ರಾಗ: ಮೋಹನ ತಾಳ: ಆದಿ
ರಾಘವೇಂದ್ರಗುರುವೇ ನಿಮ್ಮಯ ಪಾದ
ಬಾಗಿನಮಿಪೆ ಸುರತರುವೇ ಪ
ಭಾಗವತರ ಭವರೋಗವ ಪರಿಹರಿಸಿ
ಭೋಗಿಶಯನನೊಳು ಅಗಾಧ ಭಕುತಿ ಕೊಡುವ ಅ.ಪ
ವರಮಂತ್ರಾಲಯದಿನೆಲಸೀ
ಬರುವ ಭಕುತರಭೀಷ್ಟಸಲಿಸೀ
ಹರಿಯ ಧ್ಯಾನದೊಳು ವೃಂದಾವನದೊಳಿಪ್ಪ
ಪರಮಯೋಗಿವರ್ಯ ಯತಿರಾಘವೇಂದ್ರ 1
ಕಂದ ಪ್ರಹ್ಲಾದನಾಗೀ ಕೃತಯುಗದಿ
ತಂದೆಗೆ ತೋರಿದೆ ಕಂಬದಿ ಹರಿಯಾ
ಮುಂದೆ ಯತಿವ್ಯಾಸರೆಂದೆನಿಸುತಾ
ಛಂದದಿ ಪೇಳಿದೆ ಮಧ್ವಮತ ಸಾರವಾ 2
ಮೂರೆರಡೊಂದುಶತವರುಷ
ಚಾರುವೃಂದಾವನದೊಳಿರುತಾ
ವಾರಿಜನಾಭ ಕಾಂತೇಶಪ್ರಿಯವಿಠಲನ
ಸಾರಿಭಜಿಪಗುರು ಭಾಗವತೋತ್ತಮ 3
***