Showing posts with label ಬಂದದೆ ಎನಗೆ ಬರಿದೆ ದೂರು ಬಂದೊಂದು vijaya vittala. Show all posts
Showing posts with label ಬಂದದೆ ಎನಗೆ ಬರಿದೆ ದೂರು ಬಂದೊಂದು vijaya vittala. Show all posts

Wednesday, 16 October 2019

ಬಂದದೆ ಎನಗೆ ಬರಿದೆ ದೂರು ಬಂದೊಂದು ankita vijaya vittala

ವಿಜಯದಾಸ
ಬಂದದೆ ಎನಗೆ ಬರಿದೆ ದೂರು
ಬಂದೊಂದು ಅವಗುಣದವನೆಂಬೊ ಮಾತು ಪ

ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು
ತಾಮಸ ಬುದ್ಧಿ ವಿಶೇಷವಾಗಿ
ಕಾಮುಕವಾಗಿ ನಡವಳಿ ನಡಸಿದ ಈ
ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ 1

ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ
ನನ್ನ ನಿನ್ನದು ಎಂಬೊ ಬಡದಾಟವು
ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ
ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ 2

ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ
ವನುರುತರ ರೂಪಿಗೆ ಸೋತು ಆತು
ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ
ತನವು ಮಾಡಿದಾತಾ ಕೃಷ್ಣನೊ ನಾನೊ 3

ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು
ಪ್ರೀತಿಯಲಿ ಅತಿಥಿಗಳ ವಂದಿಸದೆ
ಯಾತಕ್ಕೆ ಬಾರದಾ ಚರಿತೆ ನಡೆವಂಥ
ಚೇತನ ಕಲ್ಪಿಸಿದ ಕೃಷ್ಣನೊ ನಾನೊ 4

ಆವಾವ ದುಷ್ಕರ್ಮಗಳ ಮಾಡಿ ಉತ್ತಮ
ದೇವ ಬ್ರಾಹ್ಮಣರ ಪೂಜಿಸಲಿಲ್ಲವು
ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ
ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ 5
*********