ರಾಗ: ಭೈರವಿ ತಾಳ: ಆದಿ
ಬೇಡುವೆನು ಮುಗಿದು ಕರವ ನೋಡುವೆನು ಮನದಣಿಯ
ಮೂಡಿಬಾರಯ್ಯ ಮನದಿ ರಾಘವೇಂದ್ರ ಗುರುರಾಯ ಪ
ಸಜ್ಜನರು ಬಂದು ತುಂಗಭದ್ರೆದೇವಿಯನ್ನು ಸಾರಿ
ಮಜ್ಜನವಮಾಡಿ ಪರಿಶುದ್ಧರಾಗಿ ನಡೆತಂದು
ಕಜ್ಜಲಕಾಂತಿ ವೃಂದಾವನದಲಿ ಕಂಡು ನಿನ್ನ
ಹೆಜ್ಜೆಹೆಜ್ಜೆಗೆ ನಮಿಸಿ ನಲಿಯುತಿರುವರೋ 1
ನೋಡುತ ನಿಂತ ಭಕ್ತಗಡಣ ನೇತ್ರಗಳಿಂದ
ಕೋಡಿ ಹರಿಸುವುದಾನಂದಭಾಷ್ಪವ ಸುರಿಸಿ
ಬೇಡುವುದನೆಲ್ಲ ಮರೆತು ಹಾಡಿಹೊಗಳಿ ಕೀರ್ತಿಯನ್ನು
ನೋಡಿ ದಣಿಯದು ವೃಂದಾವನದಲಿ ಗುರುವೆ ನಿನ್ನ 2
ಮೂಡೀಬಾರಯ್ಯ ಸೀತರಾಮವಿಠಲಪ್ರಿಯ
ಓಡಿ ಮನಕೆ ನೀನು ಬೇಗ ಬೇಡುವೆನು ಗುರುವರ್ಯ
ಹಾಡಿ ನಾನು ಕುಣಿಯುವೆ ನೋಡಿ ಮನವ ತಣಿಸುವೆ
ಬೇಡುವೆನೀಗ ಬಾರೋ ಸುಜನರಪ್ರಿಯ ಗುರುವೇ 3
***