Showing posts with label ಳ- helavana katte ankita compositions from kanaja website. Show all posts
Showing posts with label ಳ- helavana katte ankita compositions from kanaja website. Show all posts

Thursday, 9 September 2021

helavana katte ankita compositions from kanaja website


ಸಮಗ್ರ ದಾಸ ಸಾಹಿತ್ಯ


ರಚನೆಗಳು

ಹೆಳವನಕಟ್ಟೆ ಗಿರಿಯಮ್ಮ


ಗಿರಿಯಮ್ಮ ಯಾವುದೋ

೪೨

ಭಕ್ತವತ್ಸಲನೆಂಬ ಬಿರುದು ಬಿಡದಿರು ದೇವ

ಬಹು ಪರಾಕೆಲೊ ಮುರಾರಿ ಪ.

ಶಕ್ತ ನೀನೆಂದು ನಂಬಿರುವೆ ಕೃಪಾಸಿಂಧು

ರಾಕ್ಷಸಾಂತಕ ಸಲಹೊ ರಾಜೀವದಳನೇತ್ರ ಅ.ಪ.

ಮತ್ತಗಜ ಮೈಮರೆದು ಸುತ್ತಿ ಕೆಸರೊಳು ಬಿದ್ದು

ಶಕ್ತಿ ಹೀನನಾಗಿ ಏಳದಂತಾಗಿದೆ

ಮತ್ತಾರಿಗಳವಲ್ಲ ಮಂದರಾದ್ರಿಧರನೆ

ಎತ್ತಿ ಕಡೆಹಾಯಿಸೊ ಎನ್ನೊಡೆಯ ಶ್ರೀ ಹರಿಯೆ ೧

ನಿಂದ ನೆಲ ಮುನಿಯುತಿದೆ ನಿಪುಣತನವಡಗಿತು

ಮಂದಮತಿ ವೆಗ್ಗಳಿಸಿ ನೆಲೆಗಾಣೆ ಮುಂದೆ

ತಂದೆ ನೀನಲ್ಲದಿನ್ಯಾರು ರಕ್ಷಿಪರಯ್ಯ

ಬಂಧನವ ಪರಿಹರಿಸೊ ಭಯನಿವಾರಣ ಹರಿಯೆ ೨

ಕೊಂಡೆಯರ ಕೆಡಮೆಟ್ಟಿ ಕುಹಕಿಗಳ ಮಸ್ತಕವ

ಚೆಂಡಾಡಿದ ಚಿನ್ಮಯರೂಪ ನೀನು

ದಿಂಡರಿದು ದುರಳರನು ದುರಿತಗಳ ಪರಿಹರಿಸಿ

ಪಾಂಡವರಿಗೊಲಿದು ಪಾಲಿಸಿದೆ ಪುಂಡರೀಕಾಕ್ಷ ೩

ನಾಲ್ಕು ದಿಕ್ಕಿಗೆ ನಾಲ್ಕು ಪರಿಯ ಬಂಧನದಿಂದ

ವ್ಯಾಕುಲದಿ ಕೃಷ್ಣಮೃಗವು ಎದೆಗುಂದಿರೆ

ನೀ ಕರುಣಿ ಸಮಯದಲಿ ವೃಷ್ಟಿಯ ಕರೆದು

ಜೋಕೆಯಲಿ ಪಥವೆನೇರಿಸಿದ್ಯೊ ಜಗದೀಶ ೪

ನಿನ್ನನೆ ಪೂಜಿಪೆನು ನಿನ್ನನೆ ಪಾಡಿ ಪೊಗಳುವೆನು

ನಿನ್ನನೆ ನಂಬಿದವಳಿಗಿಂತ

ಉನ್ನತವಾದ ಕಂಟಕವು ಬಂದಿದೆ ಕಾಯೊ

ಪನ್ನಗಶಯನ ಹೆಳವನಕಟ್ಟೆ ರಂಗಯ್ಯ ೫

 

೪೩

ಭಕ್ತಳ ಬನ್ನ ಪರಾಕು ಭಾಗ್ಯದ ನಿಧಿಯೆ ಪ.

ನಿನ್ನ ನಂಬಿದೆ ನೀರಜಾಕ್ಷ ಪರಾಕು

ನಿನ್ನ ರನ್ನೆಯ ಒಲುಮೆ ಬೇಕು ಪರಾಕು

ಅನ್ಯರ ಸಂಗವನೊಲ್ಲೆ ಪರಾಕು

ಎನ್ನಪೇಕ್ಷೆಯ ಸಲಿಸೊ ಪರಾಕು ೧

ಶೇಷಶಯನ ಶ್ರೀನಿವಾಸ ಪರಾಕು

ಸಾಸಿರನಾಮದ ಒಡೆಯ ಪರಾಕು

ದೋಷ ದುರಿತಹರ ಸ್ವಾಮಿ ಪರಾಕು

ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು ೨

ರತಿಪತಿಪಿತ ಮಾಧವನೆ ಪರಾಕು

ಅತಿರೂಪ ಎನ್ನಯ್ಯನೆ ಪರಾಕು

ಹಿತ ವಿರಹಿತರ ಕಾಯೊ ಪರಾಕು

ಕರ್ತು ಹೆಳವನಕಟ್ಟೆರಂಗ ಪರಾಕು ೩

 

ಜಾನಕಿಗೆ ಮುದ್ರೆಯನಿತ್ತ

೨೭

ಭೀಮಾ ಹೋ ಭಲಾರೆ ನಿಸ್ಸೀಮ ಹೋ ಭಾಪುರೆ ಹನುಮ ಹೋ ಪ.

ನಿಜಜಿತಕಾಮ ಹೋ ಕಾರುಣ್ಯಧಾಮ ಹೋ

ರಾಮಚಂದ್ರನ ಚರಣಕಮಲಸರಾಮ ಕಾರ್ಯಧುರಂಧರನೆ ಅ.ಪ.

ಆಂಜನೇಯ ಸುಕುಮಾರ ಅದ್ಭುತಮಹಿಮ ರಾಮ[ನ] ದೂತನೆ

ಅಂಜದುದಧಿಯ ದಾಟಿ ಅಸುರನ[ವ] ನವ ಕಿತ್ತನೆ

ಕಂಜಮುಖಿ ಜಾನಕಿಗೆ ಮುದ್ರೆಯನಿತ್ತ ಬಲುಪ್ರಖ್ಯಾತನೆ

ರಂಜಿಪ ಲಂಕಾನಗರವನು ಸುಟ್ಟು ರಾಜಕಾರ್ಯವ

ಮಾಡಿಸಿದೆ ಕಲಿ ೧

ಅವನಿತನುಜೆಯ ಚೂಡಾರತ್ನವ ಅಂಬುಜಾಕ್ಷನಿಗಿತ್ತನೆ

ಸಮರಕನುಕೂಲವೆಂದು ರಾಮಗೆ ಸುಗ್ರೀವನ ಕಾಣಿಸಿದನೆ

ಕಮಲನಾಭನ ಆಜ್ಞೆಯಿಂದಲಿ ಕಪಿಬಲವ ಕೂಡಿಸಿದನೆ

ಸಮುದ್ರವನು ಕಟ್ಟಿ ಬಲವ ನಡೆಸಿದ

ಬಹುಪರಾಕ್ರಮಿಯಹುದಹುದೊ ಕಲಿ ೨

ಅಗಳುಸಾಗರ ಮಧ್ಯದಲ್ಲಿಹ ನಗರವನು ಬಂದು ಮುತ್ತಿದೆ

ಬಗೆದು ಕಲ್ಮರಗುಂಡಿನಿಂದಲಿ ವಿಗಡದೈತ್ಯರ ಮಡುಹಿದೆ

ಬಗೆಬಗೆ ಮಯಾಜಾಲವನು ಗೆದ್ದು ಭರದೊಳದ್ರಿಯ ತುಡುಕಿದೆ

ಜಗತ್ಪತಿಯ ಮೂರ್ಬಲವನೆಲ್ಲವ ಸಂಜೀವನವ ತಂದುಳುಹಿದೆ ೩

ಪೃಥ್ವಿಯೊಳಗುದ್ದಂಡ ದೈತ್ಯರ ಸುತ ಸಹೋದರರ ಮಡುಹಿದೆ

ಹತವ ಮಾಡಿ ಶ್ರೀರಾಮ ಬಾಣದಿ ಹತ್ತು ತಲೆಗಳ ಕೆಡಹಿದೆ

ಪ್ರತಿಶತೇಶ್ವರ ಶ್ರೀರಮಣಿಯನ್ನು ತಂದು ರಾಘವಗೆ ಒಡಗೂಡಿಸಿದೆ

ಅತಿಹರುಷದಿಂದ ಅಯೋಧ್ಯಾನಗರಿಗೆ ಪ್ರತಿಪ್ರವೇಶವ

ಮಾಡಿಸಿದೆ ಕಲಿ ೪

ತೋರುತ್ತಿದೆ ಶಿಖಿ [ಕೈಪ] ಕುಂಡಲ ಚಾರು ಯಜ್ಞೂೀಪವೀತನೆ

ಸೂರ್ಯಚಂದ್ರಮರುಳ್ಳನಖ ವಜ್ರಕಾಯದಲಿ ನಿರ್ಭೀತನೆ

ವೀರಕದನಕಠೋರ ರಾಣಿಬೆನ್ನೂರ ಬಯಲಾಂಜನೇಯನೆನೀರಜಾಕ್ಷನ ಹೆಳವನಕಟ್ಟೆರಂಗನ ಪ್ರಿಯದಾಸನೆ ಕಲಿ ೫

 

೨೮

ಮಂಗಳ ಮುಖ್ಯಪ್ರಾಣೇಶಗೆ ಜಯ

ಮಂಗಳ ಮೂಜಗವಂದಿತಗೆ ಪ.

ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ

ಕಂಜನಾಭನ ಕಾರ್ಯದನುಕೂಲಗೆ

ಸಂಜೀವನ ತಂದ ಸಾಹಸವಂತಗೆ ಶ್ರೀ

ರಂಜಿಪ ಹನುಮಗೆ ಮಂಗಳ ೧

ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ

ಧಮಧುಮ ಮಾಡಿ ವನವ ಕಿತ್ತು

ರಾಮ ಮುದ್ರಿಕೆ ಜಾನಕಿಗೆ ತಂದಿತ್ತ

ಹೇಮಾದ್ರಿ ಹನುಮಗೆ ಮಂಗಳ ೨

ಸುತ್ತ ಸಾಗರ ಮಧ್ಯದಲ್ಲಿ ಲಂಕೆಯ

ಮುತ್ತಿ ವನಜಾಕ್ಷಿಯ ಮುಂದೆ ಬಂದು

ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ

ಖ್ಯಾತ ಹನುಮಗೆ ಮಂಗಳ ೩

ಜಾತಿ ಬಂಧುಗಳ ಒಡಗೊಂಡು ಸಮುದ್ರದ

ಸೇತುವ ಕಟ್ಟಿ ಸಾಹಸದಿಂದಲಿ

ಸೀತಾಪತಿಯ ಬಲವ ನಡೆಸಿದ ಪ್ರ

ಖ್ಯಾತ ಹನುಮಗೆ ಮಂಗಳ ೪

ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು

ಬೇಡವೆಂದು ಸೀತೆಯ ಭಯಬಿಡಿಸಿ

ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ

ಕೊಂಡಾಡಿಸಿಕೊಂಬಗೆ ಮಂಗಳ ೫

ಬಲ್ಲಿದ ರಾವಣೇಶ್ವರನ ಮಾರ್ಬಲವನು

ಕಲ್ಲು ಮರದೊಳಿಟ್ಟು ಕೆಡಹಿದಗೆ

ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ

ಧಲ್ಲ ಹನುಮಗೆ ಮಂಗಳ ೬

ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ

ಸ್ಥಿರವಾಗಿ ನಿಂದು ಭಕ್ತರ ಹೊರೆವ

ಹೆಳವನಕಟ್ಟೆ ವೆಂಕಟೇಶನ ದೂತ

ಚಲದಂಗ ಹನುಮಗೆ ಮಂಗಳ ೭

 

ಎರಡನೆಯ ಸಂಧಿ

ಮಂತ್ರಿ ಮಚ್ಚರವನ್ನು ಮನದೊಳಗಿಟ್ಟು

ಶ್ರೀಕಾಂತನ ಕರುಣವುಳ್ಳವಗೆ

ತಂತ್ರವ ಹೂಡಿ ಕೊಲ್ಲುವೆನೆಂದು ನೇಮಿಸಿ

ಕುಂತಳಪುರಕೆ ಕಳುಹಿದನು ೧

ಅಕ್ಷರಾಭ್ಯಾಸವ ಮಾಡಬೇಕೆನುತ

ಗಂಧಾಕ್ಷತೆ ಫಲಪುಷ್ಪದಿಂದ

ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ೨

ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು

ಪನ್ನಗಶಯನ ನಾರಾಯಣ ಹರಿಕೃಷ್ಣ

ಎನ್ನೊಡೆಯ ಶರಣೆಂದು ಬರೆದ ೩

ಓನಾಮವ ಬರೆಯೆಂದರೆ ಬರೆಯದೆ

ಶ್ರೀನಾಥ ಶರಣೆಂದು ಬರೆದ

ನಾನೊಂದ ಹೇಳಲು ನೀನೊಂದ ಬರೆವೆ

ನಿನ್ನ ಜ್ಞಾನ ಬೇರೆ ಚಿತ್ತ ಬೇರೆ ೪

ಒಂದ ಹೇಳಿದರೊಂದ ಬರೆವೆಯಾದರೆ ನಿನ್ನ

ತಂದೆಗೆ ಒಯ್ದು ಒಪ್ಪಿಸುವೆ

ಕುಂದು ನಮ್ಮ ಮೇಲೆ ಇಡುವ ನಿಮ್ಮಯ್ಯನು

ಎಂದು ಧಿಕ್ಕರಿಸಿ ಹೇಳಿದನು ೫

ನೀತೀಲಿ ಬರೆಯೆಂದರೆ ಬರೆಯದೆ ನಿನ್ನ

ಚಾತುರ್ಯದ ಬುದ್ಧಿ ಬೇರೆ

ಈತನ ತೊಡರು ನಮಗೆ ಬೇಡವೆಂದವರ

ತಾತಗೆ ಒಯ್ದು ಒಪ್ಪಿಸಿದ ೬

ಹಿಂದಕ್ಕೆ ಹಿರಣ್ಯಕಶ್ಯಪ ತನ್ನ ತನಯ

ಮುಕುಂದನ ಭಜಕನೆಂದೆನದೆ

ಬಂಧಿಸಿ ಬಸುರ ಬಗಿಸಿಕೊಂಡಾತನ ಮನಸು

ಬಂದ ಹಾಂಗಿರಲೆಂದು ಸುತನ ೭

ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ

ಮುರಾರಿಯನ್ನು ಭಜಿಸಿ

ದವರಿಗಿಂತುತ್ತಮ ಕುಮಾರನು ಇನ್ನು ಭವ

ಭಯಾದಿಗಳಿಲ್ಲ ನಮಗೆ ೮

ಶ್ರೇಷ್ಠರೆಲ್ಲರು ಕೂಡಿ ಶುಭಲಗ್ನವನು

ಕಟ್ಟಿಕೊಟ್ಟರು ಕರಲೇಸು ಎನುತ

ಅಷ್ಟವರುಷದ ಕುಮಾರಗೆ ಮುಂಜಿಯ

ಕಟ್ಟೆದರ್ ವೇದೋಕ್ತದಲಿ ೯

ವೇದಶಾಸ್ತ್ರ ಧನುರ್ವಿದ್ಯಾ ಸಾಧನೆಗಳ

ಓದಿಸಿದರು ಗುರುಮುಖದಿ

ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು ೧೦

ಎಳದುಳಸಿಯ ವನಮಾಲೆಯನೆ ಹಾಕಿ

ಹೊಳೆವ ಶ್ರೀ ಮುದ್ರಿಕೆಯಿಟ್ಟು

ನಳಿನನಾಭನ ಪೂಜೆಮಾಡುವ ಬನ್ನಿರೆಂದು

ಗೆಳೆಯರೆಲ್ಲರಿಗೆ ಬೋಧಿಸಿದ ೧೧

ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ

ಹಿತವ ಚಿಂತಿಸಿ ನಂಬಿದವರಿಗೇಕಾದಶಿ ವ್ರತವ

ಮಾಡಿಸಿದನಾಜೆÉ್ಞಯಲಿ ೧೨

ಆ ದೇಶದೊಳಗಿರ್ದ ಜನರಿಗೆ ಪಣೆಯಲ್ಲಿ

ದ್ವಾದಶ ನಾಮವ ಹಚ್ಚಿ

ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ೧೩

ಎಲ್ಲರು ಏಕಾದಶಿಯ ಜಾಗರ ಮಾಡಿ ಫುಲ್ಲನಾಭನ ಭಜಿಸುವರು

ಸೊಲ್ಲುಸೊಲ್ಲಿಗೆ ನಾರಾಯಣ ಹರಿಯೆಂಬೋದಲ್ಲದೆ

ಪರಗೋಷ್ಠಿಯಿಲ್ಲ ೧೪

ಮಲೆತವರನು ಮುರಿದೊತ್ತಿ ಶಕ್ತಿಯಕೊನೆ

ಬೆಳೆಸುವ ಹರಿಭಕ್ತರೊಡನೆ

ಬಲವಂತ ಧರೆಯ ಗೆದ್ದು ಧರೆಯೊಳು ಬಹು

ಪರಾಕ್ರಮಿಯೆನಿಸಿದನು ೧೫

ಶೂರತ್ವದಲಿ ತಂದೆಯಾಳುವ ರಾಜ್ಯವಯೆಂದರುಹಿ

ಇಮ್ಮಡಿಯನು ಗೆದ್ದು

ಊರ ತುರುವನೆಲ್ಲ ತಿರುಹಿ ಮಾಣಿಕ ಮುತ್ತು

ಹೇರಿಸಿದನು ತನ್ನ ಪುರಕೆ ೧೬

ಕೆಂಧೂಳು ಸೂಸುತ ಬಂದ ಕುಮಾರಗೆ

ತಂದು ಆರತಿಗಳನೆತ್ತಿ

ಇಂದಿರೆ ಮಾತೆ ನಾರಾಯಣ ಪಿತನಹುದೆಂದು

ಚರಣಕ್ಕೆರಗಿದನು ೧೭

ಅಗಣಿತ ಆಯುಷ್ಯವಂತನು ನೀನಾಗು

ಜಗದಧಿಪತಿಯಾಗು ಎಂದು

ಮಗನ ತಕ್ಕೈಸಿ ಮುಂಡಾಡಿ ಸಂತೋಷದಿ ಮಿಗೆ

ಹರುಷವನೆ ತಾಳಿದಳು ೧೮

ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ

ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು೧೯

ಮಾತೆಪಿತರ ಮಾತುಮಂ ಮೀರಿ ನಡೆಯದೆ

ಅನಾಥರ ಪರಿ ಪಾಲಿಸುತ್ತ

ಪ್ರೀತಿಯಿಂದಲಿ ದೇವಬ್ರಾಹ್ಮರೊಡನೆ

ರಾಜ್ಯನೀತಿಯಿಂದಾಳುತಲಿಹನು ೨೦

ಬಾಲಕ ಬಹುಪರಾಕ್ರಮಿ ಎನ್ನ ಮಾತ ನೀ

ಲಾಲಿಸು ಕುಂತಳೇಶ್ವರಗೆ

ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ೨೧

ಮೀರಬಾರದು ಪಿತನಾಜ್ಞಯೆಂದೆನುತ

ಉದಾರಬುದ್ಧಿಯಲಿಂದುಹಾಸ

ಯಾರ್ಯಾರಿಗೆ ಹೋಗಿ ಕೊಡಬೇಕು ಎನುತ

ವಿಚಾರಿಸಿದನು ತನ್ನಪಿತನ ೨೨

ಕುಂತಳಪುರದರಸಗೆ ದುಷ್ಟಬುದ್ಧಿಯೆಂಬ ಮಂತ್ರಿ

ಜೋಯಿಸ ಪುರೋಹಿತಗೆ

ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು೨೩

ಆನೆ ಕುದುರೆ ಅರ್ಧಸೇನೆ ದಳವ ಕೊಟ್ಟು

ಜ್ಞಾನವುಳ್ಳ ಭೃತ್ಯರೊಡನೆ

ನೀವಿದ ಕುಂತಳೇಶ್ವರಗೆ ಕೊಟ್ಟು ಬನ್ನಿರೆಂದು

ದಾನವಾಂತಕನ ಕಿಂಕರನು ೨೪

ಕರವ ಮುಗಿದು ಇಂದುಹಾಸನಪ್ಪಣೆಯಿಂದ

ತೆರಳಿದರಲ್ಲಿಂದ ಮುಂದೆ

ಭರದಿಂದ ಬಂದು ಬಿಟ್ಟುದು ದಂಡು ಕುಂತಳಪುರದ

ಹೆಬ್ಬಾಗಿಲ ಮುಂದೆ ೨೫

ಪಟ್ಟಣದೊಳು ಬಂದು ಪಾಳಯವನೆ ಬಿಟ್ಟ

ದಿಟ್ಟರಾರೆಂದು ಕೇಳಿದನು

ಕೊಟ್ಟು ಕಪ್ಪವ ಕುಂತಳೇಂದ್ರಗೆ ಕೊಡಿರೆಂದು

ಅಟ್ಟಿದೆನ್ನೊಡೆಯ ಪುಳಿಂದ ೨೬

ಎಂದ ಮಾತನು ಕೇಳಿ ಮಂತ್ರಿಗೆ ಪೇಳಲು

ಮಂದಿರಕಾಗಿ ಕರೆಸಿದ

ತಂದ ಕಪ್ಪವ ದುಷ್ಟಬುದ್ಧಿಯ ಮುಂದಿಟ್ಟು

ನಿಂದೆದ್ದು ಕರವ ಮುಗಿದರು ೨೭

ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ

ತಡೆಯೇಕಿಷ್ಟು ದಿವಸವೆಂದು ಮಂತ್ರಿಯು ಜಡಿದು

ಝೇಂಕರಿಸಿ ಕೇಳಿದನು ೨೮

ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು

ಆಯತವಾಗಿದೆ ಇಳುಹಿಸಿ ನೋಡಿರಿ

ದೇವರು ಕೈಕೊಂಬುದೆನಲು ೨೯

ತೆಗೆಸಿದ ಮಂತ್ರಿಯು ಕುಶಲಗತಿಗಳಿಂದ ನಗ

ನಾಣ್ಯ ದೇವಾಂಗವನು

ತೆಗೆಸಿ ನೋಡಿದನು ಬಗೆಬಗೆ ಸಪ್ತಂಗಳ ನಗ

ನಾಣ್ಯ ದೇವಾಂಗವನು ೩೦

ಮಗನ ಕರೆದು ಹೇಳಿದಿವರಿಗೆ ಭೋಜನ

ಸೊಗಸಾಗಿ ಮಾಡಿಸು ಎಂದ

ಬಗೆಬಗೆಯಿಂದಲಿ ತೃಪ್ತಾಗ ಬಡಿಸು ಎಂದು

ನಗೆಮುಖದಿಂದ ಹೇಳಿದನು ೩೧

ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು

ಬೆಣ್ಣೆಕಾಸಿದ ತುಪ್ಪ ಭಕ್ಷ್ಯಂಗಳನು ಮಾಡಿ

ಉಣ್ಣೇಳಿರೆಂದು ಕರೆದರು ೩೨

ಅತಿದೈನ್ಯದಿಂದ ಹೇಳಿದರು ಏಕಾದಶಿ ವ್ರತ

ನಿರಾಹಾರವು ನಮಗೆ

ಚತುರತನವೇ ನಮ್ಮೊಡನೆ ಕಿರಾತನ ಮತವಿದು

ಎಂದು ಕೇಳಿದನು ೩೩

ಹೆಮ್ಮೆ ನಿಮ್ಮೊಡನೆ ಮಾಡುವುದೇತಕೆ ಜೀಯ

ಎಮ್ಮೊಡೆಯನ ಸುಕುಮಾರ

ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು೩೪

ಎಲ್ಲಿಯ ಮಾತಿದು ಆತನ ಸತಿ ಬಂಜೆ

ಎಂದೆಲ್ಲರು ಹೇಳುತಲಿಹರು

ಅಲ್ಲದ ಮಾತಿದು ಅತಿ ಚೋದ್ಯವಾಗಿದೆ

ಎಲ್ಲಿದ್ದ ಆತಗೆ ಸುತನು ೩೫

ದುಷ್ಟಮೃಗವನೆಚ್ಚು ಕೆಡಹುವೆನೆನುತ

ಹಿಂದಟ್ಟಿ ಹೋದನು ಪುಳಿಂದ

ಪುಟ್ಟ ಬಾಲಕ ನಾರಾಯಣ ಹರಿಯೆನುತ

ಅಟ್ಟಡವಿಯೊಳಗಿರಲು ೩೬

ಆ ಶಿಶುವನೆ ತಂದು ಅತಿಶಯದಿಂದಲಿ

ಪೋಷಣೆಯನು ಮಾಡಿದರು

ವಾಸುದೇವನ ಕಿಂಕರ ಇಂದ್ರಹಾಸನು

ಭೂಸುರರನೆ ಪಾಲಿಸುವನು ೩೭

ಎಂದ ಮಾತನು ಕೇಳಿ ಎದೆಯೊಳು ಅಲಗು

ನಟ್ಟಂದದಿ ಮನದೊಳು ಮರುಗಿ

ಅಂದು ಮಾಡಿದ ಕಾರ್ಯ ಆಗಲಿಲ್ಲವು ಸಿದ್ಧ

ಎಂದು ತಾ ಮನದೊಳು ತಿಳಿದ ೩೮

ಮನುಜರೈತನದಿಂದಲೇನಹುದು ದೈವ

ಅನುಕೂಲವಾದ ಕಾರ್ಯವು

ನೆನೆದಂತೆ ಅಹುದೆನ್ನುತ ದುಷ್ಟಬುದ್ಧಿಯು

ಮನದಲ್ಲಿ ಚಿಂತೆ ಮಾಡಿದನು ೩೯

ದ್ವಾದಶಿ ದಿವಸ ಪಾರಣೆಯ ಮಾಡಿಸಿ ಅವರಿಗಾದರಿಸಿ

 

೧೫

ಮಕ್ಕಳ ಮಾಣಿಕವೆ ಮೋಹನ್ನ

ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ

ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ.

ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು

ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ

ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ

ತುಪ್ಪಾಕಜ್ಜಾಯ ಕೊಡುವೆನೂ ೧

ಅಂದಿಗೆ ಕಿರುಗೆಜ್ಜೆ ಅಲಗೊತ್ತು ಕೈಯೊಳಗಿದ್ದು

ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ

ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ

ಅಂದವಾದ ಒಂದು ಮುದ್ದು ತಾರಯ್ಯ ೨

ಓಡಿಓಡಿ ಬಾರೋ ವಸುದೇವನಂದನಾ ಕಂದ

ನೋಡಿ ನೋಡಿ ನಗುತ ಬಾರೊ ರಂಗಯ್ಯ

ಕಾಡ ಬೇಡ ಎನ್ನಯ್ಯಾ ಹೆಳವನಕಟ್ಟೆ

ಕೋಡಗಲ್ಲವಾಸ ವೆಂಕಟ ೩

 

೪೪

ಮನದ ಚಿಂತೆಯಬಿಡಿಸೊ ಮಾಧವ ಮುಕುಂದ ಹರಿ

ದನುಜಾರಿದಯಾವಾರಿಧಿ

ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ

ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ.

ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ)

ಹರಿಗೆ ಒಪ್ಪಿಸು ಎನಲು

(ಮೊರೆದು) ಕೋಪದಲಿ ದಶಕಂಠ ತನ್ನನುಜನ

ಊರ ಹೊರಗೋಡಿಸಿರಲು

ಭರದಿಂದ ಬಂದು ಮರೆಹೊಗಲು ವಿಭೀಷಣನು

ಚರಣಕಮಲಕೆ ಎರಗಲು

ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ

ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ ೧

ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ

ನಡುಸಭೆಯೊಳು ನಿಲ್ಲಿಸಲು

ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ

ದುಡುಕುತಿರಲಾಕ್ಷಣದಲಿ

ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ-

ದೊದರುತಿರಲು

ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು

ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ ೨

ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ

ಮತ್ತ ತೊಡೆಯೇರಿಇರಲು

ನಿತ್ಯದಲಿ ಸುರುಚಿ ಸುನೀತಿ ಕುಮಾರಕನ

ಎತ್ತಿ ಕಡೆಯಕ್ಕೆ ನೂಕಲು

ಪ್ರತ್ಯಕ್ಷವಾಗಿ ಪಾಲಿಸಿ ಧ್ರುವಗೆ ಪದವಿಯ –

ನಿತ್ತ ವಿಚಾರವಿಲ್ಲದಂತೆ

ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ

ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ ೩

 

ತರುಣಿಕುಲರಾಮನೊಳು—-

೪೫

ಮನ್ನಿಸ್ಯಾದವಾ ಮಮತೆಯಿಂದಾಲೆನ್ನ ಮಾಧವಾ ಪ.

ನೀರಜಾಕ್ಷನೆ ಪಾಲಿಸು ಜಗದ್ಭರಿತವಾಸನೆ

ಘೋರ ಸಂಸಾರಕ್ಕೆ ಸಿಲ್ಕಿ ಘಾಸಿಯಾಗನೆಂದಾಮೋಸವಾಗಿ

ಮೂರುದಿನದ ಬಾಳ ನೆಚ್ಚಿ ಘಾಸಿಯಾದೆನು

ನಾರಾಯಣ ನಿಮ್ಮ ನೆನೆವೆನನುದಿನಾ ೧

ಬಿಸಜನೈಯ್ಯನೆ ಶ್ರೀತುಲಸಿಮಾಲಾ ಭೂಷನೆ

ಹಸಿವು ತೃಷೆಯು ನಿದ್ರೆಯಿಂದಾ ಹೊತ್ತುಗಾಣೆನೈಯ್ಯಾ

ದೆಸೆಗೆದೆಸೆಗೆ ಇಂದ್ರಿಯಗಳು ಎಳೆದು ಕಾಡುತಾರೈಯ್ಯಾ

ವಸುಧಿಗೊಡೆಯ ನಿಮ್ಮ ನೆನೆಯದೆ ಮುಗ್ಧಳಾದೆನು ೨

ದುರಿತನಾಶನೆ ಪಾಲಿಸು ಜಗದ್ಭರಿತವಾಸನೆ

ನಿರುತ ವ್ಯಾಧಿಯಿಂದ ಮಂದಳಾದೆನು ಸರ್ವೇಶನೆ

ಮರುತನಂತೆ ಮನಸ್ಥಿರವ ಮಾಡಿಸೋ ಲಕ್ಷ್ಮೀಶ

ಕರ್ತೃ ಹೆಳವನಕಟ್ಟೆ ವೆಂಕಟೇಶನೆ ೩

 

ಒಮ್ಮೆ ಮಳೆಯಿಲ್ಲದೆ ಜನ ಕಂಗೆಟ್ಟಾಗ

೫೩

ಮಳೆಯ ದಯಮಾಡೊ ರಂಗಯ್ಯ ನಿಮ್ಮ

ಕರುಣ ತಪ್ಪಿದರೆ ಉಳಿಯದೀ ಲೋಕ ಪ.

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ

ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು

ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು

ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ೧

ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ

ಮೊಗೆ ಮೊಗೆದು ಪಾತ್ರೆಯಲಿ ನಾರಿಯರು

ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ

ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ೨

ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ

ಬಂದಿದೆ ಭಾದ್ರಪದ ಮಾಸವೀಗ

ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ

ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ೩

 

ದಶಾವತಾರದ ವರ್ಣನೆ

೧೬

ಮೂರು ಜಗವ ಕುಣಿಸುವಂಥ ಗಾರುಡಿಗ ಇವ ದಾರಕ್ಕ

ನಾರಾಯಣನಲ್ಲವೇನೆ ನಾರಿ ಕೇಳೆ ತಂಗಿ ಪ.

ವಾರಿಧಿಯೊಳಾಡುವ ವಿಚಾರ ಮಾಡೆ ಅಕ್ಕ

ಧೀರ ಬಲುಗಂಭೀರ ಮತ್ಸ್ಯವತಾರ ಕಾಣೆ ತಂಗಿ ೧

ಹತ್ತೂ ನಾಲ್ಕು ರತ್ನವ ತೆಗೆದು ಮತ್ತೆ ಇವ ದಾರಕ್ಕ

ರತ್ನ ಕುಂಚದ ಹೇಮಗಿರಿಯನೆತ್ತಿದ ಕೂರ್ಮ ಕಾಣೆ ತಂಗಿ ೨

ಧರಣಿಯ ಸುರುಳಿ ಸುತ್ತಿದಂಥ ಅರಸ ಇವ ದಾರಕ್ಕ

ಅರಿಯದ ಭಕ್ತರ ಮೊರೆಗೋಡುವ ವರಾಹ ಕಾಣೆ ತಂಗಿ ೩

ನಂಬಿದವರ ಕಂಬದೊಳು ಎಂಬೆ ಇವ ದಾರಕ್ಕ

ರಂಭೆ ಹೇಮದ ಬೊಂಬೆ ನರಸಿಂಹ ಕಾಣೆ ತಂಗಿ ೪

ಕದ್ದು ಅಡ್ಡ ಬಿದ್ದನ ಕಣ್ಣ ಇರಿದ ಇವ ದಾರಕ್ಕ

ಮುದ್ದು ಮುಖದ ಪ್ರಸನ್ನನಾದ ವಾಮನ ಕಾಣೆ ತಂಗಿ ೫

ಆ ಮಾತೃ ದ್ರೋಹವ ಮಾಡಿದವ ಇವ ದಾರಕ್ಕ

ಶಾಮ ಸಾರ್ವಭೌಮ ಪರಶುರಾಮ ಕಾಣೆ ತಂಗಿ ೬

ಕಾಮಿನಿಯ ಪೋಗಿ ತಂದ ಭೀಮ ಇವ ದಾರಕ್ಕ

ಕಾಮಿತಾರ್ಥವನೀವ ಶ್ರೀ ರಾಮ ಕಾಣೆ ತಂಗಿ ೭

ಗೊಲ್ಲತೇರ ಗಲ್ಲವ ಪಿಡಿದ ಚೆಲುವ ಇವ ದಾರಕ್ಕ

ಬಲ್ಲಿದ ಮಲ್ಲರ ಮರ್ದಿಸಿದಂಥ ಕಳ್ಳ ಕೃಷ್ಣ ಕಾಣೆ ತಂಗಿ ೮

ತ್ರಿಪುರದೊಳು ಚಪಲಾಕ್ಷಿಯರ ವಿಪರೀತವ ಮಾಡಿದನಕ್ಕ

ಅಪರಿಮಿತ ಮಹಿಮನಿವ ಚಪಲ ಬೌದ್ಧ ಕಾಣೆ ತಂಗಿ ೯

ಕುದುರೆಯೇರಿ ಎದುರಿಗೆ ಬರುವ ಚದುರ ಇವ ದಾರಕ್ಕ

ಮಧುವನಿಕ್ಕಿದ ಮಧುರಾಪುರದ ಚದುರ ಕಲ್ಕಿ ತಂಗಿ ೧೦

ಇಂದುವದನ ಮೂರ್ತಿ ಗೋವಿಂದ ಇವ ದಾರಕ್ಕ

ನಂದನ ಕಂದ ಹೆಳವನಕಟ್ಟೆ ರಂಗ ಕಾಣೆ ತಂಗಿ೧೧

 

೧೮

ಯಾಕೆ ಬಾರನಕ್ಕಯ್ಯ ಎನ್ನಯ

ಪ್ರಾಣನಾಥನ ಕರೆತಾರೆ ಸೈರಿಸಲಾರೆ ಪ.

ಸೋಗೆಗಂಗಳ ಸನ್ನೆ ಮಾಡಿ ಪೊಳೆದು ಪೋದ

ಮೇಘದ ಮಿಂಚಿನಂತೆ ಮಂದರೋದ್ಧಾರ

ಬಾಗಿದ ಮುಖವೆತ್ತಿ ಎನ್ನ ನೋಡದೆ ಪೋದ

ಈಗಲವನ ಮನಸ್ಯೆರಡಂಗವಾಗಿದೆ

ಹ್ಯಾಂಗ ಮಾಡಲಿ ಸಖಿಯೆ ಹೇಳಲಿ ಪ್ರಿಯೆ ೧

ಕರವೊಡ್ಡಿ ಬೇಡಿಕೊಂಡರೆ ಒಲ್ಲದೆ ಪೋದ

ಕರೆದರೆ ಪಿತನಾಜ್ಞೆ ತೋರುತಾನೆ

ನಿರುತದಿ ಏಕಪತ್ನಿಯ ವ್ರತನೆನುತ

ಸರಿಬಂದ ಸತಿಯರ ಒಡನಾಡುತೈದಾನೆ

ಗರುವತನವ ಬಿಡನೆ ಗೋವ ಕಾಯ್ವವನೆ ೨

ಸುಮ್ಮನೆ ಲಜ್ಜೆಭಂಗವ ಮಾಡಿ ಪೋದನೆ

ಒಮ್ಮೆ ಮನೆಗೆ ಬಾರನೆ ವಾಜಿವಾಹನನೆ

ತಮ್ಮ ಧ್ಯಾನದೊಳೆನ್ನ ಮನಸು ನಿಲ್ಲಿಸಿ ಪರ-

ಬೊಮ್ಮ ಮೂರುತಿ ಹೆಳವನಕಟ್ಟೆರಂಗನ

ಘಮ್ಮನೆ ಕರೆದುತಾರೆ ಸೈರಿಸಲಾರೆ ೩

 

೪೮

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ

ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ.

ಧನದಾಸೆಯನು ಮರಿ ಮನುಮಥನ

ಬಾಣಕಳುಕದಿರು ತೊಳಲದಿರು

ನೆಲದಾಸೆಗೆ ನೀನದರ

ಅನುವರಿತು ಹರಿಯ ಸ್ಮರಿಸು ಮನವೆ ೧

ಅನ್ಯರಾಗುಣ ದೋಷಯಣಿಸದಲೆ

ನಿನ್ನಿರವ ನೋಡು ಕಂಡ್ಯಾ ಮನವೆ

ಬಂಣಗಾರಿಕೆಯು ಬರಿದೆ ಔದಂಬ್ರ-

ಹಣ್ಣಿನಂತೀ ಕಾಯವು ಮನವೆ ೨

ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ

ಭ್ರಮೆಗೊಂಡು ಬಳಲಾದಿರೋ

ಕಮಲಪತ್ರಕ್ಕೆ ಒಳಗಿನ ಜಲದಂತೆ

ನೆಲಕೆ ನಿರ್ಲೇಪನಾಗೋ ಮನವೆ ೩

ಈ ದೇಹ ಸ್ಥಿರವಲ್ಲವೊ ಕಾಲನಾ

ಬಾಧೆಗೋಳಗಾಗದಿರೋ ಮನವೆ

ಭೇದ ದುರ್ಗುಣವ ತ್ಯಜಿಸು ನೀ

ಗೇರುಬೀಜದಂದದಿ ತಿಳಿಯೊ ಮನವೆ ೪

ಮಾಡು ಹರಿಸೇವೆಯನ್ನು ಮನದಣಿಯೆ

ಬೇಡು ಹರಿಭಕ್ತಿಯನ್ನು

ಕೂಡು ಹೆಳವನಕಟ್ಟೆಯ ವೆಂಕಟನ

ಬೇಡಿ ಮುಕ್ತಿಯನು ಪಡೆಯೊ ಮನವೆ ೫

 

೧೭

ಯಾಕೆದೂರುವಿರೆಂಮ ಬಾಲನಾ

ಲೋಕದೊಳಿವನಂಥ ಪುಂಡು ಮಕ್ಕಳಿಲ್ಲವೆಂದು ಪ.

ಒಂದು ಹೆಜ್ಜೆಯನಿಡವಲ್ಲಿ ಬೀಳುತಲಿಹನೆ

ನಿಂದಿಹವದನ್ನು ನಾ ಕಾಣೆ ಅ.ಪ.

ಇಂದು ನಮ್ಮಯ ಮನೆವೊಕ್ಕು ಬೆಣ್ಣೆಯ ಸವಿದನೆಂಬುದು

ಛಂದವೇನೆ ಗೋಪಿ ನಿನ್ನ ಕಂದನ ಸರಿಯಲ್ಲವೆ ೧

ಅನ್ನವನುಣ್ಣಲರಿಯ ಅಮ್ಮಿಬೇಡುತಲಿಹನೆ

ಸೊನ್ನಿಮಾಡಿ ಕರದನೆಂಬೋದು ಸೊಲ್ಲು ಸರಿಯೇ ಗೋಪಿ ೨

ಬಲುಹಿಂದ ಹಾಲನೆರೆಯೆ ಬಾಯತೆಗಿಯಲೊಲ್ಲ ಒಲೆಯ

ಮೇಲಿನಹಾಲ ಒಬ್ಬನೆ ಕುಡಿದಾನೆಂದು ಹೆಳವನಕಟ್ಟೆ

ರಂಗನಾ ದೂರುವುದೊಳಿತೆ ೩

 

೧೯

ಯೇಕೋದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ

ಸಾಕಾರ ಮೂರುತಿ ಸುಜನ ಮಂದಾರ ಅನೇಕದಿವ್ಯರೂಪ ಪ.

ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ

ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ

ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ

ಮನಸಿಜಪಿತ ಮೃದು ಮಧು ಸುಂದರ ಮಮಕಾರ

ಬಿಡಿಸೊ ನೀ ಎನ್ನ ೧

ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ

ಸುರಪತಿತನಯನು ದಿನಕರ ವಂಶೋದ್ಧಾರನ

ಸತಿಯನು ಹಿಂಸಿಸಿ

ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ

ಸಕಲಾಗಮಸುತ್ತ್ಯಾ ಸಾಮಗಾನ ಲೋಲ ೨

ಶರಧಿ ಶಶಿಧರ ಸನ್ನುತ ಶಾಶ್ವತ ಗುಣಭಾಸ

ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ

ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ

ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ ೩

 

ಚಂಡಿ ಚಾಮುಂಡಿ :

೩೧

ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು

ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ.

ಶ್ರೀ ಶರ್ವಾಣಿ ಶಂಕರಿ ದುರಿತ ದುಃಖ ನಿವಾರಿ

ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ

ಗುರುಳ ಬಾಲೆ ಪಲ್ಲವಪಾಣಿ

ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ ೧

ಅಳುವಾಡುವ ರಂಗನ ಅದೇನರಿತು ಭಂಗ

ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ

ಕಾಳಗದೊಳು ಕಂಠೀರವೆ ಕರೆದಭಯವನೀವೆ

ಪೇಳಲೆನ್ನಳವೆ ಸುಕೃತ ಪಂಥಗಾರ್ತಿ ೨

ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ

ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ

ಅಂಡಪವಿತ್ರೆ ಶುಭಗಾತ್ರೆ ನಂಬಿದ ಭಕ್ತರ ಸಂಪ್ರೀತೆ

ಕಂಡು ನಮಿಸುವರ ಕಾಯ್ವೆ ಕಾಮಿತದಾತೆ ೩

ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ

ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ

ಇಂದು ಬಂದ ಬಂಧನವ ಬಿಡಿಸಿ

ಎಂದೂ ಎನ್ನ ನೀ ಕಾಯೆ ತಾಯೆ ೪

ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ

ಬಲುನೇಮವಂತೆ ಸಂತೆಹರವಿಲೆ ನಿಂತೆ

ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ

ಹೆಳವನಕಟ್ಟೆ ರಂಗನ ಸಹೋದರಿ೫

 

ಸುಮತೀಂದ್ರ (ನು-೩):

೨೦

ರಾಮ ಶ್ರೀ ರಘುನಂದನ ಶರಣು ಸಾರ್ವ-

ಭೌಮ ಭೂಸುರವಂದ್ಯ

ಸೋಮಶೇಖರಮಿತ್ರ ಕಾಮಿತ ಫಲದಾತ್ರ

ಕಾಮಧೇನು ವಿಶ್ವಭೀಮ ಸನ್ನುತ ಸೀತಾ ಪ.

ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-

ಭಾರಹರ ಭಜಕಜನೋದ್ಧಾರ ವೇದಾಂತಸಾರ

ಚಾರುವದನ ಮಣಿಹಾರ ಕುಂಡಲಧರ

ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ೧

ಪಾಪರಹಿತ ಪಾವನ ಚರಿತ ಅಹಲ್ಯಾ

ಶಾಪ ಹರಣ ದಿವ್ಯರೂಪ ರಮಾರಮಣ

ತಾಪ ವಿಚ್ಛೇದನ ತಾಮಸ ಗುಣಹರಣ ದ-

ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ೨

ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ

ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ

ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ

ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ ೩

 

೩೦

ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ

ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ.

ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು

ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು

ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ

ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು ೧

ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ

ಜೂಟ ಸಖನಂಘ್ರಿಗೆ ಪಾರ್ಥನು ಈ ಬಯಲಾದನು

ಸೂಟಿಯೆನಗಾಯಿತು

ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ

ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು ೨

ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ

ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು

ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ

ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು ೩

ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ

ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ

ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ

ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ ೪

ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ-

ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ

ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ-

ವನವಾಯಿತು ಎಲ್ಲಾ ಕುಲಕೋಟಿಯು ೫

 

ನಾಲ್ಕನೆಯ ಸಂಧಿ

ವಿಷಯೆ ಚಂಪಕಮಾಲಿನಿಗೆ ಪುರುಷನಾಗಿ

ಶಶಿಹಾಸ ಕಾಳಿಯನೊಲಿಸಿ

ಅಸುವ ಪಡೆದ ಮಾವಭಾವನ ಜಗಕತಿ

ಪೊಸತಾಗಿ ತೋರಿತಾಶ್ಚರ್ಯ

ಮತ್ತೆ ಕೇಳಯ್ಯ ಅರ್ಜುನ ಇಂದುಹಾಸಗೆ

ಮಿಥ್ಯದ ವಿಷವನು ಉಣಿಸಿ

ಹತ್ಯವ ಮಾಡಿ ಕೊಲ್ಲುವೆನೆಂದು ನೇಮಿಸೆ

ಕೃತ್ಯವೆ ಪಥ್ಯವಾದುದನು ೧

ಕುಂತಿಯಾತ್ಮಜ ಕೇಳು ಇಂದುಹಾಸಗೆ ಲಕ್ಷ್ಮೀಕಾಂತನ

ಕರುಣದ ಬಗೆಯ

ಕುಂತಳೇಂದ್ರನ ಸುಕುಮಾರಿ ಚಂಪಕಮಾಲೆ ಮಂತ್ರಿಯ

ತನುಜೆಯು ವಿಷಯು ೨

ಇಂದುಹಾಸನ ಸಿಂಗರಿಸಿ ಭಾವಕಿಯರು

ಬಂದರು ವಿಷಯೆ ಇದ್ದೆಡೆಗೆ

ಮಂದಗಮನೆ ಮಾತಾಡಲೊಲ್ಲಳು ಲಜ್ಜೆಯಿಂದತ್ತ

ತಲೆಯ ತಗ್ಗುವಳು ೩

ನಿನ್ನ ಮನೋಭೀಷ್ಟೆ ಆಯಿತವ್ವ ತಾಯಿ

ಪನ್ನಗಧರನ ಕೃಪೆಯಿಂದ

ಇನ್ನೇಕೆ ಮನದ ಸಂಶಯವೆಂದು ಸಖಿಯರು

ಸನ್ಮಾನವನೆ ಮಾಡಿದರು ೪

ಬಾರವ್ವ ತಾಯಿ ಮಜ್ಜನವ ಮಾಡೇಳೆಂದು

ಜಾರಿದ ಕುರುಳನೋಸರಸಿ

ವಾರಿಜಮುಖಿಯರು ಒಡಗೊಂಡು ಬಂದರು

ಚಾರುಮಾಣಿಕಖಚಿತ ಪೀಠಕ್ಕೆ ೫

ಪರುಷದ ಕಣಿಯ ತಂದಿರಿಸಿ ಕುಳ್ಳಿರಿಸೋರು

ಹರಸಿ ಅಕ್ಷತೆಗಳನಿಟ್ಟು

ಸರಸದಿ ಮುಡಿ ಬಿಚ್ಚಿ ಸಂಪಿಗೆಣ್ಣೆಯನೊತ್ತಿ

ಅರಸಿನಗಳ ತಿವರಿದರು ೬

ಕನ್ನಡಿ ಕದಪಿನಂಗನೆಗೆ ಮಜ್ಜನ ಮಾಡಿ ಪೊನ್ನ

ತಂಬಿಗೆಯ ಲೋಕುಳಿಯ

ರನ್ನದುಟಿಯರು ರಾಜೀವಮುಖಿಯರು

ಬೆನ್ನಲೋಕುಳಿಯನೆರೆದರು ೭

ಮುಡಿಮೈಗಳನೋಸರಿಸಿ ದುಕೂಲವ ಬಡನಡುವಿಗೆ ಅಳವಡಿಸಿ

ಜಡಿತದಾಭರಣಕರಡಿಗೆಯನು ತಂದಿಡುವರು ಇಕ್ಕೆಲದಲ್ಲಿ೮

ಪೀಠದ ಮೇಲೆ ಕುಳ್ಳಿರಿಸಿ ಮಂಡೆಯ ಹಿಕ್ಕ

ಪಾಟಿಸಿ ತುರುಬನೋಸರಿಸಿ

ಮೀಟಾದ ಮಾಣಿಕ್ಯ ಮುತ್ತಿನಬಟ್ಟು ಲಲಾಟ

ಮಧ್ಯದಲಿ ಇಡುವರು ೯

ಕಂಜಲೋಚನೆಗೆ ಅಂಜನ ಹಚ್ಚಿ ಕರ್ಣವ ರಂಜಿಸಿ

ಬೆಳಗುವ ಮೂಗುತಿಯ

ಪಂಜಿನೋಲೆಯ ಮುತ್ತಿನ ಕೊಪ್ಪನಿಡುವರು

ಮಂದ ಗಮನೆಯರು ಹರುಷದಲಿ ೧೦

ಅಗರುವ ಎಳೆ ಸಂಪಿಗೆಯ ನಾಸಿಕದಲ್ಲಿ ಹೊಳೆವ

ಮೂಗುತಿಯನಿಕ್ಕುವರು

ಕೋಕಿಲಗಾನೆ ಕುಟಿಲಕುಂತಳದಾನೆ ಬಾಗಿದ ಬಾವುಲಿಗಳಲಿ೧೧

ಇಟ್ಟರು ತೋಳ ಚಳರಕ್ಷೆ ಮಣಿಗಳ ಗಟ್ಟಿಕಂಕಣ ಚಳಕಗಳ

ಉಟ್ಟರೇಕೆಯ ಹಿಡಿವಾಳ ಕಡಗ ಅಳವಟ್ಟಿಹ

ಬೆರಳ ಮುದ್ರಿಕೆಯು ೧೨

ಎಡೆಯೆಡೆಗೆ ವಜ್ರದಡಿಗೆ ಕದಂಬವ

ಕಡಗ ಮುತ್ತಿನ ಹತ್ತೆ ಕಡಗ

ಎಡೆಪಣಿಚಿಂತಾಕದ ಸರಿಗೆಯ ತಂದಿಡುವರಂಗನಗೆ

ನಾರಿಯರು ೧೩

ಹೊರಹೊಮ್ಮುವ ಕುಚ ಮಧ್ಯದಲಿ ಪಚ್ಚೆಸರ

ಕಂಠೀಸರ ಬಿಲ್ಲಸರವು

ಕರಹರಿನಡುವಿಗೆ ಇಟ್ಟರು ಕಾಂಚೀದಾಮ

ಸರಸಿಜ ಗಂಧಿಯರೊಲಿದು ೧೪

ಬಾಳೆಯ ಕದಳಿಯ ಹೋಲುವ ತೊಡೆ

ಕಣಕಾಲುಗಳೆಸೆವ ಭಾವಕಿಯ

ಸಾಲುಗಂಟೆ ಗೆಜ್ಜೆ ಸರಪಳಿ ಘಲಿರೆಂಬ ಕಾಲಂದಿಗೆಯನಿಡುವರು೧೫

ಕೆಂದಾವರೆಯ ಪೋಲುವ ಪಾದಾಂಗುಲಿ

ಉಂಗುರ ಮುದ್ರಿಕೆಯಿಟ್ಟು

ಚಂದದಿಂದಲಿ ಮೀಂಟುಕಿರಿಪಿಲ್ಲಿ ಎಲ್ಲವು

ಮಂದಗಮನೆಗೆ ಒಪ್ಪಿದವು ೧೬

ಬಾವನ್ನ ಪರಿಮಳ ಪುನುಗು ಲೇಪನವು

ಸಾರಿಸಿ ಅಂಗಕ್ಕೆ ತಿಗುರಿ

ಸುವರ್ಣವಾದ ಮಾಣಿಕ ಮುತ್ತು ಖಚಿತದ

ಹಾವುಗೆಯನೆ ಮೆಟ್ಟಿಸಿದರು ೧೭

ನಾರಿಯರೆಡಬಲದಲಿ ಕರವಿಡಿಯಲು ಚಾರುವದನೆ ಚಂಚಲಾಕ್ಷಿ

ಆರüಡಿಗುರುಳಿನ ಅಲಸದೆ ಮಣಿಯ

ಬಂದೇರಿದಳೊಜ್ರದಂದಣವ ೧೮

ಮುತ್ತೈದೆಯರು ಮಂಗಳಗೀತ ಪಾಡುತ

ಹೊತ್ತರು ಕಳಸ ಕನ್ನಡಿಯ

ಇತ್ತರದಲಿ ಚಾಮರ ಢಾಳಿಸುವರು

ಹೊತ್ತಿದ ಕಾಳಂಜಿಯವರು ೧೯

ಹೆಗಲೆ ಪಂಜುಗಳು ಹಚ್ಚಿದ ದೀವಿಗೆಯು

ಜಗಜಗ ಬೆಳಕುಗಳು ತುಂಬಿ

ಜಗಜಗಿಸುವ ಜೊ‑ಂಪಿನ ಸುರೆಪಾನವು ನೆಗಪಿದವಗಣಿತವಾಗ೨೦

ಇದಿರಲಿ ನಲಿವ ನಾಲುಕು ಸಾಲೆ ಹೆಂಗಳು

ಉದುರು ಬಾಣ ಪುಷ್ಪಬಾಣ

ಮಧುರಸ್ವನದಿ ಪಾಡುವ ಭಾಗವತಜನ

ಸದನದಿ ನಡೆತಂದಳಬಲೆ ೨೧

ತಂಡತಂಡದಿ ಕದಲಾರತಿಯನು ಎತ್ತಿ

ಹೊನ್ನಂದಣವನೆ ಇಳಿಸುವರು

ಕಂದರ್ಪಕನ ಮದಕರಿಯಂತೆ ಒಲೆವುತ

ಬಂದಳು ವಿವಾಹ ಮಂಟಪಕೆ ೨೨

ಸಡಿಲಿಸಿ ಮೈಯ ಹೊದಿಕೆಯ ಮದನಗಿತ್ತು

ಮಡಿವರ್ಗದಲ್ಲಿ ಕುಳ್ಳಿರ್ದು

ತಡೆಯದೆ ಚಿನ್ನದ ಗಿಂಡಿಯಲುದಕವ

ಪಿಡಿದಳು ಮದನನರ್ಧಾಂಗಿ೨೩

ಬಂಧುವರ್ಗ ಬ್ರಹ್ಮಸಭೆಯ ಮಧ್ಯದಲಿ

ಮುಕುಂದಗರ್ಪಿತವಾಗಲೆಂದು

ಗಂಧವ ಪೂಸಿ ಅಕ್ಷತೆಯನು ಪಣೆಗಿಟ್ಟು

ಮಂದಾರಮಾಲೆ ಹಾಕಿದರು ೨೪

ತೆರೆಯ ಹಚ್ಚಡವನ್ನು ಹಿಡಿದು ದಂಪತಿಗಳ

ಪೊರೆಯಲಿ ತಂದು ನಿಲ್ಲಿಸಿದರು

ಧುರಧೀರ ಇಂದುಹಾಸನ ಕುಲಗೋತ್ರವ

ಅರುಹಬೇಕೆಂದು ಕೇಳಿದರು ೨೫

ಎನ್ನ ಪವಿತ್ರ ಮಹಾಪಿತ ಪರೇಪಿತ ಸಂಪನ್ನಶಯನ ಶ್ರೀಹರಿಯು

ಎನ್ನದು ವಾಮಗೋತ್ರವು ಪುಳಿಂದನು

ಎನ್ನ ಪರಮ ಗುರುವೆಂದ ೨೬

ಕ್ರಮದಿಂದ ಮಧುಪರ್ಕವನೆ ಮಾಡಿದರತಿ

ಸಮಯವು ಲಗ್ನವೆಂದೆನುತ

ರಮಣಿಯ ಕರೆದು ಮಂಗಳಾಷ್ಟಕವನು

ಬ್ರಾಹ್ಮಣೋತ್ತಮರು ಹೇಳಿದರು ೨೭

ಪುರೋಹಿತರು ಕನ್ಯಾರ್ಥವ ಹೇಳಲು

ಸಮಯವು ಲಗ್ನವೆಂದೆನುತ

ಪಿಡಿದ ತಂಡುಲ ಇಂದುಹಾಸನು ಶೀಘ್ರದಿ ಮಡದಿಯ

ಮೇಲೆ ಸೂಸಿದನು ೨೮

ರತ್ನಕಂಕಣವನ್ನು ಕರದಿ ಢಾಳಿಸುತ

ಶತಪತ್ರನಯನೆ ಸಮಗಾತ್ರೆ

ಚಿತ್ತದೊಲ್ಲಭನ ಮಸ್ತಕದಿ ತಂಡುಲವ

ಚಮತ್ಕಾರದಿಂದ ಸೂಸಿದಳು ೨೯

ಬಡನಡುವಿನ ಭಾವಕಿಯರು ಶಕುನದ

ಸೊಡರುಗಳನೆ ಹಚ್ಚುವರು

ಅಡರುವ ಮಿಂಚಿನಂದದ ನೋಟದ ಬಾಲೆಯರು

ಪಿಡಿದರು ಇತ್ತಂಡದಲ್ಲಿ ೩೦

ಹೆತ್ತುಪ್ಪ ಕ್ಷೀರದಲಿ ಚೆಟ್ಟನೆ ಹೊಯ್ಸಿದರು

ಮುತ್ತೈದೆಯರೆಲ್ಲ ಅಲಂಕರದಿ

ಹತ್ತುಸಾವಿರ ಹೊಸ ಮೊರದ ಬಾಗಿನವ ತಂದಿತ್ತಳು

ವಿಷಯೆ ಸಂಭ್ರಮದಿ ೩೧

ಇತ್ತ ತಾವ್ವ ಎನುತ ಮದವಳಿಗೆಯ ಎತ್ತಿ

ಕೈಯಿಂದ ತೋರುವರು

ಸುತ್ತ ನಕ್ಷತ್ರದ ಮಧ್ಯದಿ ಕಂಡಳು ಪ್ರತ್ಯಕ್ಷದಿಂದರುಂಧತಿಯ ೩೨

ಕನಕದ ಹಸೆಯ ಮೇಲೆ ಕುಳ್ಳಿರಿಸೋರು

ದಿನಕರ ಪ್ರತಿಬಿಂಬದಂತೆ

ವನಿತೆ ಸಾಜದಿ ತಂಡುಲವಿಟ್ಟು ಹೋಮಕ್ಕೆ

ಅನುಕೂಲಗಳನೆ ಮಾಡಿದರು ೩೩

ಆಜ್ಯತಂದವರಿಗೆ ಉಡುಗೊರೆ ಇತ್ತನು ಪೂಜೆ

ಮಾಡಿದನು ಶ್ರೀಪತಿಯ

ಆಜ್ಯತಂಡುಲ ಆಪೋಶನೆ ಮಾಡಿದ ನಿರ್ಜರಪತಿ ಮೆಚ್ಚುವಂತೆ೩೪

ತಡವ ಮಾಡದೆ ಠಾಣ ದೀವಿಗೆಯನು ಹಚ್ಚಿ

ಎಡೆಮಾಡಿ ಚಪ್ಪರದೊಳಗೆ

ಬಿಡಿಮುತ್ತಿನ ಹಸೆಯ ಮೇಲೆ ದಂಪತಿಗಳ ಒಡನೆ

ಭೋಜನಕೆ ಕುಳ್ಳಿರಿಸಿ ೩೫

ಉಪ್ಪಿನೆಸರುಕಾಯಿ ಪರಿಪರಿ ಶಾಕವು ಹಪ್ಪಳ ಬಾಳಕಗಳನು

ಅಪ್ಪಲು ಅತಿರಸ ಸೂಪಾಕ್ಷತಶಾಲ್ಯನ್ನ ಚಪ್ಪರದಲಿ ಬಡಿಸುವರು ೩೬

ಕಾಮಿನಿಯರು ಕನಕದ ಹರಿವಾಣದಿ ಶಾವಿಗೆ ಪರಮಾನ್ನಘೃತವ

ಭಾವಕಿಯರು ಮಂಗಳ ಧವಳವ ಪಾಡಿ

ಭೂಮಕ್ಕೆ ಬಡಿಸಿದರಾಗ ೩೭

ಆಜ್ಯದಿಂದಲಿ ಆಪೋಶನೆ ಎರೆದಳು ರಾಜೀವ

ಮುಖಿ ತನ್ನ ಪತಿಗೆ ಮ-

ಹಾಜನರೆಲ್ಲ ಉಂಡು ಕೈತೊಳೆದರು ಹೂಜಿಯಲ್ಲುದಕವ ಪಿಡಿದು೩೮

ಜಂಬುಖಾನ ರತ್ನಗಂಬಳಿಯನು ಹಾಕಿ

ತುಂಬಿದ ವಿಪ್ರರ ಕುಳ್ಳಿರಿಸಿ

ತಾಂಬೂಲ ದಕ್ಷಿಣೆ ಕೊಡಲು ಮಂತ್ರಾಕ್ಷತೆ

ಸಂಭ್ರಮದಿಂದ ಸೂಸಿದರು೩೯

ಭೂಸುರ ಬಂಧುವರ್ಗವನೆಲ್ಲ ನೇಮಿಸಿ

ವಾಸುದೇವ ಕೃಷ್ಣ ಎನುತ

ಹಾಸು ಮಂಚದ ಮೇಲೆ ಪವಡಿಸಿದ ಮದನ

ವಿಲಾಸದಿಂದಲಿ ನಿದ್ರೆಗೈದ ೪೦

 

೨೧

ಶ್ರೀ ನರಸಿಂಹದೇವ ಶರಣ ರಕ್ಷಕನೆ

ದಾನವಾರಿ ಸುಭಕ್ತಾಧೀನ ಮೂರುತಿಯೆ ಪ.

ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ

ನಿರವ ಕಾಣದೆ ದುಷ್ಟಹಿರಣ್ಯಕಾಸುರನು

ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು

ತರಳಗೊಲಿದೆ ಬಹು ಕರುಣಾನಿಧಿಯೆ ೧

ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ

ಕಟಿ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ

ಕಟಿ ಕಟಿ ಕಡಿವುತುಬ್ಬಸ ತೋರಿ ನಿಂದ

ಕಠಿಣ ಮೂರುತಿಯೆ ೨

ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು

ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ

ಗರ್ಭವ ನಖದಿಂದ ಇಬ್ಭಾಗವನು ಮಾಡಿ

ಹಬ್ಬಿದ ಕರುಳನು ಹರುಷದಿ ಧರಿಸಿದೆ ೩

ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು

ಪ್ರೀತಿಯ ಭಕ್ತನ ಮಾತನು ಮನ್ನಿಸಿ ಅತಿ

ಶಾಂತನಾಗಿ ಸಂತೋಷಪಡಿಸಿದ ಅ-

ನಾಥ ರಕ್ಷಕನೆ ಕಾತರವಳಿದೆ ೪

ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ

ನಳಿನ ಸಂಭವಗೆ ಬಲು ಹರುಷವನಿತ್ತೆ

ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ ೫

 

ನಕ್ರನ ಬಾಧೆಯೊಳಗೆ

೪೬

ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ

ಬಂದ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ

ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ –

ಯಿಂದ ಇಂದು ಎನ್ನ ಮಾತ ಲಾಲಿಸೊ

ತಂದೆ ಕುಂದು ಎಣಿಸದೆನ್ನ ಪಾಲಿಸೊ ೧

ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ-

ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ

ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ

ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ ೨

ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ

ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ

ಭರದಿ ಬಂದು ನಿನ್ನ ಚರಣವ ಭಜಿಸಲವಗೆ

ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ ೩

ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ

ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು

ದ್ಧಾರ ಮಾಡಲಾಗದೆ ಸಕಲ ಆರಭಾರ ನಿನ್ನ

ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ ೪

ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ

ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ

ಕಟ್ಟೆವಾಸ ವೆಂಕಟೇಶನೆ ಸಕಲ ಭಾರ

ದೃಷ್ಟಿಯಿಂದ ಪೊರೆವೊ ದೇವನೆ ಕೃಷ್ಣಾ ಸೃಷ್ಟಿಗೊಡೆಯ

ಸುಜನಪಾಲನೆ ೫

 

ಚಾಣೂರಮರ್ದನ (ನು-೧):

೨೨

ಶ್ರೀರಂಗ ಶ್ಯಾಮಲಕೋಮಲಾಂಗ

ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ.

ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ

ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ

ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ ೧

ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ

ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ

ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ ೨

ನಿತ್ಯಾನಂದನೆ ನಿಗಮಗೋಚರನೆ

ಸತ್ಯಭಾಮೆ ಶ್ರೀಮನೋಹರ ಮದನ ಶ್ರೀಗೋಪಾಲನೆ

ಭಕ್ತವತ್ಸಲ ಭಯನಿವಾರಣ ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ೩

 

ವ್ಯಾಸ (ಸಂಧಿ ೧, ನು ೧೭):

ಚಂದ್ರಹಾಸನ ಕಥೆ

ಶ್ರೀರಮಣಿಯ ಮನೋಹರ ಸುಜನ ಮಂದಾರ

ತ್ರೈಭುವನೋದ್ಧಾರ

ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ ೧

ಕಡಲಶಯನ ಕಲ್ಪತರುವೆ ಇಷ್ಟಾರ್ಥವ ಕೊಡುವ

ಭಕ್ತರ ಭಾಗ್ಯನಿಧಿಯೆ

ನಡೆಸುವೆ ನಿಮ್ಮ ತಂತ್ರದಲಿ ಈ ಕೃತಿಯನು

ನುಡಿಸಯ್ಯ ಎನ್ನ ಜಿಹ್ವೆಯಲಿ ೨

ಭುಜಗನ ಹಿಡಿದು ಗರ್ಭವ ಸುತ್ತಿದಾತನೆ

ಅಜಹರಿಸುರ ವಂದಿತನೆ

ಭಜನೆಗಿಷ್ಟಾರ್ಥವ ಕೊಡುವ ವಿಘ್ನೇಶ್ವರ

ನಿಜವಾಗೊ ಮತಿಗೆ ಮಂಗಳವ ೩

ಶೃಂಗಪುರದ ನೆಲವಾಸೆ ಸಜ್ಜನಪೋಷೆ

ಸಂಗೀತಲೋಲೆ ಸುಶೀಲೆ

ಮಂಗಳಗಾತ್ರೆ ಶಾರದೆ ಎನ್ನ ಜಿಹ್ವೆಯಲಿ

ಹಿಂಗದೆ ನೆಲಸೆನ್ನ ತಾಯೆ ೪

ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ

ಹೆತ್ತೋರ ಮನೆದೈವ ಶ್ರೀ ಮೈಲಾರಗೆ ಹಸ್ತವ

ಮುಗಿದು ವಂದಿಸುವೆ ೫

ಪೃಥಿವಿ ಆಕಾಶ ಸೂರ್ಯ ಚಂದ್ರರಿಗೆರಗುವೆ

ಪತಿಯ ಚರಣವನ್ನು ನೆನೆವೆ

ಸ್ತುತಿಸುವೆ ಗುರುಹಿರಿಯರಿಗೇಕಚಿತ್ತದಿ ಮತಿಗೆ

ಮಂಗಳವಾಗಲೆಂದು ೬

ಸುರಪುರವಾಸ ಲಕ್ಷ್ಮಿಯಕಾಂತ ಭಕ್ತರ್ಗೆ

ಒರೆದಂಥ ಜೈಮಿನಿಯೊಳಗೆ

ಪರಮಭಕ್ತ ಚಂದ್ರಹಾಸನ ಕಥೆಯನು ಚರಿತೆಯ

ಮಾಡಿ ವರ್ಣಿಸುವೆ ೭

ಇಂದ್ರಜ ತುರಗವ ಕಾಣದೆ ಮನದಲ್ಲಿ

ಸಂದೇಹ ಮಾಡುತ್ತಿರಲು

ಚಂದ್ರಹಾಸನ ಕಥಾಮೃತಸಾರವನು ನಾರಂದ

ಪೇಳಿದ ಫಲುಗುಣಗೆ ೮

ಬಂದರು ಕೃಷ್ಣಾರ್ಜುನರು ತುರಂಗವ

ಮುಂದೊತ್ತಿ ರಥವ ಬೆಂಬತ್ತಿ

ಚಂದದಿ ದಿಗ್ದೇಶ ತಿರುಗಿದ ಹಯವ ತಾ

ನಿಂದಿರಿಸಿದ ಚಂದ್ರಹಾಸ ೯

ಕಟ್ಟಿದನೆರಡು ತುರಂಗವ ಲಿಖಿತವ

ಬಿಚ್ಚೋದಿಕೊಂಡು ನೋಡಿದನು

ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು ೧೦

ಪಿಡಿಕೊಂಡು ಬಂದರು ತುರಗವ ಚರರು ತ

ನ್ನೊಡೆಯಗೆ ಪೇಳಿದರಾಗ

ಪಿಡಿದು ತುರಂಗವ ಕಟ್ಟಿದರಾರೆಂದು

ಕಡುಚಿಂತೆಯಲಿ ಪಾರ್ಥನಿದ್ದ ೧೧

ಮನದಲಿ ಆಲೋಚನೆಯ ಮಾಡುತಲಿರೆ

ದಿನಕರ ಪ್ರತಿಬಿಂಬದಂತೆ

ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ೧೨

ಇಟ್ಟಿಹ ಕರ್ಣಕುಂಡಲವ ಕೃಷ್ಣಾಜಿನ

ಉಟ್ಟಿಹ ಕರದಿ ವೇಣುವನು

ಮುಟ್ಟಿ ಬಾರಿಸುತ ಶ್ರೀಹರಿನಾಮ ಸ್ಮರಿಸುತ

ಶ್ರೇಷ್ಠ ಬಂದನು ಇವರೆಡೆಗೆ ೧೩

ಏನಿದು ಬಂದ ಕಾರಣ ಎನುತಲಿ ಇಂದ್ರಸೂನು

ಕೃಷ್ಣರು ಇದಿರೆದ್ದು

ಗಾನವಿನೋದಿಯಾಗಮನವಿದೇನೆಂದು

ಆನಂದದಿಂದ ಕೇಳಿದರು ೧೪

ಕುಳ್ಳಿರಿಸಿದರು ಗದ್ದುಗೆಯಿಟ್ಟು ಮುನಿಪಗೆ

ಎಲ್ಲ ವೃತ್ತಾಂತವನರುಹಿ

ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು೧೫

ಗಮನವಾಗಿದ್ದ ತುರಂಗವ ಕಟ್ಟಿದ

ಪ್ರಮುಖರಿಲ್ಲ್ಯಾರು ಪೇಳೆನುಲು

ನಿಮಗಿದ ವಿವರಿಸಿ ಪೇಳುವೆನೆಂದರೆ

ಸಮಯವಲ್ಲವು ಪೇಳೆನಲು ೧೬

ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ

ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ೧೭

ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು

ಆಳುವ ಪ್ರಭು ಧಾರ್ಮಿಕನೆಂಬಾತನ ಬಾಳನೆಂಬರು

ಪ್ರಧಾನಿಯನು ೧೮

ನೀತೀಲಿ ರಾಜ್ಯವನಾಳುತಿರಲು ಕಂದ

ಭೂತಮೂಲದಲಿ ಪುಟ್ಟಿದನು

ಜಾತಕರ್ಮನಾಮಕರಣ ಮಾಡದೆ ಅವನ

ತಾತ ಕಾಲವಾಗಿ ಪೋದ ೧೯

ನಾಯಕರಿಲ್ಲದ ಕಾಯವಿದೇಕೆಂದು

ಸಾಯಲಾದಳು ರಾಜಪತ್ನಿ

ಮಾಯವಾಯಿತು ಸಿರಿ ಮತ್ತೆ ರಾಜ್ಯವ

ಪರರಾಯರು ಬಂದು ಕಟ್ಟಿದರು೨೦

ಪೋಷಣೆ ಮಾಡುವರಿಲ್ಲದಿರಲು ಪರದೇಶಿಯಂದದಿ

ಬಾಲನಿರಲು

ದಾಸಿಯೊಬ್ಬಳು ಕಂಡು ಮನದಲ್ಲಿ ಮರುಗುತ

ಆ ಶಿಶುವೆತ್ತಿ ನಡೆದಳು ೨೧

ಚಿಂತಿಸಿ ಹಲವು ಯೋಚನೆಯ ಮಾಡುತಲಾಗ

ಕುಂತಳಪುರಕಾಗಿ ಬಂದು

ಸಂತತ ನೆರೆಯಲಿ ಶಿಶುವನಿಟ್ಟುಕೊಂಡು ನಿಂತಳು

ಆ ಗ್ರಾಮದಲ್ಲಿ ೨೨

ತಿರಿದು ಹಾಕುವಳು ಪಾಲ್ಬೆಣ್ಣೆಯ ಶಿಶುವಿಗೆ

ಎರೆದು ಪೋಷಣೆಯ ಮಾಡುವಳು

ತರಳಗೆ ಬೇಕಾದುದಿಲ್ಲದಿರಲು ದಾಸಿ

ಮರುಗುತಿರ್ದಳು ಮನದೊಳಗೆ ೨೩

ದೇಶಾಧಿಪತಿಯ ಗರ್ಭದಿ ಬಂದು ನಿನಗೀಗ

ಹಾಸುವ ವಸ್ತ್ರಗಳಿಲ್ಲ

ಬೀಸಿ ತೂಗುವರೆ ತೊಟ್ಟಿಲು ಇಲ್ಲ ಎನುತಲಿ

ಬೇಸತ್ತು ಅಳಲುವಳೊಮ್ಮೆ ೨೪

ಪಾಲನೆ ಮಾಡುವಳು ಪರಿಪರಿಯಲಿ ಬಾಲಲೀಲೆಯ

ನೋಡಿ ಹಿಗ್ಗುವಳು

ಶ್ರೀ ಲೋಲನೆ ನೀ ಗತಿಯೆಂದು ತರಳನ

ಆಲಂಬದಲ್ಲಿರುತಿಹಳು ೨೫

ತೊಂಗಲಗುರುಳು ತೋರುತಲಿಹ ಮೊಳೆವಲ್ಲು

ಕಂಗಳ ಕುಡಿನೋಟವೆಸೆಯೆ

ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ-

ದೊಳಗಾಡುತಿಹನು ೨೬

ಇರುತಿರೆ ದಾಸಿ ಅಂತರಿಸಿ ಪೋದಳು ಬಾಲ

ಪರಪುಟ್ಟನಾದುದ ಕಂಡು

ನೆರೆಯ ನಾರಿಯರೆಲ್ಲ ತಮ್ಮ ಮಕ್ಕಳ ಕೂಡೆ ಎರೆದು

ಮಡಿಯ ಪೊದಿಸುವರು ೨೭

ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ-

ರೋಗರವನ್ನು ಉಣಿಸುವರು

ತೂಗುವರು ತೊಟ್ಟಿಲೊಳಗಿಟ್ಟು ತರಳನ

ರಾಗಗಾನದಲಿ ಪಾಡುವರು ೨೮

ಓರಗೆ ಮಕ್ಕಳು ಒಡಗೊಂಡು ಹೋಗಿ

ಎಣ್ಣೂರಿಗೆಯನು ಕೊಡಿಸುವರು

ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ೨೯

ಸೂಳೆವೆಣ್ಣುಗಳೆಲ್ಲ ಸೆಳೆದೆತ್ತಿಕೊಂಡು

ತಮ್ಮಾಲಯದೊಳು ಕರೆದೊಯ್ದು

ಕಾಲತೊಳೆದು ಕಸ್ತೂರಿಯನಿಟ್ಟು ಮಲ್ಲಿಗೆ

ಮಾಲೆಯನವಗೆ ಹಾಕುವರು ೩೦

ಕದಳಿ ಖರ್ಜೂರ ಕಿತ್ತಲೆ ಜಂಬುನೇರಿಲ ಮಧುರ

ಮಾವಿನ ಫಲಗಳನು

ಚದುರೆಯರೆಲ್ಲ ಕೊಟ್ಟು ಮನ್ನಿಸುವರು

ಮದನನಯ್ಯನ ಕಿಂಕರಗೆ ೩೧

ಬಟ್ಟೆವಿಡಿದು ಬಾಲ ಬರುತಿರೆ ಕಂಡನು ಪುಟ್ಟ

ಸಾಲಿಗ್ರಾಮ ಶಿಲೆಯ

ಗಟ್ಟುಳ್ಳ ಗೋಲಿಯು ತನಗೆ ದೊರಕಿತೆಂದು

ಅಷ್ಟು ಜನರಿಗೆ ತೋರಿಸಿದ ೩೨

ಭಯದಿಂದಲಿದ್ದ ಬಾಲಗೆ ದೊರೆಕಿತು

ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು

ಕೈಯ ದುಡುಕಿಲಿ ತೆಕ್ಕೊಂಡನು ಹರುಷದಿ

ಲಕ್ಷ್ಮಿನಾರಾಯಣ ಮೂರುತಿಯ ೩೩

ಆಡಿಗೆಲ್ಲುವ ನಾಲ್ಕುಯಿಮ್ಮಡಿ ಗಟ್ಟುಗವ

ಕೂಡಿದ ಗೆಳೆಯರ ಕೂಡೆ

ನೋಡಿ ಬಚ್ಚಿಡುವರೆ ಮನೆಯಿಲ್ಲದಿರೆ ಬಾಲ

ದೌಡೆಯೊಳಿಟ್ಟು ಕೊಂಡಿಹನು ೩೪

ಹಿಂಡುಗೆಳೆಯರ ಕೂಡಿಕೊಂಡಾಡುವ ಲಗ್ಗೆ ಚೆಂಡು

ಬುಗುರಿ ಚನ್ನಿಗಳನು

ಗಂಡುಗಲಿಯು ತಾನಾಗಿ ಅವರೆಲ್ಲರ

ಮಂಡೆಗಳನು ತಗ್ಗಿಸುವನು ೩೫

ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು

ಬಚ್ಚಿಡುವರೆ ಮನೆಯಿಲ್ಲದಿರಲು ಬಾಲ ಅರ್ಚಿಸಿ

ಬಾಯೊಳಗಿಡುವ ೩೬

ಒಂದು ದಿವಸ ಕುಂತಳೇಂದ್ರನ ಮಂತ್ರಿಯು

ಮಂದಿರದಲಿ ವಿಪ್ರರಿಗೆ ಆ-

ನಂದದಿಂದಲಿ ಭೋಜನ ಮಾಡಿಸುವೆನೆಂದ

ಬಂದರು ಬುಧಜನರೆಲ್ಲ ೩೭

ಮೃಷ್ಟಾನ್ನವನ್ನು ಭೋಜನ ಮಾಡಿಸಿ ಸಂತುಷ್ಠಿ

ಬಡಿಸಿದ ಬ್ರಾಹ್ಮರನು

ಪಟ್ಟಸಾಲೆಯೊಳೆಲ್ಲ ಹರಡಿ ಗದ್ದುಗೆಯಿಟ್ಟು

ಶ್ರೇಷ್ಠರೆಲ್ಲರ ಕುಳ್ಳಿರಿಸಿ ೩೮

ದಕ್ಷಿಣೆ ತಾಂಬೂಲವನು ತೆಕ್ಕೊಂಡು

ಮಂತ್ರಾಕ್ಷತೆಯನು ಮಂತ್ರಿಗಿತ್ತು

ಮಕ್ಕಳೊಡನೆ ಕೂಡಿ ಆಡುವ ತರಳನ

ಲಕ್ಷಣವನ್ನೆ ನೋಡಿದರು ೩೯

ಇವನಾರ ಮಗನೆಂದು ನೆರೆದಿರ್ದ ಸಭೆಯಲ್ಲಿ

 

ಬ್ರಹ್ಮಕೊರವಂಜಿ

ಸುರರು ಕಿನ್ನರರು ಸ್ಮರಣೆ ಮಾಡುವ ಪಾದ

ಕುರುಪತಿಯ ಗರ್ವವನು ಪರಿಹರಿಸುವ ಪಾದ

ಪರಮ ಯೋಗಿಗಳ ಹೃತ್ಕಮಲದಲ್ಲಿಹ ಪಾದ

ಸಿರಿ ವೆಂಕಟೇಶ್ವರನ ಪಾದ ಪದ್ಮವನು ನೆನೆವೆ ನಾನು ೧

ದಾನವಾರಿಯ ಚೆಲ್ವ ಜಾನು ಜಂಘೆಗಳೆಸೆವ

ಮೀನ ಖಂಡಗಳ ಪೆರ್ದೊಡೆಯ ಸೊಬಗಿನ

ಭಾನುಕೋಟಿ ಪ್ರಕಾಶದಂತೆ ವರಕಾಂತಿಯಲಿ

ಆನಂದದಿಂದಲಿ ಮೆರೆವ ಮೂರುತಿಯ ನೆನೆವೆ ನಾನು ೨

ಮಿಸುನಿ ಒಡ್ಯಾಣ ಕಾಂಚಿಯದಾಮ ತೆಳ್ವಸುರ

ಬಿಸಜನಾಭನ ಬಾಹುಪುರಿಯ ಸೊಬಗಿನ

ಎಸೆವ ಗದೆ ಶಂಕಚಕ್ರವು ಪದ್ಮಕರದಿ ಶೋ

ಭಿಸುತಿರುವ ಕಂಬುಕಂಧರದ ಮೂರುತಿಯ ನೆನೆವೆ ನಾನು ೩

ಕನ್ನಡಿಯ ಪಳಿದಳಿಪ ಕದಪು ಕಂಗಳು ಎಸೆಯೆ

ಕರ್ಣಕುಂಡಲದ ಸಂಪಿಗೆಯ ನಾಸಿಕದ

ರನ್ನ ತುಟಿ ಝಗಝಗಿಸೆ ಕುಡಿಹುಬ್ಬುಗಳು ಎಳೆಯ

ಮನ್ಮಥನ ಚಾಪದಂತೆಸೆವ ಮೂರುತಿಯ ನೆನೆವೆ ನಾನು ೪

ಅರೆದಿಂಗಳಂತೆಸೆವ ನೊಸಲ ಕಸ್ತೂರಿತಿಲಕ

ಹೊಳೆವ ಕಿರೀಟ ಮಸ್ತಕದಿ ಢಾಳಿಸುವ

ಅಲಸದೀರೇಳ್ಜಗವ ಕರುಣದಲಿ ರಕ್ಷಿಸುವ

ಹೆಳವನಕಟ್ಟೆ ಶ್ರೀ ವೆಂಕಟೇಶ್ವರನ ನೆನೆವೆ ನಾನು ೫

ಕಂಸಾಸುರನಿಟ್ಟ ಸೆರೆಯ ಮನೆಯೊಳು ಕಷ್ಟಪಡುತಲಿ ದೇವಕಿನಿ-

ಮಿಷ ಯುಗವಾಗಿ ಕಳೆಯುತಿದ್ದಳು ನಿತ್ಯಾನಂದನ ನೆನೆಯುತಾ

ಕಂಸರಿಪು ನಾರಾಯಣನು ಜನಿಸುವನೆಂದು ಅರುಹುವೆನೆನುತಲಿ

ಹಂಸವಾಹನ ಕೊರವಿವೇಷವ ಹರುಷದಿಂದಲಿ

ಧರಿಸಿದ ಆದನೆ ಕೊರವಿ ೬

ಮಿಂದು ಮಂಡೆಯ ಬಾಚಿ ತುರುಬಿಗೆ

ಮಲ್ಲಿಗೆಯ ವನಮಾಲೆಯ

ಚಂದ್ರಗಾವಿಯನುಟ್ಟು ಪಣೆಯೊಳು ತಿದ್ದಿತಿಲಕವನಿಟ್ಟನು

ಗಂಧ ಕಸ್ತೂರಿ ಪರಿಮಳವನು ಲೇಪಿಸಿ ಸರ್ವಾಂಗದಿ

ಇಂದ್ರಮಾಣಿಕದೋಲೆ ಹೊಳೆಯಲು ಇದಿರು

ಭಾಸ್ಕರನಂದದಿ ಆದನೆ ಕೊರವಿ ೭

ಗುಂಜಿಯ ದಂಡೆಯು ತೋಳಭಾಪುರಿ ಗಲ್ಲಕೊತ್ತಿದ ವೀಳ್ಯವು

ಮಂಜಾಡಿಯಸರ ಹವಳ ಸರ ಹತ್ತೆಸರವಾ

ಕೊರಳಲಿ ಹೊಳೆಯಲು

ಅಂಜನವನಿಟ್ಟು ಅಲರಗಣ್ಣಿಗೆ ಅತಿಹರುಷದಿಂದ ಬೇಗದಿ

ಕಂಜೋದ್ಭವ ಶೃಂಗರಿಸಿ ಬೆಳಗುವ ಕನ್ನಡಿಯನೀಕ್ಷಿಸಿದನು

ಆದನೆ ಕೊರವಿ ೮

ಮುತ್ತು ಮಾಣಿಕ ಹೊನ್ನಗೂಡೆಯ ಪಿಡಿದು

ಉತ್ತಮ ಶಿಶುವ ಬೆನ್ನಲಿ ಕಟ್ಟಿ

ಚಿತ್ತದೊಳಗೆ ನರಹರಿ ಶರಣೆನುತ

ಸತ್ಯಲೋಕದಿಂದಿಳಿದಳೆ ಕೊರವಿ ೯

ಮಧುರಾ ಪಟ್ಟಣಕಾಗಿ ಬಂದಳೆ ಕೊರವಿ

ಹದಿನಾರು ಬಾಗಿಲ ದಾಟಿ ನಡೆದಳು

ಮದಗಜದಂತೆ ಮೆಲ್ಲಡಿಗಳನಿಡುತ

ಬೆದರದೆ ಕೇರಿಕೇರಿಯಲಿ ಸ್ವರಗೈದು ೧೦

ಮನೆಮನೆ ಬಾಗಿಲಗಳ ಮುಂದೆ ನಿಂತು

ವನದ ಕೋಗಿಲೆಯಂತೆ ಯವ್ವಾ ಯವ್ವಾ ಎನುತ

ವಿನಯದಿ ಸ್ವರಗೈವ ಕೊರವಿಯ ಕಂಡು

ವನಿತೆ ದೇವಕಿ ಸನ್ನೆಮಾಡಿ ಕರೆದಳು ೧೧

ಸನ್ನೆಮಾಡಿ ಕರದರೆ ಚೆನ್ನಕೊರವಂಜಿ ಬಂದು

ಎನ್ನವ್ವ ಎನ್ನಕ್ಕ ಎನ್ನ ತಂದೆಯ ಹೆತ್ತವ್ವ

ನಿನ್ನ ಮನದಾಯತವ ಹೇಳೇನು ಬಾರವ್ವ

ಎನ್ನ ಕೂಸಿಗೆ ಒಂದಿಷ್ಟನ್ನವನಿಕ್ಕವ್ವ

ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ ೧೨

ಮಲೆಯಾಳ ಕೊಂಕಣದೇಶ ಮಹಾರಾಷ್ಟ್ರ ಗುಜ್ಜರದೇಶ

ಚೆಲುವ ಕಾಶ್ಮೀರ ಕಳಿಂಗ ಕರ್ನಾಟಕದೇಶ

ತುಳುವ ತಿಲುಗ ದೇಶವನ್ನು ತಿರುಗಿ ಸೊಲ್ಲ ಹೇಳಿ ಬಂದೆ

ಒಲುಮೆಯ ಕೊರವಂಜಿ ನಾನಲ್ಲವೆಯಮ್ಮ

ಸೊಲ್ಲ ಕೇಳೆ ಸೊಲ್ಲ ಕೇಳೆ ಸಿರಿವಂತೆ ಬಾರೆ೧೩

ಛಪ್ಪನ್ನ ದೇಶವನೆಲ್ಲ ಸುತ್ತಿ ಸೊಲ್ಲ ಹೇಳಿಬಂದೆ

ತಪ್ಪ ಹೇಳುವ ಕೊರವಿ ನಾನಲ್ಲವೆಯಮ್ಮ

ಕರ್ಪೂರ ವೀಳ್ಯವ ತಾರೆ ಕಾಂತೆ ನಿನ್ನ ಕೈಯ ತೋರೆ

ಒಪ್ಪಾದರೆ ಕೇಳುಬಾರೆ ಕೊಪ್ಪಿನ ಕಿವಿಯವ್ವ

ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ ೧೪

ವಚನ :ಇತ್ತಿತ್ತ ಬಾರವ್ವ ವಿವರಿಸಿ ಹೇಳೇನು ಮುತ್ತಿನ ಮುಡಿಯವ್ವ

ಮುದ್ದುಮುಖವ ತೋರೆ ಮತ್ತಗಜಗಮನೆ ಮಂದಹಾಸವದನೆ

ರತ್ನದ ಸೆಳೆಗೋಲ ಪಿಡಿಯೆ ರಾಜೀವನೇತ್ರೆ ನಿನ್ನ ಚಿತ್ತದೊಳಗಣ

ಮಾತ ಛಂದವಾಗಿ ಹೇಳ್ವೆನು ಕೇಳೆ ಅಮ್ಮಯ್ಯ

ಬರಿಯ ಡಂಬಕದ ಕೊರವಿ ನಾನಲ್ಲ

ಅರುಹುವೆನು ಮುಂದಣ ಕಥಾಂತ್ರವೆಲ್ಲವ

ಮೊರದ ತುಂಬ ಮುತ್ತು ತಾರೆ ಮಾನಿನಿರನ್ನಳೆ

ಕುರುಹ ಹೇಳೇನು ಇಲ್ಲಿ ಕುಳ್ಳಿರು ಬಾರೆಯವ್ವ೧೫

ಎಂದ ಮಾತ ಕೇಳಿ ಹರುಷದಿಂದ ದೇವಕಿ

ಮಿಂದು ಮಡಿಯನುಟ್ಟು ಕಾಂತೆ ಬಂದು ಕುಳಿತಳು

ಇಂದುಮುಖಿಯು ಮೊರನ ತುಂಬ ಮುತ್ತನಿಟ್ಟಳು

ತಂದು ಕೈಯತುಂಬ ಹೊನ್ನ ಕಾಣಿಕಿಟ್ಟಳು ೧೬

ಗುಣಿಸಿ ಮುತ್ತಿನ ಅಕ್ಷತೆಯಿಟ್ಟು ಗುಪಿತದಿಂದಲಿ

ನೆನೆದಳು ಮನದಭೀಷ್ಟವೀವ ಕೃಷ್ಣನ

ಜನಿಸಿದೆನು ಮಧುರಾಪುರದ ಅರಸನುದರದಿ

ಎನ್ನ ಸೋದರನೆಂಬ ಪಾಪಿ ಸೆರೆಯೊಳಿಟ್ಟನು೧೭

ಎನ್ನ ಸುತನು ತನ್ನ ಕೊಲುವನೆಂಬ ಮಾತಿಗೆ

ಎನ್ನ ಅಗ್ರಜ ಎನ್ನ ಮೇಲೆ ಖಡ್ಗವೆತ್ತಲು

ಎನ್ನ ಪತಿಯು ಎನ್ನ ಮೇಲಣ ಮಮತೆಯಿಂದಲಿ

ತನ್ನ ಸುತರ ಕೊಡುವೆನೆಂದು ಕೊಲೆಯನುಳುಹಿದ೧೮

ಒಡನೆ ಹುಟ್ಟಿದ ಅಣ್ಣ ಎನಗೆ ವೈರಿಯಾದನು

ಪಡೆದ ಪಡೆದ ಸುತರನರೆಯಲಪ್ಪಳಿಸಿದನು

ಒಡೆಯ ಕೃಷ್ಣಸಲಹೊ ಎಂದು ಸ್ತುತಿಸಿ ದೇವಕಿ

ಗಡಣದಿಂದ ಕೊರವಿ ತಾನು ಹೇಳ ಕುಳಿತಳು ೧೯

ವಚನ :ತಿರುಪತಿ ತಿಮ್ಮಪ್ಪ ಚಳ್ಳಪಿಳ್ಳೆರಾಯ

ಸುರಪುರವಾಸ ಲಕ್ಷ್ಮೀವರ ಕರುಣವಾಗು

ವಂದನೆ ಸೊಲ್ಲ ಚಂದಾಗಿ ಹೇಳೇನು ಕೇಳೆಯಮ್ಮಯ್ಯಾ

ಉರ್ಬಿಯೊಳತಿ ದಿಟ್ಟನಮ್ಮ ನಿಮ್ಮ ಮಗನು

ಗರ್ಭದೊಳಿಹನು ಕಾಣಮ್ಮ

ಕೊಬ್ಬಿದ ಕಂಸನ ಹಮ್ಮ ಮುರಿದು ನಿಮ್ಮ

ನಿರ್ಬಂಧ ಬಿಡಿಸುವನಮ್ಮ ೨೦

ಎಂಟನೆ ಗರ್ಭವಿದಮ್ಮ ನಿಮ್ಮುದರದಿ

ಅಂಟಿಹ ಮಗನು ಕಾಣಮ್ಮ

ಕಂಟಕ ಕಂಸನ ಅಮ್ಮಾ ಇವನು ಪುಟ್ಟಿ

ಗಂಟಲ ಮುರಿವ ಕಾಣಮ್ಮ ೨೧

ನಿಷ್ಕರುಣಿ ನಿಮ್ಮಣ್ಣನಮ್ಮ ನೀ ಪಡೆದಂಥ

ಮಕ್ಕಳ ಕೊಲ್ಲುವ ಕಾಣಮ್ಮ

ಚಕ್ರಧರನ ಕೈಯೊಳಮ್ಮ ಈ ಕಂಸನು

ಸಿಕ್ಕುವುದು ತಡವಿಲ್ಲವಮ್ಮ ೨೨

ವಚನ : ಈ ಮಾತು ಪುಸಿಯಲ್ಲ ಸ್ವಾಮಿಯ ಕರುಣ ಉಂಟು

ರಮಾಪತಿಯ ಕರುಣ ಉಂಟು ಕಾಮಿತಾರ್ಥವೆಲ್ಲ

ಕೈಗೂಡಿತು ಕೇಳೆಯಮ್ಮಯ್ಯಾ

ಕೈಯ ತೋರೆ ಕೈಯ ತೋರೆ ಕೈಯ ತೋರೆ ಅಮ್ಮಯ್ಯ

ಕೈಯ ತೋರೆ ನಿನ್ನ ಮನದ ಕುರುಹ ಹೇಳುವೆ

ಸೈಯೆನಿಸಿಕೊಂಬೆ ನಿನಗೆ ಸುಖವಾಕ್ಯವನು ಹೇಳಿ

ಭಯ ಬೇಡವೇ ಅಮ್ಮಯ್ಯ ನಿನಗೆ ಭಾಷೆಯ ಕೊಡುವೆ ೨೩

ಸಟೆಯ ಮಾತುಗಳಾಡಿ ಸೆಳೆದುಕೊಂಡು ಹೋಗಿ

ಹೊಟ್ಟೆಯ ಹೊರೆವ ಕೊರವಿ ನಾನಲ್ಲವಮ್ಮ

ನೆಟ್ಟನೆ ಸದಾಶಿವನ ತಟ್ಟಿ ಬಂದ ಕೊರವಿಯ ಮಾತ

ದಿಟ್ಟವೆಂದು ಸೆರಗ ಗಂಟಿಕ್ಕಿಕೊಳ್ಳಮ್ಮ ೨೪

ಅಂಗನೆ ನಿನ್ನ ಮನದ ಆಯಿತವ ಹೇಳೇನು

ಮಂಗಳ ವಾಕ್ಯವ ಕೇಳೇ ಮಾನಿನಿ ರನ್ನೆ

ಬಂಗಾರದ ಕೈಯ ತೋರೆ ಬೊಗಸೆಗಂಗಳ ನೀರೆ

ಹಿಂಗುವದು ನಿನ್ನ ಕಷ್ಟ ಹುಸಿಯಲ್ಲವಮ್ಮ ೨೫

ವಚನ :ಚಂದ್ರವದನೆಯ ಚೆಲ್ವ ವಾಮಹಸ್ತವ

ಚಂದದಿಂದಲಿ ಕೊರವಿ ವಿವರಿಸಿ ಹೇಳಿದಳು

ಹಿಂದಣ ಕಷ್ಟವೆಲ್ಲ ಪರಿಹಾರವಾಯಿತು

ಮುಂದೆ ಶುಭ ಉಂಟು ಕೇಳೆಯಮ್ಮ

ಶ್ರಾವಣ ಬಹುಳಾಷ್ಟಮಿ ರಾತ್ರೆಯ ನಡುವಿರುಳು

ರೋಹಿಣಿ ನಕ್ಷತ್ರದಲ್ಲಿ ನಿಮ್ಮುದರದಿ ಕೃಷ್ಣ

ಜನಿಸುವನು ಕಾಣೆ ಕೇಳಮ್ಮಯ್ಯ ೨೬

ಶಂಖಚಕ್ರವು ಗದೆ ಪಂಕಜ ಪೀತಾಂಬರ ಅ-

ಲಂಕಾರ ಮೂರುತಿಯಾಗಿ ಪುಟ್ಟುವ ಕೃಷ್ಣ

ಶಂಕೆಯಗೊಳದಿರೆ ಕೇಳಮ್ಮಯ್ಯ ೨೭

ಅಮ್ಮಾ ನಿಮ್ಮುದರದಿ ಬ್ರಹ್ಮನಪಿತ ಬಂದು

ನಿಮ್ಮ ನಿರ್ಬಂಧವ ಬಿಡಿಸುವನು ಕಾಣೆ

ಉಮ್ಮಯಗೊಳಬೇಡವೆ ಕೇಳಮ್ಮಯ್ಯ ೨೮

ಆದಿಮೂರುತಿ ನಿಮ್ಮುದರದೊಳವತರಿಸಿ

ಮೇದಿನಿ ಭಾರವನಿಳುಹಲು ಕಂಸನ

ಭೇದಿಸುವನು ಕಾಣೆ ಕೇಳುಮ್ಮಯ್ಯ ೨೯

ಏಳು ಮಕ್ಕಳ ಕಂಸ ಅರೆಯಲಪ್ಪಳಿಸಿದನೆ

ಚಳ್ಳೆ ಬೀಜದಂತೆ ನುಣಿಚಿ ತಪ್ಪಿಸಿಕೊಂಬ

ಕಳ್ಳಮಗನು ಪುಟ್ಟುವ ಕೇಳಮ್ಮಯ್ಯ ೩೦

ವಚನ : ಇಂಥಾ ಮಗನು ನಿಮ್ಮುದರದಿ ಜನಿಸಲು

ಕಾಂತ ವಸುದೇವರು ಗೋಕುಲಕೆ ಒಯ್ಯಲು

ನಿಂತಿದ್ದ ಯಮುನೆಯು ಮಾರ್ಗವಂ ಬಿಡಲು

ಸಂತೋಷದಿಂದಲ್ಲಿ ಬೆಳೆವನೆ ಕೃಷ್ಣ ಕೇಳಮ್ಮಯ್ಯ

ಗೋಕುಲದೊಳಗೆ ಶ್ರೀ ಕೃಷ್ಣನನಿಟ್ಟು ದುರ್ಗೆಯ

ಈ ಕಡೆಗೆ ಕೊಂಡುಬಹ ನಿಮ್ಮ ಪತಿಯು

ಕಾಕು ಕಂಸಾಸುರನು ಆಕೆಯ ಪಿಡಿಯೆ ಗಗ-

ನಾಕೆ ಹಾರಿ ಹೋಗುವಳು ಮಾಯಾಕಾರಿಯು ೩೧

ಕ್ರೂರ ರಕ್ಕಸ ಎನ್ನ ಕೊಲ್ಲುವದೇತಕೋ ನಿನ್ನ

ವೈರಿ ಕೃಷ್ಣ ಹೋಗಿ ಗೋಕುಲದೊಳಗೆ

ಧೀರನಾಗಿ ಬೆಳೆದು ಸಂಹಾರವ ಮಾಡುವನೆಂದು

ಸಾರಿ ಹಾರಿ ಹೋಗುವಳಂಬರಕೆ ದುರ್ಗಿ ೩೨

ನಂದನ ಗೋಕುಲದಿ ಆನಂದದಿ ಬೆಳೆದಾನು ಕೃಷ್ಣ

ಸಂದೇಹ ಬೇಡವವ್ವ ನಿಮ್ಮ ಮನದೊಳಗೆ

ಬಂದು ಮಞ್

 

ನು ೪೮-೫೨ರ ವರೆಗೆ ದಶಾವತಾರ ವರ್ಣನೆ

ಲವಕುಶರ ಹಾಡು

ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು

*ಗುರುಹಿರಿಯರ ಪಾದಕ್ಕೆರಗೀ |

ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು

ತೊಡಗುವೆ ರಾಮರ ಕಥೆಯಾ ೧

ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು

ವರ್ಣ ದಕ್ಷಿಣೆ ತಾಂಬೂಲಾ |

ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ

ವರ್ಣಿಪೆ ಲವಕುಶರ ಕಥೆಯಾ ೨

ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು |

ಗುರು ಮಧ್ವರಾಯರ ನೆನೆದು |

ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು

ತೊಡಗುವೆ ರಾಮರ ಕಥೆಯಾ ೩

ವೇದಪಾರಾಯಣ ಅಂತ್ಯದ ಪೀಠಕ

ಮಾಧವ ಹರಿ ಸುಗೋತ್ರ |

ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?)

ಹೇಳಿದಳುಹರಿನಾಮ ಕಥೆಯಾ ೪

ಯಾದಾಡ್ಯ(?) ಕೌರುಣ್ಯ (ಕೌಂಡಿಣ್ಯ?) ಗೋತ್ರದ ವರಸೊಸಿ

ಯಗ್ನ ಸಂತತಿಯೂ ಪೀಠಕವೂ |

ಸುಜ್ಞಾನಿಗಳು ಹೇಳಿ ತಿಳಿವೋದು ಈ ಕಥಿ

ಅಜ್ಞಾನಿ ಮೂಢಜೀವರಿಗೆ ೫

ಅರದು ಮರದು ಯಶೋಧಿ ಹೇಳಿದ ಕಥಿ

ಹರುವುಳ್ಳ ನಿರಯಾಗಿಗಳೂ |

ಹರವುಳ್ಳ ಕೈ(?)ಮುನಿವಳ್ಳೇರು ಜಾಣರು

ತಿಳಿವೂದು ಅರ್ಥಸಂದೇಶ ೬

ನಾಡನ ಕಥೆಯಲ್ಲ ಬೇಡುಂಬ ಪದನಲ್ಲ

ನಾಡೊಳಗೆ ಹರಿನಾಮ ಕೇಳಿದ ಜನರಿಗೆ |

ಆಯುರಾರೋಗ್ಯವು ದಾರಿದ್ರ್ಯ

ವಿಲ್ಲವಾಗುವುದು ೭

ಸಂದುಗೊಂದುಗಳಲ್ಲಿ ಸಂಗೀತಪದನಲ್ಲ

ಪ್ರಚಂಡರು ರಾಮಲಕ್ಷ್ಮಣರು |

ಇತ್ತಬೇಟೆಯನಾಡುವ ಕ್ರಮಗಳ

ಚಂದವಿನ್ನೆಂತು ವರ್ಣಿಸಲೆ ೮

ಅಂದು ಶ್ರೀ ರಾಮರು ಅಂಗನೆಯ ತೊಡೆಲಿಟ್ಟು

ತಾಂಬೂಲ ಶ್ರೀಮೊಗದಿಂದೆ |

ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ

ಇಂದುವದನೆ ಗರ್ಭವೆಂದ ೯

ನಳಿನನಾಭನು ತನ್ನ ಲಲನೇಯ ಮುಖನೋಡಿ

ಲಲನೆ ನಿನ್ನ ಪ್ರೇಮವೇನೆ |

ಮುನಿಯು ಆಮುನಿಗಳು ಕೂಡಿದ

ನಂತ್ರ ವನಭೋಜನ ತನಗೆಂದ್ಲೂ ೧೦

ಹಲವು ಕಾಲವು ಸೀತೆ ಅಸುರರ ವಡನಾಡಿ

ನೆನದಳು ಋಷಿಗಳಾಶ್ರಮವಾ |

ಹಸನವಲ್ಲವು ಸೀತೆ ಇನ್ನು ನೀನುಳಿವದು

ಋಷಿಗಳಾಶ್ರಮಕೆ ಹೋಗೆಂದಾ ೧೧

ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು

ಕೈಹಿಡಿದ ಪುರುಷನ ಬಿಟ್ಟು |

ಸಕಲ ಸೌಭಾಗ್ಯ ಸಂಪತ್ತು ಎಲ್ಲವ ಬಿಟ್ಟು

ನೆನದಾಳು ಋಷಿಗಳಾಶ್ರಮವ ೧೨

ಅಂದು ಶ್ರೀರಾಮರು ಬೇಟೆಗ್ಹೋದೇವೆಂದು

ಇಂದು ಡಂಗುರವ ಸಾರಿದರೂ |

ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು

ಮಂದಿ ಮಕ್ಕಳ ಕರಸಿದರೂ ೧೩

ಬಂದರು ಮಂತ್ರಿ ಮಾನ್ಯರು ಪ್ರಹಸ್ತರು

ಬಂದರು ಪ್ರಧಾನೇರು |

ಬಂದರು ರವಿಗುರಿನವಿಗುರಿಕಾರರು (?)

ಬಂದರು ವಾಲಗದೋರೊಪ್ಪಿದರು ೧೪

ಆಟಪಾಟದೋರು ನೋಟಕ್ಕೆ ದಾರಾರು

ಸೂತ್ರದವರು ಸುವ್ವಿಯವರು |

ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು

ನಾಥನೋಲಗದಲೊಪ್ಪಿದರೂ ೧೫

ಹೊನ್ನು ಹಲಗೆಯವರು ಬೆನ್ನಬತ್ತಲೆಯವರು

ಚಿನ್ನಬಿನ್ನಾಣನಾಯಕರೂ |

ಚೆನ್ನಿಗರಾಮರ ಪೊಗಳುವ ಭಂಟರು

ಬಿನ್ನಾಣದಿಂದೊಪ್ಪುತಿಹರೂ ೧೬

ಉಟ್ಟರು ಪಟ್ಟಾವಳಿ ಹೊಸಧೋತರವು

ಇಟ್ಟರು ಆಭರಣವನ್ನೂ |

ಇಟ್ಟರು ಮಕರಕುಂಡಲ ಕಿರೀಟವೂ

ಇಟ್ಟರು ನೊಸಲ ಕಸ್ತುರಿಯಾ ೧೭

ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು

ನ್ಯಾವಳದ ಉಡುದಾರನಿಟ್ಟು ಸೂರ್ಯನ

ಕುಲದ ಕುಮಾರರು ನಾಲ್ವರು

ಏರಿದರು ಹೊನ್ನ ರಥವಾ ೧೮

ವಾಯುವೇಗ ಮನೋವೇಗವೆಂಬೋ ರಥ

ಏರಿದರೆ ರಾಮಲಕ್ಷ್ಮಣರೂ |

ಜಾಣನೆಂಬೋ ಸೂರ್ಯ ತಾನೆ ರಥವ ನಡೆಸೆ

ಕೂಡ ಬೇಟೆಗೆ ತೆರಳಿದರು ೧೯

ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ

ಉತ್ತತ್ತಿ ಬೆಳಲು ದಾಳಿಂಬ

ಉತ್ತಮ ಅಶ್ವತ್ಥ ಇಪ್ಪಿಯ ವನಗಳು

ವಿಸ್ತರವನವೊಪ್ಪುತಿಹವೂ ೨೦

ಹಲಸು ನಾರಂಗ ಬೆರಸಿದ ಕಿತ್ತಳಿ

ಹರಿಸಿಣದ ತೋಪು ಎಲಿತ್ವಾಟ

ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು

ಬೆರಸಿ ಬೇಟೆಯ ನಾಡುತಿಹರೂ ೨೧

ಯಾರಾಡಿಗಿಡಗಳು ಕ್ಯಾದೀಗಿವನಗಳು

ನಾಗಸಂಪಿಗೆಯ ತೋಪುಗಳು |

ಜೋಡೀಲಿ ಭರತ ಶತ್ರುಘ್ನರೆಲ್ಲರು

ಕಾಲಾಳು ಬೇಟೆನಾಡಿದರೂ ೨೨

ಗಂಡಭೇರುಂಡ ಉದ್ದಂಡ ಕೇಕಾಪಕ್ಷಿ

ಚಂದಾದ ಬಕನ ಪಕ್ಷಿಗಳೂ |

ಅಂದಾದ ಆಲಿವಾಣ ಆಲಹಕ್ಕಿಯು ರಾಮ

ಚಂದ್ರನು ಬೇಟೆಯಾಡಿದನು ೨೩

ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ

ಒಂದುಗಳಿಗೆ ಶ್ರಮವ ಕಳೆದು

ನಂದನವನದಲ್ಲಿ ತನಿಹಣ್ಣು ಮೆಲುವೋರು

ಗಂಗೆಯ ಉದಕ ಕುಡಿಯುವೋರು ೨೪

ನಳಿನನಾಭನು ತಾನು ಬಳಲಿ ಬೇಟೆಯನಾಡಿ

ನೆರಳಲ್ಲಿ ತುರಗ ಮೇಯಿಸಿದ

ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು

ಮಲಗೀದ ಒಂದು ನಿಮಿಷವನೂ ೨೫

ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ

ಕಂಗೆಟ್ಟು ಮೈಮುರಿದೆದ್ದಾ |

ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ

ಬಂದಿಹಳೊಬ್ಬ ತಾಟಕಿಯೂ ೨೬

ಇಂದುವದನೆಮುಡಿ ಪಿಡಿದಳೆವೊ ದುಕಂಡೆ

ತುಂಡರಾವಣ ಕುಯೋದು ಕಂಡೆ |

ಇಂದು ನೀ ಸೀತೆಯ ಕರೆದೊಯಿದು ಕಾನನದಿ

ದಿಂಜಾರಿಳಿಸೋದು ಕಂಡೆ ೨೭

ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ

ಇನ್ನು ಸೀತೆಗೆ ಜಯವಿಲ್ಲಾ |

ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ

ಬಂದಾಳು ಮಾಯದ ಗರತಿ | ೨೮

ಬಂದು ಅಯೋಧ್ಯಾಪುರದ ಬೀದಿಯವಳಗೆ

ಚಂದದಿ ಕುಣಿದಾಡುತಿಹಳು |

ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ

ಚಂದುಳ್ಳ ದ್ವಾರಪಾಲಕರೂ ೨೯

ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ

ಬಂದಡರಿದಳರಮನೆಗೆ

ಕಂಡು ಜಾನಕಿ ತಾನು ಕರಸಿದಳಾಗಲೆ

ಬಂದಳು ಮಾಯದ ಗರತಿ ೩೦

ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು

ತಂದಳು ನಾಗ ಸಂಪಿಗೆಯಾ |

ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ

ಸಂದೇಹ ಬಟ್ಟಳಾ ಸೀತೆ ೩೧

ದಾವ ದೇಶ ನೀವು ಏನುಕಾರಣ ಬಂದಿ

ಈನಾಡ ಗರತಿ ನೀನಲ್ಲ |

ದಾವದು ಸ್ಥಳಕುಲ ದಾರು ಬಂಧುಗಳುಂಟು

ದಾರ ಬಳಿಗೆ ನೀ ಬಂದೀ ೩೨

ಈರೇಳು ಲೋಕವ ಸುತ್ತಿ ತಿರುಗಿ ಬಂದೆ

ನಾಗಲೋಕಕ್ಕೆ ಬಾಹೆನೆಂದು

ನಾಗಲೋಕದಿಂದ ದೇವಲೋಕಕ್ಕೆ ಬಂದೆ

ದೇವಿಗೆ ಕಾಣಿಕೆ ತಂದೇ ೩೩

ಹೊನ್ನು ಹಣವನೀವೆ ಅನ್ನವಸ್ತ್ರವನೀವೆ

ಇನ್ನು ನೀವಲಿದದ್ದು ಈವೆ |

ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು

ಬಿನ್ನವಿಸೆ ಗರತಿ ನೀ ಅಂದ್ಲೂ ೩೪

ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ

ನಿನ್ನ ಭಾಗ್ಯವು ನಾನೊಲ್ಲೆ |

ಮುನ್ನಿನ ಅಸುರರೂಪ ಇನ್ನು ನೀಬರೆದರೆ

ಚೆನ್ನಾಗಿ ಹರಣ ಹೊರುವೆನು ೩೫

ಮುನ್ನಿನ ಅಸುರರೂಪ ಇನ್ನು ನಾ ಬರೆದರೆ

ಮುನ್ನವನು ಕಂಡು ಕೇಳರಿಯ |

ಪನ್ನಂಗಧರ ರಾಮ ಬಂದರೆ ಬೈದಾರು

ಮುಂದಿನ್ನು ಗಮನ ಮಾಡಂದ್ಲೂ೩೬

ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು

ತಂದು ತೊಡೆದಳು ಭಸುಮವನು |

ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ

ಉಂಗುಷ್ಟವನು ಕಂಡುಬಲ್ಲೆ ೩೭

ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ

ಹಿಂದೆ ಹಿಂಬುಡ ಮೊಣಕಾಲು |

ಚಂದಾದ ನಡುದೊಡಿ ಎದೆ ಭುಜವ ಇದ

ಹೊಂದಿಸಿ ಬರೆ ಎಂದಳವಳು ೩೮

ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು

ಕೊಟ್ಟಳು ಸೀತೆ ಕೈಗೆ |

ಒಂದು ಕಾಯಕೆ ಹತ್ತು ಸಿರಗಳ ಬರೆದಳು

ಮುಂದೆರಡು ಪಾದವ ಬರೆದಳು ೩೯

ಒಂದರ ಹಿಂದೊಂದು ವರ್ಣಿಸಿ ಬರೆದಳು

ತಂದು ನಿಲಿಸಿದಳು ರಾವಣನಾ |

ಚಂದವಾಯಿತು ದೇವಿ ವರವಕೊಡೆನುತಲಿ

ಎಂದೆಂದಿಗೂ ಅಳಿಯದ್ಹಾಗೇ ೪೦

ಅಳಿದು ಉಳಿಯದಿರು ಉಳಿದು ನೀ ಕೆಡದಿರು

ಧರಿಯವಳಗೆ ಅಡಗದಿರು |

ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು

ವರವ ಕೊಟ್ಟಳು ಸೀತೆ ಪಠಕೆ ೪೧

ಮರೆ

 

ಹಿಂದಕ್ಕೆ ವನದಲ್ಲಿ ತಪವ ಮಾಡುತಲಿದ್ದೆ ಬಂದೊಬ್ಬ

ಮುನಿಯು ಹೇಳಿದನು

ತಂದೆತಾಯಿಗಳೆಮಲೋಕದೊಳಿಹರೆಂದು ಬಂದು

ಹೇಳಿದನೆ ಸುದ್ದಿಯನು ೩೦೨

ಆತನ ವಾಕ್ಯವ ಕೇಳಿ ನಾ ವನದಲ್ಲಿ ಆಚರಿಸಿದೆ ತಪಗಳನು

ಖೇಚರದಲಿ ಸುರಕನ್ನಿಕೆ ಸುಳಿಯಲು ಆಕ್ಷಣ

ಬಿಂದು ಸಡಿಲಿದವು ೩೦೩

ತಾವರೆ ಕಮಲದೊಳಿಟ್ಟು ನೀರೊಳು ಬಿಟ್ಟೆ

ಏನಾಯಿತೆಂದು ನಾನರಿಯೆ

ಕಾಲಾಂತರದಲಿ ತೇಲಿ ಬಂದನು ಕಂದ

ಪಾಲಿಸಿಕೊಂಡೆನು ತಂದು ೩೦೪

ಕಂದನ ತಂದು ಇಂದಿಗೆ ಏಳೊರುಷವು ರಂಭೆ

ಬಂದಳು ನಮ್ಮ ಮಠಕೆ

ಹೇಳ ಬಂದೆನು ನಿಮ್ಮ ಕೂಡೆ ಈ ವಾರ್ತ್ತೆಯ

ಮಾಡಿ ನಿಮ್ಮನಕೆ ಬಂದುದನು ೩೦೫

ಉತ್ತಮವೆನುತಲೆ ಬಂದರು ಮುನಿಗಳು

ಮತ್ಸ್ಯಲೋಚನೆ ಇಪ್ಪಯೆಡೆಗೆ

ಮತ್ತೊಬ್ಬ ಮುನಿಗಳು ಅರಸುತ್ತಲಿತ್ತ ಬಂದರು

ಅಕ್ಕಟ ವಿಧಿಯೆಂದಳಾಕೆ ೩೦೬

ಮುನಿಗಳ ಕಾಣುತ್ತ ಮುಂದಕ್ಕೆ ಬಂದಳು

ಚರಣದ ಮೇಲೆರಗಿದಳು

ಮುಡಿ ಹಿಡಿದೆತ್ತಿ ಕೊಡಹಿ ಮೈಯ ಧೂಳನು ಬಡವಾದೆ

ಮಗಳೆ ನೀನೆಂದು ೩೦೭

ಪತಿಸುತರಿಲ್ಲವೆ ಪಾಲಿಸುವರೆ ನಿನಗೆ

ಅತಿಉಗ್ರತಪವೇಕೆ ನಿನಗೆ

ಸಖಿಯರ ಸಹವಾಸಯಿಲ್ಲದೆ ಇರುವುದು ಮತವೆ

ಉತ್ತಮರಿಗ್ಹೇಳೆಂದ ೩೦೮

ಕಡುಕೋಮಲಾಂಗಿ ನೀ ಅಡವಿಯಲಿಪ್ಪರೆ

ಹಡೆದವರಿಲ್ಲ ನೀನ್ಯಾರು

ಒಡಯರೊಬ್ಬರು ಇಲ್ಲದಿರುವುದುಚಿತವಲ್ಲ ನುಡಿ

ನಿನ್ನ ಮನದ ಸಂದೇಹ ೩೦೯

ಸೂರ್ಯಕುಲದ ರಘುರಾಯ ನಮ್ಮಯ್ಯನು

ಆಳ್ವನಯೋಧ್ಯ ಪಟ್ಟಣವ

ಪೂರ್ವಾರ್ಜಿತದ ವಿಧಿ ಬಂದು ತುಡುಕಲು ಆಯಿತು

ಈ ವಿಧಿಯಾಗಿ ೩೧೦

ಭೂತಳಪತಿ ರಘುರಾಯ ನಿಮ್ಮಯ್ಯನು

ಖ್ಯಾತಿಪಡೆದ ಮೂರು ಜಗದಿ

ಕಾಂತೆ ನೀ ಮಾಡಿದ ತಪ್ಪೇನು ಮನೆಯಿಂದ

ಯಾತಕ್ಕೆ ಹೊರವಡಿಸಿದರು ೩೧೧

ಹೆತ್ತ ತಾಯಿ ತಂದೆ ಆಜೆÉ್ಞೀಲಿ ನಾನಿದ್ದೆ ಚಿತ್ತ

ಚಂಚಲವಾಗದ್ಹಾಂಗೆ

ಮತ್ತೊಂದು ದಿವಸ ನೀರಾಟಕ್ಕೆ ಬಂದೆನು

ಮಿತ್ರೆಯರನೆ ಒಡಗೊಂಡು ೩೧೨

ಗಂಗೇಲಿ ನೀರಾಟವಾಡುವ ಸಮಯದಿ

ಹಿಂದಣ ಪೂರ್ವಕಲ್ಪನೆಯೊ

ಕೆಂದಾವರೆಯಾಗಿ ಬಂದೆನ್ನ ಸೋಂಕಲು ನಿಂದವು

ಗರ್ಭ ಸ್ಥಿರವಾಗಿ ೩೧೩

ಮೇಲುಭಾಗದಿಂದ ತೇಲಿಬಂದಿತು

ಪುಷ್ಪ ನೀರಾಟವಾಡುತ್ತಿದ್ದೆಡೆಗೆ

ಪಾವನ್ನಪಂಕಜ ಪರಿಮಳ ಪುಷ್ಪವ ಆಘ್ರಾಣಿಸಿದೆನು ಶೀಘ್ರದಲಿ ೩೧೪

ಕೇಳಿ ಸೈರಿಸಲಾರದೆ ನಮ್ಮಯ್ಯನು ಊಳಿಗದವರ ಕರೆಸಿದನು

ಸೀಳಿಬನ್ನಿವಳನು ಎನುತಲೆ ಕಳುಹಿದ ಖೂಳರು ಎನ್ನುಳುಹಿದರು ೩೧೫

ಅರಣ್ಯದೊಳಗೊಬ್ಬಳಳುತ ನಿಂತಿದ್ದೆನು ದೂರದಿ

ಕಂಡನೀ ಮುನಿಯು

ಕಾರುಣ್ಯದಿಂದಲೆ ತಾನು ಕರೆದು ಕೊಂಡ್ಹೋಗಿ

ನಾರಿಯ ಕೈಯೊಳಗಿತ್ತ ೩೧೬

ತಾಯಿ ತಂದೆ ಅಂದದಿ ಪಾಲಿಸುತ್ತಿದ್ದರು ಬಾಲ

ಹುಟ್ಟಿದ ಮೂಗಿನಿಂದ

ನಾನು ಅಂಜಿ ಮಾನವರಪವಾದಕ್ಕೆ ನೀರೊಳು

ಶಿಶುವ ನೂಕಿದೆನು ೩೧೭

ಭೂತ ಹುಟ್ಟಿತೆಂದು ಭೀತಿಯ ಪಡುವರು

ಮಾತನಾಡುವರು ಮೂಜಗದಿ

ಯಾತರೇ ಶಿಶುವೆಂದು ಜಲದೊಳು ನೂಕಿದೆ ಲೋಕ

ಲೋಕವ ಚರಿಸಿದೆನು ೩೧೮

ಘಟ್ಟ ಬೆಟ್ಟವ ತಿರುಗೆ ಏಳು ವರುಷವು

ಹೊತ್ತಾರೆಬಂದೆ ಈ ಮಠಕೆ

ಪುಟ್ಟ ಬಾಲಕ ಎನ್ನ ನಿಂದಿರಗೊಡಿಸದೆ ಅಟ್ಟಿದ

ಹೋಗು ಹೋಗೆನುತ ೩೧೯

ಪರಸತಿಯಾರೆಂದು ಬೈವನು ನಮ್ಮಯ್ಯನು

ಇರಬೇಡ ಹೋಗು ಹೋಗೆನುತ

ಹೊರವಡಿಸಿದ ಎನ್ನ ಈ ವನಕೆ ಬಂದೆನು ಮರಳಿ

ಬಂದೆನ್ನ ಕರೆಯುವಿರಿ ೩೨೦

ತಾಯೆ ನೀ ಪತಿವ್ರತೆ ಈ ಮುನಿ ವೀರ್ಯವ

ತಾವರೆಕಮಲದೊಳಿಟ್ಟು

ನೀರೊಳು ಬಿಟ್ಟನು ನಿನ್ನ ಕೈಸೇರಿತು ಬಾಲ

ಹುಟ್ಟಿದ ಮೂಗಿನಿಂದ ೩೨೧

ತಪ್ಪಿಲ್ಲ ತಾಯೆ ನೀ ಕರ್ಪೂರಗಂಧಿನಿ

ಒಪ್ಪಿಕೊ ಈ ಮುನಿವರನ

ಋಷಿಗಳೆಲ್ಲರು ಕೂಡಿ ಸಕಲ ಸಂಭ್ರಮದಿಂದ ಇತ್ತರೆ

ಮುನಿಯ ಕೈಯೊಳಗೆ ೩೨೨

ಬಂದಪನಿಂದ್ಯವ ಹಿಂದುಗಳೆಯದೆ ತಂದೆತಾಯಿಗಳುಲ್ಲಂಘಿಸಿ

ಇಂದು ಈತನ ಒಡಗೂಡುವುದುಚಿತವೆ

ಧರೆಯೊಳು ಜನಕೆ ಸಮ್ಮತವೆ ೩೨೩

ಪರಿಹರಿಸಿಕೊಳ್ಳದೆ ಎನ್ನಪನಿಂದ್ಯವ

ಹಡೆದವರರಿಯದಂ[ದ]ದಲಿ

ಮರಳಿ ಈತನ ಒಡಗೂಡುವುದುಚಿತವೆ ಧರೆಯೊಳು

ಜನಕೆ ಸಮ್ಮತವೆ ೩೨೪

ಸತ್ಯವಾಡಿದಳು ಚಂದ್ರಾವತಿ ಎನುತಲೆ ಮತ್ತೆ

ಯೋಚಿಸಿ ತಮ್ಮ ಮನದಿ

ಹೆತ್ತವರರಿಕೇಲಿ ಮಾಡುವ ಮದುವೆಯ

ಕನ್ಯಾರ್ಥಿಗಳಾಗಿ ಹೋಗುವೆವು ೩೨೫

ತಾಯಿ ತಂದೆ[ಯ] ಕೇಳಿ ಬಾಹೆವು ನಾವ್ ಹೋಗಿ

ಬಾಲಕನೊಡಗೊಂಡು ಹೋಗು

ನಾರಿಯತ್ತ ಕಳುಹಿ ತಾವ್‍ಇತ್ತ ಬಂದರು

ಭೋರನಯೋಧ್ಯಾಪಟ್ಟಣಕೆ ೩೨೬

ಬಿಗಿದು ಕಟ್ಟಿದ ಜಡೆ ಕೈಲಿ ಕೃಷ್ಣಾಜಿನ

ಮೃಡನಂತೆ ಮೈಗೆ ಶ್ರೀಗಂಧ

ಗಡಿ ಮಿತಿಯಿಲ್ಲದೆ ಬಂದರು ಮುನಿಗಳು

ಒಡನೆ ಅಯೋಧ್ಯಾಪಟ್ಟಣಕೆ ೩೨೭

ಬತ್ತಿಗಟ್ಟಿದ ಜಡೆ ಬಾಡಿದ ನಯನವು ಎತ್ತಿದ

ಊಧ್ರ್ವ ಬಾಹುಗಳು

ಕೃಷ್ಣಾಜಿನವನು ಕರದಿ ಪಿಡಿದು ಮುನಿಶ್ರೇಷ್ಠರೆಲ್ಲರು

ನಡೆತರಲು ೩೨೮

ಎತ್ತಲಿಂದಲೆ ಬಂದಿತೀಋಷಿಗಳ ಸ್ತೋಮ

ನೃಪೋತ್ತಮ ನಿಮ್ಮ ಪಟ್ಟಣಕೆ

ಮುತ್ತಿಗೆ ಹಾಕುವಂದದಿ ಬಂದು ನಿಂದವೆ ಮತ್ತೇನು

ಇದಕೆ ಉಪಾಯ ೩೨೯

ಮುನಿಗಳ ಕಾಣುತ ಮುಂದಕ್ಕೆ ಬಂದನು ಚರಣದ

ಮೇಲೆ ಎರಗಿದನು

ಒಡಗೊಂಡು ಬಂದು ಗದ್ದುಗೆ ಮೇಲೆ ಕುಳ್ಳಿರಿಸಿ ಮಡದಿ

ಸಹವಾಗಿ ಪೂಜಿಸಿದ ೩೩೦

ದಾರಿತಪ್ಪಿ ದಯವಿಟ್ಟು ಬಂದಿರಿ ಎನ್ನ ಗೃಹವು

ಪಾವನವಾಯಿತೆಂದು

ಷೋಡಶೋಪಚಾರವ ಮಾಡಿದ ರಾಯನು ಬಹಳ

ಪರಿಯಿಂದಲೊಂದಿಸಿದ ೩೩೧

ಬೇಡ ಬಂದೆವು ನಿನ್ನ ಮಗಳ ಉದ್ದಾಳಿಕಗೆ

ಮಾಡದೆ ಎರಡು ಮನಸನು

ಕಾಲತೊಳೆದು ಕನ್ಯಾದಾನವ ಮಾಡಿದರೆ ಮೇಲೆ

ಬಹುದು ಪುಣ್ಯ ನಿನಗೆ ೩೩೨

ಕನ್ಯಾರ್ಥಿಯಾಗಿ ಬಂದೆವು ನಿನ್ನ ಮಗಳಿಗೆ

ಚೆನ್ನಾಗಿ ನೋಡು ಈವರನ

ಮನ್ನಿಸಿ ಕಾಲತೊಳೆದು ಧಾರೆಯೆರೆದರೆ

ನಿನ್ನ ಸುಕೃತಕೆಣೆಯುಂಟೆ ೩೩೩

ಹೆಣ್ಣೆಂಬೊ ಮಾತಿಗೆ ಮನದಲ್ಲಿ ನೊಂದನು

ಕಣ್ಣಲ್ಲಿ ಜಲವ ತುಂಬಿದನು

ಹೊನ್ನು ಹಣವು ಬೇಡಿದೊಸ್ತುವ ಕೊಡುವೆನು

ಕನ್ನಿಕಿಲ್ಲೆನ್ನ ಮನೆಯಲಿ ೩೩೪

ಹಣಹೊನ್ನು ನಮ್ಮಗೇಕೆ ಅಡವಿಯಲಿರ್ಪೆವು

ಕೊಡು ನಿನ್ನ ಮಗಳ ಶೀಘ್ರದಲಿ

ಸಿಡಿಮಿಡಿಗೊಂಡರೆ ಬಿಡುವೋರು ನಾವಲ್ಲ ತಡೆಯದೆ

ಕೊಡು ನಿನ್ನ ಮಗಳ ೩೩೫

ಹಿಂದಕ್ಕೆ ಕನ್ನಿಕಿದ್ದಳು ಎನ್ನ ಮನೆಯಲ್ಲಿ ಕೊಂದು

ಬಂದೆನು ಅಡವಿಯಲಿ

ಇಂದುಶೇಖರನಾಣೆ ಇಟ್ಟುಕೊಂಡಿದ್ದರೆ ಎಂದು

ಚರಣವನೆ ಮುಟ್ಟಿದನು ೩೩೬

ಮಗಳ ತೋರಿಸಿದರೆ ಕೊಡುವದು ಸತ್ಯವೆ

ಬಡಮುನಿಯೆಂದು ಯೋಚಿಸದೆ

ನುಡಿನಿನ್ನ ಮನದ ಸಂಕಲ್ಪವನೆಂದಿನ್ನು

ಒಡಂಬಡಿಸಿದರು ಭೂಪತಿಯ ೩೩೭

ಅರಣ್ಯದಲಿ ಕೊಂದು ಬಂದ ಕುಮಾರಿಯ

ತೋರುವದಗಣಿತಾಶ್ಚರ್ಯ

ಧಾರೆಯನೆರೆದು ಕೊಡುವೆ ಈ ಕ್ಷಣದಲಿ

ದೇವಾಬ್ರಾಹ್ಮರು ಮೆಚ್ಚುವಂತೆ ೩೩೮

ಮರೆತು ಮಲಗಿದ್ದಾಗ ಸುರರಡ್ಡ ಸುಳಿದರೊ

ಸುರರೊ ನರರೊ ಕಿನ್ನರರೊ

ಅರಿಯದೆ ಕಳುಹಿದೆ ಅಜ್ಞಾನತನದಲಿ

ಹಿರಿಯರಿಲ್ಲವೆ ನಿನ್ನ ಮನೆಯ ೩೩೯

ಪುತ್ರಿಯ ಕೊಲುವರೆ ಕ್ಷತ್ರಿಯ ಮತದಲಿ ಹತ್ಯಾ

ಮಾಡುವರೆ ಸ್ತ್ರೀಯರನು

ಅತ್ಯಂತ ಬಲ್ಲ ಮಂತ್ರಿಗಳಿಲ್ಲ್ಲ ನಿನ್ನಲ್ಲಿ

ತತ್ತ್ವಭೋಧನೆಯ ಮಾಡುವರೆ ೩೪೦

ಕೊರಳ ಕೊಯ್ಯೆಂದು ನೀ ಕಳುಹಿದೆ ಮಗಳನು

ಉಳುಹೆ ಹೋದರು ಅಡವಿಯಲಿ

ಸಮಿಧೆಗೋಸ್ಕರ ಇತ್ತ ಬಂದು ನಾಕಂಡೆನು

ಕರೆದೊಯ್ದೆ ಎನ್ನ ಆಶ್ರಮಕೆ ೩೪೧

ನಾರಿಗೆ ನವಮಾಸ ತುಂಬಲು ಆಕ್ಷಣ ಮೇಲೆ

ಬಂದಿತು ಪ್ರಸವ ಕಾಲ

ನಾಲ್ಕು ವೇದಗಳನು ಸ್ವರದಿಂದಲಳುತಲೆ ಬಾಲ

ಹುಟ್ಟಿದ ಮೂಗಿನಿಂದ ೩೪೨

ಕಾರಣಿಕದ ಶಿಶುವೆಂದು ನಾವರಿತೆವು ನೀರನೆರೆದು ಸಲಹಿದೆವು

ಬೇರೊಂದು ಪರ್ಣಶಾಲೆಯಲಿ ಇಟ್ಟಿದ್ದೆವು ನಾರಿ

ತಾನರ್ಧರಾತ್ರೆಯಲಿ ೩೪೩

ಬಾಲಸಹಿತ ಚಂದ್ರಾವತಿಯಿಲ್ಲವೆನುತಲೆ

ಚಾಲುವರಿದೆವು ಮನದೊಳಗೆ

ನೀರೊಳು ಕಂದ ಬಂದನೆ ಸೂರ್ಯೋದಯಕ್ಕೆ

ಸ್ನಾನವ ಮಾಡುತಿದ್ದೆಡೆಗೆ ೩೪೪

ತಂದೇಳುವರುಷ ಪರಿಯಂತರ ಸಲಹಿದ

ಇಂದು ಸತಿಯ ಕಂಡನೀತ

ಒಂದಾಯಿತಿದಕೇನು ಮನದ ಸಂಶಯಗಳು

ಬಂದಳು ನಿನ್ನ ಕುಮಾರಿ ೩೪೫

ಮುನಿಗಳ ಮಾತನೆಲ್ಲವ ಕೇಳಿ ರಾಯನು

ಮನದಲ್ಲಿ ಸಂತೋಷ ತಾಳಿ

ತನುಜೆಯ ಕರೆದೊಯ್ದ ದೂತರೆಲ್ಲರ ಕರೆಸಿ

ಅನುನಯದಿಂದ ಕೇಳಿದನು ೩೪೬

ಹಿಂದಕೆ ಸಿಟ್ಟಿನಿಂದಲೆ ಕೋಮಲಾಂಗಿಯ

ಕೊಂದು ಬಾರೆಂದು ಅಟ್ಟಿದೆನು

ಇಂದು ಪ್ರಸ್ತಾಪ ಬಂದರೆ ನಿಮ್ಮ ಕರೆಸಿದೆ

ಸಂದೇಹವಿಲ್ಲದುಸುರೆಂದ ೩೪೭

ಜೀಯ ಹಸಾದ ನಿಮ್ಮಪ್ಪಣೆ ಪ್ರಕಾರ ಒಯ್ದೆವು ಬಾಯಾರುತಲೆ

ನ್ಯಾಯವೊ ಅನ್ಯಾಯವೊ ಎನುತಲಿ ತಂಗಿ

ಒಡಗೊಂಡು ತೆರಳಿದೆವು ೩೪೮

ತಳಿಲ ಹಾಸಿಗೆ ಮೇಲೆ ಮಲಗಿಸಲಾಕೆಗೆ ಘಳಿಲನೆ

ನಿದ್ರೆ ಬಂದೊದಗೆ

 

ಹೆಳವನಕಟ್ಟೆಯ ರಂಗನಾಥದೇವರ ಉತ್ಸವ

೨೩

ಹೊನ್ನ ತಾ ಗುಬ್ಬಿ ಹೊನ್ನ ತಾ

ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ.

ಆಗಮವನು ತಂದು ಅಜಗಿತ್ತ ಕೈಗೆ

ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ

ತೂಗಿ ನಡೆವ ಸ್ಥೂಲಕಾಯನ ಕೈಗೆ

ನಾಗಶಯನ ನರಸಿಂಹನ ಕೈಗೆ ೧

ಬಲಿಯ ದಾನವ ಬೇಡಿ ಬಂದಂಥ ಕೈಗೆ

ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ

ಕಲಿ ವಿಭೀಷಣಗಭಯವಿತ್ತಂಥ ಕೈಗೆ

ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ ೨

ಪತಿವ್ರತೆಯರ ವ್ರತವಳಿದಂಥ ಕೈಗೆ

ಹಿತವಾಜಿಯನೇರಿ ದುರುಳಮರ್ದನ ಕೈಗೆ

ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ

ಚತುರ ಹೆಳವನಕಟ್ಟೆ ರಂಗನ ಕೈಗೆ ೩

 

೨೪

* ಹ್ಯಾಂಗಿರಲಿನ್ನು ರಂಗನ ಬಿಟ್ಟಿನ್ನಹ್ಯಾಗಿರಲಿಂನು

ಮಂಗಳಾತ್ಮಜ ಹೆಳವನಕಟ್ಟೆರಂಗನ ಬಿಟ್ಟು ಹ್ಯಾಂಗಿರಲಿಂನು ಪ.

ಸಿರಿಮನೋಹಾರಿ ಶರಣರಿಗಂತ:ಕರಣವ ತೋರಿ

ತ್ವರಿತದಿದಿವ್ಯರಥಗಳನ್ನು ನೀಡಿ

ಪರಮಾ ಸಂಭ್ರಮದಿಂದಾಯಿರುವೋನ

ಮರದು ನಾ ಹ್ಯಾಂಗಿರಲಿನ್ನೂ ೧

ಗಿರಿಮನಿ ಮಾಡಿ ಶರಣಗರಿತ:ಕರುಣವ ನೀಡಿ

ಸರಸದಿ ಮನೋರಥಗಳ ತೋರಿ

ಪರಮಾ ಸಂಭ್ರಮದಿಂದಾ ಇರುವನ

ಮರದು ನಾ ಹ್ಯಾಂಗಿರಲಿನ್ನೂ ೨

ಶರಣು ಪೊಕ್ಕಿರುವಾ ಗಿರಿಯಮ್ಮಗಾ

ತುರದಿ ವಲಿದಿರುವ ಸರಕಿರಿಗೆಜ್ಜೆ

ಧರಿಸಿ ಕುಣಿದಿರುವ ಸಿರಿನಾರಸಿಂಹನ

ಚರಣವಾ ಮರೆದು ನಾ ಹ್ಯಾಂಗಿರಲಿನ್ನೂ ೩

 

ಇಂಥಾವಗ್ಹ್ಯಾಂಗೆ ಮನಸೋತೆ ಬಲು

ಭಗವಂತನ ಸಂಕೀರ್ತನೆ

ಇಂಥಾವಗ್ಹ್ಯಾಂಗೆ ಮನಸೋತೆ ಬಲು

ಪಂಥವಾಡಿದ ಜಗನ್ಮಾತೆ ಪ.

ಆವಾಗ ನಾರುವ ಮೈಯ್ಯ ಬಿಚ್ಚಿ

ತೋರಿ ನಲಿಯುವ ಕಾಲು ಕೈಯ್ಯ

ಕೋರೆಯ ಮಸೆಯುತ ಕೊಸರಿಕೊಂಡಸುರನ

ಕರುಳನು ಬಗೆದಂಥ ಅದ್ಭುತ ಮಹಿಮಗೆ ೧

ಬಡಬ್ರಾಹ್ಮಣನಾಗಿ ತಿರಿದ ತನ್ನ

ಹಡೆದ ತಾಯಿಯ ಶಿರವರಿದ

ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ

ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ ೨

ಬತ್ತಲೆ ನಿಂತಿದ್ದನೀಗ ತೇಜಿ

ಹತ್ತಿ ಮೆರೆವದೊಂದು ಯೋಗ

ಉತ್ತಮ ಹೆಳವನಕಟ್ಟೆ ಶ್ರೀರಂಗ

ಭಕ್ತವತ್ಸಲ ಸ್ವಾಮಿ ದೇವಕೃಪಾಂಗ ೩

 

ಹಾಡಿನ ಹೆಸರು :ಇಂಥಾವಗ್ಹ್ಯಾಂಗೆ ಮನಸೋತೆ ಬಲು

ಹಾಡಿದವರ ಹೆಸರು :ಪುತ್ತೂರು ನರಸಿಂಹ ನಾಯಕ್

ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ

ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ

ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ ಪ.

ಕಂಡೆನೀಗ ರಂಗಾಥನ ಭೂ-

ಮಂಡಲದೊಳುದ್ದಂಡ ಮೂರುತಿ

ಹಿಂಡು ದೈತ್ಯರ ತಂಡ ತಂಡದಿ

ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ.

ಕಾಮಪಿತನ ಕೌಸ್ತುಭ ಹಾರನ ಕಸ್ತೂರಿ

ನಾಮವ ನೇಮದಿಂದ ಧರಿಸಿದಾತನ

ವಾಮಭಾಗಲಕ್ಷ್ಮಿ ಸಹಿತ ಹೇಮ ಮಂಟಪದೊಳಗೆ ಕುಳಿತು

ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ ೧

ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು

ಸರಸಿಯೊಳು ಕರಿಯ ಸಲಹಿದೆ

ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ

ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ೨

ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ

ಹಿಂದು ಮಾಡಿ ಮುಂದೆ ಸಲಹಯ್ಯ

ತಂದೆ ಅಡಿಯ ಹೊಂದಿದೆನು ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ ೩

 

ಹಾಡಿನ ಹೆಸರು :ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ

ಹಾಡಿದವರ ಹೆಸರು :ಶ್ರುತಿ ಭಟ್

ಸಂಗೀತ ನಿರ್ದೇಶಕರು :ವಿನಾಯಕ ತೊರವಿ

ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ

೨೯

ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಪ.

ಮೂರು ಲೋಕ ಸಂಚಾರ ಕರುಣಾಸಾಗರ

ತೇಜಿಯನೇರಿ ಮೆರೆವನ ಅ.ಪ.

ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ

ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ

ಎನ್ನ ಪ್ರೇಮನ ೧

ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ

ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ ೨

ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ

ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ ೩

 

ಹಾಡಿನ ಹೆಸರು : ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ

ಹಾಡಿದವರ ಹೆಸರು :ಜಯಶ್ರೀ ಎಂ. ಕೆ.

ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ

ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮನದ ಚಿಂತೆಯ ಬಿಡಿಸೊ ಮಾಧವ ಮುಕುಂದ

೪೪

ಮನದ ಚಿಂತೆಯಬಿಡಿಸೊ ಮಾಧವ ಮುಕುಂದ ಹರಿ

ದನುಜಾರಿದಯಾವಾರಿಧಿ

ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ

ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ.

ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ)

ಹರಿಗೆ ಒಪ್ಪಿಸು ಎನಲು

(ಮೊರೆದು) ಕೋಪದಲಿ ದಶಕಂಠ ತನ್ನನುಜನ

ಊರ ಹೊರಗೋಡಿಸಿರಲು

ಭರದಿಂದ ಬಂದು ಮರೆಹೊಗಲು ವಿಭೀಷಣನು

ಚರಣಕಮಲಕೆ ಎರಗಲು

ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ

ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ ೧

ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ

ನಡುಸಭೆಯೊಳು ನಿಲ್ಲಿಸಲು

ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ

ದುಡುಕುತಿರಲಾಕ್ಷಣದಲಿ

ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ-

ದೊದರುತಿರಲು

ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು

ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ ೨

ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ

ಮತ್ತ ತೊಡೆಯೇರಿಇರಲು

ನಿತ್ಯದಲಿ ಸುರುಚಿ ಸುನೀತಿ ಕುಮಾರಕನ

ಎತ್ತಿ ಕಡೆಯಕ್ಕೆ ನೂಕಲು

ಪ್ರತ್ಯಕ್ಷವಾಗಿ ಪಾಲಿಸಿ ಧ್ರುವಗೆ ಪದವಿಯ –

ನಿತ್ತ ವಿಚಾರವಿಲ್ಲದಂತೆ

ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ

ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ ೩

 

ಹಾಡಿನ ಹೆಸರು :ಮನದ ಚಿಂತೆಯ ಬಿಡಿಸೊ ಮಾಧವ ಮುಕುಂದ

ಹಾಡಿದವರ ಹೆಸರು :ಅರ್ಚನಾ ಕುಲಕರ್ಣಿ

ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ

ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮಳೆಯ ದಯಮಾಡೊ ರಂಗಯ್ಯ ನಿಮ್ಮ

೫೩

ಮಳೆಯ ದಯಮಾಡೊ ರಂಗಯ್ಯ ನಿಮ್ಮ

ಕರುಣ ತಪ್ಪಿದರೆ ಉಳಿಯದೀ ಲೋಕ ಪ.

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ

ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು

ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು

ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ೧

ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ

ಮೊಗೆ ಮೊಗೆದು ಪಾತ್ರೆಯಲಿ ನಾರಿಯರು

ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ

ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ೨

ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ

ಬಂದಿದೆ ಭಾದ್ರಪದ ಮಾಸವೀಗ

ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ

ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ೩

ಹಾಡಿನ ಹೆಸರು :ಮಳೆಯ ದಯಮಾಡೊ ರಂಗಯ್ಯ ನಿಮ್ಮ

ಹಾಡಿದವರ ಹೆಸರು :ರಮಾ ಪಿ, ಚಂದ್ರಿಕಾ ಆರ್.

ರಾಗ :ಕೃಷ್ಣಮಣಿ

ತಾಳ :ಆದಿ ತಾಳ

ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.

ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ

೪೮

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ

ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ.

ಧನದಾಸೆಯನು ಮರಿ ಮನುಮಥನ

ಬಾಣಕಳುಕದಿರು ತೊಳಲದಿರು

ನೆಲದಾಸೆಗೆ ನೀನದರ

ಅನುವರಿತು ಹರಿಯ ಸ್ಮರಿಸು ಮನವೆ ೧

ಅನ್ಯರಾಗುಣ ದೋಷಯಣಿಸದಲೆ

ನಿನ್ನಿರವ ನೋಡು ಕಂಡ್ಯಾ ಮನವೆ

ಬಂಣಗಾರಿಕೆಯು ಬರಿದೆ ಔದಂಬ್ರ-

ಹಣ್ಣಿನಂತೀ ಕಾಯವು ಮನವೆ ೨

ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ

ಭ್ರಮೆಗೊಂಡು ಬಳಲಾದಿರೋ

ಕಮಲಪತ್ರಕ್ಕೆ ಒಳಗಿನ ಜಲದಂತೆ

ನೆಲಕೆ ನಿರ್ಲೇಪನಾಗೋ ಮನವೆ ೩

ಈ ದೇಹ ಸ್ಥಿರವಲ್ಲವೊ ಕಾಲನಾ

ಬಾಧೆಗೋಳಗಾಗದಿರೋ ಮನವೆ

ಭೇದ ದುರ್ಗುಣವ ತ್ಯಜಿಸು ನೀ

ಗೇರುಬೀಜದಂದದಿ ತಿಳಿಯೊ ಮನವೆ ೪

ಮಾಡು ಹರಿಸೇವೆಯನ್ನು ಮನದಣಿಯೆ

ಬೇಡು ಹರಿಭಕ್ತಿಯನ್ನು

ಕೂಡು ಹೆಳವನಕಟ್ಟೆಯ ವೆಂಕಟನ

ಬೇಡಿ ಮುಕ್ತಿಯನು ಪಡೆಯೊ ಮನವೆ ೫

 

ಹಾಡಿನ ಹೆಸರು :ಯಾಕೆ ಮರುಳಾದೆ ಹೀಂಗೆ ಎಲೆ ಮನವೆ

ಹಾಡಿದವರ ಹೆಸರು :ನಾಗಮಣಿ ಎಸ್., ಚಂದ್ರಿಕ ಆರ್.

ರಾಗ :ಸರಸಾಂಗಿ

ತಾಳ :ಆದಿ ತಾಳ

ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.

ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹೊನ್ನ ತಾ ಗುಬ್ಬಿ ಹೊನ್ನ ತಾ

೨೩

ಹೊನ್ನ ತಾ ಗುಬ್ಬಿ ಹೊನ್ನ ತಾ

ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ.

ಆಗಮವನು ತಂದು ಅಜಗಿತ್ತ ಕೈಗೆ

ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ

ತೂಗಿ ನಡೆವ ಸ್ಥೂಲಕಾಯನ ಕೈಗೆ

ನಾಗಶಯನ ನರಸಿಂಹನ ಕೈಗೆ ೧

ಬಲಿಯ ದಾನವ ಬೇಡಿ ಬಂದಂಥ ಕೈಗೆ

ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ

ಕಲಿ ವಿಭೀಷಣಗಭಯವಿತ್ತಂಥ ಕೈಗೆ

ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ ೨

ಪತಿವ್ರತೆಯರ ವ್ರತವಳಿದಂಥ ಕೈಗೆ

ಹಿತವಾಜಿಯನೇರಿ ದುರುಳಮರ್ದನ ಕೈಗೆ

ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ

ಚತುರ ಹೆಳವನಕಟ್ಟೆ ರಂಗನ ಕೈಗೆ ೩

 

ಹಾಡಿನ ಹೆಸರು :ಹೊನ್ನ ತಾ ಗುಬ್ಬಿ ಹೊನ್ನ ತಾ

ಹಾಡಿದವರ ಹೆಸರು :ಚಂದನ ಬಾಲಾ, ನಂದಿನಿ

ರಾಗ :ಮಧುಕೌಂಸ್

ತಾಳ :ರೂಪಕ ತಾಳ

ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.

ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Pages: 1 2


೨೫

ಆಡುತ್ತಾ ಬಾರಮ್ಮಾ

ನಲಿದಾಡತ್ತಾ ಬಾರಂಮಾ ಆಡುತ್ತವರಗಳಾ ನೀಡುತ್ತಾ ಕರುಣಾದಿ

ನೋಡುತ್ತಾ ದಯದಿಂದಾ

ಲಕ್ಷ್ಮಿ ಆಡುತ್ತಾಬಾರಮ್ಮಾ ಪ.

ಬೇಸರವು ಬೇಡಮ್ಮಾ ದಾಸರ ದಾಸಿಯು ನಾನಿಂವು

ವಾಸನಪೂರಿತೆ ವನರೂಹ ನೇತ್ರೆ

ಸಾಸಿರನಾಮದ ವಾಸುದೇವನ

ಸತಿ ಆಡುತ್ತಾಬಾರಮ್ಮಾ ನಲಿದಾಡುತ್ತಾ ಬಾರಮ್ಮಾ ೧

ಕರದಾರವೊಯೆಂದು ತಾಯೆಯಂನಾ

ಮೊರೆಯಲಾಲಿಸೆ ನೀ ಬಂದು

ದುರಿತಗಳಾನೆಲ್ಲಾ ಪರಿಹರಿಸುವ ನಿಂಮ

ಕರುಣಾಮೃತವನು ಸ್ಮರಿಸುವೆ ಅನುದಿನ ಆಡುತ್ತಾ ಬಾರಮ್ಮಾ೨

ಧರಣಿಯೊಳುನ್ನತವಾದ ಹೆಳವನಾಕಟ್ಟೆ

ಗಿರಿಯೊಳು ನೆಲಸಿದ

ಪರಮ ಪವಿತ್ರಳ ಕರುಣಾ ಸಿಂಧುವೆ

ವರವನು ಕೊಡುತ್ತಾ ಬೇಗಾದಿಂದಲಿ ಆಡುತ್ತಾ ಬಾರಮ್ಮಾ೩

 

ಪೊಡವಿಭಾರವ ಪೊತ್ತು

೪೭

*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ.

ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ

ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು

ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ

ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ ೧

ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ

ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ

ಹದಿನಾಲ್ಕು ಲೋಕನಾಳುವವನ ಹೊತ್ತು

ಇರುವವಗಾಯಿತು ಮನೆಯು ಮರದ ಮೇಲೆ ೨

ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು

ರಾವಣನ ಗರ್ವಮುರಿದು ಬಂದೂ

ರೋಮರೋಮಕೆ ಕೋಟಿಲಿಂಗಧರಿಸಿದ

ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ ೩

ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು

ಸಾರುತಿದೆ ವೇದ ಸಟೆಯಲ್ಲವಿದು

ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ

ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ ೪

ಮೀರಲಳವಲ್ಲಾ ಮುನ್ನಿನಾ ಕರ್ಮವನು

ಕಾರಣಕರ್ತನಿಗಲ್ಲದೆ

ಮಾರಪಿತ ಹೆಳವನಾಕಟ್ಟೆರಂಗೈಯ್ಯನ

ಸೇರದ ಕಾಲವ್ಯರ್ಥವ್ಯಾದಿತೈಯ್ಯಾ ೫

 

(೧) ಮತ್ಸ್ಯ

ಭಗವಂತನ ಸಂಕೀರ್ತನೆ

ಇಂಥಾವಗ್ಹ್ಯಾಂಗೆ ಮನಸೋತೆ ಬಲು

ಪಂಥವಾಡಿದ ಜಗನ್ಮಾತೆ ಪ.

ಆವಾಗ ನಾರುವ ಮೈಯ್ಯ ಬಿಚ್ಚಿ

ತೋರಿ ನಲಿಯುವ ಕಾಲು ಕೈಯ್ಯ

ಕೋರೆಯ ಮಸೆಯುತ ಕೊಸರಿಕೊಂಡಸುರನ

ಕರುಳನು ಬಗೆದಂಥ ಅದ್ಭುತ ಮಹಿಮಗೆ ೧

ಬಡಬ್ರಾಹ್ಮಣನಾಗಿ ತಿರಿದ ತನ್ನ

ಹಡೆದ ತಾಯಿಯ ಶಿರವರಿದ

ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ

ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ ೨

ಬತ್ತಲೆ ನಿಂತಿದ್ದನೀಗ ತೇಜಿ

ಹತ್ತಿ ಮೆರೆವದೊಂದು ಯೋಗ

ಉತ್ತಮ ಹೆಳವನಕಟ್ಟೆ ಶ್ರೀರಂಗ

ಭಕ್ತವತ್ಸಲ ಸ್ವಾಮಿ ದೇವಕೃಪಾಂಗ ೩

 

ಇಂದು ನೀ ಕರೆದು ತಾರೆ ಬೇಗನೆ ಪೋಗಿ

ಚನ್ನವೆಂಕಟರಾಯನ

ಮೊನ್ನೆ ಆಡಿದ ಮಾತು ಒಂದೂ ನಿಜವಲ್ಲಾ

ರನ್ನೆ ಈಗಲೆಪೋಗಿ ಸ್ಸ್ಸ್ಸ್ಸ್ಸ್ಸನ್ನೆ ಮಾಡಿಬಾರೆ ಪ.

ಅಂಗಜನಯ್ಯನ ಕಾಣದೆ ನಾನು ಹಿಂಗಿರಲಾರೆ ನಮ್ಮಾ

ಕಂಬುಕುಚದ ಬಾಲೆ

ರಂಗನಾ ಕರತಾರೆ

ರಂಗು ಮಾಣಿಕದಹರಳುಂಗುರ ಕೊಡುವೆನು ೧

ಕಾಲಿಗೆ ಎರಗುವೆನೆ

ಕೋಮಲಮುಖಿ ಆಲಸ್ಯ ಮಾಡದೆಲೆ

ನೀಲಕುಂತಳನೀರೆ | ಲೋಲನ ಕರತಾರೆ

ವಾಲೆಮೂಗುತಿ ಕಂಠಮಾಲೆಯ ಕೊಡುವೆನು ೨

ಮರದಿರಲಾರೆನಮ್ಮಾ

ಬೇಗನೆಪೋಗಿ ನೆರವಂತೆ ಮಾಡು ನೀನು

ಯರವುತನವುಬ್ಯಾಡಾಮರೆಯಲಾರೆನೆ ನಿಮ್ಮಕರವಪಿಡಿವೆ ಹೆಳವನ ಕಟ್ಟೆರಂಗೈಯ್ಯನ ೩

 

ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು

೨೬

ಈತ ಅಂಜನೆಸುತನು ಭೀಮರಾಯನು ಪ.

ಈತ ರಾಮರ ಬಂಟನು

ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು

ಈತ ಲೋಕ ಪ್ರಖ್ಯಾತನು ಭೀಮರಾಯನು ಅ.ಪ.

ಪುಟ್ಟಿದಾಗಲೆ ಗಗನಮಂಡಲವನ್ನು ಮುಟ್ಟಿ ರವಿಯನು ತುಡುಕಿ

ಇಟ್ಟ ಕೈಪ ಕುಂಡಲವನ್ನು ತೊಟ್ಟು ಮೆರೆವಂಥ ದಿಟ್ಟ

ಹನುಮರಾಯನು ೧

ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯ

ವಂಚನಿಲ್ಲದೆ ಮಾಡಿದ

ಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳ

ವನವ ಕಿತ್ತನು ಭೀಮರಾಯನು ೨

ಲಂಕಿಣಿಯನೆ ತುಡುಕಿ ಮಾಯಾಜಾಲವ ಶಂಕೆಯಿಲ್ಲದೆ ಗೆಲಿದ

ಲಂಕಾಪಟ್ಟಣವ ಸುಟ್ಟು ರಾವಣೇಶ್ವರನ ಅಹಂಕಾರವಳಿದ ಧೀರ

ಭೀಮರಾಯನು ೩

ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತ

ವೀರರ ಗೆಲಿದ

ಪಂಥದಿ ಸಂಜೀವನವ ತಂದು ಲಕ್ಷ್ಮಣನ ಅಂತರವಳಿದ

ಶೂರನು ಭೀಮರಾಯನು ೪

ಲೆಕ್ಕವಿಲ್ಲದೆ ಖಳರ ಗೆಲಿದು ಬಂದು ಕೊಕ್ಕನೂರೊಳುನಿಂತನು

ರಕ್ಕಸಾಂತಕ ಹೆಳವನಕಟ್ಟೆ ರಂಗಯ್ಯನ ಅಕ್ಕರುಳ್ಳತಿದಾಸನು

ಭೀಮರಾಯನು ೫

 

ಹರಿಹರರಿಬ್ಬರನ್ನು ಸಮಭಾವದಿಂದ ಸ್ತುತಿಸಿದ

೫೧

ಈತ ರಂಗನಾದ ಹರಿಯು

ಆತ ಲಿಂಗನಾದ ಹರನು ಪ.

ಗಿರಿಜಾಪತಿಯಾದನಾತ

ಗಿರಿಯ ಬೆನ್ನಲಿ ತಾಳಿದನೀತ

ಸ್ಮರನ ಮಡುಹಿದಾತನಾತ

ಸ್ಮರನ ಜನಕನಾದನೀತ ೧

ಶೇಷಭೂಷಣನಾದನಾತ

ಶೇಷಶಾಯಿಯಾದನೀತ

ಪೋಷಿಪ ಭಕ್ತರನಾತ

ದೋಷದೂರನಾದನೀತ ೨

ಕಂಗಳು ಮೂರುಳ್ಳವನಾತ

ಮಂಗಳ ದೇವೇಶನೀತ

ತುಂಗ ಹೆಳವನಕಟ್ಟೆ

ರಂಗನೀತ ಲಿಂಗನಾತ ೩

 

ವ್ಯಾಧನಾಗಿ ಒಲಿದ ನೀತ

೫೨

ಈತ ಲಿಂಗದೇವ ಶಿವನು

ಆತ ರಂಗಧಾಮ ವಿಷ್ಣು

ಮಾತ ಕೇಳೊ ಮಂಕು ಮನುಜ

ಮನದ ಅಹಂಕಾರ ಬಿಟ್ಟು ಪ.

ವೇದಕ್ಕೆ ಸಿಕ್ಕಿದನೀತ

ವೇದನಾಲ್ಕು ತಂದನಾತ

ಬೂದಿ ಮೈಯೊಳು ಧರಿಸಿದನೀತ

ಪೋದಗಿರಿಯ ಪೊತ್ತನಾತ ೧

ವ್ಯಾಧನಾಗಿ ಒಲಿದನೀತ

ಮಾಧವ ಮಧುಸೂದನನಾತ

ಮದನನ್ನ ಉರಿಹಿದನೀತ

ಮದನನಪಡೆದಾತನಾತ ೨

ಗಂಗೆಯ ಪೊತ್ತವನೀತ

ಗಂಗೆ ಪದದಿ ಪಡೆದನಾತ

ತುಂಗ ಹೆಳವನಕಟ್ಟೆ

ಲಿಂಗ ಅಂತರಂಗ ರಂಗನಾಥ ೩

 

ಗಂಗಾಜನಕ : (ನು ೧)

೩೩

ಎಂದು ಕಾಹು(ಣು?)ವೆ ಎನ್ನ ಮನೋಹರ

ಎಂದಿ[ಗೆಕಾ] ಹುದಿನ್ನೆಂದಿಗೆ

ಬಂದೆ ಭವಭವಭವವೀ ದುಃಖದಿ

ನೊಂದೆನೊ ರಂಗನಂಘ್ರಿ ಚರಣವ ಪ.

ಮಂಗಳಾಂಗನ ಮಾಧವನ ಕೋಟಿ

ಅಂಗಜಜನಕವಿಲಾಸನ

ಗಂಗಾಜನಕನ ಗರುಡವಾಹನ

ತುಂಗವಿಕ್ರಮನಂಘ್ರಿ ಚರಣವ ೧

ಕಂತುಜನಕನ ಕಮಲನಾಭನ

ಸಂತತದ ಸರ್ವೇಶನ

ಯಂತ್ರವಾಹಕ ಎನ್ನ ಒಡೆಯನ

ಚಿಂತಾಯ[ಕ]ನ ಶ್ರೀ ಚೆಲುವಚರಣವ ೨

ಪರಮಪುರುಷನ ಪುಣ್ಯನಾಮನ

ಶರಣುಜನಸರ್ವೇಶನ

ಕರುಣಿ ಹೆಳವನಕಟ್ಟೆರಂಗನ

ಚರಣ[ವ]———- ೩

 

ದಶಾವತಾರದ ವಿವರಗಳು

ಏನ ಹೇಳಲಿ ಈತನಿರವ ಭಕ್ತರ ಮನಾ-

ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ.

ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ

ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ

ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ-

ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ

ಜಲವಪೊಕ್ಕು ದೈತ್ಯನ ಸಂಹರಿಸಿ

ಕಲಕಿ ಸಮುದ್ರವ ಕಾರಣಕಾಗಿ

ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ

ಚಲುವ ಚೆಳ್ಳುಗುರಿಂದೊಡಲನೆ ಬಗಿದು

ಸುಲಭನಾಗಿ ಶುಕ್ರನ ಕಣ್ಣಿರಿದು

ಬಲುಸಾಹಸದಿ ಕ್ಷತ್ರಿಯರನು ಗೆಲಿದು

ಶಿಲೆಯನೊದ್ದು ನಿಜಸತಿಯಳ ಮಾಡಿ

ಗೆಲವ ತೋರಿ ಗೋಪಿಗೆ ಸುತನಾಗಿ

ನಿಲುವ ದಿಗಂಬರಧರ ರಾವುತನಾಗಿ

ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ ೧

ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ

ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ

ವಲ್ಲಭನವರಗೆಲುವ ಲಜ್ಜೆನಾಚಿಕೆ-

ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ

ಎಲ್ಲ ವೇದವನುದ್ಧರಿಸ್ಯಂಬುದಿಯ

ಜಲ್ಲಿಸಿ ಧಾರುಣಿಯನು ತಂದಿರುಹಿ

ತಲ್ಲಣಿಸುವ ಪ್ರಹಲ್ಲಾದನ ಪೊರೆದು

ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ

ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ

ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ

ಮಲ್ಲರ ಮಡುಹಿ ಮುಪ್ಪುರದ ಬಾಲೆಯರ

ಜಳ್ಳು ಮಾಡಿ ಧರ್ಮವ ಹೋಗ್ಯಾಡಿ

ಹಲ್ಲಣಿಸುವ ತೇಜಿಯನೇರಿದ ಶಿರಿ

ವಲ್ಲಭ ಈತ ವಾಸುದೇವ ಕಾಣೆ ಅಮ್ಮಯ್ಯ ೨

ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ-

ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ

ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ

ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ

ತಮನ ಮರ್ದಿಸಿ ಸಾಮವನಜಗಿತ್ತು

ಸುಮನಸರಿಗೆ ಸುಧೆಯನು ತಂದೆರದು

ಅವನಿಗಳೆದ ಅಸುರನ ಸಂಹರಿಸಿ

ಮಮತೆಯಿಂದ ಪುಟ್ಟ ಮಗುವನೆ ಸಲಹಿ

ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ

ಸಮರಂಗದಿ ಸುರಧೇನುವ ತಂದು

ದಿನಕರ ವಂಶೋದ್ಧಾರಕನಾಗಿ ಕಂಸ-

ನ ಮಡುಹಿ ಮುಪ್ಪುರದ ಬಾಲೆಯರು

ಭ್ರಮಿಸುವಂತೆ ಬೌದ್ಧಾವತಾರನಾದ

ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ ೩

 

ಏನ ಹೇಳಲಿ ಕೃಷ್ಣನಗುಣವ

ನೋಡೆ ಸಖಿಯೆ ಪ.

ಜಾರತನದಿ ಶೀರೆಯ ಶಳಕೊಂಡು

ಮಾರನಾಟಕೆ ಎನ್ನ ಮರುಳು ಮಾಡಿದನಮ್ಮ ೧

ಚಂಡು ತಾರೆನುತಲಿ ದುಂಡು ಕುಚವಪಿಡಿದು

ಕಂಡು ಕಂಡಲ್ಲಿ ಎನ್ನ ಬಹು ಭಂಡು ಮಾಡುತಲಿಹನಮ್ಮ ೨

ತಂದೆ ಹೆಳವನಕಟ್ಟೆ ರಂಗನ ಕೃಪೆಯಿರಲು

ಬಂದ ದುರಿತಗಳು ನಂದಿ ಪೋಗುವವು ೩

 

೩೪

ಏನಿದು ಬಯಲ ಪಾಶ ನೋಡಿದರಿಲ್ಲಿ

ಏನು ಹುರುಡುಗಾಣೆನೊ

ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ

ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ.

ನೀರಬೊಬ್ಬುಳಿಯಂದದ ದೇಹವ ನೆಚ್ಚಿ

ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ-

ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ

ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತು

ಸದ್ಗತಿ ತೋರೊ ೧

ಬಡವರಾಧಾರಿ ಕೇಳೊ ಸಂಸಾರದ

ಮಡುವಿನೊಳಗೆ ಧುಮುಕಿ

ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ

ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ ೨

ಸುತ್ತೆಲ್ಲ ಬಂಧು ಬಳಗ ನವಮಾಸದಿ

ಹೊತ್ತು ಪಡೆದ ಜನನಿ

ಪುತ್ರ ಸಹೋದರರ ಘಳಿಗ್ಯಗಲಲಾರದೆ

ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ ೩

ಆಸೆಯೆಂಬುದು ಬಿಡದು ಈ ಭುವನದೊಳ್

ಲೇಸುಗಾಣೆನು ಹರಿಯೆ

ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ

ಈಶಸನ್ನುತ ಹೆಳವನಕಟ್ಟೆರಂಗಯ್ಯ ೪

 

ಕೌಸ್ತುಭಹಾರ (ನುಡಿ-೧)

ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ ಪ.

ಕಂಡೆನೀಗ ರಂಗಾಥನ ಭೂ-

ಮಂಡಲದೊಳುದ್ದಂಡ ಮೂರುತಿ

ಹಿಂಡು ದೈತ್ಯರ ತಂಡ ತಂಡದಿ

ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ.

ಕಾಮಪಿತನ ಕೌಸ್ತುಭ ಹಾರನ ಕಸ್ತೂರಿ

ನಾಮವ ನೇಮದಿಂದ ಧರಿಸಿದಾತನ

ವಾಮಭಾಗಲಕ್ಷ್ಮಿ ಸಹಿತ ಹೇಮ ಮಂಟಪದೊಳಗೆ ಕುಳಿತು

ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ ೧

ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು

ಸರಸಿಯೊಳು ಕರಿಯ ಸಲಹಿದೆ

ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ

ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ೨

ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ

ಹಿಂದು ಮಾಡಿ ಮುಂದೆ ಸಲಹಯ್ಯ

ತಂದೆ ಅಡಿಯ ಹೊಂದಿದೆನು ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ ೩

 

ಅಜಾಮಿಳನ ಉದ್ದರಿಸಿದೆ

೩೫

ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ

ಬಡವರ ಬಂಧು ಬಹುಕೃಪಾಸಿಂಧು

ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ.

ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ

ಅತಿಪಾತಕಿ ಅಜಾಮಿಳನ ಉದ್ಧರಿಸಿದೆ

ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ ೧

ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ

ಬಳಲಿಸಬ್ಯಾಡವೊ ಭಕ್ತಕುಟುಂಬಿ

ನಳಿನದಳಾಂಬಕ ನೀ ಸಲಹೆನ್ನನು ೨

ಸಾರಿ ಹೇಳುವೆ ಎನ್ನ ಬಳಗದ ಅರಭಾರವು ನಿನ್ನದು

ಹೇರೊಪ್ಪಿಸಿದ ಮೇಲ್ಯಾತರ ಸುಂಕವು

ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ ೩

 

ಕರೆದಳು ತನ್ನ ಮಗನ ಯಶೋದೆ

ಕರೆದಳು ತನ್ನ ಮಗನ ಪ.

ಪರಮಪುರುಷ ಹರಿ ಶರಣರ ಸುರತರು

ತುರು ತುರುಯೆಂಬ ಕೊಳಲನೂದುತ ಬಾರೆಂದು ಅ.ಪ.

ಅಂದುಗೆ ಕಿರುಗೆಜ್ಜೆ ಘಲುಘಲುಕೆನುತಲಿ

ಚಂದದಿ ಕುಣಿವ ಮುಕುಂದನೆ ಬಾರೆಂದು ೧

ಹೊನ್ನುಂಗುರುಡಿದಾರ ರನ್ನ ಕಾಂಚಿಯದಾಮ

ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು ೨

ಸಾಮಗಾನವಿಲೋಲ ಜಾಲವ ಮಾಡದೆ

ಸ್ವಾಮಿ ಹೆಳವನಕಟ್ಟೆ ರಂಗ ನೀ ಬಾರೆಂದು ೩

 

ತರುಳ ಕರಿಯಲು

೩೬

ಕಾಯೊ ಕರುಣಾಕರನೆ ನೀಯನ್ನಾ

ಕಾಯೋ ಆನಾಥರಕ್ಷಕ ದಯಾಸಿಂಧೂ ಪ.

ಕಾಯೊಯನ್ನನು ಕರವಿಡಿದು ಕೃಪೆಯಿಂದ ನೀಯನ್ನಾ

ಕಾಯೊದೇವರದೇವ ಶ್ರೀ ವೆಂಕಟೇಶ್ವರನೆ ಕಾಯೊ ಅ.ಪ.

ನೀನಲ್ಲದೆ ಅನ್ಯತ್ರ ತಾಯಿ ತಂದೆಗಳಿಲ್ಲಾ

ನೀನಲ್ಲದೆ ಬಂಧುಬಳಗವೆನಗಿಲ್ಲಾ ನೀ

ಯನ್ನ ಕಾಯೊ ಶ್ರೀ ವೆಂಕಟೇಶ್ವರನೆ ೧

ತರುಳ ಕರಿಯಲು ಕಂಭದಿ ಬಂದು

ಹಿರಣ್ಯಾಕ್ಷಕನ ಕರುಳ ತೆಗದು ವನಮಾಲೆ ಹಾಕಿ ನಿಂದೀ

ನರಮೃಗರೂಪಿನಲಿ ಪ್ರಹ್ಲಾದಗೆ

ವರವಿತ್ತೆ ನೀಯನ್ನ ಕಾಯೊ ಶ್ರೀ ವೆಂಕಟೇಶ್ವರನೆ ೨

ಜಲದೊಳಗೆ ನೆಗಳೆಯು ಹಿಡಿದು

ಎಳೆಯುತ್ತಿರೆ ಬಹುಬಾಧೆಬಡಿಸೆ ನಿಮ್ಮ ನೆನೆಯಲು

ನಿಲ್ಲದೆ ಬಂದೊದಗಿನೆಗಳೆಯನು

ಶೀಳ್ದು ಕರಿರಾಜಗೊಲಿದು ರಕ್ಷಿಸಿದೊ ಶ್ರೀ ವೆಂಕಟೇಶ್ವರನೆ ೩

ದುರುಳದುಶ್ಯಾಸ ದ್ರೌಪತಿ ಸೀರೆಯನು ಸೆಳೆಯೆ

ಹರಿಣಾಕ್ಷಿ ಸಭೆಯೊಳಗೆ ಕೃಷ್ಣಾಯೆಂದುವದರೆ

ಪರಿಪರಿ ವಸ್ತ್ರವನು ಕೊಟ್ಟೆ ಅಭಿಮಾನವನು ಕಾಯ್ದೊ

ದೇವರದೇವ ಶ್ರೀ ವೆಂಕಟೇಶ್ವರನೆ ೪

ಶಂಖಚಕ್ರಧರ ನಿನ್ನ ಚರಣವನು ನಂಬಿದೆ

ಪಕ್ಷಿವಾಹನಸ್ವಾಮಿ ಕರುಣಾನಿಧೆ

ಹೆಳವನಕಟ್ಟೆಯೊಳು ನಿಂದು

ಭಕ್ತರನ್ನೆಲ್ಲಾ ಕಾಯ್ದ ದೇವರದೇವ ಶ್ರೀ ವೆಂಕಟೇಶ್ವರನೆ ೫

 

ಉದ್ದಾಳಿಕನ ಕಥೆ

ಕಿರುಡೊಳ್ಳಿಗೆ ಉರಗನ ಸುತ್ತಿದಾತನೆ ಮೆರೆವ

ಪಾಶಾಂಕುಶ ಧರನೆ

ಗಿರಿಜೆಯ ವರಪುತ್ರ ಕರಿಮುಖಗೊಂದಿ[ಪೆ] ಧೃಢವಾಗಿ

ಕರಿಣಿಸೊ ಮತಿಯ ೧

ವಾಣಿ ಬ್ರಹ್ಮನ ರಾಣಿ ವೀಣೆ ಪುಸ್ತಕಪಾಣಿ

ಮಾನಿನಿಕುಲಕೆ ಕಟ್ಟಾಣಿ

ಮಾಣದೆ ಭಕ್ತರ ಪೊರೆವ ಶೃಂಗೇರಿಯ ಶಾರದೆ

ಕರುಣಿಸೆ ಮತಿಯ೨

ಮಂಗಳಾಂಗನೆ ಮಲ್ಲಸುರರ ಮರ್ದಿಸಿದನೆ ಗಂಗೆ [ಮೌಳಿ]

ಮನೋಹರನೆ

ಹಿಂಗದೆ ಭಕ್ತರ ಪೊರೆವ ನೀಲಾಬ್ಧಿಯ ಲಿಂಗ ಕರುಣಿಸು

ನಿಜಮತಿಯ ೩

ಭೂಮಿ ಅಂಬರ ರವಿ ತಾರೆ ಚಂದ್ರಾವಳಿ

ಮೇಲಾದಷ್ಟದಿಕ್ಪಾಲಕರು

ಸಾಧು ಸಜ್ಜನ ಗುರುಹಿರಿಯರಿಗೊಂದಿಸಿ ಹೇಳುವೆ ಈ

ಪುಣ್ಯಕಥೆಯ ೪

ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ

ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ೫

ಭೂವಳಿಯೊಳಗೆ ಉತ್ತಮನೆಂಬೂ ಭೂಸುರ

ವೇದವೇದಾಂತ ಪಾರಗನು

ಸಾಧು ಸಜ್ಜನ ಸತಿಯರ ಕುಲರತ್ನವು ಅನುಕೂಲ್ಯಾತನ

ಧರ್ಮ ಪತ್ನಿ ೬

ಸತಿ ಪುರುಷರು ಸಂತೋಷದಲಿರುತಿರೆ

ಸುತಜನಿಸಿದ ಉದ್ದಾಳಿಕ

ಅತಿ ಹರುಷದಿ ಜಾತಕರ್ಮ ನಾಮಕರಣ ಸುತಗೆ

ಮಾಡಿದ ಕ್ರಮದಿಂದ ೭

ಅನ್ನಪ್ರಾಶನ, ಚೌಲಕರ್ಮಂಗಳ ಮಾಡಿ ಚಿಣ್ಣಗೆ

ಮೌಂಜಿಯ ಕಟ್ಟಿ

ಬ್ರಹ್ಮಚರ್ಯಾಶ್ರಮ ನಡೆಸಿ ತಾಯಿ ತಂದೆ ಮುನ್ನೆ

ನಡೆದರು ಪರಗತಿಗೆ ೮

ಗುರುಕುಲವಾಸವ ಮಾಡಿ ಉದ್ದಾಳಿಕ ಕಲಿತನೆ

ನಾಲ್ಕು ವೇದಗಳ

ಅಜ ಹರಹರಿಯ ಮೆಚ್ಚಿಸುವೆ [ಎಂ]ದೆನುತಲೆ

ಘನತಪವನಕಾಗಿ ನಡೆದ ೯

ಮಿಂದು ಮಡಿಯನ್ನುಟ್ಟು ಸಂದೇಹವ ಬಿಟ್ಟು

ನಿಂದು ಬೆಳಗುವ ಜ್ಯೋತಿಯಂತೆ

ಒಂದೇಮನದಲಿ ಮಾಡಿದ ತಪವನು [ವರುಷ]

ಸಂದವರುವತ್ತು ಸಾವಿರವು ೧೦

ಧರೆಯೊಳಗುತ್ತಮ ಕೌಸಲ್ಯದೇಶದಿ ಆಯೋಧ್ಯವೆಂಬ

ಪಟ್ಟಣದಿ

ರಘುಕುಲದಲ್ಲಿ ಉತ್ಪನ್ನನು ರಘುರಾಮ ಸ್ಥಿರವಾಗಿ

ರಾಜ್ಯವಾಳುವನು ೧೧

ಎಲ್ಲೆಲ್ಲಿ ನೋಡಿದರು ಕೆರೆಬಾವಿ ದೇವಾಲಯ

ಕನ್ಯಾದಾನವು ಭೂದಾನ

ಅನ್ನಛತ್ರವು ಅರವಟ್ಟಿಗೆಯನಿಕ್ಕಿಸಿ ಮನ್ನಿಸಿ

ರಾಜ್ಯವಾಳುವನು ೧೨

ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು

ಸತ್ಯವಲ್ಲದೆ ಅಸತ್ಯವ ನುಡಿಯರು ಉತ್ತಮರಾ

ದೇಶದೊಳಗೆ ೧೩

ಧರ್ಮವಲ್ಲದೆ ಅನ್ಯಾಯವ ಮಾಡರು

ಪುಣ್ಯಸಾಧನರು ಸಜ್ಜನರು

ಉನ್ನಂತ ಹರಿಯ ಭಕ್ತಿಯಲಿ ಕೊಂಡಾಡುವ

ಧರ್ಮಗಳಾ ದೇಶದೊಳಗೆ ೧೪

ಕೊಡುವವರುಂಟು ಕೊಂಬವರಿಲ್ಲ ಧರೆಮೇಲೆ

ಬಡವರಿಲ್ಲಿ ಚಾರರುಂಟು

ಕಡುಧೀರರುಂಟು ಹಗೆಗಳಿಲ್ಲ ಪಿಸುಣರಗೊಡುವೆಯಿಲ್ಲಾ

ದೇಶದೊಳಗೆ ೧೫

ಸುತ್ತಣರಾಯರ ಗೆಲಿದು ಕಪ್ಪವಕೊಂಡು ಕ್ಷತ್ರಿಯ

ಧರ್ಮವ ನಡೆಸಿ

ಭಕ್ತಿಯಿಂದ ದೇವ ಬ್ರಾಹ್ಮರ ಮನ್ನಿಸುತಲೆ ಸತ್ಯದಿ

ರಾಜ್ಯವಾಳುವನು ೧೬

ಕೊಟ್ಟ ವಾಕ್ಯಂಗಳ ತಪ್ಪನು ಭೂಪಾಲ ಮಸ್ತಕ

ಮಕುಟವೆಂದೆನಿಸಿ

ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು೧೭

ಪಟ್ಟದರಸಿಯೊಳ್ ಕುಮಾರನು ಅಜಭೂಪ ಹುಟ್ಟಿ

ಸಂತೋಷದೋರಲು

ಚಿಪ್ಪಿನೊಳಗೆ ಮುತ್ತುಮಾಡುವ ತೆರನಂತೆ ಪುತ್ರಿ

ಹುಟ್ಟಿದಳ್ ಚಂದ್ರಾವತಿಯು ೧೮

ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು

ಪುಣ್ಯದ ಪುಂಜ ಪೂರ್ಣವಿತ್ತೆಯೆನಗೊಂದು ಹೆಣ್ಣು

ಮಾಣಿಕವೆ ಸಂತಾನ ೧೯

ಹೊಡೆ ಮಗ್ಗುಲಿಕ್ಕೋಳು ಇಡವಳಂಬೆಗಾಲ

ನಡೆಯೋಳು ದಟ್ಟಡಿಯಿಡುತ

ನುಡಿವೋಳು ತೊದಲ್ನುಡಿಯಲಿ ಅರಗಿಣಿಯಂತೆ

ಕಡುಲಾಲಿಕೆ ಬಾಲಲೀಲೆ ೨೦

ನಡೆದರೆ ದಿಟ್ಟ ತಾಕೀತೆಂದು ಕುಮಾರಿಗೆ ನುಡಿದರೆ

ಬಡವಾದಾಳೆಂದು

ಮುಡಿಯ ಭಾರಕೆ ಸೆಳೆನಡುವು ನೊಂದೀತೆಂದು

ಕಡುಹರುಷದಲಿ ಹಿಗ್ಗಿದರು ೨೧

ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ

ಉತ್ತಮವಾದ ನಾಟಕ ಕವಿಶಾಸ್ತ್ರವ

ಪುತ್ರಿಗಭ್ಯಾಸ ಮಾಡಿಸಿದ ೨೨

ಬಾಲತ್ವದಿಂದ ಕಳೆದವು ಕುಮಾರಿಗೆ ಮೇಲೆ

ಯೌವನವು ತೋರಿದವು

ನೀಲಮಾಣಿಕ ನವರತ್ನ ಮುತ್ತಡಚಿದ

ಆಲಯವನೆ ಕಟ್ಟಿಸಿದ ೨೩

ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ

ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ೨೪

ಇತ್ತ[ಲೀ] ರಾಯ ಸಂಪತ್ತಿನೊಳಿರುತಿರೆ ಅತ್ತ[ಲಾ]

ಮುನಿಕೌಶಿಕನು

ಪೃಥವಿಯನ್ನೆಲ್ಲಾ ಸುತ್ತಲು ಬಂದ[ನು] ಸಪ್ತದ್ವೀಪಗಳ

ನೋಡುತಲಿ ೨೫

ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ]

ಯಮ ಲೋಕವನು

ಬೆಕ್ಕಿನಬಾಯ ಮೂಷಕದಂತೆ ಮಿಡುಕು[ತ]ಲಿಪ್ಪ

ಜೀವಿಗಳ ತಾಕಂಡ ೨೬

ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ]

ಯಲ್ಲಿ ನಿಂತು ಮಾತಾಡಿ

ನಿಮಗೆ ಈ ಲೋಕ ಪ್ರಾಪ್ತಿಯಾಕೆ ಆಯಿತು

ತಿಳಿದು ಹೇಳುವುದು ಎನ್ನೊಡನೆ ೨೭

ಸುತರಿಲ್ಲದೆ ಸದ್ಗತಿಯಿಲ್ಲವೆನುತಲೆ ಶೃತಿ ಸಾರುತಿದೆ

ಜಗದೊಳಗೆ ಎಮಗೆ

ಸಂತತಿಯಿಲ್ಲ ಉತ್ತಮ ಗತಿಯ ಕಾಣಿಸುವೊರೆ

ಪತನಕ್ಕೆ ಬಿದ್ದೆವೆಂದೆನಲು ೨೮

ಪುತ್ರಪೌತ್ರರಿಲ್ಲವೆ ನಿಮ್ಮ ವಂಶದಿ ಉತ್ತಮಗತಿಯ

ಕಾಣಿಸುವ ದೌಹಿತ್ರರು

ಧರ್ಮ ಸಂತಾನಿಗಳಿಲ್ಲವೆ[ಎಂ]ದು ಮತ್ತಾಗ

ಮುನಿಯು ಕೇಳಿದನು ೨೯

ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ

ನಮ್ಮ ಸಂತತಿ ಉದ್ದಾಳಿಕನೊಬ್ಬನಿರುವನು ಮನ್ನಿಸಿ

ತಿಳಿದು ಹೇಳುವುದು ೩೦

ಉತ್ತಮಳಾಗಿರ್ಪ ಸತಿಯನೊಳಗೊಂಡು

ಪುತ್ರಸಂತಾನವ ಪಡೆದು

ಹೆತ್ತವರಿಗೆ ಸದ್ಗತಿಯ ಕಾಣಿಸುವುದೆಂದು

ವಿಸ್ತಾರವಾಗಿ ಹೇಳುವುದು ೩೧

ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ

ದೂರದಿಂದಲೆ ಕಂಡನು ಉದ್ದಾಳಿಕನ ಸಾರಿದನಾ

ತಪೋವನವ ೩೨

ಇದಿರೆದ್ದು ಉದ್ದಾಳಿಕನು ಕಂಡು ಮುನಿಪನ

ಕರವಿಡಿದು ಕರೆ ತಂದನಾಗ

ತೃಣದಾಸನವಿತ್ತು ಅತಿಥಿ ಪೂಜೆಯ ಮಾಡಿ

ಬರವೇನೆಂದು ಕೇಳಿದನು ೩೩

ಸತ್ಯಲೋಕ ತಪೋ ಲೋಕವ ಚರಿಸುತ್ತ ಹೊಕ್ಕೆನು

ಯಮ ಲೋಕವನು

ನಿಮ್ಹೆತ್ತ ತಾಯಿ ತಂದೆ ಪಿತೃಪಿತಾಮಹರು

ಅತ್ಯಂತ ನರಕಕೈದುವರು ೩೪

ಆಲಸ್ಯವಿಲ್ಲದೆ ಬೀಳ್ಪರು ಪತನಕ್ಕೆ

 

ಶಂಕರ ಗಂಡನ ಹಾಡು

ಗಿರಿಜೆಯ ವರಸುತ ಕರಿಮುಖಗೊಂದಿಸಿ

ಸರಸ್ವತಿಗಭಿವಂದಿಸುವೆ

ಪರಮದಯಾಳು ಹೆಳವನಕಟ್ಟೆರಂಗಯ್ಯ

ಒಡೆಯನು ಎನ್ನ ಮನದೊಡೆಯ ೧

ತಾನಾಗಿ ಶಿವ ಶಂಕರಗಂಡ ತಂಗಿಗೆ ವಿವಾಹಮಾಡೋ

ಸಂಭ್ರಮ[ದಾ]

ಭಾವ ಮೈದುನರ ಕಥೆಯ ನಾಪೇಳುವೆ ನೀವೆಲ್ಲ

ಕೇಳಿ ಸಜ್ಜನರು ೨

ದ್ವಾರಾವತಿಯ ಸೀಮೆಯಲ್ಲಿ ರಂಜಿಸುವೊ

ವಿಶಾಲ ವಿಲಾಸ ಪಟ್ಟಣದಿ

ನಾರಾಯಣ ಕುಮಾರ ಒಪ್ಪಿದನೊಂದು ಚಾರುಮಣಿ

ಖಚಿತ ಮಂದಿರದಿ ೩

ಚಂದ್ರಸೂರ್ಯರು ಎಡಬಲದಿ ಒಪ್ಪಿರಲು

ಮಂದಮಾರುತ ತಂಪೆಸೆಯೆ

ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು೪

ಗಿಳಿವಿಂಡು ನವಿಲು ಹಂಸವು ರಂಜಿಸುವಂಥ ನವಿಲ

ಮಯೂರ ಪಕ್ಷಿಗಳು

ಅಳಿಗಳು ಝೇಂಕರಿಸುತಲಿ ಹಾಡುತಲಿರೆ ನಳಿನ

ನಾಭನ ಓಲಗವು ೫

ಕೈಲಾಸಪುರದ ರಾಜ್ಯದೊಳಗೊಪ್ಪುವ

ನಿರ್ಭಯದಲಿನಲ್ಕಾವತಿಯು

ತ್ರೈಲೋಕ್ಯವಂದ್ಯ ಶಂಕರಗಂಡನಿಹ ಒಮ್ಮನದಿಂದನುಜೆಯ

ಪಾಲಿಸುತ್ತ ೬

ಅರಗಿಳಿಯಾಡಿಸುವಳು ಕೆಂಧೂಳಿಯಲಿ

ಮರಿಹಾವುಗಳ ನೆರೆಹುವಳು

ತರಳಾಕ್ಷಿತನ್ನ ಸಂಪತ್ತುಗಳೆಲ್ಲವ ಬಿಟ್ಟು

ಗೊಂಬೆಯಾಟವನೆ ಆಡುವಳು ೭

ಆಡೋಳು ಪಂಚ ಪಗಡಿ ಚಿನ್ನದಮಣೆಯೊಳು

ಕೂಡಿದ್ದ ಗೆಳತಿಯರ ಒಡನೆ

ಪಾಡೋಳು ಮರಿಕೋಗಿಲೆಯಂತೆ ತಂಗಿಯ

ನೋಡಿದ ನವಯೌವನೆಯನು ೮

ನಿತ್ಯ ನಿತ್ಯದಿ ಯೌವನವು ಹೆಗ್ಗಳಿಸಲು ಬಟ್ಟ

ಕುಚವು ತೋರಿದವು

ಮಿತ್ರೆ ತಂಗಿಗೆ ವರವದಾವುದೆನುತಲಿ

ಚಿತ್ತದೊಳಗೆ ಚಿಂತಿಸುತ್ತಿದ್ದ ೯

ಪುಷ್ಪಬಾಣನು ತಂಗಿಗೆ ತಕ್ಕ ವರನೆಂದು ಚದುರ

ಚೆನ್ನಿಗನು ಮನ್ಮಥನು

ತವಕದಿ ಬುದ್ಧಿವಂತರ ಕಳುಹಿಸಿ ನಾಳೆ

ಉದಯಕ್ಕೆ ಕರೆತನ್ನಿರೆಂದ ೧೦

ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ

ನಿಂದು ಕೈ ಮುಗಿದರು ಹೋ

ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು ೧೧

ಬಂದ ಬಿಡಾರವ ತಂಡ ತಂಡದಲಿಳಿಸಿ ವಂದಿಸಿ

ಮಾತಾಡಿ ನಗುತ ಭೂ

ಮಂಡಲದೊಳು ಕ್ಷೇಮವೆ ಎನುತ ಶಂಕರಗಂಡ

ಕೇಳಿದ ಮನ್ಮಥನ ೧೨

ನಿಮ್ಮ ಕಾರುಣ್ಯ ಕೃಪೆಯಿಂದ [ಸ್ತುತ್ಯ]ವು ನಮ್ಮ

ರಾಜ್ಯವು ಕ್ಷೇಮವೆನ್ನಲು

ಸನ್ಮಾನದಿಂದ ಉಪಾಚಾರ[ಮಾ]ಡುತ್ತ

ಬ್ರಹ್ಮಾನಂದದಲಿದ್ದ ಶಂಕರಗಂಡನು ೧೩

ರುಕ್ಷ್ಮಿಣೀ ತನುಜಗೆ ಎಮ್ಮನುಜೆಯ ಕೊಟ್ಟು

ವಿವಾಹ ಮಾಡಲಿಚ್ಛಿಸುವೆ

ಲಕ್ಷಣವಂತೆಯು ಕೈಪಿಡಿಯೆ ನಿಮ್ಮನಪೇಕ್ಷ್ಷಿಸಿದಳು

ಚಂದ್ರಮುಖಿಯು ೧೪

ತಂದು ಗದ್ದುಗೆಯ ಚಾವಡಿಯಲ್ಲಿ ಹಾ[ಕಲು]

ಸಂಭ್ರಮದಿಂದ ಕುಳಿತರು

ಹೊಂಬಣ್ಣದ್ಹರಿವಾಣದೊಳಗೆ ತಾಂಬೂಲವ

ತಂದಿಡುವರು ಮನ್ಮಥಗೆ ೧೫

ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು

ಮಂಗಳ ಮೃದು ವಾಕ್ಯವನ್ನು ಪ್ರ

ಸಂಗ ಮಾಡುವನು ಶಂಕರಗಂಡ ನಿಮ್ಮ

ತಂಗಿಯನೆನಗೀಹುದೆಂದ ೧೬

ಬಲ್ಲಿದರು ನೀವು ಬಹು ಪರಾಕ್ರಮಿಗಳು

ಮಲ್ಲಿಗಿಸರ ಕಬ್ಬು ಬಿಲ್ಲು

ಸಲ್ಲದು ನಿಮ್ಮೊಳು ಸಲಿಗಿ ನಮಗೆಂದು ಬಲ್ಲ

ಹಿರಿಯರು ಹೇಳುವರು ೧೭

ಸರ್ವ ಲಕ್ಷಣವುಳ್ಳ ಸರಸಿಜನೇತ್ರೆಯು

ಒಬ್ಬಳೇ ರತಿ ನಮ್ಮ ತಂಗಿ

ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ ೧೮

ನಡೆದರೆ ಬಡವಾಹಳು ನಮ್ಮ ತಂಗಿಯು

ಕಡುಮೋಹದಿಂದ ಸಾಕಿದೆನು

ಬಡಿವಾರ ನಿಮ್ಮೊಳು ಭರವಸೆ ನಮಗೇನು

ಕೊಡಲಾರೆ ತಂಗಿಯನೆಂದ ೧೯

ಅನುಮಾನ ಮಾಡುವುದೇಕೊ ನೀ ಇಷ್ಟೊಂದು

ಅವಳಿಗೆ ಸ್ವತಂತ್ರವಿಲ್ಲೇನು

ನೆನೆದಾಗ [ಕಳುಹುವೆ ನಿಮ್ಮ ಮನೆಗೆಂದು] ಮನಸಿಜ

ನುಡಿದ ದೈನ್ಯದಲಿ ೨೦

ಹಾಗಾದರಾಗಲಿ ಎನುತ ರಾಶಿಕೂಟ

ಭಾಗ್ಯದಿಂದಲಿ ನೋಡಿದರು

ಭಾಗೀರಥಿ ಮದನ ರತಿದೇವಿಗೆ ಆಗಲೆ

ನೇಮವನೆ ಮಾಡಿದರು ೨೧

ನಲ್ಕಾವತಿಯ ಶೃಂಗಾರ ಮಾಡಿದರು ದಿನಕರ

ಪ್ರತಿಬಿಂಬ[ದಂದ]ದಲಿ

ಕನಕ ತೋರಣಗಳನ್ನು ಕಟ್ಟಿ ತಾ ಕರೆಸಿದ

ಎಣಿಕೆಯಿಲ್ಲದ ಬಂಧು ಜನರ ೨೨

ಬಲ್ಲಿದ ಶುಭಲಗ್ನವ ನೋಡಿ ಬುಧಜನರು

ಎಲ್ಲರು ನೆರೆದು ಸಂಭ್ರಮದಿ

ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು ೨೩

ಸೆಳೆಮಂಚ ಸುಪ್ಪತ್ತಿಗೆ ಸುವರ್ಣದ ತಳಿಗೆ

ಬಟ್ಟಲು ಗಿಂಡಿಗಳನ್ನು

ಬಳುವಳಿ ಮಾಡಿದ ಸ್ತುತಿಸುವೊ ಎಳೆದೇರ

ಬಳುವಳಿ ತಂಗಿಗೆ ಇತ್ತ ೨೪

ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ

ಲೇಸಾದ ಊರು ಉಂಬಳಿಯ ಕೊಟ್ಟುರತಿಯ

ವಿಲಾಸಪಟ್ಟಣಕೆ ಕಳಿಸಿದ ೨೫

ಮನ್ಮಥ ರತಿದೇವಿ ವಿಲಾಸ ಪಟ್ಟಣದೊಳು ಉನ್ನಂತ

ದಿನ ಬಾಳುತಿರಲು

ಇನ್ನೊಮ್ಮೆ ನೋಡಬೇಕೆನುತ ಶಂಕರ ಗಂಡ ತನ್ನೊಳು

ತಾನೇ ಯೋಚಿಸಿದ ೨೬

ಬಿಗಿದು ಸುತ್ತಿದ ದೊಡ್ಡ[ಚೆಂ]ಡಿಯ ಬೆನ್ನಿಗೆ

ಬಿಗಿದ ನಾಡಗಂಬಳಿಯ

ಹೆಗಲ ಮೇಲಿನ ಬಾರಿಕೋಲು ಮನ್ಮಥರಾಯ

ನಗುವಂತೆ ಮಾಡಿ ರೂಪವನು ೨೭

ಹೆಗ್ಗಾಲು ಮರೆಯ ಮೆಟ್ಟಿದ್ದ ಕೈಯಲ್ಲಿ ದೊಡ್ಡ

ಕುಡಗೋಲು ಕವಣೆಯ ಪಿಡಿದು

ಶೀಘ್ರದಿ ತೆರಳಿ ಅಂಗಜನಹಂಕಾರವ ನಿಗ್ರಹ

ಮಾಡುವೆನೆನುತ ೨೮

ನೋಡೆಲೆ ರತಿ ನಿನ್ನ ಒಡಹುಟ್ಟಿದಣ್ಣನು

ರೂಢಿಯೊಳಗೆ ಅತಿಚೆಲುವ

ಗಂಡು ಕೆರವ ಮೆಟ್ಟಿ ಗಮಕದಿಬರತಾನ ನೋಡೆಂದು

ಸತಿಗೆ ತೋರಿದನು ೨೯

ಬಡವನಲ್ಲವೋ ಆತ ಬಹು ಪರಾಕ್ರಮಿ

ಒಡಹುಟ್ಟಿದಣ್ಣ ತಾ ಮುನಿಯೆ

ಕೆಡುವುದೋ ನಮ್ಮ ಐಶ್ವರ್ಯ ಆತನಗೊಡವೆ

ನಮಗೆ ಬೇಡವೆಂದ್ಲು ೩೦

ಕಾಂತೆಯ ಮಾತನು ಕೇಳಿ ಅಂಗಜನು ದಾವ

ಕಾರಣವ ಹೇಳದಂತೆ ದಿನಕರ

ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು೩೧

ತಲೆಯೆತ್ತಿ ನೋಡಲಿಲ್ಲವು ಆತನ ಕೂಡೆ

ಗೆಲುವಿನಿಂದ ಮಾತಾಡಲಿಲ್ಲ

ಎಲೆ ಕಾಮದೇವ ಎನ್ನನುಜೆಯ ಕಳಿಸೆಂದು

ಜುಲ್ಮಿಂದ ತಾನೆ ಕೇಳಿದನು ೩೨

ಹೂವಿನ ಮಂಚ ಪಂಚಭಕ್ಷ್ಯ ಪರಮಾನ್ನವುದಾವಾಗ

ನಮ್ಮನೆಯಲಿ

ಉಣ್ಣಲಾರಳು ಜೋಳದನ್ನವ ನಮ್ಮಾಕೆ

ನಾವೀಗ ಕಳಿಸುವೋರಲ್ಲ ೩೩

ಲಕ್ಷ್ಮಿದೇವಿ ಭಾರತಿದೇವಿ ಗೌರಿಯರು

ತೌರುಮನೆಯ ಹಾರೈಸುವರು

ನಮ್ಮ ಮನೆಯಲ್ಲಿದ್ದ ಅಂಬಲಿಯನ್ನೇ

ಉಂಡು ಸಂಭ್ರಮದಿಂದ ಬಾಹೋಳೆಂದ ೩೪

ಸಿರಿ ಮುಡಿಯ ಮೇಲೆ ಹುಲ್ಲು ಹೊರಿಸುವೆನು

ಕರುವ ಕಾಯಿ ನಮ್ಮ ಮನೆಯ

ಅರಿವೆ ಉಡಿಸಿ ಮೂರು ಬೊಗಸೆ ಅಂಬಲಿಯನ್ನು

ಮರೆಯದೆ ಹೊಯ್ಸುವೆಂನೆಂದ ೩೫

ಬಹಳ ಮಾತಾಡೋದು ಯಾಕೋ ನೀ ಇಷ್ಟೊಂದು

ಜೋಳವ ಕೊಂಡು ಹೋಗೆನಲು

ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು

ಮಾಡುವೆನೊಂದು ಗಳಿಗೆಯಲಿ ೩೬

ಸಮರ್ಥ ನೀ ಹೌದು ಸಲಹುವ ಜೋಳವ

ಗಮಕದಿಂದಲಿ ಬೆಳೆವೆನೆಂದು

ಅಮೃತದ ಕಲಶವ ತಂಗಿ ಕೈಯೊಳಗಿಟ್ಟು

ಚಮತ್ಕಾರದಿಂದ ಮಾಯವಾದ ೩೭

ಹೊಟ್ಟೆ ಹಸಿದಿತು ಭೋಜನ ಮಾಡುವೆನೆಂದರೆ

ಅಟ್ಟ ಅಡಿಗೆ ಮನೆಂಇ

 

ತಾರಮ್ಮ ಶ್ರೀ ರಂಗಧಾಮನ ತಂದು

ತೋರಮ್ಮ ಎನ್ನಯ ಪ್ರೇಮನ

ವಾರಿಜಸಖಶತಕೋಟಿತೇಜನ ಹೊಂತ-

ಕಾರಿಯ ನೀ ಕರತಾರೆ ಸೈರಿಸಲಾರೆ ಪ.

ವೃಂದಾವನದೊಳಗಾಡುವ ಶ್ರೀ-

ಗಂಧವ ಮೈಯೊಳು ತೀಡುವ

ಚಂದದಿ ಕೊಳಲೂದಿ ಪಾಡುವ ನಮ್ಮ

ಕಂದರ್ಪ ಜಲಕ್ರೀಡೆಯಾಡುವ

ನಂದ ನಂದನ ಗೋವಿಂದನ ಕಾಣದೆ

ಒಂದು ನಿಮಿಷ ಯುಗವಾಗಿ ತೋರುತಲಿದೆ ೧

ಉಡುವ ಸೀರೆಯ ಸೆಳೆದೋಡುವ ದೊಡ್ಡ

ಕಡಹದ ಮರವೇರಿ ನೋಡುವ

ಕೊಡಲೊಲ್ಲದೆ ಬಹುಕಾಡುವ ಲಜ್ಜೆ-

ಗೆಡಿಸಿ ಮಾನಿನಿಯರ ಕೂಡುವ

ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ-

ನ್ನೊಡೆಯನ ಕರತಾರೆ ಅಡಿಗೆರಗುವೆ ನಾ ೨

ನೀಲವರ್ಣನ ನಿಜರೂಪನ ಶ್ರೀ-

ಲೋಲ ಹೆಳವನಕಟ್ಟೆವಾಸನ

ಜಾಲಿ ಹಾಳ ವೆಂಕಟೇಶನ ಭಕ್ತ-

ಪಾಲಕ ಪರಮವಿಪೋಷನ

ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ

ಬಾಲೆ ನಿನಗೆ ಕಂಠಮಾಲೆಯ ಕೊಡುವೆ. ೩

 

ನೀರೊಳಗೆ ಮನೆ

ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ.

ನೀರೊಳು ಯಳವ ಮೋರೆಯ ನೆಳಲ ನೋಡುವಿ

ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ

ಖಳನ ಛೇದಿಸಿ ಕೊಳಲ ದನಿಯನು

ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ ೧

ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ

ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ

ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ

ನೀರೊಳಗೆ ಮನೆ ಭಾರ ಬೆನ್ನಲಿ ೨

ಕೋರೆದಾಡೆಯ ನಾರಸಿಂಹನೆ ಭೂರಿ ಬೇಡಿದಿ

ಧೀರ ಹರುಷದಿ ವಾರಿ ಬಂಧಿಸಿ ಮಾರ ಜನಕನೆ

ನಾರಿಯರ ವ್ರತಭಂಗ ಕುದುರೆಯನೇರಿ

ಮೆರಿವೆ ಕೋಮಲಾಂಗನೆ ೩

ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ

ಸಕಲನುಳಿಹಿದೆ ನೀನು ಭಕುತಿಯಿಂದಲಿ

ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ

ಅಖಿಳವೇದೋದ್ಧಾರ ಗಿರಿಧರ ೪

ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ

ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ

ರುಕುಮನನುಜೆಯ ರಮಣ ಬೌದ್ಧನೆ

ಲಕ್ಷುಮಿಯರಸನೆ ಕಲ್ಕಿ ರೂಪನೆ ೫

ನಿನ್ನ ರೂಪವಿದೆಲ್ಲಾ ನೋಡುವರಿಗೆ

ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು

ರಂನ್ನಘಾತಿದೆನಲ್ಲಾ ಕಂಣಮುಚ್ಚದೆ

ಬೆಂನ್ನ ತೋರುವೆ ಮಂಣ ಕೆÉದಿರದಿ ೬

ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ

ಹಂಣುಸವಿದನೆ ಬೆಂಣೆಗಳ್ಳನೆ

ಹೆಂಣುಗಳ ವ್ರತಗಳೆವ ಹೆಳವನಂದು

ಗೆಲಿಸಿದ ರಂಗ ದೇವೋತ್ತುಂಗನೆ ೭

 

ಪುಂಗನೂರಿನ ರಾಜಕುಮಾರನಿಗೆ ಕಣ್ಣು

ತೋರಬಾರದೆ ನಿಮ್ಮ ಚರಿತೆಯನು

ನರರೊಳು ನಗೆಗೀಡು ಮಾಡದ ಹಾಗೆ ಪ.

ಕಲ್ಲೊಳು ಕಾಂತೆಯ ಮಾಡಿದವನೆಂ-

ದೆಲ್ಲರು ಜಗದೊಳು ಪೇಳುವರು

ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ

ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ ೧

ಅಹಹ ಕುಬುಜೆಯಳ ತನುವನ್ನೆತ್ತಿ

ಮಹಿಯೊಳು ಯುವತಿಯ ಮಾಡಿದೆಯೆಂಬರು

ಬಹು ಪರಾಕ್ರಮವನ್ನು ಈಗ ತೋರಿಸಿದರೆ

ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ ೨

ನೀನೆ ಗತಿಯೆಂದು ಬಂದ ಭಕ್ತನ ಕ-

ಣ್ಣುನವ ತಿದ್ದಿ ನಿಜವ ತೋರಿಸಯ್ಯ

ದೀನದಯಾಳು ಹೆಳವನಕಟ್ಟೆ ರಂಗಯ್ಯ

ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ ೩

 

ಮುರಹರ (ನು-೨):

೩೭

ದಯಾಪೂರ್ಣ ಗುಣನಿಧಿಯೆ ದೀನರಕ್ಷಕನೆಂದು ಭಯದಿಂದ

ನಂಬಿದೆನೊ ರಂಗ

ಕೈವಿಡಿದು ಕಾಯದಿಹುದು ನಿನಗುಚಿತವೆ ಭಯರಹಿತ

ಗೋವಿಂದ ರಂಗ ಪ.

ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ

ಪ್ರಿಯದಿಂದ ಭಜಿಸುವರ ಭಕ್ತವತ್ಸಲ ಏಕೋದೇವ

ನೀನಾದ್ಯಯ್ಯ ರಂಗ ೧

ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ

ನಿಜವಾಗಿ ನೆನೆವರ ಹೃದಯಹೃತ್ಕಮಲ ಮನಸಿಜ ಜನಕ

ಮುರಹರನೆ ರಂಗ ೨

ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ

ಗಜರಾಜವರದ ಗಂಗಾಜನಕ ಸಲಹೆನ್ನ

ಭುಜಗೇಂದ್ರಶಯನ ಶ್ರೀರಂಗ ೩

ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ

ವಿಹಿತವೆ ನಿನಗೆ ನಡುನೀರೊಳಗೆ ಕೈಬಿಡುವುದು ಶ್ರೀಕಾಂತ

ಕಡೆಹಾಯಿಸೊ ರಂಗ ೪

ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ

ನೀ ಪರಂಜ್ಯೋತಿಮೂರುತಿಯೆಂದು ನಂಬಿದೆನು ಅಪಾರ

ಮಹಿಮ ಶ್ರೀರಂಗ ೫

ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ

ದ್ರೌಪದಿವರದ ಹೆಳವನಕಟ್ಟೆರಂಗಯ್ಯ ಲಕ್ಷ್ಮೀಪತಿ

ಸಲಹಯ್ಯ ರಂಗ ೬

 

ಪಾರಿಜಾತ

೪೯

ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದ

ಸಾರೆ ರುಕ್ಮಿಣಿಸಹಿತ ಆನಂದದಿಂದ

ವಾರಿಜಾಂಬಕ ವಾಲಗದೊಳು ಚಂದ

ನಾರಂದಮುನಿ ತಾ ಪಾರಿಜಾತವ ತಂದ ೧

ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ಪುಷ್ಪಯಾರಿಗೆ ಎಂದ

ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು ಬಲ್ಲದೆ ಇಂತೆಂದ

ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು ಕೇಳಿದಳಾಕೆ ನಿಂದು

ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು

ಮನದಲ್ಲಿ ಅತಿನೊಂದು ೧

ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು

ಮಂದಗಮನೆಯ ಮುಡಿಗೆ ತಾ ಮುಡಿಸಿದನು

ಎಂದು ಎನ್ನೊಳು ಎರವು ಇಲ್ಲವು ಕಾಣಿ

ಇಂದು ಮಾಡಿದ ಕುಹಕವ ಕೃಷ್ಣ ತಾನು ೨

ಪದ : ಹರಿಯು ಮಾಡಿದ ಮಾಟವನು ಕಂಡೆನು ನಾನು

ಇನ್ನಾರಿಗೆ ಪೇಳುವೆನು

ಪರಿಮಳದ ಪಾರಿಜಾತದ ಹೂವ ತಂದನು ಭಾಮೆ

ರುಕ್ಮಿಣಿ ತನ್ನ ಜೀವ

ಸರಿ ಬಂದ ಮಡದಿಗೆ ಮುಡಿಸಿದ ಶೃಂಗರಿಸಿದ

ಬಹುಪ್ರೀತಿ ಬಡಿಸಿದ

ಬರಿಯ ಮಾತಿನ ಬನ್ನಣೆಯಿಲ್ಲ ಸ್ನೇಹ ತನಗಲ್ಲಿ

ಠಕ್ಕುಠವಳಿಗಳಿಲ್ಲಿ ೨

ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ

ಹಚ್ಚಿರೆ ಮಾತ ಹರಿಯು ತಾ ಕೇಳಿದನೆ

ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ

ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ ೩

ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ

ತೋರಿಸೆ ಕೃಷ್ಣನ್ನ ಅಮ್ಮಯ್ಯ ಕೇಳು ದಮ್ಮಯ್ಯ

ಕಂತು ಕಮಲಜನಯ್ಯ

ಬಾರದಿದ್ದರೆ ಪ್ರಾಣ ಉಳಿಯದು ಮತ್ತೆ ಅಳಿವುದು

ಏನೆಂದು ತಿಳಿಯದು

ಸಾರಿದ ಸರಿಬಂದ ಸತಿಯ [ಳ] ಬಹುರತಿಯ[ಳ]

ಬಹು ಪ್ರೀತಿ ಇದ್ದವ[ಳ] ೩

ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ

ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ

ಗಿಳಿಇಲ್ಲದ ಗೂಡು ತಾನ್ಯಾತಕಮ್ಮ

ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ ೪

ಪದ :ಯಾಕೆನ್ನ ಬ್ರಹ್ಮ ಪುಟ್ಟಿಸಿದನೊ ಸೃಷ್ಟಿಸಿದನೊ

ಮಾತೆನ್ನ್ಯಾಕ ಪಡೆದಳೊ

ಸಾಕಿನ್ನು ಹೆಣ್ಣು ಜನ್ಮದ ಬಾಳು ಯಾತಕೆ ಹೇಳು

ತಾಕಲೆನ್ನಯ ಗೋಳು

ಕುಹಕ ಪೇಳ್ದು ನಾರದ ಸಿದ್ಧ ಎಂಬುದು ಬದ್ಧ

ಮೂರುಲೋಕ ಪ್ರಸಿದ್ಧ

ಶ್ರೀಕೃಷ್ಣಂಗೆ ಎನಗೆ ಭೇದವ ಮಾಡಿ ಹೋದನು

ಓಡಿ ತನಗ್ಯಾಕಿದು ಬ್ಯಾಡಿ ೪

ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು

ವಶವಾದನೆ ಒಲಿದು ರುಕ್ಮಿಣಿಗೆ ತಾನು

ಶಶಿಮುಖಿಯಳೆ ಸವತಿ ಅಟ್ಟುಳಿ ಇದೇನು

ಆಸೆಬಟ್ಟೆನೆ ಬಹಳ ವಸುದೇವ ಸುತಗೆ ೫

ಪದ : ಸಿಟ್ಟಿನಿಂದತಿ ಘುಡಘುಡಿಸುತ ಆರ್ಭಟಿಸುತ

ಎಲ್ಲರೊಡನೆ ಕೋಪಿಸುತ

ತೊಟ್ಟತೊಡಿಗೆ ಈಡಾಡುತ ಬಿಸಾಡುವ

ನನಗ್ಯಾಕಿದು ಎಂದು

ಪಟ್ಟೆ ಮಂಚದ ಮೇಲೆ ಒರುಗುತ ತಾ ಎರಗುತ

ಮನದೊಳು ಮರುಗುತ

ಇಷ್ಟು ಮಾಡುವುದಿದು ನೀತವೆ ಪ್ರಖ್ಯಾತವೆ

ಸುರಪಾರಿಜಾತವೆ ೫

ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ

ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ

ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ

ಜೀವದೊಲ್ಲಭೆಯೊಡನೆ ಪಂಥವು ಸಲ್ಲ ೬

ಪದ : ಮಂದಗಮನೆ ಮುನಿದಿಹಳೊ ಎನ್ನ ಪ್ರಿಯೆಳೊ

ಎನ್ನೊಡನೆ ನುಡಿಯಳೊ

ಇಂದು ಅಲ್ಲಿಗೆ ಹೋಗದಿದ್ದರೆ ಇಲ್ಲಿದ್ದರೆ

ಅಪ್ರಬುದ್ಧನಾದರೆ

ಕುಂದು ಎನ್ನ ಮ್ಯಾಲಿಡುವಳೋ ಸ್ನೇಹ ಬಿಡುವಳೊ

ಕೋಪವನು ತಾಳುವಳೊ ಇಂ

ತೆಂದು ನುಡಿದ ಮುಕುಂದ ನಿತ್ಯಾನಂದನು

ಬಾಗಿಲೊಳು ನಿಂದನು ೬

ಶ್ಲೋಕ :ಚಿತ್ತದೊಲ್ಲಭೆ ಚದುರೆ ಮೋಹನಾಕಾರೆ

ಮುತ್ತುರತ್ನವ ಮನೆಯೊಳಗೆಲ್ಲ ಬೀರಿ

ಎತ್ತ ಹೋದಳೊ ಎನ್ನ ಪ್ರಾಣದ ನಾರಿ

ಸತ್ಯಭಾಮೆಯ ಸುಳುಹು ಕಾಣೆನು ತೋರಿ ೭

ಪದ : ಕನ್ನಡಿ ಕದಪಿನ ಜಾಣೆಯ ಸುಪ್ರವೀಣೆಯ

ಕೋಕಿಲವಾಣಿಯ

ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು

ಹಾರೈಸಿ ನಿಂತವರು ಕಣ್ಣು

ಸನ್ನೆಯ ಮಾಡಿ ತೋರ್ವದು ನೋಡಿ ಮೆಲ್ಲಗೆ

ಮಾ[ತಾ]ಡಿ ೭

ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು

ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು

ಸೂಸು ಪರಿಮಳ[ದ] ಪಾರಿಜಾತದ ಹೂವ ಹಾ-

ರÉೈಸಿ ಕಂಗಳು ತೀರ[ವು] ನೋಡಿದಳು ಕಾಂತೆ ೮

ಪದ : ಕಂಡಳು ಕಾರುಣ್ಯಮೂರ್ತಿಯ ಸತ್ಕೀರ್ತಿಯ

ಫಲ್ಗುಣನ ಸಾರಥಿಯ

ಇಲ್ಲಿಗ್ಯಾತಕೆ ಬಂದೆ ಹೋಗೆಂದು ಅತ್ತ ಸಾಗೆಂದು

ಇದು ಏನು ಸೋಗೆಂದು

ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ

ಮುನಿಸ್ಯಾತಕೆನ್ನೊಡನೆ

ಕಂಡ ಕನಸು ಎಂದು ಭಾವಿಸೆ ಎನ್ನ ಜೀವಿಸೆ

ಅಪರಾಧವ ಕ್ಷಮಿಸೆ ೮

ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ

ಮಿಕ್ಕ ಸತಿಯರಿಗ್ಯಾತಕೆಂಬ ಭಾವ

ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ

ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ ೯

ಪದ : ಮಲಯಜಗಂಧಿ ಮರನ ತಂದು ನಿಲಿಸುವೆನಿಂದು

ಮನ್ನಿಸೆ ಕೃಪಾಸಿಂಧು

ಬಲರಾಮ ನಂದಗೋಪನಾಣೆ ತಪ್ಪೆನು ಕಾಣೆ

ಕೋಕಿಲಸ್ವರಗಾನೆ

ಛಲವ್ಯಾತಕೆಂದು ತಕ್ಕೈಸಿದ ಸಂತೈಸಿದ ತೊಡೆಯಲ್ಲಿ

ಕುಳ್ಳಿರಿಸಿದ

ಹೆಳವನಕಟ್ಟೆಯ ರಂಗನು ಕೃಪಾಂಗನು

ದೇವೋತ್ತುಂಗ ವಿಕ್ರಮನು ೯

 

೧೦

ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ

ಪರಿಪೂರ್ಣಕಳೆಯಿಂದ ಭಕುತರನು ಒಲಿಸಿ

ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ

ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ ೧

ಹತ್ತು ಅವತಾರದಲಿ ಇದಿರಾಂತವರ ಗೆಲಿದು

ಮತ್ತೆ ಪದವಿಯ ಕೊಟ್ಟುರಕ್ಷಿಸಿ ಕಾಯ್ದೆ

ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ

ತೆತ್ತೀಸಕೋಟಿ ದೇವರ್ಕಳನು ರಕ್ಷಿಸಿದೆ ೨

ಉದಯ ಮದ್ಯಾಹ್ನ ಸಂಜೆಯಲಿ ಪೂಜೆಯನು

ವಿಧವರಿತು ಸೇವೆಯನು ಅನುಸರಿಸಿಕೊಂಬೆ ಸ-

ಹೃದಯ ಭಕ್ತರನು ಕಾಯ್ದು ಪಾಲಿಸುವೆ

ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ ೩

 

೩೮

ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ

ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ಪ.

ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ

ಪೊರೆದ ಮಹಾನುಭಾವ ಮುರಹರನೆ ನಿನ್ನ ೧

ಶಕ್ತನೆ ನಿನ್ನ ನಾ ಭಕ್ತಿಯಿಂ ಭಜಿಸುವೆ

ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ ೨

ಧರೆಯೊಳು ರಾಜಿಪ ವರ ಹೆಳವನಕಟ್ಟೆ

ಗಿರಿಯೊಳು ನೆಲಸಿಹ ಪರಮಪುರುಷ ರಂಗ ೩

 

ಕೈಕಾಲಿಲ್ಲದೆ —

೧೧

ನಾರಾಯಣನಮ್ಮ ಈತ

ನಾರಿ ಒಳ್ಳೊಳ್ಳೆ[ಯ]ವರಿಗೆ ಮಾಡಿದ ಖ್ಯಾತ ಪ.

ನಾನಾ ಬಗೆಯಿಂದ ಪೊಗಳುವೆನೀತ-

ನ್ನಾನೆಂಬುವುದನ್ನು ಮುರಿದ ಪ್ರಖ್ಯಾತ ಅ.ಪ.

ಕೈಕಾಲಿಲ್ಲದೆ ಆಟ ಆಡಿದ

ಮೈಮ್ಯಾಲೆ ಹೊರೆಯ ಹೊತ್ತು ನೋಡಿದ

ಕೋರೆಯ ಮಸೆದು ಹದ ಮಾಡಿದ

ಕೋಯೆಂದು ಕೂಗಿ ಒದರುತೋಡಿದ

ಇವ ಭಕ್ತರನ್ನ ಪಾತಾಳಕ್ಕೆ ದೂಡಿದ

ಶಕ್ತಿ ಮಗನಾದ ಕ್ಷತ್ರಿಯರ ಕಾಡಿದ

ರಾವಣನಿಗೆ ಅಂಬು ತೆಗೆದು ಹೂಡಿದ

ರಾಧಾನ್ಮನೆ ಪೊಕ್ಕು ಮೋಜು ಮಾಡಿದ

ಇವ ದಿಗಂಬರನಾಗಿ ಅಶ್ವವೇರಿ ಓಡಿದ ೧

ಕಳ್ಳಗಿಂತ ಮಹಾಕಳ್ಳ

ಕಲ್ಲು ಮಾಡಿಕೊಂಡು ಇರುವನು ನೆಳ್ಳ

ಭೂಮಿ ನೆಗವಿ ಸುತ್ತಿ ಬಲ್ಲ

ಬುದ್ಧಿವಂತ ಪ್ರಹ್ಲಾದಗೊಲಿದನಲ್ಲ

ಇವ ಎರುಡುಪಾದ ಭೂಮಿ ದಾನ ಒಲ್ಲ

ಇವನ ಕೊಡಲಿಬಾಯಿಗ್ಯಾರು ಇದಿರಿಲ್ಲ

ಲಂಕೆಗೆ ಬೆಂಕಿಯನಲ್ಲ

ಕೊಂಕಿ ಕೊಳಲನೂದುವನು ಗೊಲ್ಲ

ಮೈಮೇಲೆ ಗೇಣು ಅರಿವ್ಯಿಲ್ಲ

ಇವ ಮಾಮೇರೆಂಬೊ (?) ತೇಜಿ ಏರ್ಯಾನಲ್ಲ ೨

[ಬಿಟ್ಟ ಕಣ್ಣ] ಕಂಡ ವೈರಿ ಕೊಂದ

ಕಾಮಾತ್ಮರಿ[ಗಾ]ಗೋದೇನು ಛಂದ

ದಾಡೆಯಿಂದ ದೂಡಿ ಭೂಮಿ ತಂದ

ದಾಡೆಯಿಂದ ಕಂಬ ಒಡೆದು ಬಂದ

ಇವ ಶುಕ್ರನ್ನ ಕಣ್ಣ ಮುರಿದೊಂದ

ತಂದೆ ಮಾತಿಗೆ ತಾಯಿ ಮರಣಂದ

ವನದ್ಹಿಂಡು ಕೂಡಿ ವನಕೆ ಕೇಡು ತಂದ

ಒಮ್ಮೆ ಮೀಸಲ್ಬೆಣ್ಣೆ ಮೆದ್ದೇನಂದ

ಇವ ಬತ್ತಲಾಗಿ ಹತ್ತು ಕುದುರಿದಂದ

ತಂದೆ ಹೆಳವನಕಟ್ಟೆರಂಗ ಬಂದ ೩

 

ಸಾಯುಜ್ಯ ಪದವಿ

೫೦

ನಾರಾಯಣಯೆಂಬೊ ನಾಮವನು ನೆನೆದರೆ

ಹಾರಿ ಹೋಹುದು ಜನ್ಮಜನ್ಮದ ಪಾಪಗಳು

ಶ್ರೀರಮಣ ನಿಮ್ಮ ನಾಮಸ್ಮರಣೆ ನಿತ್ಯೆನಗೆ ದೊರೆಕಿಸಿ

ಮುಕ್ತಿದೋರಿಸು ಮುರಾರಿ ಪ.

ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ

ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ

ರಕ್ಷಣ್ಯವನು ಮಾಡಿ ಜಗದೊಳಗೆ ಖ್ಯಾತಿಯಲಿ

ಸುಕುಮಾರನೆನಿಸಿಕೊಂಡು

ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ

ದುಷ್ರ‍ಕತ್ಯದ ಫಲದಿಂದ ಅಂತ್ಯಜಳನು ಕಂಡು ಕಾ-

ಮುಕನಾಗಿ ಮೈಮರೆದು ಅಜಮಿಳ ತಾನು ಪಾತಕವೆಂದು

ಅರಿತರಿಯದೆ ೧

ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು

ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ

ಇಲ್ಲಿ ಬಾ ಅಂಜಬ್ಯಾಡೆಲೆ ಮುಗದವೆಂಗಳೆ

ಹುಲ್ಲೆನೋಟದ ಭಾವಕಿ

ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ

ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ

ಚೆಲ್ಲೆನ್ನಮ್ಯಾಲೆ ಕರುಣವನು ಕೋಮಲೆನಿಲ್ಲೆಂದು

ಸೆರಗ ಪಿಡಿದ ೨

ಎಲೊ ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ

ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು

ಎಲ್ಲವುಗಳ ರಾಶಿ ಬೊಗಳುವ ಹಿಂಡು ನಾಯಿಗಳು

ಬಲು ಘೋರ ಎನಿಸಿಪ್ಪುದು

ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ

ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ

ಸಲೆ ಬಾಳಿ ಬದುಕಿ ನಾ ಸುಖದಲ್ಲಿ ಇಹೆನೆಂಬ

ಛಲವೊಂದೆ ಎನಗೆ ಎಂದ೩

ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ

ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ

ಹೆತ್ತ ತಂದೆಯ ಕೇಳು ಸಮ್ಮತವಾದರೆ ಮತ್ತೆ

ನಿನಗೊಲಿವೆನೆಂ[ದಳು]

ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ

ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ

ಉತ್ತಮದ ಕುಲವನೀಡಾಡಿ ನೀ ಪಾತಕದ

ಮೊತ್ತಕೊಳಗಾಗದಿರೊ ೪

ಆಗದಾಗದು ಎನ್ನ ಕುಲಬಂಧು ಬಳಗವನು

ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ

ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ

ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು

ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು

ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು ೫

ಹಾಲಂತ ಕುಲವ ನೀರೊಳಗದ್ದಿಪೂರ್ವದ

ಶೀಲವನಳಿದು ಸತಿಯೊಡಗೂಡಿ ತಾನು ಚಾಂ-

ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ

ಆಲಂಬನದಲಿ ಅಜಾಮಿಳನು ಇರುತಿರಲಾಗ

ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು

ಜೋಲುದುಟಿ ಡೊಂಕು ಮಾರಿಲಭ್ರದಿಂ

ಯಮನಾಳುಗಳು ಇಳಿದರಾಗ ೬

ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು

ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ]

ತುಡುಕಿ ಹಿಡಿ ಕೆಡೆಹಿ ಕಟ್ಟಿರೊ ಪಾತಕನನೆಂದು

ಘುಡುಘುಡಿಸುತಲಿ ನಿಂತರು

ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು

ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು

ಪಡೆದ ಮಗನ ನಾರಗನೆಂದು ಕರೆಯಲು ನುಡಿಯ

ಲಾಲಿಸಿದ ಸ್ವಾಮಿ ೭

ಮರಣಕಾಲದಿ ಶ್ರೀಹರಿಯೆಂಬ ನಾಮವನು

ಸ್ಮರಣೆಯನು ಮಾಡಲು ಅವನ ಕೋಟಿಜನ್ಮದ ಪಾಪ

ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ

ಉರದೊಳೊಪ್ಪುವ ತುಳಸಿದಂಡೆ ಪೀತಾಂ-

ಬರವು ಗದೆ ಶಂಖ ಚಕ್ರ ದ್ವಾದಶನಾಮವನು

ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು ೮

ಪುಂಡರೀಕಾಕ್ಷನ ಭೃತ್ಯನ ಭಾಧಿಸುವ

ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ

ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ

ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ-

ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ

ದಂಡವ ಮುರಿದವರನು ನಾ ಕಾಣೆ ನೀವೆ

ಉದ್ದಂಡರಹುದೆಂದರಾಗ ೯

ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು

ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು

ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ

ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ

ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು

ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ ೧೦

ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು

ಬಿದ್ದ ಕಾಯವನು ಭಾದಿಸಿದವರ್ಯಾರು ಉ-

ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ

ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ

ಅದ್ದಿದೆ ನೂರೊಂದು ಕುಲವ ನರಕದೊಳೆಂದು

ಹದ್ದಿನ ಬಾಯೊಳಗಿನುರಗನಂತಜಾಮಿಳನು ಇದ್ದ

ತಾನತಿ ಮರುಗುತ ೧೧

ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ

ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧ ಜನರು

ಒಪ್ಪಿ ಧಾರೆಯ ನೆರೆದ ಕುಲಸ್ರ್ತೀಯಳ ಬಿಟ್ಟು ಮದನ

ಬಾಧೆಗೆ ಸಿಲುಕಿ ದುಷ್ಟ

ತಾಪವ ಪೊತ್ತೆ ಜನನಿಂದಕನಾದೆ

ಅಪ್ರತಿಮ ಅನಂತಪಾತಕಿ ಭುವನದಲಿ

ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ

ವಿಧಿ ಎಂದನು ೧೨

ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು

ದುಷ್ಟಯವುದೂತರನು ಕಂಡು ಚಂಡಾಲತಿಗೆ

ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು

ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ

ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ

ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ

ಗಟ್ಯಾಗಿ ಧ್ಯಾನಿಸಿದನು ೧೩

ತನ್ನ ನಾಮವ ನೆನೆವ ಭಕ್ತರಾದವರೆಲ್ಲ

ಧನ್ಯರಿವರಹುದೆಂದು ಜಗವರಿಯಬೇಕೆಂದು

ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ

ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು

ಎನ್ನಯ್ಯ ಏಳೆಂದು ಕೈಲಾಗವನು ಕೊಡಲು

ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ .

ಸನ್ನಿಧಿಗೆ ನಡೆದ ೧೪

ಜಲಜನಾಭನ ದಿವ್ಯನಾಮವನು ನೆನೆದರೆ

ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ

ಛಲವ ಮಾಡದೆ ನೀವು ಬನ್ನಿರೊ ನಮಗವರು

ಸಲುವರಲ್ಲೆಂದ ಯಮನು

ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ

ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ

ಸುಲಭನಹನು ಸ್ವಾಮಿ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು ೧೫

 

ಮೂರನೆಯ ಸಂಧಿ

ನಿದ್ರೆಗೈದಿಂದುಹಾಸನ ಕಂಚುಳಿಕೆಯಲ್ಲಿರ್ದ

ಪತ್ರವನೋದಿಕೊಂಡು

ತಿರ್ದಿ ತಾ ವಧುವಾದಳು ಮಂತ್ರಿತನುಜೆಯು

ಪದ್ಮನಾಭನ ಕಿಂಕರಗೆ

ಲೀಲೆಯಿಂದಲಿ ಚಂಪಕಮಾಲೆ ವಿಷಯೆ

ವಿಶಾಲದಿ ಸಖಿಯರು ಕೂಡಿ

ಆಲಯದಿಂದಲಿ ಹೊರಟರು ವಸಂತಕಾಲ ಬಂದಿರೆ ನಂದನಕೆ ೧

ವಚ್ಚೇರೆಗಂಗಳ ವಾರಿಜಮುಖಿಯರು ನಿಚ್ಚಳಾಂಗದ ನೀರೆಯರು

ಹೆಚ್ಚ ಹಿರಿಯ ಹೆಂಗಳ ರನ್ನೇರು ಬೆಚ್ಚದೆ ಬೆರೆದು ನಡೆದರು ೨

ಮಲ್ಲಿಗೆನನೆ ಮುದ್ದುಮುಖಮಾಲೆ ಗಂಧೇರು

ಚೆಲ್ಲೆಗಂಗಳ ಚೆಲ್ವೆಯರು

ಫುಲ್ಲಶರನ ಮದದಾನೆಯಂತೊಲೆವುತ

ಎಲ್ಲರೈದಿದರು ನಂದನಕೆ ೩

ಕಳಕೀರವಾಣಿಯರು ಕಾಳಾಹಿವೇಣಿಯರು

ಕಳಕಳಿಸುವ ವದನಯರು

ಕಳಸಕುಚದೋರು ಕಂಬುಕಂಧರೆಯರು ಕುಂತಳಕಾಗಿ ನಡೆದರು೪

ಕುಟಿಲಕುಂತಳೆಯರು ಕೋಮಲಾಂಗಿಯರು

ಚೆಂದುಟಿ ಚೆಲುವಿನ ಬಾಲೆಯರು

ಬಟ್ಟ ಪೊಂಬೊಗರಿಯ ಕುಚದ ಬಾಲಕಿಯರು

ನಟನೆಯಿಂದೆಲ್ಲ ನಡೆದರು ೫

ಒಬ್ಬರ ಹೆಗಲಲ್ಲಿ ಒಬ್ಬರ ನಳಿತೋಳಿಟ್ಟು

ತಬ್ಬುತ ತಾಗೊಲವುತಲಿ

ಕಬ್ಬುವಿಲ್ಲನ ಕೋಲಾಹಲ ಉಲ್ಲಸದಿ ತಬ್ಬಿ ನಡೆದರು ನಂದನಕೆ ೬

ಸೊಕ್ಕು ನುಡಿಯೋರು ಸೊಬಗು ಮತಿಯೋರು ಕಕ್ಕಸ

ಕುಚದ ಬಾಲೆಯರು

ನಕ್ಕುನಲಿದು ನಾನಾ ಚೇಷ್ಟೆಗಳಿಂದ ಹೊಕ್ಕರು ನಂದನವನವ೭

ಗಾಡಿಕಾರ್ತಿಯರೆಲ್ಲ ಗಮಕದಿಂದಲಿ ಒಡಗೂಡಿ

ಸರೋವರವಿಳಿದು

ಮಾಡಿದರ್ ಕೈಚಳಕವ ಜಲಕ್ರೀಡೆಯನಾಡಿದರತಿ ಹರುಷದಲಿ ೮

ಪೊಳಕುವ ಮೀನುಗಳ್ ನೀಲಕುಂತಳವು ಕಳಕಳಿಸುವ

ಕೆಂದಾವರೆ ಮೊಗ್ಗು

ಅರಳಿದಂಬುಜ ತಾರೆಗಳು ಕೋಮಲೆಯರ ನೀರಾಟವನೆ

ಕಂಡು ಹರುಷದಿ೯

ಕೋಮಲೆಯರ ನೀರಾಟದ ರಭಸಕ್ಕೆ ತಾವರೆಗಳು ಬೆರಗಾಗೆ

ಭಾವಕಿಯರ ಮುಖವನೆ ನೋಡಿ ಅಂಬುಜ

ಹೇವದಿ ತಲೆಯ ತಗ್ಗಿದವು೧೦

ನವರತ್ನದ ಸೋಪಾನವನೇರೋರು

ನವಯವ್ವನೆಯರ್ ಹರುಷದಲಿ

ಕಮಲಮುಖಿಯರ ಮೆಲ್ಲಡಿಗಳ ಭಾರಕ್ಕೆ

ಸಮನಾಗಿ ತೋರುತಲಿಹವು ೧೧

ತರುಣಿಯರುಟ್ಟ ತಂಗಲವಸ್ತ್ರ ಮೈಯೊಳು ಒರೆದು

ದಿವ್ಯಾಂಗ ತೋರುತಲಿ

ಗುರುಕುಚದ ಬಾಲೆಯರು ನಿಂತರು ಕಾಮನ

ಹೆರೆಯ ಕೂರಂಬಿನಂದದಲಿ೧೨

ಬಡನಡುವಿನ ದೇವಾಂಗವನರಿದುಟ್ಟು

ಸಡಿಲಿದಾಭರಣವನಿಟ್ಟು

ನಿಡುಗುರುಳಿಗೆ ಧೂಪದ ಹೊಗೆಯನು ಕೊಟ್ಟು

ಮುಡಿದರು ತುದಿವೆಣ್ಣೆಗಂಟು ೧೩

ಪಣೆಗೆ ಕಸ್ತೂರಿಯಿಟ್ಟು ಪೂಸಿ ಶ್ರೀಗಂಧವ

ಕಣ್ಣಿಗೆ ಅಂಜನ ಹಚ್ಚಿ

ಸಂಪಿಗೆ ಮಕರಂದ ಪತ್ರಿಕೆಯನಿಟ್ಟು ಲಲನೆಯರೆಲ್ಲ ಶೃಂಗಾರದಿ ೧೪

ಆನಂದಗಾತ್ರೆಯರು ಅತಿಹರುಷದಿ ಮಧುಪಾನವ

ಮಾಡಿ ಸಂಭ್ರಮದಿ

ಧೇನುವಾ ಕೋಮಲಶ್ರವಣನಾಲಿಸುವಂತೆ

ಮಾನಿನಿಯರು ತೆರಳಿದರು ೧೫

ದರ್ಪಣವನೆ ನೋಡಿ ರಮಣಿಯರೆಲ್ಲ

ಕಂದರ್ಪನ ಮದದಾನೆಯಂತೆ

ಕರ್ಪುರ ವೀಳ್ಯವ ಕರದಲ್ಲಿ ಪಿಡಿದು ಗುಪ್ಪವಡೆದರು ನಾರಿಯರು ೧೬

ವನಜಮುಖಿಯರು ವನಾಂತರವನು ಪೊಕ್ಕು

ಘನರಾಗದಿಂದ ಪಾಡುತಲಿ

ನಮಗೆ ತಮಗೆಯೆಂದು ಕೊಯ್ದರು ತಮ

ತಮ್ಮ ಮನಬಂದ ಫಲ ಪುಷ್ಪಂಗಳ ೧೭

ಮಿಂಡೆವೆಣ್ಣುಗಳೆಲ್ಲ ಮದವೆದ್ದು ತಮ್ಮೊಳು ಕಂಡಕಡೆಗೆ ಚೆಲ್ಲುವರಿದು

ಸೊಂಡಿಲು ಕದಳಿಯ ವನವ ಪೊಕ್ಕಂದದಿ

ಉದ್ದಂಡತನದಲಾಡುತಿಹರು ೧೮

ಅರಸನ ಮಗಳು ಚಂಪಕಮಾಲೆ ಸಖಿಯರು

ಬೆರಸಿಕೊಂಡಾಡುತಲಿಹರು

ಮರೆಸಿ ಮತ್ತೊಂದು ಕಡೆಗೆ ತಾನು ಬಂದಳು

ಹರುಷದಿಂದಲಿ ಮಂತ್ರಿ ತನುಜೆ ೧೯

ಚಿಕ್ಕ ಪ್ರಾಯದ ಕೋಮಲಾಂಗಿಯು ಹೆಮ್ಮಕ್ಕಳನಗಲಿ ತಾ ಚೂತ

ವೃಕ್ಷದ ನೆರಳಲ್ಲಿ ಮಲಗಿದ್ದಾತನ ಕಂಡು

ಬೆಕ್ಕಸ ಬೆರಗಾಗಿ ನಿಂದಳ್ ೨೦

ಅತಿಚೆಲುವ ಪುರುಷನ ಕಾಣುತ ಮೂರ್ಛೆಗತಳಾಗಿ

ತಿಳಿದು ಎಚ್ಚತ್ತು

ಪೃಥುವಿಯೊಳಗೆ ಇಂಥ ಚೆಲುವನಿಲ್ಲವೆಂದು

ಮತಿಭ್ರಮೆಯಿಂದ ನೋಡಿದಳು ೨೧

ಪಾರ್ವತಿಪತಿಯೆಂಬೆನೆ ಪಣೆಗಣ್ಣಿಲ್ಲ ವಾರಿಜೋದ್ಭವನಿವನಲ್ಲ

ನಾರಾಯಣನೆಂಬೆನೆ ಶಂಖಚಕ್ರವು ತೋರುವುದಿಲ್ಲ ಕೈಯೊಳಗೆ ೨೨

ಇಂದ್ರನೆಂಬೆನೆ ಬಿಳಿಯಾನೆ ಕೆಲದಲಿಲ್ಲ ಚಂದ್ರನೆಂಬೆನೆ ಮೃಗವಿಲ್ಲ

ಕುಂದದೆ ಲೋಕಲೋಕವ ತಿರುಗಿದ ರವಿ

ಬಂದಿಳಿದನೊ ಭೂತಳಕೆ ೨೩

ವಸುದೇವಸುತನಾತ್ಮಜ ತಾನೆಂಬೆನೆ ಕುಸುಮ

ಬಾಣವು ಕೈಯೊಳಿಲ್ಲ

ದಶದಿಕ್ಪಾಲನೊ ಯಕ್ಷಗಂಧರ್ವನೊ ಎಂದು

ವಿಸ್ಮಿತೆಯಾದಳು ವಿಷಯೆ ೨೪

ಸುತ್ತನೋಡುವಳಾರ ಸಂಚಾರವಿಲ್ಲೆನುತ

ಹತ್ತಿರೆ ಬಂದು ನಿಲ್ಲುವಳು

ಚಿತ್ತದೊಳೊಮ್ಮೊಮ್ಮೆ ನೆರೆಯ ನೇಮಿಸುವಳು

ಹೊತ್ತಲ್ಲವೆಂದು ಸಾರುವಳು ೨೫

ಇಟ್ಟ ಕಾಲಂದಿಗೆ ಅಲುಗದಂದದಿ ಬಂದು

ಮುಟ್ಟುವೆನೆಂದು ನಿಲ್ಲುವಳು

ದಿಟ್ಟ ಹೆಂಗಸು ಇವಳಾರೋ ಎಂಬುವನೆಂದು

ಥಟ್ಟನೆ ಕಡೆಗೆ ಸಾರುವಳು ೨೬

ಆದುದಾಗಲಿ ಇವನ ಅಗಲಲಾರೆನು

ಲಜ್ಜೆಹೋದರು ಹೋಗಲಿ ಎನುತ

ಪಾದದಿಂದಿಡಿದು ಮಸ್ತಕ ಪರಿಯಂತರ

ಭೇದಿಸಿ ನೋಡಿದಳವನ ೨೭

ಸೊಗಸಿಂದ ನಿದ್ರೆಗೈದಿಂದುಹಾಸನು ತೊಟ್ಟ

ಚೊಗೆಯ ಕುಪ್ಪಸದ ಕೊನೆಯಲ್ಲಿ

ಬಿಗಿದುಕಟ್ಟಿರ್ದ ಪತ್ರಿಕೆಯನ್ನುಮೆಲ್ಲನೆ ತೆಗೆದುಕೊಂಡಳು

ಮಂತ್ರಿ ತನುಜೆ ೨೮

ನಿದ್ರೆಯ ತಿಳಿದು ಎಚ್ಚೆತ್ತು ನೋಡುವನೆಂದು

ಹೊದ್ದಿದ್ದ ಲಜ್ಜೆ ಭಾವದಲಿ

ಸದ್ದು ಮಾಡದೆ ಸಂಪಿಗೆ ವೃಕ್ಷವನೆ

ಸಾರ್ದುಮುದ್ರೆಯೊಡೆದಳಂಬುಜಾಕ್ಷಿ ೨೯

ನೋಡಿದು ತಮ್ಮ ತಂದೆಯ ಸ್ವಹಸ್ತದ

ಮೋಡಿಯ ಬರೆದ ಬರಹನು

ರೂಢಿಯೊಳತಿ ಚೆಲುವ ಇವನೆಂದು ಕಳುಹಿದನಾ

ಮಾಡಿದ ಸುಕೃತದ ಫಲದಿ ೩೦

ಶ್ರೀಮತು ಮಂತ್ರಿ ದುಷ್ಟಬುದ್ಧಿ ಮದನಗೆ

ನೇಮಿಸಿ ಕಳುಹಿದ ಕಾರ್ಯ

ಸೀಮೆಗರಸು ಇವನಹನು ಕಾಣುತ ಶೀಘ್ರ

ವಿಷವ ಕೊಡುವುದುತ್ತಮವು ೩೧

ಒಂದು ಲಿಖಿತ ಸಹಸ್ರ ಲಿಖಿತವು ಎಂದು

ಭಾವಿಸಿ ನಿನ್ನ ಮನದಿ

ಸಂದೇಹವಿಲ್ಲದೆ ವಿಷವ ಕೊಡುವುದು

ಮುಂದಕ್ಕೆ ಲೇಸುಂಟು ನಮಗೆ ೩೨

ವಿಪ್ಪನ್ನವಾಗಿರ್ದ ವರನ ಕಾಣುತ

ನಮ್ಮಪ್ಪನವರು ಕಳುಹಿದರು

ತಪ್ಪುಂಟು ಇದರೊಳು ಕೆಡುವುದು ಕಾರ್ಯ

ಕೈತಪ್ಪೆಂದು ಮನದಲ್ಲಿ ತಿಳಿದು ೩೩

ವಾಕಾರವನೆ ಚೆಳ್ಳುಗುರಿಂದಲಿ ತಿದ್ದಿ ಯೇಕಾರವನೆ ಮಾಡಿದಳು

ಜೋಕೆಯಿಂದಲಿ ಎಂದಿನಂದದಿ ಕಟ್ಟಿ ವಿರಹಾಕಾತುರದಿಂದ

ಮರುಗಿದಳು ೩೪

ತೆಗೆದು ಚಾಪವ ಕಿವಿಗೇರಿಸಿ ಮನ್ಮಥ ಬಿಗಿದು

ಕಟ್ಟಿದ ಭರದಿಂದ

ತಗುಲಿತು ಎದೆಗೆ ಕೂರಂಬು ಬೆನ್ನಲಿ ತಟ್ಟುಗಿಯಿತು

ತಲೆಯನು ಎತ್ತಿ ೩೫

ಹಿಂದಕ್ಕೆ ಹೆಜ್ಜೆಯನಿಡುವರೆ ಕಾಲೇಳವು ನಿಂದು

ನಿಂದೊಮ್ಮೆ ನೋಡುವಳು

ಹೊಂದಿತು ಇಂದುಹಾಸನ ಮೇಲೆ ಚಿತ್ತವು

ಕಂದಿ ಕಾತರಿಸುತಲಿಹಳು ೩೬

ಮದನವಿಕಾರದಿಂದಲಿ ಮೋಹನಾಂಗಿಯು

ಬೆದರಿದ ಹುಲ್ಲೆಯಂದದಲಿ

ನದರುದಪ್ಪುವಳು ನಿಲ್ಲುವಳು ನಾಚುವಳೊಮ್ಮೆ

ಹೃದಯ ಸಂಚಲಿಸುತಲಿಹಳು ೩೭

ಮನವ ಬೇರಿಟ್ಟು ಮಾತಾಡಳೆಲ್ಲರ ಕೂಡೆ ವಿನಯದಿ

ಹುಸಿ ನುಡಿಗಳನು

ಮನ್ಮಥ ತಾಪದ ಬೆಮರ್ವನಿಗಳಿಂದ ನೆನೆದವು

ಉಟ್ಟ ದೇವಾಂಗ ೩೮

ಹೇಳದಿದ್ದರೆ ಹುಸಿವುದೆ ಈ ವಾರ್ತೆಯು ಗಾಳಿಗೆ

ಪರಿಮಳ ಮಾಜುವುದೆ

 

ಸುರಪತಿಯು —- ಕಾಯ್ದೆ

೩೯

ನಿನ್ನ ನಂಬಿದವರ ಕಾಯೊ ನಿಜವುಳ್ಳ ದೇವ

ಎನ್ನನು ಉದ್ಧರಿಸಿ ಕಾಯೊ ಕರುಣಿವೆಂಕಟ ಪ.

ಸುರಪತಿಯು ಮುನಿದು ಮಳೆಗರೆಯಲೇಳು ದಿನವೂ ಬಿಡದೆ

ತುರುಗಳೆಲ್ಲ ಸೊರಗಿ ಬಾಯ ಬಿಡುತಿರಲು

ಬೆರಳಿನಿಂದ ಗೋವರ್ಧನ ಗಿರಿಯನ್ನೆತ್ತಿ ಗೋವ್ಗಳನು

ದ್ಧರಿಸಿ ಕಾಯ್ದೆ ಕರುಣಾಸಿಂಧು ಕಮಲಲೋಚನ ೧

ಮಡುವಿನೊಳಗೆ ಮಲೆತನೀರ ಕುಡಿಯ ಬಂದಾಗಜವ ನೆಗಳು

ಪಿಡಿದು ಕಾಲಕಚ್ಚಿ ಭಂಗಬಡಿಸುತ್ತಿರಲು

ತಡೆಯಲಾರದೆ ಪ್ರಾಣ ಬಿಡುವ ಸಮಯದಲ್ಲಿ ಬಂದು

ಕೆಡಹಿ ಚಕ್ರದಿಂದ ನೆಗಳ ಕರಿಯ ಸಲಹಿದೆ೨

ಮತ್ತೆ ಮಂದ ಜ್ಞಾನದಿಂದ ಮೈ ಮರೆದು ಬರಲು ಸ್ತನವ

ತುತ್ತು ಮಾಡಿ ಪಿಡಿದು ಕುದುರೆ ಕ್ರೂರ ದಂತದಿ

ಕತ್ತರಿಸುವ ಸಮಯದಲ್ಲಿ ಕಡೆಮಾಡಿ ಕಾಯೆನ್ನ

ಕರ್ತು ಹೆಳವನಕಟ್ಟೆ ಕರುಣಿ ವೆಂಕಟ ೩

 

೧೨

* ನೆರದು ಗೋಪಿಯರೆಲ್ಲಾರು ಕೃಷ್ಣಯ್ಯನ ಶೆರಗಪಿಡಿದುಕೊಂಡು

ಭರದಿಂದ ಬಂದು ಯಶೋದೆಗೆ ಛಾಡಿಯ

ಅರುಹಿದರತಿ ಬೇಗದಿ ಪ.

ಬಲುಕಳ್ಳ ನಿನ್ನ ಮಗ ಗೋಪಮ್ಮ ಕೇಳೆ

ಹಾಲು ಕರವುತಿರಲು

ತೊಲೆಗೆ ನಿಚ್ಚಣಿಕೆಯ ಹಾಕದೆ ಸುರಿದಾನು

ನೆಲವಿನ ಪಾಲ್ಮೊಸರಾ ೧

ಅಂಮೈಯ್ಯಾ ಇಲ್ಲಾ ಕಾಣೆ ಇವಳು ಯಂನ್ನಾ

ಸುಂಮ್ಮಾನೆ ದೂರುವಳು

ಹುಂಮ್ಮಿಂದ ನಾನವಳ ಅಟ್ಟಕ್ಕೆ ನೆಗವೊರೆ

ಬೊಮ್ಮ ಜಟ್ಟಿಗನೆ ನಾನು ೨

ಮತ್ತೊರ್ವಳಿಂತೆಂದಳು ನಿಂನಮಗ

ಹತ್ತಿ ಗವಾಕ್ಷಿಯಿಂದಾ

ಬಚ್ಚಿಟ್ಟ ಬೆಣ್ಣೆಯನೆಲ್ಲಾವ

ಮೆದ್ದಾನು ಮಕ್ಕಳಿಗಿಲ್ಲದಂತೆ ೩

ಗಡಿಗೆ ಬೆಣ್ಣೆಯ ಮೆಲ್ವಾರೆ ಇವನ

ಹೊಟ್ಟೆ ಕೆರೆಭಾವಿಯೇನೆ ಅಮ್ಮಾ

ಹುಡುಗರಿಗೆ ಎಂದು ಬಚ್ಚಿಟ್ಟ ಬೆಣ್ಣೆಯನೆಲ್ಲಾ

ಹೊಡೆದರವರ ಮಕ್ಕಳು ೪

ಮಲಗೋಮಂಚದ ಮೇಲೆ ನಾ

ಮಲಗೀರೆ ಮೊರೆವ ಹಾವನು ಪಿಡಿದು

ಅರಿಯದಂತೆ ಬಂದು ಮುಸುಕಿ-

ನೊಳಗಿಟ್ಟು ಅರಿಯಾದೆ ಹೋದನಂಮಾ ೫

ಹರನಡುಗುವ ಹಾವನು ನಾ ಪಿಡಿವಾರೆ

ತರಳಾನು ತಡೆಕಾರನೆ

ಹರಕೆಯ ಹೊತ್ತುದವಪ್ಪಿಸದಿದ್ದರೆ

ಗುರುತು ತೋರಲು ಬಂತೇನೊ ೬

ಮಕ್ಕಳ ಪಡೆದವರುಯಿಲ್ಲದ ಕಳ

ವಿಕ್ಕಲಿ ಬಹುದೆ ಕೃಷ್ಣಗೆ

ಸಿಕ್ಕಿದ ತಪ್ಪು ಸಹಿತವೆ ತಂದರೆ ನಾನು

ತಕ್ಕ ಬುದ್ದಿಯ ಪೇಳುವೆ ೭

ಅಣುಮಯರೂಪ ಕಾಣೆ

ನಿಂನಯ ಮಗ ಚಿನುಮಯ ರೂಪ ಕಾಣೆ

ಚಿನುಮಯ ರೂಪ ಹೆಳ

ವನಕಟ್ಟೆ ಆದಿಕೇಶವ ರಂಗನೆ ೮

 

ಹೆಳವನಕಟ್ಟೆ ರಂಗನ ಜಾತ್ರೆಗೆ

೪೦

ಪದುಮನಾಭನೆ ನಿನ್ನ ಪಾದ ಕಿಂಕರ ನನ್ನ ಕೈಬಿಡು-

ವುದುಚಿತವೇ ರಂಗ ಪ.

ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-

ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ.

ಅಜಗರಶಯನನೆ ಬುಧಜನ ನಮಿತನೆ

ತ್ರಿಜಗವಂದಿತಪಾದ ಪದುಮಜ ಜನಕನೆ ೧

ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ

ಶಶಿಭೂಷಣಸಖ ಶಿಶುವ ಕಾಪಾಡೊ ೨

ಸಾಂದೀಪಗೊಲಿದೆ ಸಂದೇಹವಿಲ್ಲ

ತಂದೆ ಹೆಳವನಕಟ್ಟೆ ರಂಗ ಕೃಪಾಂಗ ೩

 

ಅರಷಿನೆಣ್ಣೆ (ನು ೧):

ಸೀತಾ ಕಲ್ಯಾಣ

ಪಾಕ ಶೇಷಾದ್ರಿ ಬ್ರಹ್ಮಕೆ ಶರಣು

ಲೋಕನಾಯಕ ಹೆಳವನಕಟ್ಟೆ ವೆಂಕಟ

ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ.

ಮದುವೆಯ ನಾಲ್ಕು ದಿವಸದಲ್ಲಿ

ಮದುವಣಿಗನು ರಾಮ ಜಾನಕಿಗೆ

ಮುದದಿಂದ ಅರಿಷಿಣೆಣ್ಣೆಯ ಮಾಡೊ ಸಂಭ್ರಮ[ದ]

ಪದನ ಹೇಳುವೆ ಸುಜನರು ಕೇಳಿ ಜಯ ಜಯ ೧

ಚಿತ್ತಜಪಿತ ಶ್ರೀರಾಮರಿಗೆ

ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ

ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ

ಮುತ್ತೈದೇರನು ಕರೆಸಿದಳು ಜಯ ಜಯ ೨

ಪೀತಾಂಬರದುಡುಗೆಯನುಟ್ಟು

ಜ್ಯೋತಿಯಂದದಿ ಥಳಥಳಿಸುತಲಿ

ಜಾತಿಮಾಣಿಕದಾಭರಣವಿಟ್ಟು ರಾಮರ

ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ ೩

ಚೀಣ ಚೀಣಾಂಬರಗಳನುಟ್ಟು

ವೇಣಿ ಕಸ್ತೂರಿಯ ಪಣೆಗಿಟ್ಟು

ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ

ಬಾಣನ ಪಟ್ಟದಾನೆಗಳಂತೆ ಜಯ ಜಯ ೪

ಪೊಂಬಣ್ಣದ ಹಳದಿಯ ಕಲೆಸಿ

ತುಂಬಿದ ಹರಿವಾಣದೊಳಗೆ

ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ

ಸಂಭ್ರಮಕೆ ನಡೆತಂದರಾಗ ಜಯ ಜಯ ೫

ಗರುಡನ್ವಲ್ಲಭ ಸೌಂದರದೇವಿ

ವರುಣನ್ವಲ್ಲಭೆ ಕಾಳಕದೇವಿ

ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ

ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ ೬

ಬ್ರಹ್ಮವಲ್ಲಭೆ ಶಾರದಾದೇವಿ ವಾ-

ಯುರಮಣಿ ಅಂಜನಾದೇವಿ

ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು

ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ೭

ಅಲ್ಲಲ್ಲಿ ನಡೆವ ನಾಟಕಶಾಲೆ

ಬಿಲ್ಲಾಳು ಬೆತ್ತ ಕಾಟನವರು

ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ

ಚೆಲ್ಲುತ ದಶರಥ ನಡೆದನಾಗ ಜಯ ಜಯ ೮

ಹೊಡೆವ ತಂಬಟೆ ಭೇರಿ ನಿಸ್ಸಾಳೆ

ಬಿಡದೆ ಚೀರುವ ಹೆಗ್ಗಾಳೆಗಳು

ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ

ನಡೆದರು ಜನಕರಾಯನ ಮನೆಗೆ ಜಯ ಜಯ ೯

ಕುಸುಮಬಾಣನ ಮಾರ್ಬಲದಂತೆ

ಹಸುರು ಪಚ್ಚೆಯ ಪಲ್ಲಕ್ಕಿಗಳು

ಮುಸುಕಿದ ಪರಿಮಳದೊಳಪ[ಸಾ]ತಕೆ

ದಶರಥ ಬಂದನೆಂದರೆ ಜನರು ಜಯ ಜಯ ೧೦

ಭರದಿಂದಲೆದ್ದು ಜನಕರಾಯ

ತರಿಸಿ ನಿವಾಳಿಗಳನು ಹಾಕಿ

ಹರುಷದಿ ಕೈಲಾಗವ ಕೊಟ್ಟಯೋಧ್ಯದ

ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ೧೧

ಬೇಗದಿ ಗದ್ದುಗೆಯನು ಹಾಸಿ

ಬೀಗನ ಉಪಚರಿಸಿದ ಜನಕ

ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ

ನಾಗಭೂಷಣನು ಕುಳಿತನಾಗ ಜಯ ಜಯ ೧೨

ಸುತ್ತಣ ರಾಯರಾಯರಿಗೆಲ್ಲ

ರತ್ನಗಂಬಳಿಗಳ ಹರಹಿದರು

ಅರ್ತಿಯಿಂದಲಿ ಸುರರೆಲ್ಲರು ಕುಳಿತರು

ವಿಸ್ತರಿಸಿದ ಮಂಟಪದೊಳಗೆ ಜಯ ಜಯ ೧೩

ಮಣಿಮಂಟಪದೊಳು ಹಸೆಹಾಸಿ ಕನಕ

ಮಣಿಯ ತಂದಿಳುಹಿದರು

ದಿನಕರಕುಲರಾಮ ಹಸೆಗೇಳೆನುತಲಿ

ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ ೧೪

ಪೊಕ್ಕಳೊಳಜನ ಪೆತ್ತವನೇಳು

ಅಕ್ರೂರಜನ ಪೆತ್ತವನೇಳು

ಮುಕ್ಕಣ್ಣನ ರಿಪುಬಲವ ಸಂಹರಿಸಿದ

ಭಕ್ತವತ್ಸಲ ಹಸೆಗೇಳೆಂದರು ಜಯ ಜಯ ೧೫

ದಶರಥರಾಜನಂದನನೇಳು

ಅಸುರಸಂಹಾರ ಕಾರಣನೇಳು

ವಸುಧೆಗೊಡೆಯ ರಾಮ ಹಸೆಗೇಳೆನುತಲಿ

ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ ೧೬

ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ

ಕುಶಲದ ಬಾಸಿಂಗವ ಪಿಡಿದು

ಅಸುರಾರಿಯ ಮಸ್ತಕಕಳವಡಿಸೋರು

ವಸುದೇವನಾಗೆಂದು ಹರಸುತಲಿ ಜಯ ಜಯ ೧೭

ತಂಡತಂಡದ ರತ್ನ ಅಡಸಿದಾಗ

ದುಂಡುಮುತ್ತಿನ ಮಣಿ ಬಿಗಿದಿದಾಗ

ತೊಂಡಿಲ ಮುತ್ತೈದೇರಳವಡಿಸೋರು ಕೋ-

ದಂಡ ಪಾಣಿಸತಿಜಾನಕಿಗೆ ಜಯ ಜಯ ೧೮

ಅರಳುಗಂಗಳಿಗೆ ಅಂಜನ ಹಚ್ಚಿ

ಬೆರಳಿಗೆ ಮುದ್ರೆ ಉಂಗುರವಿಟ್ಟು

ಕೊರಳಿಗೆ ಏಕಾವಳಿಯನೆ ಹಾಕೋರು

ತರಳಾಕ್ಷಿಯರಾ ಜಾನಕಿಗೆ ಜಯ ಜಯ ೧೯

ಬೊಂಬೆಯ ತೊಂಡಿಲ ಮುಡಿದಿರ್ದು

ಕುಂಭಿಣಿಸುತೆ ಕುಳ್ಳಿರಲಾಗಿ

ಅಂಬುಜಾಂಬಕ ರಘುರಾಮನ ಹರುಷದಿ

ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]೨೦

ಬಂದನೆ ಭಾಗ್ಯಲಕ್ಷ್ಮೀರಮಣ

ಬಂದನೆ ಭಕ್ತವತ್ಸಲ ಸ್ವಾಮಿ

ಬಂದನೆ ಜಾನಕಿಯಡೆ ರಾಮನು ತಾ

ಬಂದನೆ ಮಣಿಮಂಟಪದೆಸೆಗೆ [ಜಯ ಜಯ] ೨೧

ನಿರ್ಜರನರನಾಗಸ್ತೋತ್ರ ಬಂದ

ಸಜ್ಜನಸಂತಾಪದೂರ ಬಂದ

ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ

ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ ೨೨

ಕೌಸಲ್ಯಸುತ ಕುಮಾರ ಬಂದ

ಹಂಸವಾಹನಪಿತ ರಾಮ ಬಂದ

ಕಂಸಾರಿ ದುಃಖವಿ [ನಾಶ] ರವಿಕುಲ

ವಂಶೋದ್ಧಾರಕ ಬಂದನಾಗ [ಜಯ ಜಯ] ೨೩

ಭಕ್ತವತ್ಸಲ ರಾಘವ ಬಂದ

ಮುಕ್ತಿದಾಯಕ ಶ್ರೀರಾಮ ಬಂದ

ಅರ್ಕನು ಶತಕೋಟಿತೇಜನು ಜಗಕತಿ-

ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ ೨೪

ಸಿಂಧುಬಂಧನ ರಾಘವ ಬಂದ ಪು-

ರಂದರವರದ ಶ್ರೀರಾಮ ಬಂದ

ಇಂದುವದನೆಪತಿ ರಾಮ ಬಂದನು ರಾಮ-

ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ ೨೫

ಯಜ್ಞರಕ್ಷಕ ರಾಘವ ಬಂದ

ಯಜ್ಞಶಿಕ್ಷಾಮಿತ್ರ ರಾಮ ಬಂದ

ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ-

ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ ೨೬

ಯಂತ್ರವಾಹಕ ರಾಘವ ಬಂದ

ಮಂತ್ರಮೂರುತಿ ರಾಮ ಬಂದ

ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ

ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ ೨೭

ದೂಷಕಹರಣ ಶ್ರೀರಾಮ ಬಂದ ವಿ-

ಭೀಷಣವರದ ರಾಘವ ಬಂದ

ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ-

ದೀಶ ತಾ ಬಂದನೆಂದವೆ ಕಹಳೆ ಜಯ ಜಯ ೨೮

ತಾಟಕಪ್ರಾಣಾಪಹಾರ ಬಂದ

ಜಟಯುಮುಕ್ತಿಕಾರಣ ಬಂದ

[ತಾಟಂಕ] ಧರ ನಾರಾಯಣ ರವಿಕುಲ

ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ ೨೯

ವೀರ ವಿಕ್ರಮ ರಾಘವ ಬಂದ

ಮಾರೀಚಮರ್ದನ ರಾಮ ಬಂದ

ನಾರಿ ಶ್ರೀ ಜಾನಕಿರಮಣ ಬಂದನು

ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ ೩೦

ದೇವಕುಮಾರ ರಾಘವ ಬಂದ

ದೇವರ ದೇವನು ರಾಮ ಬಂದ

ಭಾವೆ ಶ್ರೀ ಜಾನಕಿರಮಣ ಬಂದನು

ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ ೩೧

ನಿರುಪಮಚರಿತ ರಾಘವ ಬಂದ

ದುರಿತದಲ್ಲಣ ರಾಮದೇವ ಬಂದ

ಭರತಶತ್ರುಘ್ನರ ಸಹೋದರಯೋಧ್ಯದ

ಸುರಪತಿ ಬಂದನೆಂದವೆ ಕಹಳೆ ಜಯ ಜಯ ೩೨

ಹೇಮಖಚಿತ ರತ್ನ ಪೀಠದಲಿ

ಭೂಮಿಜೆ ಸಹಿತ ಕುಳಿತ ರಾಮ

ವಾಮ ಭಾಗದಿ ಒಪ್ಪಿರ್ದಳು ಜಾನಕಿ

ಆ ಮಹಾಸಭೆಯನು ಬೆಳಗುತಲಿ ಜಯ ಜಯ ೩೩

ಕುಂದಣ ರತ್ನದಡ್ಡಿಕೆಯೊಳಗೆ

ಹೊಂದಿಸಿ ನವರತ್ನ ಇರುವಂತೆ

ಇಂದುವದನೆ ಜಾನಕಿ ಹರುಷದಿ ರಾಮ

ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ ೩೪

ಹೇಮದ್ಹರಿವಾಣದೊಳಗ್ನಿಯನು

ಕಾಮಿನಿಯರು ತಂದಿಳುಹಿದರು

ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ

ಹೇಮಾರ್ಚನೆಗಳ ತೊಡಗಿದನು ಜಯ ಜಯ ೩೫

ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು

ಪೂಜಿಸಿದನೆ ವಿಘ್ನೇಶ್ವರನ

ರಾಜವದನೆಯ ಒಡಗೊಂಡು ರಾಘವ

ಪೂಜಿಸಿದನೆ ಋಷಿಮುನಿವರರ ಜಯ ಜಯ ೩೬

ಇಂದ್ರಾದಿ ಮುನಿಗಳು ಕೈಹೊಡೆದು

ಚಂದ್ರ ಸೂರ್ಯರು ಉಘೇಉಘೇಯೆನಲು

ಮಂದಾರ ಮಲ್ಲಿಗೆ ಮಳೆಗಳ ಕರೆದರು

ಅಂದದಿ ಸುರಜನರೆಲ್ಲರಾಗ ಜಯ ಜಯ ೩೭

ಅರಳುವ ಕೆಂದಾವರೆ ಕುಸುಮ

ಪರಿಮಳ ಸುರಮ್ಯ ಕಣ್ಗೆಸೆಯೆ

ಎರಗುವ ಮರಿದುಂಬಿಗಳಂತೆ ರಾಘವ

ಕರಗಳ ಪಿಡಿದೆತ್ತಿದ ಸತಿಯ [ಜಯ ಜಯ] ೩೮

ಇಳೆಯ ಜಗಂಗಳನುದರದಲಿ

ಅಳವಡಿಸಿದ ಮಹಾತ್ಮಕನು

ಇಳೆಯ ಮಗಳನು ಎತ್ತಲಾರದೆ ರಾಮ

ಬಳಲಿದನೆಂದು ನಕ್ಕರು ಜನರು ಜಯ ಜಯ ೩೯

ಪಾದ ಎಚ್ಚರಿಕೆ ಪರಾಕು ಸ್ವಾಮಿ

ಪಾದ ಎಚ್ಚರಿಕೆ ಪರಾಕು ದೇವ

ಪಾದ ಎಚ್ಚರಿಕೆ ಸೀತಾಪತಿ ರಾಮನೆ

 

೪೧

ಪಾಪಿಯೊಳು ನಾ ಬಂದೆ ಪರದೇಶಿ ನಾನಾದೆ

ಕಾಪಾಡುವರ ಕಾಣೆ ಕೈಪಿಡಿ (ದು)

ಆಪತ್ತು ಬಂದ ಕಾಲಕ್ಕೆ ಆರಯ್ವರೊಬ್ಬರಿಲ್ಲ

ಶ್ರೀಪತಿಯೆ ಕಡೆಹಾಯಿಸೊ

ತಂದೆ ತಾಯೆಂಬುದನು ನಾ-

ನೊಂದು ಗುರತನರಿಯೆ ನಿಮ್ಮ ಕಂದ –

ಳೆಂದೆನಿಸಿ ಕಡೆಹಾಯಿಸೊ ಹೆಳವನಕಟ್ಟೆರಂಗ

 

ಮತ್ಸ್ಯರೂಪಿಲಿ

೧೩

ಪಾಹಿ ಪರಮಾನಂದ ಪಾಹಿ ಮುನಿಜನವಂದ್ಯ

ಪಾಹಿ ಖಳಜನ ಬಾಧ ಪಾಹಿ ಗೋವಿಂದ ಪ.

ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತ

ಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ಅ.ಪ.

ಮತ್ಸ್ಯರೂಪಿಲಿ ಬಂದು ಬಲಿದ ದೈತ್ಯನ ಕೊಂದೆ

ಬೆಚ್ಚರದೆ ಬಹುಗಿರಿಯ ಬೆನ್ನಲ್ಲಿ ತಾಳ್ದೆ

ಬಚ್ಚಿಟ್ಟ ಧರಣಿಯನ್ನು ಬಲುಮೆಯಿಂದಲಿ ತಂದೆ

ಅರ್ಚಿಸಿದ ಪ್ರಹ್ಲಾದಗೆ ಒಲಿದೆ ನರಸಿಂಹ ೧

ಕುಬ್ಜರೂಪಿಲಿ ನೆಲನ ಬೇಡಿ ಬಲಿಯನು ತುಳಿದೆ ಪಿತನಾಡಿದ

ಶಬ್ದವನ್ನು ಕೇಳಿ ಮಾತೆಯ ಶಿರವನಳಿದೆ

ಕೊಬ್ಬಿದ್ದ ರಾವಣನ್ನ ಕಂದರವ ಖಂಡಿಸಿದೆ

ಅಬ್ಜಮುಖಿ ಜಾನಕಿಯನಾಳಿದೆ ಶ್ರೀರಾಮ ೨

ತುರುಹಿಂಡ ಕಾಯ್ದು ತಪವಳಿದು ಪತಿವ್ರತೆಯರ

ಭರದಿ ವಾಜಿಯನೇರಿ ಚರಿಸುತ್ತ ಬಂದೆ

ಕರುಣಾಳು ಶ್ರೀ ಹೆಳವನಕಟ್ಟೆ ರಂಗಯ್ಯ ಪಿಳ್ಳಂ-

ಗಿರಿ ವಾಸ ಶ್ರೀ ವೆಂಕಟೇಶ ೩

 

೩೨

ಬಟ್ಟೆಯ ನೆವದಿಂದ ಬಂದು

ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ

ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ

ಕಷ್ಟ ದುರಿತಗಳ ಕಳೆಯೆ ತಾಯೆ ಪ.

ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ-

ಗೇರಿ ಕಂಪಿಸಿ ನಡುಗುತ್ತ

ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ

ದಾರಿಯನು ಕೇಳಿಕೊಳ್ಳುತ

ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು

ಹರಿ ನಾರಾಯಣ ಎನ್ನುತ

ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ

ಘೋರ ದುರಿತವನು ಕಳೆಯೆ ತಾಯೆ ೧

ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ

ಪ್ರತ್ಯಕ್ಷ ವಿಷ್ಣುಜಾತೆ ಮಾತೆ

ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ

ಸತ್ಪಾತ್ರ ಸಂಪೂಜಿತೆ ಪ್ರೀತೆ

ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ

ಪತಿತ ಪಾವನ ಚರಿತೆ

ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ

ಮುಕ್ತಿಸಾಧನದಾತೆ ಮಾತೆ ೨

ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ

ಬೆರೆದಿದ್ದ ಸಂಗಮದಲ್ಲಿ

ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ

ಹರುಷದಿಂದರ್ಪಿಸುತಲಿ

ಥರಥರದಿ ನೆರೆದ ಮುತ್ತೈದೆಯರೆಲ್ಲರು

ಮರದ ಬಾಗಿನವ ಕೊಡುತಲಿ

ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ

ಅರಸು ರಂಗನ ಕೃಪೆಯಲ್ಲಿ ತಾಯೆ ೩

 

ಮೂರು ನುಡಿಗಳಲ್ಲೂ

೧೪

ಬಹಳ ನಂಬಿದೆ ಭಕ್ತಪಾಲ ಶ್ರೀ ಲಕ್ಷೀಯ ಲೋಲ

ವೆಂಕಟರಾಯನ ಮೂರು ಲೋಕದೊಡೆಯನ

ಮುಕ್ತಿಯ ಕೊಡುವನ ಪಾಲಿಸಿ ಜಗವನುದ್ಧರಿಸಿದ ದೇವನ ಪ.

ಜಲದೊಳು ಪೊಕ್ಕು ವೇದವ ತಂದು ಅಜವನಿಗಿತ್ತು

ಬಲುಗಿರಿ ಕುಸಿಯಲು ಬೆನ್ನಿನಿಂದಲಿ ತಳೆದು

ನೆಲನ ಕದ್ದಸುರನ ಕೊಂದು ಕಂಬದಿ ನಿಂದು

ಬಲಿಯ ದಾನವ ಬೇಡಿ

ಜಲ ಪರುಷವ ನೀಡಿ ಮತ್ತೆ ಮಾತೆಯ ಕಡಿದು

ಛಲದಿ ರಾವಣನ ಸಂಹರಿಸಿ ಸೀತೆಯ ತರಿಸಿ

ಬಲುಸತಿಯರನಾಳಿ ಬವುದ್ಧ ರೂಪವ ತಾಳಿ

ಅಲ್ಲದಶ್ವವೇರಿದ ಅತಿ ಚೆಲುವ ದೇವನ ೧

ನಿಗಮ ಚೋರನ ಕೊಂದು ನೀರೊಳು ಮುಳುಗ್ಯಾಡಿ

ನಗವ ಬೆನ್ನಲಿ ಪೊತ್ತು ಸುರರಿಗಮೃತವಿತ್ತು

ಬಗೆದು ಧಾರುಣಿಯನ್ನು [ಚೀರಿ ಹರಹಿ] ಹಿರಣ್ಯಕನ

ಮಿಗಿಲಾದ ಬಲಿಯ ಮೆಟ್ಟಿ

ಸೊಗಸಿಂದ ಕಾಮಧೇನುವ ತಂದು ಕೌಸಲ್ಯಾ

ಮಗನಾಗಿ ಹುಟ್ಟಿ ರಕ್ಕಸರನ್ನು ತರಿದೊಟ್ಟಿ

ವಿಗಡ ಮಾವನ ಕೊಂದು ಮತ್ತೆ ತ್ರಿಪುರವ ಗೆಲಿದು

ಜಗದೊಳುದ್ದಂಡ ರಾವುತನಾದ ದೇವನ ೨

ಆದಿಪೊಳ[ಕು] ಕ್ಷೀರಾಂಬುಧಿ ಮಥಸ್ನವ

ಆಡಿ ಕೂರುಮನಾಗಿ ಮತ್ತ ಹಿರಣ್ಯಕನ

ದಾಡೆಯಿಂದಲಿ ಸೀಳಿ ಜೋಡು ರೂಪವ ತಾಳಿ

ಬೇಡಿ ಮೂರಡಿ ನೆಲವ

ತೀಡಿ ಕ್ಷತ್ರಿಯರ ಸಂಹರಿಸಿ ಕಾಡೊಳು ಚರಿಸಿ

ಗಾಡಿಗಾತಿಯರ ಮನೆಯೊಳುಳ್ಯಾಡಿ ಸತಿಯರ ವ್ರತ-

ಗೇಡಿ ಭಕ್ತರಿಗೆ ಅಭಯವ ನೀಡಿ ಹೆಳವನಕಟ್ಟೆ

ಕಾಡುಗಲ್ಲಲ್ಲಿ ನಿಂತ ಕಲಿ ವೆಂಕಟೇಶನ ೩

 

ನೀಲಕಂಠ (ನು-೨):

೨೯

ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಪ.

ಮೂರು ಲೋಕ ಸಂಚಾರ ಕರುಣಾಸಾಗರ

ತೇಜಿಯನೇರಿ ಮೆರೆವನ ಅ.ಪ.

ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ

ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ

ಎನ್ನ ಪ್ರೇಮನ ೧

ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ

ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ ೨

ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ

ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ೩

 

ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ

ದೇವ ಬ್ರಾಹ್ಮರ ಮನ್ನಿಸುತಲೆ ರಾಜ್ಯವ ಆಳು ನೀ

ಸುತನ ಮುಂದಿಟ್ಟು ೧೫೧

ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ

ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ ೧೫೨

ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ

ನಾನು ಅಂಜಿ ಮಾನವರಪವಾದಕ್ಕೆ ದೇಹತ್ಯಾಗವನೆ

ಮಾಡುವೆನು ೧೫೩

ರಣದೊಳು ಬಿದ್ದರೆ ಜಗದೊಳು ಕೀರ್ತಿಯು

ಅಮರಲೋಕಕ್ಕೆ ವಶವಹರು

ಬರಿದು ಸಾಯುವರೆ ನಿನ್ನಂಥ ಪರಾಕ್ರಮಿ ಯಮನ

ಭಾಧೆಗೆ ಗುರಿಯಾಗಿ ೧೫೪

ಪೃಥುವೀಶರೊಳು ತಲೆ ತಗ್ಗಿಸಿದಂತಾಯಿತು

ವ್ಯರ್ಥವಾಯಿತು ಎನ್ನ ಬದುಕು

ಹೊತ್ತಿರಲಾರೆ ದೇಹವ ನೀಕ್ಷಣದಲಿ ಹತ್ಯೆ

ಮಾಡಿಕೊಂಬೆನೆಂದ ೧೫೫

ನಿಂದ್ಯಕೆ ಅಂಜಿ ನೀಗುವರೆ ಶರೀರವ ಹಿಂದಣ

ಕಥೆಯ ಕೇಳರಿಯಾ

ಇಂದ್ರಾದಿ ಮುನಿಗಳಿಗೆ ಬಂದಿತು ಅಪವಾದ

ಕುಂದನೊದ್ದವರಾರು ಜಗದಿ ೧೫೬

ತಾನೆ ಪುಟ್ಟಿಸಿದ ವಾಗ್ದೇವಿಯ ಕಮಲಜ

ಲಾವಣ್ಯ ಕಂಡು ಸೈರಿಸದೆ

ಮೂಜಗವರಿತು ಪಾಣಿಗ್ರಹಣ ಮಾಡಿದ

ಮೀರಿದರಾರೊ ಕಲ್ಪನೆಯ ೧೫೭

ಮುನಿಸತಿಯೆನದೆ ದೇವೇಂದ್ರ ತಾನಳುಕಿದ

ಸರ್ವಾಂಗದಿಂದ ಸುಂದರಿಯು

ಶಿಲೆಯಾಗಿ ಬಿದ್ದಳಾತನ ಸತಿ ಧರೆ ಮೇಲೆ ಮೃಗದ

ಲಾಂಛನೆಯ ತಾಳಿದನು ೧೫೮

ಗುರುಸತಿಯೆನದೆ ಅಂಬುಜಮಿತ್ರ ಅಳುಪಿದ

ಸೆರೆತಂದ ತಾರಾದೇವಿಯನು

ಮುನಿಗಳು ಅಮರರೊಡನೆ ಕಾದಿಗೆಲಿದರು ನರರ

ಪಾಡೇನು ಭೂಪಾಲ ೧೫೯

ಯಮನ ದಾಡೇಲಿಪ್ಪ ತೆರನಂತೆ ಕಾವಲು ನಿನ್ನ

ಕುಮಾರತಿಯ ಮಂದಿರಕೆ

ಮರುಳಗೊಂಡ್ಯೊ ಮಾನವೆಂದು ಈ ಸುದ್ದಿಯ

ಅರುಹಿದರಾರು ನಿನ್ನೊಡನೆ ೧೬೦

ಪರಿಪರಿ ದುಃಖದಿ ಹೊರಳುವ ರಾಯನ ಮನವ

ನಿಲ್ಲಿಸಿದ ಪ್ರಧಾನಿ

ತಿಳಿದು ಬಹೆನು ಕುಮಾರಿಯನೆಂದೆನುತಲೆ

ನಡೆತಂದ ಸೆಜ್ಜೆವಾಹರಿಗೆ ೧೬೧

ಉರಿ ಸೋಂಕಿದ ಕೆಂದಳಿರಂತೆ ಮುಖಬಾಡಿ

ಮಲಿನವನುಟ್ಟ ಮಾನಿನಿಯ

ಕಳೆಗುಂದಿ ನೆಲದಲ್ಲಿ ಬಿದ್ದ ಕುಮಾರಿಯ

ಸೆಳೆವಿಡಿದೆತ್ತಿದ ರಾಯ ೧೬೨

ಏಳವ್ವ ತಾಯಿ ಚಿಂತಿಸಲೇಕೆ ವರನ್ಯಾರು

ಮಾಜುವದೇಕೆ ಎನ್ನೊಡನೆ

ಧಾರೆಯನೆರೆದು ಕೊಡುವೆ ಕನ್ಯಾಚೋರಗೆ ದೇವ

ಬ್ರಾಹ್ಮರು ಮೆಚ್ಚುವಂತೆ ೧೬೩

ಮರೆತು ಮಲಗಿದ್ದಾಗ ಸುರರಡ್ಡಸುಳಿದರೊ

ಸುರರೊ ನರರೊ ಕಿನ್ನರರೊ

ಧರಣೀಶಗ್ಹೇಳಿ ಮಾಡುವೆ ನಿನ್ನ ಮದುವೆಯ

ಗಿರಿಜೇಶನಾಣೆ ಹೇಳೆಂದ ೧೬೪

ಎತ್ತಣ ಮದುವೆ ಮಾಡುವಿರೆನ್ನ ದೇಹವ

ಇತ್ತೆ ನಾ ಹವ್ಯವಾಹನಗೆ

ಮತ್ತೊಬ್ಬ ಪುರಷನ ಕೂಡಿ ಬಾಳುವಳಲ್ಲ

ವಿಶ್ವಲೋಚನನಂಘ್ರಿಯಾಣೆ ೧೬೫

ಹಗರಣವಾಯಿತು ಜಗಮೂರರೊಳಗೆಲ್ಲ ನಗುವರು

ಸರಿಯ ನಾರಿಯರು

ಸೊಗಸವು ನಿಮ್ಮ ವಾಕ್ಯವು ಎನ್ನ ಕರ್ಣಕ್ಕೆ ಹೊಗುವೆನು

ಉರಿವ ಪಾವಕನ ೧೬೬

ಶ್ವಾನ ಮುಟ್ಟಿದ ಭಾಂಡ ಬಾಹದೆ ನಿಳಯಕ್ಕೆ ದೇವ

ಬ್ರಾಹ್ಮರಿಗ್ಯೊಗ್ಯವಹುದೆ

ಮಾನಿನಿಯೆಂದು ಸ್ನೇಹದಲೆನ್ನನುಳುಹಲು ಹಾನಿ

ಬರುವುದು ನಿಮ್ಮ ಕುಲಕೆ ೧೬೭

ಪುತ್ರಿಯೆಂದು ಸ್ನೇಹದಲೆನ್ನ ಉಳುಹದೆ ಕೆಟ್ಟ

ಪಾತಕಿಯೆಂದು ತಿಳಿದು

ಎತ್ತಿ ಕೊಂಡ್ಹೋಗಿ ತುಂಬಿದ ನದಿಯೊಳಗೆ ಬಿಟ್ಟು

ಬರುವುದೆ ಉಚಿತವು ೧೬೮

ಮದುವೆಯ ಮಾಡಲಿಲ್ಲವೆಂದು ಎನ್ನೊಳು

ಮುನಿದು ಅರಣ್ಯಕ್ಹೋಗುವರೆ

ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು ೧೬೯

ಪಕ್ವವಾಯಿತು ಎನ್ನ ಪಾತಕ ಇಂದಿಗೆ ಹೊತ್ತೆನು

ಬರಿದೆ ನಿಂದ್ಯವನು (ಅ)

ಸತ್ಯವಾಗದು ಎನ್ನ ಆಡಿದ ವಾಕ್ಯವು ಮೃತ್ಯು

ಬಂದೊದಗಿದ ಮೇಲೆ ೧೭೦

ದೃಷ್ಟಿಸಿ ನೋಡಲು ದೃಷ್ಟಿತಾಕೀತೆಂದು ಎತ್ತಿ

ತೂಪಿರಿದು ಮಂತರಿಸಿ

ಇಷ್ಟು ಪರಿಯಿಂದಲೆಸಲಹಿದ ಮಗಳನು ಇತ್ತೆ ನಾ

ಘೋರ ಕಾನನಕೆ ೧೭೧

ಕಾರುಣ್ಯದಿಂದಲೆ ಸಲಹಿದ ಮಗಳನು ಅರಣ್ಯಕೆ

ಗುರಿಮಾಡಿ ನಾರಿ

ನಿನ್ನನಗಲಿ ನಾನೆಂತು ಜೀವಿಪೆನೆಂದು ತಾಯಿ

ಕಂಬನಿದುಂಬಿದಳು ೧೭೨

ಮಿಸುನಿಯ ಅಲಗೆಂದು ಬಸಿರೊಳಗಿಡುವರೆ

ವಶವಲ್ಲದಂಥ ಮೂಗುತಿಯ

ಹಸನಾಯಿತೆಂದು ಇಟ್ಟರೆ ನಾಸಿಕ್ಹರಿವೋದು

ಬಿಸುಸುಯ್ವದೇತಕೆ ತಾಯೆ ೧೭೩

ಏಳುತ್ತಲೊಮ್ಮೆ ಬಿಮ್ಮನೆ ತಾ ಮರುಗಿದಳು

ಕುಮಾರಿಯ ಮೇಲೆ ಸ್ನೇಹದಲಿ

ಆಲೋಚನೆ ಮಾಡುವ ಹಿರಿಯರ ಕಾಣೆನು ಹಾ

ವಿಧಿಯೆಂದ್ಹೊರಳಿದಳು ೧೭೪

ಉಲುಹ ಕೇಳಿದರೆ ಎಚ್ಚರ ‘ವಹರು’ ಜನರೆಲ್ಲ

ಅಳುವುದೇತಕೆ ತಾಯೆ ನೀನು

ಅರುಣನ ಉದಯವಾಗದ ಮುನ್ನ ಕಳುಹಿಸು

ಕಲ್ಮಾಡು ನಿನ್ನ ದೇಹವನು ೧೭೫

ರಾಯನು ಕರೆಸಿದ ತನ್ನ ಊಳಿಗದವರನು

ಹೇಳಿದನೇಕಾಂತದಲಿ

ಬಾಲೆಯನೊಯ್ದು ಅರಣ್ಯದಿ ಶಿರವರಿದುನಾಳೆ

ಉದಯಕೆ ಬನ್ನಿರೆಂದ ೧೭೬

ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ

ಅರಸನ ಮಗಳನು ಅರಣ್ಯದೊಳಗಿಟ್ಟು ಮರೆಸಿ

ಬನ್ನಿರಿ ಶೀಘ್ರದಿಂದ ೧೭೭

ರಾಯನ ಮಗಳನು ಅರಣ್ಯದೊಳಗಿಟ್ಟು

ಮಾಡಿರಿಮನಕೆ ಬಂದುದನು

ಬಾಲೆಯ ಮುದ್ರೆಯುಂಗುರ ತನ್ನಿ ಗುರುತಿಗೆ

ನಾನಿಡುವೆ ರಾಯನ ಮುಂದೆ ೧೭೮

ಏರಿದಳೊಜ್ರದಂದಣವ ಕುಮಾರಿಯು

ಮೇಲೆ ಪನ್ನಂಗ ಕವಿದವು

ವ್ಯಾಘ್ರ ಬಂದು ಹರಿಣನ ಕಚ್ಚಿ ಒಯಿದಂತೆ

ಶೀಘ್ರದಿ ಪೊತ್ತು ನಡೆದರು ೧೭೯

ಶಶಿಮುಖಿ ಮನದಲಿ ನಸುಬೆದುರಿಡುತಲೆ

ಬಸವಳಿದಳು ಶ್ರೀ ಹರಿಯ

ಅರಸುಮರ್ದನ ಗೋವಿಂದನೆ ಸಲಹೆಂದು

ಸ್ತುತಿಸುತಿರ್ದಳೆ ತನ್ನ ಮನದಿ ೧೮೦

ನೋಡದೆ ಎನ್ನವಗುಣವ ಪಾತಕಿಯೆಂದು

ಕಾಲನ ವಶಕೆÉ ಒಪ್ಪಿಸದೆ

ಕ್ಷೀರಾಬ್ಧಿಶಯನ ನಾರಾಯಣ ಹರಿ ನಿಮ್ಮ

ಪಾದಾರವಿಂದೊಳಿರಿಸು ೧೮೧

ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ

ಹಾದಿ ತಪ್ಪಿ ಹಳ್ಳಕೊಳ್ಳ ಕಾನನದೊಳು

ಬಾಲೆಯ ತಂದಿಳುಹಿದರು ೧೮೨

ಅಂದಣ ಇಳುಹಿ ಕೆಂದಳಿರ್ಹಾಸಿದರಾಗ ತಂಗಿ

ಬಾ ಬಳಲಿದೆಯೆನುತ

ಕುಂದಣಗಿಂಡೀಲಿ ತುಂಬಿಟ್ಟರುದಕವ

ರಂಭೆಯನುಪಚರಿಸಿದರು ೧೮೩

ಪುಷ್ಪ ಸೋಕಿದರೆ ಬಾಡುವ ಕೋಮಲಾಂಗವ

ತೊಪ್ಪಲ ಮೇಲ್ಹರಹಿದರು

ಅಚ್ಯುತಾನಂತ ಶ್ರೀ ಕೃಷ್ಣನೆ ಗತಿಯೆಂದು

ಕತ್ತಿಗೆ ಮಯ್ಯನಿಕ್ಕಿದಳು ೧೮೪

ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ

ಅಂಬುಜಮಿತ್ರ ಗೋವಿಂದನೆ ಗತಿಯೆಂದು ರಂಭೆ ತಾ

ಸ್ತುತಿಯ ಮಾಡಿದಳು ೧೮೫

ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು

ಪ್ರಹಲ್ಲಾದವರದ ಪಾಲಿಸಿದನು ಹಸುಳೆಗೆ ಮಾಯದ

ನಿದ್ರೆ ಕವಿದವು ೧೮೬

ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ

ನಿತ್ಯ ನಿರ್ಮಳ ಅಚ್ಯುತಾನಂತ ನರಹರಿ ಪೊಕ್ಕನೆ

ದೂತರ ಮನವ ೧೮೭

ಎತ್ತಿದರು ಕೊಲೆಘಟಿಕರಾಯುಧವನ್ನು ಮತ್ತೆ

ಯೋಚಿಸಿ ತಮ್ಮ ಮನದಿ

ಪುತ್ರಿಯ ಕೊಂದ ಪಾತಕ ತಮಗೆನುತಲೆ

ಎತ್ತಿದಾಯುಧವನಿಳುಹಿದರು ೧೮೮

ಗರ್ಭಾಂಗಿಯ ಕೊಂದರೆ ಪಾಪ ತಮಗೆಂದು

ಒಬ್ಬರೊಬ್ಬರು ಮಾತನಾಡಿ

ಕೊಬ್ಬಿದ ಮೃಗವ ಕಡಿದು ಶೋಣಿತವನ್ನು

ಉರ್ವೀಶಗೊಯ್ದು ಒಪ್ಪಿಸುವ ೧೮೯

ವ್ಯಾಘ್ರ ಕಾಡು ಕೋಣ ಮೃಗವಿದ್ದಯಡೆಯಲ್ಲಿ

ವಾರಿಜಗಂಧಿಯ ಬಿಟ್ಟು

ಜೀವಗಳಳಿದು ಅಯೋಧ್ಯಕ್ಕೆ ಬಂದರು

ರಾಯಗೆ ಗುರುತ ತೋರಿದರು ೧೯೦

ಕಪ್ಪೋಡಲಿನ ಪುಳಿಂದರು ಬಂದರು

ತಪ್ಪದೆ ರಾಯನೋಲಗಕೆ

ಹತ್ಯಮಾಡಿ ಬಂದೆವು ನಿನ್ನ ಕುಮಾರಿಯ

ಚಿತ್ತೈಸು ಜೀಯವಧಾನ ೧೯೧

ಕೊಂದು ಬಂದೆವು ನಿನ್ನ ಆತ್ಮಸಂಭವೆಯನ್ನು

ತಂದೆವು ಮುದ್ರೆಯುಂಗುರವ

ಕೊಂಡಿಳುಹಿದರು ನೆತ್ತರು ಪೂಸಿದಲಗನು ಕಂಡು

ಮನದಲಿ ಮರುಗಿದನು ೧೯೨

ಕುಂ(ಜವ)ಗಿಣಿಯನು ಪಂಜರದೊಳಗಿಟ್ಟು

ಅಂಜೂರ ಕೊಯ್ದು ಕೊಟ್ಟಂತೆ

ಕುಂಜರಗಮನೆಯ ಕೈಯಿಂದ ಕೊಲಿಸಿದೆ

ಬೆಂದೊಡಲನೆಂತು ಪೊರೆಯಲಿ ೧೯೩

ತುಂಬೂರಗೊಳ್ಳಿಯ ಒಲೆಯೊಳಗಿಟ್ಟಂತೆ

ಕೆಂಡದೊಳಾಜ್ಯ ಬಿದ್ದಂತೆ

ತಂದೆ ತಾಯಿ ಪ್ರಧಾನಿಪರಿವಾರವು

ಬೆಂದರು ಶೋಕಾಗ್ನಿಯಿಂದ ೧೯೪

ಇತ್ತಲಾರಾಯ ಹಂಬಲಿಸಿ ತಾನಳುತಿರೆ ಪುತ್ರಿಯ

ಮೇಲೆ ಸ್ನೇಹದಲಿ

ಹಕ್ಕಿ ಪಕ್ಷಿಯು ನಲಿದವು ಮೂಡüರಾತ್ರೇಲಿ

ತಲೆಯೆತ್ತಿದವಬ್ಜ ಬಂಧುಗಳು ೧೯೫

ಎಚ್ಚೆತ್ತು ನೋಡಿದಳಾಗ ಚಂದ್ರಾವತಿ ಸುತ್ತಲ

ಮೃಗದ ಸಂಚರವ

ಬಿಟ್ಟುಹೋದರು ಪಾತಕರೆನ್ನ ಅಡವೀಲಿ ತುತ್ತಾದೆ

ಹಸಿದ ಹೆಬ್ಬುಲಿಗೆ ೧೯೬

ಘುಡುಘುಡಿಸುವ ಸಿಂಹನಾದಕ್ಕೆ ಅಂಜುವಳು

ಬೆದರುವಳು ವ್ಯಾಘ್ರದಟ್ಟುಳಿಗೆ

ಮೊರೆವ ಸರ್ಪವ ಕಂಡು ನಯನವ ಮುಚ್ಚುವಳು

ಮರಳಿ ಧೈರ್ಯವನೆ ಮಾಡುವಳು ೧೯೭

ನಾನ್ಯಾರೊ ತಾಯಿ ತಂದ್ಯಾರೊ ಭಾವಿಸಿದರೆ

ಮಾಯಪಾಶಕೆ ಗುರಿಮಾಡಿ

ಮಾರಜನಕ ದಾನವಾರಿಯ ನೆನೆದರೆ ಅಹುದು

ಮುಕ್ತಿ ಸಾಧನವು ೧೯೮

ಜಲವ ಪೊಕ್ಕು ದೈತ್ಯನ ಸಂಹರಿಸಿದೆ ಅಜಗೆ

***