Showing posts with label ಮುಕ್ತಿಲಿ ಪಂಚಭೇದ vijaya vittala ankita suladi ಪ್ರಳಯ ಸೃಷ್ಟಿ ಸುಳಾದಿ MUKTILI PANCHABEDHA PRALAYA SRUSHTI SULADI. Show all posts
Showing posts with label ಮುಕ್ತಿಲಿ ಪಂಚಭೇದ vijaya vittala ankita suladi ಪ್ರಳಯ ಸೃಷ್ಟಿ ಸುಳಾದಿ MUKTILI PANCHABEDHA PRALAYA SRUSHTI SULADI. Show all posts

Saturday 1 May 2021

ಮುಕ್ತಿಲಿ ಪಂಚಭೇದ vijaya vittala ankita suladi ಪ್ರಳಯ ಸೃಷ್ಟಿ ಸುಳಾದಿ MUKTILI PANCHABEDHA PRALAYA SRUSHTI SULADI


  Audio by Vidwan Sumukh Moudgalya


ಶ್ರೀವಿಜಯದಾಸಾರ್ಯ ವಿರಚಿತ  ಸಂಕ್ಷಿಪ್ತ ಪ್ರಳಯ ಸೃಷ್ಟಿ ಸುಳಾದಿ 


(ಈ ಸುಳಾದಿಯಲ್ಲಿ ಪ್ರಳಯಾನಂತರ ದುರ್ಗಾಸ್ತೋತ್ರ , ಮುಕ್ತರಕ್ರೀಡಾ 12 ವರ್ಷ ನಂತರ ಪದ್ಮಸೃಷ್ಟಿಯವರೆಗೆ ಸಂಕ್ಷಿಪ್ತ ಹೇಳಿದ್ದಾರೆ.) 


 ರಾಗ ಹಿಂದೋಳ 


 ಧ್ರುವತಾಳ 


ಮುಕ್ತಿಲಿ ಪಂಚಭೇದ ಜಡ ಜೀವ ಪರಮಾತ್ಮ 

ಶಕ್ತಿ ಈಶಾಕೋಟಿ ಗಣನೆ ನಿತ್ಯ -

ಮುಕ್ತಳು ಬೊಮ್ಮ ವಾಯು ಮುಂತಾದ ಸುರರಿಗೆ 

ಮುಕ್ತಿಯ ಕೊಡುವಳು ಈಶಾವಶಳು 

ಮುಕ್ತಾಮುಕ್ತಾರ ವೊಡಿಯಾ ವೈಕುಂಠನಾಮಕ 

ಶಕ್ತನೊಬ್ಬನು ಕಾಣೋ ತ್ರಿಲೋಕಕ್ಕೆ 

ಭಕ್ತಿ ಯೋಗ್ಯತವರಿತು ಭವ ಹರಿಸಿ ಚತುರವಿಧ 

ಮುಕ್ತಿಲಿ ಸುಖವೀವ ಸುಂದರಾಂಗ 

ಸೂಕ್ತಾದಿಗೆ ನಿಲುಕನು ಮೂಲಾವತ್ತಾರಾಭಿನ್ನ 

ರಕ್ತಾದಿವರ್ನ ರಾಜೀವ ಲೋಚನ ಶುಕ್ಲ 

ರಕ್ತ ರಹಿತ ಪೂರ್ಣೇಂದು ವದನ 

ವ್ಯಕ್ತವ್ಯಕ್ತಾ ವ್ಯಾಪಾರಾ ಅಚಿಂತ್ಯಾ ಮಹಾಮಹಿಮಾ 

ಭಕ್ತವತ್ಸಲ ಕರುಣಿ ಸರ್ವಸಾರಾ -

ಭೋಕ್ತನು ಆದಿಮಧ್ಯಾಂತ ರಹಿತ ದ್ಯೆವ 

ಮೌಕ್ತಿಕ ಹಾರಾ ರತುನಾದಿ ಭೂಷ 

ಉಕ್ತ ತಾರತಮ್ಯ ತತ್ವಕೆ ದೂರಾದೂರ 

ರಿಕ್ತರಿಗತಿಪ್ರೀಯಾ ಶ್ರೀಭೂದುರ್ಗಾಪತಿ ವಿ -

ರಕ್ತರ ಮನೋವಾಸ ವಿಜಯವಿಟ್ಠಲ ಯೆನ್ನ 

ಉಕ್ತಿಗೆ ಸಹಾಯವಾಗು ದಾಸರಪ್ರೀಯಾ ॥ 1 ॥ 


 ಮಟ್ಟತಾಳ 


ಹರಿ ಪರಂಜ್ಯೋತಿ ಹರಿ ಪರದೇವತೆ

ಹರಿ ಸರ್ವೋತ್ತಮ ಹರಿ ಪುರುಷೋತ್ತಮ 

ಹರಿ ಪರಬೊಮ್ಮ ಹರಿ ಜ್ಞಾನಗಮ್ಯ 

ಹರಿ ವಿಶ್ವಾಮೂರ್ತಿ ಹರಿ ಚಕ್ರಾವರ್ತಿ 

ಹರಿ ಪರಂಧಾಮಾ ಹರಿ ಸಾಸಿರನಾಮಾ 

ಹರಿ ಸಾರ್ವಭೌಮಾ ಹರಿ ಭಕ್ತರ ಪ್ರೇಮ 

ಹರಿ ಪರಿಪೂರ್ಣ ಹರಿ ನಾನಾ ವರ್ನ 

ಹರಿ ಗುಣಗಣಾಂಬೋಧಿ ಹರಿ ಸರ್ವಸಿದ್ಧಿ 

ಹರಿ ಸರ್ವದಾ ವೀರ್ಯ ಹರಿ ವಿಬುಧರ ವರ್ಯ 

ಹರಿ ಪಾವನಕಾಯ ಹರಿ ಭುವನ ಮಾಯ 

ಹರಿ ಪರಮಾತ್ಮ ಹರಿ ಉತ್ತಮಾತ್ಮ

ಹರಿ ಪರತತ್ವ ಹರಿ ನಿರುತ ಸತ್ವಾ 

ಹರಿ ನಿತ್ಯಾನಂದಾ ಹರಿ ಸಿರಿ ಗೋವಿಂದ 

ಹರಿ ನಿತ್ಯಾತೃಪ್ತ ಹರಿ ಸಕಲವ್ಯಾಪ್ತಾ

ಹರಿ ವಿರಹಿತ ಜಾತ ಹರಿ ಜಗನ್ನಾಥ 

ಹರಿ ಏಕಮೇವ ಹರಿ ಅಘವನ ದಾವಾ 

ಹರಿ ನಿರ್ಭಯ ಶೂರ ಹರಿ ನಾನಾವತಾರ 

ಹರಿ ಬಹುಲಾವಣ್ಯ ಹರಿ ಸದಾ ತಾರುಣ್ಯ 

ಹರಿಯಲ್ಲದೆ ಮತ್ತೆ ಹರಿಯ ಬಲ್ಲವರುಂಟೆ 

ಹರಿಯವತಾರ ಶ್ರೀವಿಜಯವಿಟ್ಠಲರೇಯ 

ಹರಿಯೆ ತ್ರಿಭುವನ ಧೊರೆಯೆಂದವ ಜ್ಞಾನಿ ॥ 2 ॥ 


 ತ್ರಿವಿಡಿತಾಳ 


ಶೂನ್ಯ ನಾಮಕನಾಗಿ ಹರಿ ವಟದೆಲೆಯಲ್ಲಿ 

ಸಣ್ಣವನೋಪಾದಿ ಬೊಮ್ಮಾಂಡ ನಾಯಕ 

ಕನ್ಯಾರತುನವಾದ ಶ್ರೀಯಾಲಿಂಗನಿಯಿಂದ 

ತನ್ನಿಚ್ಛೆಯಲೆ ತಾನೇ ಪವಡಿಸಿದ್ದು 

ಮುನ್ನೆ ಬೊಮ್ಮನ ಮಾನಾ ತುಂಬಿ ಬೀರುತಲೀರೆ 

ಹನ್ನೆರೆಡುವರೆ ವರುಷಾವಿರೆ 

ಮನ್ಯುನಂತೆ ತೋರಿ ನಾಟ್ಯವನಾಡಿ ಹಿ -

ರಣ್ಯ ಗರ್ಭಾದಿಗಳಾ ಉಳಿಯಾಗೊಡದೆ 

ಕಣ್ಣಿಂದ ಉರಿಕಿಡಿ ಉದರಿಸಿ ನೆರೆದವಾ -

ರನ್ನೆ ಕವಳ ಮಾಡಿ ಭೂಷಣ ಧರಿಸೀ 

ಅನ್ಯರ ಸಂಚಾರ ಜಗದೊಳಿಲ್ಲದಂತೆ 

ಉನ್ನತ ಮಹಿಮನು ವೇದಪಾಲಾ 

ಅನ್ಯಾಯಾವೆನಿಸಾದೆ ಉತ್ಪತ್ತಿ ಸ್ಥಿತಿ ಲಯ -

ವನ್ನೆ ಮಾಡುತಲಿಪ್ಪ ವಿನಯಾದಲ್ಲಿ 

ಅನ್ನಂತ ಜೀವಿಗಳ ಒಡಲೊಳಡಗಿಸಿಯಿಪ್ಪ 

ಅಣ್ಣೋರಣಿಯರೂಪ ವಿಜಯವಿಟ್ಠಲರೇಯ 

ಸನ್ನುತಿಸಾಲು ಬಂದು ಸನ್ನಿಧಿಯಾಗುವ ॥ 3 ॥ 


 ಅಟ್ಟತಾಳ 


ಪ್ರಳಯೋದಕದಲ್ಲಿ ಜಲಜನಾಭನು ನಿ -

ಶ್ಚಲ ವರವೈಕುಂಠ ಪೊಳಲಲ್ಲಿ ಶ್ರೀಭಾಗ 

ಸ್ಥಳದಲ್ಲಿ ಪವಳಿಸಿ ಬಲುವೇಗ ನಿದ್ರಾ 

ಲಲನೆ ಕೂಡಾಲಿರೆ ಬೆಳಗುವದಕೆ ಮೊ -

ದಲು ಪೇಳಿದಂತೆವೆ ತಿಳಿವೋದು ಶುದ್ಧಾರು 

ಲಲಿತಾಂಗಿ ಅಂಭ್ರಣಿ ವಲಿಸಿ ವೇಗಾದಿಂದ 

ಸಲೆಸ್ತೋತ್ರವ ಮಾಡೆ ವಲಿದು ಪುರುಷದೇವ 

ಸುಲಭದಿಂದಲಿ ತಮ ವುಳಿಯಾಲೀಸದೆ ನುಂಗಿ 

ಮಿಳಿತವಾಯಿತು ವಟ ಜಲ ಶ್ರೀ ಭೂ ದೇವಿಯ 

ಒಳಗೆ ಏಕೀಭೂತ 

ಮಳಲುಗೂಡನು ಕಟ್ಟಲು ಮನ ಮಾಡಿದ 

ತಲುವರಿಯಾನಂತೆ ಬಲು ಪ್ರಯಾಸವಿಲ್ಲದೆ 

ಬಲು ಹರುಷದಿಂದ ಸಲಿಸಿದ ತನ್ನಯ ಲಲನೇಯ ಬಿನ್ನಹ 

ಚಲುವ ದೇವರದೇವ ವಿಜಯವಿಟ್ಠಲರೇಯ 

ನಲಿನಲಿದಾಡುವ ಹಲವು ಕಾಲದ ದೈವಾ ॥ 4 ॥ 


 ಆದಿತಾಳ 


ಚತುರವಿಧ ಸೃಷ್ಟಿ ನೆನೆದು ಹಿತವಾಗಿ ತನ್ನ ನಿಜ 

ಸತಿ ಮುಕ್ತಾರೊಡನೆ ಸಂತತ ಕ್ರೀಡೆ ಮಾಡುವಂಥ 

ಚತುರ ನಾನಾಕಾ ಮೂರುತಿಯಾಗಿ ಬೆಳಗುತಿಪ್ಪ 

ತತುವ ನಿಯಾಮಕ ಸ್ವಭಾವಿತ ಕಾರ್ಯ ಅನುಪಮಾ

ದ್ವಿತಿಯಾ ನಿರ್ಗುಣ ಸಗುಣ ಸತುವಾದಿ ಗುಣದಿ ಉ -

ತ್ಪತ್ತಿಯಾಗುವಂತೆ ಪಂಚಾಶತ ಕೋಟಿ ಯೋಜನ ಪರಿ -

ಮಿತ ಬೊಮ್ಮಾಂಡವ ರಚಿಸಿ ಚತುರಮೊಗನು ಸುರ -

ತತಿ ಮಿಕ್ಕ ಜೀವರ ಪ್ರಕೃತಿಯಿಂದಾ ಪುಟ್ಟಿಸಿ ಭ -

ರಿತ ವಾಗುವಂತೆ ಸಾಕಿ ಪತಿತ ಪಾವನ ರಂಗ 

 ವಿಜಯವಿಟ್ಠಲ ತನ್ನ ತುತಿಸಿದವರಿಗೆ ಸಂ -

ತತ ಸಂದರ್ಶನ ಕೊಡುವಾ ಕಾಣೊ ಇಹಪರಾ ॥ 5 ॥ 


 ಜತೆ 


ಜಗತ್ಸತ್ಯಾ ಅನಿತ್ಯಾ ಎನಿಸುವದು ಕಡೆಗೆ 

ಜಗದೈವ ವಿಜಯವಿಟ್ಠಲನೆ ಎಂದಿಗೆ ಸತ್ಯಾ ॥

******

 


 ಲಘುಟಿಪ್ಪಣಿ : 

 ಶ್ರೀಗೊರಾಬಾಳ ಹನುಮಂತರಾಯರು 


 ಸೂಕ್ತಾದಿಗೆ ನಿಲುಕನು = ವೇದ ಬ್ರಹ್ಮಾದಿಗೆ ಅಗೋಚರ ;

 ರಕ್ತರಹಿತ = ಸತ್ವಾದಿ ತ್ರಿಗುಣರಹಿತನು ;

 ಹರಿ ವಿರಹಿತಜಾತ = ಜನನಾದಿಯಿಲ್ಲದವ ;

 ಹರಿ ಅಘವನದಾವ = ಪಾಪವೆಂಬ ವನಕ್ಕೆ ಕಾಡುಗಿಚ್ಚು ;

 ಶೂನ್ಯನಾಮಕನಾಗಿ = ಪ್ರಳಯೋದಕದಲ್ಲಿ ವಟಪತ್ರಶಾಯಿಗೆ ಶೂನ್ಯನೆಂತ ಹೆಸರು (ಸಕಲ ವ್ಯಾಪಾರ ರಹಿತನಾದ ಕಾರಣ ಶೂನ್ಯನು) ;

 ಮುನ್ನೆ ಬೊಮ್ಮನ ಮಾನಾ ತುಂಬಿ = ಆಯುಷ್ಯ ಪರಿಮಿತಿ ;

 ಪೊಳಲಲ್ಲಿ = ಪಟ್ಟಣದಲ್ಲಿ ;

 ಮಳಲು ಗೂಡನು ಕಟ್ಟಲು = ಬ್ರಹ್ಮಾಂಡವನು ರಚಿಸಲು ಇಚ್ಛೆಮಾಡಿದ ;

 ತಲುವರಿಯಾನಂತೆ = ಬಾಲಕನಂತೆ ;


🙏ಶ್ರೀಕೃಷ್ಣಾರ್ಪಣಮಸ್ತು🙏

*****