..
kruti by Nidaguruki Jeevubai
ಬಂದಾ ಗೋವಿಂದನು ಗೋಕುಲದಿಂದ
ಆನಂದ ಮುಕುಂದನು ಪ
ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ
ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ
ಕರದಿ ಕಂಕಣ ವಂಕಿಯು ಹೊಳೆಯುತಲಿ
ಸಿರದಿ ಕಿರೀಟ ಮುಂ-
ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ
ಬೆರಳುಗಳಲಿ ಉಂಗುರ
ಥಳಥಳಥಳ ಹೊಳೆಯುವ ಸೊಬಗಿನಲಿ
ಕೊರಳೊಳು ಸರಿಗಿಯ ಸರ
ಪರಿ ಪರಿ ಸರ ಪದಕಗಳ್ಹೊಳೆಯುತಲಿ
ಜರಿ ಪೀತಾಂಬರದ ನಡುವಿಲಿ
ಕಿರು ಗೆಜ್ಜೆಗಳ್ಹೊಳೆಯುತಲಿ
ತರುತುರು ತರುಣೇರು ಮರುಳಾಗುವ ತೆರ
ಪರಿಪರಿ ರಾಗದಿ ಮುರಳಿಯ ನುಡಿಸಲು
ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ
ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ1
ತುಂಬುರು ನಾರದರೆಲ್ಲರು ಕೂಡಿ
ಅಂಬರದಲಿ ನೆರೆದರು
ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ
ಪರಮಾತ್ಮನ ಸ್ತುತಿಸುತ
ರಂಭೆ ಊರ್ವಶಿ ಮೇನಕೆಯರು ಕೂಡಿ
ಆನಂದದಿ ನರ್ತಿಸೆ
ಇಂದಿರೆ ರಮಣನ ಗುಣಗಳ ಪಾಡಿ
ಅಂಬರದಲಿ ದೇವ ದುಂದುಭಿಗಳು ಮೊಳಗಲು
ಕಂದರ್ಪನ ಪಿತ ಕರುಣದಿ ಭಕುತರ
ಚಂದದಿ ದುರ್ಮತಿ ನಾಮ ವತ್ಸರದಲಿ
ಕುಂದಿಲ್ಲದೆ ಸಲಹುವೆನೆನುತಲಿ ತ್ವರ 2
ಸೃಷ್ಟಿಗೀಶನ ಗುಣಗಳ ಪಾಡುತಲಿ ವ-
ಶಿಷ್ಠರು ವಿಶ್ವಾಮಿತ್ರ
ಕಶ್ಯಪ ಭಾರದ್ವಾಜ ಮುನಿಗಳು
ದೇವೇಶನ ಸ್ತುತಿಸುತ
ಅತ್ರಿ ಜಮದಗ್ನಿ ಜಾಬಾಲಿಗಳು
ಶ್ರೀಕೃಷ್ಣನೆ ಪರನೆಂದು-
ತ್ತಮ ಋಷಿಗಳು ಪೊಗಳುತಲಿರಲು
ಸೃಷ್ಟಿಗೊಡೆಯ ಪರಮೇಷ್ಠಿ ಪಿತನ ತ-
ನ್ನಿಷ್ಟ ಭಕುತರನು ಸಲಹಲು ಕಂಕಣ
ಕಟ್ಟಿಹ ಕಮಲನಾಭವಿಠ್ಠಲ ತ್ವರ
ಶಿಷ್ಟರ ಸಲಹಲು ಸರಸರ ಓಡುತ 3
***