Showing posts with label ಜಯ ಜಯತು ಕೃಷ್ಣರ್ಯ jayesha vittala. Show all posts
Showing posts with label ಜಯ ಜಯತು ಕೃಷ್ಣರ್ಯ jayesha vittala. Show all posts

Friday, 27 December 2019

ಜಯ ಜಯತು ಕೃಷ್ಣರ್ಯ ankita jayesha vittala

ಜಯ ಜಯತು ಕೃಷ್ಣರ್ಯ । ಜಯ ಜಯತು ಸಜ್ಜನ ಅಭಯ ।
ಜಯತು ಕೈವಲ್ಯದನೆ ಜಯತು ಗುರುವೆ ॥ ಪ ॥
॥ ಜಯತು ಜಯತು ॥

ರವಿಯಂತೆ ಜಗದೊಳಗೆ ಉದ್ಭವಿಸಿ ಸುಜನಕ್ಕೆ ।
ಕವಿದ ಕತ್ತಲೆ ಕಳೆದು ಪವನಮತ ತೋರಿ ॥
ವಿವಿಧ ವೈಭವದಿಂದ ಅವನಿಯೊಳು ಸಂಚರಿಸಿ ।
ಭವ ಬಿಡಿಸಿ ಪಾಲಿಸಿದೆ ತವ ಜನರ ಪ್ರಭುವೇ ॥ 1 ॥

ಆರ್ತರಿಗೆ ಪೀಯೂಷ ಅರ್ಥಿಯಿಂದಲಿ ಇತ್ತು ।
ಧೂರ್ತರನು ಕೆಡಿಸಿದೆಯೊ ಕರ್ತ ಸರ್ವತ್ರ ॥
ಪಾರ್ಥಸಾರಥಿ ಸುಗುಣಕೀರ್ತಿ ಭೂ ಪ್ರಭುವರನೆ ।
ವ್ಯರ್ಥ ಇಹವೆಂದೆಮಗೆ ಸ್ವಾರ್ಥ ತೋರ್ದೆ ॥ 2 ॥

ಭಾರತೀಶನ ಭಜನೆ ಬಹುಭಾಗ್ಯವೆಂದರುಹಿ ।
ಆರಾಧಿಸುತ ಹರಿಯ ಪೊರೆದೆ ಎಮ್ಮಾ ॥
ಕೀರುತಿ ಗಭೀರನೆ ಸುಚಾರುಚರಣಕೆ ನಮೋ ।
ದೂರಿಡದೆ ಸೇರಿಸೋ ಭಾರಕರ್ತ ॥ 3 ॥

ಅಡಗಿಸೀ ಕಲಿಯನ್ನು ನಡುಗಿಸುತ ದುರ್ಜನರ ।
ಪೊಡವಿಯನು ಸಂಚರಿಸಿ ಸುಜನಕ್ಕೆ ॥
ದೃಢಪಡಿಸಿ ಸನ್ಮತಿಯ ಒಡಲಲ್ಲಿ ಶ್ರೀಹರಿಯ ।
ಒಡೆಯ ತೋರಿದಿ ಸ್ವಾತ್ಮ ಕರುಣಕಡಲಾ ॥ 4 ॥

ಬಡವನಾನೊಬ್ಬ ಕಡುಮೂರ್ಖನಾಗಿಹೆನು ।
ನಡುಗುತಿದೆ ಭವದಲ್ಲಿ ಮುಂದೋರದೆ ॥
ದೃಢಭಕುತರಲಿ ಎನ್ನ ಬಿಡದೆ ಪಾಲಿಪೆಯೆಂದೆ ।
ಮೃಡನೊಡೆಯ ಶ್ರೀಹರಿಯ ವೈಭವವ ತೋರಿ ॥ 5 ॥

ಅಂದಿನಿಂದಲಿ ನಾನು ಮಂದಮತಿಯಲಿ ಅಲೆದು ।
ನೊಂದ ಪರಿ ನೀಬಲ್ಲಿ ಆರ್ತಹರನೇ ॥
ಕುಂದುಗಳ ಅಳಿದು ಒಂದುಕ್ಷಣ ಅಗಲದಲೆ ।
ಇಂದು ಮುಂದೆ ಒಳಹೊರಗೆ ಪೊಂದಿ ಪೊರೆಯೋ ॥ 6 ॥

ಇನ್ನು ಮುಂದಾದರೂ ನಿನ್ನವರ ಒಳಗಿಟ್ಟು ।
ಧನ್ಯನಾ ಮಾಡೆನ್ನ ಪುಣ್ಯಮೂರ್ತೇ ॥
ಎನ್ನ ಗುರುಗಳ ದೈವ ನಿನ್ನ ಬಿಟ್ಟಿರಲಾರೆ ।
ಅನ್ಯಥಾ ಇಡಬೇಡ ನೋಡೊ ಎನ್ನ ॥ 7 ॥

ತನುವು ಭಾರವು ಎನಗೆ ಮನಕೊಂದು ಬೇಕಿಲ್ಲ ।
ದಿನದಿನದ ವೃತ್ತಿಗಳು ನಿನ್ನ ಆಜ್ಞಾ ॥
ಕನಸಿಲಾದರು ಒಮ್ಮೆ ಅನ್ನನಾ ಕಾಣದಿರೆ ।
ಪೂರ್ಣಕಾರುಣ್ಯ ಮಾಡೆನ್ನ ತಂದೆ ॥ 8 ॥

ಹೃದಯ ಶುದ್ಧಿಯ ಮಾಡು ಮದನಜನಕನ ಬೀಡು ।
ಸದಯ ಮನ ಬದಿಗೈದು ಭಕ್ತಿಪ್ರವಹದಿ ॥
ಮುದದಿ ಮಜ್ಜನಗೈಸಿ ಜಯೇಶವಿಠ್ಠಲ ನ ।
ಬದಿಯಲ್ಲಿ ನಿಲಿಸೆನ್ನ ಒಡನಿದ್ದು ನೀನು ॥ 9 ॥
**********