Audio by Mrs. Nandini Sripad
ಶ್ರೀವಾದಿರಾಜ ಗುರುಸಾರ್ವಭೌಮ ವಿರಚಿತ ವೈರಾಗ್ಯಭಾಗ್ಯ ಸುಳಾದಿ
ರಾಗ ದರ್ಬಾರಿಕಾನಡ
ಧ್ರುವತಾಳ
ಬಲು ಚರ್ಮಚೀಲದೊಳಗೆ ರಕ್ತ ಮಲಮೂತ್ರ
ಯಲು ಜಂತುಗಳನ್ನು ತುಂಬಿಸಿ ತನ್ಮಧ್ಯ -
ದೊಳು ಮತ್ತು ಮಾಂಸ ಚೀಲವನೊಂದು ನಿರ್ಮಿಸಿ
ಪೊಲೆಯ ಮೇಲಣ ಶುಕ್ಲ ಶೋಣಿತದೀ
ಮುಳುಗಿಸಿ ತಂದಿರೆ ದಶಮಾಸ ಪರಿಯಂತ
ಎಲೆ ಜೀವಾ ಬಹಳ ಕ್ಲೇಶಗಳನುಂಬಿ ನೀನು
ಇಳೆಗೆ ಬಂದು ಬಾಲಕನಾಗಿ ಮತ್ತು ತೊ -
ಟ್ಟಿಲೊಳು ಪೊರಳಿ ಮಲಮೂತ್ರದಲ್ಲಿ
ಅಳುವೆ ಹಸುತೃಷೆಯಾದರೆ ಪೇಳಲರಿಯೆ
ಬಳಲಿದೆ ನಾನಾ ಜನ್ಮಗಳಲ್ಲಿ ಇನಿತೊ
ಹುಲು ಪಕ್ಷಿ ಶ್ವಾನ ಸೂಕರ ಯೋನಿಯಲಿ ಬಂದು
ಕೊಲೆಗೊಳಗಾದೆ ಶ್ರೀಹಯವದನನ ಮರೆದೆ ॥ 1 ॥
ಮಠ್ಯತಾಳ
ವೇದಶಾಸ್ತ್ರಗಳಂಗಳನೋದಿ ವಾದಿಸುವೆನೋ ವೃತ್ತಿ ಕ್ಷೇತ್ರಕ್ಕಾಗಿ
ಕ್ರೋಧಿ ನೃಪರ ವಾಲೈಸಿ ನೊಂದೆ
ಸ್ತ್ರೀಧನಾದಿಗಳಿಗಾಗಿ ಕೊಡುವೆ
ಹಾದಿಯ ಮೀರಿ ನಡಿವೆ ಕ್ರೋಧಿ ನೃಪರ ವಾಲೈಸಿ ನೊಂದೆ
ಸಾಧಿಸುವೆನೋ ಪಾಪರಾಶಿಗಳನು
ಸಾಧುಸೇವ್ಯ ಹಯವದನ ನಾನೊಲ್ಲೆ
ಕ್ರೋಧಿ ನೃಪರ ವಾಲೈಸಿ ನೊಂದೆ ॥ 2 ॥
ಅಟ್ಟತಾಳ
ಧರ್ಮಕರ್ಮಗಳನು ಡಂಭದಿ ಹೆಮ್ಮೆಗಾಗಿ ಮಾಡಿ ಬಳಲುವೆ
ನಿರ್ಮಲಾತ್ಮರ ನಗುವೇ ನಿಂದಿಪೆ
ಬೊಮ್ಮರಕ್ಕಸನಪ್ಪೆ ತುದಿಯಲಿ
ನಿರ್ಮಲಾತ್ಮರ ಜರೆವೆ ನಡುವೆ
ಚಿನ್ಮಯ ಶ್ರೀಹಯವದನನ
ಒಮ್ಮಿಗಾದರೊಮ್ಮೆ ನೆನಿಯೆ
ನಿರ್ಮಲಾತ್ಮರ ನಗುವೆ ನಿಂದಿಪೇ ॥ 3 ॥
ರೂಪಕತಾಳ
ನಾನಾ ನರಕಯಾತನಿಗೆ ಗುರಿಯಾದೆ
ಹೀನಂಧ ತಮಸಿನ ಕ್ಲೇಶವ ನೆನೆದುಕೋ
ಮಾನವ ಜನುಮವ ಬರಿದೆ ಪೋಗಾಡದೆ
ಶ್ವಾನಾದಿ ಸಾಧಾರಣ ದೇಹಕ್ಕಿಕ್ಕದೇ
ಮಾನವ ಜನುಮವ ಬರಿದೆ ಪೋಗಾಡದೆ
ಶ್ರೀನಾಥ ಹಯವದನನಂಘ್ರಿ ಒಲಿಮೆಯಿಂದ
ಜ್ಞಾನನಿಧಿಯೊಳಿಪ್ಪ ಸುಜನರ ಮೊರೆಯೋಗದೆ
ಮಾನವ ಜನುಮವ ಬರಿದೆ ಪೋಗಾಡದೆ ॥ 4 ॥
ಝಂಪೆತಾಳ
ಮದಮತ್ಸರದಿ ನೊಂದು ಕೆಲವು ಕಾಲವು ಕಳೆದೆ
ಕುದಿವೆ ಕಾಮ ಕ್ರೋಧ ವಿಷಯ ಲಂಪಟನಾಗಿ
ಅಧಮನಾಗಿ ಪರರ ಬೇಡಿ ಬೇಸರಿಸುವೆ
ಸದನ ಸಂಪದವಿಗೆ ಬಳಲುವೆ ಒಮ್ಮೊಮ್ಮೆ
ಅಧಮನಾಗಿ ಪರರ ಬೇಡಿ ಬೇಸರಿಸುವೆ
ಅದರೊಳಗು ಬಹು ವ್ಯಾಧಿಯಲ್ಲಿ ಸಂಕಟಗೊಂಬೆ
ಪದುಮನಾಭ ಹಯವದನ ಪಾದವ ನಂಬೆ
ಅಧಮನಾಗಿ ಪರರ ಬೇಡಿ ಬೇಸರಿಸುವೆ ॥ 5 ॥
ಆಟ್ಟತಾಳ
ಅಶನಾನಶನಂಗಳ ಸರಿಯೆಂಬ ಜನರಿಗೆ
ದಿನದಿನದಿ ಮಾಡುವ ವ್ರತ ವೃಥಾಯ ಪೋಯಿತು
ಅನಲನು ತುಹಿನವು ಒಂದಾದದುಂಟೆ
ಘನ ಮಹಿಮ ಮುಕುಂದ ಅಣುಜೀವನೆಂತಾಹ
ಅನಲನು ತುಹಿನವು ಒಂದಾದದುಂಟೆ
ಮನದಿ ತದ್ಭೃತ್ಯ ಭೃತ್ಯರ ಭೃತ್ಯನೆನ್ನದೆ
ಮನುಜಾಧಮರು ಹಯವದನ ತಾನೆಂಬರೊ ॥ 6 ॥
ತ್ರಿಪುಟತಾಳ
ಬಿಸಿಲು ಚಳಿಯಿಂ ಬೇಸರುವೆ
ಹಸುತೃಷೆಗಳಿಂದಲಿ ಹರುಷಗುಂದುವೆ
ಯಶೋ ಹಾನಿಯ ಮಾಡುವೆ ನಿಂ -
ದಿಸುವ ಮಾನವರೊಶಕೆ ಸಿಲುಕುವೆ
ಯಶೋ ಹಾನಿಯ ಮಾಡುವೆ
ಅಸುರ ಭೂತಂಗಳನು ಪೂಜಿಪೆ
ಪ್ರಸನ್ನ ಹಯವದನ ನರ್ಚಿಸೆ
ಯಶೋ ಹಾನಿಯ ಮಾಡುವೆ ॥ 7 ॥
ಆದಿತಾಳ
ಇಂತು ಭವವೆಂಬ ಫಣಿಪಗೆ ಮಾ -
ಹಂತರ ಸಂಗ ಜನಿತ ವೈರಾಗ್ಯವೆ
ಮಂತ್ರರಾಜ ಜಗದೊಳು ಮಂತ್ರರಾಜ
ಸಂತರ ಚರಣಕಮಲ ಸೇವೆ ಔಷಧ
ಮಂತ್ರರಾಜ ಜಗದೊಳು ಮಂತ್ರರಾಜ
ಸಂತತ ಗರುಡವಾಹನ ಶ್ರೀಹಯವದನ ಶ್ರೀ -
ಕಾಂತನಂಘ್ರಿ ಸೇವಿಯೇ ಗರುಡಾಯುಧ
ಮಂತ್ರರಾಜ ಜಗದೊಳು ಮಂತ್ರರಾಜಾ ॥ 8 ॥
ಜತೆ
ವೈರಾಗ್ಯ ಭಾಗ್ಯವೆ ಇತ್ತೆನ್ನ ಸಲಹೊ ಸ -
ರ್ವಾರಾಧ್ಯ ನಿರವದ್ಯ ಹಯವದನ ಸ್ವಾಮಿ ॥
*******