ಬಂದು ನಿಲ್ಲೆಲೊ ಮನಮಂದಿರದೊಳು ಹರಿ
ಇಂದುವದನ ಆನಂದದಿಂದ ಪ.
ಮುಂದಗಮನೆರ ಅಂದದಿ ಕೂಡ್ಯರ-
ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ.
ಗಜವ ಪಾಲಿಸಿದಂಥ ಭುಜಗಶಯನ ಹರೆ
ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ-
ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ-
ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ
ಅಜಸುತಗೊಲಿದನೆ ಭುಜಗ ಭೂಷಣವಂದ್ಯ
ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ
ಕುಜನರ ಶಿಕ್ಷಿಪೆ ರಜ ತಮೊ ದೂರನೆ
ಸುಜನರ ಪೊರೆಯುವ ಋಜುಗಣವಂದಿತ 1
ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ
ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ
ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ-
ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್
ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ
ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ
ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ
ಸಪ್ತ ಸಪ್ತ ಭುವನೇಶ ಪ್ರಕಾಶ 2
ವೇದಸುತಗೆ ಇತ್ತು ಆದರದಿ ಸುಧೆ
ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ
ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ
ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ
ಆದರದಲಿ ಸುಗ್ರೀವನ ಪೊರೆದೆ
ಯಾದವ ವಂಶ ಮಹೋದಧಿ ಚಂದ್ರ
ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ-
ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3
ಪದ್ಮನಾಭನ ತೋರೊ ಪದ್ಮಸಂಭವ ಜನಕ
ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ
ಪದ್ಮ ಬಾಂಧವ ತೇಜ ಪದ್ಮ ನಯನಕರ
ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ
ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ
ಪದ್ಮ ಉದರ ಷಟ್ಪದ್ಮದಿ ವಾಸ
ಪದ್ಮ ಸರೋವರ ತೀರವಾಸ ಹೃ
ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4
ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ
ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ
ಪಾಪಿ ಜರಾಸಂಧ ಭೂಪರ ಬಂಧಿಸೆ
ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ
ವ್ಯಾಪಕನೊ ಜಗಸ್ಥಾಪಕನೊ ಬಹು
ರೂಪಕನೊ ದುಷ್ಟತಾಪಕನೊ ಹರಿ
ಪಾಪ ಹರಿಸಿ ಕರ್ಮಲೇಪನ ಮಾಡದೆ
ನೀ ಪರಿ ಪರಿಯಿಂದ ಕಾಪಾಡೊ ಭಕ್ತರ5
****