Showing posts with label ಒಡಿಯರಿಲ್ಲದ ವೃಕ್ಷ guruvijaya vittala ankita suladi ಭಕ್ತವಾತ್ಸಲ್ಯ ಸುಳಾದಿ ODIYARILLADA VRUKSHA BHAKTA VATSALYA SULADI. Show all posts
Showing posts with label ಒಡಿಯರಿಲ್ಲದ ವೃಕ್ಷ guruvijaya vittala ankita suladi ಭಕ್ತವಾತ್ಸಲ್ಯ ಸುಳಾದಿ ODIYARILLADA VRUKSHA BHAKTA VATSALYA SULADI. Show all posts

Tuesday, 1 June 2021

ಒಡಿಯರಿಲ್ಲದ ವೃಕ್ಷ guruvijaya vittala ankita suladi ಭಕ್ತವಾತ್ಸಲ್ಯ ಸುಳಾದಿ ODIYARILLADA VRUKSHA BHAKTA VATSALYA SULADI

 

Audio by Mrs. Nandini Sripad


ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ) 


 ಭಕ್ತವಾತ್ಸಲ್ಯ ಸುಳಾದಿ 


(ಒಡಿಯರಿಲ್ಲದ ಫಲಮರವನ್ನು ದಾರಿಕಾರರು ಬಡಿದು ತಿಂಬುವಂತೆ ಎನಗೆ ಕಾಮ ಕ್ರೋಧಾದಿಗಳು ಮುಸುಕಿವೆ. ಭಕ್ತರ ಅಪರಾಧ ಎಣಿಸದೆ ಕೈಪಿಡಿದು ರಕ್ಷಿಸು ಇತ್ಯಾದಿ ಐತಿಹಾಸಿಕ ವಿಷಯಗಳು ) 


 ರಾಗ ತೋಡಿ 


 ಧ್ರುವತಾಳ 


ಒಡಿಯರಿಲ್ಲದ ವೃಕ್ಷ ಕಂಡ ಕಂಡವರೆಲ್ಲ

ಬಡಿದು ತಿಂಬುವ ನ್ಯಾಯವಾಯಿತೆನಗೆ

ಅಡಿ ತೊಲಗದೆ ಕಾಮ ಕ್ರೋಧಾದಿ ಗರ್ವಂಗಳು

ಸುಡುತಲಿವೆ ವ್ಯವಧಾನವಿಲ್ಲದೆ

ಕಡು ದುಃಖವನ್ನು ಆರಿಗೆ ಪೇಳಲಿನ್ನು

ಒಡಿಯನಾವನು ಪರಿಹರಿಸುವದಕ್ಕೆ

ಪೊಡವಿಯೊಳಗೆನ್ನ ದೂರು ಕೇಳುವದಕ್ಕೆ

ಹುಡಿಕಿ ನೋಡಿದರನು ಒಬ್ಬರಿಲ್ಲ

ಜಡಜ ಸಂಭವ ಮುಖ್ಯ ಸುರರಾದಿ ಜೀವಿಗಳ

ಬಿಡದೆ ಸಾಕುವರಯ್ಯಾ ನಿಧಿಯು ಆವಾ

ಜಡಜ ಜಾಂಡವನ್ನು ನೇಮಿಸಿ ಸ್ಥಿತಿ ಮಾಡಿ

ಕಡೆಯನೈದಿಪದಕ್ಕೆ ಮುಖ್ಯ ಕರ್ತುನಾವ

ಕಡಲಶಯನನೆ ನಿನ್ನಿಂದ ವ್ಯತಿರಿಕ್ತವಾದ

ಒಡೆಯರಿಲ್ಲವು ಆವ ಪರಿಯಲಿ ನೋಡೆ

ಸಡಲ ಬಿಡುವದು ಸಮ್ಮತವೇನು ನಿನಗೆ

ಭಿಡಿಯ ಲೇಶವನ್ನು ಇಲ್ಲವೇನೋ

ಜಡಮತಿಯವನೆಂದು ಜರಿದು ನೋಡಲು ಆವ

ಮಡವು ದಾಟಿಪದಕ್ಕೆ ಆವ ಪೇಳೋ

ಒಡಿಯ ಎನಗೆ ನೀನೆ ಜನುಮ ಜನುಮದಲ್ಲಿ

ತೊಡರುಗಳೆಷ್ಟು ಒದಗೆ ಇದು ತಪ್ಪದೋ

ನುಡಿವರು ಇನ್ನೊಂದು ಪರಿಯಲ್ಲಿ ಸಜ್ಜನರೆಲ್ಲ

ಒಡಿಯ ಎನಗೆ ನಿನಗೆ ಅಗಲದೆಂದೂ

ಆಡುವ ವಚನಕ್ಕೆ ವ್ಯಾಹತಿ ತಾರದಲೆ

ಪಿಡಿಯೊ ಕರವ ಅವ್ಯವಧಾನದಿ

ಉಡುರಾಜ ನಾಮ ಗುರುವಿಜಯವಿಟ್ಠಲ ಭವ -

ಮಡುವಿನೊಳಗೆ ಬಿದ್ದು ಮೊರಿಯನಿಡುವೆ ॥ 1 ॥ 


 ಮಟ್ಟತಾಳ 


ಅರಸನಿಗೆ ಸಖನಾಗಿ ಅನ್ನ ಕಾಣದಲೆ

ತಿರಿಕಿಯ ಮನೆ ಮನೆ ತಿರುಗಿದೆ ಬಲು

ಅರಸಿಗೆ ಮಾನ್ಯತ್ವ ಬರುವದೆ ಜನರಿಂದ

ವರ ಪ್ರಖ್ಯಾತದಲಿ ದೃಷ್ಟಿಯ ಅವಗಿತ್ತು

ಎರಡರ ಮಧ್ಯದಲಿ ವ್ಯವಹರಿಸುವ ನೊಂದು

ಪರಮ ಪ್ರೀಯನೆಂಬ ವಚನವನ್ನುಡಿಸಲ್ಲ

ತಿರುಗುವದೆ ಬಿಡಸಿ ಪ್ರೀತಿಯಿಂದಲಿ ಕರೆದು

ಪರಿಪರಿ ಸಂಪದ ಪಾಲಿಪ ತಡೆಯದಲೆ

ನರಸಖ ಸಿರಿ  ಗುರುವಿಜಯವಿಟ್ಠಲರೇಯ 

ಎರಡರೊಳಗೊಂದು ನಿರ್ಧಾರವ ಮಾಡೊ ॥ 2 ॥ 


 ತ್ರಿವಿಡಿತಾಳ 


ಪರಿ ಪರಿ ದೇಹದಿಂದ ಆಯಾಸ ಬಡಬಹುದು

ಧರಣಿಪತಿಯ ಬಾಧೆ ಸ್ವೀಕರಿಸಬಹುದು

ನರರಿಂದ ಬಲು ಪರಿ ನಿಂದ್ಯ ವೈದಲಿಬಹುದು

ದಾರಿದ್ರ ದೋಷಾನುಭವಿಸಬಹುದು

ಪರಿಯು ಇನಿತಾದವೆಲ್ಲ ಬಾರಲೇಕೆ ನಿನ್ನ

ಸಿರಿಚರಣ ಹೃದಯದಲ್ಲಿ ಕಾಣದಿಪ್ಪ

ಪರಮ ದುಃಖವನ್ನು ದುಸ್ಸಹವಾಗಿದೆ

ಪರಿಮಿತವೇ ಇಲ್ಲ ನೀನೆ ಬಲ್ಲಿ

ಕರಣ ಪ್ರೇರಕನಿಗೆ ಪ್ರತ್ಯೇಕ ಪೇಳುವದೇಕೆ

ಕರುಣಾಸಾಗರನೇ ಕಮಲನಯನ

ಮರಳೆ ಛಿದ್ರಗಳೆಷ್ಟು ಇರಲಿ ಮತ್ತಿರಲಿ

ತರುಳನ ಅಪರಾಧ ಕ್ಷಮಿಸಬೇಕು

ಕರಿರಾಜವರದ ಗುರುವಿಜಯವಿಟ್ಠಲರೇಯ 

ಮೊರೆ ಹೊಕ್ಕೆನೊ ಪೊರಿಯಬೇಕೋ ಕರುಣಿ ॥ 3 ॥ 


 ಅಟ್ಟತಾಳ 


ಅಪರಾಧ ಮಾಡಿದ ಭಕ್ತರಿಗೀಪರಿ

ಉಪಶಮನವಿಲ್ಲದಿರಲು ಜಗದೊಳು

ಕೃಪಣ ವತ್ಸಲನೆಂಬೊ ಬಿರಿದಿನ್ನು ಪ್ರಖ್ಯಾತ

ವಿಪಗಮನ ನಿನಗೆ ಬರುವದೆ ಎಲೋ ದೇವ

ಸಪರಿಮಿತವಾದ ಸುಖದ ಲೋಕಂಗಳು

ಉಪಗಮ್ಯವಾಗವು ಎಂದಿಗಾದರು ನೋಡಾ

ಅಪರಿಮಿತವಾದ ಆನಂದಪ್ರದವಾದ

ಸುಪವಿತ್ರ ಲೋಕವು ದೂರತಿ ದೂರೆವೆ ಸರಿ

ಶಫರಾದಿ ರೂಪನೆ ಗುರುವಿಜಯವಿಟ್ಠಲರೇಯ 

ಕೃಪಣ ಬುದ್ಧಿಯ ಬಿಡು ಕರುಣದಿಂದಲಿ ನೋಡೊ ॥ 4 ॥ 


 ಆದಿತಾಳ 


ಭಕತರ ಅಪರಾಧ ಎಣಿಸುವ ನೀನಲ್ಲ

ಭಕತರ ಅಭಿಮಾನ ಸತತ ವೊಹಿಸಿ ಮೆರೆವ

ಭಕತವತ್ಸಲ ನೀನು ಭಕತರ ಭಾಗ್ಯನಿಧೆ

ಭಕತರ ಸುಖ ನೀನೆ ಭಜಕರ ಸುಖ ಗುರು

ಭಕತರಾಶ್ರಯ ನೀನೆ ನಿನಗಿಂದ ಅನ್ಯರಿಲ್ಲ

ಭಕತರ ಬಿಡೆನೆಂಬೊ ಶಪಥವೆ ನಿನ್ನದಯ್ಯಾ

ಭಕತರಿಗಾಗಿ ಸೃಷ್ಟಿ ನಿರ್ಮಿಸಿದ ನಂತರ

ಭಕತರ ವಾಸಕ್ಕೆ ಲೋಕಂಗಳು ರಚಿಸಿದಿ

ಭಕತರ ಸುಖಕಿನ್ನು ಸಕಲವು ನಿರ್ಮಿಸಿದಿ

ಭಕತರ ನಿಮಿತ್ಯ ಬಲು ವಿಧವಾಗಿದ್ದ

ಸಕಲವತಾರಗಳು ಧರಿಸಿದಿ ಪ್ರೀತಿಯಿಂದ

ಭಕತರ ಸಲಹಲು ಜಾರ ಚೋರನೆನಿಸಿದಿ

ಭಕತರ ಪ್ರಿಯನೆನಿಸಿ ಸಾರಥಿ ಮೊದಲಾದ

ಕುಕರ್ಮವಂಗೀಕಾರ ಮಾಡಿದಿ ಎಲೋ ದೇವ

ಭಕುತರ ವಶ್ಯ ನೀನು ಮಾಡುವ ವ್ಯಾಪಾರ

ಭಕುತರಿಗಲ್ಲದಲೆ ನಿನಗುಂಟೆ ಪ್ರಯೋಜನ ಈ 

ಯುಕುತಿ ಎನ್ನದಲ್ಲ ಶ್ರುತಿ ಸ್ಮೃತಿ ವರಲುತಿವೆ

ವುಕುತಿಯ ಮನವಪ್ಪ ನೀನೇವೆ ಪ್ರೇರಿಸಿದಿ

ಈ ಕಲಿಕೃತ ಮಮಕಾರ ಜನಿತವಾದ ಭವಬಂಧ

ಮುಕುತನ ಮಾಡುವದು ಕ್ಷಣವನು ತಡಿಯದಲೆ

ಲಕುಮಿಯ ಆಣೆ ನಿನಗೆ ಸಕಲ ಸುರರ ಆಣೆ

ಭಕುತರ ಆಣೆ ಮತ್ತೆ ಎನ್ನಾಣೆ ಹೇ ಕರುಣಿ

ಈ ಕುಂಭಿಣಿಗೆ ಮುಖ್ಯ ಒಡೆಯ ನೀನಾದರು

ಭಕತರ ವಾಕ್ಯವನ್ನು ಪಾಲಿಸಿ ಸಲಹಬೇಕು

ಭಕತರಿಚ್ಛೆಯಗಾರ ಗುರುವಿಜಯವಿಟ್ಠಲರೇಯ 

ಭಕತರ ಮನೋಭೀಷ್ಟಗರೆವನು ನೀನೆ ದೇವ ॥ 5 ॥ 


 ಜತೆ 


ಭಕತರ ಅಪರಾಧ ಸಾಸಿರವಿರಲಿನ್ನು

ಶಕತ ರಕ್ಷಿಸೊ ಗುರುವಿಜಯವಿಟ್ಠಲರೇಯಾ ॥

*****