ವಂದಿಪೆ ಹರಿಹರನೇ | ನಿನಗೆ ನಾ
ವೃಂದಾರಕನುತನೇ ಪ.
ಬಂದು ಈ ಕ್ಷೇತ್ರದಿ ನಿಂದು ಸದ್ಭಕ್ತರ
ಛಂದದಿ ಪೊರೆಯುವ ಸುಂದರ ಮೂರ್ತಿ ಅ.ಪ.
ಚತುರ ಹಸ್ತದಿಂದಾ | ಶೋಭಿಸೆ
ಅತಿ ಕೌತುಕದಿಂದಾ
ಪತಿತಪಾವನ ಪಾದ ಕಮಲಜನ
ತತಿಗೆ ತೋರದಂತೆ ಕ್ಷಿತಿಯಲಡಗಿದೇ 1
ಸೋಮಶೇಖರವಂದ್ಯಾ | ಆರ್ಧದ
ಲಾಮಹ ಹರನಿಂದಾ
ಪ್ರೇಮದಿ ಕೂಡಿಕೊಂಡೀ ಮಹಿ ಜನರಿಗೆ
ನೀಮೋಹಕ ತೋರುವ ಜಗದ್ವಂದ್ಯಾ 2
ಪಾಪಿಗುಹನವರವಾ| ಕೆಡಿಸಲು
ಈ ಪರಿಯಲಿ ದೇವಾ
ರೂಪಧರಿಸಿ ತಾಮಸರಿಗಂಧಮತಮ
ಕೂಪದಿ ಕೆಡಹುವೆ ಶ್ರೀ ಮೋಹಿತ 3
ಅರ್ಧಹರನ ರೂಪಾ| ಕೃತಿಯಲಿ
ಶುದ್ಧ ವಿಷ್ಣು ರೂಪಾ
ಮುದ್ದು ಸುರಿವ ಭವ್ಯಾಂಗ ಸ್ವರೂಪ
ಉದ್ಧರಿಸೆನ್ನನು ಶುದ್ಧ ಬುದ್ಧಿಮತಿಯನಿತ್ತು 4
ಶಂಖಚಕ್ರ ಅಭಯಾ| ತ್ರಿಶೂಲವ
ಬಿಂಕದಿ ಧರಿಸಿದೆಯಾ
ಪಂಕಹೋದ್ಭವೆ ಪಾರ್ವತಿಯ ಉಭ
ಯಾಂಕದಲ್ಲಿ ಪೊಂದಿಹೆ ಶುಭಕಾಯಾ 5
ಅರ್ಧಶಿರದಿ ಮಕುಟಾ| ಆರ್ಧದಿ
ಶುದ್ಧಗಂಗೆ ತ್ರಿಜಟಾ
ಅರ್ಧಚಂದ್ರ ಶೋಭಿಸುತಿದೆ ಜಗತ್ತಿಗೆ
ಅದ್ಭುತ ಅಚ್ಚರಿ ರೂಪಧಾರಕ 6
ಪಣೆಯ ತಿಲಕ ಢಾಳಾ | ಕಂಠಾಭ
ರಣಗಳು ಪೂಮಾಲಾ
ಮಿನುಗುವವಲ್ಲಿ ಪೀತಾಂಬರನುಟ್ಟಿಹ
ಗುಣಗಣ ಪೂರ್ಣನೆ ಹನುಮನಯ್ಯ ಹರಿ7
ನಿನ್ನವರಿಗೆ ಮಾಯಾ | ಕವಿಸದೆ
ಇನ್ನು ಕಾಯೊ ಜೀಯಾ
ಘನ್ನ ಭಕ್ತಿ ಸುe್ಞÁನ ವೈರಾಗ್ಯವ
ಮನ್ನಿಸಿ ಕರುಣಿಸಿ ನಿನ್ನ ಪದವಿ ಕೊಡು 8
ಹರನೊಳು ಹರ ಶಬ್ದಾ | ವಾಚ್ಯನೆ
ಸಿರಿವರ ನಿರವದ್ಯಾ
ಸರ್ವ ಶಬ್ದ ಸುರವಾಚ್ಯ ಈ ಪರಿಯೊಳು
ಹರಿಹರ ಕ್ಷೇತ್ರದಿ ವರಗೃಹ ಮಾಡಿದಿ 9
ತುಂಗಭದ್ರ ತೀರಾ | ವಾಸನೆ
ರಂಗ ಪಾಪ ದೂರಾ
ಮಂಗಳ ಗೋಪಾಲಕೃಷ್ಣವಿಠಲ
ಭವಹಿಂಗಿಸಿ ಪೊರೆ ದುಸ್ಸಂಗ ಬಿಡಿಸಿ ಹರಿ 10
****