ಪುರಂದರದಾಸರು
ಚಿತ್ತ ಶುದ್ಧಿಯಿಲ್ಲದ ಮನುಜ ಜ್ಞಾನಿಯೇ ||ಪ||
ಪಾಪ, ಹೊತ್ತು ಕಳೆಯದಂಥ ನರ ಮನುಜನೆ ||ಅ||
ಬಂಧನದೊಳಿಹ ವ್ಯಾಘ್ರ ಅದು ಬಹು ತಪಸ್ವಿಯೇ
ಸಿಂಧುವಿನೊಳಿಹ ನೊರೆ ಸಿತಕರಣವೇ
ಅಂಧಕನು ಕಣ್ಣು ಮುಚ್ಚಲು ಯೋಗಸಾಧನವೇ
ಮಂದಮತಿ ಸುಮ್ಮನಿರಲದು ಮೌನವೆ ||
ಶ್ವಾನ ಬೂದಿಯೊಳಿರಲು ಶಿವಭಕ್ತನೆನಬಹುದೆ
ಕಾನನದೊಳಿಹ ಕಾಗೆ ವನವಾಸಿಯೇ
ಗಾಣ ತಿರುಗಲೆತ್ತು ದೇಶಯಾತ್ರೆಯೆನಬಹುದೆ
ಮೀನದಾಸೆಯ ಬಕನ ಸ್ಥಿತಿ ಧ್ಯಾನವೇ ||
ತೋಳ ಅಡವಿಯ ತಿರುಗಲು ಅದು ದಿಗಂಬರನೆ
ಗಾಳಿಯುಂಬುವ ಭುಜಗ ಉಪವಾಸಿಯೇ
ಆಲದ ಮರಕೆ ಜಡೆಯಿರಲು ಅದು ತಪಸ್ವಿಯೆ
ಕಾಲದಲ್ಲಿಹ ಗೂಗೆ ಹಿರಿಯಾಗಬಹುದೆ ||
ಮಾರಿ ಮನೆಯೊಳಗಿರಲು ಮತ್ತೆ ಸಹಕಾರಿಯೇ
ಊರ ಒಳಗಿನ ಕಳ್ಳ ಅವ ನೆಂಟನೇ
ಜಾರೆಯೆನಿಸುವಳು ಕುಲವನಿತೆಯೇ ಸಂ-
ಸಾರ ಮಗ್ನನಾದವ ಜ್ಞಾನಿಯೇ ||
ಮಂಡೂಕ ಕೂಗಲದು ಮಂತ್ರವೆಂದೆನಬಹುದೆ
ಗುಂಡು ನೀರೊಳಗಿರಲು ಅದು ಸ್ನಾನವೇ
ಪುಂಡರೀಕಾಕ್ಷ ಸಿರಿ ಪುರಂದರವಿಠಲನ್ನ
ಕಂಡು ಭಜಿಸದವ ಪಾಪಿ ಅವ ಮನುಜನೇ ||
***
ಚಿತ್ತ ಶುದ್ಧಿಯಿಲ್ಲದ ಮನುಜ ಜ್ಞಾನಿಯೇ ||ಪ||
ಪಾಪ, ಹೊತ್ತು ಕಳೆಯದಂಥ ನರ ಮನುಜನೆ ||ಅ||
ಬಂಧನದೊಳಿಹ ವ್ಯಾಘ್ರ ಅದು ಬಹು ತಪಸ್ವಿಯೇ
ಸಿಂಧುವಿನೊಳಿಹ ನೊರೆ ಸಿತಕರಣವೇ
ಅಂಧಕನು ಕಣ್ಣು ಮುಚ್ಚಲು ಯೋಗಸಾಧನವೇ
ಮಂದಮತಿ ಸುಮ್ಮನಿರಲದು ಮೌನವೆ ||
ಶ್ವಾನ ಬೂದಿಯೊಳಿರಲು ಶಿವಭಕ್ತನೆನಬಹುದೆ
ಕಾನನದೊಳಿಹ ಕಾಗೆ ವನವಾಸಿಯೇ
ಗಾಣ ತಿರುಗಲೆತ್ತು ದೇಶಯಾತ್ರೆಯೆನಬಹುದೆ
ಮೀನದಾಸೆಯ ಬಕನ ಸ್ಥಿತಿ ಧ್ಯಾನವೇ ||
ತೋಳ ಅಡವಿಯ ತಿರುಗಲು ಅದು ದಿಗಂಬರನೆ
ಗಾಳಿಯುಂಬುವ ಭುಜಗ ಉಪವಾಸಿಯೇ
ಆಲದ ಮರಕೆ ಜಡೆಯಿರಲು ಅದು ತಪಸ್ವಿಯೆ
ಕಾಲದಲ್ಲಿಹ ಗೂಗೆ ಹಿರಿಯಾಗಬಹುದೆ ||
ಮಾರಿ ಮನೆಯೊಳಗಿರಲು ಮತ್ತೆ ಸಹಕಾರಿಯೇ
ಊರ ಒಳಗಿನ ಕಳ್ಳ ಅವ ನೆಂಟನೇ
ಜಾರೆಯೆನಿಸುವಳು ಕುಲವನಿತೆಯೇ ಸಂ-
ಸಾರ ಮಗ್ನನಾದವ ಜ್ಞಾನಿಯೇ ||
ಮಂಡೂಕ ಕೂಗಲದು ಮಂತ್ರವೆಂದೆನಬಹುದೆ
ಗುಂಡು ನೀರೊಳಗಿರಲು ಅದು ಸ್ನಾನವೇ
ಪುಂಡರೀಕಾಕ್ಷ ಸಿರಿ ಪುರಂದರವಿಠಲನ್ನ
ಕಂಡು ಭಜಿಸದವ ಪಾಪಿ ಅವ ಮನುಜನೇ ||
***
pallavi
citta suddiyillada manuja jnAniyE
anupallavi
pApa hottu kaLeyadanda nara manujane
caraNam 1
bandhanadoLiha vyAghra adu bahu tapasviyE sindhuvinoLiha nore sitakiraNavE
andhakanu kaNNu muccalu yOga sAdhanavE mandamati summaniraladu maunave
caraNam 2
shvAna bUDiyoLiralu shivabhaktanena bahude kAnanadoLiha kAge vanavAsiyE
kANa tirugalettu dEsha yAtreyena bahude mInadAseya bakana saddhi dhyAnavE
caraNam 3
tOLa aDaviya tirugalu adu digambarane kALiyumbuva bhujaga upavAsiyE
Alada marake jaDeyiralu adu tapasviye kAladalliha kUGe hariyAga bahude
caraNam 4
mAri maneyoLagiralu matte sahakAriyE Ura oLagina kaLLa ava neNTanE
jAreyenisuvaLu kulavaniteyE samsAra magnanAdava jnAniyE
caraNam 5
maNDUka kUgaladu mantravendena bahude guNDu nIroLgiralu adu snAnavE
puNDarIkAkSa siri purandara viTTalanna kaNDu bhajisadava pApi ava manujanE
***
ಚಿತ್ತಶುದ್ಧಿ ಇಲ್ಲದವ ಅವ ಜ್ಞಾನಿಯೆ ಪಾಪ-
ಪೊತ್ತು ಕಳೆಯದಲಿರುವ ಅವ ಮನುಜನೇ ॥ ಪಲ್ಲವಿ ॥
ಬಂಧನದೊಳಿಹ ವ್ಯಾಘ್ರ ಬಹುತಪಸಿಯಾಗಲುಬಹುದೆ
ಸಿಂಧುವಿನೊಳಿಹ ನೊರೆಯು ಸಿತಕಿರಣನೆ
ಅಂಧಕನು ಕಣ್ಣಮುಚ್ಚಿರಲದು ಧ್ಯಾನವೆ
ಮಂದಮತಿ ಸುಮ್ಮನಿರಲದು ಮೌನವೇ ? ॥ ೧ ॥
ಶ್ವಾನ ಬೂದಿಯೊಳಿರಲು ಶಿವಭಕ್ತನೆನಬಹುದೆ
ಕಾನನದೊಳಿಹ ಕಾಗೆ ವನವಾಸಿಯೆ
ಗಾಣ ತಿರುಗಲು ಎತ್ತು ಯಾತ್ರೆ ಎನಬಹುದೆ ಬಕ-
ಧ್ಯಾನಮಾಡಲು ಅದುವೆ ಮೋಕ್ಷಸಾಧನವೇ ? ॥ ೨ ॥
ಮಂಡೂಕ ಕೂಗಲದು ಮಂತ್ರವೆನ್ನಲಿಬಹುದೆ
ಗುಂಡು ನೀರೊಳಗಿರಲು ಅದು ಸ್ನಾನವೆ
ಪುಂಡರೀಕಾಕ್ಷ ಸಿರಿ ಪುರಂದರವಿಠಲನ್ನ
ಕಂಡು ಭಜಿಸದ ಪಾಪಿ ಅವ ಮನುಜನೆ ॥ ೩ ॥
ಏನೆಲ್ಲಾ ಧನ, ಜ್ಞಾನ, ಜನರಲ್ಲಿ ಮನ್ನಣೆಗಳು ಇದ್ದರೂ ಚಿತ್ತಶುಧ್ಧಿ ಇಲ್ಲದ, ತನ್ನ ಪಾಪವನ್ನು ಕಳೆದುಕೊಳ್ಳಲು ಕಿಂಚಿತ್ತಾದರೂ ಪ್ರಯತ್ನಮಾಡದೇ ಸುಮ್ಮನಿದ್ದವನಲ್ಲಿ ಮನುಷ್ಯತ್ವದ ಲೋಪವಿದೆ ಎಂದು ತೋರಿಕೊಡುವ ಪದ.
ಇದರಲ್ಲಿ ವಿಶೇಷವಾಗಿ ಪ್ರಾಣಿಗಳನ್ನು ತೆಗೆದುಕೊಂಡಿದ್ದಾರೆ. ಅವುಗಳ ಗುಣಗಳನ್ನು ಹಿಡಿದು ಮನುಷ್ಯರ ಗುಣಗಳನ್ನು ಸಮತುಲನೆ ಮಾಡುತ್ತಾ, ನಮ್ಮಲ್ಲಿನ ಆಯಾ ಜೀವಕ್ಕೆ ಸಂಬಂಧಿಸಿದ ಗುಣಗಳನ್ನು ಗಣನೆ ಮಾಡುತ್ತ ಅರ್ಥಮಾಡುತ್ತಾ ಹೋದರೇ ಇನ್ನೂ ಅದ್ಭುವಾಗಿರುತ್ತದೆ. ಆದರೆ ಇಲ್ಲಿ ಮೇಲ್ನೋಟದ , ಹಾಗೂ ಸಂಕ್ಷಿಪ್ತ ಅರ್ಥವನ್ನು ಮಾತ್ರ ಇಂದು ಬರೆಯಲಾಗಿದೆ.
ಶ್ರೀ ಗೋಪಾಲದಾಸಾರ್ಯರು ತಮ್ಮ ಒಂದು ಸುಳಾದಿಯಲ್ಲಿ
ಉರಗನಂದದಿ ಗುಣವುಳ್ಳ ಪುರುಷ ನೀನು
ಹರಿಯೆ ನೀ ಮಾರ್ಜಾಲನಂದದಿ ಗುಣದವ
ಸರಿ ಬಿಡು ಮೂಷಕಗುಣವುಳ್ಳವ ನೀನು
ಗರುಡನಂಥವ ನೀನು ವರಕಪಿಗುಣದವ
ಕರಿಯಂಥವ ನೀನು ಕಪ್ಪೆಯಂಥವ ನೋಡು
ಪರಿಪೂರ್ಣ ನಿರ್ದೋಷ ಗೋಪಾಲವಿಠ್ಠಲ
ಸರಿಹೋದಂತಾಡುವೆ ಸಲಿಗೆಯಿಂದಲಿ ನಾ
ಎಂದು ಪರಮಾತ್ಮನನ್ನೂ ಹಾವು, ಬೆಕ್ಕು, ಇಲಿ, ಗರುಡ , ಕಪಿ ಹೀಗೆ ಹೋಲಿಸುತ್ತಾರೆ. ಇದರ ಅರ್ಥ ಬೇರೆ . ಅವು ಪರಮಾತ್ಮನ ಅಪಾರ ಗುಣಗಳನ್ನು ತಿಳಿಸುವಂತದ್ದು. ( ಸರ್ಪಕ್ಕೆ ಯಾಕೆ ಹೋಲಿಸಿದ್ದಾರೆ - ಹಾವು ಹೇಗೆ ತಾನಿಟ್ಟ ಮೊಟ್ಟೆಗಳನ್ನು ತಾನೇ ತಿಂದು ಹಾಕುತ್ತದೆಯೋ ಹಾಗೆಯೇ ಪರಮಾತ್ಮ ಸೃಷ್ಠಿಮಾಡಿ ಮತ್ತೆ ಎಲ್ಲವನ್ನೂ ನಾಶಮಾಡಿ ತನ್ನ ಉದರದಲ್ಲಿ ಇಡುತ್ತಾನೆ ಆದಕ್ಕೆ ಸರ್ಪಕ್ಕೆ ಹೋಲಿಸಿದ್ದಾರೆ, )
ಆ ಸುಳಾದಿಯ ವಿವರವನ್ನು ಎಂದಾದರೂ ನೋಡೋಣ. ಇಲ್ಲಿ ಪಾಪವನ್ನು ಪೊತ್ತ ಮನುಷ್ಯತ್ವವನ್ನು ಕಳೆದುಕೊಳ್ಳದಿರುವ ಮನುಷ್ಯನ ಗುಣಚಿಂತನೆಯನ್ನು ಮಾಡಿದ್ದಾರೆ ಶ್ರೀಮತ್ಪುರಂದರದಾಸಾರ್ಯರು.
ಉದಾಹರೆಣೆಗೆ- ...
ಬಂಧನದೊಳಿಹ ವ್ಯಾಘ್ರ ಬಹುತಪಸಿಯಾಗಲುಬಹುದೆ - ಮನುಷ್ಯನಲ್ಲಿನ ಕ್ರೌರ್ಯವನ್ನು ಅವನು ಎಷ್ಟೇ ದಿನ ಬಂಧಿಸಿದರೂ ಆತನ ನಿಜವಾದ ಗುಣ ಹೊರಗ ಬಂದೇ ಬರುತ್ತದೆ.
ಸಿಂಧುವಿನೊಳಿಹ ನೊರೆಯು ಸಿತಕಿರಣನೆ - ಮನುಷ್ಯ ತನ್ನ ಸ್ವಭಾವವನ್ನು ಮರೆಮಾಚಿ ಎಲ್ಲರೆದುರಿಗೆ ಮಚ್ಚೆ ಇಲ್ಲದೆ ಇದ್ದರೂ ಆತನು ಶ್ರೇಷ್ಠನಾಗಲಾರನು. ಹೀಗೆ ಇಲ್ಲಿ ಕೊಟ್ಟ ಪ್ರತಿಯೊಂದು ಪ್ರಾಣಿಯ ಗುಣವೂ ನಮ್ಮೊಳಗಿನ ಗುಣಗಳಿಗೆ ಅನ್ವಯ ಮಾಡುತ್ತಾ ಹೋದಾಗ ನಾವು ಮಾಡುವ ಪಾಪಗಳ ಅರಿವು ನಮಗಾಗುತ್ತದೆ. ಹೀಗೆ ಎಲ್ಲ ನುಡಿಗಳನ್ನೂ ನಾವು ನೋಡಬಹುದು.
ಬಂಧಿಸಿಬಿಟ್ಟರೆ ಹುಲಿ ಸಾಧುಜಂತುವಾಗುವುದೂ ಇಲ್ಲ (ತಪಸಿಯಾಗಲುಬಹುದೆ), ಸಮುದ್ರದಲ್ಲಿನ ನೊರೆ ಬಿಳಿವರ್ಣದಲ್ಲಿದ್ದಮಾತ್ರಕ್ಕೆ ಅದು ಸಿತಕಿರಣನು - ಚಂದ್ರ ಆಗಲಾರನು, ಕಣ್ಣಿಲ್ಲದವನು ಕಣ್ಣುಮುಚ್ಚಿದರೆ ತೆರೆದರೆ ದೃಷ್ಣಿ ಕಾಣದಿದ್ದಾಗ ಅದನ್ನು ಧ್ಯಾನವೆಂದು ಕರಿಯಲಾಗದು. ಬುದ್ಧಿಹೀನನಾದವನು ಮಾತನಾಡದೇ ಸುಮ್ಮನಿದ್ದಲ್ಲಿ ಅದು ಮೌನವೆಂದೆನಿಸಿಕೊಳ್ಳದು.
ನಾಯಿಯು ಬೂದಿಯೊಳಗೆ ಹೊರಳಾಡಿದಷ್ಟುಮಾತ್ರಕ್ಕೆ ಶಿವಭಕ್ತನಾಗಲು ಸಾಧ್ಯವೇ? ಕಾಡಿನಲ್ಲಿ ಕಾಗೆ ವಾಸಮಾಡುತ್ತಿದ್ದರೆ ಅದು ವನವಾಸಕ್ಕೆ ಹೋದಂತೆ ಅಲ್ಲ. ಎಣ್ಣೆಯನ್ನು ತೆಗೆಯಲು ಉಪಯೋಗಿಸುವ ಗಾಣ ತಿರುಗಲು ಕಟ್ಟುವ ಎತ್ತು ತಿರುಗುವುದಂತೂ ತೀರ್ಥಯಾತ್ರೆ ಎನಿಸಿಕೊಳ್ಳುವುದಿಲ್ಲ. ಬಕ(ಕೊಕ್ಕರೆ) ಮೀನನ್ನು ತಿನ್ನಲು ಕಾಲು ಎತ್ತಿ ಕಾಯುವುದನ್ನು ನೋಡಿ ಅದು ಮೋಕ್ಷಸಾಧನೆಗೆ ಧ್ಯಾನ ಮಾಡುತ್ತಿದೆ ಎಂದು ತಿಳಿಯಲಾಗುವುದೂ ಇಲ್ಲ
ಮಂಡೂಕ (ಕಪ್ಪೆ) ಕೂಗುವುದು ಮಂತ್ರವಾಗುವುದೂ ಇಲ್ಲ, ಕಲ್ಲುಗಳು ನೀರಿನಲ್ಲಿದ್ದಮಾತ್ರಕ್ಕೆ ಅದು ಸ್ನಾನವಾಗುವುದೂ ಇಲ್ಲ, ಇವೆಲ್ಲವೂ ಎಷ್ಟು ವ್ಯರ್ಥವಾದುವೋ ಅದೇ ರೀತಿ ಪರಮಾತ್ಮನನ್ನು ಕಂಡು ಭಜಿಸದವನು ಪಾಪಿ ಅಂತಾರೆ. ಕಂಡು ಅಂದರೆ ಯಾವುದೋ ಒಂದು ವಿಗ್ರಹದಲಿ, ಕಲ್ಲಿನಲಿ, ದೇವಸ್ಥಾನದಲಿ ಕಾಣೋದಲ್ಲ. ಬಿಂಬನಾಗಿ ನಮ್ಮೊಳಗೆ ನಾವು ಕಾಣುವುದನ್ನು ಇಲ್ಲಿ ಪರಮಾತ್ಮನನ್ನು ಕಂಡು ಭಜಿಸದ ಪಾಪಿಯಾದವನು ಮನುಷ್ಯನೇ ಅಲ್ಲ ಎಂದು ಉದ್ಗಾರ ತೆಗಿತಾರೆ ನಮ್ಮ ನಾರದಾವತಾರಿಗಳು ಇಷ್ಟು ಉದಾಹರಣಗಳಿಂದ ತಿಳಿಸಿದ್ದು ಯಾಕೆ ಅಂದರೆ ಇದರಲ್ಲಿ ಪ್ರಾಣಿಗಳು, ಜಡ ವಸ್ತುಗಳನ್ನೂ ವಿಶೇಷವಾಗಿ ತಿಳಿಸಿದ್ದಾರೆ. ಆ ಯೋನಿಗಳನ್ನೆಲ್ಲ ದಾಟಿ ಬಂದು ಪವಿತ್ರವಾದ ವೈಷ್ಣವಜನ್ಮವನ್ನು ಹೊಂದಿದ್ದ ನಾವುಗಳು ಪಾಪವನ್ನು ಮಾಡಬಾರದು ಹೌದು, ಮಾಡಬೇಕಾದರೆ ಎಚ್ಚರದಲ್ಲಿದ್ದು ಆ ಪಾಪ ನಡೆಯದಂತೆ ನೋಡಿಕೊಳ್ಳಲೂ ಬೇಕು. ಗೊತ್ತಿಲ್ಲದೆ ನಡೆದ ಪಾಪಗಳಿಗೆ (ನಾವು ನಡೆಯುವಾಗ ಅನೇಕ ಕಣ್ಣಿಗೆ ಕಾಣದ ಜೀವಗಳನ್ನು ಕೊಲ್ತಿರ್ತೇವೆ, ಗೊತ್ತಿಲ್ಲದೆ ಇತರರಿಗೆ ನೋವು ಕೊಟ್ಟಿರ್ತೇವೆ ಇತ್ಯಾದಿ) ಪ್ರಾಯಶ್ಚಿತ್ತರೂಪವಾದ ಪಾರಾಯಣ , ನಾಮ ಜಪ ಇತ್ಯಾದಿ ಮಾಡಿ ಆದರೂ ಆ ಪಾಪಗಳನ್ನು ಕಳೆದುಕೊಂಡರೆ ಮಾತ್ರ ನಮ್ಮ ಮನುಷ್ಯ ಜನ್ಮ ಸಾರ್ಥಕ ಅಂತಾರೆ.
ಇಲ್ಲಿ ಕೊನೆಯಲ್ಲಿ ಶ್ರೀನಿವಾಸ , ರಾಮ, ಕೃಷ್ಣ , ವೇದವ್ಯಾಸ ಹೀಗೆಲ್ಲ ಯಾಕೆ ದೇವರ ಇತರ ನಾಮಗಳನ್ನು ತೆಗೆದುಕೊಳ್ಳದೆ ಪುಂಡರೀಕಾಕ್ಷ ಎನ್ನುವ ಪದವನ್ನು ತೆಗೆದುಕೊಂಡರು ಅನ್ನುವುದಕ್ಕೂ ವಿಶೇಷತೆ ಇದೆ.
ಪುಂಡರೀಕಾಕ್ಷ - ಪುಂಡರೀಕ ಎಂದರೆ ಬಿಳಿಯ ತಾವರೆ - ತಾವರೆಯ ರೆಕ್ಕೆಗಳಂತೆ ಕಣ್ಣುಗಳುಳ್ಳ ಪರಮಾತ್ಮ - ತಾವರದ ಪತ್ರದ ಮೇಲೆ ನೀರಿನ ಬಿಂದು ಇದ್ದಾಗ ಹೇಗೆ ಅದು ಅಂಟಿಕೊಳ್ಳದೇ ಜಾರಿಹೋಗುತ್ತದೆಯೋ ನಮ್ಮಲ್ಲಿರುವ ಭಗವಂತನಿಗೂ ಸಹ ನಮ್ಮ ಪಾಪಗಳು ಅಂಟಿಕೊಳ್ಳುವುದಿಲ್ಲ ಎಂದು ಸೂಚಿಸಲು ಪುಂಡರೀಕಾಕ್ಷ ಎಂದು ಸೂಚನೆ ಮಾಡಿದ್ದಾರೆ. ಮತ್ತೆ ಕಣ್ಣುಗಳಲ್ಲಿಯೂ ನೀರು ಹಾಗೆ ನಿಂತು ಇರುವುದಿಲ್ಲ ಆಚೆಗೆ ಬಂದೇಬಿಡುತ್ತದೆ ಹಾಗೆಯೇ ನಾವೂ ಸಹ ನಮ್ಮ ಪಾಪಗಳನ್ನು ಪರಿಹರಿಸಿಕೊಳ್ಳಲು ಪಾಪದ ಚ್ಯುತಿ ಇಲ್ಲದ ಅಚ್ಯುತನಾದ ಪುಂಡರೀಕಾಕ್ಷ ಪುರಂದರವಿಠಲನನ್ನು ಶರಣುಹೋಗಲೇಬೇಕು ಎಂದು ಸೂಕ್ಷ್ಮವಾಗಿ ತಿಳಿಸುತ್ತಾರೆ ಶ್ರೀಮತ್ಪುರಂದರದಾಸಾರ್ಯರು.
ಮಡಿ, ಮೈಲಿಗೆ ನಡೆಯುವ ಮಠ ಇತ್ಯಾದಿ ಜಾಗಗಳಲ್ಲಿ ಗೊತ್ತಿಲ್ಲದೆ ಮಡಿಯವರನ್ನು, ಮೈಲಿಗೆಯವರನ್ನು ಮುಟ್ಟಿದ್ದಾಗ ಪುಂಡರೀಕಾಕ್ಷ ಪುಂಡರೀಕಾಕ್ಷ ಎಂದು ಆತನ ನಾಮಜಪ ಮಾಡುತ್ತೇವಲ್ಲವೆ ಅದು ಇದೇ ಅರ್ಥದಲ್ಲೇನೆ.
ಮನಸ್ಸಿನ ಭಾಗ ಚಿತ್ತ.ಮನಸ್ಸಿನಲ್ಲಿ ಬಂದ ವಿಷಯಗಳು ದೀರ್ಘ ಸ್ಮರಣೆ ಮಾಡಿದಾಗ ಅದು ಚಿತ್ತ ಎನಿಸ್ತದೆ. ( ಚಿತ್ತನ್ನಾಮ ದೀರ್ಘ ಸ್ಮರಣಂ ಎಂದು ಶ್ರೀ ಮಂತ್ರಾಲಯ ಪ್ರಭುಗಳು ಅರ್ಥೈಸಿದ್ದಾರೆ) ಅಂದರೆ ಮನಸ್ಸಿನಲ್ಲಿ ಬಂದ ವಿಷಯಗಳು ಅದು ಸಾತ್ವಿಕವಾಗಿರಬೇಕು ಮತ್ತು ಆ ವಿಷಯಗಳ ಕುರಿತೇ ಶ್ರವಣ ಮನನ ನಿಧಿಧ್ಯಾಸನಗಳಿಂದ ಅನೇಕ ಚಿಂತನೆಗಳು ದೀರ್ಘಕಾಲನಡೆದು ಶುದ್ಧವಾದಾಗ ಮಾತ್ರ ಚಿತ್ತಶುದ್ಧತೆ ಎನಿಸುತ್ತದೆ. ಅಂತಹ ವ್ಯಕ್ತಿ ಜ್ಞಾನಿ ಎನಿಸಿಕೊಳ್ಳುತ್ತಾನೆ ಎಂದು ಶಾಸ್ತ್ರಗಳು ತಿಳಿಸಿದ ವಿಷಯವನ್ನೇ ಮೇಲಿನ ಕೃತಿಯಲ್ಲಿ ಶ್ರೀಪುರಂದರ ದಾಸಾರ್ಯರು ತಿಳಿಸಿದ್ದಾರೆ.
ಅದಕ್ಕೇನೆ
ನಿನ್ನ ಚಿತ್ತಕೆ ಬಂದದ್ದೆನ್ನಚಿತ್ತಕೆ ಬರಲಿ
ಅನ್ಯಥಾ ಬಯಕೆಯ ಕೊಡದಿರೋ ಶ್ರೀನಿವಾಸ ದಯಾನಿಧೆ
ಎಂದು ಪರಮಾತ್ಮನನ್ನು ಪ್ರಾರ್ಥಿಸುವ ಬಗೆಯನ್ನು ತಿಳಿಸಿದ್ದಾರೆ ಶ್ರೀ ಗುರುಶ್ರೀಶವಿಠಲರು ಸ್ತುತಿರತ್ನಮಾಲೆಯಲ್ಲಿ.
ಬರೀ ಸ್ಮರಣೆ ಮಾಡಿದರಷ್ಟೇ ಸಾಕಾ ಎಂದರೆ, ಅಲ್ಲ, ಅದರ ಅನುಷ್ಠಾನಗಳೂ ಕೂಡ ಮಾಡಲೇಬೇಕು ಎನ್ನುವುದು ಶ್ರೀ ದಾಸರ ಅಭಿಪ್ರಾಯ. ಇದನ್ನೇ ಶಾಸ್ತ್ರಗಳೂ ಕೂಡ ಆಚಾರ ಅಂದರೆ ಸದಾಚಾರವೇ ಮೊದಲು. ಆಚಾರದಿಂದ ವಿಚಾರ, ವಿಚಾರದಿಂದ ಆಚಾರ ಹೀಗೆ ತಿಳಿಸುತ್ತದೆ. ವಿಚಾರಗಳು ಧೀರ್ಘ ಸ್ಮರಣೆಯಿಂದ ಶುದ್ಧತೆ ಹೊಂದಿ ಜ್ಞಾನ ಆಗಲು ಧ್ಯಾನ, ತಪಸ್ಸು ಮುಂತಾದ ಆಚಾರಗಳು ಬಹಳ ಮುಖ್ಯ. ಅಂತ ತಿಳಿಸುತ್ತಾ ಕೊನೆಗೆ ಚಿತ್ತಶುದ್ಧಿ ಇಲ್ಲದೇ ಜ್ಞಾನ ಇಲ್ಲ, ಜ್ಞಾನ ಇಲ್ಲ ಎಂದರೆ ಭಗವಂತನ ದರ್ಶನ ( ಬಿಂಬ ದರ್ಶನ) ಆಗುವುದಿಲ್ಲ. ಹಾಗಾಗಿ ಕೊನೆಗೆ *ಪುರಂದರವಿಠಲನ ಕಂಡು ಭಜಿಸದ ಪಾಪಿ ಅವ ಮನುಜನೇ *ಅಂತ ಹೇಳಿದಾರೆ. ಇಲ್ಲಿ ಕಂಡು ಎಂದರೆ ಮತ್ತೆ ಅದು ಆ ಚಿತ್ತಶುದ್ಧತೆಯ ಜ್ಞಾನದಿಂದ ಕಾಣುವುದು ಅಂತ ಅಥವಾ ಚಿತ್ತಶುದ್ಧತೆ ಇಲ್ಲದಿದ್ದರೆ ಜ್ಞಾನವೂ ಇಲ್ಲ ಮತ್ತು ಭಗವಂತ ಕಾಣುವುದೂ ಇಲ್ಲ ಅನ್ನುವುದು ಶ್ರೀ ದಾಸರ ಅಭಿಪ್ರಾಯ. ಮನುಜ ಅನ್ನುವ ಪದಪ್ರಯೋಗ ಅನುಪಲ್ಲವಿ ಮತ್ತು ಕೊನೆಯ ಸಾಲಿನಲ್ಲಿ ಯಾಕೆ ಅಂದರೆ ಈ ಸಾಧನೆಗಳೆಲ್ಲವೂ ಮಾಡಿಕೊಳ್ಳಲಿಕ್ಕೆ ( ಪಾಪಪುಣ್ಯಗಳ ಲೇಪಗಳು) ಕೂಡ ಕೇವಲ ಮನುಷ್ಯ ಜನ್ಮಗಳಲ್ಲಿ ಮಾತ್ರ ಅವಕಾಶ. ಪ್ರಾಣಿ ಪಕ್ಷಿಗಳು ಜೀವಿಗಳೇ ಆದರೂ ಅವುಗಳಿಗೆ(ಆ ಜನ್ಮದಲ್ಲಿದ್ದಾಗ ಮಾತ್ರ, ಆದರೆ ಹಿಂದಿನವು ಅನುಭವಿಸಲೇಬೇಕು ಅರ್ಥಾತ್ ಪಾಪಗಳನ್ನು ಅನುಭವಿಸೋಕ್ಕೆ ಮಾತ್ರ ಪ್ರಾಣಿ ಪಕ್ಷಿಗಳ ಜನ್ಮ ) ಪಾಪಪುಣ್ಯಗಳ ಲೇಪವಿಲ್ಲ ಹಾಗಾಗಿ ಪಾಪ ಪೊತ್ತು ಕಳೆಯದಿರುವ ಅವ ಮನುಜನೇ ಎಂದು ತಿಳಿಸಿ ಕೊನೆಯ ಸಾಲಿನಲ್ಲೂ ಭಜಿಸದ ಪಾಪಿ ಅವ ಮನುಜನೇ ಎಂದು ತಿಳಿಸಿದ್ದಾರೆ.
ನುಡಿಗಳಲ್ಲಿ ಪ್ರಾಣಿಗಳಿಗೆ ಹೋಲಿಸಿ ನಾವು ಅನುಸಂಧಾನದಿಂದ ಮಾಡದ ಕಾರ್ಯಗಳು ಪ್ರಾಣಿಪಕ್ಷಿಗಳು ಮಾಡುವ ಕಾರ್ಯಗಳಂತೆ, ಯಾವ ಪ್ರಯೋಜನವೂ ಇಲ್ಲ ಎಂದು ತಿಳಿಸಿ, ಜೀವಿ ಇರುವ ಇವುಗಳ ಕಾರ್ಯಗಳೇ ಸಾಧನೆಗೆ ಕಾರಣಗಳಾಗುವುದಿಲ್ಲ ಎಂದ ಮೇಲೆ, ಜಡಗಳ ಉದಾಹರಣೆಗಳು ಎಂದಿಗೂ ಸಾಧ್ಯವಿಲ್ಲ ಎನ್ನುವುದು ಶ್ರೀ ಪುರಂದರದಾಸರಾಯರ ಅಭಿಪ್ರಾಯ.
ಕೃತಿ ನೋಡಿದ ತಕ್ಷಣ ತುಂಬಾ ಸುಲಭವಾಗಿಯೇ ಅರ್ಥವಾಗುವುದಾದರೂ ಆಳಕ್ಕಿಳಿದಾಗ ಅದರಲ್ಲಿನ ಸುಖ ಅನುಭವಿಸಲೇಬೇಕು. ನಮ್ಮಿಂದ ಯಾವ ಪಾಪಪೂ ಆಗದಿರಲಿ ಯಾರಿಗೂ ನಮ್ಮಿಂದ ನೋವಾಗದಿರಲಿ, ಗುರುಪರಂಪರೆಗೆ, ದಾಸ ಸಾಹಿತ್ಯಕ್ಕೆ, ಶ್ರೀಮದಾಚಾರ್ಯರ ತತ್ವಗಳಿಗೆ, ಶ್ರೀ ವೇದವ್ಯಾಸದೇವರ ವಾಕ್ಯಗಳಿಗೆ ನಮ್ಮಿಂದ ದ್ರೋಹವಾಗದಿರಲಿ ಎಂದು ಬೇಡುತ್ತಲೇ ಇರಬೇಕು. ನಾವೇನು ಶ್ರೀ ವೇದವ್ಯಾಸರಿಗೆ ದ್ರೋಹಮಾಡುತ್ತೇವೆ , ನಾವೇನು ದಾಸ ಸಾಹಿತ್ಯಕ್ಕೆ ಅನ್ಯಾಯ ಮಾಡುತ್ತೇವೆ ಹೀಗೆಲ್ಲ ಪ್ರಶ್ನೆಗಳೂ ಬರಬಹುದು, ನಮಗೆ ಇಷ್ಟಬಂದಂತೆ ಅರ್ಥವನ್ನು ತಿಳಿಯುವುದು ಪಾಪ. ಇಷ್ಟಬಂದಂತೆ ದಾಸರ ಪದಕ್ಕೆ ಧಾಟಿ ಹಾಕುವುದು ದ್ರೋಹ,ಅಂಕಿತನಾಮ ಸಿಕ್ಕಿದೆ ಎಂದು ಕವನ ಬರೆದಂತೆ ಕೃತಿಗಳು ರಚಿಸುವುದೂ ದ್ರೋಹ(ಕೃತಿಗಳೆಂದರೆ ತಾವಾಗಿ ಹೊಳೆಯಬೇಕು, ಯಾವ ಹಬ್ಬ ಬಂದರೂ, ಯಾವ ಆರಾಧನೆ ಬಂದರೂ ಸಂಬಂಧಿತ ಪದ ಬರೆದು ಅರ್ಥವಿಲ್ಲದೆ ಬರೆಯುವುದು ದಾಸರ ಪದ ಎಂದು ಖಂಡಿತ ಎನಿಸಿಕೊಳ್ಳುವುದಿಲ್ಲ) ದಾಸರ ಪದ ಹಾಡುವಾಗ ಚಪ್ಪಲಿಗಳು ಧರಿಸುವುದು, ಸಂಪ್ರದಾಯ ವಸ್ತ್ರ ಉಡದೆ , ಮೇಲೆ ಅಡ್ಡವಸ್ತ್ರವನ್ನೂ ಹಾಕದೆ ವಿಚಿತ್ರವಾದ ರೀತಿಯಲ್ಲಿ ಹಾಡನ್ನು ಹಾಡುವುದೂ ದ್ರೋಹವೇ ಸರಿ. ಹೀಗೆ ಹೇಳುತ್ತಹೋದರೆ ಈಗಿನ ಕಾಲಕ್ಕೆ ನಡೆಯುವುದು ಬಹಳ. ಅವು ಯಾವುದೂ ನಮ್ಮಿಂದ ಆಗದಿರಲಿ ಎಂದು ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಪುಂಡರೀಕಾಕ್ಷನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.
-padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
ರಾಗ ಮುಖಾರಿ. ಝಂಪೆ ತಾಳ
ಚಿತ್ತ ಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.
ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1
ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2
ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3
ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4
ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
******