Showing posts with label ಪ್ರಸ್ತವ ಮಾಡುವಂತೆ gopala vittala ankita suladi ಹರಿಸ್ವತಂತ್ರ ಸುಳಾದಿ PRASTAVA MAADUVANTE HARI SWATANTRA SULADI. Show all posts
Showing posts with label ಪ್ರಸ್ತವ ಮಾಡುವಂತೆ gopala vittala ankita suladi ಹರಿಸ್ವತಂತ್ರ ಸುಳಾದಿ PRASTAVA MAADUVANTE HARI SWATANTRA SULADI. Show all posts

Sunday, 8 December 2019

ಪ್ರಸ್ತವ ಮಾಡುವಂತೆ gopala vittala ankita suladi ಹರಿಸ್ವತಂತ್ರ ಸುಳಾದಿ PRASTAVA MAADUVANTE HARI SWATANTRA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಹರಿಸ್ವತಂತ್ರ ಸುಳಾದಿ 

( ಅನೇಕ ಜಡಚೇತನರ ನಾನಾ ಬಗೆ ವ್ಯಾಪಾರ ಹರಿಯಾಧೀನ ಚಿಂತನೆ , ಅಹಂಕರ್ತೃತ್ವಾಭಿಮಾನ ಬಂಧಕವು. ಬಂಧನಿವೃತ್ತಿಗೆ ಸೂತ್ರಧಾರನ ವ್ಯಾಪಾರ ತಿಳಿ. )

 ರಾಗ ಧನ್ಯಾಸಿ 

 ಧ್ರುವತಾಳ 

ಪ್ರಸ್ತವ ಮಾಡುವಂತೆ ಕರ್ತ ನಾನಲ್ಲವಯ್ಯ
ವಸ್ತು ಬೇರೆ ಇದ್ದಾನೆ ಒಳಗೊಳಗೆ ನೋಳ್ಪದು
ಪುಸ್ತಕವಲ್ಲವಿನ್ನು ಬಿಚ್ಚಿ ತೋರಿಸಲು
ವಿಸ್ತರಿಸಿ ನೋಡಿರಿ ವಿವೇಕರು
ಅಸ್ತಮಾನ ತನಕ ಆದ ಸೇವೆಗೊಂಬೊ ಗ್ರ -
ಹಸ್ತ ನಮಗೆಲ್ಲರಿಗೊಡಿಯ ಕಾಣೊ
ಹಸ್ತಕನ ಪಿಡಿದು ಕರ್ತೃ ಎನಗೆಂದರೆ
ಹುಸ್ತು (ಹುಸಿದು) ಹೋದಾವು ನಿಮ್ಮ ವಚನಂಗಳು
ಹೊಸ್ತಲ ಮುಂದೆ ನಿಂತು ಗೋವಿಂದನೆಂದರೆ
ವಸ್ತು ವೆನಿಸೊದೆ ತಾ ನಮಸ್ಕಾರಕ್ಕೆ
ಕಸ್ತೂರಿ ಭರಣಿ ವಳಗೆ ಪರಿಮಳ ಯೆಚದರೆ
ವಸ್ತು ಇದೆ ಎಂಬೊರೆ ಭರಣಿಯನು
ದುಸ್ತರ ಎಮಗೆ ಇದು ಆಸ್ತಿಕ ತನದಿ ನೋಡಿ
ಸ್ವಸ್ಥದಲಿ ಇಪ್ಪೋದು ಯೋಚಿಸದೆ
ಮಸ್ತ ವಾಹನ್ನ ಗೋಪಾಲವಿಟ್ಠಲನೆ ಸ -
ಮಸ್ತ ಮಾಡಿ ಮಾಡಿಸುವ ಬಗೆಯ ಕೇಳಿ ॥ 1 ॥

 ಮಟ್ಟತಾಳ 

ಒಂದು ಜೀವರಲ್ಲಿ ಕರ್ತನಾಗುವನು
ಒಂದು ಜೀವರಲ್ಲಿ ಭೋಕ್ತನಾಗುವನು
ಒಂದೊಂದು ಪದಾರ್ಥದಲ್ಲಿ ತಾನೇ ನಿಂದು
ಒಂದೊಂದು ರೂಪದಿ ಒಂದು ಆಗಿ ಬಂದು
ಒಂದಕ್ಕೊಂದು ಭೇದ ಒಂದು ವಿಷಯದಲ್ಲಿ
ಒಂದೆ ಒಂದಾಗುವ ಒಂದರಲ್ಲಿ ನೋಡೆ
ಒಂದರ ದ್ವಾರದಿ ಒಂದಕ್ಕೆ ಫಲವಿತ್ತು
ಒಂದರ ದ್ವಾರದಿ ಒಂದಕ್ಕೆ ಉಣಿಸುವ
ಒಂದರಲ್ಲಿಪ್ಪ ಒಂದರಲ್ಲಿ ಇಲ್ಲ
ಎಂದು ಆಡಲು ಸಲ್ಲ ಇಂದಿರೆ ಅರಸನ್ನ
ಒಂದೆ ದೈವ ನಮ್ಮ ಗೋಪಾಲವಿಟ್ಠಲ 
ವಂದಿಸಿ ತಿಳಿವರಿಗೆ ಆನಂದ ಬಡಿಸುವಾ ॥ 2 ॥

 ರೂಪಕತಾಳ 

ತಾ ಯೆಂದೆನಿಸಿ ಕೊಂಡು ತಾನೆ ತಾಹೂವಾನು (ತರುವನು)
ಬಾ ಎಂದೆನಿಸಿ ಕೊಂಡು ತಾನೆ ಬಾಹೂವಾನು (ಬರುವನು)
ಓ ಎಂದೆನಿಸಿ ಕೊಂಡು ತಾನೆ ಓಗುಟ್ಟುವಾ
ಕೋ ಎಂದೆನಿಸಿ ಕೊಂಡು ತಾನೆ ಕೊಂಬುವನು
ಅ ಎಂದು ಕ್ಷ ಎಂದು ಐವತ್ತೊಂದಕ್ಷರ
ಬಾಯಿಂದ ಉಚ್ಚರಿಸಿ ಕಾಯಶುದ್ಧಿಯ ಮಾಡಿ
ಮಾಯ ಪೊಂದಿಸದಂತೆ ತತ್ವಗಳ ತೋರಿಸಿ
ನ್ಯಾಯದಿಂದಲೇವೆ ಕರ್ಮಗಳ ಮಾಡಿಸಿ
ತಾ ಯಿಸು ಕೊಂಬವ ತಡವಿಲ್ಲದೆ ಭಕುತಿ
ಬಾಯ ಬಡಿಯ ಭಕ್ತರಿಂದ ಮಾಡಿದ ಕರ್ಮ
ಬಾಯ ಬಿಡುವ ಭಕ್ತರಲ್ಲದವರದಿನ್ನು
ನಾಯಕನಾಗಿ ಸರ್ವರಂತರದಿ ನಿಂತು
ನಿಯಾಮಕನಾಗಿ ನಿತ್ಯ ಕುಣಿಸ್ಯಾಡುವ
ಮಾಯಾ ರಹಿತ ದೇವ ಗೋಪಾಲವಿಟ್ಠಲ 
ತಾಯಿ ಆಲಿಸಿದಂತೆ ತನ್ನವರನು ಪೊರೆವ ॥ 3 ॥

 ಝಂಪೆತಾಳ 

ನಾನೆ ಕರ್ತನೆಂದು ನಾಲ್ಕು ದಿಕ್ಕುಗಳಿಂದ
ನಾನಾ ಪದಾರ್ಥಗಳನ್ನು ತರಿಸಿ
ಜ್ಞಾನವಿಲ್ಲದೆ ಯಜ್ಞ ಸ್ನಾನ ಗೋದಾನ ಭೂ -
ದಾನ ಹಿರಣ್ಯ ಭೂಸುರರಿಗುಣಿಸಿ
ನಾನಾ ವ್ರತ ಚಾಂದ್ರಾಯಣಾದಿ ತಪಸುಗಳಿನ್ನು
ಗಾನ ಗಾಯತ್ರಿ ಜಪ ಮೌನಗಳು
ಏನು ಏಸೊಂದು ಪರಿ ಕರ್ಮಗಳು ಮಾಡಿದರು
ಶ್ರೀನಿವಾಸನು ಇದರಿಂದೊಲಿವನೇ
ಏನು ಮಾಡಿದುದೆಲ್ಲ ವಿಧಿಯು ಆಶ್ರಮ ಧರ್ಮ
ಕಾಣದಿದರೊಳಗೆ ಹರಿ ಕಾಣಿಸುವದು
ಕಾಣದ ಕರ್ಮ ಅನಂತ ಮಾಡೊದಕ್ಕಿಂತ
ಜ್ಞಾನ ಪೂರ್ವಕದಿ ಗೆಲುವ ಯೋಚನೆ
ತಾನು ತನ್ನರಿತು ತವಕವ ಬೀಳದಲೆ
ಮಾನಸದಲಿ ಹರಿಗೆ ಮೊರಿಯ ಹೊಕ್ಕು
ನೀನು ಎನ್ನ ಸ್ವಾಮಿ ನಾನು ಭೃತ್ಯನೆಂದು
ಖೂನ ವರಿದನ ಕುಡತಿ ಜಲವ ಪಿಡಿದು
ದೀನ ರಕ್ಷಕನೆಂದು ದೈನ್ಯ ಬಟ್ಟಿತ್ತರೆ
ಏನೇನು ಇದಕೆ ಸಮಾನ ಉಂಟೇ
ದಾನವಾಂತಕನು ಗೋಪಾಲವಿಟ್ಠಲನನ್ನ 
ನೀನೆ ಗತಿ ಎಂದವರಿಗೆ ನಿಜವ ತಿಳಿಪುವ ॥ 4 ॥

 ತ್ರಿವಿಡಿತಾಳ 

ನಿತ್ಯದಿ ನಿಷ್ಕಾಮಕ ಕರ್ಮವ ಮಾಡೆ
ಪ್ರತ್ಯಕ್ಷನಾಗಿ ತಾ ನಿತ್ಯುಳ್ಳ ಫಲವೀವ
ಸತ್ಯ ಅದಕೆ ಫಲವಿತ್ತರೆ ತಪ್ಪನು
ಭಕ್ತರಿಚ್ಛಿಗನಾಗಿ ಬಹುವೇಗ ವೊಲಿವುವ
ಮತ್ತೊಂದು ಫಲಕಾಗಿ ಮತ್ತೆ ಕರ್ಮವು ಮಾಡೆ
ದೈತ್ಯರ ದ್ವಾರದಿ ಫಲವ ನೀವಾ
ನಿತ್ಯವಲ್ಲವು ಅದು ತತ್ಕಾಲಕೆ ಸುಖ
ಚಿತ್ತಜನಯ್ಯನ ಚರಿತೆ ಹೀಗೆ
ಭಕ್ತರಾದರು ಇಂಥ ಕರ್ಮ ಮಾಡಿದರೆ
ಕ್ಲಪ್ತಕೆ ಕಡಿಮಿಲ್ಲ ಅಧಿಕಾನಂದವು ಹ್ರಾಸಾ
ಉತ್ತಮ ಅಪರೋಕ್ಷ ಆದಮೇಲಕೆ ಇನ್ನು
ಆತುಮಾರ್ಥವಾಗಿ ಹಿಂದೆ ಮಾಡಿದ ಕರ್ಮ
ಜತ್ತಾಗಿ ಪ್ರಾರಬ್ಧವಾಗಿ ಉಣಿಸುವದು
ಮತ್ತೆ ಅದರಿಂದಲಿ ಮೀರಲೊಶವೆ
ಸತ್ಯಸಂಕಲ್ಪ ಗೋಪಾಲವಿಟ್ಠಲನ್ನ 
ಭಕ್ತರಿಗೆ ಕೇಡಿಲ್ಲ ಭಯವು ಇಲ್ಲ ॥ 5 ॥

 ಅಟ್ಟತಾಳ 

ಒಂದು ಫಲವು ಒಬ್ಬನಿಂದ ಆದರೆ ಇನ್ನು
ಎಂದಿಗವನ ಉಪಕಾರವ ಮರಿಯದು
ಬಂಧಕ ಎಮಗೆ ಅನಾದಿ ಕಾಲದಲಿಂದ
ಇಂದದ್ದು ತನ್ನ ಛಂದುಳ್ಳ ನೋಟದಿ
ಛಿಂದಿಸಿ ನಮ್ಮ ಆನಂದವ ಬಡಿಸುತ
ಹಿಂದೆ ಮುಂದೆ ಅನಿಮಿತ್ಯ ಬಂಧು ಆಗಿ
ಇಂದಿರಾಪತಿ ದಯಸಿಂಧು ಕರುಣಾಳು
ಕಂದರ್ಪಜನಕ ಗೋಪಾಲವಿಟ್ಠಲನ್ನ 
ಎಂದಿಗೆ ಮರಿಯೆ ನಾ ಮನಮಂದಿರದೊಳಗೆ ॥ 6 ॥

 ಆದಿತಾಳ 

ನೋಡಿ ಬಲ್ಲೆ ವಂದರಿಂದಲಿ ನೀಡಿ ಬಲ್ಲೆ ವಂದರಿಂದಲಿ
ಮಾಡಿ ಬಲ್ಲೆ ವಂದರಿಂದಲಿ ಬೇಡಿ ಬಲ್ಲೆ ವಂದರಿಂದಲಿ
ನೋಡಿದದಕೆ ಇನ್ನು ಸರಿದೈವವಿನ್ನು ಯಲ್ಲಿ ಗಾಣೆ
ನೀಡಿದದಕೆ ಈತ ನಿತ್ತ ಫಲಕು ಇನ್ನು ಸರಿಯು ಗಾಣೆ
ಮಾಡಿದದಕೂ ಈತ ತಿಳಿವಂತೆ ದೈವಿನ್ನೊಂದು ಕಾಣೆ
ಬೇಡಿದದಕೆ ತಾನೆ ವೊಲಿವಾ ಗಾಡಿಕಾರ ಗೋಪಾಲವಿಟ್ಠಲ ॥ 7 ॥

 ಜತೆ 

ಕರ್ತು ಎನಿಸುವ ನಮ್ಮ ಕರ್ತು ಮಾತ್ರನಾಗಿ
ಸೂತ್ರಧಾರಕ ದೇವ ಗೋಪಾಲವಿಟ್ಠಲ ॥
*********