Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಹರಿಸ್ವತಂತ್ರ ಪ್ರಮೇಯ ಸುಳಾದಿ
(ಸ್ವಾಮಿ ಭೃತ್ಯ ಭಾವದಿಂದ ಆಚರಿಸೆ ಮುಕ್ತಿಯಾಗುವದು ಹರಿಯಾಧೀನ)
ರಾಗ ತಿಲಂಗ್
ಧ್ರುವತಾಳ
ಏನೋ ನಿನ್ನ ಮಹಿಮೆ ಆನೇನು ಕೊಂಡಾಡುವೆ
ಜ್ಞಾನಾನಂದ ಕಾಯಾ ಲೋಕಮೋಹಕದೇವಾ
ದೀನಜನರ ಪಾಲ ದಿನಕರ ಶತತೇಜ
ಗಾನಲೋಲಪ್ರಿಯ ಗಾಯತ್ರಿ ಪ್ರತಿಪಾದ್ಯ
ಜಾನಕಿರಮಣನೆ ಜಗಸೃಷ್ಟ್ಯಾದಷ್ಟಕರ್ತ
ದಾನವಾರಿಯೆ ರಂಗ ದಾಸರ ಮನದೊಡಿಯ
ಮಾನಾಭಿಮಾನ ಕರ್ತಾ ಮನ್ಮಥನ ಜನಕ
ಶ್ರೀನಾಥ ಸರ್ವೋತ್ತಮ ಶೃಂಗಾರ ಮೂರುತಿಯೆ
ಧ್ಯಾನದಿ ಭಕ್ತರಿಗೆ ದೀಪ್ತಿಸುತ ಪೊಳೆವನೆ
ನಾನಾ ಪದಾರ್ಥದಲ್ಲಿ ನಾನಾ ದೇಶಗಳಲ್ಲಿ
ನಾನಾ ಕಾಲಗಳಲ್ಲಿ ನೀ ನಿತ್ಯ ನಿತ್ಯತೃಪ್ತ
ಅನಾದಿಕಾಲ ದೈವ ಅಪ್ರಮೇಯಾ
ವಾಣಿ ಭಾರತಿ ಅಜಸುರರಿಂದ ವಂದಿತನೆ
ಕ್ಷೋಣಿಯೊಳಗೆ ಸಮವಿಲ್ಲದ ದೈವವೆ
ಧೇನಿಸಿ ನೋಡಲು ದಿನದಿನಕೆ ವಿಚಿತ್ರ
ಜ್ಞಾನಿಗಳರಸನೆ ಗರುಡವಾಹನ ರಂಗ
ಕಾಣರು ನಿನ್ನ ಗುಣಹೀನ ಮನುಜರಿನ್ನು
ತಾನೆ ನೀನೆಂಬುವಗೆ ಏನೆಂಬೆ ಹರಿಯೆ
ನೀನೆ ಗತಿ ಅಂತ ನಂಬಿದ ಭಕ್ತರಿಗೆ
ಊನವಾಗೋವು ದೋಷ ಅನಂತವಿದ್ದರನ್ನ
ನಾನು ನಿನ್ನ ಬಣ್ಣಿಸಿ ಏನು ಬೇಡುವದಿಲ್ಲ
ರೇಣು ಎನಿಸಿ ಎನಿಸಿ ಎನ್ನ ಜ್ಞಾನಿಗಳ ಪಾದದ
ನಾನು ನನ್ನದು ಎಂಬೊ ಹೀನ ಮತಿಯಲಿಂದ
ಗಾಣದ ಎತ್ತಿನಂತೆ ತಿರುಗುವೆ ಧರಿ ಮೇಲೆ
ಭಾನು ಶತತೇಜ ಗೋಪಾಲವಿಟ್ಠಲ
ದೀನರಿಗೆಲ್ಲ ದತ್ತ ಪ್ರಾಣದೇವ ॥ 1 ॥
ಮಟ್ಟತಾಳ
ಎಲ್ಲಿ ನೋಡಲು ನೀನು ಅಲ್ಲಲ್ಲಿ ವ್ಯಾಪ್ತನು
ಎಲ್ಲಿ ನೋಡಲು ನೀನು ಅಲ್ಲಲ್ಲಿ ಪೂರ್ಣನು
ಬಲ್ಲಿದವರಿಗೆ ಬಲ್ಲ್ಯಾ ಬಲ್ಲವಗತಿ ಸುಲಭ
ಸಲ್ಲುವದೊ ಬಿರಿದು ಎಲ್ಲಿ ನಿನಗೆ ಸಮ -
ವಿಲ್ಲವು ನಾಗಾಣೆ ಮಲ್ಲರಮರ್ದನ
ಹುಲ್ಲು ಕಲ್ಲಿನಲ್ಲಿ ಎಲ್ಲದಿ ಭರಿತನೆ
ಎಲ್ಲ ಕಾಲವು ನಮ್ಮನ್ನಲ್ಲರ ಸಲಹುವಿ
ಜಲ್ಲಧಿ ಒಳಗೆ ಇನ್ನು ಕಮಲವು ಇದ್ದಂತೆ
ಎಲ್ಲವನು ತೊರೆದು ನಿಲ್ಲಿಸಿ ಮನವನ್ನು
ಸೊಲ್ಲು ಎತ್ತಿ ಪಾಡಿ ಇಲ್ಲೆ ಆರಾಧಿಸಲು
ಚೆಲ್ಲಿ ಪೋಗದವರ ಮೆಲ್ಲನೆ ನೀ ಹೃದಯ-
ದಲ್ಲಿ ನಿಂತು ತೋರಿ ಘಿಲ್ಲುಕೆಂದು ಕುಣಿದು ಉಳ್ಳಷ್ಟು ದೋಷ -
ವೆಲ್ಲ ಪೋಗಲಾಡಿ ಸಲ್ಲುವಂಥ ಪದವಿ
ಭಳಿರೆ ಇತ್ತು ಪೊರವಿ ಫುಲ್ಲನಾಭನೆ ಚಲ್ವ ಗೋಪಾಲವಿಟ್ಠಲ
ಒಲ್ಲೆನೆಂದರೆ ಬಿಡ ಯಳ್ಳಷ್ಟು ಕ್ಲಿಪ್ತಕೆ ॥ 2 ॥
ತ್ರಿವಿಡಿತಾಳ
ನಿನ್ನ ಜ್ಞಾನವಂತನೆಂದು ಇನ್ನು ಜ್ಞಾನ ಸಂಪಾದಿಸುವೆ
ನಿನ್ನ ದೋಷ ದೂರನೆಂದು ಎನ್ನ ದೋಷಂಗಳಟ್ಟುವೆ
ನಿನ್ನ ಗುಣಪೂರ್ಣನೆಂದು ಗುಣವಂತನಾಗುವೆ
ನಿನ್ನ ಸುಖಪೂರ್ಣನೆಂದು ಸಂತೋಷದಿಂದಲಿರುವೆ
ನಿನ್ನ ಬಲಪೂರ್ಣನೆಂದು ಬಲವಂತನಾಗುವೆ
ನಿನ್ನ ಜನನ ಮರಣ ರಹಿತನೆಂತೆಂದು ಕೊಂಡಾಡಿ
ಮುನ್ನೆ ಧರಿಯ ಮೇಲೆ ಎನ್ನ ಜನನ ಕಳೆವೆ
ನಿನ್ನ ಜಾರವಂತನೆಂದು ಎನ್ನ ಜಾರತ್ವ ಕಳೆವೆ
ನಿನ್ನ ಕಂಸಾರಿ ಎಂತೆಂದು ಎನ್ನ ಸಂಸಾರ ನೀಗುವೆ
ನಿನ್ನ ದನುಜಮರ್ದನನೆಂದು ಎನ್ನ ಅರಿಗಳ ಗೆಲ್ಲುವೆ
ನಿನ್ನ ಭಕ್ತವತ್ಸಲನೆಂದು ಇನ್ನು ಭಕ್ತಿ ಸಂಪಾದಿಸುವೆ
ನಿನ್ನ ಕರುಣಾಳೆಂತೆಂದು ಎನ್ನ ಕರಣ ಶುದ್ಧನಾಗುವೆ
ನಿನ್ನ ತೊತ್ತಿಗೆ ತೋಂಡನಾಗಿ ನಿನ್ನ ಭೃತ್ಯನಾಗುವೆ
ನಿನ್ನವರ ಮನೆ ಮುಂದೆ ಕುನ್ನಿ ಆಗಿ ಆನಿರುವೆ
ನಿನ್ನ ತೀರಥ ಪ್ರಸಾದ ನಿನ್ನ ಯಂಜಲಗಳುಂಡು
ನಿನ್ನ ಬೇಡಿ ನಿನ್ನ ಕಾಡಿ ನಿನ್ನ ಹಾಡಿ ಹಾರೈಸಿ
ಎನ್ನ ದಿನಗಳು ಕಳೆವೆ ಮುನ್ನೆ ಕ್ಲಿಪ್ತ ಪರಿಯಂತರ
ಪುಣ್ಯವೋ ಪಾಪಗಳೊ ಎನ್ನಿಂದ ಮಾಡಿಸೊ ಕಾರ್ಯ
ಮುನ್ನೆ ಏನಿದಕೆ ಫಲವೊ ನಿನ್ನಗೆ ನೀನೆ ಬಲ್ಲೆಯ್ಯಾ
ಇನ್ನು ನಾ ಒಂದು ಬಲ್ಲೆನೂ ನಿನ್ನನೆ ಗತಿ ಎಂಬೋದು
ಚಿನ್ನುಮಯ ಮೂರುತಿ ಗೋಪಾಲವಿಟ್ಠಲರೇಯ
ಧನ್ಯನಾಗುವೆ ಕೇಳು ನಿನ್ನವರ ಬಳಿವಿಡಿದು ॥ 3 ॥
ಅಟ್ಟತಾಳ
ಹೀನರ ಒಳಗೆಲ್ಲ ಹೀನನು ನಾ ಬಲು
ಮಾನವರೊಳಗೆಲ್ಲ ಮಾನಗೇಡಿ ಬಲು
ದೀನರ ಒಳಗೆಲ್ಲ ದೀನನು ನಾ ಬಲು
ಹೀನ ದೀನ ಅಜ್ಞಾನಕೆಲ್ಲ ನಿನ್ನ
ಧ್ಯಾನ ನಾಮ ಬಲ ನಾನೊಂದು ಮಾಡಲು
ತಾನು ಇದರ ಮುಂದೆ ಏನೇನು ಮಾಳ್ಪವು
ಜಾಣ ಸುಂಕರಿ ಗಂಡವಾನು ಬಂದರೆ ಇನ್ನು
ಗೋಣಿಯನೊಪ್ಪಿಸಿ ತಾನು ಸುಮ್ಮನಾಗೆ
ಏನು ಮಾಡುವನವ ಕ್ಷೋಣಿ ಒಳಗಿನ್ನು
ಶ್ರೀನಾಥ ನಿನ್ನ ದಾಸನಾದವನ ಇನ್ನು
ನಾನಾ ಕಾರಣ ಎಲ್ಲ ಏನೇನು ಮಾಡೋವು
ದಾನವಾಂತಕ ರಂಗ ಗೋಪಾಲವಿಟ್ಠಲ
ಮಾನಾಭಿಮಾನಕೆ ನೀನೆ ಗತಿಯೊ ದೇವಾ ॥ 4 ॥
ಆದಿತಾಳ
ಜನರಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನು
ಧನದಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನು
ದಿನದಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನು
ಗುಣದಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನು
ಉಣಿಸಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನು
ಕುಣಿದಾಡ ಮನ ಹೋಗೆ ನಿನಗೆ ಹೋಯಿತು ಇನ್ನು
ಎಣಿಸಲು ಮನ ಹೋಗೆ ನಿನಗೆ ಹೋಯಿತು ಇನ್ನು
ಅಣಕಿಸ ಮನ ಹೋಗೆ ನಿನಗೆ ಹೋಯಿತು ಇನ್ನು
ಅನುವುದಪ್ಪಿದವೆಲ್ಲ ಅನುವು ಮಾಡಿ ನೋಡೆ
ನಿನಗೆ ಕಾರಣವಯ್ಯಾ ನೀನಿಲ್ಲದಾರಿಲ್ಲ
ನೀನು ಮಾಡಿಸಿದದು ನಿನಗೆ ಸಮರ್ಪಿತ
ನಿನಗೆ ನೀನೇ ಗತಿ ಎನಗೆ ನೀನೇ ಗತಿ
ಘನ ಮಹಿಮ ನಮ್ಮ ಗೋಪಾಲವಿಟ್ಠಲರೇಯ
ಅನುವು ತಪ್ಪಿದವೆಲ್ಲ ಅನುವು ಮಾಡಿ ಪೊರಿಯೆ ॥ 5 ॥
ಜತೆ
ನೀನು ಅನಾದಿ ಸ್ವಾಮಿ ನಾನು ಅನಾದಿ ಭೃತ್ಯ
ನೀನೆ ನೀನೆ ಗತಿಯೊ ಗೋಪಾಲವಿಟ್ಠಲ ॥
*******