ದ್ರೋಹಿಯೋ ನಾನಿನಗೆ ದ್ರೋಹಿಯೋ ಪ
ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ
ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ
ಗೊಪ್ಪ ತೈಜಸ ವಿಶ್ವ ಅಪ್ಪತುರೀಯನಾಗಿ
ತಪ್ಪದೆ ಸಲಹುವ ದಾತ ನಿನ್ನನ್ನು ಬಿಟ್ಟು
ಬೆಪ್ಪನಂದದಿ ನರರ ಯೆಂಜಲ ಬಯಸುವೆ 1
ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ
ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ
ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ
ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2
ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ
ಹಿತರವರು ಬರಿದೆಂಬ ಭ್ರಾಂತಿಯ ನೀಗದೆ
ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ
ಗತಿಯೇನು ಜಗದೀಶ ಮರೆತು ನಿನ್ನನು ದೇವ 3
ಕಸವ ರಸವೆಂದು ಬಯಸುವೆ ವಿಷಯವ
ರಸವ ವಿಷವೆಂದು ತೊರೆದು ಜೀವಿಸುತಿರ್ಪೆ
ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ
ತುಸಸಹ ನೆನೆಯದೆ ಹುಸಿಯ ದಾಸನಾಗಿ 4
ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ
ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ
ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ
ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5
ವೇದ ವೋದುವ ನಾನು ನಾನೆನೀನೆಂಬುವೆ
ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ
ಬಾದರಾಯಣಗುದರ ಭೇದವ ನುಡಿಯುವೆ
ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6
ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು
ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು
ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು
e್ಞÁನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7
ಜನನ ಮರಣ ರಹಿತ ಜನಿಸುವೆ ನಮ್ಮೊಡನೆ
ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ
ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ
ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8
ದಾರಿತಪ್ಪಿ ನಡೆದು ನಿರಯ ಭಾಜನ ನಾದೆ
ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ
ಧೀರ ಜಯತೀರ್ಥ ವಾಯು ಅಂತರದಿರ್ಪ
ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
****