..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ
ಶ್ರೀ ರಾಮಚಂದ್ರಾನುಜ ಭರತರಾಜ
ಶರಣಾದೆ ತವಚರಣಯುಗಳ ತೋಯಜಕೆ ಪ
ಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿ
ಇರುವೆ ನೀ ತದ್ರೂಪದಲಿ ಸೇವಿಸುತಲಿ
ಮಾರ ಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀ
ಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1
ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯ
ಕಡು ಕಷ್ಟ ಕೊಡಲಾಗ ಸುರರು ಮೊರೆಯಿಡಲು
ಕಡಲಶಯನನು ರಾಮ ಪ್ರಾದುರ್ಭವಿಸಲು ನೀನು
1ಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2
ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದ
ರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನ
ನೂಕಲು ವನಕೆ ನೀ ಬಂದರಿತು ಧಿಕ್ಕರಿಸಿ
ಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3
ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲು
ಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮ
ನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳು
ಆಗೆ ತಾ ಬರುವೆನು ಎಂದು ಪೇಳಿದನು 4
ದೇವ ಶ್ರೀ ರಾಮನ ಸುಖಜ್ಞಾನಮಯಪಾದ
ಸೇವಿಸಿ ಪ್ರೇಮಪ್ರವಾಹದಲಿ ನೀನು
ಬುವಿಯನು ಪವಿತ್ರ ಮಾಡುವ ಪಾದಪೀಠವನು
ನವವಿಧ ಭಕ್ತಿಯಲಿ ತಂದು ಪೂಜಿಸಿದೆ 5
ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದು
ಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆ
ಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದ
ಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6
ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನು
ಸುಖ ಪೂರ್ಣ ಸೀತಾಸಮೇತ ಬರುವುದನು
ನೀ ಕೇಳಿ ಮುದದಲಿ 1ಮಾತೇರು ಶತ್ರುಘ್ನ
ಭಕುತ ಪುರಜನ ಕೂಡ ಪೋದೆ ಕರೆತರಲು 7
ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದು
ನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿ
ಸ್ವಾಮಿ ರಾಮನು ನಿನ್ನ ಅಚಲ ಭಕ್ತಿಯ ಮೆಚ್ಚಿ
ಪ್ರೇಮದಿಂದಲಿ ನಿನಗಾಲಿಂಗನವನಿತ್ತ 8
ಸುರರ ನಗರೋಪಮವು ಸರೆಯೂ ತಟಿನಿಯಲ್ಲಿ
ಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾ
ಶ್ರೀರಾಮ ಸೀತಾಸಮೇತ ಪರಿವಾರ ಸಹ
ಪುರಿಯೊಳು ಬರಲು ಆನಂದ ಹೊಂದಿದರು 9
ಅಘದೂರ ಪೂರ್ಣಕಾಮನ ಮಂದಹಾಸವನು
ನರಜನರು ನೋಡಿ ಹಿಗ್ಗಿ ಘೋಷಿಸಲು
ಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀ
ರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10
ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದು
ಭರತರಾಯನೆ ನೀನು ಸೇವೆ ಅರ್ಪಿಸಿದೆ
ಸರಸಿಜೋದ್ಭವ ಲೋಕದಂತಾಯಿತೀ ಲೋಕ
ವರ ವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ 11
ಶರದಿಂದ ನೀನು ಗಂಧರ್ವರೂಪದಲಿದ್ದ
ಮೂರು ಕೋಟಿ ಕ್ರೂರ ಅಸುರರನು ಕೊಂದೆ
ಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊ
ಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12
ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿ
ಸುರರು ಮುನಿಗಣ ಮುಕ್ತಿಯೋಗ್ಯರ ಸಮೇತ
ತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನು
ಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13
ಗರುಡ ಮೃಡ ಶೇಷಸ್ಥ ಭಾರತೀಪತಿ ಹೃಸ್ಥ
ಪರಮ ಪೂರುಷ ಕೃತೀಪತಿಯು ಪ್ರದ್ಯುಮ್ನ
ಹರಿ ರಾಮನಲಿ ಸದಾ ಭಕ್ತಿಭರಿತನೆ ಭರತ
ವರ ನೀನು ಅಹಂಕಾರಿಕ ಪ್ರಾಣಾದ್ಯರಿಗೆ 14
ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನ
ವರಭಕ್ತ ವೃಂದ ಶಿರಮಾಣಿಕ್ಯ ಭರತ
ಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವ
ಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
***