ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ
ಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ||
ವೈಕುಂಠದಿಂದ ಬಂದು ಶೇಷಾಚಲದಲಿ ನಿಂದು
ಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧು
ಭಕುತಿ ಮುಕುತಿಯೀವ ಮತ್ಕುಲದೇವನೆ
ಸಕಲ ಜನಸೇವಿತ ಘನ ಪರಿಪೂರ್ಣನೆ
ವಿಕಸಿತ ಕಮಲನಯನ ಕಂಜನಾಭನೆ
ಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧||
ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆ
ದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆ
ಆನಂದಮಯನೆ ಅನೇಕಾವತಾರನೆ
ಅನುದಿನ ನೆನೆವರ ಹೃದಯಮಂದಿರನೆ
ಘನಮಾಣಿಕ ಭೂಷಣ ಶೃಂಗಾರನೆ
ತನುವಿನ ಕ್ಲೇಶ ದುರಿತಸಂಹರನೆ ||೨||
ಜಯತು ದೋಷವಿನಾಷ ಜಯ ಮಹಿಮಾವಿಶೇಷ
ಜಯತು ಲಕುಮೀ ಪರಿತೋಷ ಜಯ ಶ್ರೀ ವೆಂಕಟೇಶ
ಜಯ ಕಮಲಜಜನಕನೆ ಜಯ ಜಗದೀಶ
ಜಯ ಗಜವರದ ಪಾಲಿತ ಪುಣ್ಯಘೋಷ
ಜಯತು ಜನಾರ್ದನ ಜಗನ್ಮೋಹನ ವೇಷ
ಜಯ ರಂಗವಿಠಲಕರುಣಾವಿಲಾಸ ||೩||
***
ಭೈರವಿ ರಾಗ ಆದಿತಾಳ (raga tala may differ in audio)