Showing posts with label ಉಗಾಭೋಗ ugabhoga ankita shree krishna. Show all posts
Showing posts with label ಉಗಾಭೋಗ ugabhoga ankita shree krishna. Show all posts

Tuesday, 9 March 2021

ಉಗಾಭೋಗ ugabhoga ankita shree krishna

ವ್ಯಾಸರಾಜರ ಉಗಾಭೋಗ

ವ್ಯಾಸರಾಜರ ಉಗಾಭೋಗ

ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ಗೋಪೀಜನಜಾರನೆಂದರೆ ಸಾಲದೆ?
ಚೋರತ್ವವನು ಮಾಡಿದ ಪಾಪಗಳಿಗೆಲ್ಲಾ ನವನೀತ-
ಚೋರನೆಂದರೆ ಸಾಲದೆ?
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲಾ
ಮಾವನ ಕೊಂದವನೆಂದರೆ ಸಾಲದೇ?
ಪ್ರತಿದಿನದಿ ಮಾಡಿದ ಪಾಪಗಳಿಗೆಲ್ಲಾ
ಪತಿತಪಾವನನೆಂದರೆ ಸಾಲದೆ?
ಇಂತಿಪ್ಪ ಮಹಿಮೆಯೊಳಗೊಂದನಾದರೂ ಸರಿಯೆ ನಮ್ಮ
ಸಂತತ ನೆನಹುವರ ಸಲಹುವನು ಸಿರಿಕೃಷ್ಣ


ಎನ್ನ ಎಂಜಲನುಂಡು, ನಿನ್ನ ಬೆಳ್ಳುಡೆಯುಟ್ಟು
ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ
ನಿನ್ನ ಓಲೈಸಲೇಕೋ ಕೃಷ್ಣ
ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು
ನಿನ್ನ ಓಲೈಸಲೇಕೋ ಕೃಷ್ಣ
ದಿನಕರನುದಿಸಿ ಕತ್ತಲೆ ಪೋಗದಿದ್ದರೆ
ಹಗಲೇನೋ, ಇರುಳೇನೋ ಕುರುಡಗೆ, ಸಿರಿಕೃಷ್ಣ


ಆವ ಜನುಮದ ತಾಯಿ ಆವ ಜನುಮದ ತಂದೆ
ಆವ ಜನುಮದ ಸತಿ ಆವ ಜನುಮದ ಸುತರು
ಆವ ಜನುಮದ ಬಂಧು ಆವ ಜನುಮದ ಬಳಗ
ಆವ ಜನುಮದ ಪಿಂಡ ಆವಂಗೆ ಜನಿಸುವೆವೋ
ನೀವೊಲಿದು ಪಾಲಿಸೈ ಸಿರಿಕೃಷ್ಣರಾಯ


ನೀರಿಲ್ಲದ ಬಾವಿ ಗುರುವಿಲ್ಲದ ಮಠವು
ನೆರಳಿಲ್ಲದ ಮರ ಫಲವಿಲ್ಲದ ಲತೆ
ಧನವಿಲ್ಲದ ದಾತ ದಯವಿಲ್ಲದ ನಾಥ
ಮನಸಿಲ್ಲದ ಶಕುತಿ ಭಯವಿಲ್ಲದ ಭಕುತಿ
ನರಹರಿ ಮುಕುಂದ ಶ್ರೀಕೃಷ್ಣನ ನೆನೆಯದ
ನರರಿದ್ದು ಫಲವೇನು ಇಲ್ಲದಿದ್ದರೇನು ?


ಧರ್ಮಪಥವ ಮೆಟ್ಟಲು ಮನವೆರಗದು ದು-
ಷ್ಕರ್ಮಕಾದರೆ ಜಿಗಿಜಿಗಿದಾಡುವುದು ಯುಗ-
ಧರ್ಮವೋ ಜೀವನ ಕರ್ಮವೋ
ದುರ್ಮತಿಯಿಂದ ಚರಿಸುವ ಜನರ ಮೈ-
ಚರ್ಮ ಸುಲಿಸದೆ ಬಿಡನು ಸಿರಿಕೃಷ್ಣ


ಬಂದ ಕೀರುತಿಯೆಲ್ಲ ಶ್ರೀಕೃಷ್ಣ ನಿನ್ನದಯ್ಯ
ಮಂದ ಮಾನವನಿಗೆ ಇದು ಅಳವಡುವುದೇನಯ್ಯಾ-
ನಂದತೀರ್ಥರ ಮತ ಪೊಂದಿದ್ದ ಕಾರಣ
ಸಂದೇಹವಡಗಿತು, ಮನಸಿಗಾನಂದವಾಯಿತು
ಇಂದುಧರಾದಿದೇವ ವಂದ್ಯ ಶ್ರೀಕೃಷ್ಣ

ಹಿಂದೆ ನೀ ಪ್ರಹ್ಲಾದನ್ನ ಪಾಲಿಸಿದೆ ಗಡ
ದ್ರುಪದನಂದನಿಯ ಮಾನಮಾಕಾಯ್ದೆ ಗಡ
ಭಕ್ತರಿಗೆ ಬಂದೆಡರನಾವಗಂ ಪರಿಹರಿಪೆ
ನರದೇವ ಪೆಸರ್ಗೊಂಡೆ
ಇಂದು ಮೊರೆಯಡರಂ ಕಾಣೆ
ನಕಟಕಟ ಗೋವಿಂದ ನೀನಲ್ಲದೆ
ವಿಚಾರಿಸುವರಿಲ್ಲ ಸಲಹೆಂದವಂ
ಚಿತ್ತದೋಳ್ ಕೃಷ್ಣನಂ ಧ್ಯಾನಿಸುತ್ತ
ನಿರ್ಭಯದೊಳಿರುತಿರರ್ದನು 

ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ
ನರಕಭಾಜನರು ಅಲ್ಪ ಮೂಡರು ಕರಗುವರೆ
ಗುರುಹಿರಿಯರಿಗೆರಗದವಗೆ ಹರಿಭಕುತಿ ಸೊಗಸುವದೆ
ಕೆರಹು ತಿಂಬ ನಾಯಿಗೆ ತುಪ್ಪ ಸಕ್ಕರೆ ಸೊಗಸುವದೆ
ಚಂದ್ರಕಿರಣಕೆ ಚಂದ್ರಕಾಂತ ಒಸರುವದಲ್ಲದೆ
ಉರಿಗಲ್ಲು ಒಸರುವುದೆ ಸಿರಿಕೃಷ್ಣ


ಉ ಗಾ ಭೋ ಗ

ಆವಜನುಮದ ತಾಯಿ, ಆವಜನುಮದ ತಂದೆ,
ಆವಜನುಮದ ಸತಿ, ಆವಜನುಮದ ಸುತರು,
ಆವಜನುಮದ ಬಂಧು, ಆವಜನುಮದ ಬಳಗ,
ಆವಜನುಮದ ಪಿಂಡ, ಆವಂಗೆ ಜನಿಸುವೆವೋ
ನೀ ಒಲಿದು ಪಾಲಿಸೈ ಸಿರಿಕೃಷ್ಣರಾಯ
******