Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಪ್ರಾರ್ಥನಾ ಭಾಗ ಸುಳಾದಿ
ರಾಗ ಕಾಂಬೋಧಿ
ಧ್ರುವತಾಳ
ಅಪೇಕ್ಷ ಎನ್ನದಿದೆ ಮತ್ತೊಂದಾವುದು ಇಲ್ಲ
ಅಪಾರ ಗುಣನಿಧಿ ಅವಧರಿಸೊ
ಭೂಪಾಲನಾಗುವದು ಎಂದಿಗೆಂದಿಗೆ ಒಲ್ಲೆ
ಕೌಪೀನವಿರಲಿ ಎನಗೆ ಸಂತತದಲ್ಲಿ ಸ್ವಾಮಿ
ಕೋಪಾವೆ ಬೇರರಸಿ ಕಿತ್ತಿ ಕಡೆಗೆ ಮಾಡು
ಕಾಪಾಡು ಇದೆ ನಿನ್ನ ಬೇಡಿಕೊಂಬೆ
ತಾಪತ್ರಯಂಗಳು ತಾಳುವಂತೆ ಪ್ರೇರಿಸಿ
ಆಪತ್ತು ಕಾಲಕ್ಕೆ ಧೈರ್ಯವೀಯೊ
ಅಪವರ್ಗವೆ ಒಲ್ಲೆ ಅನುದಿನ ನಿನ್ನ ನಖ
ದೀಪದ ಬೆಳಗಿನಲ್ಲಿ ಲೋಲ್ಯಾಡಿಸೊ
ಶ್ರೀ ಪರಮಾತ್ಮನೆ ನಿನ್ನಲ್ಲಿ ವಿಶ್ವಾಸ -
ವಾ ಪುಟ್ಟುವಂತೆ ಸದಮತಿ ಪಾಲಿಸೊ
ಪಾಪ ಮಾರ್ಗಕ್ಕೆ ಎನ್ನ ಕೆಡಹಲಾಗದು ಚೆನ್ನ
ಊಪಾಯ ನಿನ್ನದೊಂದೆ ನಾಮ ಗತಿಗೆ
ಗೋಪಾಲಕೃಷ್ಣ ನಮ್ಮ ವಿಜಯವಿಠ್ಠಲ ನಾನಾ
ರೂಪನೆ ಸರ್ವದ ಮನಸು ನಿನ್ನದಾಗಲಿ ॥ 1 ॥
ಮಟ್ಟತಾಳ
ನಿನ್ನ ದಾಸರು ಪೊದ್ದ ವಸನವೆ ಎನಗಾಗಲಿ
ನಿನ್ನ ದಾಸರು ಉಂಡ ಎಂಜಲು ಎನಗಾಗಲಿ
ನಿನ್ನ ದಾಸರ ಪಾದೋದಕವೆ ಎನಗಾಗಲಿ
ನಿನ್ನ ದಾಸರು ಇಟ್ಟಾಭರಣವೆ ಎನಗಾಗಲಿ
ನಿನ್ನ ದಾಸರು ಚರಿಸಿದ ಉತ್ತಮ ಭೂಮಿ
ಪುಣ್ಯ ನಿಧಿಗಳೆಲ್ಲ ಎನಗಾಗಲಿ ದೇವ
ನಿನ್ನ ದಾಸರು ಪೇಳಿದ್ದದೆ ಮಹ ಉಪದೇಶ
ನಿನ್ನ ದಾಸರು ಕೇಳಿದ್ದದೆ ಎನಗೆ ಹರುಷ
ನಿನ್ನ ದಾಸರ ಮಾತು ಸಕಲ ಶ್ರುತಿ ವಚನ
ನಿನ್ನ ದಾಸರ ಲೀಲೆ ಎನಗೆ ಪುಷ್ಪದ ಮಾಲೆ
ನಿನ್ನ ದಾಸರ ಕರುಣಾ ಎನಗೆ ವಜ್ರ ಕವಚ
ನಿನ್ನ ದಾಸರ ಸಂದರುಶನವೆ ಲಾಭ
ನಿನ್ನ ದಾಸರ ಕೀರ್ತಿ ಎನಗೆ ಪರಮ ಸ್ಪೂರ್ತಿ
ನಿನ್ನ ದಾಸರ ಸಂಗ ಮಹದುರಿತ ಭಂಗ
ನಿನ್ನ ಭಕುತಿಗಿಂತ ನಿನ್ನ ದಾಸರ ಪಾದ
ವನ್ನಜದಲಿ ಭಕುತಿ ಎನ್ನಗದು ಬಲು ಪ್ರೀತಿ
ಮನ್ನಿಸು ಮೋಹನ್ನ ವಿಜಯವಿಠ್ಠಲ ಚನ್ನ
ಇನ್ನು ಇದಲ್ಲದೆ ಪ್ರತಿ ಮಾತುಗಳಿಲ್ಲ ॥ 2 ॥
ತ್ರಿವಿಡಿತಾಳ
ಅನುಭವವಾದ ಭಕುತಿ ಅನುಭವವಾದ ಜ್ಞಾನ
ಅನುಭವವಾದ ವಿರಕುತಿ ಇತ್ತು
ಅನುದಿನದಲಿ ನಿನ್ನ ದಾಸರ ದಾಸನ
ಅನುಗ್ರಹದಲಿ ಇದ್ದು ಇರಳು ಹಗಲು
ಅನುಚಿತ ಕರ್ಮದ ಹೊಳೆತ ಮರೆದು ಸದ
ಅನುಮಾನ ತೀರ್ಥರ ಮತದವರ
ಅನುಸರಿಸಿ ಪಂಚ ಭೇದವೆ ತಿಳಿದು ಆವಾಗ
ಅನುಗುಣ್ಯನಾಗಿ ಸುಮಾರ್ಗವಿಡಿದು
ಅನುಪತ್ಯ ಇದರೊಳು ಒಂದಕ್ಕಾದರೂ ಎನಗೆ
ಅನುಮಾನವಾಗದಂತೀಯೊ ಮನಸು
ಅನುಪಮ ಚರಿತ ಶ್ರೀವಿಜಯವಿಠ್ಠಲರೇಯ
ಅನುಜನಾಗಿ ಸುರಪತಿಯ ಕಾಯಿದ ದೇವ ॥ 3 ॥
ಅಟ್ಟತಾಳ
ಕರ ನಯನ ಕರ್ಣ ಚರಣ ವದನ ನಾಸ
ಮರಿಯಾದೆ ನಾಲಿಗೆ ತರುವಾಯ ನಾನಾ
ಪರಿ ಪರಿ ಇಂದ್ರಿಯ ಚರಿಸುವ ವ್ಯಾಪಾರಾ
ಪರಿಶುದ್ಧವಾಗಿ ಅಂತರ ಬಾಹಿರವೆಲ್ಲ
ಹರಿ ನಿನ್ನ ಪರವಾಗಿ ಇರಲಿ ಕೊಂಕಾಗದೆ
ದುರುಳ ತರುಳ ನಾನಾದರು ನೋಡಿ ದಯದಿಂದ
ಕರದು ನಿನ್ನವರೊಳು ಇರತಕ್ಕವನ ಮಾಡು
ಕರುಣಾಕರ ಮೂರ್ತಿ ವಿಜಯವಿಠ್ಠಲರೇಯ
ಚಿರಕಾಲದಲ್ಲಿ ಇಂಥ ವರವನ್ನೆ ಪಾಲಿಸು ॥ 4 ॥
ಆದಿತಾಳ
ಶಿಷ್ಟರ ಪಾಲಿಪದು ದುಷ್ಟರ ಬಡಿವದು
ಕಷ್ಟವಾದರು ಸಂತುಷ್ಟವಾಗಲಿ ಎನಗೆ
ಎಷ್ಟು ಭಯ ಬಂದರು ನಿಷ್ಠೆ ನಿನ್ನಲ್ಲಿ ಮನ
ಮುಟ್ಟಿ ದೊರಕಲಿ ಅರಿಷ್ಟ ದೂರಾಗಲಿ
ಇಷ್ಟಾರ ತರುವಾಯ ಪುಟ್ಟುವದಿದ್ದರೆ
ಭ್ರಷ್ಟಮಿಥ್ಯ ಮತದವರ ಹೊಟ್ಟೆಯೊಳಗಿಡದಿರು
ಕಷ್ಟದೊಳಗೆ ಎನ್ನ ಇಟ್ಟರೆ ಅದೆ ನಿತ್ಯ
ಮೃಷ್ಟಾನ್ನ ಉಂಡಂತೆ ಹೃಷ್ಟ ತೋರುವದಯ್ಯ
ಸೃಷ್ಟಿಯೊಳಗೆ ನಾನು ಎಷ್ಟು ಕಾಲ ಉಳ್ಳರು
ಮೆಟ್ಟಿಸದಿರು ಪಾಪದ ಬಟ್ಟಿ ಭಂಗವನು
ಕೃಷ್ಣ ಮೂರುತಿ ವಿಜಯವಿಠ್ಠಲ ವಿಶ್ವರೂಪ
ಇಷ್ಟಾರ್ಥ ಕೊಡು ಅದೃಷ್ಟ ನಾಮಕ ಹರಿ ॥ 5 ॥
ಜತೆ
ಮನೊ ವಾಚಾ ಕಾಯದಲ್ಲಿ ಕೃಷ್ಣನೆಂದೆಂಬೊ
ನೆನೆವೆ ಎನಗೆ ಇರಲಿ ವಿಜಯವಿಠ್ಠಲರೇಯ ॥
*******