ಶ್ರೀ ಗುರುಗೋಪಾಲದಾಸಾರ್ಯ ವಿರಚಿತ
" ಉದ್ಗೀಥ ಬ್ರಾಹ್ಮಣ - ಪ್ರಾಣದೇವರ ಪ್ರಮೇಯ ಸ್ತೋತ್ರ "
ರಾಗ : ಪೂರ್ವಿಕಲ್ಯಾಣಿ ಮಿಶ್ರಛಾಪು
ನೀನೇ ಸುರರಿಗೆ ಪ್ರಾಣನೊ
ನೀನೆ ಸುರರಿಗೆ ಪ್ರಾಣನೊ
ನೀನೆ ಭುವನ ತ್ರಾಣ ಜ್ಞಾನ
ಆನಂದಮಯ ಹರಿದಾಸವರಿಯಾ॥ಪ॥
ಯಜ್ಞದಲಿ ಸುರರು ಉದ್ಗಾನ ವಾಗಾಭಿಮಾನಿ
ಅಗ್ನಿಗೆ ಕೊಡಲುಪಕ್ರಮಮಾಡಲು
ವಿಘ್ನವನು ಅಸುರರು ಬಂದು ಮಾಡಲು ನಿಲ್ಲದೆ
ಭಗ್ನನಾಗಿ ಮಾಡಿ ಶಕ್ತನಾದ॥೧॥
ಜ್ಞಾನೇಂದ್ರಿಗಭಿಮಾನಿಯೆನಿಸುವ ನಾಸಿಕ
ಪ್ರಾಣಗೆ ಉದ್ಗಾನ ಸುರರು ಕೊಡಲು
ದಾನವರು ಬಂದು ವಿರೋಧವನು ಆಚರಿಸೆ
ಗಾನವನು ಮಾಡದೆಲೆ ಸುಮ್ಮನಿದ್ದಾ॥೨॥
ಸೂತ್ರಾಭಿಮಾನಿನಿ ದೇವತಿಗಳಿಗೆ ಉ-
ದ್ಗಾತ್ರವನ್ನು ಅನಿಮಿಷರು ಕೊಡಲು
ರಾತ್ರಿ ಅಭಿಮಾನಿಗಳು ತಡೆಗಟ್ಟಿ ವಶನಾಗಿ
ಸ್ತೋತ್ರವನು ಮಾಡಲಾರದೆ ನಿಂತನು॥೩॥
ಚಕ್ಷುರಭಿಮಾನಿ ಸೂರ್ಯಗೆ ಸುರರು
ಉದ್ಗಾನ ದೀಕ್ಷಿಯನು ಮಾಡಿ ನಿಯೋಗಿಸಿರಲು
ಮಕ್ಷುವಾಗಿ ರಾಕ್ಷಸರು ಬಂದು ತಡೆಗಟ್ಟಿ
ಅಕ್ಷಮನಾಗಿ ತದ್ವಶವಾದನು॥೪॥
ಮನಸ್ಸಿಗಭಿಮಾನಿ ಪುರುಹೂತ ರುದ್ರಾದ್ಯರಿಗೆ
ಅನಿಮಿಷರು ಉದ್ಗಾನವನ್ನೇ ಕೊಡಲು
ಸೆಣಿಸಿ ಅಸುರರು ಬಂದು ವಿಘ್ನಮಾಡಲು ಶಿಲ್ಕಿ
ಕೊನೆಗಾಣದೆಲೆ ಸುಮ್ಮನಾದರಾಗ॥೫॥
ಆರಿಂದ ನಿರ್ವಾಹ ಕಾಣದೆಲೆ ಸುರರು ನಿ-
ನ್ನಾರಾಧಿಸಲು ವಲಿದು ಹರಿಯ ನೆನೆದು
ಆರಂಭವನು ಮಾಡಿ ಯೋಗ್ಯದಲಿ ಉದ್ಗಾನ
ಪಾರಗಾಣಲು ಖಳರು ಬಂದರಾಗ॥೬॥
ಸಿಟ್ಟಿನಲಿ ಅಸುರರು ಬಂದು ನಿನ್ನನು ಸೋಕೆ
ಬೆಟ್ಟಕೆ ಲೋಷ್ಠವನು ಬಿಗಿದ ತೆರದಿ
ನಷ್ಟರಾಗಿ ಖಳರು ದಶದಿಶೆಗೆ ಓಡಿದರು
ಹೃಷ್ಟಮನದಲಿ ಸುರರು ಜಯವೆಂದರು॥೭॥
ಅಯಾಸ್ಯ ಅಂಗಿರಸ ಆಖಣಾಶ್ಮನೆ ಮುಖ್ಯ
ರೈರಮಣ ಸಾಮ ಔದಾರ್ಯ ಶೌರ್ಯ
ಧೈರ್ಯ ಪರಿಪೂರ್ಣ ಜಯಜಯವೆಂದು ಅನಿಮಿಷರ
ಕೈಯ ಸ್ತೋತ್ರ ಕೊಂಡ ಮಹಾ ಮಹಿಮನೆ॥೮॥
ತುಷ್ಟನಾಗಿ ಸುರರಿಗೊಲಿದು ಯಜ್ಞದಿ ಅವರ
ಇಷ್ಟ ಭಾಗವನ್ನೇ ತ್ರಿವಿಷ್ಟಪವನು
ಕೊಟ್ಟು ಪಾಲಿಸಿದೆ ಸುರರನು ಅಸುರ ತತಿಗಳನ
ಹಿಟ್ಟುಮಾಡಿ ವಗೆದೆ ಅಸಮ ಪ್ರಾಣಾ॥೯॥
ಪರಮ ರಹಸ್ಯವಿದು ಅಜಗೆ ಹರಿ ಪೇಳಿದನು
ಪರಮೇಷ್ಠಿ ಒಲಿದು ಸೂರ್ಯಗೆ ಪೇಳಿದಾ
ಕರುಣಿಸಿ ಯಾಜ್ಞವಲ್ಕರಿಗೆ ಭಾನು ಪೇಳಿದನು
ಅರಿದೇನಿದು ಉದ್ಗೀಥ ಬ್ರಾಹ್ಮಣರಲ್ಲೇ॥೧೦॥
ಪ್ರಾಣ ಶ್ರೀರಮಣ ಗುರುಗೋಪಾಲವಿಠಲ
ತನಯ ಆರು ಈ ವಿದ್ಯದಲಿ ನಿನ್ನ ಭಜಿಸೆ
ದಾರಿದ್ರ್ಯ ಭಯ ರೋಗ ದುಃಖ ಬಂಧವ ಕಳದು
ಆರೋಗ್ಯ ಅಖಿಳ ಸಂಪದ ಅಮೃತ ಫಲವೀವೆ॥೧೧॥
****