ್ವ, ಆ ತತ್ವ ನಿಯಾಮಕ

ದೇವತೆಗಳಂತರ್ಗತ ಶ್ರೀಹರಿ ವ್ಯಾಪಾರ ಅನುಸಂಧಾನ ಪೂರ್ವಕ ಬಿಂಬೋಪಾಸನೆ ಪೂಜಾಕ್ರಮ.) 


 ರಾಗ ಸಾರಂಗ 


 ಧ್ರುವತಾಳ 


ಹರಿಯಾರ್ಚನೆಯ ಮಾಡು ಹರುಷದಿಂದಲಿ ಮನವೆ

ನಿರುತ ಯೋಚಿಸು ನಿನ್ನೊಳಗೆ ನೀನು

ಧರಣಿ ಮೇಲಿದ್ದ ಪುಷ್ಪಫಲ ವುದಕಾದಿಯಿಂದ

ಪರಿಪರಿ ಪೂಜೆಯನ್ನು ಮಾಡಿದರೂ

ಹಿರಿದಾಗಿ ಜ್ಞಾನ ನಿನಗೆ ಪುಟ್ಟದು ಕಾಣೊ ನಿಂ -

ದಿರದು ಈ ಪುಣ್ಯ ಮೇಲುಗತಿ ಮಾರ್ಗಕೆ

ಬರಿದಾಗಿ ಪೋಗುವದು ಸಂತತ ತಿಳಿವದು

ಹರಣಾ ಬಳಲಿಪಲಾಗದು ಸುತ್ತಿ ಸುತ್ತಿ

ಕುರುಡನ್ನ ಕೈಯ ಪಿಡಿದು ಕುರುಡ ಪೋದಂತೆಯೊ

ಪರಮ ಭಕುತಿ ಜ್ಞಾನ ವೈರಾಗ್ಯವ

ದೊರಿಯದೆ ಬಗೆ ಬಗೆ ಪೂಜಿಸಿ ಹಾರಿದರು

ಸ್ಪರಿಶವಾಗದು ಕಾಣೊ ಪುಣ್ಯ ಜನರ

ಸಿರಿ ತತ್ವವಿಡಿದು ಗುಣಿಸು ಶನೈಶ್ಚರ ತತ್ವ -

ಪರಿಯಂತ ಹರಿವ್ಯಾಪ್ತಿಗಲ್ಲಿಗಲ್ಲಿ

ಪರಮ ರೂಪಗಳುಂಟು ಒಂದಾನಂತವಾಗಿ

ಮಿರುಗುತಿವೆ ನೋಡು ಭೇದವಿಲ್ಲಾ

ಸುರಗಣನುತ ವಿಜಯವಿಟ್ಠಲರೇಯನ 

ಚರಣಾರ್ಚನೆ ಮಾಡಲು ಸರ್ವಲೋಕವೆ ತೃಪ್ತಿ ॥ 1 ॥ 


 ಮಟ್ಟತಾಳ 


ಒಂದು ಬಿಂದೋದಕ ಒಂದು ತುಲಸಿ ಪತ್ರ

ಒಂದು ಫಲವು ಮತ್ತೊಂದು ಮಂಗಳಾರ್ತಿ

ಒಂದು ಧೂಪಾರತಿ ಒಂದು ಚರವು ಅನ್ನ

ಒಂದು ಸ್ತೋತ್ರದ ಪಠಣೆ ಒಂದು ವಂದನೆ 

ಒಂದೇ ನಮಸ್ಕಾರವನ್ನು ನಂದದಿಂದಲಿ ಮಾಡೆ 

ಕುಂದದೆ ಶ್ರೀಹರಿ ಮಂದಹಾಸದಲಿಂದ

ಚಂದವಾಗಿ ಒಲಿದು ನಿಂದಿರದೆ ಕೊಂಬ

ಸಿಂಧುಶಯನ ನಮ್ಮ ವಿಜಯವಿಟ್ಠಲರೇಯನ 

ಒಂದು ಮೂರುತಿಗೀಯೆ ಬಲುರೂಪಕೆ ಉಂಟು ॥ 2 ॥ 


 ತ್ರಿವಿಡಿತಾಳ 


ಒಬ್ಬ ಮನುಜ ತಾನು ಸಭೆಯೊಳಗೆ ಕುಳಿತು

ಶಬ್ದ ನುಡಿದರೆ ಸರ್ವರು ಕೇಳಿದಂತೇವೆ

ಅಬ್ಜನಾಭನ್ನ ಒಂದು ಮೂರುತಿಗೆ

ತಬ್ಬಿಬ್ಬು ಕೊಳದಲೆ ಉದಕಗಳಿಂದ

ಉಬ್ಬಿ ಉತ್ಸಹದಲ್ಲಿ ಪೂಜೆಯ ಮಾಡಿದರೆ

ದಭ್ರ ಬಿಡದಲೆ ಹರಿ ಸರ್ವರೂಪಗಳಿಂದ

ನಿಬ್ಬಡೆಯಾಗಿ ಮೊಪ್ಪುಗೊಂಡು ಕೃಪೆಯಿಂದ

ಹಬ್ಬಿದ ಕರ್ಮಗಳಿಂದ ಕಡೆಗೆ ಮಾಡಿ

ಒಬ್ಬಗೆ ಗತಿಯನ್ನು ಕೊಡುವ ವೇಗದಲ್ಲಿ

ಶಬ್ಧಗೋಚರ ನಮ್ಮ ವಿಜಯವಿಟ್ಠಲನಂಘ್ರಿ 

ಅಬ್ಜವ ನೆನದವಂಗೆ ಆವಾಗ ಫಲವಕ್ಕು ॥ 3 ॥ 


 ಅಟ್ಟತಾಳ 


ಪದೋಪದಿಗೆ ನಿನ್ನ ಹೃದಯದೊಳಗೆ ಧ್ಯಾನ

ಮುದದಿಂದ ಮಾಡೋದು

ಪದುಮನಾಭನ ವ್ಯಾಪ್ತಿ ಅಖಂಡದಲಿ ಉಂಟು

ಅದರ ತರುವಾಯ ಸಿರಿ ಅಜಭವ ಇಂದ್ರ

ಮದನ ವಿಡಿದು ಶನೇಶ್ಚರ ವ್ಯಾಪ್ತಿ ತಿಳಿದು ನಿ -

ಲ್ಲದೆ ಇವರ ಪೂಜೆ ಆವಾವ ಬಗೆಯಿಂದ

ಉದಯಾಸ್ತಮಾನ ಪರಿಯಂತ ರಚಿಸಲು

ಇದೆ ಇದೆ ತತ್ವೇಶ್ವರ ವ್ಯಾಪ್ತಿ ಪರಿಯಂತಾ

ಸದಮಲವಾಗಿ ಮುಟ್ಟುವದೆಂದು ಧ್ಯಾನಿಸಿ

ಪದವಿಗೆ ಸೋಪಾನ ವೇಗದಿಂದಾಗೋದು

ಚದುರ ಮೂರ್ತಿ ನಮ್ಮ ವಿಜಯವಿಠ್ಠಲರೇಯ 

ಇದನೆ ನೆನೆದರೆ ಕೈಕೊಂಡು ಸರ್ವರಿಗೀವಾ ॥ 4 ॥ 


 ಆದಿತಾಳ 


ಉಣಲಿ ಉಡಲಿ ಭೂಷಣಗಳು ಧರಿಸಲಿ

ಕುಣಿಯಲಿ ನಡಿಯಲಿ ಗುಣಗಳು ಎಣಿಸಲಿ

ತೃಣ ಮೊದಲಾದಲ್ಲಿ ಯೋಚನೆ ಮಾಡಲಿ

ಇನಿತು ಪೇಳಿದವರ ಸ್ಮರಣೆ ಮರಿಯದಿರು

ಜನರೊಳಗಿಪ್ಪ ನಮ್ಮ ವಿಜಯವಿಟ್ಠಲರೇಯನ 

ಶನಿಶನಿಯಲ್ಲಿ ತಿಳಿದು ಮುಕುತಿಲಿ ಸುಖಬಡು ॥ 5 ॥ 


 ಜತೆ 


ಹಗಲಿರಳು ಚಿತ್ತ ವ್ಯಾಪ್ತ ಮಾರ್ಗದಲ್ಲಿಡೂ

ತ್ರಿಗುಣಾತೀತ ನಮ್ಮ ವಿಜಯವಿಟ್ಠಲ ವೊಲಿವಾ ॥

***