ರಾಮದಾಸರು
ವಿಶ್ವಧಾರನೋ ಶ್ರೀಶ ವಿಶ್ವಕಾರನೋ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ
ನಾದಭರಿತನೋ ಹರಿ ನಾದಾತೀತನೋ ವೇದಾಧರನೋ ರಂಗ ವೇದ ಗೋಚರನೋ ವೇದವೇದಾಂತ ಸ್ವಾದ ನಿಖಿಲ ಬೋಧರೂಪ ಭೇದರಹಿತ ಆದಿ ಅನಾದಿದಾತ ಸತತ ಸಾಧುಸಜ್ಜನವಿನುತ ಅಮಿತ1
ದೇವದೇವನೋ ಸ್ವಾಮಿ ದಿವ್ಯಚರಿತನೋ ಕಾವ ಕರುಣನೋ ಭಕ್ತಿ ಭಾವಪೂರ್ಣನೋ ಸಾವುಹುಟ್ಟು ಭಯವಿದೂರ ಮಾಯಗೆಲಿದ ಮಹಪ್ರಕಾಶ ಭಾವಜಜನಕ ಭವಭಂಗ ಸೇವಕಜನರ ಜೀವದಾಪ್ತ 2
ದೋಷನಾಶನೋ ಕೃಷ್ಣ ಮೀಸಲಾತ್ಮನೋ ಭಾಸುರಂಗನೋ ಜಗದೀಶ ಗಮ್ಯನೋ ವಾಸುಕಿಶಯನ ವಾಸುದೇವ ಸಾಸಿರನಾಮದೊಡೆಯ ಇಂದಿ ರೇಶ ಗೋವಿಂದ ಪೋಷಿಸೆನ್ನ ಶ್ರೀಶ ಶ್ರೀರಾಮದಾಸಪ್ರಿಯ 3
***