ankita ಮಂಗಳಾಂಗಹರಿವಿಠಲ
ರಾಗ: ನೀಲಾಂಬರಿ ತಾಳ: ಆದಿ
ಜೋ ಜೋ ಶ್ರೀ ರಾಘವೇಂದ್ರಾರ್ಯ ಗುರುವೇ
ಜೋ ಜೋ ಶ್ರೀ ಮಂತ್ರಾಲಯ ಪ್ರಭುವೆ ಪ
ಜೋ ಜೋ ಆಶ್ರಿತರ ಪೊರೆವ ಸುರತರುವೇ
ಜೋ ಜೋ ಈ ಕಲಿಯುಗದ ವರ ಕಾಮಧೇನುವೇ ಅ.ಪ
ಕರ್ಮಜದೇವತೆ ಶ್ರೀ ಶಂಖುಕರ್ಣ
ಮರ್ಮವನರಿತು ಪಡೆದ ಹರಿಕರುಣ
ಧರ್ಮಮಾರ್ಗದಿ ನಡೆದ ಮಹದಾನಿಕರ್ಣ
ನಿರ್ಮಲಾಂತಃಕರಣ ರಾಶಿ ಅಘ ಹರಣ 1
ಇಂದ್ರಿಯವನಿಗ್ರಹಿಸಿ ಯತಿರಾಜನೆನಿಸಿ
ಚಂದ್ರಿಕಾರ್ಯರೆನಿಸಿ ವಾದಿಗಳ ಜಯಿಸಿದೆ
ಮಂದರಿಗೆ ನಿರ್ದೋಷ ಗ್ರಂಥಗಳ ರಚಿಸಿ
ಸುಂದರಾಂಗ ಸಿರಿಕೃಷ್ಣನ ಒಲಿಸಿ ಮೆರೆದೆ 2
ತುಂಗಭದ್ರಾ ನದಿಯ ತೀರ ವಿಹಾರ
ಪಂಗುಬಧಿರ ಮೂಕರಲಿ ಕರುಣ ಅಪಾರ
ಮಂಗಳಾಂಗಹರಿವಿಠಲನ ಕಿಂಕರ
ರಂಗು ಮಾಣಿಕ್ಯದ ತೊಟ್ಟಿಲೊಳ್ ನಲಿವ ಶ್ರೀ ಗುರುವರ 3
***