ರಾಗ ಸಿಂಧು ಭೈರವಿ ತಾಳ ಖಂಡ ಛಾಪು
ಮಂಗಳ ಪಂಡರಿವಾಸನಿಗೆ ಜಯ
ಮಂಗಳ ಇಟ್ಟಿಗೆ ನಿಲಯನಿಗೆ ಪ.
ಗೋಕುಲವಾಸಗೆ ಆಕಳ ಪಾಲಗೆ
ಲೋಕ ಲೋಕಗಳನ್ನು ಪೊರೆವನಿಗೆ
ಪಾಕಶಾಸನ ವಂದ್ಯ ರುಕ್ಮಿಣಿ ರಮಣಗೆ
ಲೋಕಮೋಹನ ಪಾಂಡುರಂಗನಿಗೆ 1
ಪಾಂಡವ ಪಾಲಕ ಪುಂಡಲೀಕನಿಗೊಲಿದು
ಪಂಡರಿಕ್ಷೇತ್ರದಿ ನೆಲಸಿದಗೆ
ತಂಡ ತಂಡದ ಭಕ್ತ ಮಂಡೆ ಸೋಕಿಸಿಕೊಂಬ
ಪುಂಡರೀಕ ಪಾದಯುಗಳನಿಗೆ 2
ಕಟಿಯಲ್ಲಿ ಕರವಿಟ್ಟು ಕೈಲಿ ಶಂಖವ ಪಿಡಿದು
ನಟನೆಗೈಯ್ಯುವ ವೇಷಧಾರಕಗೆ
ತಟಿನಿ ಚಂದ್ರಭಾಗೆ ತೀರದಿ ಮೆರೆಯುವ
ವಟುರೂಪಿ ಗೋಪಾಲಕೃಷ್ಣವಿಠ್ಠಲಗೆ 3
****