Showing posts with label ಇರಬೇಕು ಸಂಸಾರದೊಳಿಲ್ಲ vijaya vittala ankita suladi ಸಾಧನ ಸುಳಾದಿ IRABEKU SAMSARADOLILLA SADHANA SULADI. Show all posts
Showing posts with label ಇರಬೇಕು ಸಂಸಾರದೊಳಿಲ್ಲ vijaya vittala ankita suladi ಸಾಧನ ಸುಳಾದಿ IRABEKU SAMSARADOLILLA SADHANA SULADI. Show all posts

Thursday 29 July 2021

ಇರಬೇಕು ಸಂಸಾರದೊಳಿಲ್ಲ vijaya vittala ankita suladi ಸಾಧನ ಸುಳಾದಿ IRABEKU SAMSARADOLILLA SADHANA SULADI

Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 

(ಕಮಲವು ನೀರಿನಲ್ಲಿದ್ದಂತೆ ಸಂಸಾರದಲ್ಲಿ ನಿರ್ಲಿಪ್ತನಾಗಿ ಇದ್ದು ವೈರಾಗ್ಯಭಾಗ್ಯ ತಾಳಬೇಕು) 


 ರಾಗ ವರಾಳಿ 


 ಧ್ರುವತಾಳ 


ಇರಬೇಕು ಸಂಸಾರದೊಳಿಲ್ಲದಿರಬೇಕು

ತರುಣಿ ಮಕ್ಕಳು ಮನೆ ಧನ ಪಶು ಬಂಧು ಬಳಗ

ಪರಿವಾರದೊಡನೆ ಆಸಕ್ತನಾಗಿ ಮುಳುಗಿ

ಹರಿದ ಕಾಲಕ್ಕು ನಾನಾ ವಿಷಯ ಲಂಪಟದಲ್ಲಿ

ಚರಿಸುತಿದ್ದರು ಬಲು ಚತುರವಂತನಾಗಿರೆ

ಇರುಳು ಹಗಲು ಉದಾಸೀನನಾಗಿ ನೋಳ್ಪರಿಗೆ

ಸರುವ ಕೋಟಲೆ ಇವನೆಂದೆನಿಸಲಿ ಬೇಕು

ನಿರುತ ಸೌಭಾಗ್ಯ ಬಲು ದಾರಿದ್ರ ಬಂದಡರೆ

ಶರಧಿಯೆಂದದಿ ಸುಖಪೂರ್ಣನಾಗಲಿ ಬೇಕು

ಶಿರ ನಯನ ನಾಸಾ ಕರ್ನಾ ವದನ ಹಸ್ತಾಂಘ್ರಿ ಮಿಕ್ಕ

ಎರಡು ಕೂಡಿಂದಾಗುವ ಗಾತ್ರದ ವ್ಯಾಪಾರ

ಹರಿ ಪ್ರಕೃತಿ ತಾತ್ವಿಕರಲ್ಲಲ್ಲಿ ನಿಂದು ನಿಂದು

ಅರಘಳಿಗೆ ತೊಲಗದಲೆ ಮಾಳ್ಪರು ಬಿಡದೆಂದು

ಅರಿದು ಕ್ಷಣಕ್ಷಣಕೆ ಹಿಗ್ಗಬೇಕು ತನ್ನೊಳಗೆ

ಪರಮ ಕ್ಲೇಶ ಸಂತೋಷ ಬರಲಾಗಿ ಒಂದೇ ಸಮ

ಹರಿ ತತ್ಕಾಲಕ್ಕೆ ಸ್ವಯೋಗ್ಯತಾನುಸಾರ

ಪರಿಪರಿ ಕರ್ಮಗಳು ಒಳಗಿದ್ದು ಮಾಡಿಸುವ

ಅರೆಮರೆ ತಿಳಿದು ಸಂಶಯ ಬಡಬಾರದು

ನೆರದು ಮಾನವರೊಳು ಕುಳಿತಿದ್ದರು ಮನಸು

ಹರಿಪಾದದಲ್ಲಿ ಇಟ್ಟು ಧೇನಿಸುತ್ತಿರಬೇಕು

ಹೊರಗೆ ನೋಡಿದರು ದುಗ್ಗಾಣಿಗೆ ಸಲ್ಲಾನೆಂದು

ಪರರಿಂದೆನಿಸಿಕೊಂಡು ನಗಬೇಕು ಪ್ರೀತಿಯಲ್ಲಿ

ಹರಿ ಗುರುಗಳ ದಾಸರಿಗೆ ದತ್ತ ಪ್ರಾಣ

ತರತಮ್ಯದಿಂದಲಿ ಎಣಿಪದು ಮನದೊಳಗೆ

ಮರುಳು ಬಂದವನಂತೆ ಸಕಲ ಪುಣ್ಯಭೂಮಿಯ

ಚರಿಸಬೇಕು ತಾನು ನಿಂದಲ್ಲಿ ನಿಂದಿರದೆ

ಹರಿ ಇಚ್ಛೆಯಿಂದ ಬಂದ ಲಾಭಾಲಾಭಗಳನು

ಕರಿಸಾಬೇಕಲ್ಲದೆ ಹತ್ತದೆಂದೆನೆಸಲ್ಲ

ಹರಿ ಸ್ಮರಣೆಗೆ ವಿಘ್ನವಾಗದಂತೆ ಆತನ್ನ

ಕರುಣ ಪಡಿಯಬೇಕು ಒಂದೆ ಭಕ್ತಿಯಲ್ಲಿ

ಸುರರಾದಿಗಳ ದೆಸೆಯಿಂದ ಫಲ ಐದಿದರೂ

ಹರಿ ಪ್ರೇರಣೆಯಲ್ಲದೆ ಸ್ವಾತಂತ್ರ ಒಬ್ಬರಲ್ಲ

ಬರಿದೆ ಆವಾವವರ ಪ್ರೇರಣೆ ಪಾಲಣಿಯ

ಹಿರಿಯಾರು ನಮಗಿಂದ ನೀಚರಿಗಹುದೆನ್ನಿ

ಬಿರಿ ಮಳಿಯೊಳಗೆ ಹೆಳ್ಳೆ ಸಾಲು ಇಕ್ಕಿದಂತೆ

ಕುರುಹು ನೋಡಲಿಬೇಕು ಸಂಸಾರದ ಸ್ಥಿತಿ

ಪರಕೆ ಮತ್ತಾವದೊ ಸಹಾಯ ಎಂಬೋವೀ ಮಾ -

ಯರವಾಗುವದಲ್ಲದೆ ಘಳಿಸಿದ ಸರ್ವೋಪಾಯ

ಧರಣಿವಿಬುಧ ಜನುಮ ಬಯಸೊ ಮತ್ತೆ ಬಯಸೊ

ಮರುತ ದೇವನ ಮತ ಪೊಂದೊ ಸತತ ನಿಂದೂ

ಗುರುಗಳಿಗೆ ಗುರು ನಮ್ಮ ವಿಜಯವಿಟ್ಠಲರೇಯನ 

ಶರಣರ ಸಂಗದಲ್ಲಿ ಮನದೆಗಿಯದೆ ನಿಲ್ಲು ॥ 1 ॥ 


 ಮಟ್ಟತಾಳ 


ಉಂಡರೆ ಉಣಲಿಲ್ಲ ಉಟ್ಟರೆ ಉಡಲಿಲ್ಲ

ಕೊಂಡರೆ ಕೊಳಲಿಲ್ಲ ಕೊಟ್ಟರೆ ಕೊಡಲಿಲ್ಲ

ಕಂಡರೆ ಕಾಣಲಿಲ್ಲ ಕರೆದರೆ ಕರೆಯಲಿಲ್ಲ

ಹೆಂಡತಿ ಎನಗೇನು ನಾನು ಅವಳಿಗಾರು

ಗಂಡುಗಲಿಯಾರೊ ಗತಿಗೆಡುವನಾರೊ

ಥಂಡ ಥಂಡದ ಮಾತು ಪೇಳಿ ಕೇಳುವನಾರೊ

ಭಂಡು ಸಂಸಾರದೊಳು ಇಟ್ಟು ತೆಗೆವನಾರೊ

ದಂಡನೆ ಮಾಡಿಸುವ ಬಿಡಿಸಿ ಕೊಂಬವನ್ಯಾರೊ

ಮಂಡನಾದಿ ವಸ್ತು ಕೂಡಿಸಿ ಧರಿಪನಾವ

ಮಂಡಲದೊಳಗಿದ್ದು ಇದೆ ಖಚಿತವು ತಿಳಿದು

ಬೆಂಡು ಮತ್ತೆ ಕಲ್ಲು ತೇಲಿಪ ಮುಳುಗಿಸುವ

ಪುಂಡರೀಕಾಕ್ಷನ್ನ ಮಹಿಮೆ ಇನಿತೆಂದು

ಕೊಂಡಾಡುತ ಸೊರಗಿ ನಲಿನಲಿದು ತಿರುಗಿ

ಕೆಂಡವನೆ ನೋಡಿ ಶಿಶು ಭಯ ಬೀಳದಲೆ

ಅಂಡಿಯಲ್ಲಿ ಪೋಗಿ ತುಡುಕುವಂತೆ ಉ -

ದ್ದಂಡ ಭವದಲ್ಲಿ ಭವಣೆಗಳಟ್ಟಿದರು

ಕೆಂಡಕ್ಕೆ ಸಣ್ಣವನು ಭಯ ಬೀಳದಂತಿರೋ

ಹಿಂಡು ದೈವದ ಗಂಡ ವಿಜಯವಿಟ್ಠಲರೇಯನ್ನ 

ತೋಂಡರ ಬಳಿಯಲ್ಲಿ ತೊಲಗದೆ ಓಲ್ಯಾಡು ॥ 2 ॥ 


 ತ್ರಿವಿಡಿತಾಳ 


ಅಂಗಣದೊಳು ಪಕ್ಕಿ ಕುಳಿತು ಹಾರಿದಂತೆ

ಅಂಗಡಿಯ ನೆರಹಿ ತಿರುಗಿ ಜನ ಪೋದಂತೆ

ಮುಂಗುಡಿ ಮಕ್ಕಳು ಮನೆಗಟ್ಟಿ ಕೆಡಿಸಿದಂತೆ

ಹಿಂಗದರವಂಟಿಗೆಯ ಮಂದಿ ಸಾಗಿದಂತೆ

ಸಂಗಾತದವರು ತನ್ನ ಕೂಡಲಿದ್ದರು ಅವರ

ಹಂಗಿಗನಾಗದೆ ಅದರಂತೆ ಗುಣಿಸೋದು

ಮುಂಗಾರಿ ಮಿಂಚಿನಂದದಿ ದೇಶದೊಳಗೆ ನಿ -

ಸ್ಸಂಗನಾಗಿ ತಿರುಗಿ ಕಾಲ ಕಳಿಯಬೇಕು

ಬಂಗಾರ ಮೊದಲಾದ ದ್ರವ್ಯಗಳ ಕಂಡರೆ

ಮುಂಗಾಲಲಿ ಒದೆದು ದಾಟಿ ಪೋಗುವದಯ್ಯ

ಹಂಗಿಗನಾಗದಿರು ಪರರ ವಶಕೆ ಶಿಲ್ಕಿ

ಭಂಗವಾದರು ಲೇಶ ಖೇದ ಬಡದಿರು

ಮಂಗಳ ಮೂರುತಿ ವಿಜಯವಿಟ್ಠಲರೇಯನ 

ಸಂಗೀತದಲಿ ಬಾಳು ಹರಿದಾಸರ ಪಾದಕೆ ಬೀಳೊ ॥ 3 ॥ 


 ಅಟ್ಟತಾಳ 


ಧರಣಿಯಂತೆ ತಾಳೊ ಮರುತನಂತೆ ಸಂ -

ಚರಿಸು ಪಾವಕನಂತೆ ಹೊರಗೆ ತೋರದಲಿರು

ಮರಳಿ ಉದಕದಂತೆ ಹರಿದು ಪೋಗುತಲಿರು

ಇರು ಅಕಾಶದಂತೆ ಸರಿಸದಲ್ಲಿ ದೂರ

ಪರರಾಪೇಕ್ಷಿಯ ಬಿಡು ಪರಲೋಕವ ಬೇಡು

ಪರಮನ್ನ ಕೊಂಡಾಡು ಪರಮಾರ್ಗವ ಬೇಡು

ಪರಮತವನೆ ಸುಡು ಪರಮಾತ್ಮನ್ನ ಕಾಡು

ಪರದೈವ ವಿಜಯವಿಟ್ಠಲರೇಯನ ಲೀಲೆ

ಸ್ಮರಿಸಿ ಧನ್ಯನಾಗು ದುರಿತವ ನೀಗು ॥ 4 ॥ 


 ಆದಿತಾಳ 


ಒಂದೆ ಪ್ರಯೋಜನ ಮಾಡಿದರದರೊಳು

ಇಂದಿರಾ ಪತಿ ಉಂಟು ಇಂದಿರೆ ಉಂಟು

ಒಂದೆರಡು ಗುಣ ಉಂಟು ಕಾಲ ಪ್ರಕೃತಿ ಉಂಟು

ವೃಂದಾರಕರುಂಟು ಕ್ರಮಾನುಸಾರದಿಂದ

ಗಂಧ ರಸ ರೂಪ ಸ್ಪರ್ಶ ಶಬ್ದ ಉಂಟು

ಕುಂದದೆ ನಭ ವಾಯು ಅನಳ ಪಾವನಿ ಉಂಟು

ಇಂದ್ರಿಯಂಗಳುಂಟು ಹನ್ನೊಂದು , ಐವತ್ತು

ಒಂದು ವರ್ಣಗಳುಂಟು ಶ್ರುತಿ ಪುರಾಣಗಳುಂಟು

ಒಂದೊಂದು ಕರ್ಮವುತ್ಪತ್ತ್ಯಾದಿ ಸ್ವಾತಂತ್ರ ಉಂಟು

ಪೊಂದಿ ದೈತ್ಯರು ಉಂಟು ಶುಭ ಅಶುಭಗಳುಂಟು

ಅಂದು ಮೊದಲಾಗಿ ಕಡೆ ಭಾಗ ಪರಿಯಂತ

ಸಂಧಿಸಿ ಕೊಂಡಿಪ್ಪವು ಓಂಕಾರ ಸಹವಾಗಿ

ವಂದನೆ ನಿಂದೆ ಇನಿತು ತಿಳಿದು ಪ್ರವರ್ತಿಸಲು

ನಂದವಾಗುವದು ತತ್ತತ್ಕಾಲದಲಿ ಬಿಡದೆ

ಹಿಂದೆ ನಡೆದದೆಲ್ಲ ಹರಿ ತಾನೆ ಮಾಡಿಸಿದ -

ನೆಂದು ನಿನ್ನೊಳು ನೀನು ತಿಳಿದು ದುಶ್ಚಿತ್ತ ಬಿಟ್ಟು

ಇಂದಿನಾರಭ್ಯ ಅಲ್ಪಕಾಲ ಮೊದಲು ಮಾಡಿ

ನಿಂದಿರದೆಲ್ಲೆಲ್ಲಿ ಆವಾವ ಕರ್ಮವಾಗೆ

ಇಂದಿರಾಪತಿ ತಾನು ಸರ್ವಾಧಿಕಾರನಾಗಿ

ಛಂದ ಛಂದದಲಿಂದ ವ್ಯಾಪಾರ ಮಾಡಿಸುವ

ಒಂದು ಸತ್ಯ ಸಂಕಲ್ಪ ಮಾಡಿ ಆ ಮಾತಾಗಲಿ ಎಂದು

ಸಂದೇಹ ನಿಸ್ಸಂದೇಹವಂತ ನೀನಾಗದಿರು

ಮಂದರಧರ ಒಲಿದು ಆವಾವದು ಕಲ್ಪಿಸಿ -

ದಂದಾದಿ ಮಾಡುತಿರು ಹರಿ ಇತ್ತ ಸ್ವಾತಂತ್ರದಿ

ದ್ವಂದ್ವ ಸೈರಿಸುತ್ತ ಸರ್ವೋತ್ತಮ ಜ್ಞಾನದಲ್ಲಿ

ಮಂದನ್ನ ಉದ್ಧರಿಸುವ ಲೇಶದೋಷ ಬರಗೊಡ

ಅಂದವರಿಗೆ ಜೀವ ವಿಜಯವಿಟ್ಠಲರೇಯ 

ತಂದೆಯಾಗಿ ಭಕ್ತರ ಬಳಿಯಲ್ಲಿ ತಿರುಗುವ ॥ 5 ॥ 


 ಜತೆ 


ಕಮಲದೊಳು ಕಮಲ ಇದ್ದಂತೆ ಇರು ಹೃ -

ತ್ಕಮಲದಲ್ಲಿ ವಿಜಯವಿಟ್ಠಲನ್ನ ಪೂಜಿಪದು ॥

***