ನರಸಿಂಹವಿಠಲ ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ತಪ್ಪೆಣಿಸುವರೇನೋ | ತಾಮರದಳಾಕ್ಷ
ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ
ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ
ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ
ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ
ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ 1
ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ
ಅಂತರದಿ ನಿನ್ನೊಮ್ಮೆ ನೆನೆದನೇ ನೋ
ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ
ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ 2
ನಾಮಾಡಿದಪರಾಧ ನೀಕ್ಷಮಿಸದಿದ್ದರೆ
ಯಾರು ಪೊರೆವರೊ ಎನ್ನ ವಾರಿಜಾಕ್ಷ
ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ
ಇನ್ನೇನು ಮಾಡಿದರು ಮಾಡೋ ನೀನು 3
***