Showing posts with label ಎನಗಿಂದುತ್ತಮರಿಲ್ಲ gopala vittala ankita suladi ಸಾಧನ ಸುಳಾದಿ ENAGINDUTTAMARILLA SADHANA SULADI. Show all posts
Showing posts with label ಎನಗಿಂದುತ್ತಮರಿಲ್ಲ gopala vittala ankita suladi ಸಾಧನ ಸುಳಾದಿ ENAGINDUTTAMARILLA SADHANA SULADI. Show all posts

Monday, 9 November 2020

ಎನಗಿಂದುತ್ತಮರಿಲ್ಲ gopala vittala ankita suladi ಸಾಧನ ಸುಳಾದಿ ENAGINDUTTAMARILLA SADHANA SULADI

 

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ   ಸಾಧನ ಸುಳಾದಿ 

 

ರಾಗ ನಾಟಿಕುರಂಜಿ 

 ಧ್ರುವತಾಳ 


ಎನಗಿಂದುತ್ತಮರಿಲ್ಲ ವೆಂಬೊದೊಂದು ದೋಷ

ಎನಗಿಂದನೀಚ ದೊಡ್ಡವನೆಂಬೊದೊಂದು ದೋಷ

ತನಗಿಂದಧಿಕನ್ನ ಸಮಾನವೆಂಬೋದು ದೋಷ

ತನ್ನಿಂದ ಭಿನ್ನ ವಸ್ತು ತನ್ನದೆಂಬೋದು ದೋಷ

ತನಗೆ ತಾನರಿಯ ಅನ್ಯ ಬಲ್ಲೆನೆಂಬೋದು ದೋಷ

ತನಗೆ ತಾ ತುತಿಸಿಕೊಂಡು ಧನ್ಯನೆಂಬೋದು ದೋಷ

ತನಗೆ ಶಕುತಿ ಇದ್ದು ಕರ್ಮ ಬಿಟ್ಟು ಕೂಡುವದೆ ದೋಷ

ತನಗಿಲ್ಲದ ಕರ್ತೃತ್ವ ತಾನು ಎಂಬೋದು ದೋಷ

ಇನಿತು ದೋಷಂಗಳೆಲ್ಲ ಎಣಿಸಿದರಾಯಿತು ಇನ್ನು

ತನಗೆ ಈಶಗೆ ಐಕ್ಯ ಪೇಳುವದದಕ್ಕಿಂತ ದೋಷ

ಸನಕಾದಿಗಳ ಒಡಿಯ ಗೋಪಾಲವಿಟ್ಠಲನ್ನ 

ನೆನೆಸದಲಿದ್ದವಗೆ ದೊಡ್ಡ ದೋಷ ॥ 1 ॥


 ಮಟ್ಟತಾಳ 


ಬೊಮ್ಮಾಂಡ ವ್ಯಾಪ್ತನ್ನ ಬಯಲು ಎಂಬೋದು ದೋಷ

ಬೊಮ್ಮನ ಸೃಜ್ಜನ ಪುಟ್ಟಿದ ನೆಂಬೋದು ದೋಷ

ಬೊಮ್ಮಾಂಡ ಸಂಹಾರಗೆ ಲಯ ಪೇಳ್ವದೆ ದೋಷ

ಬೊಮ್ಮನ ಪಿತನಲ್ಲದೆ ಇನ್ನೊಂದೆಂಬೊದೆ ದೋಷ

ಸುಮ್ಮನಸರಪ್ರೀಯ ಗೋಪಾಲವಿಟ್ಠಲಂಗೆ 

ಸಮ ಉಂಟೆಂಬವಗೆ ಸರಿಯಿಲ್ಲದ ದೋಷ ॥ 2 ॥


 ರೂಪಕತಾಳ 


ಮಾಡಬೇಕು ಮಂದೆಲ್ಲ ಸಾರುತಿರಲು

ಮಾಡದೆ ಇದ್ದದು ಮುಖ್ಯವಾದ ದೋಷ

ಬೇಡಬೇಕೆಂದು ಜಗವೆಲ್ಲ ಪೇಳುತಿರಲು

ಬೇಡದಲಿಪ್ಪದು ಅಗತ್ಯವಾದ ದೋಷ

ನೋಡಬೇಕೆಂದು ಲೋಕವೆಲ್ಲ ಪೇಳುತಿರಲು

ನೋಡದಲಿಪ್ಪೆಂದು ನೋವಾಗುವದೆ ದೋಷ

ಕೂಡಿ ಆಡಿ ತನ್ನಲ್ಲಿ ಫಲವನರಿಯದೆ 

ನಾಡ ದೇವತಿಗಳಿಗೆ ಹಾರೈಸುವದೆ ದೋಷ

ರೂಢಿಗೊಡಿಯ ನಮ್ಮ ಗೋಪಾಲವಿಟ್ಠಲನ್ನ 

ನೋಡಿ ಪೂಜಿಸದವಗೆ ನಿತ್ಯ ದೋಷ ॥ 3 ॥


 ಝಂಪೆತಾಳ 


ಆವಾವನು ಈ ಜಗಕೆ ದೇವನೆಂದರಿಯದೆ

ಆವನಿಂದ ಈ ಜಗಕೆ ಸೃಷ್ಠಿ ಎಂದರಿಯದೆ

ಆವನಿಂದ ಈ ಜಗವು ಪಾಲಣೆಂದರಿಯದೆ

ಆವನಿಂದೀ ಜಗವು ಲಯವು ಎಂದರಿಯದೆ

ದೇವರಿಗೆ ಜೀವರಿಗೆ ವಿಲಕ್ಷಣರಿಯದ

ಆವಾವನು ಕರ್ಮ ಅನಂತ ಮಾಡಿದರು

ಅವನಿಗೆ ಅನಂತ ದೋಷಾಗಿ ತೋರುವದು

ಆವ ಕರ್ಮವು ಕಡೆಯ ಗೆಲಿಸಲರಿಯವು

ಜೀವ ಜಡಭಿನ್ನ ಗೋಪಾಲವಿಟ್ಠಲರೇಯ 

ಆವನಿಗೆ ತಾ ಒಲಿವ ಅವನೆ ಅರಿವಾ ॥ 4 ॥


 ತ್ರಿವಿಡಿತಾಳ 


ಅನ್ಯದೈವರಿಯದೆ ಅನ್ಯಕ್ಕೆ ಎರಗದೆ

ತನ್ನನ್ನೆ ನೆರೆನಂಬಿ ಚಿಂತಿಪರ

ತನ್ನವ ನೆಂತೆಂದು ತನ್ನ ತಿಳಿಸಿ ಕೊಟ್ಟು

ಘನ್ನ ಪದವಿಗೇರಿಸಿನ್ನು ತಾ ಸಲಹುವ

ಅನ್ಯ ಆಶೆಯು ವುಳ್ಳ ಜೀವರೆಲ್ಲರಿಗೆ

ಅನ್ಯನಂತವರಿಗೆ ತೋರುತಿಪ್ಪ

ತನ್ನವ ಅನ್ಯನೆಂಬ ವೈಷಮ್ಯ ನೈರ್ಘಣ್ಯ

ಇನ್ನಿಲ್ಲ ಇನ್ನಿಲ್ಲ ಈಶಗಿನ್ನು

ಭಿನ್ನ ಜೀವರ ಗತಿ ಅರಿತು ಪಾಲಿಸುವನು

ಇನ್ನೊಬ್ಬರಿಗೆ ಪೂರ್ಣ ಲಭ್ಯನಲ್ಲ

ಘನ್ನ ಮಹಾಮಹಿಮ ಗೋಪಾಲವಿಟ್ಠಲ 

ತನ್ನ ತಿಳಿವರನು ತನ್ನವನೆಂತೆಂಬ ॥ 5 ॥


 ಅಟ್ಟತಾಳ 


ಇವನಂತ ವಸ್ತುವು ಇಂದ್ರರೊಳಗೆ ಇಲ್ಲ

ಇವನಂತ ವಸ್ತುವು ರುದ್ರಾದಿಯೊಳಗಿಲ್ಲ

ಇವನಂತ ವಸ್ತುವು ಬೊಮ್ಮಾದಿಯೊಳಗಿಲ್ಲ

ಇವನ ಸತಿಯಳಾಗಿ ಸಿರಿದೇವಿವಾಲೈಸೆ

ಅವರ ಪಾಡೇನಜಭವಾದಿಗಳಿವನ

ನವವಿಧ ಭಕುತಿಂದ ಸೇವಿಸುತಿಪ್ಪರು

ಭವನಾಶ ಭಯಹಾರಿ ಗೋಪಾಲವಿಟ್ಠಲ 

ಭುವನೆರಡೇಳಕ್ಕೆ ಒಡಿಯ ಕಾಣೋ ॥ 6 ॥


 ಆದಿತಾಳ 


ಒಳಗುಂಟು ಹೊರಗಿಲ್ಲ ಒಳಗಿಲ್ಲ ಹೊರಗುಂಟು

ತಿಳಿಯದಿಪ್ಪನು ನಾನಾ ಸ್ಥಳದಿ ವ್ಯಾಪುತನಾಗಿ

ಬೆಳಕು ಕತ್ತಲು ಇನ್ನು ಸ್ಥಳ ಎರಡೆನ್ನದೆ

ಬಲು ಸುಂದರಾಂಗನಂಥೊಳೆಯುತಲಿಪ್ಪನು

ಸುಲಭ ಭಕುತರಿಗೆ ಗೋಪಾಲವಿಟ್ಠಲರೇಯ 

ನೆಲೆಯಾಗುವನು ತನ್ನ ತಿಳಿದರ್ಚಿಪುವಗೆ ॥ 7 ॥


 ಜತೆ 


ಹಿರಿದು ಕಾರ್ಯಕೆ ಇವನೆ ಕಿರಿದು ಕಾರ್ಯಕೆ ಇವನೆಂ -

ದರಿದು ಭಜಿಸಿರೊ ಗೋಪಾಲವಿಟ್ಠಲ ಒಲಿವ ॥

********