ರಾಗ - : ತಾಳ -
ಚಿಕ್ಕ ತಿರುಪತಿವಾಸ - ಶ್ರೀ ವೆಂಕಟೇಶ ll ಪ ll
ಅಕ್ಕರದಿ ನೀನೆನ್ನ ತಕ್ಕೈಸಬೇಕೋ ll ಅ ಪ ll
ಕಕ್ಕಸದ ಭವದೊಳಗೆ l ಸಿಕ್ಕಿ ಬಲು ನೊಂದೆನೋ
ರಕ್ಕಸಾಂತಕ ಕೃಷ್ಣ l ಚಕ್ರ ಧರದೇವಾ
ಚೊಕ್ಕ ಮೂರುತಿ ಅಜನ l ಪೊಕ್ಕಳಿಂದಲಿ ಪಡೆದು
ಲಕ್ಕುಮಿಗೆ ಮೀರ್ದ ಪೊಂ l ಬಕ್ಕಿ ದೇರನೆ ಕಾಯೊ ll 1 ll
ಸಪ್ತ ಪ್ರಾಕಾರದಲಿ l ಆಪ್ತ ನೀ ನೆಲೆಸಿದ್ದು
ಗುಪ್ತ ಮಹಿಮನೆ ಜಗಕೆ l ವ್ಯಕ್ತನಾಗದಲೇ l
ಕ್ಲುಪ್ತಿಯಂದದಿ ಹವಿ l ರ್ಭೋಕ್ತೃ ಯಜ್ಞನಿಗೊಲಿದು
ವ್ಯಕ್ತನಾದೆಯೊ ಜಡದಿ l ಅವ್ಯಕ್ತ ಮೂರ್ತೇ ll 2 ll
ಕ್ಷಿತಿಪ ಜನಮೇಜಯ l ವಿಸ್ತರಿಸಿ ಮಂಟಪವ
ಕ್ಷಿತಿಯಮರರೊಡಗೂಡಿ l ಅತುಳ ವಿಭ್ರವದಲೀ
ಕೃತಿಪತಿಯೆ ನಿನ್ನನೂ l ಸ್ತುತಿಗೈದು ಗತಿ ಪಡೆದ
ವಿತತ ಮಂಗಳ ಮೂರ್ತಿ l ಪ್ರತಿರಹಿತ ದೇವಾ ll 3 ll
ಭೂಮಿಪತಿ ವರಾಹ l ಸ್ವಾಮಿ ಪುಷ್ಕರಿಣ್ಯಾದಿ
ಆ ಮಹಾ ತೀರ್ಥಗಳ l ವೀಮಾನ ಸ್ಥಿತನಾ l
ಈ ಮನೋರೂಪದಲಿ l ನೇಮಾನುಸಂಧಾನ
ಕಾಮಿಸುವೆ ಶ್ರೀರಮಣ l ಭೂಮಿಗ್ವಲ್ಲಭನೇ ll 4 ll
ಸರ್ವಜಗ ಸೃಜಿಸುವನೆ l ಸರ್ವವನು ಲಯಿಸುವನೆ
ಸರ್ವಕುತ್ತಮನೆನಿಪೆ l ಶರ್ವವಂದ್ಯಾ l
ಸರ್ವಪ್ರೇರಕ ನೀನೆ l ಸರ್ವ ಚೇಷ್ಟಕ ನೀನೆ
ಸರ್ವಸುಂದರ ಗುರೂ l ಗೋವಿಂದವಿಟ್ಠಲಾ ll 5 ll
***