Showing posts with label ಅಂಬಿಕಾತನಯ ಭೂತಾಂಬ ಗಣಪತಿ ಸ್ತೋತ್ರ ತತ್ತ್ವಸುವ್ವಾಲಿ jagannatha vittala AMBIKATANAYA BHOOTAAMBA GANAPATI STOTRA TATWA SUVVALI. Show all posts
Showing posts with label ಅಂಬಿಕಾತನಯ ಭೂತಾಂಬ ಗಣಪತಿ ಸ್ತೋತ್ರ ತತ್ತ್ವಸುವ್ವಾಲಿ jagannatha vittala AMBIKATANAYA BHOOTAAMBA GANAPATI STOTRA TATWA SUVVALI. Show all posts

Saturday 14 December 2019

ಅಂಬಿಕಾತನಯ ಭೂತಾಂಬ ಗಣಪತಿ ಸ್ತೋತ್ರ ತತ್ತ್ವಸುವ್ವಾಲಿ ankita jagannatha vittala AMBIKATANAYA BHOOTAAMBA GANAPATI STOTRA TATWA SUVVALI

Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯವಿರಚಿತ    ತತ್ತ್ವಸುವ್ವಾಲಿ

ಶ್ರೀ ಗಣಪತಿ ಸ್ತೋತ್ರ

ಅಂಬಿಕಾತನಯ ಭೂತಾಂಬರಾಧಿಪ ಸುರಕ -
ದಂಬ ಸಂಪೂಜ್ಯ ನಿರವದ್ಯ | ನಿರವದ್ಯ ನಿನ್ನ ಪಾ -
ದಾಂಬುಜಗಳೆಮ್ಮ ಸಲಹಲಿ ॥ 1 ॥

ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಹಕ
ಭುಜಗಕಟಿಸೂತ್ರ ಸುಚರಿತ್ರ | ಸುಚರಿತ್ರ ತ್ವತ್ಪದಾಂ -
ಬುಜಗಳಿಗೆ ಎರಗಿ ಬಿನ್ನೈಪೆ ॥ 2 ॥

ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿ -
ಪತ್ತುಪಡಿಸುವ ಅಜ್ಞಾನ | ಅಜ್ಞಾನ ಬಿಡಿಸಿ ಮಮ
ಚಿತ್ತಮಂದಿರದಿ ನೆಲೆಗೊಳ್ಳೋ ॥ 3 ॥

ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿ -
ತ್ತಕೆ ತಂದು ಹರಿಯ ನೆನೆವಂತೆ | ನೆನೆವಂತೆ ಕರುಣಿಸೋ
ಅಕುಟಿಲಾತ್ಮಕನೆ ಅನುಗಾಲ ॥ 4 ॥

ಮಾತಂಗವರದ ಜಗನ್ನಾಥವಿಠ್ಠಲನ ಸಂ -
ಪ್ರೀತಿಂದ ಭಜಿಸಿ ಸಾರೂಪ್ಯ | ಸಾರೂಪ್ಯವೈದಿ ವಿ -
ಖ್ಯಾತಿಯುತನಾದೆ ಜಗದೊಳು ॥ 5 ॥
****


ಶ್ರೀ ಜಗನ್ನಾಥದಾಸ ವಿರಚಿತ ತತ್ತ್ವಸುವ್ವಾಲಿಯಲ್ಲಿ ಶ್ರೀ ವಿನಾಯಕ ಸ್ತುತಿ ...

ಅಂಬಿಕಾತನಯ 
ಭೂತಾಂಬರಾಧಿಪ । ಸುರಕ ।
ದಂಬ ಸಂಪೂಜ್ಯ ನಿರವದ್ಯ - 
ನಿರವದ್ಯ । ನಿನ್ನ ಪಾ ।
ದಾಂಬುಜಗಳೆನ್ನ ಸಲಹಲಿ ।। 1 ।।

ಗಜವಕ್ತ್ರ ಷಣ್ಮುಖಾನುಜ 
ಶಬ್ದ ಗುಣಗ್ರಾಹಕ ।
ಭುಜಗ ಕಟಿಸೂತ್ರ ಸುಚರಿತ್ರ - 
ಸುಚರಿತ್ರ । ತ್ವತ್ಪಾದಾ೦ ।
ಬುಜಗಳಿಗೆ ಎರಗಿ ಬಿನ್ನೈಪೆ ।। 2 ।।

ವಿತ್ತಪತಿಮಿತ್ರಸುತ -
ಭೃತ್ಯಾನುಭೃತ್ಯನ । ವಿ ।
ಪತ್ತು ಬಿಡಿಸುವ ಅಜ್ಞಾನ - 
ಅಜ್ಞಾನ । ಬಿಡಿಸಿ ಮಮ ।
ಚಿತ್ತ ಮಂದಿರದಿ ನೆಲೆಗೊಳ್ಳೊ ।। 3 ।।

ಕಕುಭೀಶ ನಿನ್ನ ಸೇವಕನ 
ಬಿನ್ನಪವ । ಚಿ ।
ತ್ತಕ್ಕೆ ತಂದು ಹರಿಯ ನೆನೆವಂತೆ - 
ನೆನೆವಂತೆ । ಕರುಣಿಸೋ ।
ಅಕುಟಿಲಾತ್ಮಕನೇ ಅನುಗಾಲ ।। 4 ।।

ಮಾತಂಗವರದ 
ಜಗನ್ನಾಥವಿಠಲನ । ಸಂ ।
ಪ್ರೀತಿಯಿಂದ ಸಾರೂಪ್ಯ - 
ಸಾರೂಪ್ಯ । ವೈದಿ ವಿ ।
ಖ್ಯಾತಯುತನಾದೆ ಜಗದೊಳು ।। 5 ।।
*
ಅಂಬಿಕಾ ತನಯ = ಪಾರ್ವತಿಯ ಮಗ
ಭೂತಾಂಬರಾಧಿಪ = ಬ್ರಹ್ಮಾಂಡಗತ ಭೂತಾಕಾಶಕ್ಕೆ ಅಭಿಮಾನಿ
ಸುರ ಕದಂಬ = ದೇವತೆಗಳ ಸಮೂಹ
ನಿರವದ್ಯ = ಪಾಪ ರಹಿತನಾದ ಮಂಗಳ ಮೂರ್ತಿ
ಗಜವಕ್ತ್ರ = ಆನೆಯ ಮುಖ ಉಳ್ಳವನು
" ಶಬ್ದ ಗುಣ ಗ್ರಾಹಕ "
ಆಕಾಶದ ಗುಣವು ಶಬ್ದ. 
ಶಬ್ದವನ್ನು ಶ್ರೋತ್ರೇ೦ದ್ರಿಯ ದ್ವಾರಾ ಮನಸ್ಸಿಗೆ ಮುಟ್ಟಿಸುವವನು. 
ಅಂದರೆ ಶಬ್ದಾಭಿಮಾನಿಯು ವಿನಾಯಕನು.
" ವಿತ್ತಪತಿಮಿತ್ರ ಸುತನು "
ಕುಬೇರನ ಮಿತ್ರ ಶ್ರೀ ರುದ್ರದೇವರು. ಶ್ರೀ ರುದ್ರದೇವರ ಮಗ ಗಣೇಶನು
" ಕಕುಭೀಶ "
ದಿಕ್ಕುಗಳನ್ನೇ ಸೀಮಾರೇಖೆಗಳನ್ನಾಗಿ ಉಳ್ಳ ಆಕಾಶಕ್ಕೆ ಅಭಿಮಾನಿ.
" ಮಾತಂಗವರದ "
ಕರಿರಾಜನನ್ನು ಸಂರಕ್ಷಿಸಿದ ಆದಿ ಮೂಲ ನಾಮಕ ಶ್ರೀ ಪರಮಾತ್ಮ
" ಸಾರೂಪ್ಯ "
ಶ್ರೀ ಹರಿಯ ಪರಮಾನುಗ್ರಹದಿಂದ ಸಾರೂಪ್ಯ ಮುಕ್ತಿಯನ್ನು ಶ್ರೀ ಗಣಪತಿಯು ಹೊಂದುವನು!!
***

ಜಗನ್ನಾಥದಾಸರು
ಅಂಬಿಕಾತನಯ ಭೂತಂಬರಾಧಿಪ ಸುರಕ
ನಿರವದ್ಯ ನಿರವದ್ಯ ನಿನ್ನ ಪಾ
ದಾಂಬುಜಗಳೆನ್ನ ಸಲಹಲಿ 1

2 ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿ
ತ್ತಕೆ ತಂದು ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ
ಅಕುಟಿಲಾತ್ಮಕನೆ ಅನುಗಾಲ 2

3 ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಾಹಕ
ಭುಜಗ ಕಟಿಸೂತ್ರ ಸುಚರಿತ್ರ | ಸುಚರಿತ್ರ ತ್ವತ್ಪಾದಾಂ
ಬುಜಗಳಿಗೆ ಎರಗಿ ಬಿನ್ನೈಪೆ 3

4ವಿತ್ತಪತಿ ಮಿತ್ರಸುತ ಭೃತ್ಯಾನುಭೃತ್ಯನ್ನ ವಿ
ಪತ್ತು ಬಡಿಸುವ ಅe್ಞÁನ | ಅe್ಞÁನ ಬಿಡಿಸಿ ಮಮ
ಚಿತ್ತ ಮಂದಿರದಿ ನೆಲೆಗೊಳ್ಳೊ 4

5ಮಾತಂಗ ವರದ ಜಗನ್ನಾಥವಿಠಲನ್ನ ಸಂ
ಪ್ರೀತಿಯಿಂದ ಸಾರೂಪ್ಯ | ಸಾರೂಪ್ಯವೈದಿ ವಿ
ಖ್ಯಾತ ಯುತನಾದೆ ಜಗದೊಳು 5
****


ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್, ದಾವಣಗೆರೆ.

ಶ್ರೀ ಜಗನ್ನಾಥದಾಸಾರ್ಯವಿರಚಿತ  ತತ್ತ್ವಸುವ್ವಾಲಿ

ನ ಮಾಧವ ಸಮೋ ದೇವೋ ನ ಚ ಮಧ್ವ ಸಮೋ ಗುರುಃ
ನ ತದ್ವಾಕ್ಯಸಮಂ ಶಾಸ್ತ್ರಂ ನ ಚ ತಜ್ಞಸಮಃಪುಮಾನ್॥

ಜಲಜೇಷ್ಟನಿಭಾಕಾರಂ ಜಗದೀಶಪದಾಶ್ರಯಮ್
ಜಗತೀತಲವಿಖ್ಯಾತಂ ಜಗನ್ನಾಥಗುರುಂ ಭಜೇ ॥

ಶ್ರೀ ಗಣಪತಿ ಸ್ತೋತ್ರ

ಅಂಬಿಕಾತನಯ ಭೂತಾಂಬರಾಧಿಪ ಸುರಕ-
ದಂಬಸಂಪೂಜ್ಯ ನಿರವದ್ಯ । ನಿರವದ್ಯ ನಿನ್ನ ಪಾ-
ದಾಂಬುಜಗಳೆಮ್ಮ ಸಲಹಲಿ ॥ 1 ॥

ಅರ್ಥ:- ಭೂತಾಂಬರಾಧಿಪ = ಭೂತಾಕಾಶದ ಅಭಿಮಾನಿಯೂ, ಸುರಕದಂಬಸಂಪೂಜ್ಯ = ದೇವಸಮೂಹದಿಂದ ಭಕ್ತಿಯಿಂದ ಪೂಜಿಸಲ್ಪಡುವವನೂ, ನಿರವದ್ಯ = ದೋಷರಹಿತನೂ ಆದ, ಅಂಬಿಕಾತನಯ = ಭೋ ಪಾರ್ವತೀಪುತ್ರ! ನಿನ್ನ ಪಾದಾಂಬುಜಗಳು = ನಿನ್ನ ಕಮಲಸದೃಶ ಪಾದಗಳು, ಎಮ್ಮ = ನಮ್ಮನ್ನು, ಸಲಹಲಿ = ರಕ್ಷಿಸಲಿ.

ವಿಶೇಷಾಂಶ :- (1) ಶ್ರೀಜಗನ್ನಾಥದಾಸಾರ್ಯರು, ತಾವು ರಚಿಸಲು ಉದ್ಯುಕ್ತರಾಗಿರುವ ಗ್ರಂಥದ ನಿರ್ವಿಘ್ನ ಪರಿಸಮಾಪ್ತಿಗಾಗಿಯೂ, ನಿರಂತರ ಹರಿಸ್ಮರಣೆಯ ಸಿದ್ಧಿಗಾಗಿಯೂ, ಮೊದಲು ಗಣಪತಿಯನ್ನು ಸ್ತುತಿಸುತ್ತಾರೆ.

(2) ಆಕಾಶ, ವಾಯು, ಅಗ್ನಿ, ಜಲ, ಭೂಮಿ ಇವು ಪಂಚಭೂತಗಳು. ಇವುಗಳಲ್ಲಿ ಒಂದಾದ ಆಕಾಶಕ್ಕೆ ಗಣಪತಿಯು ಅಭಿಮಾನಿದೇವತೆ. ತಾರತಮ್ಯದಲ್ಲಿ ಗಣಪತಿಯು ಮಿತ್ರತಾರಾದಿಗಳ ಕೆಳಗಿನ ಕಕ್ಷ್ಯದಲ್ಲಿದ್ದರೂ ಶ್ರೀಹರಿಯ ವಿಶೇಷಾನುಗ್ರಹದಿಂದ - ವರಬಲದಿಂದ, ಸ್ವೋತ್ತಮಸ್ವಾವರರಿಂದ ಸರ್ವ ಕಾರ್ಯಾರಂಭದಲ್ಲಿ ಪೂಜಿಸಲ್ಪಡುತ್ತಾನೆ. ಈತನ ಪೂಜೆಯಿಂದ ವಿಘ್ನಗಳು ನಾಶವಾಗಿ ಕಾರ್ಯಸಿದ್ಧಿಯೂ, ಪೂಜಿಸದಿರುವುದರಿಂದ ವಿಘ್ನಗಳು ಉಂಟಾಗುವುದರಿಂದಲೂ ವಿಘ್ನೇಶನೆಂದು ಪ್ರಸಿದ್ಧನಾಗಿರುವನು. ಆದುದರಿಂದಲೇ "ವಂದಿಸುವುದಾದಿಯಲಿ ಗಣನಾಥನ" ಎಂದು ಪುರಂದರದಾಸರು ಎಚ್ಚರಿಸಿದ್ದಾರೆ.

(3) ತತ್ತ್ವಾಭಿಮಾನಿಯಾದ್ದರಿಂದ ಬಂಧಕಪಾಪಗಳ ಲೇಪವಿಲ್ಲ. ಆದ್ದರಿಂದ ನಿರವದ್ಯನು. ಎಲ್ಲ ದೇವತೆಗಳೂ ಶ್ರೀಹರಿಯ ಪ್ರತಿಮೆಗಳು. ಗಣಪತಿಯೂ ಆತನ ಪ್ರತಿಮೆ. ಈತನ ಅಂತರ್ಯಾಮಿಯಾದ - ವಿಶ್ವಂಭರನು ಮುಖ್ಯನಿರವದ್ಯನು.


ಗಜವಕ್ತ್ರ ಷಣ್ಮುಖಾನುಜ ಶಬ್ದಗುಣಗ್ರಹಕ
ಭುಜಗಕಟಿಸೂತ್ರ ಸುಚರಿತ್ರ। ಸುಚರಿತ್ರ ತ್ವತ್ಪದಾಂ-
ಬುಜಗಳಿಗೆ ಎರಗಿ ಬಿನ್ನೈಪೆ ॥ 2 ॥

ಅರ್ಥ :- ಷಣ್ಮುಖಾನುಜ = ಕುಮಾರಸ್ವಾಮಿಯ ತಮ್ಮನೂ, ಶಬ್ದಗುಣಗ್ರಹಕ = ಶಬ್ದವೇ ಗುಣವಾಗುಳ್ಳ ಆಕಾಶವನ್ನು ಅಧೀನದಲ್ಲಿಟ್ಟುಕೊಂಡಿರುವವನೂ (ಆಳುವ ಅಭಿಮಾನಿದೇವತೆಯೂ), ಭುಜಗಕಟಿಸೂತ್ರ = ಸರ್ಪವನ್ನು ಸೊಂಟದಲ್ಲಿ ಬಿಗಿದಿರುವವನೂ, ಸುಚರಿತ್ರ = ಪಾವನಚರಿತ್ರನೂ ಆದ, ಗಜವಕ್ತ್ರ = ಹೇ ಆನೆಯ ಮುಖದಂತೆ ಮುಖವುಳ್ಳದೇವನೆ! ತ್ವತ್ಪದಾಂಬುಜಗಳಿಗೆ = ನಿನ್ನ ಪಾದಪದ್ಮಗಳಿಗೆ , ಎರಗಿ = ನಮಸ್ಕರಿಸಿ, ಬಿನ್ನೈಪೆ = ವಿಜ್ಞಾಪಿಸಿಕೊಳ್ಳುತ್ತೇನೆ.

ವಿಶೇಷಾಂಶ :- ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ಕ್ರಮದಿಂದ ಆಕಾಶ ಮೊದಲಾದ ಪಂಚಭೂತಗಳ ಗುಣಗಳು. ಆಕಾಶಾಭಿಮಾನಿಯಾದ್ದರಿಂದ ಅದರ ಗುಣವಾದ ಶಬ್ದವೂ ಗಣಪತಿಯ ವಶವೇ. ಕಿಂಚ, ಸ್ವತಂತ್ರ ನಿಯಾಮಕನಲ್ಲ. ತಾರತಮ್ಯದಲ್ಲಿ ಮೇಲಿರುವ ಎಲ್ಲರೂ ತಮ್ಮ ಕೆಳಗಿನವರಿಂದ ಅಭಿಮನ್ಯಮಾನವಾದ ತತ್ತ್ವಗಳಿಗೂ ನಿಯಾಮಕರೇ ಆಗಿರುವರು.

ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿ-
ಪತ್ತು ಪಡಿಸುವ ಅಜ್ಞಾನ । ಅಜ್ಞಾನ ಬಿಡಿಸಿ ಮಮ
ಚಿತ್ತಮಂದಿರದಿ ನೆಲೆಗೊಳ್ಳೋ ॥3॥

ಅರ್ಥ :- ವಿತ್ತಪತಿಮಿತ್ರ = ಕುಬೇರನ ಮಿತ್ರನಾದ ರುದ್ರದೇವನ, ಸುತ = ಮಗನಾದ ಹೇ ಗಜಮುಖ ! ನಿನ್ನ ಭೃತ್ಯಾನುಭೃತ್ಯನ = ದಾಸಾನುದಾಸನಾದ ನನ್ನನ್ನು , ವಿಪತ್ತು ಪಡಿಸುವ = ಆಪತ್ತಿಗೆ ಗುರಿಮಾಡುವ, ಆಜ್ಞಾನ = ಅಜ್ಞಾನವನ್ನು , ಬಿಡಿಸಿ = ಪರಿಹರಿಸಿ, ಮಮ = ನನ್ನ, ಚಿತ್ತಮಂದಿರದಿ = ಮನೋಮಂದಿರದಲ್ಲಿ, ನೆಲೆಗೊಳ್ಳೋ = ಸ್ಥಿರವಾಗಿ ವಾಸಿಸು.

ವಿಶೇಷಾಂಶ :- (1) 'ಕುಬೇರಸ್ತ್ರ್ಯಂಬಕಸಖಃ' (ಅಮರಕೋಶ) . ಶಿವನು ಕುಬೇರನ ಮಿತ್ರತನವನ್ನು ಇಟ್ಟುಕೊಂಡಿದ್ದಾನೆ.
(2) ವಿದ್ಯಾರಂಭದಲ್ಲಿ ವಿಶೇಷವಾಗಿ ಗಣಪತಿಯು ಪೂಜಿಸಲ್ಪಡುವನು. ವಿದ್ಯೆಯ ಸಿದ್ಧಿಗೆ ಅಜ್ಞಾನವೇ ವಿಘ್ನ; ಅದರ ಪರಿಹಾರ ವಿಘ್ನೇಶನಿಂದ.
(3) 'ನೆಲೆಗೊಳ್ಳೋ' ಎಂಬುದರಿಂದ ವಿಸ್ಮರಣೆ ಬರದಿರಲೆಂದು ಪ್ರಾರ್ಥನೆ.

ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿ-
ತ್ತಕೆ ತಂದು ಹರಿಯ ನೆನೆವಂತೆ । ನೆನೆವಂತೆ ಕರುಣಿಸೋ 
ಅಕುಟಿಲಾತ್ಮಕನೆ ಅನುಗಾಲ ॥4॥

ಅರ್ಥ :- ಕಕುಭೀಶ = ಹೇ ದಿಗಂತವ್ಯಾಪ್ತವಾದ ಪ್ರದೇಶದ (ಭೂತಾಕಾಶದ) ಒಡೆಯನೆ! ನಿನ್ನ ಸೇವಕನ = ನಿನ್ನನ್ನು ಸೇವಿಸುವ ನನ್ನ, ಬಿನ್ನಪವ = ಪ್ರಾರ್ಥನೆಯನ್ನು, ಚಿತ್ತಕೆ ತಂದು = ಮನಸ್ಸಿಗೆ ತಂದುಕೊಂಡು (ಪ್ರಸನ್ನನಾಗಿ), ಅಕುಟಿಲಾತ್ಮಕನೆ = ಭಕ್ತರನ್ನು ವಂಚಿಸದ ನೀನು, ಹರಿಯ = ಶ್ರೀಹರಿಯನ್ನು, ಅನುಗಾಲ = ಸದಾ, ನೆನೆವಂತೆ = ಸ್ಮರಿಸುವಂತೆ, ಕರುಣಿಸೋ = ಅನುಗ್ರಹಿಸು.

ವಿಶೇಷಾಂಶ:- ಮುಮುಕ್ಷುವು ಸಾಧಿಸಬೇಕಾದ ಅತ್ಯವಶ್ಯಕ ಕಾರ್ಯಗಳಲ್ಲಿ ನಿರಂತರ ಹರಿಸ್ಮರಣೆಯು ಪ್ರಧಾನವಾದುದು. ಈ ಮಹತ್ಕಾರ್ಯ ಸಿದ್ಧಿಯನ್ನು ಪ್ರಾರ್ಥಿಸುತ್ತಾರೆ.

ಮಾತಂಗವರದ ಜಗನ್ನಾಥವಿಟ್ಠಲನ ಸಂ-
ಪ್ರೀತಿಂದ ಭಜಿಸಿ ಸಾರೂಪ್ಯ । ಸಾರೂಪ್ಯವೈದಿ ವಿ-
ಖ್ಯಾತಿಯುತನಾದೆ ಜಗದೊಳು ॥5॥

ಅರ್ಥ :- ಮಾತಂಗವರದ = ಗಜರಾಜನಿಗೆ ಒಲಿದ, ಜಗನ್ನಾಥವಿಟ್ಠಲನ = ಜಗದೊಡೆಯನಾದ ಶ್ರೀಹರಿಯನ್ನು, ಸಂಪ್ರೀತಿಂದ ಭಜಿಸಿ = ಭಕ್ತಿಯಿಂದ ಉಪಾಸಿಸಿ, ಸಾರೂಪ್ಯ = ಸಮಾನರೂಪವನ್ನು , ಐದಿ = ಹೊಂದಿ, ಜಗದೊಳು = ಜಗತ್ತಿನಲ್ಲಿ, ಖ್ಯಾತಿಯುತನಾದೆ = ಪ್ರಸಿದ್ಧನಾಗಿರುವಿ.


ವಿಶೇಷಾಂಶ :- ಗಜೇಂದ್ರನನ್ನು ನಕ್ರನ ಬಾಧೆಯಿಂದ ಸಂರಕ್ಷಿಸಿದ ಶ್ರೀಹರಿಯೇ ಸಕಲ ಪ್ರಾಣಿದೇಹಗಳಲ್ಲಿದ್ದು 'ವಿಶ್ವ-ತೈಜಸ'ವೆಂಬ ನಾಮಗಳಿಂದ ಜಾಗ್ರದವಸ್ಥೆ ಮತ್ತು ಸ್ವಪ್ನಾವಸ್ಥೆಗಳಿಗೆ ಪ್ರೇರಕನಾಗಿರುವನು. ಈ ಉಭಯ ರೂಪಗಳು , ಪ್ರತಿಯೊಂದೂ ೧೯ ಮುಖಗಳುಳ್ಳದ್ದಾಗಿದ್ದು, ಅವುಗಳ ಮಧ್ಯದ ಮುಖವು ಗಜಮುಖವಾಗಿದೆ. ಶ್ರೀಹರಿಯ ಈ ರೂಪಗಳ ವರ್ಣನೆಯು ಮಾಂಡೂಕೋಪನಿಷತ್ತಿನಲ್ಲಿದೆ. ವಿಶ್ವ-ತೈಜಸರೂಪಧ್ಯಾನದಿಂದ ಗಣಪತಿಯು ಗಜಮುಖನಾದನೆಂದು ಮಾಂಡೂಕಭಾಷ್ಯದಲ್ಲಿ ಹೇಳಲಾಗಿದೆ. 'ವಿನಾಯಕಸ್ತು ವಿಶ್ವಸ್ಯ ಧ್ಯಾನಾದೈತ್ ಗಜವಕ್ತ್ರತಾಮ್ । ತಥಾ ತೈಜಸಧ್ಯಾನಾತ್....' (ಮಹಾಯೋಗ). ಆದ್ದರಿಂದ ಇಲ್ಲಿ 'ಸಾರೂಪ್ಯ'ವೆಂದರೆ ಸಾರೂಪ್ಯ ಮೋಕ್ಷವಲ್ಲ; ಶಿವನು ದ್ವಾರದಲ್ಲಿದ್ದ ವಿನಾಯಕನ ಶಿರಸ್ಸನ್ನು ಕತ್ತರಿಸಿ, ನಂತರ ದೂತರಿಂದ ಆನೆಯ ತಲೆಯನ್ನು ತರಿಸಿ, ದೇಹದೊಡನೆ ಜೋಡಿಸಿ ಉಜ್ಜೀವಿಸಿದನೆಂಬ ಪುರಾಣೋಕ್ತ ಕಥೆಯು, ಉಪಾಸನಾಫಲರೂಪವಾಗಿ ಬರಲಿದ್ದ ಸಾರೂಪ್ಯಕ್ಕೆ (ಸಮಾನರೂಪಕ್ಕೆ - ಗಜಮುಖದ ಪ್ರಾಪ್ತಿಗೆ) ನಿಮಿತ್ತವನ್ನು ಒದಗಿಸುವ ಸಲುವಾಗಿ ನಡೆದ ವೃತ್ತಾಂತವನ್ನು ನಿರೂಪಿಸುತ್ತದೆಂದು ತಿಳಿಯಬೇಕು.
ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್, ದಾವಣಗೆರೆ.
***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಶ್ರೀ ಗುರುಭ್ಯೋನಮಃ

ವಿಘ್ನವಿನಾಶಕನಾದ ಗಣೇಶನಿಗೆ  ಅಂತರ್ಗತ ವಿಶ್ವಂಭರ ನಾಮಕ ಪರಮಾತ್ಮನಿಗೆ ನಮಸ್ಕಾರ ಮಾಡಿ ಶ್ರೀ ಮಾನವೀ ಪ್ರಭುಗಳ ಹರಿಕಥಾಮೃತಸಾರದಂತೆ ಮತ್ತೊಂದು ಉತ್ಕೃಷ್ಟವಾದ ತತ್ವಸುವ್ವಾಲಿ ಯ ಅರ್ಥಾನುಸಂಧಾನವನ್ನು ಪತ್ಯಂತರ್ಗತ, ಗುರ್ವಂತರ್ಗತ, ಲಕ್ಷ್ಮೀ ವೆಂಕಟೇಶನ ಪದಗಳಲ್ಲಿ ಪ್ರಾರಂಭ ಮಾಡಲು ಅತ್ಯಲ್ಪ ಪ್ರಯತ್ನದ ಸಾಹಸ.. ಈಗಾಗಲೇ ಅಧಿಕಮಾಸದಲ್ಲಿ ನಮ್ಮ @⁨ಸುಗುಣಾ ಜಿ ಎಮ⁩  ರವರು ತತ್ವಸುವ್ವಾಲಿಯಲ್ಲಿನ 33 ಪದ್ಯಗಳ ವಿವರಣೆ ನೀಡಿದ್ದಾರೆ.. ಅಲ್ಲದೆ ನಮ್ಮ @⁨Nandini Sripad⁩  ಅವರು ಪ್ರಾಣದೇವರ ಚಿಂತನೆ, ತುಳಸಿ ಸ್ತುತಿ ಇತ್ಯಾದಿ ಭಾಗಗಳನ್ನು post ಮಾಡಿದ್ದಾರೆ ಮತ್ತೆ ಮುಂದಿನ ಭಾಗಗಳನ್ನು ಸಹಾ ... ಆದರೆ ನಾನು ನನ್ನ ಅಧ್ಯಯನಕ್ಕೆ ಮತ್ತೆ ಶುರೂ ಮಾಡುತ್ತಿದ್ದೆನೆ.  ಇಂದಿನಿಂದ  ಮತ್ತೆ  ಮೊದಲಿನಿಂದ ಪೋಸ್ಟ್ ಮಾಡಲು ಪ್ರಯತ್ನ ಮಾಡ್ತೆನೆ ಹರಿವಾಯುಗುರುಗಳ ಅನುಗ್ರಹದಿಂದ ಮಾತ್ರ ... 
ವಿಘ್ನರಾಜನು ನಿರ್ವಿಘ್ನವಾಗಿ ನಡೆಸಲಿ... 

ಶ್ರೀ ಜಗನ್ನಾಥದಾಸಾರ್ಯರು ಈ ತತ್ವಸುವ್ವಾಲಿಯನ್ನು ತಮ್ಮ ಸೊಸೆಯ ಮನಶ್ಶಾಂತಿಗಾಗಿ ರಚನೆ ಮಾಡಿದರೆಂದು ಎಲ್ಲರಿಗೂ ಗೊತ್ತಿದ್ದ ವಿಷಯ. ಆದರೇ ಅದು ದಾಸರ ಸೊಸೆಯರಿಗಂತಲೇ ಅಲ್ಲ. ಸಕಲ ಶಾಸ್ತ್ರ ತತ್ವಗಳನ್ನು , ಸಾರವನ್ನು ತುಂಬಿಸಿದಂತಹಾ ಈ ಸುವ್ವಾಲಿಯ ಪದ, ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಂತಹಾ ಗ್ರಂಥವಾಗಿದೆ.... ಸುವ್ವಾಲಿ ಪದಗಳಲ್ಲಿ ಶ್ರೇಷ್ಠವಾದ, ಹಾಗೂ ತತ್ವಗಳನ್ನು ತುಂಬಿಸಿದಂತಹದ್ದು, ತಾರತಮ್ಯ ಜ್ಞಾನವನ್ನು ಸರಳವಾಗಿ, ಸುಲಲಿತವಾಗಿ ತಿಳಿಸಿಕೊಡುವಂತದ್ದು ಈ ತತ್ವಸುವ್ವಾಲಿ ಕೃತಿ ...

ನಮ್ಮ  ಅನೇಕವಿಧವಾದ ತಾಪತ್ರಯಗಳು ಅರ್ಥಾತ್ ಆಧ್ಯಾತ್ಮಿಕ, ಆದಿಭೌತಿಕ   ಆದಿದೈವಿಕ ತಾಪತ್ರಯಗಳು ದೂರಮಾಡುವಂತದ್ದಾಗಿದೆ. ಲೌಕಿಕದಲ್ಲಿನ ಎಲ್ಲಾ ಭಯಗಳನ್ನು ದೂರಮಾಡುವದೂ ಆಗಿದೆ...  ಜ್ಞಾನ ಅಭಿವೃದ್ಧಿ ಮಾಡುವುದೇ  ಆಗಿದೆ, ಯಾವತ್ತು ನಮ್ಮಲ್ಲಿ ಜ್ಞಾನ ಅಭಿವೃದ್ಧಿ ಆಗ್ತದೆಯೋ ಆವತ್ತಿಗೆ ಭಗವಂತನಲ್ಲಿ ನಿಶ್ಚಲ ಭಕ್ತಿ ಹುಟ್ಟುವಮೂಲಕ ಎಲ್ಲಾ ತಾಪತ್ರಯಗಳು ದೂರವಾಗಿಯೇ ಆಗ್ತವೆ ಹೌದು....  ಹೀಗಾಗಿ ಮನಸಿಗೆ ನೆಮ್ಮದಿ ಕೊಡುವಂತಹಾ ಈ ತತ್ವಸುವ್ವಾಲಿಯ ಎರಡು, ಅಥವಾ ಮೂರು ನುಡಿಗಳಾದರು ದಿನಾ ಪಾರಾಯಣ ಮಾಡುವುದರಿಂದ ಸಕಲ ಕ್ಲೇಶಗಳಿಂದ ದೂರವಾಗುವೆವು ಎನ್ನುವುದರಲ್ಲಿ ಸಂಶಯವಿಲ್ಲ... 

ಈ ತತ್ವಸುವ್ವಾಲಿ ವಿವಿಧ ರಾಗಗಳಲ್ಲಿ ರಚಿತವಾಗಿರುವುದೂ ಒಂದು ವಿಶೇಷವಾಗಿದೆ. ನಮ್ಮ ಸಮೂಹದಲಿ ಇದರ ಶ್ರವಣ ಸಹಾ ಮಾಡಿದ್ದೇವು.. ಇಲ್ಲಿ ಮೊಟ್ಟಮೊದಲಿಗೆ ಆನಂದಭೈರವಿ ರಾಗದಲ್ಲಿ ಗಣಪತಿಯ ಸ್ತೋತ್ರ ಶ್ರೀ ಜಗನ್ನಾಥದಾಸಾರ್ಯರು ಮಾಡುತ್ತಿದ್ದಾರೆ.. 

ಅಂಬಿಕಾತನಯ ಭೂತಾಂಬರಾಧಿಪ ಸುರಕ-
ದಂಬ ಸಂಪೂಜ್ಯ ನಿರವದ್ಯ / ನಿರವದ್ಯ ನಿನ್ನ ಪಾ-
ದಾಂಬುಜಗಳೆಮ್ಮ ಸಲಹಲಿ //1//

  ಗಣಪತಿಯನ್ನು ಇಲ್ಲಿ ಭೂತಾಂಬರಾಧಿಪ - ಭೂತಾಕಾಶದ ಅಭಿಮಾನಿ ಅಂತಲೂ,
ಸುರಕದಂಬಸಂಪೂಜ್ಯ - ದೇವತಾವೃಂದದಿಂದ ಪೂಜಿಸಲ್ಪಡುವಂತಹಾ ಅಂತಲೂ
ನಿರವದ್ಯ - ದೋಷರಹಿತ
ಅಂಬಿಕಾತನಯ ಪಾರ್ವತಿಯ ಸುತನಾದ ಅಂತಲೂ ವಿಶೇಷಣಗಳಿಂದ ಸ್ತುತಿಸಿದ್ದಾರೆ ಶ್ರೀ ದಾಸಾರ್ಯರು.....

ಇಲ್ಲಿ ಶ್ರೀ ಜಗನ್ನಾಥದಾಸಾರ್ಯರು ತಮ್ಮ ಗ್ರಂಥದ ನಿರ್ವಿಘ್ನತ ಸಿದ್ಧಿಗಾಗಿ, (ಅಲ್ಲದೇ ತಮ್ಮ ಗುರುಗಳಾದ ಶ್ರೀ ಗೋಪಾಲದಾಸಾರ್ಯರು ಗಣಪತಿ ಅಂಶಜರಂತಲೂ) ಹರಿಯ ನಿರಂತರ ಸ್ಮರಣೆಗಾಗಿ ಮೊದಲು ಗಣಪತಿಯ ಸ್ತುತಿಯನ್ನು ಮಾಡ್ತಿದ್ದಾರೆ... ವಿಶೇಷವಾಗಿ ಶಾಸ್ತ್ರೋಕ್ತವಾಗಿಯೇ ಗಣಪತಿಯ ಸ್ತುತಿಯನ್ನು ಮಾಡ್ತಿದ್ದಾರೆ.. 

ಪಂಚಮಹಾಭೂತಗಳಲ್ಲಿ ಒಂದಾದಂತಹಾ ಭೂತಾಕಾಶಕ್ಕೆ ಅಭಿಮಾನಿ ದೇವತೆಯಾದ ಗಣಪತಿ,
ತಾರತಮ್ಯದೊಳಗೆ ಮಿತ್ರ,ತಾರಾಗಳಿಗಿಂತ ಕಡಿಮೆಯ ಕಕ್ಷ್ಯದಲ್ಲಿದ್ದರೂ ಪರಮಾತ್ಮನ ವಿಶೇಷವಾದ ಅನುಗ್ರಹದಿಂದ ಸರ್ವರಿಂದಲೂ ಅರ್ಥಾತ್ ಸ್ವೋತ್ತಮರಿಂದ, ಸ್ವ ಅವರರಿಂದ ಅಗ್ರ ಪೂಜೆಯನ್ನು ಸ್ವೀಕಾರ ಮಾಡುವ ದೇವತೆಯಾಗಿದ್ದಾನೆ... ಇಲ್ಲಿ  ಪೂಜಿಸುವರು ಅಂದರೇ ಗಣಪತ್ಯಂತರ್ಗತ ವಿಶ್ವಂಭರ ನಾಮಕನನ್ನು ಪೂಜಿಸುವರು ಅಂತ ಅರ್ಥ.... ಅಲ್ಲದೇ  ಯಾರು ತನ್ನ ಅಂತರ್ಗತ ಪರಮಾತ್ಮನ ಪೂಜೆ ಮಾಡ್ತಾರೋ ಅವರ ವಿಘ್ನಗಳನ್ನು ದೂರ ಮಾಡುವನಿದ್ದಾನೆ, ಯಾರು ತನ್ನನ್ನೇ ಸರ್ವೋತ್ತಮ ಎಂದು ಪೂಜಿಸುವರೋ ಅವರಿಗೆ ವಿಘ್ನಗಳನ್ನು ತಂದುಕೊಡುವನು ಗಣಪತಿ....

 ಅದಕ್ಕಾಗಿಯೇ ಶ್ರೀ ಪುರಂದರದಾಸಾರ್ಯರು ವಂದಿಸುವೆ ಆದಿಯಲ್ಲಿ ಗಣನಾಥನ ಅಂದಿದ್ದಾರೆ. ಅಲ್ಲದೇ ಸತತ ಗಣನಾಧಸಿದ್ಧಿಯ ನೀವಕಾರ್ಯದಲಿ ಅಂತಲೂ ಅಂದಿದ್ದಾರೆ. ಅಂದರೇ ಶ್ರೀ ಗಣಪತಿ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಶ್ವಂಭರ ನಾಮಕ ಪರಮಾತ್ಮನ ಪೂಜೆಯ ಮಾಡಬೇಕು ಅನ್ನುವ ಸೂಕ್ಷ್ಮವನ್ನೇ ತಿಳಿಸಿ ಹೇಳುವಂತೆ ವಿಘ್ನಗಳನ್ನು ದೂರಮಾಡುವ ಗಣಪತಿ ಅಂತರ್ಗತ ವಿಶ್ವಂಭರನೇ ಆಗಿದ್ದಾನೆ ಎನ್ನುವುದು ಸೂಕ್ಷ್ಮ ... ಹಾಗೂ ಗಣಪತಿಯು ತತ್ವಾಭಿಮಾನಿ ದೇವತೆಯಾದ್ದರಿಂದ ಆತನಿಗೆ ಪಾಪಗಳ ಲೇಪವಿಲ್ಲ.. ಹೀಗಾಗಿ ಇಲ್ಲಿ ನಿರವದ್ಯ ಅಂದಿದ್ದಾರೆ ದಾಸಾರ್ಯರು.....

ಎಲ್ಲಾ ದೇವತೆಗಳು ಪರಮಾತ್ಮನ ಪ್ರತಿಮೆಗಳು ಅಂದಮೇಲೆ ಗಣಪತಿಯೂ ಪರಮಾತ್ಮನ ಪ್ರತಿಮೆಯೇ ಆಗಿದ್ದಾನೆ.. ಇಲ್ಲಿ ದಾಸಾರ್ಯರು ನಿರವದ್ಯ ಅಂದರೆ ಮೊದಲಿಗೆ ಗಣಪತಿ ಅಂತರ್ಗತನಾದ ವಿಶ್ವಂಭರನು ನಿರವದ್ಯ ಆತನ ಅನುಗ್ರಹದಿಂದ  ಗಣಪತಿಯೂ ನಿರವದ್ಯನು ಅಂತಲೇ ಅರ್ಥೈಸಿದ್ದಾರೆ... ಯಾರಿಗೆ ನಮಸ್ಕಾರ ಮಾಡಿದರೂ ಅಂದರೇ ಹಿರಿಯರೇ ಮೊದಲು ಪರಮಾತ್ಮನ ವರೆಗೂ, ಹಾಗೂ ದೇವಸ್ಥಾನಕ್ಕೆ ಹೋದರೂ ಸಹಾ ಮುಖವನ್ನು ಮೊದಲು ನೋಡದೇ ಅವರ ಪಾದಗಳಿಗೆ ನಮಸ್ಕಾರ ಮಾಡಬೇಕು ನಂತರ ಪಾದಗಳಿಂದ ಮೇಲೆ ಮುಖದ ವರೆಗೂ ನಮಸ್ಕಾರ ಮಾಡಬೇಕು. ಅದಕ್ಕೇ ಇಲ್ಲಿ ಜಗನ್ನಾಥದಾಸರಂತಾರೆ ನಿರವದ್ಯನಾದ ಗಣಪತಿಯೇ, ಅಂದರೆ ಗಣಪತಿ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಹೇ ವಿಶ್ವಂಭರನಾಮಕ ಪರಮಾತ್ಮನೇ ನಿನ್ನ ಪಾದಗಳಿಗೆ ಅನಂತ ನಮಸ್ಕಾರಗಳು ಅಂತಾರೆ.... 
ಒಟ್ಟಿನಲ್ಲಿ ಭೂತಾಕಾಶದಭಿಮಾನಿಯೇ, ಸುರವೃಂದದಿಂದ ಪೂಜಿಸಲ್ಪಡುವಂತಹಾ, ನಿರವದ್ಯನಾದ ಅಂಬಿಕಾತನಯನಾದ ಗಣಪತಿಯೇ ನಿನ್ನ ಪಾದಗಳಿಗೆ ಅನಂತ ನಮಸ್ಕಾರಗಳು ಅಂತ ಅರ್ಥ... 

ಗಣಪತಿಯ ಈ ಸ್ಮರಣೆಯೊಂದಿಗೆ ಮೊದಲ ಶ್ಲೋಕದ ಅರ್ಥ ಮುಕ್ತಾಯ... ಈ ಅರ್ಥಾನುಸಂಧಾನ ಮೊದಲಿಗೆ 21 ಭಾಗ post ಮಾಡಿದ್ದೇನೆ ಆದರೆ ಅದು ಸಮಯಾಭಾವದಿಂದ ನಿಂತಿದೆ.. ಇಂದು ಮತ್ತೆ ಹರಿವಾಯುಗುರುಗಳ ಅನುಗ್ರಹದಿಂದ ಶುರೂ ಮಾಡಲು ಸಣ್ಣ ಪ್ರಯತ್ನ ಮಾಡಿದ್ದೆನೆ..  ನಿರ್ವಿಘ್ನವಾಗಿ ನಡೆಯಲೆಂದು ಗಣಪತ್ಯಂತರ್ಗತ ವೇದವ್ಯಾಸದೇವರನ್ನು ಬೇಡಿಕೊಳ್ಳುತ್ತಾ...

 ಶ್ರೀ ಕೃಷ್ಣಾರ್ಪಣಮಸ್ತು.... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***