Showing posts with label ಮಾಯವಾಯಿತು ರತುನ ಮರೆ ಮೋಸಮಾಡಿ gopalakrishna vittala. Show all posts
Showing posts with label ಮಾಯವಾಯಿತು ರತುನ ಮರೆ ಮೋಸಮಾಡಿ gopalakrishna vittala. Show all posts

Monday, 2 August 2021

ಮಾಯವಾಯಿತು ರತುನ ಮರೆ ಮೋಸಮಾಡಿ ankita gopalakrishna vittala

ಮಾಯವಾಯಿತು ರತುನ | ಮರೆ ಮೋಸಮಾಡಿ ಪ.


ಮಾಯವಾಯಿತು ಎನ್ನ ಮೋಹದ

ಮಮ ಗುರುವೆಂತೆಂಬ ರತುನ

ನೋಯಲೇಕಿದಕಿನ್ನು ನೃಹರಿ ಉ-

ಪಾಯದಿಂದಪಹರಿಸಿವೈದನು ಅ.ಪ.


ಕರಗತವಾಗಿ ಇತ್ತು | ಪ್ರಕಾಶವು

ಧರಣಿಯಲ್ಲಿ ವ್ಯಾಪಿಸಿತ್ತು

ಪರಿಪರಿ ಸಜ್ಜನಕೆ ತತ್ವದ

ವರ ಸುಧೆಯನುಣಿಸುತ್ತಲಿತ್ತು

ಕರಕರದು ಅಂಕಿತವ ಕೊಡುತಲಿ

ಪರಮ ಸಾಧನಗೈಸುತಿತ್ತು 1

ಸುಂದರವಾಗಿ ಇತ್ತು | ದುರ್ಜನರಿಗದ

ರಂದ ತೋರದಲೆ ಇತ್ತು

ಒಂದೊಂದೂ ಗುಣ ವರ್ಣಿಸಲು ಈ

ಮಂದ ಮತಿಗಳವಲ್ಲವಿನ್ನು

ತಂದೆ ಮುದ್ದುಮೋಹನಾರೆಂ-

ತೆಂದು ಜಗದಲಿ ಮೆರೆಯುತಿತ್ತು 2

ಮಾಸಿ ಪೋದಂಥ ಹರಿ | ದಾಸಕೂಟ

ತಾ ಸ್ಥಾಪಿಸುತ ಈ ಪರಿ

ವಾಸುದೇವನ ಗುಣಮಣಿಗಳ

ರಾಶಿಭೂತದಿ ಅರುಹಿ ಶಿಷ್ಯರ

ಸಾಸಿರಾನೂರ್ಮೇಲೆ ಹೆಚ್ಚಿಸಿ

ತಾ ಸೂರೆಗೊಂಡಾನಂದವನು3

ಗತಶಾಲಿ ಸಾಹಸ್ರವು | ಮೇಲೆಂಟು ಶತವು

ಮತ್ತರವತ್ತೆರಸುವು

ವತ್ಸವಿಕ್ರಮ ಪ್ರಥಮ ಮಾಸವು

ಪ್ರಥಮ ಪಕ್ಷದ ರಾಮನವಮಿ

ಹಿತದಿ ಮಂಗಳವಾರ ಸೂರ್ಯನ

ಗತಿಯು ನೆತ್ತಿಯೊಳೋರೆ 4

ಎಷ್ಟು ಪೊಗಳಲಳವು | ಆನಂದ ರತ್ನದ

ಗುಟ್ಟರಿಯದು ಜಗವು

ಶ್ರೇಷ್ಠ ಗೋಪಾಲಕೃಷ್ಣವಿಠಲನು

ಕೊಟ್ಟು ಕಳುಹಿಸಿ ಧರೆಯೊಳ್ಮೆರಸಿ

ಥಟ್ಟನೇ ತಾ ಕರೆಸಿಕೊಂಡು

ಶ್ರೇಷ್ಠ ಶಯ್ಯೆಯ ಮಾಡಿಕೊಂಡನು 5

****