ಶ್ರೀಗೋಪಾಲದಾಸಾರ್ಯ ವಿರಚಿತ
ಉಪಾಸನಾ ಸುಳಾದಿ
(ಆಪ್ತ ವ್ಯಾಪ್ತನಾದ ಬಿಂಬನ ಗುಪ್ತ ಉಪಾಸನೆ ಕ್ರಮ. ದೇವ ಬಿಂಬನೇವೆ ಸಕಲ ಜಡ ತತ್ವಾದಿಗಳಲ್ಲಿ ಆನಂದಮಯನಾಗಿ ಸಕಲ ಚೇತನರಿಗೆ ಬಿಂಬನಾಗಿ ಪ್ರವರ್ತಿಸುವ ಗುಣರೂಪ ಕ್ರೀಯಾದಿ ಬಿಂಬೋಪಾಸನೆ ವಿಷಯ.)
ರಾಗ ಕಾಂಬೋಧಿ
ಧ್ರುವತಾಳ
ಆವಾ ವಿಷ್ಣುನೆ ಜೀವದಂಗುಟ ಮಾತ್ರ ಮೂರ್ತಿ
ಆವಾ ವಿಷ್ಣುನೆ ಜೀವದಾಕಾರ ಮೂರುತಿ
ಆವಾ ವಿಷ್ಣುನೆ ಸರ್ವವ್ಯಾಪ್ತ ಮೂರುತಿ
ಆವಾ ವಿಷ್ಣುನೆ ಜೀವಕ್ಕಾವರ್ಕವಾದ ಮೂರುತಿ
ಆವಾ ವಿಷ್ಣುನೆ ಜೀವಾಧಿಷ್ಠಾನ ದೇಹ ಮೂರುತಿ
ಆವಾ ವಿಷ್ಣುನೆ ಜಗದಾವ್ಯಾಪುತ ಮೂರುತಿ
ಆವಾ ವಿಷ್ಣುನೆ ಮೂಲಾದವತಾರ ಮೂರುತಿ
ಆವಾ ವಿಷ್ಣುನೆ ಮಧ್ಯ ಅಜಾದಿ ಮೂರುತಿ
ಆವಾ ವಿಷ್ಣುನೆ ಜೀವಾ ಸರ್ವವಿಶ್ವಾದಿ ಮೂರುತಿ
ಆವಾ ವಿಷ್ಣುನೆ ಅನಂತವತಾರ ಮೂರುತಿ
ಆವಾ ವಿಷ್ಣುನೆ ಜೀವನ ಪ್ರತಿಪಾದ್ಯ ಮೂರುತಿ
ಆವಾ ವಿಷ್ಣುವಿನಧೀನವಾಗದ ಠಾವಿಲ್ಲ ಎಲ್ಲಿ ನೋಡಾ
ಆವಾ ವಿಷ್ಣು ಸರ್ವಜ್ಞ ಸಾಕಾರ ಜ್ಞಾನಾನಂದಾ
ಯಾವತ್ತು ಏಕಮೇವಾ ದೇವಾ
ಶ್ರೀವಿಷ್ಣು ನಮ್ಮ ಸ್ವಾಮಿ ಗೋಪಾಲವಿಟ್ಠಲ
ಪಾವನ್ನ ಮೂರುತಿ ಪರಮ ಪುರುಷ ನೋಡು ॥ 1 ॥
ಮಟ್ಟತಾಳ
ಪೃಥಿವಿ ಅಪ್ಪು ಅಗ್ನಿ ವಾಯುರಾಕಾಶವು
ತತು ತನ್ಮಾತ್ರಿ ಶಬ್ದಾದಿ ವಿಷಯಂಗಳು
ಜಿತ ತೈಜಸ ವೈಕಾರ ಸತು ಮಹಾ
ತತುವ ಹರಿಗೆ ಸ್ವರೂಪ ಭೂತಾ
ತತುಗಳು ಜಡವಲ್ಲ ಎಲ್ಲ ಆನಂದಮಾಯಾ
ಗತಿ ಕೊಡುವವು ಒಂದಕ್ಕೆ ಒಂದೊಂದೆ ಪೂರ್ಣ
ಖತಿ ಗೊಳಿಸುವವಲ್ಲ ಖಂಡ ಖಂಡವಲ್ಲಾ
ಚತುರವು ಇವು ಬಲು ಹರಿಯೆ ಇವು ಎನ್ನಿ
ಸತತ ತಾ ತನ್ನ ಸ್ವರೂಪ ಭೂತ
ತತ್ವಪ್ರವೇಶವೆ ಮತಿಯ ಪ್ರಕೃತಿ ಅಂಶಗಳಿಗೆ
ಸತತ ಬಿಂಬನಾಗಿ ಸವಿಯದೆ ಎಂದೆಂದು
ಕ್ಷಿತಿಯಲ್ಲಿ ಜೀವರಾಶಿಗೆ ಸಾಧನ ಮಾಳ್ಪ
ಪತಿತಪಾವನ ವಿಷ್ಣು ಗೋಪಾಲವಿಟ್ಠಲ
ಸತತ ಕ್ರೀಡಿಯ ಮಾಳ್ಪ ಚೇತನ ತನದಿ ॥ 2 ॥
ರೂಪಕತಾಳ
ವಿಷ್ಣು ವರುಣ(ವರ್ಣ)ವಿನ್ನು ವಿಷ್ಣು ಕಾಲವು ನೋಡು
ವಿಷ್ಣುವೆ ಆಕಾಶ ಅವ್ಯಾಕೃತಕೆ ಬಿಂಬಾ
ವಿಷ್ಣುನೆ ಮಹದಾದಿ ವಿಷ್ಣುನೆ ಅಹಂಕಾರಿಕ
ವಿಷ್ಣು ವೈಕಾರಿಕ ವಿಷ್ಣು ತೈಜಸವಿನ್ನು
ವಿಷ್ಣು ಪಂಚಮಹಾಭೂತ ವಿಷ್ಣು ತನ್ಮಾತ್ರಿಗಳು
ವಿಷ್ಣುನೆ ಕಾರ್ಯಕಾರಣ ತತ್ವ ಜಡಗಳಿಗೆ ಬಿಂಬ
ವಿಷ್ಣುನೆ ತತ್ವಾಭಿಮಾನಿಗಳಲ್ಲಿ ಬೇರೆ
ತತ್ತದಾಕಾರನಾಗಿ ಇಷ್ಟರ ವೊಳಗಿನ್ನು
ವಿಷ್ಣುನೆ ಅವರವರ ಸತತ ಪ್ರಾವರ್ತಕನಾಗಿ
ಇಷ್ಟ ನಿಷ್ಟಗಳಿಗೆ ತೊಡಕದಿದ್ದು
ವಿಷ್ಣು ನಾಮಕ ಚಲುವ ಗೋಪಾಲವಿಟ್ಠಲ ಸರ್ವಾಂ -
ವಿಷ್ಣುಮಯಂ ಜಗತ್ತು ವ್ಯಾಪಿಸಿಪ್ಪ ॥ 3 ॥
ಝಂಪಿತಾಳ
ವಿಷ್ಣುನೆ ಇಷ್ಟ ತತ್ವರೂಪ ತಾನಾಗಿ
ಇಷ್ಟ ತತ್ವಗಳಿಗೆ ಬಿಂಬನಾಗಿ
ವಿಷ್ಣು ತಾನಿಪ್ಪ ದಾಶ್ಚರ್ಯವೆಂದೆನ್ನದಿರಿ
ವಿಷ್ಣು ದಾಸರಿಗೆ ಸ್ವರೂಪ ಭೂತಾ
ಇಷ್ಟ ತತ್ವಂಗಳು ಜೀವ ಸ್ವರೂಪದಂತೆ
ಸ್ಪಷ್ಟವಾಗಿಪ್ಪದು ತಿಳಿದವರಿಗೆ
ಕಷ್ಟ ಬಡಿಸುವರೆಲ್ಲ ಎನ್ನೆ ಅನ್ಯಾಯ
ಪುಟ್ಟಿಸುವ ಒಂದೊಂದಾಭೇದವ
ನಷ್ಟವಾಗುವದಲ್ಲ ಜೀವರ ಸ್ವರೂಪ
ಬಿಟ್ಟು ಹೋಗುವದಲ್ಲ ಎಂದೆಂದಿಗೂ
ಸ್ಪಷ್ಟವಾಗಿ ಇದರ ಅನುಭವ ಎಂಬುವದು
ವಿಷ್ಣುದಾಸರೆ ಇದರ ವಿವರವು ಬಲ್ಲರು
ಇಷ್ಟ ಮೂರುತಿ ನಮ್ಮ ಗೋಪಾಲವಿಟ್ಠಲ
ಇಷ್ಟರಲ್ಲಿ ನಿಂತು ಹರಿ ಏನೇನು ನೋಳ್ಪಾ ॥ 4 ॥
ತ್ರಿವಿಡಿತಾಳ
ಭಿನ್ನವಾದ ವೃತ್ತಿರೂಪ ಸುಖ ದುಃಖವು
ಇನ್ನು ಸ್ವರೂಪ ಅನುಭವ ಉಂಟು
ಚಿನ್ಮನಸಿನ ಮನಸಿನ ದ್ವಾರವಿನ್ನು ಅಭಿಮಾನದಲ್ಲಿ
ತನ್ನದೆಂದರಿವ ಭಿನ್ನವಾದ ದುಃಖವ
ತನ್ನ ಪ್ರಕಾಶ ಅಭಿಮಾನವಿದ್ದದ್ದೆಲ್ಲ
ತನ್ನದೆಂದೇ ತಿಳಿವ ಅಭಿಮಾನದಿ
ಇನ್ನು ಹೀಗೆ ವೃತ್ತಿರೂಪ ದುಃಖವಿನ್ನು
ತನ್ನಭಿಮಾನದಿಂದಲೆ ಅನುಭವ
ಚನ್ನಾಗಿ ಲಿಂಗಭಂಗವಾಗುವ ತನಕ
ಇನ್ನು ಹೀಗೆ ಅನುಭವಿಪ ಜೀವನು
ಮುನ್ನೆ ವೃತ್ತಿರೂಪ ಸುಖವು ಮತ್ತೆ ಹೀಗೆ
ಇನ್ನು ಅನುಭವವೆಲ್ಲ ಒಂದೆ ನೋಡು
ತನ್ನದೆಂಬ ಅಭಿಮಾನ ಬಿಟ್ಟು ನಿರ್ಗುಣದಲ್ಲಿ
ಅನ್ನರಸ ಪಾನಂಗಳು ಎಲ್ಲ ಹರಿಯೆ ಉಣುವ -
ವನೆಂದು ತಿಳಿದು ಉಂಬ ಜೀವರಿಗೆ
ಚಿನುಮಯ ಬಿಂಬ ತಾನುಂಡು ಎಲ್ಲ
ಭಿನ್ನರಸ ಸುಖ ವ್ಯಂಜಕ ಮಾಡಿ
ಆನಂದವನೇ ಇನ್ನು ಜೀವನಿಗೆ ಅಭಿವ್ಯಕ್ತಿ ಮಾಳ್ಪ
ಇನ್ನಿವನಿಗೆ ವಿಪರೀತ ದುಷ್ಟ ಜೀವನರಿಗೆ
ಇನ್ನೂ ದುಃಖ ಅಭಿವ್ಯಕ್ತಿ ಮಾಳ್ಪಾ
ಪುಣ್ಯ ಪಾಪಗಳೆರಡು ಜೀವಕೆ ಸಹಾಯವಾಗಿ
ತನ್ನದೆಂಬೊ ಮಾತು ಮಾತ್ರ ಇನ್ನು ಪುಶಿಯು
ಖಿನ್ನನಾಗ್ಯಾಡುವನು ಅಭಿಮಾನದಿ
ಅನಂತ ಗುಣಪೂರ್ಣ ಗೋಪಾಲವಿಟ್ಠಲ
ಚನ್ನಿಗನ ಮಹಿಮೆ ಚಿತ್ರ ವಿಚಿತ್ರವು ॥ 5 ॥
ಅಟ್ಟತಾಳ
ಒಂದು ರಸದಲ್ಲಿ ಬಿಂದು ಉದರದಿ ಬಿದ್ದರೆ
ಇಂದಿರೆ ಉಂಟಲ್ಲಿ ವಿರಿಂಚಿ ಶಿವನುಂಟು
ಚಂದಾದಿ ಗರೂಡ ಶೇಷ ಇಂದ್ರಾದಿ ಸುರರೆಲ್ಲ
ಹೊಂದಿರುವರು ತಮ್ಮ ತತ್ವದ ರಸ
ಇಂದಿರೇಶ ವಿಭಾಗವ ಮಾಡಿ ತರತಮ -
ದಿಂದಲೆ ಆರಾರ ಭಾಗ ಪೊಂದಿಸಿ ಈವಾ
ಇಂದಿರಾದೇವಿಗವ್ಯಕ್ತ ರಸದಲೆ ಅಭಿಮಾನ
ಮಂದಜ ಜನಕಗೆ ಮಹಾತತ್ವ ರಸವಿನ್ನು
ಇಂದುಮೌಳಿಗೆ ಅಹಂಕಾರ ರಸದಲ್ಲಿ
ಇಂದ್ರಾದಿ ಸುರರಿಗೆ ವೈಕಾರಿಕ ರಸ
ತಂದು ಕೊಡುವ ತೈಜಸ ರಸ ತರತಮ್ಯ -
ದಿಂದ ಭೌತಿಕ ರಸ ಬಪ್ಪದು ಮನುಜರ್ಗೆ
ತಂದು ಕೊಡುವ ಒಂದರೊಳಗೆ ಎಲ್ಲ
ಒಂದೇ ವಿಷಯ ಬಹುಮಂದಿಗೆ ಅನುಭೋಗ
ತಂದಿಪ್ಪದು ಪೃಥುವಿ ಗಂಧ ತನ್ಮಾತ್ರೆಯಂತೆ
ಮಂದ ಅಸುರ ದೈತ್ಯವೃಂದಕ್ಕೆ ಇದರೊಳು
ಗಂಧ ಬೇರೆ ಉಂಟು ಒಂದೆ ರಸದಲ್ಲೆ
ಮಂದಾಕಿನಿಯಲ್ಲಿ ಮೈಲಿಗೆ ವಸ್ತ್ರ ತೊಳಿದರೆ
ತಂದು ಕೊಡುವದು ತದ್ಭೂಷಣ ಆ ವಸ್ತ್ರಕ್ಕೆ
ಸುಂದರ ಮೂರುತಿ ಗೋಪಾಲವಿಟ್ಠಲ
ಬಂಧುವಾದನು ಸಾಧು ಜೀವರ್ಗೆ ॥ 6 ॥
ಆದಿತಾಳ
ದೇವಿಯಿಂದಲಿ ಕ್ರೀಡೆ ದೇವನಾಡುವ ತತ್ವ -
ದೇವತೆಗಳನ್ನೆಲ್ಲ ಕಾವಲಿ ಇಟ್ಟನ್ನು
ಆವರ್ಕ ಪ್ರಕೃತಿಗಳಲಿ ತಾ ನಿಂತು
ತ್ರಿವಿಧ ಮೂಲರ ಜಗಕೆ ವೃಕ್ಷನಾಗಿ
ಶ್ರೀವಿಷ್ಣುನೆ ಅಲ್ಲಿ ವಿಟಪನಾಗಿ ಸರ್ವ
ಜೀವರಿಗಾಶ್ರಯನಾಗಿ ಪಾಲಿಸುವಾ
ಆವಾ ಈ ವೃಕ್ಷದ ಮೂಲ ಕಂಡವರಿಲ್ಲ
ದೇವ ದೇವೇಶನ ಲೀಲೆ ಎಷ್ಟೊ
ದೇವೆ ಲಕುಮಿ ಸಾಕಲ್ಯ ತಿಳಿಯದೆ ಶ್ರೀ
ಭಾವವನು ತಾನು ನಂದದೊಳು ಮುಣುಗಿ
ಶ್ರೀವರ ಪ್ರೇರಕನೆಂದು ತುತಿಸಿ ಯಿನ್ನು
ಭಾವೆ ಗಂಡನ ಕೊಂಡಾಡಿಹಳು
ಜೀವರು ತಮ್ಮ ತಮ್ಮ ಯಾವತ್ತು ಶಕ್ತಿಲಿ
ದೇವನ ಸ್ತುತಿಸಿ ಧೇನಿಸುವರು
ಗೋವರ್ಧನೋದ್ಧಾರ ಗೋಪಾಲವಿಟ್ಠಲನ್ನ
ದೇವನ ಮಹಿಮೆ ಬಲ್ಲವರಾರು ॥ 7 ॥
ಜತೆ
ಆಪ್ತ ಉಪಾಸನಿ ಗುಪ್ತದಿ ಯಿದು ಮಾಡಿ
ಪ್ರಾಪ್ತನಾಗುವ ಗೋಪಾಲವಿಟ್ಠಲ ನಿಮಗೆ ॥
****