ನಾಟ್ಯವಾಡಿದ ನಮ್ಮ ನಾರಸಿಂಹನ ಭಕ್ತ
ಶಿಷ್ಟೇಷ್ಟ ಜನಪ್ರಿಯ ಶ್ರೀ ಪಾರ್ವತೀಶ ಪ.
ಪರಮ ಸಂತೋಷದಲಿ ಉದಯಸ್ತ ಪರಿಯಂತ
ಸಿರಿವರ ರಾಮನ ಪರಮ ನಾಮಾಮೃತವ
ತರುಣಿ ಗಿರಿಜೆಗೆ ಅರುಹಿ ಮರೆದು ತನುಮನವನ್ನು
ಉರುತರದ ಭಕ್ತಿಯಿಂ ಪರಮ ವೈರಾಗ್ಯನಿಧಿ 1
ತರತಮ್ಯ ಜಗಸತ್ಯ ಹರಿಯು ಸರ್ವೋತ್ತಮನು
ಸಿರಿಯು ಅನಂತರದಿ ವಾಯು ಜೀವೋತ್ತಮನು
ಪರಮ ವೈರಾಗ್ಯ ಹರ ವೈಷ್ಣವೊತ್ತಮನೆನುತ
ಉರವಣಿಸಿ ನುಡಿಯುವರ ನುಡಿ ಕೇಳಿ ಹರುಷದಿ 2
ಗೋಪಾಲಕೃಷ್ಣವಿಠಲ ತಾ ಪ್ರೀತಿಯಿಂದಲಿ
ಗೋಪತನಯರನೆಲ್ಲ ಸಲಹಲೋಸುಗದಿ
ಪಾಪಿ ಕಾಳಿಂಗನ ಫಣೆಯಲ್ಲಿ ಕುಣಿದುದು
ಈ ಪರಿ ಎಂದೆನುತ ತಾ ಪ್ರೀತಿಯಿಂ ತೋರಿ 3
****