..
ಸತ್ಕವೀಂದ್ರ ಬಾಬೇಂದ್ರೆ ಸುಗುಣಸಾಂದ್ರ ಪ.
ನಮ್ಮ ಮಾನವಿ ಸ್ಥಳದಿ ಅಚ್ಚಗನ್ನಡ ನುಡಿಯ
ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ
ನಿಮ್ಮ ಬರುವಿಗೆ ಬಯಕೆ ಇಮ್ಮಡಿಸಿದೆಮಗೆ
ಸಮ್ಮತಿಸಿ ಬಾರಯ್ಯ ಸತ್ಕವೀಂದ್ರ ಶ್ರೀ ಬೇಂದ್ರೆ ಸುಗುಣೇಂದ್ರ 1
ಅಚ್ಚಗನ್ನಡ ತಾಯಿಗಚ್ಭದ ಮನೆಂದು
ಹೆಚ್ಚಾಗಿ ನಿಮ್ಮನ್ನು ಮೆಚ್ಚುವೆವೋ
ಮುಚ್ಚುಮರಿಯಾಕೆ ಈ ಉತ್ಸವಕೆ ಬರದಿರೆ
ಮೆಚ್ಚುವಳೆ ವಾಗ್ದೇವಿ ಸತ್ಕವೀಂದ್ರ 2
ದಾತರಾದವರಾರ್ತರಾತುರದಿ ತ್ವರದಿಂದ
ಪ್ರೀತಿಯಲಿ ಪೂರ್ತಿಸಲು ಒಪ್ಪಿರೆಂಬಾ
ನೀತಿ ಮಾತನು ನೀ ತಿಳಿಯದಾತನೆ
ಹಾತೊರೆಯುತಿದೆ ಮನವು ಸತ್ಕವೀಂದ್ರ 3
ಕನ್ನಡದ ನುಡಿ ಸುಧೆಯ ಕನ್ನಡಿಗರಿಗೆ ಬೀರಿ
ಕನ್ನಡ ನಾಡೆಂಬ ಪಾಲ್ಗಡಲಕೆ
ಜೇನ್ನೊಡಲನೆಂದೆನಿಸಿ ಕನ್ನಡಿಗರಿಂ
ಮನ್ನಣೆಯ ಪಡೆದಂಥ ಸತ್ಕವೀಂದ್ರ 4
ಉಸಿರಲೆನ್ನಯ ಮತಿಗೆ ವಶವಲ್ಲವೈನಿನ್ನ
ರಸವತ್ಕವಿತಾ ಪ್ರತಿಭಾಚಾರ್ತುರ್ಯವಾ
ಹೊಸಗನ್ನಡ ನುಡಿ ರಸದ ಮಾಧುರ್ಯಮಂ
ರಸಿಕರಿಗೆ ನೀ ನೀಡು ಸತ್ಕವೀಂದ್ರಾ 5
ಕನ್ನಡ ನುಡಿ ಸಾರಿ ಕನ್ನಡಕುಪಕಾರಿ
ಕನ್ನಡದ ಜಯಭೇರಿ ಹೊಡೆದ ನಗಾರಿ
ಕನ್ನಡದ ಹೊಸ ಸಿರಿಯು ಕನ್ನಡ ರಸಝರಿಯು
ನಿನ್ನಿಂದ ಲಭಿಸಿತೈಸತ್ಕವೀಂದ್ರಾ6
ನಿನ್ನಿಂದ ಕನ್ನಡದ ಮ್ಲಾನತೆಯು ದೂರಾಯಿತು
ನಿನ್ನಿಂದ ನಮಕವನ ಕವಲೊಡೆದು ಸರ್ವತ್ರ
ಉನ್ನತೆಯ ನೈದಿತೈ ಸತ್ಕವೀಂದ್ರಾ 7
ವೃತ್ತಪತ್ರಿಕೆಗಳಲಿ ಮತ್ತೆ ಸಮ್ಮೇಳನದಿ
ನಿತ್ಯ ಓದುವ ಮನೆ ಶಾಲೆಯಲ್ಲಿ
ಚಿತ್ತಪೂರ್ವಕ ನಿನ್ನ ಉತ್ತಮೋತ್ತಮ ಕವನ
ಮತ್ತೆ ಪೇಳುವರು ಸತ್ಕವೀಂದ್ರಾ8
ನುಡಿಯಣ್ಣನೊಲುಮೆಯೋ | ನುಡಿಯೊಡೆಯನನುಗ್ರಹವೋ
ಪಡೆದ ಮಾತೆಯ ಜೀತನೋಪಿ ಫಲವೋ
ಕಡು ಸರಳ ಬಿಡಿವೃತ್ತ ಸಡಗರದಿ ರಚಿಸುತ್ತ
ಪೊಡೆವಿಯೊಳು ಪಸರಿಸಿದ ಸತ್ಕವೀಂದ್ರಾ 9
ಪ್ರೇಮದಿಂದಲಿ ನಿನ್ನ ಪ್ರೇಮಿತಾರ್ಥವಗರೆದು
ಶಾಮಸುಂದರವಿಠಲ ಸಲಹೋ ಎಂದು
ನಾ ಮುದದಿ ಪ್ರಾರ್ಥಿಸುವೆ ನೀಮಾಡ್ವ ಉಪಕಾರ 10
***