ಗುರುಭಕುತಿಯೆಂತೆಂಬ ಗಮಕದೋಲೆಯನಿಟ್ಟು
ಹರಿಧ್ಯಾನವೆಂಬ ಆಭರಣವಿಟ್ಟು
ಪರತತ್ವವೆಂತೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೆ ಆರುತಿ ಎತ್ತಿರೆ ||ಪ||
ಆದಿ ಮೂರಿತಿ ಎಂಬ ಅಚ್ಚ ಆರಿಸಿನ ಬಳಿದು
ವೇದ ಮುಖ ನೆಂಬ ಕುಂಕುಮವನಿಟ್ಟು
ಸಾಧು ಸಜ್ಜನ ಸೇವೆ ಎಂಬ ಸಂಪಿಗೆ ಮುಡಿದು
ಮೋದದಿಂ ಲಕ್ಷ್ಮಿಗಾರುತಿ ಎತ್ತಿರೇ ||೧||
ತನುವೆಂಬ ತಟ್ಟೆಯಲಿ ಮನಸೊಡಿಲನು ಇರಿಸಿ
ಘನಶ್ಯಾಂತಿ ಎಂಬ ಆಜ್ಯವನು ತುಂಬಿ
ಆನಂದ ವೆಂತೆಂಬ ಬತ್ತಿಯನು ಹಚ್ಚಿಟ್ಟು
ಚನುಮಯ ಹರಿಗೆ ಆರುತಿ ಎತ್ತಿರೆ ||೨||
ಕಾಮಂಧವಳಿದಂತ ಕಮಲದ ತಟ್ಟೆಯಲಿ
ನೇಮವೆಂತೆಂಬ ಹರಿದ್ರವನು ಕದಡಿ
ಆಮಹಾ ಸುಜ್ಞಾನ ಎಂಬ ಸುಣ್ಣವ ಬೆರಸಿ
ಸೋಮಧರ ವಂದ್ಯಗಾರುತಿ ಎತ್ತಿರೆ ||೩||
ನಾರದ ವಂದ್ಯಗೆ ನವನೀತ ಚೋರಗೆ
ನಾರಯಣಗೆ ಶ್ರೀ ವರಲಕ್ಷ್ಮಿಗೆ
ಸಾರಿದವರನು ಪೊರೆವ ಪುರಂದರವಿಠಲನಿಗೆ
ನೀರಜಾ ಮುಖಿಯರಾರುತಿ ಎತ್ತಿರೆ ||೪||
**********