Showing posts with label ಸ್ವಪ್ನ ಪ್ರಕರಣ ನಿತ್ಯ vijaya vittala ankita suladi ಸ್ವಪ್ನ ಪ್ರಕರಣ ಸುಳಾದಿ SWAPNA PRAKARANA NITYA SWAPNA PRAKARANA SULADI. Show all posts
Showing posts with label ಸ್ವಪ್ನ ಪ್ರಕರಣ ನಿತ್ಯ vijaya vittala ankita suladi ಸ್ವಪ್ನ ಪ್ರಕರಣ ಸುಳಾದಿ SWAPNA PRAKARANA NITYA SWAPNA PRAKARANA SULADI. Show all posts

Monday 9 December 2019

ಸ್ವಪ್ನ ಪ್ರಕರಣ ನಿತ್ಯ vijaya vittala ankita suladi ಸ್ವಪ್ನ ಪ್ರಕರಣ ಸುಳಾದಿ SWAPNA PRAKARANA NITYA SWAPNA PRAKARANA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಸ್ವಪ್ನ ಪ್ರಕರಣ ಸುಳಾದಿ 

( ಜೀವರಿಗೆ ಸ್ವಪ್ನದಲ್ಲಿ ಆಗುವ ವ್ಯಾಪಾರ ಸತ್ಯ , ಶ್ರೀಹರಿಯಾಧೀನ. ಅಲ್ಲಿ ಆಗುವ ಕಾರ್ಯವಿಚಾರ ಇತ್ಯಾದಿ .)

 ರಾಗ ನಾದನಾಮಕ್ರಿಯಾ 

 ಧ್ರುವತಾಳ 

ಸ್ವಪ್ನ ಪ್ರಕರಣ ನಿತ್ಯ ಯೋಚಿಸಿ ತಿಳಿಯಬೇಕು
ಗುಪುತವಾಗಿದೆ ಇದು ನೋಡಿದರು
ಸಪುತ ಸಪುತ ಭುವನಾಂತರ್ಗತವಾಗಿದ್ದ
ಕ್ಲಿಪುತ ದುಃಖ ಸಂತೋಷ ಕಾರಣವೆನಿಸಿ
ಅಪರಿಮಿತ ಜನ್ಮಂಗಳು ಬಂದರಾದಡೆ ಇದು
ಉಪಕ್ರಮ ಉಪಸಂಹಾರವಾಗುತಿದಕೊ
ದಿಪುತವಾದ ಮನಸು ಆಶ್ರಯವೆನ್ನಿ ಜಡ
ತ್ರಿಪರಿಗುಣ ಸಂಯುಕ್ತ ಪ್ರಕಾಶವೋ
ಚಪಲ ಸದೃಶವಾಗಿ ಹೃದಯ ಕಂಠ ನಯನ
ಜಪಿಸು ಪೂರ್ವೋಕ್ತ ಕ್ರಮಣ ಕರಣ ಭೇದ
ತಪನ ಕಾಲ ಪ್ರಾರಂಭ ಬಾಹಿರ ವ್ಯಾಪಾರವೆ -
ನಿಪುದು ಜಾಗ್ರದಾವಸ್ಥೆ ಎಂಬೊ ನಾಮಾ
ಕೃಪಣ ವತ್ಸಲ ವಿಶ್ವನಂತ ಪ್ರಾಜ್ಞಾಚಕ್ಷುಸ
ನೃಪ ತ್ರಿಣಿಮೊಗ ಮನುಜ ಹಸ್ತಿವದನ
ಕೃಪಪಯೋನಿಧಿ ಪೂರ್ಣ ಸ್ಥೂಲ ಭುಕು ಸತ್ವ ಪ್ರವರ್ತಕ
ತಪನೀಯ ಕಾಯ ಈತನೆ ವಿಷ್ಣುನೋ
ತಪವ ಮಾಡೆಲೊ ನಿತ್ಯ ವಿಶ್ವನ್ನ ಸೃಷ್ಟಿಕಾಲ
ಸುಪವರ್ನ ದೈತ್ಯ ತಲೆಯ ಪುಟ್ಟಿಸುವ
ಸುಪಥ ದುಷ್ಪಂಥ ಚರಿಯದಿಂದ ತಿಳಿಯಬೇಕು
ವಿಪುಳದೊಳಗೆ ನೋಡುವ ಕರ್ಮದಿ
ನಿಪುಣ ಮನೋರಥ ಸೃಷ್ಟಿ ಸೂಕ್ಷ್ಮ ಸ್ಥೂಲ
ತಪನೀಯ ಗರ್ಭವಾಯು ಗರುಡಾದಿ ಇಂದ್ರಾದ್ಯರು
ಅಪಭ್ರಷ್ಟ ದೇವ ಮೊದಲಾದ ಸುರರು
ರಿಪುವಂಶಾವಳಿ ಸರ್ವಗಣವೆಲ್ಲ ತುಂಬಿ ಲೋ -
ಲುಪರಾಗಿ ಮಹಾ ಪ್ರವಹದಂತೆವೊ
ಪ್ರಪಂಚವ ನಡಿಸುವರು ಒಂದು ದಶ ಭಾಗದಲ್ಲಿ
ಕಪಟನಾಟಕ ಹರಿಯ ನೇಮನದಿಂದ
ಶ್ವಪಚ್ಯಾದಿ ಜನ್ಮಂಗಳು ಬರುತಿಪ್ಪದೊ ಪಂಚೇಕದ್ವಿ
ಶಫಲ ಶಬರ ನಾನಾ ದೇಹ ವೊದಗಿ
ವಿಪರೀತ ಕಾರ್ಯ ಮೇಲು ಸಂತೋಷ ಲಾಭವೆಲ್ಲ
ಸ್ವಪನಾವಸ್ಥಿಯಲ್ಲಿ ಆಗುವದು
ಕಪಿಲಾದಿ ಭಗವದ್ರೂಪ ವಾಸನಮಯದಲ್ಲಿ
ಅಪರೋಕ್ಷವಾದರಾಗೆ ಇದರ ಸ್ಥಿತಿ
ಕಪಿವರಗೆ ತದಾಕಾರ ಮಹತತ್ವ ಕಾಯ ಸೂಕ್ಷ್ಮ
ಉಪಕ್ರಮವಾಗುವದೊ ತತ್ಕಾಲಕ್ಕೆ
ಸುಪರ್ನವಾಹನ ಆ ಪ್ರಾಣನ್ನ ಮಧ್ಯದಲ್ಲಿ
ವಪುಧರಿಸಿ ಅಂಶದಿಂದ ಕಾಣಿಸುವನೊ
ತ್ರಿಪುರಾರಿ ಮಿಕ್ಕಾದ ಸಾಂಶಜೀವರು ವ -
ರ್ಣಿಪದೇನು ಗಾತ್ರ ಧರಿಸಿ ತೋರುವದು
ಅಪವರ್ಗದಾತ ನಮ್ಮ ವಿಜಯವಿಟ್ಠಲರೇಯ 
ತಪ ತಪ ಮಾಡದಲೆ ಮನಕೆ ಪ್ರೇರಕನಾಗಾ ॥ 1 ॥

 ಮಟ್ಟತಾಳ 

ಕನಸಿನಲಿ ಗಜ ತುರಗ ಮನೆ ಸತಿ ಸುತ ವಾಜಿ
ಧನ ಭೂಗೋಳ ಕ್ಷೇತ್ರ ವನ ಕಾಂಚನ ವಸ್ತ್ರ
ಮಣಿ ಅಂದಣ ದೇಶ ಜನ ನದಿ ಸಮುದ್ರ
ಜನನಿ ಜನಕ ಬಂಧು ತೃಣ ಪಶು ಮೊದಲಾಗಿ
ಅಣು ಘನ ಗುರು ಲಘುವು ಇನಿತಿನಿತು ಎಲ್ಲ
ಎಣಿಕೆ ಇಲ್ಲದೆ ಯೋಚನೆ ಮಾಡದೆ ಕಾಂಬ
ಜನನ ಸ್ಥಿತಿ ನಾಶ ಗುಣ ದುರ್ಗುಣ ವೃತ್ತಿ
ಕ್ಷಣ ಕ್ಷಣಕೆ ಬಿಡದೆ ತನುವಿನೊಳಗೆ ಸ್ವ -
ಪನ ಕಾಲದಲ್ಲಿ ಜೀವನ ಭಿನ್ನವಾದ
ಜನ ಜಡ ಚೇತನವ ದಿನರಾತ್ರಿ ಎಂದು
ಗಣನೆ ಮಾಡುವ ಇದಕ್ಕೆ ನೆನಿಸಿ ಪ್ರತ್ಯಕ್ಷದಲ್ಲಿ
ಅನುಮಾನವಿಲ್ಲದಲೆ ಮನೋವಾಕ್ಕಾಯದಲ್ಲಿ
ಪ್ರಣವ ಮೂರುತಿ ನಮ್ಮ ವಿಜಯವಿಟ್ಠಲರೇಯ 
ಅನಿಮಿಷರೊಡನೆ ಜನ್ಮ ಜನ್ಮದಲ್ಲಿದ್ದ ಅನುಭವ ಮಾಡಿಸುವ ॥ 2 ॥

 ತ್ರಿವಿಡಿತಾಳ 

ದಿವಸದಲ್ಲಿ ಮನುಜ ಮನಸು ನಯನ ಮತ್ತೆ
ಶ್ರವಣದಿಂದ ವಸ್ತ ತಿಳಿದವೆಲ್ಲಾ
ವಿವರಾ ವಿವರವಾಗಿ ಪಾಪಪುಣ್ಯ ವೃತ್ತಿ
ನವನವನೆಸಗಲು ಇವಕೆ ಮಾನಿ
ಕವಿಶಿಷ್ಯ ನಿರ್ಜರರು ನಿಜವಾಗಿಯಿಪ್ಪರು
ತವಕದಿಂದಲಿ ಕೇಳು ಮನುಜಾದಿಲಿ
ವಿವರಿಪೆ ಮನದಲ್ಲಿ ಈ ಬಗೆ ಆಭಿಮಾನಿಗಳು
ಇವರಿಂದ ಮಾಡಿಸುವ ಕರ್ಮದೊಳಗೆ ಪೋ -
ಗುವ ಬರುವ ಕಾರ್ಯದಲಿ ವಿಶ್ವನೊಳಗೆ
ಲವ ತೃಟಿ ಕಾಲ ಪರಿಮಿತದಲ್ಲಿ ಬಂದು
ಪ್ರವಿಷ್ಠರಾಗುವರು ಭೂತೈದರೊಡನೆ
ರವಿ ಮೇರು ಮರೆಯಾಗೆ ದಿವಸಾಂತ ನೆನಿಸುವದು
ಅವಸರದಲ್ಲಿ ಮಲಗಲಾಗ ವಿಶ್ವ
ದ್ವಿವಿಧಾವಸ್ಥಾ ಸ್ಥಳಕೆ ತೆರಳಿ ಪೋಗುವ ಸರ್ವ
ದಿವಿಜದಾನವ ತತಿಯ ಗರ್ಭದಿ ಧರಿಸಿ
ಶಿವನ ಮನೆಗೆ ಇಳಿದು ತೈಜಸನಲ್ಲಿ ಕೂ -
ಡುವ ಏಕೀಭೂತ ಸಪ್ತಾಂಗ ಪ್ರಾಜ್ಞ
ಇವರಿಗೆ ಸ್ವಪನಾವಸ್ಥಿ ತಂದುಕೊಡುವ ಶ್ರೀ -
ಧವನು ವಾಸನಾಮಯ ಸೃಷ್ಟಿಯಿಂದ
ದಿವದ ವ್ಯಾಪಾರದ ಗತಿಯಂತೆ ಜೀವಕ್ಕೆ
ಭವದಲ್ಲಿ ಇದ್ದದು ತತ್ತ ಸದೃಶ
ಪ್ರವರ್ತಕ ಇದಕೆಲ್ಲ ದೇವ ದೈತ್ಯರ ಗಾ -
ತ್ರವನು ನಿರ್ಮಾಣವ ಮಾಡಿ ನೋಳ್ಪ
ಪವಿತುರ ಲೀಲೆಗೆ ತ್ರಿದಶತತಿ ಹೇಯಕ್ಕೆ
ಅವಗುಣದವರೆನ್ನಿ ನಿತ್ಯದಲ್ಲಿ
ಇವರೆ ಸಪ್ತ ಗೋತ್ರ ಪಿತೃ ಮಾತೃ ಸಹ
ಭವ ನಾನಾ ಪರಿಯಾಗಿ ಕಾಣಿಪರಯ್ಯಾ
ಭವನಾಮಕ ರುದ್ರ ಸತಿದ್ವಾರದಿಂದ ಉ -
ದ್ಭವರಾಗುವರು ತೈಜಸ ಮುಖ್ಯ ಕರ್ತ
ಗ್ರೀವದಲ್ಲಿ ಇಂಥ ಪ್ರಯೋಜನವಾಹದೊ
ಪವನಾಂತರ್ಯಾಮಿ ವಿಜಯವಿಟ್ಠಲ ತ್ರಿ -
ಭುವನದೊಳಗೆ ಸರ್ವಸ್ವಪನ ವ್ಯಾಪಾರವೊ ॥ 3 ॥

 ಅಟ್ಟತಾಳ 

ತತ್ಕರ್ಮ ತತ್‍ಕ್ರಿಯ ತದ್ರೂಪ ತದ್ಗುಣ 
ತತ್ಕರಣ ತತ್ಕಾಲ ತತ್ ಪ್ರಕಾರ ಚರ್ಯ 
ತತ್ತಳ ದೇವತೆ ದಾನವ ಮಿಕ್ಕಾಯ
ತತ್ಕಟವ ಮಾಡಿ ತೆತ್ತುವ ದೇಹವ
ಸತ್ಕರ್ಮ ದುಷ್ಕರ್ಮ ಹಗಲು ನೋಡಿದ ಚ -
ಮತ್ಕೃತಿ ದೇಹವ ಭೂತಗಳು ಬಂದು ಸ್ಥೂಲ ಭಕು
ಚಿತ್ಪ್ರಕೃತಿ ಪತಿ ವಿಶ್ವನ್ನ ಜಠರದೊ -
ಳುತ್ಕೃಷ್ಠವಾಗಿ ಪ್ರವೇಶವಾಹವು
ತತ್ಕಳೇವರದಿಂದ ದಿವಸ ದಿವಸದಲ್ಲಿ
ತತ್ಕಲ್ಪಾನುಸಾರ ಅನುಭವವಾಗೋದು
ಶಿತ್ಕಂಠನಿವಾಸ ವಿಜಯವಿಟ್ಠಲರೇಯನ 
ಸತ್ಕಥ ಕೇಳಿದವರಿಗೆ ವೇಗವೊಲಿವಾ ॥ 4 ॥

 ಆದಿತಾಳ 

ಆಕಾರ ವಿಶ್ವನಲ್ಲಿ ಪುಣ್ಯ ಪಾಪ ದೇವತಾ
ಏಕಾನೇಕವಾಗಿ ಜಾಗ್ರತಾವಸ್ಥಿಯಲ್ಲಿ
ವಾಕು ಮೊದಲಾದ ಇಂದ್ರಿಯಂಗಳಿಂದ ಪುಟ್ಟಿ
ನಾಲ್ಕು ಬಗೆಯಿಂದ ವಾಸವಾಗುವರು
ಶ್ರೀಕಾಂತ ವಿಶ್ವಮೂರ್ತಿ ಚಕ್ಷುಸ್ಥಾನವೆ ಬಿಟ್ಟು
ಉಕಾರ ತೈಜಸನನ್ನು ಕೂಡಲು ಸ್ವಪ್ನವೆನ್ನಿ
ಪಾಕಶಾಸನ ಉಳಿದ ಸಮಸ್ತ ಜನರಿಗೆ
ವೈಕಾರಿಕ ದೇಹದ ವ್ಯಾಪಾರ ಶೂನ್ಯ ಕಾಣೋ
ಕಾಕ ಬಕ ಗಧ್ರ ಶ್ವಾನ ನರಿ ಕತ್ತೆ ವಿಢ್ವರಾಹ
ಘೂಕ ನಾನಾ ದೃಷ್ಟಜಂತುಗಳ ದೇಹ
ನಾಕ ವೈರಿಗಳು ಒಂದಂಶದಿಂದಾಗುವರು
ಶೋಕ ಛೇದ ಭೇದ ಇವರಿಗಾಗುವದು
ಈ ಕಾಯಧಾರಿಗೆ ಭೋಗ ಭೂಷಣ ತ -
ನ್ನಾಕಾರ ದೇಹಕ್ಕೆ ಸುಖ ದುಃಖಾನುಭವ
ಪ್ರಕಾಶ ಭೂತ ವಾಸನ ಸಮಯದಲ್ಲಿ ಪೊಕ್ಕು
ಪ್ರಾಕು ಕರ್ಮಗಳಿಂದ ಸಂಚಾರ ಮಾಡುವ
ಲೋಕದೊಳಗೆ ಇಷ್ಟಾನಿಷ್ಟ ಸಂಗತಿಯಿಂದ
ಆ ಕಾಲೀಕಾಲವೆನದೆ ಸರ್ವರಿಗೆ ಇದೇ ಸಿದ್ಧ
ಶ್ರೀಕಾಂತ ಪ್ರಾಜ್ಞ ನಮ್ಮ ವಿಜಯವಿಟ್ಠಲರೇಯ 
ಏಕಮೇವನೊ ಸರ್ವ ಸ್ವಾತಂತ್ರ ಪುರುಷ ॥ 5 ॥

 ಜತೆ 

ಇಂದ್ರಯೋನಿಯ ಮಧ್ಯ ಇನಿತು ವ್ಯಾಪಾರ ಸುಖ -
ಸಾಂದ್ರ ವಿಜಯವಿಟ್ಠಲ ಮಾಡುವ ಬಲುಲೀಲಾ ॥
*******