ಒಂದು ದಿನ ನಾರದಮುನಿ ಗೋಕುಲದಿ
ಇಂದಿರೇಶನ ಲೀಲೆಯಾ
ನಿಂದು ನಭದಲಿ ನೋಡುತಾ | ಮೈಯುಬ್ಬಿ
ಬಂದನಾ ವೈಕುಂಠಕೆ 1
ಸಿರಿದೇವಿ ಸಖಿಯರೊಡನೆ | ವನದಲ್ಲಿ
ಪರಿಪರಿಯ ಕ್ರೀಡೆಯೊಳಿರೇ
ಅರವಿಂದ ನಯನೆಯನ್ನೂ | ಕಂಡನಾ
ಸುರಮುನಿಯು ಸಂಭ್ರಮದಲೀ 2
ಜಗನ್ಮೋಹನಾಕಾರಳೂ | ಶ್ರೀ ಹರಿಯ
ಜಗ ಸೃಷ್ಟಿಗನುಕೂಲಳೂ
ಬಗೆ ಬಗೆಯವತಾರಳೂ | ಕ್ಷಣ ಹರಿಯ
ಅಗಲದಂತಿರುತಿಪ್ಪಳೂ 3
ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ
ಪರಿಯಲ್ಲಿ ಹರಿಗೆ ಸಮಳೂ
ಶರಣೆಂದವರ ಕಾಯ್ವಳೂ | ಬೊಮ್ಮಾದಿ
ಸುರರ ಸೃಜಿಸುವ ಶಕ್ತಳೂ 4
ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ
ಲೋಕನಾಯಕಿ ರಮಿಸುತಾ
ಶ್ರೀಕಾಂತನಗಲದವಳೂ | ಮುನಿಗೆ ತ
ನ್ನೇಕರೂಪವ ತೋರ್ದಳೂ 5
ನೊಡಿ ನಮಿಸಿದನು ಸಿರಿಯಾ | ಹರಿಗುಣವ
ಹಾಡಿ ಪಾಡಿದನು ಮೈಯ್ಯಾ
ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ
ನೋಡಿದನು ಸಿರಿಯ ದಣಿಯಾ 6
ಪಲ್ಲವಾಧರೆ ನಗುತಲಿ | ತನ್ನ ಕರ
ಪಲ್ಲವದಿ ಕೃಪೆಯ ಮಾಡೀ
ಎಲ್ಲಿಂದ ಬಂದೆ ಮುನಿಪಾ ವಿಷಯವೇ
ನೆಲ್ಲ ಪೇಳೆಂದೆನ್ನಲೂ 7
ಏನ ಪೇಳುವೆನೆ ತಾಯೆ | ನಿನ ಪತಿಯ
ನಾನಾ ವಿಧ ಚರ್ಯೆಗಳನೂ
ನಾನರಿಯಲಾರೆ ನಮ್ಮಾ | ನವನೀತ
ಚೋರನಾಗಿರುವನಮ್ಮಾ 8
ನಾಕ ಭೂಲೋಕ ತಿರುಗೀ | ಭುವಿಯೊಳಗೆ
ನಾ ಕಂಡೆ ಗೋಕುಲವನೂ
ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು
ಆಕಳಾ ಕಾಯುತಿಹನೂ 9
ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ
ದಿಟ್ಟೆ ನಿನ್ನನು ತೊರೆದನೂ
ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ
ಕೆಟ್ಟ ಹೆಂಗಳೆಯರಲ್ಲಿ 10
ನಳಿನಜಾಂಡವ ಸಾಕುವಾ | ಜಗದೀಶÀ
ಕಳುವಿನಲಿ ಹೊಟ್ಟೆ ಹೊರೆವಾ
ನಳಿನಭವ ಸುರವಂದ್ಯನೂ | ಗೋಪಿ ಬೈ
ಗಳನು ತಾ ಕೇಳುತಿಹನೂ 11
ಮದನಮೋಹನರೂಪನೂ | ಗೊಲ್ಲತೆರ
ಅಧರಾಮೃತವ ಸವಿವನೂ
ಎದೆ ಗಂಟು ಪಿಡಿಯುತಿಹನೂ | ಚಂಡೆಂದು
ಗದರಿಸಲು ನುಡಿಯುತಿಹನೂ 12
ಸಂಪೂರ್ಣ ಕಾಮ ತಾನು | ವನದಲ್ಲಿ
ಗುಂಪು ಸ್ತ್ರೀಯರ ಕೂಡ್ವನೂ
ಸಂಪನ್ನ ಭೋಗಿಸುವನೂ | ಕೊಳಲ ಪಿಡಿ
ದಿಂಪುಗಾನವ ಗೈವನೂ 13
ವನದ ಸೊಬಗೇನುಸುರುವೇ | ಶ್ರೀರಮಣಿ
ದನಕರುವ ಕಾಯುತ್ಹರಿಯಾ
ವನವನವ ತಿರುಗುತ್ತಿರೇ | ಕೊಳಲ ಧ್ವನಿ
ವನವೆಲ್ಲ ತುಂಬಿರುತಿರೇ 14
ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ
ಕೊಳಲೂದೆ ಹರಿ ಕೇಳಲೂ
ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ
ಕುಳಿತು ಮೈಮರೆತು ಕೇಳೇ 15
ಓಡಿ ಬರುತಲಿ ತುರುಗಳೂ | ಬಾಲವ
ಲ್ಲಾಡಿಸದೆ ಕಣ್ಣುಮುಚ್ಚಿ
ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ
ಆಡಿಸದೆ ಸರ್ಪ ಹೆಡೆಯಾ 16
ಶೃಂಗಾರ ಕೊಳಲನೂದೆ | ಜಡ ಚೇತ
ನಂಗಳಾಗುತ ಚಿಗುರಲೂ
ಅಂಗ ಮರೆಯುತ ಜೀವಿಗಳ್ | ಜಡದಂತೆ
ಕಂಗಳನುಮುಚ್ಚಿನಿಲ್ಲೆ 17
ಅಷ್ಟ ಐಶ್ವೈರ್ಯದಾತಾ | ನಾರಿಯರ
ತುಷ್ಟಿಪಡಿಸುತಲಿ ಖ್ಯಾತಾ
ಶಿಷ್ಟ ಜನರನು ಪೊರೆಯುತಾ | ರಕ್ಕಸರÀ
ಹುಟ್ಟಡಗಿಸುವನು ವಿಹಿತಾ 18
ಪೇಳಲಳವಲ್ಲವಮ್ಮಾ | ಶ್ರೀ ಹರಿಯ
ಲೀಲೆ ಜಾಲಗಳ ಬ್ರಹ್ಮಾ
ನೀಲಗಳರರಿಯರಮ್ಮಾ | ಆನಂದ
ತಾಳಿದೆನು ಕೇಳೆ ರಮ್ಮಾ 19
ಇಷ್ಟು ಗೋಕುಲದಿ ನೋಡೀ | ಕಾಣದಿ
ನ್ನೆಷ್ಟೋ ಎನ್ನುತಲಿ ಪಾಡೀ
ಗುಟ್ಟು ಪೇಳಲು ಬಂದೆನೂ | ಸಿರಿದೇವಿ
ಸಿಟ್ಟಾಗಬೇಡವಿನ್ನೂ 20
ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ
ಮರೆತು ನಿನ್ನನು ಸುಖಿಸುತಾ
ಇರುವ ಪರಿ ಯೊಚಿಸಮ್ಮಾ | ಆಜ್ಞೆ ಕೊಡು
ತ್ವರಿತದಲಿ ಪೋಪೆನಮ್ಮಾ 21
ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ
ಪರಮ ಆನಂದ ತಾಳೀ
ಬೆರಗಾದ ಪರಿತೋರುತಾ | ಮುನಿವರಗೆ
ಪರಿ ಏನು ಮುಂದೆ ಎನಲೂ 22
ಸನ್ನುತಾಂಗನ ಕೂಡಲೂ | ಭೂತಳದಿ
ಇನ್ನೇನುಪಾಯವೆನಲೂ
ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ
ಇನ್ನು ನೀ ಕುವರಿ ಎನಿಸೂ 23
ಎಂತೆಂತು ಹರಿಯಚರ್ಯೆ | ಸಿರಿಕಾಂತೆ
ಅಂತಂತು ನಿನ್ನ ಚರ್ಯೆ
ಸಂತೋಷಪಡಿಸಿ ಎಮ್ಮಾ | ಸಲಹಮ್ಮ
ಶಾಂತೆ ನಾ ಪೋಪೆನಮ್ಮಾ 24
ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ
ಹತ್ತಿರದಿ ನಭದಿ ನಿಂದೂ
ಸುತ್ತು ಮುತ್ತಲೂ ನೊಡಲೂ | ಸಿರಿದೇವಿ
ವ್ಯಾಪ್ತಳಾಗಲ್ಲಿ ಇರಲೂ 25
ವನದಿ ಹರಿವಕ್ಷದಲ್ಲೀ | ಸಿರಿದೇವಿ
ಘನ ವೇಣೂರೂಪದಲ್ಲೀ
ವನಲಕ್ಷ್ಮೀರೂಪದಲ್ಲೀ | ಗೋಪಿಯರ
ಪ್ರಣಯ ಪ್ರಕಾಶದಲ್ಲೀ 26
ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ
ಎಲ್ಲೆಲ್ಲಿ ವೈಭವಗಳೋ
ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ
ಅಲ್ಲಲ್ಲಿ ತಾನಿರುತಿರೆ 27
ಬೆರಗಾದ ನೋಡಿ ಮುನಿಪಾ | ಸಿರಿ ಹರಿಯ
ಚರಿಯ ನೊಡಿದ ಪ್ರತಾಪಾ
ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು
ಸಿರಿ ಹರಿಗೆ ಸ್ತೋತ್ರಗೈದಾ 28
ಸಿರಿಹರಿ ವಿಯೋಗವಿಲ್ಲಾ | ಆವಾವÀ
ಪರಿ ಕಾಲ ದೇಶದಲ್ಲೀ
ಅರಿಯದe್ಞÁನ ನುಡಿಯಾ | ಮನ್ನಿಸೋ
ಕರುಣಾಳು ಕಳೆಯೊ ಮಾಯಾ 29
ಜಯ ಜಯತು ಜಗದೀಶನೆ | ಲಕ್ಷ್ಮೀಶ
ಜಯ ಜಯತು ಸುರವಂದ್ಯನೇ
ಜಯ ಜಯತು ದುಷ್ಟಹರಣ | ಗುಣ ಪೂರ್ಣ
ಜಯ ಜಯತು ಶಿಷ್ಟ ಶರಣಾ30
ಸ್ತುತಿಸುತಂಬರಕಡರಿದಾ | ಸುರಮುನಿಪ
ಚ್ಯುತದೂರನತಿ ವಿನೋದಾ
ಪತಿತರನು ಕಾಯ್ವ ಮೋದಾ | ಸುಖತೀರ್ಥ
ಯತಿಗೊಲಿದು ಉಡುಪಿಲ್ನಿಂದಾ 31
ಆಪಾರ ಮಹಿಮ ಶೀಲಾ | ಸರ್ವೇಶ
ಗೋಪಿಕಾ ಜನ ವಿಲೋಲಾ
ಆಪನ್ನ ಜನರ ಪಾಲ | ಗುರುಬಿಂಬ
ಗೋಪಾಲಕೃಷ್ಣವಿಠಲಾ 32
***