Showing posts with label ಹರಿಕಥಾಮೃತಸಾರ ಸಂಧಿ 02 jagannatha vittala ಕರುಣಾ ಸಂಧಿ HARIKATHAMRUTASARA SANDHI 2 KARUNA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 02 jagannatha vittala ಕರುಣಾ ಸಂಧಿ HARIKATHAMRUTASARA SANDHI 2 KARUNA SANDHI. Show all posts

Wednesday 11 November 2020

ಹರಿಕಥಾಮೃತಸಾರ ಸಂಧಿ 02 ankita jagannatha vittala ಕರುಣಾ ಸಂಧಿ HARIKATHAMRUTASARA SANDHI 2 KARUNA SANDHI



Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  

ಕರುಣಾ ಸಂಧಿ 2
" ಶ್ರವಣ ಮನಕಾನಂದವೀವುದು ಭವಜನಿತ " ,
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ಕರುಣಾಸಂಧಿ , ರಾಗ ಶುಭಪಂತುವರಾಳಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು
ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ
ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ||1||

ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು
ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು
ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ
ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು||2||

ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ
ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ
ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ
ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ||3||

ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ
ಜನರೊಳಗಿದ್ದು ಜನಿಸುವ ಜಗದುದರ ತಾನು
ಘನಮಹಿಮ ಗಾಂಗೇಯನುತ ಗಾಯನವ ಕೇಳುತ
ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ||4||

ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ
ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ
ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು
ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ||5||

ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು
ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ
ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ
ಇತ್ತಪನು ಸ್ವರ್ಗಾದಿ ಭೋಗಗಳ||6||

ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು
ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ
ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ
ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ ||7||

ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ
ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ||8||

ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು
ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ
ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು
ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ||9||
ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ
ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ
ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು
ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ||10||

ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ
ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ
ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ
ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು||11||

ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ
ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ
ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ
ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು||12||

ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ
ಅನುದಿನದಿ ನೋಡುತ ಸುಖಿಸುವಂದದಿ
ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ
ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ||13||

ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ
ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು
ತಾಳ ತನ್ನವರಲ್ಲಿ ಮಾಡ್ವ ಅವಹೇಳನವ
ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ||14||

ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ
ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ
ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ
ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ||15||

ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ
ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ
ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ
ಮತ್ತೆ ಅವರನು ಇಟ್ಟು ಆನಂದ ಬಡಿಸುವನು||16||

ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ
ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು
ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು
ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ||17||

ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ
ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ
ಇವನ ಮಾಯವ ಗೆಲುವನಾವನು ಈ ಜಗತ್ರಯದಿ||18||

ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು
ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ
ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ
ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ||19||

ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು
ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ
ಅಂಗೋಪಾಂಗಗಳಲಿ ಇಪ್ಪ
ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು||20||
ಕಾಮಧೇನು ಸುಕಲ್ಪತರು ಚಿಂತಾಮಣಿಗಳು
ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ
ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು||21||

ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು
ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ
ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು
ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ||22||

ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ
ಅತಿಸುಂದರಕೆ ಸುಂದರ ರಸಕೆ ರಸರೂಪ
ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ
ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ||23||

ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ
ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ
ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು
ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು||24||

ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು
ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ
ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ
ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ||25||

ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ
ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ
ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ
ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ ||26||

ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ
ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ
ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು
ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ||27||

ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ
ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು
ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ
ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ||28||

ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ
ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ
ಪರಮಕರುಣ ಮಹೋದಧಿಯು ತನ್ನವರು ಮಾಡ್ದ
ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು||29||

ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ
ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ
ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ
ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ||30||

ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ
ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ
ಸಾಮಸನ್ನುತ ಸಕಲ ಗುಣಗಣಧಾಮ
ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ||31||
*******

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

SravaNa manakAnandavIvudu Bavajanita duHKagaLa kaLevudu
vividha BOgagaLu ihaparangaLali ittu salahuvudu
Buvana pAvanavenipa lakShmI dhavana mangaLa katheya
parama utsavadi kivigoTTu Alipudu BUsuraru dinadinadi||1||

maLeya nIru ONiyoLu pariyalu, baLasaru UroLage idda janaru
A jalavu heddoregUDe majjanapAna gaidaparu
kaluSha vacanagaLa AdaDeyu, bAMboLeya pettana pAda mahima
A jaladi pokkadarinda mANdapare mahIsuraru||2||

SRutitatigaLa aBimAni lakShmIstutigaLige gOcarisada
apratihata mahaiSvaryAdi aKila sadguNa gaNAMBOdhi
pratidivasa tannanGri sEvArata mahAtmaru mADutiha
saMstutigevaSanAguvenu ivana kAruNyake EneMbe||3||

manavacanake atidUra nenevaranu anusarisi tiruguvanu jAhnavi janaka
janaroLagiddu janisuva jagadudara tAnu
Ganamahima gAngEyanuta gAyanava kELuta
gaganacara vAhana divaukasaroDane carisuva manemanegaLalli||4||

malagi paramAdaradi pADalu kuLitu kELuva
kuLitu pADalu niluva niMtare naliva nalidare oliva nimageMba
sulaBanO hari tannavaranu araGaLige biTTagalanu
ramAdhavana olisalariyade pAmararu baLaluvaru BavadoLage||5||

manadoLage tAniddu manavendu enisikoMbanu
manada vRuttigaLa anusarisi BOgaMgaLIvanu trividha cEtanake
manavittare tannanIvanu tanuva daMDisi dinadinadi sAdhanava mALparige
ittapanu svargAdi BOgagaLa||6||

parama satpuruShArtharUpavanu hariyu lOkake endu
paramAdaradi sadupAsaneya gaivarige ittapanu tanna
maredu dharmArthagaLa kAmisuvarige naguta atiSIGradindali
surapatanaya suyOdhanarige ittante koDutippa ||7||

jagavanellava nirmisuva nAlmoganoLage tAniddu salahuva
gaganakESanoLiddu saMharisuvanu lOkagaLa
svagataBEda vivarjitanu sarvaga sadAnandaika dEhanu
bagebageya nAmadali karesuva Bakutaranu poreva||8||

obbanali nindADuvanu mattobbanali nODuvanu
bEDuvanu obbanali nIDuvanu mAtADuvanu beragAgi
abbarada heddaivanu iva mattobbarana lekkisanu
lOkadoLu obbanE tA bAdhya bAdhakanAha nirBIta||9||
SaraNajana maMdAra SASvata karuNi kamalAkAMta kAmada
parama pAvanatara sumangaLa carita pArthasaKa
nirupamAnandAtma nirgata durita dEvavarENyaneMdu
Adaradi kareyalu bandodaguvanu tannavara baLige||10||

jananiyanu kANadiha bAlaka nenenenadu halubutire
kattale maneyoLu aDagiddu avana nODuta naguta haruShadali
tanayanaM bigidappi raMbisi kanalikeya kaLevaMte
madhusUdananu tannavaru iddeDege baMdodagi salahuvanu||11||

iTTikallanu Bakutiyindali koTTa Bakutage mecci taNNane koTTa
baDabrAhmaNana oppiDiyavalige aKiLArtha
keTTa mAtugaLenda caidyana poTTeyoLagiMbiTTa
bANadaliTTa BIShmana avaguNagaLeNisidane karuNALu||12||

dhanava saMrakShisuva PaNi tAnuNade mattobbarige koDade
anudinadi nODuta suKisuvandadi
lakumivallaBanu praNataranu kAydihanu niShkAmanadi
nityAnaMdamaya durjanara sEveyanu ollanu apratimalla jagakella||13||

bAlakana kalaBAShe janani kELi suKapaDuvante
lakShmIlOla Baktaru mADutiha saMstutige higguvanu
tALa tannavaralli mADva avahELanava
heddaiva vidurana Alayadi pAluMDu kurupana mAnavane konDa||14||

smarisuvavara aparAdhagaLa tAsmarisa sakala iShTa pradAyaka
maraLi tanage arpisalu koTTuda anantamaDi mADi paripariyalinda uNisi
suKa sAgaradi lOlADisuva maMgaLacarita
cinmayagAtra lOkapavitra sucaritra||15||

Enu karuNanidhiyO hari mattEnu BaktAdhInanO
innEnu Itana lIle iccAmAtradali jagava tAnE sRujisuva pAlisuva
nirvANa modalAda aKila lOkasthAnadali
matte avaranu iTTu AnaMda baDisuvanu||16||

janapa meccidare Iva dhanavAhana viBUShaNa vasanaBUmi
tanumanagaLa ittu Adariparu unTEnO lOkadoLu
anavarata nenevavara anantAsanave modalAda AlayadoLiTTu
aNuganaMdadali avara vaSanAguva mahAmahima||17||

Buvana pAvana carita puNyaSravaNakIrtana pApanASana
kaviBirIDita kairavadaLaSyAma nissIma
yuvativEShadi hiMde gaurIdhavana mOhini keDisi uLisida
ivana mAyava geluvanAvanu I jagatrayadi||18||

pApakarmava sahisuvaDe lakShmIpatige samarAda divijaranu
I payOjaBavAnDadoLage Avalli nA kANe
gopaguruvina maDadiBRugunagacApa modalAdavaru mADda
mahAparAdhagaLa eNisidane karuNA samudra hari||19||

aMguTAgradi janisida amaratarangiNiyu lOkatrayagaLa aGahingisuvaLu
avyAkRutASAnta vyApisida ingaDala magaLa oDeyana
aMgOpAMgagaLali ippa
amalAnaMta sumaMgaLaprada nAma pAvanamALpadEnaridu||20||

kAmadhEnu sukalpataru cintAmaNigaLu
amarEndra lOkadi kAmitArthagaLu Ivavallade sEve mALparige
SrImukundana parama maMgaLanAma narakastharanu salahitu
pAmarara paMDitarenisi puruShArtha koDutihudu||21||

manadoLage sundara padArthava nenedu koDe kaikoMDu
balu nUtana suSOBita gandha surasOpEta PalarASi
dyunadi nivahagaLante koTTu avaranu sadA saMtaisuvanu
sadguNava kaddavara aGava kadivanu anaGaneMdenisi||22||

cEtanA cEtana vilakShaNa nUtana padArthagaLoLage balunUtana
atisuMdarake sundara rasake rasarUpa
jAtarUpOdara Bava AdyaroLu Atata pratima praBAva
dharAtaLadoLu emmoDane ADutalippa nammappa||23||

tande tAygaLu tamma SiSuvige baMda BayagaLa pariharisi
nija mandiradi bEDidudanu ittu Adarisuvandadali
hiMde munde eDabaladi oLahorage indirESanu tannavaranu
endendu salahuvanu AgasadoL etta nODidaru||24||

oDala neLalandadali hari nammoDane tiruguvanu
oMdarekShaNa biDade beMbalavAgi BaktAdInanendenisi
taDeva duritauGagaLa kAmada koDuva sakalEShTagaLa
santata naDeva nammandadali navisu viSESha sanmahima||25||

biTTavara BavapASadindali kaTTuvanu bahukaThiNaniva
SiShTEShTanendaridu anavarata sadBakti pASadali kaTTuvara
BavakaTTu biDisuva siTTinavanu ivanalla
kAmada koTTukAvanu sakala sauKyavanu ihaparangagaLali ||26||

kaNNige eveyandadali kai mai tiNNigodaguva teradi
palgaLu paNNu PalagaLanagidu jihvege rasavanIvante
puNya Palava IvaMdadali nuDiveNNi nANmAoDadoLu
lakShmaNana aNNanu odaguva Baktara avasarake amaragaNa sahita||27||

koTTadanu kaikoMba arekShaNabiTTagala tannavara
duritagaLa aTTuvanu dUradali duritAraNya pAvakanu
beTTa bennili horisidavaroLu siTTu mADidanEnO hari
kangeTTa surarige sudheyanu uNisida muridanahitaranA||28||

KEda mOda jayApAjaya modalAda dOShagaLilla cinmaya sAdaradi
tannaMGrikamalava naMbi stutisuvara kAdukonDiha
paramakaruNa mahOdadhiyu tannavaru mADda
mahAparAdhagaLa nODadale salahuva sarvakAmadanu||29||

mInakUrma varAha narapancAnana atuLa Saurya
vAmana rENukAtmaja rAvaNAdiniSAcaradhvaMsi
dhEnukAsuramathana tripurava hAnigainisida nipuNa
kalimuKa dAnavara saMharisi dharmadi kAyda sujanaranA||30||

SrI manOrama Samala varjita kAmitaprada
kairavadaLa SyAma Sabala SaraNya SASvata SarkarAkSha saKa
sAmasannuta sakala guNagaNadhAma
SrI jagannAtha viThalanu I mahiyoLu avatarisi salahida sakala sujanaranA||31||
*********


ಹರಿಕಥಾಮೃತಸಾರ ಗುರುಗಳ|

ಕರುಣದಿಂದಾಪನಿತು ಪೇಳುವೆ|
ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ||

ಶ್ರವಣ ಮನಕಾನಂದವೀವುದು |
ಭವಜನಿತ ದುಃಖಗಳ ಕಳೆವುದು |
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು ||
ಭುವನ ಪಾವನನೆನಿಪ ಲಕ್ಷ್ಮೀ |
ಧವನ ಮಂಗಳ ಕಥೆಯ ಪರಮೋ |
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ ||

ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿವು ಬಾಂ |
ಬೊಳೆಯ ಪೆತ್ತನ ಪಾದಮಹಿಮಾ |
ಜಲಧಿ ಪುಕ್ಕುದರಿಂದೆ ಮಾಣ್ದಪರೇ ಮಹೀಸುರರು || ೨ ||

ಶ್ರುತಿತತಿಗಳಭಿಮಾನಿ ಲಕುಮೀ |
ಸ್ತುತಿಗಳಿಗೆ ಗೋಚರಿಸದಪ್ರತಿ |
ಹತ ಮಹೈಶ್ವರ್ಯಾದ್ಯಖಿಳಸದ್ಗುಣಗಣಾಂಬೋಧಿ ||
ಪ್ರತಿದಿವಸ ತನ್ನಂಘ್ರಿ ಸೇವಾ |
ರತ ಮಹಾತ್ಮರು ಮಾಡಿತಿಹ ಸಂ
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||

ಮನವಚನಕತಿದೂರ ನೆನೆವರ |
ನನುಸರಿಸಿ ತಿರುಗುವನು ಜಾಹ್ನವಿ
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||
ಘನ ಮಹಿಮ ಗಾಂಗೇಯನುತ ಗಾ |
ಯನವ ಕೇಳುತ ಗಗನ ಚರ ವಾಹನ
ದಿವೌಕಸರೊಡನೆ ಚರಿಸುವ ಮನ ಮನೆಗಳಲ್ಲಿ || ೪ ||

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ ಕುಳಿತು ಪಾಡಲು |
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||
ಸುಲಭನೋ ಹರಿ ತನ್ನವರನರೆ |
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಮನದೊಳಗೆ ತಾನಿದ್ದು ಮನವೆಂ |
ದೆನಿಸಿಕೊಂಬನು ಮನದ ವೃತ್ತಿಗ |
ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ ||
ಮನವನಿತ್ತರೆ ತನ್ನನೀವನು |
ತನುವ ದಂಡಿಸಿ ದಿನದಿನದಿ ಸಾ |
ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ || ೬ ||

ಪರಮ ಸತ್ಪುರುಷಾರ್ಥ ರೂಪನು |
ಹರಿಯೆ ಲೋಕಕೆ ಎಂದು ಪರಮಾ |
ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ ||
ಮರೆದು ಧರ್ಮಾರ್ಥಗಳ ಕಾಮಿಸು |
ವರಿಗೆ ನಗುತತಿ ಶೀಘ್ರದಿಂದಲಿ |
ಸುರಪತನಯ ಸುಯೋಧನಿರಿಗಿತ್ತಂತೆ ಕೊಡುತಿಪ್ಪ || ೭ ||

ಜಗವನೆಲ್ಲವ ನಿರ್ಮಿಸುವ ನಾ |
ಲ್ಮೊಗನೊಳಗೆ ತಾನಿದ್ದು ಸಲಹುವ |
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ||
ಸ್ವಗತಭೇದವಿವರ್ಜಿತನು ಸ |
ರ್ವಗ ಸದಾನಂದೈಕದೇಹನು |
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ || ೮ ||

ಒಬ್ಬನಲಿ ನಿಂತಾಡುವನು ಮ |
ತ್ತೊಬ್ಬನಲಿ ನೋಡುವನು ಬೇಡುವ |
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ ||
ಅಬ್ಬರದ ಹೆದ್ದೈವನಿವ ಮ
ತ್ತೊಬ್ಬರನು ಲೆಕ್ಕಿಸನು ಲೋಕದೊ |
ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ || ೯ ||

ಶರಣಜನಮಂದಾರ ಶಾಶ್ವತ |
ಕರುಣಿ ಕಮಲಾಕಾಂತ ಕಾಮದ |
ಪರಮಪಾವನತರ ಸುಮಂಗಳಚರಿತ ಪಾರ್ಥಸಖ ||
ನಿರುಪಮಾನಂದಾತ್ಮನಿರ್ಗತ |
ದುರಿತ ದೇವವರೇಣ್ಯನೆಂದಾ |
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ || ೧೦ ||

ಇಟ್ಟಿಕಲ್ಲನು ಭಕುತಿಯಿಂದಲಿ |
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ |
ಕೊಟ್ಟ ಬಡಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ ||
ಕೆಟ್ಟ ಮಾತುಗಳೆಂದ ಚೈದ್ಯನ |
ಪೊಟ್ಟೆಯೊಳಗಿಂಬಿಟ್ಟು ಬಾಣದ |
ಲಿಟ್ಟ ಭೀಷ್ಮನವಗುಣಗಳೆಣಿಸಿದನೆ ಕರುಣಾಳು || ೧೧ ||

ಧನವ ಸಂರಕ್ಷಿಸುವ ಫಣಿ ತಾ |
ನುಣದೆ ಮತ್ತೊಬ್ಬರಿಗೆ ಕೊಡದನು |
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು ||
ಪ್ರಣತರನು ಕಾಯ್ದಿಹನು ನಿಷ್ಕಾ |
ಮನದಿ ನಿತ್ಯಾನಂದಮಯ ದು |
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ || ೧೨ ||

ಜನನಿಯನು ಕಾಣದಿಹ ಬಾಲಕ |
ನೆನೆನೆನೆದು ಹಲುಬುತಿರೆ ಕತ್ತಲೆ |
ಮನೆಯೊಳಡಗಿದ್ದವನ ನೋಡುತ ನಗುತ ಹರುಷದಲಿ ||
ತನಯನಂ ಬಿಗಿದಪ್ಪಿ ರಂಬಿಸಿ |
ಕನಲಿಕೆಯ ಕಳೆವಂತೆ ಮಧುಸೂ |
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೩ ||

ಬಾಲಕನ ಕಲಭಾಷೆ ಜನನಿ |
ಕೇಳಿ ಸುಖಪಡುವಂತೆ ಲಕ್ಷ್ಮೀ |
ಲೋಲ ಭಕುತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು ||
ತಾಳ ತನ್ನವರಲ್ಲಿ ಮಾಡುವ |
ಹೇಳನವ ಹೆದ್ದೈವ ವಿದುರನ |
ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ || ೧೪ ||

ಸ್ಮರಿಸುವರ ಅಪರಾಧಗಳ ತಾ |
ಸ್ಮರಿಸ ಸಕಲೇಷ್ಟಪ್ರದಾಯಕ |
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿಮಾಡಿ ||
ಪರಿಪರಿಯಲುಂಡುಣಿಸಿ ಸುಖ ಸಾ |
ಗರದಿ ಲೋಲಾಡಿಸುವ ಮಂಗಳ |
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ || ೧೫ ||

ಏನು ಕರುಣಾನಿಧಿಯೋ ಹರಿ ಮ|
ತ್ತೇನು ಭಕ್ತಾಧೀನನೋ ಇ|
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ||
ತಾನೆ ಸೃಜಿಸುವ ಪಾಲಿಸುವ ನಿ|
ರ್ವಾಣ ಮೊದಲಾದಖಿಳ ಲೋಕ|
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು || ೧೬ ||

ಜನಪ ಮೆಚ್ಚಿದರೀವ ಧನವಾ|
ಹನ ವಿಭೂಷಣವಸನ ಭೂಮಿಯ|
ತನು ಮನಗಳಿತ್ತಾದರಿಪರುಂಟೇನೋ ಲೋಕದೊಳು ||
ಅನವರತ ನೆನೆವವರನಂತಾ|
ಸನವೆ ಮೊದಲಾದಾಲಯದೊಳಿ|
ಟ್ಟುಣುಗನಂದದಲವರ ವಶನಾಗುವ ಮಹಾಮಹಿಮ || ೧೭ ||

ಭುವನ ಪಾವನ ಛರಿತ ಪುಣ್ಯ|
ಶ್ರವಣ ಕೀರ್ತನ ಪಾಪನಾಶನ|
ಕವಿಭಿರೀಡಿತ ಕೈರವದಳ ಶ್ಯಾಮ ನಿಸ್ಸೀಮ ||
ಯುವತಿ ವೇಷದಿ ಹಿಂದೆ ಗೌರೀ|
ಧವನ ಮೋಹಿಸಿ ಕೆಡಿಸಿ ಉಳಿಸಿದ|
ಇವನ ಮಾಯವ ಗೆಲುವನಾವನು ಈ ಜಗತ್ರಯದಿ || ೧೮ ||

ಪಾಪಕರ್ಮವ ಸಹಿಸುವೆಡೆ ಲ|
ಕ್ಷ್ಮೀಪತಿಗೆ ಸಮರಾದ ದಿವಿಜರ|
ನೀ ಪಯೋಜ ಭವಾಂಡದೊಳಗಾವಲ್ಲಿ ನಾ ಕಾಣೆ |
ಗೋಪ ಗುರುವಿನ ಮಡದಿ ಭೃಗು ನಗ||
ಚಾಪ ಮೊದಲಾದವರು ಮಾಡಿದ ಮ|
ಹಾಪರಾಧಗಳೆಣಿಸಿದನೆ ಕರುಣಾ ಸಮುದ್ರ ಹರಿ || ೧೯ ||

ಅಂಗುಟಾಗ್ರದಿ ಜನಿಸಿದಮರ ತ|
ರಂಗಿಣಿಯು ಲೋಕತ್ರಯಗಳಘ|
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ ||
ಇಂಗಡಲ ಮಗಳೊಡೆಯನಂಗೋ|
ಪಾಂಗಗಳಲಿಪ್ಪಮಲನಂತ ಸು|
ಮಂಗಳಪ್ರದನಾಮ ಪಾವನ ಮಾಳ್ಪುದೇನರಿದು || ೨೦ ||

ಕಾಮಧೇನು ಸುಕಲ್ಪತರು ಚಿಂ|
ತಾಮಣಿಗಳಮರೇಂದ್ರ ಲೋಕದಿ|
ಕಾಮಿತರ್ಥಗಳೀವುವಲ್ಲದೆ ಸೇವೆಮಾಳ್ವರಿಗೆ ||
ಶ್ರೀ ಮುಕುಂದನ ಪರಮ ಮಂಗಳ|
ನಾಮ ನರಕಸ್ಥರನು ಸಲಹಿತು|
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು || ೨೧ ||

ಮನದೊಳಗೆ ಸುಂದರ ಪದಾರ್ಥವ|
ನೆನೆದುಕೊಡೆ ಕೈಗೊಂಡು ಬಲು ನೂ|
ತನ ಸುಶೋಭಿತ ಗಂಧಸುರಸೋಪೇತ ಫಲರಾಶಿ |
ದ್ಯುನದಿನಿವಹಗಳಂತೆ ಕೊಟ್ಟವ|
ರನು ಸದಾ ಸಂತಯಿಸುವನು ಸ|
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ|| ೨೨ ||

ಚೇತನಾಚೇತನ ವಿಲಕ್ಷಣ|
ನೂತನ ಪದಾರ್ಥಗಳೊಳಗೆ ಬಲು|
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |
ಜಾತರೂಪೋದರ ಭವಾದ್ಯರೊ|
ಳಾತತೆ ಪ್ರತಿಮ ಪ್ರಭಾವ ಧ|
ರಾತಳ ದೊಳೆಮ್ಮೊಡನೆ ಆಡುತಲಿಪ್ಪ ನಮ್ಮಪ್ಪ || ೨೩ ||

ತಂದೆ ತಾಯ್ಗಳು ತಮ್ಮ ಶಿಶುವಿಗೆ|
ಬಂದ ಭಯಗಳ ಪರಿಹರಿಸಿ ನಿಜ|
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ ||
ಹಿಂದೆ ಮುಂದೆಡಬಲದಿ ಒಳ ಹೊರ|
ಗಿಂದಿರೇಶನು ತನ್ನವರ ನೆಂ|
ದೆಂದು ಸಲಹುವನಾಗಸದವೋಲೆತ್ತ ನೋಡಿದರು || ೨೪ ||

ಒಡಲ ನೆಳಲಂದದಲಿ ಹರಿ ನ|
ಮ್ಮೊಡನೆ ತಿರುಗುವನೊಂದರೆ ಕ್ಷಣ|
ಬಿಡದೆ ಬೆಂಬಲನಾಗಿ ಭಕ್ತಾಧೀನನೆಂದೆನಿಸಿ ||
ತಡೆವ ದುರಿತೌಘಗಳ ಕಾಮದ|
ಕೊಡುವ ಸಕಲೇಷ್ಟಗಳ ಸಂತತ|
ನಡೆವ ನಮ್ಮಂದದಲಿ ನವಸುವಿಶೇಷ ಸನ್ಮಹಿಮ || ೨೫ ||

ಬಿಟ್ಟವರ ಭವ ಪಾಶದಿಂದಲಿ|
ಕಟ್ಟುವನು ಬಹು ಕಠಿಣನಿವ ಶಿ|
ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ ||
ಕಟ್ಟುವರ ಭವ ಕಟ್ಟು ಬಿಡಿಸುವ|
ಸಿಟ್ಟಿನವನಿವನಲ್ಲ ಕಾಮದ|
ಕೊಟ್ಟು ಕಾವನು ಸಕಲ ಸೌಖ್ಯಗಳಿಹಪರಂಗಳಲಿ || ೨೬ ||

ಕಣ್ಣಿಗೆವೆಯಂದದಲಿ ಕೈ ಮೈ|
ತಿಣ್ಣಿಗೊದಗುವ ತೆರದಿ ಪಲ್ಗಳು|
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ ||
ಪುಣ್ಯ ಫಲಗಳನೀವುದಕೆ ನುಡಿ|
ವೆಣ್ಣಿನಾಣ್ಮಾಂಡದೊಳು ಲಕ್ಷ್ಮಣ|
ನಣ್ಣನೊದಗುವ ಭಕ್ತರವಸರಕಮರಗಣಸಹಿತ || ೨೭ ||

ಕೊಟ್ಟುದನು ಕೈಗೊಂಬರೆಕ್ಷಣ|
ಬಿಟ್ಟಗಲ ತನ್ನವರ ದುರಿತಗ|
ಳಟ್ಟುವನು ದೂರದಲಿ ದುರಿತಾರಣ್ಯ ಪಾವಕನು ||
ಬೆಟ್ಟ ಬೆನ್ನಲಿ ಹೊರಿಸಿದವರೊಳು|
ಸಿಟ್ಟು ಮಾಡಿದನೇನೋ ಹರಿ ಕಂ|
ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು || ೨೮ ||

ಖೇದ ಮೋದ ಜಯಾಪಜಯ ಮೊದ|
ಲಾದ ದೋಷಗಳಿಲ್ಲ ಚಿನ್ಮಯ|
ಸಾದರದಿ ತನ್ನಂಘ್ರಿ ಕಮಲವ ನಂಬಿ ತುತಿಸುವರ ||
ಕಾದುಕೊಂಡಿಹ ಪರಮ ಕರುಣ ಮ|
ಹೋದಧಿಯು ತನ್ನವರು ಮಾಳ್ದಪ|
ರಾಧಗಳ ನೋಡದಲೆ ಸಲಹುವ ಸರ್ವಕಾಮದನು || ೨೯ ||

ಮೀನ ಕೂರ್ಮ ವರಾಹ ನರ ಪಂ|
ಚಾನನಾತುಳ ಶೌರ್ಯ ವಾಮನ|
ರೇಣುಕಾತ್ಮಜ ರಾವಣಾರಿ ನಿಶಾಚರ ಧ್ವಂಸಿ ||
ಧೇನುಕಾಸುರ ಮಥನ ತ್ರಿಪುರವ|
ಹಾನಿಗೈಸಿದ ನಿಪುಣ ಕಲಿಮುಖ|
ದಾನವರ ಸಂಹರಿಸಿ ಕಾಯ್ದ ಸುಜನರನು || ೩೦ ||

ಶ್ರೀ ಮನೋರಮ ಶಮಲವರ್ಜಿತ|
ಕಾಮಿತ ಪ್ರದ ಕೈರವದಳ|
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ ||
ಸಾಮಸನ್ನುತ ಸಕಲ ಗುಣಗಣ|
ಧಾಮ ಶ್ರೀ ಜಗನ್ನಾಥ ವಿಠ್ಠಲ|
ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು || ೩೧ ||
**********


#ಕರುಣಾ ಸಂಧಿ#  
ಶ್ರೀ ಮದ್ ಹರಿಕಥಾಮೃತಸಾರ ಗ್ರಂಥದಲ್ಲಿ ಬರುವ ಎರಡನೆಯ ಅಧ್ಯಾಯದ ಕರುಣಾಸಂಧಿಯಲ್ಲಿ ಶ್ರೀ ಮಾನವಿ ಪ್ರಭುಗಳು ೨ನೇ ನುಡಿಯಲ್ಲಿಈ ಕೆಳಗಿನ ಪದವನ್ನು ಬಳಸಿದ್ದಾರೆ.
Para 2

ಮಳೆಯ ನೀರೋಣಿಯಲಿ ಪರಿಯಲು ಬಳಸರೂರೊಳಗಿದ್ದ  ಜನರಾ ಜಲವು ಹೆದ್ದೊರೆಗೂಡೆ ಮಜ್ಜನಪಾನಗೈದರು ಕಲುಷ ವಚನಗಳಾದರಿವು ಬಾಂಬೊಳೆಯ ಪೆತ್ತನ ಪಾದಮಹಿಮಾ ಜಲಧಿ ಪೊಕ್ಕದರಿಂದ ಮಾಣ್ದಪರೇ ಮಹೀಸುರರು

ಪ್ರತಿಪದಾರ್ಥ

ಮಳೆಯ ನೀರು - ಮೇಘಗಳಿಂದ ಸುರಿಯಲ್ಪಟ್ಟ ನೀರು
ಓಣಿಯಲಿ - ಇಕ್ಕಟ್ಟಾದ ಬೀದಿಗಳಲ್ಲಿ
ಪರಿಯಲು - ಹರಿಯುತ್ತಿರುವಾಗ
ಊರೊಳಗಿದ್ದ ಜನರು - ಆ ಊರಿನಲ್ಲಿ ವಾಸಿಸುವ ಜನರು
ಬಳಸರು - ಉಪಯೋಗಿಸಿಕೊಳ್ಳುವುದಿಲ್ಲ
ಆ ಜಲವು - ಆದರೆ ಅದೇ ನೀರು
ಹೆದ್ದೊರೆಗೂಡೆ - ದೊಡ್ಡದಾದ ನದಿಯನ್ನು ಸೇರಿದರೆ
ಮಜ್ಜನ - ಸ್ನಾನ
ಪಾನ - ಕುಡಿಯುವುದು
ಗೈದಪರು - ಇವುಗಳನ್ನು ಮಾಡುತ್ತಾರೆ
ಇವು - ಈ ಗ್ರಂಥಸ್ಥವಾದ ಮಾತುಗಳು
ಕಲುಷ ವಚನಗಳಾದರೂ - ಪ್ರಾಕೃತ ಭಾಷಾ ದೋಷಗಳಿಂದ ಕೂಡಿದ್ದರೂ
ಬಾಂಬೊಳೆಯ ಪೆತ್ತನ - ಆಕಾಶನದಿಯಾದ ಗಂಗೆಯನ್ನು ಪಡೆದಂತಹ ಪರಮಾತ್ಮನ
ಪಾದ ಮಹಿಮಾ - ಪಾದಗಳ ಮಹಾತ್ಮೆ ಎಂಬ
ಜಲಧಿ - ಸಮುದ್ರವನ್ನು
ಪೊಕ್ಕದರಿಂದ - ಸೇರಿರುವ ಕಾರಣದಿಂದ
ಮಹೀಸುರರು - ಜ್ಞಾನಿ ಶ್ರೇಷ್ಠರಾದ ಬ್ರಾಹ್ಮಣೋತ್ತಮರು
ಮಾಣ್ದಪರೇ - ಸ್ವೀಕರಿಸದೇ ಬಿಡುತ್ತಾರೆಯೇ.

ತಾತ್ಪರ್ಯ

ಮಳೆಯ ನೀರು ಬೀದಿಗಳಲ್ಲಿ ಹರಿಯುತ್ತದೆ. ಅದು ಅನುಪಯೋಗ. ಯಾರೂ ಬೀದಿಯ ನೀರನ್ನು ಸ್ನಾನಾಪಾನಾದಿಗಳಿಗೆ ಉಪಯೋಗಿಸುವುದಿಲ್ಲ. ಆದರೆ ಅದೇ ನೀರು ಹರಿದು, ದೊಡ್ಡ ತೊರೆಯನ್ನು ಸೇರಿದಾಗ, ಊರಿನ ಜನರು ಸ್ನಾನಪಾನಾದಿಗಳನ್ನು ಮಾಡುವರು. ಆದರೆ, ಲೋಕ ಪಾವನೆ ಗಂಗೆಯನ್ನು ಪೆತ್ತ ಗಂಗಾ ಪಿತನಾದ ರಂಗನ ಪಾದಪದ್ಮ ಎಂಬ ಮಹಾಸಮುದ್ರವನ್ನು ಪ್ರವೇಶಿಸುವುದರಿಂದ ಪ್ರಾಕೃತ ಗ್ರಂಥವಾದರೂ ಮಾನ್ಯವೇ ಸರಿ. ಜ್ಞಾನಿ ಶ್ರೇಷ್ಠರಾದ ವಿಪ್ರೋತ್ತಮರು ಇದನ್ನು ಸ್ವೀಕರಿಸದೆ ನಿರಾಕರಿಸುವುದಿಲ್ಲ. ಇದು ಪ್ರಾಕೃತ ಭಾಷೆಯಲ್ಲಿ ರಚಿತವಾಗಿದ್ದರೂ ಸರ್ವಲೋಕ ಪರಿಹಾರಕನಾದ ಅನಂತಕಲ್ಯಾಣಗುಣಾರ್ಣವನಾದ ಶ್ರೀಹರಿಯ ಮಹಿಮಾ ವಿಶೇಷಗಳನ್ನು ಹೇಳುವುದರಿಂದ ಸರ್ವರೀತಿಯಲ್ಲಿಯೂ ಜ್ಞಾನಿಗಳಿಂದ ಗ್ರಾಹ್ಯವು ಎಂದು ತಾತ್ಪರ್ಯ.
ಹರಿ ಸರ್ವೋತ್ತಮ ವಾಯು ಜೀವೋತ್ತಮ
ಶ್ರೀ ಕೃಷ್ಣಾರ್ಪಣಮಸ್ತು

***************

ಧನವ ಸಂರಕ್ಷಿಸುವ ಫಣಿ
ಶ್ರೀ ಮದ್ ಹರಿಕಥಾಮೃತಸಾರ ಗ್ರಂಥದಲ್ಲಿ ಬರುವ ಎರಡನೆಯ ಅಧ್ಯಾಯದ ಕರುಣಾಸಂಧಿಯಲ್ಲಿ ಶ್ರೀ ಮಾನವಿ ಪ್ರಭುಗಳು ೧೨ನೇ ನುಡಿಯಲ್ಲಿಈ ಕೆಳಗಿನ ಪದವನ್ನು ಬಳಸಿದ್ದಾರೆ.
ಧನವ ಸಂರಕ್ಷಿಸುವ ಫಣಿ
ಫಣಿ ಎಂದರೆ  ಹಾವು.
ಅದು ಭೂಗತವಾದ ನಿಧಿಯನ್ನು ಸದಾ ಕಾಯುತ್ತ ಇರುತ್ತದೆ. ಯಾರಾದರೂ ನಿಧಿಯನ್ನು ಅಪಹರಿಸಲು ಬಂದರೆ ಬುಸುಗುಟ್ಟುತ್ತದೆ.ಇಲ್ಲವೇ ಕಚ್ಚುತ್ತದೆ. .
ಏಕೆಂದರೆ
ಅದಕ್ಕೆ ಅದರ ಉಪಯೋಗ ಇಲ್ಲ.ತಾನು ಭೋಗಿಸುವದಿಲ್ಲ.ಇತರರಿಗೆ ಭೋಗಿಸಲು ಕೊಡುವದಿಲ್ಲ. ಆ ನಿಧಿ ಯಾರಿಗೆ ಸೇರಬೇಕು ಅವರಿಗೆ ಮಾತ್ರ  ಬಿಟ್ಟು ಕೊಡುತ್ತದೆ..
ಇದು ಲೋಕದ ಮಾತು.
ಅದೇ ರೀತಿ 
ಲಕುಮಿ ರಮಣನು ಅಷ್ಟೇ ಭಕ್ತರನ್ನು ಕಾಯುತ್ತಾನೆ.ಪ್ರಳಯ ಕಾಲದಲ್ಲಿ ಸಕಲ ಜೀವರಾಶಿಗಳನ್ನು ತನ್ನ ಉದರದಲ್ಲಿ ಧರಿಸಿಕೊಂಡು ಜೋಪಾನವಾಗಿ ಕಾಯುತ್ತಾನೆ.ಜೀರ್ಣ ಮಾಡುವದಿಲ್ಲ. ಮತ್ತೊಬ್ಬರಿಗೆ ಕೊಡುವದಿಲ್ಲ..
ಹಾವು ನಿಧಿಯನ್ನು ಯಾಕೆ ಕಾಯುತ್ತದೆ??, ಅದರಿಂದ ಏನು ತನಗೆ ಉಪಯೋಗ,?? ಎರಡು ಅದಕ್ಕೆ ತಿಳಿಯದು.
ಆದರೆ
ಶ್ರೀಹರಿ ಹಾಗಲ್ಲಕರುಣಾ ಸಮುದ್ರ..ಅವನು ಎಲ್ಲ ಜೀವರನ್ನು ಕಾಯುತ್ತಾನೆ.ಆ ಜೀವಿಯನ್ನು ಸೃಷ್ಟಿಗೆ  ತಂದು ಸಾಧನೆಯನ್ನು ಮಾಡಲು ಶರೀರವನ್ನು ಕೊಟ್ಟು ತಾನು ಒಳಗೆ ಇದ್ದು ಸಾಧನೆ ಯನ್ನು ಸಹ ಮಾಡಿಸುತ್ತಾನೆ.. 
ಭೂಮಿಯಲ್ಲಿ ಸ್ಥಾಪನೆ ಮಾಡಿರುವ ಧನವನ್ನು ಕಾದುಕೊಂಡಿರುವ ಸರ್ಪ ಅದರಲ್ಲಿ ಒಂದು ಕಾಸನ್ನು ಸಹ ತನ್ನ ಉಪಯೋಗಕ್ಕೆ ಬಳಸದೇ,ಮತ್ತೊಬ್ಬರು ಅದರ ತಂಟೆಗೆ ಬಾರದಂತೆ ಹೇಗೆ ಕಾಯುವದೋ..
ಹಾಗೇ 
ನಮ್ಮ ಸ್ವಾಮಿ ತನ್ನ ಭಕ್ತರಿಂದ ಯಾವ  ಪ್ರತಿಫಲವನ್ನು ಅಪೇಕ್ಷಿತ ಪಡದೇ,ತನ್ನ ಮೊರೆಹೊಕ್ಕ ಶರಣರನ್ನು ಕಾದುಕೊಂಡು ಅವರಿಗೆ ಬಂದ ಆಪತ್ತುಗಳನ್ನು ಕಳೆದು ಅವರ ರಕ್ಷಣಾ ಮಾಡುತ್ತಾ ಇರುವನು.
ಶ್ರೀ  ರಮಾಪತಿಗೆ ತನ್ನ ಭಕ್ತರು ಇಂದ ಯಾವ ವಿಧವಾದ ಪ್ರಯೋಜನವು ಇಲ್ಲದೇ ಇದ್ದರು ಭಕ್ತರನ್ನು ಎಡಬಿಡದೆ ಕಾದುಕೊಂಡಿದ್ದು ಸದಾ ರಕ್ಷಿಸುವ ಎಂಬ ಅರ್ಥವನ್ನು ತಿಳಿಸಲೋಸುಗ  ಧನವ ಸಂರಕ್ಷಿಸುವ ಫಣಿ ಎನ್ನುವ ಪದದಿಂದ ಅವನ ಗುಣವನ್ನು ಕಾರುಣ್ಯವನ್ನು ಮಾನವಿ‌ಪ್ರಭುಗಳು ಕೊಂಡಾಡಿದ್ದಾರೆ.,
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಗಜ ,ಧ್ರುವ ,ಬಲಿ, ಪಾಂಚಾಲಿ, ವರದನೆಂಬ| 
ನಿಜವಾದ ಬಿರುದುಳ್ಳ ವಿಜಯವಿಠ್ಢಲ ರೇಯಾ|
🙏ಅ.ವಿಜಯವಿಠ್ಢಲ🙏
********

ಶ್ರೀ ಮುಕುಂದನ  ಪರಮ ಮಂಗಳನಾಮ| ನರಕಸ್ಥರನು ಸಲಹಿತು||

ಶ್ರೀ ಮದ್ ಹರಿಕಥಾಮೃತ ಸಾರದಲ್ಲಿ ಬರುವ ಕರುಣಾಸಂಧಿಯಲ್ಲಿ ಬರುವ ೨೧ನೇ ನುಡಿಯಲ್ಲಿ ಶ್ರೀ ಮಾನವಿ ಪ್ರಭುಗಳು ಭಗವಂತನ ನಾಮದ ಮಹಿಮೆಯನ್ನು ಬಹುವಾಗಿ ಹೇಳಿದ್ದಾರೆ.
ಅದರ ಬಗ್ಗೆ ನನ್ನ ಅಲ್ಪಮತಿಗೆ ತಿಳಿದಷ್ಟು..
ಭಗವಂತನ ಸೃಷ್ಟಿ ಯಲ್ಲಿ ಬಂದ ದೇವಲೋಕದ ಕಾಮಧೇನು ಕಲ್ಪವೃಕ್ಷ ಇವುಗಳು ಯಾರು ಏನು ಕೇಳಿದರು ಕೊಡಬಲ್ಲವು.ಅದು ಕೇಳುವವರ ಯೋಗ್ಯತೆ ,ಸ್ವಭಾವ,ಉದ್ದೇಶವನ್ನು ಅವುಗಳು ನೋಡುವದೇ ಇಲ್ಲ..ಇದು ಅವುಗಳಲ್ಲಿ ಇರುವ ಒಂದು ದೋಷ..
 ಭಗವಂತನ ನಾಮಕ್ಕೆ ಸಹ ವಿಶೇಷತೆ ಇದೆ.
ಇದು ಸಹ ಯೋಗ್ಯತೆ ಉಳ್ಳವರು ಕೇಳಿದಾಗ ಮಾತ್ರ ಅವರ ಸ್ವಭಾವ ಉದ್ದೇಶ ನೋಡಿ ಸ್ವಾಮಿ ಅನುಗ್ರಹ ಮಾಡುತ್ತಾನೆ.
ಈ ಕಾಮಧೇನು ಕಲ್ಪವೃಕ್ಷ ಇವು ಸ್ವರ್ಗದಲ್ಲಿ ಮಾತ್ರ ಇವೆ.ಅಲ್ಲಿ ಇರುವವರಿಗೆ ಮಾತ್ರ ಕೇಳಿದ್ದು ಕೊಡುತ್ತವೆ.
ಭೂಲೋಕಕ್ಕೆ ಬಂದಾಗ  ಅದೇ ರೀತಿ ಪ್ರಭಾವ ತೋರಿದ ಬಗ್ಗೆ ಸಹ ಉಲ್ಲೇಖವಿದೆ.
ಆದರೆ ನಮ್ಮ ಸ್ವಾಮಿಯ ನಾಮ ಹಾಗಲ್ಲ..
ನರಕದಲ್ಲಿ ಇದ್ದವರಿಗೆ ಸಹ ಸ್ವರ್ಗ ಮೋಕ್ಷ ಅದಿ ಪುರುಷಾರ್ಥ ಫಲಗಳನ್ನು ಕೊಡುತ್ತದೆ ಎಂದು ದಾಸರಾಯರ ವಾಣಿ.
ಹೇಗೆ ಎಂದರೆ
ಒಮ್ಮೆ ನಾರದರು ವೈಕುಂಠಕ್ಕೆ ಹೋದಾಗ ಭಗವಂತನ ಬಳಿ ನರಕ ಲೋಕವನ್ನು ನೋಡಬೇಕು ಎನ್ನುವ ಅಭಿಲಾಷೆಯನ್ನು ವ್ಯಕ್ತ ಪಡಿಸುತ್ತಾರೆ. 
ಇವರು ದೇವರ್ಷಿಗಳು.
ನರಕವಾಸ ಇವರಿಗಿಲ್ಲ..ಮತ್ತು ಅದನ್ನು ಕಂಡವರಲ್ಲ..ಕಾಣುವ ಕುತೂಹಲ ದಿಂದ ಭಗವಂತನ ಆಜ್ಞೆಯನ್ನು ಪಡೆದು ಬರುತ್ತಾರೆ. 
ಅಲ್ಲಿ ನರಕ ವಾಸಿ ಗಳು ಪಡುವ ಕಷ್ಟ ಶಿಕ್ಷೆಯನ್ನು ನೋಡಿ ಅವರಿಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ನಾರಾಯಣ ಎನ್ನುವ ಮಂತ್ರ ಈ ನರರ ಸ್ವಾಧೀನ ದಲ್ಲಿ ಇರುವ  ನಾಲಿಗೆ ಮೇಲೆ ಇದ್ದರು ಜನರು ಅದನ್ನು ಹೇಳದೆ ನರಕಕ್ಕೆ ಬೀಳುವವರಲ್ಲ ಎಂದು..
ನಂತರ ಅವರ ಮೇಲೆ ಅನುಕಂಪದಿಂದ ಉನ್ನತವಾದ ದೊಡ್ಡ ಬಂಡೆಯ ಮೇಲೆ  ನಿಂತು ತಮ್ಮ ವೀಣೆ ನುಡಿಸುತ್ತಾ ಭಗವಂತನ ನಾಮ ಸ್ಮರಣೆ ಜೋರಾಗಿ ಮಾಡುತ್ತಾರೆ.
ಗೋವಿಂದ ,ನಾರಾಯಣ, ವಾಸುದೇವ,,ಮುಕುಂದ,ಕೃಷ್ಣ, ಅಚ್ಯುತ,ಮಾಧವ,ನೃಸಿಂಹ,
ದೇವೇಶ,ಹರೇ,ಮುರಾರೇ
ರಮೇಶ,ಲೋಕೇಶ, ಜಗನ್ನಿವಾಸ, ಖಗವಾಹನ,ವಾರಿಜಾಕ್ಷ,ನಾರಾಯಣ ಅಖಿಲಗುರೋ ಜಗತಾಮಧೀಶ
ಎಂದು ನಾಮ ಸಂಕೀರ್ತನ ಮಾಡಿದರು.
ನರಕವಾಸಿಗಳು ಆ ನಾಮಾಮೃತ ಪಾನ ಮಾಡಿ ಪಾವನರಾದರು.
ತಕ್ಷಣವೇ ಪುಷ್ಪಕ ವಿಮಾನ ಬಂದಿತು. ಎಲ್ಲಾ ರು ಸ್ವರ್ಗಕ್ಕೆ ಹೋದರು.
ಇದರ ಹಿನ್ನೆಲೆ ಇಷ್ಟೇ..
*ನಾರದರು ಯಮಪುರಿಗೆ ಹೋದಾಗ 
ಅಲ್ಲಿ ಮೋಕ್ಷ ಯೋಗ್ಯತೆ ಉಳ್ಳವರು ಅನೇಕರು ವಿಷ್ಣುವಿನ ದ್ವೇಷವನ್ನು ಮಾಡಿದವರ ಸಂಗ ದೋಷದಿಂದ  ನಿಷಿದ್ದ ಕರ್ಮಗಳನ್ನು ಆಚರಿಸಿ ಏಕಾದಶಿ ಭೋಜನ ,ಮಾತಾಪಿತೃಗಳ ಮತ್ತು ಗುರುಗಳ ದ್ವೇಷ,ದಂಪತಿಗಳಿಗೆ ವಿಯೋಗ ಉಂಟುಮಾಡುವದು,ಪರರ ವಿತ್ತ,ಮತ್ತು  ಮಡದಿ ಅಪಹರಣ,ಹರಿಕಥಾ ಕೇಳದೆ ಇರುವದು,ಹರಿನೈವೇದ್ಯ ಭುಂಜಿಸದೇ ನಿಷೇಧ ಪದಾರ್ಥಗಳು ಭಕ್ಷಣೆ,..ಹೀಗೆ ಅನೇಕ ಪಾಪ ಕರ್ಮಗಳನ್ನು ಮಾಡಿ ಅದರ ಶಿಕ್ಷೆ ಅನುಭವಿಸುವ ಅವರನ್ನು ನೋಡಿ ದುಃಖಿತರಾಗಿ ಇವರಿಗೆ ಸದ್ಗತಿಯನ್ನು ಕೊಡಲು ಭಗವಂತನ ಬಳಿ ಪ್ರಾರ್ಥನೆ ಮಾಡಿದರು. ಆದರೆ ಅದು ಅಲ್ಲಿ ಇರುವ ಎಲ್ಲರಿಗೂ ರುಚಿಸಲಿಲ್ಲ.
ಸಕ್ಕರೆ ಕಾಯಿಲೆ ಇದ್ದವನಿಗೆ ಸಿಹಿ ಕಂಡರೆ ಸಿಟ್ಟು.
ಇಲ್ಲದವನಿಗೆ ಸಿಹಿ ಇಷ್ಟ. ಹಾಗೇ ಭಗವಂತನ ನಾಮಾಮೃತ  ಮೋಕ್ಷಯೋಗ್ಯರಿಗೆ ಮಾತ್ರ ರುಚಿಸಿತು.ಅವರು  ಅದನ್ನು ಪಾನ ಮಾಡಿ ಸ್ವರ್ಗಕ್ಕೆ ಹೋದರು.
ಇದೇ ಭಗವಂತನ ನಾಮದ ಮಹಿಮೆ. ಮತ್ತು ಕಾಮಧೇನು ಇವುಗಳಿಗಿರುವ ವ್ಯತ್ಯಾಸ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಪೊಂದಿ ಭಜಿಸು ಸತತ ಒಂದೇ ಮನದಿ |ಸ್ತಂಭ ಮಂದಿರ ಮಾನವಿ ದಾಸಾರ್ಯರ||
🙏ಶ್ರೀ ಕಪಿಲಾಯ ನಮಃ🙏
********

ಧೇನುಕಾಸುರ ಮಥನ
✍ಶ್ರೀ ಮದ್ ಹರಿಕಥಾಮೃತ ಸಾರದಲ್ಲಿ ಬರುವ ಎರಡನೆಯ ಸಂಧಿ ಕರುಣಾ ಸಂಧಿ.
ಇದರಲ್ಲಿ ೩೦ನೆ ನುಡಿಯಲ್ಲಿ
ಈ ಸಾಲನ್ನು ನಮ್ಮ ಮಾನವಿ ಪ್ರಭುಗಳಾದ ಶ್ರೀ ಜಗನ್ನಾಥ ದಾಸರಾಯರು ಹೇಳಿದ್ದಾರೆ.

ಧೇನು ಅಂದರೆ ಗೋರೂಪಳಾದ ಭೂಮಿ.
ಕ ಅಂದರೆ ಬ್ರಹ್ಮ.
ಇವರಿಗಾಗಿ ಭಗವಂತ ಅಸುರ ಸಂಹಾರ ಕಾರ್ಯ ಮಾಡಿದವ.
ದುಷ್ಟ ಜನರ ಭೂಭಾರದಿಂದ ನೊಂದ ಭೂದೇವಿ ಕಣ್ಣೀರು ಇಡುತ್ತಾ ಭಗವಂತನ ಬಳಿ ಸಕಲ ದೇವತಾಪರಿವಾರ ಮತ್ತು ಬ್ರಹ್ಮ ದೇವರನ್ನು ಮೊದಲು ಗೊಂಡು ಬಂದಾಗ,ಭೂದೇವಿಯ ಮತ್ತು ಬ್ರಹ್ಮ ದೇವರ ಹಾಗು ಸಕಲ ದೇವತೆಗಳ ಮತ್ತು ಋಷಿಗಳ ಪ್ರಾರ್ಥನೆ ಯಂತೆ ಶ್ರೀ ಹರಿ ಮಾಡಿದ ಅವತಾರವೇ ಕೃಷ್ಣಾವತಾರ.
ಭೂಮಿಗೆ ಭಾರವಾದ ಕಂಸ ಮೊದಲಾದ ಅಸುರರ ಸಂಹಾರ ವನ್ನು ಮಾಡಿದವ ನಮ್ಮ ಶ್ರೀಹರಿ.
ಇಲ್ಲಿ ಧೇನುಕ ಒಬ್ಬ ಅಸುರ.ಅವನು ಕಂಸನ ಪರಿವಾರದವರಲ್ಲಿ ಒಬ್ಬ. ಮತ್ತು ಅವನು ಸಂಹಾರ ಗೊಂಡಿದ್ದು ಬಲರಾಮ ನಿಂದ.
*ಹಾಗಾದರೆ ಕೃಷ್ಣ ನಿಗೆ ಏಕೆ ಧೇನುಕಾಸುರ ಮಥನ ಅಂತ ಹೇಳಿದ್ದು
ಅಂತ ಸಂದೇಹ ಬರುತ್ತದೆ
ಮತ್ಸ್ಯ ಕೂರ್ಮ ವರಾಹ ನರಸಿಂಹ.ವಾಮನ,
ಪರುಶುರಾಮ,ರಾಮ,ಕೃಷ್ಣ ಬೌದ್ದ,ಕಲ್ಕಿ
ಇವೆಲ್ಲವೂ ಸಂಪೂರ್ಣ ವಾಗಿ ಶ್ರೀ ಹರಿಯ ದಶಾವತಾರಗಳು..

ಗಣಪತಿಯ ವರ ಪಡೆದು ಅವಧ್ಯನಾಗಿ ,ಚಿರಾಯುವಾಗಿದ್ದ ಧೇನುಕ ಎನ್ನುವ ಅಸುರ.
ಕತ್ತೆಯ ರೂಪದಿಂದ ತನ್ನ ಪರಿವಾರದವರು ಸಹ ಅದೇ ರೂಪದಿಂದ ತಾಳೆ ತೋಪಿನಲ್ಲಿ ಸಂಚಾರಮಾಡುತ್ತಾ ಸಿಕ್ಕ ಸಿಕ್ಕವರೆಗೆಲ್ಲ ಒದೆಯುತ್ತಾ ಸಂಚಾರ ಮಾಡುತ್ತಾ ಇದ್ದನು.
ತಾಳೆಯ ತೋಪು ಅವನ ಸಾಮ್ರಾಜ್ಯ ವಾಗಿತ್ತು. ಅಲ್ಲಿ ಹೋಗಲು ಎಲ್ಲರು ಭಯಪಡುತ್ತಾ ಇದ್ದರು.
ಗೋಪ ಬಾಲಕರು ತಾಳೆಯ ಹಣ್ಣಿನ ವಾಸನೆಗೆ ಮನಸೋತು ತಿನ್ನುವ ಅಪೇಕ್ಷಿತ ವನ್ನು ಕೃಷ್ಣ ಬಲರಾಮರಿಗೆ ವ್ಯಕ್ತಪಡಿಸಿದಾಗ ಭಗವಂತ ತನ್ನ ಗೋಪಬಾಲರ ಸಮೂಹದೊಡನೆ ಅಲ್ಲಿ ಪ್ರವೇಶ ಮಾಡಿದ.ಕತ್ತೆಗಳ ಸಮೂಹ ಗೋಪಬಾಲರನ್ನು ಒದೆಯಲು ತೊಡಗಿತು.
ಧೇನುಕ ಕತ್ತೆಯ ರೂಪದಿಂದ ಬಲರಾಮನನ್ನು ಒದೆಯಲೆಂದು ತನ್ನ ಎರಡು ಕಾಲನ್ನು ಮೇಲೆ ಎತ್ತಿದ...
ಬಲರಾಮನಿಗೆ ಅಸುರ ಸಂಹಾರ ಮಾಡುವ ಕ್ರಮ ಹೇಳಿಕೊಟ್ಟು , ಅವನಿಗೆ ತಕ್ಕ ಶಕ್ತಿ ತುಂಬಲು ತಾನು ಶುಕ್ಲ ಕೇಶ ರೂಪದಿಂದ ಆವೇಶಗೊಂಡು ಅವನಿಂದ ಆ ದೈತ್ಯನ ಸಂಹರಿಸಿ ಆ ಬಲ ಕಾರ್ಯವನ್ನು ಲೀಲಾಜಾಲವಾಗಿ ಮಾಡಿಸಿ ಬಲರಾಮನೆಂಬ ಹೆಸರನ್ನು ಸಾರ್ಥಕ ವಾಗುವಂತೆ ಮಾಡಿದ...
ಆದ್ದರಿಂದ ಧೇನುಕಾಸುರನ ಸಂಹಾರ ಮಾಡಿದ ಯಶಸ್ಸು ಕೃಷ್ಣ ನಿಗೆ ಸೇರಬೇಕು. ಇಲ್ಲಿ ಬಲರಾಮ ನಿಮಿತ್ತ ಮಾತ್ರ.
ಈ ಅಭಿಪ್ರಾಯ ದಿಂದ ಧೇನುಕಾಸುರ ಮಥನ ಎಂದು ಹೇಳಲಾಗಿದೆ.
ಬ್ರಹ್ಮಾಂಡ ಪುರಾಣದ ಕೃಷ್ಣ ಅಷ್ಟೋತ್ತರ ಶತ ನಾಮ ಸ್ತೋತ್ರ ದಲ್ಲಿ ಬರುವ ಸಾಲು
ವತ್ಸವಾದ ಹರೋ ನಂತೋ
ಧೇನುಕಾಸುರ ಭಂಜನಃ
ಶ್ರೀ ಕೃಷ್ಣ ವತ್ಸವಾದ ಹರ ಅಂದರೆ 
ಶಿವನ ವರದಿಂದ ಪ್ರಬಲನಾದ ಕರುವಿನ ರೂಪದಿಂದ ಬಂದ ವತ್ಸಾಸುರರನ್ನು ಕೃಷ್ಣ ಅವನ ಹಿಂಗಾಲು ಬಾಲಗಳಲ್ಲಿ ಹಿಡಿದೆತ್ತಿ ಬೀಸಿ ಬೇಲದ ಮರದ ತುದಿಗೆ ಎಸೆದು ಕೊಂದ...
ಉದುರಿದ ಬೇಲದ ಹಣ್ಣುಗಳನ್ನು ಗೋಪ ಬಾಲಕರಿಗೆ ಉಣಿಸಿದ.
ಇದೇ ರೀತಿ ಧೇನುಕಾಸುರ ಸಂಹಾರ ಮಾಡಿದ ಬಗ್ಗೆ ಮೇಲೆ ತಿಳಿಸಿದೆ.
ತನ್ನ ಸೋದರ ಮಾವ ನಾದ ಕಂಸನನ್ನು ಅಂಧ ತಮಸ್ಸಿಗೆ ಕಳುಹಿಸುವ ಮುಂಚೆ ಅವನ ಸಾಕುತಾಯಿ ಪೂತನೆ,ನಂತರ  ತೃಣಾವರ್ತ,ಬಕಾಸುರ,ವತ್ಸಾಸುರ,ಶಕಟಾಸುರ,ವೃಷಭಾಸುರ, ಆ ನಂತರ ಬಂದ ಚಾಣೂರ ಮುಷ್ಟಿಕ ಮಲ್ಲರು, ಮತ್ತು ಅವನ ಪಟ್ಟದಾನೆ ಕುವಲಯಾ ಪೀಡ,ಪಟ್ಟದ ಕುದುರೆ ಕೇಶಿದಾನವ,ಅವನ ಅಪಾರವಾದ ಸೇನಾಬಲ, ನಂತರ ಕೊನೆಯಲ್ಲಿ ಕಂಸನನ್ನು ಸಹ ಸಂಹರಿಸಿದ.
ಹೀಗೆ  ಅವನ ಪರಿವಾರವನ್ನು ಮೊದಲು ಕಳುಹಿಸಿ ನಂತರ ಕಂಸನ ಸಂಹಾರ ಮಾಡಿದವ ಶ್ರೀಕೃಷ್ಣ ಪರಮಾತ್ಮ.
ಈ ಕಂಸನ ಪರಿವಾರ  ದೇವತೆಗಳ ವರವನ್ನು ಒಳಿತಿಗಾಗಿ ಬಳಸದೇ ದುರುಪಯೋಗ ಪಡಿಸಿಕೊಂಡವರು...
ಹಾಗಾಗಿ ಇಲ್ಲಿ ಉದಾಹರಣೆಗೆ ಧೇನುಕಾಸುರ ನನ್ನು ದಾಸರು ಹೇಳಿದ್ದಾರೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ದುಷ್ಟ ರೆನ್ನದೆ ದುರ್ವಿಷಯದಿಂ|
ಪುಷ್ಟರೆನ್ನದೆ ಪೂತಕರ್ಮ|
ಭ್ರಷ್ಟರೆನ್ನದೆ ಶ್ರೀದ ವಿಠ್ಠಲ ವೇಣುಗೋಪಾಲ|
ಕೃಷ್ಣ ಕೈ ಪಿಡಿಯುವನು ಸತ್ಯ|
ವಿಶಿಷ್ಟ ದಾಸತ್ವವನ್ನು ಪಾಲಿಸಿ|
ನಿಷ್ಟೆಯಿಂದಲಿ ಹರಿಕಥಾಮೃತ ಸಾರ ಪಠಿಸುವರಾ||
🙏ಶ್ರೀ ಕಪಿಲಾಯ ನಮಃ🙏
****