by yadugiriyamma
ಪಾಂಡವಪಕ್ಷ ಪಾರ್ಥಸಾರಥಿಗೆ
ಆಂಡಾಳ್ ಮಾಲೆಯ ಧರಿಸಿದಳು ಪ
ಸೃಷ್ಟಿಜಾತೆಯು ಶೃಂಗಾರವಾಗಿ ಬಂದು
ಕೃಷ್ಣಮೂರುತಿಯೆದುರಲ್ಲಿ ನಿಂದು
ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು
ತಟ್ಟೆಯೊಳಗೆ ಇಟ್ಟು ಕಳುಹಿದಳು 1
ಆದಿಮೂರುತಿ ಮಂಟಪದಲ್ಲಿ ಕುಳಿತಿರೆ
ಶ್ರೀದೇವಿ ಭೂದೇವಿ ಸಹಿತವಾಗಿ
ವೇದಮೂರುತಿಯನು ನೋಡಿ ಸಂತೋಷದಿ
ಗೋದಾದೇವಿಯು ಮಾಲೆ ಧರಿಸಿದಳು 2
ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ
ಇರುವಂತಿಗೆ ಪಚ್ಚೆ ಮುಡಿದಾಳ
ಪರಿಪರಿ ಪುಪ್ಪದ ಸರಗಳ ಪಿಡಿದು
ಧರಣಿದೇವಿಗೆ ಸ್ವಾಮಿ ಧರಿಸಿದಳು 3
ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ
ಮೇಲಾದ ಕಮಲ ಸುಗಂಧರಾಜ
ನೀಲವರ್ಣನ ಮುಖ ನೋಡಿ ಸಂತೋಷದಿ
ನೀಳಾದೇವಿಯು ಮಾಲೆ ಧರಿಸಿದಳು 4
ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ
ಕಮಲವದನೆಯೆಂದೆನಿಸಿದವಳಿಗೆ
ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು
ಕಮಲನಾಭನು ಮಾಲೆ ಧರಿಸಿದನು 5
****