Showing posts with label ಅಂದು ಮಾನ್ಯರನ್ನು guruvijaya vittala ankita suladi ಪ್ರಾರ್ಥನಾ ಸುಳಾದಿ ANDU MAANYARANNU PRARTHANA SULADI. Show all posts
Showing posts with label ಅಂದು ಮಾನ್ಯರನ್ನು guruvijaya vittala ankita suladi ಪ್ರಾರ್ಥನಾ ಸುಳಾದಿ ANDU MAANYARANNU PRARTHANA SULADI. Show all posts

Friday, 21 May 2021

ಅಂದು ಮಾನ್ಯರನ್ನು guruvijaya vittala ankita suladi ಪ್ರಾರ್ಥನಾ ಸುಳಾದಿ ANDU MAANYARANNU PRARTHANA SULADI

 Audio by Vidwan Sumukh Moudgalya



 ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ 


 ಪ್ರಾರ್ಥನಾ ಸುಳಾದಿ 


 ನಳನಾಮ ಸಂವತ್ಸರದ ಚೈತ್ರ ಬಹುಳ ದಶಮಿ ಬುಧವಾರದಂದು ದಾಸರು ರಚಿಸಿರುವ ಸುಳಾದಿಯು ಇದಾಗಿದೆ.


(ಭಾರತ ಕಥಾ, ಹಿಂದಿನ ಜನುಮದಲ್ಲಿ ಹರಿ ಕೃಪೆ ಮಾಡಿದ್ದು, ಇಂದಿನ ಜನುಮದಲ್ಲಿ ಆ ಚತುರ್ದಶ ವರುಷ ಕಾಲ ಕಳೆದದ್ದು, ಅನಂತರ ಲೌಕಿಕದಲ್ಲಿ ಪಾಪಘಟನೆಯಾದದ್ದು ಕ್ಷಮಿಸು. ತನು-ಮನ-ಧನ ನಿನಗೆ ಸಮರ್ಪಣೆಗೈವೆ. ಶ್ರೀಹರಿಯೇ ಕೃಪೆ ಮಾಡೆಂದು ಪ್ರಾರ್ಥನಾ.)


 ರಾಗ : ಗೌಳ 


 ಧ್ರುವತಾಳ 


ಅಂದು ಮಾನ್ಯರನ್ನು ಆವಾವ ಬಗೆ

ಯಿಂದ ನಿಂದು ನಿಘ್ರ್ರಣವಾದ ವೃತ್ತಿಯಲ್ಲಿ

ಕೊಂದ ಕಾರಣದಿಂದ ಈ ದೇಹದಲ್ಲಿನಿನಗೆ

ವೃಂದ ದುಃಖಗಳ ವುಣಿಸಿ ಕೊನಿಗೆ

ತಂದೆ ಲೋಕವನ್ನು ತ್ವರಿತದಿ ಐದಿಸುವೆ

ನೆಂದು ನುಡಿದ ಮಾತು ನಿನಗೆ ಮಾತ್ರ

ಛಂದವಾಗಿದೆ ನೋಡು ಮರುಳೆ ನೋಡುವರಿಗೆ

ಅಂದವಾಗದಯ್ಯಾ ಅಧರ್ಮವಿದು

ಒಂದು ಕಾರ್ಯವ ಮಾಡಿ ಅದರ ಫಲವನ್ನು

ಬಂದು ಕೂಡಲಿಯೆಂಬ ಭ್ರಾಂತಿಯಾಗೆ

ಕುಂದು ಲೇಶಗಳು ಎಲ್ಲಿ ಪೊಕ್ಕರು ಬಿಡದೆ ಸಂ-

ಬಂಧವಾಗವು ಸಹಜವಿದು

ತಂದೆ ಈ ಪರಿ ಎನಗೆ ಇಲ್ಲದಿರಲು ಆವ

ವೃಂದ ದುಃಖವನುಣಿಪ ದಾವ ಸೊಬಗೊ

ಮಂದರೋದ್ಧರ ಧರ್ಮ ಮರ್ಯಾದಿಯಿಂದ ನೋಡೆ

ಸಂಧಿಸಿಕೊಳ್ಳದಯ್ಯಾ ದೋಷ ಎನಗೆ

ಇಂದಿರ ಪತಿ ನಿನ್ನ ಸ್ವಾತಂತ್ರವಾದ ಶಕುತಿ

ಇಂದಲ್ಲಿ ಬಂದು ಕೂಡೆ ಯತನವೇನೊ

ಮಂದನಾದವ ನಾನು ತಪ್ಪಿಸಿಕೊಂಬೆನೇನೊ

ಕಂದರ್ಪ ಕೋಟಿ ರೂಪ ಸುಪ್ರತಾಪಾ

ಹಿಂದಿನ ಕಾಲದಲ್ಲಿ ವಲ್ಲೆನೆಂದರೆ ಎನಗೆ

ಪೊಂದದಿದ್ದಡೆ ಈಗ ನುಡಿದ ಮಾತು ಎ-

ನ್ನಿಂದಲಿ ಪರಿಹಾರ ಮಾಡಿಕೊಂಬುವೆನು

ಹಿಂದೆ ಇಂದು ಮುಂದೆ ಯೆಂದೆಂದಿಗೆ

ಬಂಧು ನಿನ್ನಿಂದಲೆ ಪ್ರೇರಿತನಾಗಿ ಸಕಲ

ವೃಂದ ಸುಖ ದುಃಖವುಂಟೆ ದೇವಾ

ಸಿಂಧುಶಯನ ಗುರುವಿಜಯವಿಠ್ಠಲ ನಿನಗೆ ಸರಿ

ಬಂದದ್ದು ಮಾಡೊ ನಿನ್ನ ನಂಬಿದವನೊ ॥೧॥


 ಮಟ್ಟತಾಳ 


ತನು ಮನ ಕರಣಗಳು ಕರಣಜ ವ್ಯಾಪಾರ

ಮನೆ ಧನ ಮೊದಲಾದ ಕೀರ್ತ್ಯಪಕೀರ್ತಿಗಳು

ವನಜ ಪಾದಗಳಿಗೆ ನಿರುತ ವೊಪ್ಪಿಸಿಕೊಟ್ಟು

ನೀನೆ ಗತಿಯೆಂದು ನೆರೆ ನಂಬಿದವನ

ವನ(ನೀರು)ದೊಳಗೆ ಅದ್ದು ಕ್ಷೀರದೊಳಗೆ ಅದ್ದು

ತನು ಮನ ನಿನ್ನದು ಗುರುವಿಜಯವಿಠ್ಠಲರೇಯ 

ಮನ ಬಂದದ್ದು ಮಾಡೊ ಏನಾದರು ಒಳಿತು ॥೨॥


 ತ್ರಿವಿಡಿತಾಳ 


ಜನುಮಾರಭ್ಯವಾಗಿ ಚತುರ್ದಶಬ್ದವು ಕರ್ಮ

ಅನಿಯಮ್ಯನಾಗಿ ಮರದೆ ನಿನ್ನ

ಇನಿತು ಕಾಲದಿಂದ ಯವ್ವನ ಮದದಿ ಪರ

ವನತೇಯ ಅಭಿಲಾಷದಲ್ಲಿ ಶಿಲ್ಕಿ ವರ

ಣನಾಪೇಕ್ಷದಿಂದ ಅವರ ಉತ್ತಮರೆನದೆ

ಘನವಾದ ದೋಷವೆಂಬ ಪರಿಜ್ಞಾನವಿಲ್ಲದಲೆ

ಇನಿತು ಕಾಲವ ಕಳದೆ ಕೆಲವು ಕಾಲ

ಧನದಾಶದಿಂದಲಿ ಲೌಕಿಕ ಅನುಸರಿಸಿ

ಜನರ ಹಿಂಸವ ಮಾಡಿ ಪಾಪ ಪುಣ್ಯ

ಮನದೊಳು ಸ್ಮರಿಸದೆ ಇಪ್ಪ ಕುನರರಿಗೆ

ಇನಕೋಟಿ ತೇಜ ನನ್ನ ಸ್ಮರಣಿ ಎಂತೊ

ಅನಿತು ಕಾಲದ ಮಧ್ಯ ಮಾಡಿದ ಅಘರಾಸಿ

ಗಣನೆ ಮಾಡುವುದಕ್ಕೆ ನೀನೆ ಬಲ್ಲಿ

ಎಣೆ ಯಾವುದಯ್ಯಾ ಎನ್ನ ದೋಷ ಸಮೂಹಗಳಿಗೆ ಬ-

ವಣೆ ಬಟ್ಟೆನು ಇನಿತು ಭವದಿ ಬಂದು

ಮನುಜರ ಕಂಗಳಿಗೆ ಭಕತನ ತೆರದಿ ತೋರಿ

ಮನದಿ ನಿನ್ನ ಕುರುಹ ಪಥವ ತಿಳಿದೆ

ಬಿನಗು ಡಂಬಕನಾಗಿ ಚರಿಸದೆ ಕೆಲವು ಕಾಲ ಕ-

ರಣಗಳು ಎನಗೆ ಪ್ರತಿಕೂಲವಾಗಿ

ಕನಸಿನಲ್ಲಾದರು ನಿನ್ನ ಕಾಣದೆ ಪೋದೆ

ಮುನಿಗಳ ಶಿರೋರನ್ನ ಗುಣಪೂರ್ಣನೆ

ಅನುಜನ ವಿಯೋಗ ಜನಿತವಾದ ದುಃಖ

ಕ್ಷಣಕ್ಷಣಕೆ ಹೃದಯ ಭೇದಿಸುತ್ತ

ಶಣಿಸುವರು ಇದನು ಮನೆ ಮಾಡಿ ದೈತ್ಯರು

ಇನಿತರೊಳು ಒಂದು ವ್ಯಾಜದಿಂದ

ಜನರಿಂದ ನಿಂದಿಸಿದಿ ತೃಣಕ ಸಮಾನ ಮಾಡಿ

ಶಣಸಿದಿ ಬರಿದೆ ನೀನು ಮುನಿದು ನೋಡಿ

ಜನುಮಾರಭ್ಯವಾಗಿ ಇಂದಿನ ಪರಿಯಂತ

ಖಣಿಯಾದ ನಿರ್ದಯ ತಾಳಿ ನೀನು

ವನಜಾಕ್ಷ ನಿನ್ನ ಮುಖದಿ ನುಡಿದ ತೆರದಿ ಎನಗೆ

ಉಣಸಿದಿ ದುಃಖಗಳ ಅಪರಿಮಿತ

ನೀನೆವೆ ಗತಿ ಎಂದು ನೆರೆ ನಂಬಿದವನ

ಜನುಮ ಜನುಮದ ಪುಣ್ಯ ರಾಶಿಗಳನು

ಹನನ ಮಾಡುವದು ಇದು ಘನತಿಯೇ ದೇವ

ಸನಕಾದಿ ಮುನಿನುತ ಸಾರ್ವಭೌಮಾ

ತನು ಮನದೊಡಿಯ ಗುರುವಿಜಯವಿಠ್ಠಲರೇಯ 

ಏನು ಬಂದರು ನಿನ್ನ ಬಿಡಲಿಲ್ಲವೋ॥೩॥


 ಅಟ್ಟತಾಳ 


ಒಡಿಯನು ಕೋಪಿಸಿ ಅಡಿಗಳರ್ಚಿಪರ

ತಡಿಯದೆ ಕಾರಾಗೃಹದಲ್ಲಿ ಸೇರಿಸಿ ನಿ-

ರ್ಭಿಡಿಯದಿಂದಲಿ ಕ್ರೂರ ದೈತ್ಯರಿಗೊಪ್ಪಿಸಿ

ಕಡು ಕೋಪದಿಂದಲಿ ಶಿಕ್ಷವ ಮಾಡಿಸಿ

ಬಿಡಿಸಿಕೊಂಬುವರಾರು ಹಿತ ಮಾಡುವವರಾರು

ಸಡಗರದಿಂದಲಿ  ಕರುಣ ಮಾಡುವಾಗ

ಎಡಬಲದಲಿ ನೋಡೆ ಆಪ್ತರಾಗಿಹರೆಲ್ಲ

ಸಡಲ ಬಿಡುವಾಗ ಅವರೆಲ್ಲ ಎನ್ನನು

ಕಡೆಗಣ್ಣ ನೋಟದಿ ನೋಡರೊಮ್ಮಿಗೆ ದೇವ

ಮೃಡ ಮುಖ್ಯ ಸುರರನ್ನ ಶಿಕ್ಷ ರಕ್ಷಕ ನಿನ್ನ

ಒಡಿಯತನದ ಶಾಸನವನ್ನು ಇನಿತಿರೆ

ಬಿಡಿಸಿಕೊಂಬುವರಾರು ಭವದಿಂದಲ್ಲಿ ಎನ್ನ

ಗೂಢ ಕರುಣಿ ನಿನ್ನ ಮನ ಬಂದದು ಮಾಡೊ

ಜಡಜ ಸಂಭವ ನುತ ಗುರುವಿಜಯವಿಠ್ಠಲರೇಯ 

ಜಡಮತಿ ನಾ ನಿನ್ನ ತುತಿಸಬಲ್ಲೆನೆ ಹರೆ॥೪॥


 ಆದಿತಾಳ 


ಆವಾವ ಕಾಲದಲ್ಲಿ ದೇಹ ನಿನ್ನದೆಂಬೊ ಮಾತು

ಕೇವಲ ದೃಢವಾಗಿ ನುಡಿದದ್ದು ನಿಜವಾಗೆ

ಧಾವತಿಗೊಳಿಸದಲೆ ಈ ವ್ಯಾಳ್ಯಗೊದಗುವದು

ಸೇವಕನಾದ ಮೇಲೆ ದೂರ ನೋಡುವದೇ(ದ್ಯಾ)ಕೆ

ಪಾವನ್ನ ಮೂರ್ತಿ ಗುರುವಿಜಯವಿಠ್ಠಲರೇಯಾ 

ಕಾವದು ಅಪರಾಧ ಸಾಸಿರವಿರಲ್ಯಾಕೆ॥೫॥


 ಜತೆ 


ಗಾತ್ರ ನಿನ್ನದು ದೇವಾ ಮನ ಬಂದ ತೆರ ಮಾಡೊ

ಸೂತ್ರಧಾರನೆ ಗುರುವಿಜಯವಿಠ್ಠಲ ಪ್ರೀಯಾ ॥೬॥

****