ಶ್ರೀ ಗುರುಗೋಪಾಲವಿಠಲ ದಾಸರ ಕೃತಿ
ರಾಗ ಹಂಸಾನಂದಿ ಆದಿತಾಳ
ವರದೇಂದ್ರಗುರು ನಿಮ್ಮ ಚರಿಯ ಗುಣವೂ ।
ಧರೆಯೊಳಗೆ ಪರಿಪರಿ ಆಶ್ಚರ್ಯಾಯಿತು ನೋಡೆ ॥ ಪ ॥
ದಿನದಿನಕೆ ಅತಿಶಯವಿತರಣ ಗುಣವಧಿಕವಾಗೆ ।
ಅನಿಮಿಷಾದ್ರಿ ಸವೆದು ಸರಿಯಲಾಗಿ॥
ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ ।
ಘನ ಹರುಷದಲಿ ಕುಣಿದು ಕುಣಿದು ನಲಿದಾಡುವದು ॥ 1 ॥
ಹದಿನಾರು ಕಳೆಗಳಿಂದುಕ್ಕುವ ಉಡುರಾಜ ।
ಉದಿಸಿ ಅಂಬರ ಮಧ್ಯದಲಿ ನಿಂತು ॥
ಮುದನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ ।
ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ ॥ 2 ॥
ತಾನೇ ಜಗಕೆಲ್ಲ ಒಬ್ಬನೆ ಗುರುವೆನಿಸಿದ । ಗೀರ್ವಾಣರಾಚಾರ್ಯನಿರಲು ಈಗ ॥
ಕ್ಷೋಣಿಯೊಳು ನಿಮ್ಮ ಗುರುತ್ವದ ಮಹಿಮೆಯ ಕಂಡು ।
ತಾನಿಲ್ಲದೆಲೆ ನಾಕವಾಸಮಾಡಿದ ಮುದದಿ ॥ 3 ॥
ಕುಂಡಲೀಶನು ಸಕಲ ಭುವನದೊಳಗೆ ತಾನೆ ।
ಪಂಡಿತನೆಂದು ಒಪ್ಪಲು ಈಗ ಭೂ - ॥
ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು ।
ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದನೋ ॥ 4 ॥
ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ ।
ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು ॥
ಎರಡು ಕಂಗಳು ಸಾಲದೆಂದು ಹರುಷದಲಿ ।
ಸಾವಿರನಯನ ಧರಿಸಿ ನೀಕ್ಷಿಸುತಿಹ್ಯ ಬೆರಗಾಗಿ ॥ 5 ॥
ಆವ ಜನುಮದ ಸುಕೃತ ಫಲಿಸಿತೋ ಎನಗಿಂದು ।
ಆವ ಹಿರಿಯರು ವೊಲಿದು ಕರುಣಿಸಿದರೋ ॥
ಕೋವಿದಾಗ್ರಣಿ ಹರುಷದಿ ಎನ್ನ ನೋಡಲು ।
ಕೇವಲ ಧನ್ಯನಾದೆನು ಇವರ ಕರುಣದಲಿ ॥ 6 ॥
ಗುರುಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।
ಹರಿಯಾಕ್ಷನೆನಿಸಿ ಧರೆಯಲಿ ಮ್ಯೆರವುತಾ॥
ಮರುತ ಗುರುಗೋಪಾಲವಿಠ್ಠಲ ರಾಮವ್ಯಾಸರ ।
ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯೆರೆವಿ ॥ 7 ॥
**********
varadendra teertha rayara mutt yati 1785 stutih
" ಶ್ರೀ ಗುರುಗೋಪಾಲದಾಸರು ಕಂಡ ಶ್ರೀ ವರದೇಂದ್ರತೀರ್ಥರ ವೈಭವ "
ರಾಗ : ಕಾಂಬೋಧಿ ತಾಳ : ತ್ರಿವಿಡಿ
ವರದೇಂದ್ರ ಗುರು ನಿಮ್ಮ ಚರಿಯ ಗಣವೂ ।
ಧರೆಯೊಳಗೆ ಪರಿಪರ್ಯಾಶ್ಚರ್ಯಾಯಿತು ನೋಡೆ ।। ಪಲ್ಲವಿ ।।
ದಿನದಿನಕೆ ಅತಿಶಯ ವಿತರಣ ಗುಣಾಧಿಕವಾಗೆ ।
ಅನಿಮಿಷಾದ್ರಿ ಸವೆದು ಸರಿಯಲಾಗೀ ।
ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ ।
ಘನ ಹರುಷದಲಿ ಕುಣಿ ಕಿಣಿದಾಡಿ ನಲಿದಾಡುವುದು ।। ಚರಣ ।।
ಹದಿನಾರು ಕಳೆಗಳಿಂದುಕ್ಕುವ ಉಡುರಾಜ ।
ಉಡಿಸಿ ಅಂಬರ ಮಧ್ಯದಲಿ ನಿಂತು ।
ಮುದನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ ।
ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ ।। ಚರಣ ।।
ತಾನೇ ಜಗಕ್ಯೆಲ್ಲವೊಬ್ಬನೆ ಗುರುವೆನಿಸಿದ । ಗೀ ।
ರ್ವಾಣರಾಚಾರ್ಯನಿರಲು ಯೀಗ ।
ಕ್ಷೋಣಿಯೋಳು ನಿಮ್ಮ ಗುರುತ್ವದ ಮಹಿಮೆಯ ಕಂಡು ।
ತಾ ನಿಲ್ಲದಲೆ ನಾಕವಾಸ ಮಾಡಿದ ಮುದದಿ ।। ಚರಣ ।।
ಕುಂಡಲೀಶನೆ ಸಕಲ ಭುವನದೊಳಗೆ ತಾನೆ ।
ಪಂಡಿತನೆಂದುವೊಪ್ಪಲು ಈಗ । ಭೂ ।
ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು ।
ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದೆನೋ ।। ಚರಣ ।।
ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ ।
ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು ।
ಎರಡು ಕಂಗಳು ಸಾಲವೆಂದು ಹರುಷದಲಿ । ಸಾ ।
ವಿರ ನಯನ ಧರಿಸಿ ವೀಕ್ಷಿಸುತಿಹನು ಬೈರಗಾಗಿ ।। ಚರಣ ।।
ಆವ ಜನುಮದ ಸುಕೃತ ಫಲಿಸಿತೋ ಯೆನಗಿಂದು ।
ಅತಿ ಹಿರಿಯರುವೊಲಿದು ಕರುಣಿಸಿದರೋ ।
ಕೋವಿದಾಗ್ರಣಿ ಹರುಷದಿಂದ್ಯನ್ನ ನೋಡಲು ।
ಕೇವಲ ಧನ್ಯನಾದೆನು ಯಿವರ ಕರುಣದಲಿ ।। ಚರಣ ।।
ಗುರು ಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।
ಹರಿಯಾಕ್ಷನೆನಿಸಿ ಧರೆಯಲಿ ಮ್ಯರೆಯುತ ।
ಮರುತ ಗುರುಗೋಪಾಲವಿಠ್ಠಲ ರಾಮವ್ಯಾಸರ ।
ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯರೆವ ।। ಚರಣ ।।
****
ವಿವರಣೆ :
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧಿಪತಿಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಾದೀಂದ್ರತೀರ್ಥರ ಕರ ಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಸುಧೇಂದ್ರತೀರ್ಥರ ವರ ಪುತ್ರಕರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವರದೇಂದ್ರತೀರ್ಥರ ಪ್ರೀತಿಯ ಶಿಷ್ಯರು ಶ್ರೀ ಗುರುಗೋಪಾಲದಾಸರು.
ಶ್ರೀ ವರದೇಂದ್ರತೀರ್ಥರ ಜಗದ್ಗುರುತ್ವ - ದಾನ ಶೌಂಡತ್ವ - ಪರಮತ ನಿರಾಕಣ ಪೂರ್ವಕ ದ್ವೈತ ಮತ ಸಂಸ್ಥಾಪಕತ್ವ - ಶಿಷ್ಯ ಪೋಷಕತ್ವ - ಶ್ರೀ ರಾಮ ವ್ಯಾಸ ಚರಣಾರ್ಚನೆಯ ವೈಭವಾದಿ ಗುಣಗಳನ್ನು ಪ್ರತ್ಯಕ್ಷವಾಗಿ ನೊಡಿ ಸಂತೋಷ ಸಂಭ್ರಮಗಳನ್ನು ಹೊಂದಿದ ಶ್ರೀ ಮಠದ ಶಿಷ್ಯರೂ ಆದ ಶ್ರೀ ಗುರುಗೋಪಾಲದಾಸರು ಅವರನ್ನು ಸಂದರ್ಶನ ಮಾಡಿದಾಗ ಅವರ ಮೈಮನಗಳು ಉಬ್ಬಿ ಮಾಡಿದ ಸ್ತೋತ್ರವಿದು.
ಶ್ರೀ ವರದೇಂದ್ರತೀರ್ಥರು ಸತ್ಪಾತ್ರರಲ್ಲಿ ಮಾಡಿದ ಸುವರ್ಣವೇ ಮೊದಲಾದ ದಾನಾದಿಗಳು ಎಷ್ಟು ಅಧಿಕವಾಯಿತೆಂದರೆ....
ಬಂಗಾರದ ಪರ್ವತವಾದ - ದೇವತಾ ವಿಹಾರ ಯೋಗ್ಯವಾದ ಮೇರು ಪರ್ವತವೂ ಅವರ ನಿರಂತರ ಸುವರ್ಣ ದಾನದಿಂದ ಕರಿಗಿ ಹೋಯಿತು.
ಹೀಗಾಗಿ ಮೇರುವಿನ ಸುತ್ತಲೂ ಇರುವ ಮಾನಸೋತ್ರರ ಪರ್ವತದ ಮೇಲೆ ರಥದಲ್ಲಿ ಕುಳಿತು ಸೂರ್ಯನು ಸಂಚರಿಸುತ್ತಿರುವಾಗ ಈ ವರೆಗೆ ಮೇರು ಪರ್ವತ ತನ್ನ ಔನ್ನತ್ಯವನ್ನು ಸೂರ್ಯನಿಗೆ ಮರೆಯಾಗಿ ಇನ್ನೊಂದು ಭಾಗದಲ್ಲಿ ಕತ್ತಲಾಗಿರುತ್ತಿತು,
ಈ ಹಗಲೂ ರಾತ್ರಿಗಳೆಂಬ ವ್ಯವಸ್ಥೆಯಿಂದಾಗ ಸೂರ್ಯನಲ್ಲಿ ಅತ್ಯಂತ ಮಿತ್ರತನ ಹೊಂದಿದ ಚಕ್ರವಾಕ ಪಕ್ಷಿಗೆ ರಾತ್ರಿ ಕಾಲದಲ್ಲಿ ಸೂರ್ಯನ ದರ್ಶನಾದಿಗಳಿಲ್ಲದೆ ದುಃಖವಾಗುತ್ತಿದ್ದುದು.
ಈಗ ಮೇರು ಕರಗಿ ಸರಿದಿದ್ದರಿಂದ ಸೂರ್ಯನಿಗೆ ಮರೆ ಮರೆಯಾಗಿ ನಿರಂತರ ಚಕ್ರವಾಕ ಪಕ್ಷಿಗೆ ಸೂರ್ಯ ದರ್ಶನ ಆಗುವಂತಾಗಿ ಅದು ವಿಶೇಷವಾಗಿ ಹರ್ಷದಿಂದ ಕುಣಿ ಕುಣಿದು ನಲಿದಾಡುವಂತಾಯಿತಂತೆ.
ಚಂದ್ರನು ತನ್ನ ಮಗನಾದ ಬುಧನ ಸೌಂದರ್ಯ ಶ್ರೀ ವರದೇಂದ್ರತೀರ್ಥರ ಸೌಂದರ್ಯಾದಿ ಗುಣಗಳ ಮುಂದೆ ನಿಸ್ತೇಜವಾದುದನ್ನು ಕಂಡು ತಾನು ಕ್ಷಯಿಸಲು ಪ್ರಾರಂಭಿಸಿದನಂತೆ.
ಶ್ರೀ ವರದೇಂದ್ರತೀರ್ಥರ ಜ್ಞಾನ ಮತ್ತು ಗುರುತ್ವವನ್ನು ಕಂಡು ತಾವು ತಲೆಬಾಗಿ ಶ್ರೀ ಬೃಹಸ್ಪತ್ಯಾಚಾರ್ಯರು ಸ್ವರ್ಗದಲ್ಲಿ ಮತ್ತು ಶ್ರೀ ಶೇಷದೇವರು ಪಾತಾಳದಲ್ಲಿ ವಾಸ ಮಾಡಿದಂತೆ.
ಶ್ರೀ ವರದೇಂದ್ರತೀರ್ಥರ ಐಶ್ವರ್ಯಾದಿಗಳನ್ನು ನೋಡಲೋಸುಗವೇ ಶ್ರೀ ಇಂದ್ರದೇವರು ಸಹಸ್ರಾಕ್ಷರಾದರಂತೆ.
ಶ್ರೀ ಹರಿ ವಾಯುಗಳ ಸಹಜ ದ್ವೇಷಿಗಳು ಶತ್ರುಗಳೆಂಬ ಆನೆಗಳಿಗೆ ಶ್ರೀ ವರದೇಂದ್ರತೀರ್ಥರು ಸಿಂಹಸದೃಶರು.
ಶ್ರೀ ಮೂಲರಾಮ ಶ್ರೀವ್ಯಾಸರ ಅರ್ಚನೆಯ ಬಲದಲ್ಲಿ ನಿರುತ ಸುಖದಲ್ಲಿ ಮ್ಯರೆವ ನಿಮ್ಮನು ಕಂಡು ಪರಿಪರ್ಯಾಶ್ಚರ್ಯಾಯಿತುಯೆಂದು ಉದ್ಗಾರ ತೆಗೆದಿದ್ದಾರೆ!!
****